ಮೇಘ ಸಂದೇಶ / “ಭಾರತೀಯ ಹೆಣ್ಣು ಹೀಗಿರುವುದಿಲ್ಲವಂತೆ” ! -ಮೇಘನಾ ಸುಧೀಂದ್ರ
“ಅನ್ ಬಿಕಮಿಂಗ್ ಆಫ್ ಇಂಡಿಯನ್ ವಿಮೆನ್” – ಪಾತಾಳದಿಂದ ಆಕಾಶದವರೆಗಿನ ಎಲ್ಲ ವ್ಯವಸ್ಥೆಗಳಲ್ಲಿ ಪುರುಷ ಪ್ರಧಾನ ಚಿಂತನೆ ಹಾಸುಹೊಕ್ಕಾಗಿದೆಯೇ? ಇಲ್ಲದಿದ್ದರೆ ನ್ಯಾಯಾಲಯದಲ್ಲಿ “ಭಾರತೀಯ ಹೆಣ್ಣು ಹೀಗೆ ನಡೆದುಕೊಳ್ಳುವುದಿಲ್ಲ, ಈ ನಡವಳಿಕೆ ಭಾರತೀಯ ಹೆಣ್ಣಿಗೆ ಹೊಂದುವುದಿಲ್ಲ” ಎಂಬರ್ಥದ ಮಾತುಗಳು ಜಾಮೀನು ಕೊಡುವ ತೀರ್ಪಿನಲ್ಲಿ ಹೇಗೆ ಕೇಳಿಬಂತು? ಗಂಡು ಮಾಡುವ ಅತ್ಯಾಚಾರಕ್ಕೂ ಹೆಣ್ಣೇ ಕಾರಣ ಎನ್ನುವುದು ನ್ಯಾಯಾಂಗವೂ ಸೇರಿದಂತೆ ಒಟ್ಟು ಸಮಾಜದ ತೀರ್ಪೇ ಆಗಿರುತ್ತದಲ್ಲ?
“ಒಂದು ಹೆಣ್ಣುಮಗಳು ರೇಪ್ ಆದರೆ ಅವಳು ಆ ಸಂದರ್ಭ ಆದ ತಕ್ಷಣ ಮನೆಗೆ ಹೋಗಿ ಮಲಗಿಕೊಳ್ಳುವುದಿಲ್ಲ, ರೇಪ್ ಮಾಡಿದ ವ್ಯಕ್ತಿಯ ಜೊತೆ ಹಿಂದಿನ ರಾತ್ರಿ 11 ಘಂಟೆಗೆ ಕುಡಿಯೋದಕ್ಕೆ ಹೋಗುವುದಿಲ್ಲ… ಆಮೇಲೆ ಇದನ್ನೆಲ್ಲಾ ನೋಡಿ ರೇಪ್ ಆರೋಪ ಮಾಡಿದವನಿಗೆ ಜಾಮೀನು ಕೊಡಲಾಗುವುದು. ಇದು “ಅನ್ಬಿಕಮಿಂಗ್ ಆಫ್ ಇಂಡಿಯನ್ ವಿಮೆನ್ ” ಎಂದು ಒಂದು ನ್ಯಾಯಾಲಯ ತೀರ್ಪು ಕೊಟ್ಟಿತ್ತು. ರೇಪ್ ಮಾಡಿದವನ ಮನೆ ಹಾಳಾಗಿಹೋಗಲಿ, ಆದರೆ ಇಲ್ಲಿ ನಮಗೆ ಇರಿಟೇಟ್ ಆಗುವ ವಿಷಯ “ಅನ್ ಬಿಕಮಿಂಗ್ ” – Unbecoming- ಎನ್ನುವ ಪದ.
ಸರ್ಕಾರಿ ನೌಕರರಿಗೆ ಅವರು ಕೆಲಸಕ್ಕೆ ಸೇರುವ ಮುನ್ನ ಒಂದು ಆಫೀಸರ್ ಹೇಗೆ Unbecoming ಆಗುತ್ತಾನೆ ಎಂದು ವಿವರ ಕೊಡಲಾಗುತ್ತದೆ. ಅಂದರೆ ಅವನು ಗೌರವಯುತವಾದ ಕೆಲಸದಿಂದ ಏನು ಮಾಡಿದರೆ ವಜಾ ಆಗಬಹುದು ಎಂದು ಲಿಸ್ಟ್ ಮಾಡಿ ಹಾಕಿರುತ್ತಾರೆ. ಅದರಲ್ಲಿ ನಡವಳಿಕೆ ಸರಿಯಾಗಿರಬೇಕು, ಯಾವುದ್ಯಾವುದೋ ಶಬ್ದಗಳನ್ನ ಆಡಬಾರದು, ಸುಪಿರಿಯರ್ ಆಫೀಸರುಗಳು ಬಂದಾಗ ಹೇಗಿರಬೇಕು ಎಲ್ಲವನ್ನು ತಿಳಿಸುವ ನಿಯಮಗಳು ಇರುತ್ತವೆ. ಅವನ್ನೆಲ್ಲಾ ಫಾಲೋ ಮಾಡದಿದ್ದರೆ ಅವರನ್ನ ಆಫೀಸರ್ ಹುದ್ದೆಯಿಂದಲೇ ವಜಾ ಮಾಡಬಹುದು. ಅವರು ಆ ಜಾಗಕ್ಕೆ ಯೋಗ್ಯರಲ್ಲ ಎಂಬ ವಿಷಯವನ್ನ ಮನದಟ್ಟು ಮಾಡಿ ಅವರು ಆಫೀಸರ್ ಆಗೋದಕ್ಕೆ ಯೋಗ್ಯತೆಯೇ ಇಲ್ಲದಂತೆ ಮಾಡಲಾಗುತ್ತದೆ. ಈ “Unbecoming” ಅವರು ಹೇಗಿದ್ದಾರೋ ತೋರಿಸುವುದಕ್ಕೆ ಇರುವುದು..
ಈ ತೀರ್ಪಿನಲ್ಲಿ ಬಳಸಿರುವುದು ಒಂದು ಹೆಣ್ಣು ಅವಳ ಜವಾಬ್ದಾರಿ ಅರಿತು ನಡೆಯದೆ ಇದ್ದಿದ್ದಕ್ಕೆ ಹೀಗೆ ಆಯಿತು ಎಂದು ಬರೆಯುವುದಕ್ಕೆ ಅಷ್ಟೇ. ಅಂದರೆ ನಮ್ಮ ಸಮಾಜದಲ್ಲಿ ಹೆಣ್ಣನ್ನೂ ಇನ್ನೂ ಮನೆಯಲ್ಲೇ ಇರಬೇಕು, ಏಳು ಘಂಟೆಯ ನಂತರ ಆಚೆ ಹೋಗಬಾರದು, ಗಂಡಸರ ಹತ್ತಿರ ಒಂದು ಲಿಮಿಟ್ಟಿನಲ್ಲಿ ಮಾತಾಡಬೇಕು ಅದು ಇದು ಎಲ್ಲವನ್ನೂ ಸಕಲ ಸಮಸ್ತವನ್ನೂ ನಮ್ಮ ಹೆಣ್ಣುಮಕ್ಕಳ ಮೇಲೆ ಹೇರುವ ಸಮಾಜದಲ್ಲಿ ರೇಪ್ ಆಗೋದಕ್ಕೂ ಹೆಣ್ಣುಮಕ್ಕಳೇ ಕಾರಣ ಎಂಬ ತರ್ಕವನ್ನು ಮಾಡುವವರು ವಿಪರೀತ ಬುದ್ಧಿವಂತರೇ ಇರುತ್ತಾರೆ.
ಒಂದು ಹುಡುಗಿ ರೇಪ್ ಆಗುವ ಕಾರಣ ಒಂದೇ – ಗಂಡಸಿನ ಮನಸ್ಥಿತಿ. ತನ್ನ ಕೆಟ್ಟ ಆಸೆಯನ್ನ ಅವಳ ಇಚ್ಛೆ ಇಲ್ಲದಿದ್ದರೂ ಅವಳ ಮೇಲೆ ತೀರಿಸಿಕೊಳ್ಳುವ ಚಟ. ಆ ಚಟ ಸಹ ಬಂದಿರುವುದು, ಹೆಣ್ಣು ಗಂಡಿನ ಆಸೆ ತೀರಿಸೋದಕ್ಕೆ ಹುಟ್ಟಿರುವವಳು ಎಂಬ ನಂಬಿಕೆಯಿಂದ. ಅದು ನಮಗೆ ಬರುವುದು ನಮ್ಮ ಸಮಾಜ ನಮಗೆ ಹೇಳಿಕೊಡುವ ಪಾಠದಿಂದ. ಒಂದು ಮೇಲು ಒಂದು ಕೀಳು ಎಂದು ಹೇಳಿಕೊಟ್ಟಾಗ ಜಗತ್ತನ್ನ ನೋಡದಿದ್ದ ಜನರು ತಮಗೆ ಬೇಕಾದ ಹಾಗೆ ಬದುಕುವ ರೀತಿಯನ್ನು ರೂಢಿಸಿಕೊಳ್ಳುತ್ತಾರೆ. ಹೀಗಿದ್ದಾಗ ನ್ಯಾಯಾಲಯಗಳು ಅಥವಾ ಪೊಲೀಸರು ಎಲ್ಲರು ನಮ್ಮ ಪ್ರತಿನಿಧಿಗಳಾಗೆ ಒಮ್ಮೊಮ್ಮೆ ವರ್ತನೆ ಮಾಡುತ್ತಾರೆ.
ವಿತಂಡವಾದ : ಹೆಣ್ಣು ಹೇಗಿರಬೇಕು ಹೇಗಿರಬಾರದು ಎಂಬುದಕ್ಕೆ ದೊಡ್ಡ ಗ್ರಂಥವನ್ನೇ ನಮ್ಮ ಜನ ಬರೆಯುತ್ತಾರೆ. ಅದು ಕಾಲಾತೀತವಾಗಿ ಎಲ್ಲರಿಗೂ ಒಪ್ಪಿಗೆಯಾಗುತ್ತದೆ. ಕೆಲವೊಮ್ಮೆ ಅದಕ್ಕೆ ತಿದ್ದುಪಡಿಗಳನ್ನೂ ಹೆಣ್ಣಿನ ಮೈ ಮೇಲೆ ಏನಿರಬೇಕು ಏನಿರಬೇಡ ಎಂಬುದನ್ನೂ ಸಹ ಸಮಾಜವೇ ನಿರ್ಧಾರ ಮಾಡುತ್ತದೆ. ಅದು ಸರಿ ಎಂದು ತಮ್ಮ ತಮ್ಮ ವಿತಂಡವಾದದಿಂದ ಶಾಸ್ತ್ರವೋ ಇಲ್ಲ ಇನ್ನ್ಯಾವುದೋ ಹೆಸರನ್ನ ಕೊಟ್ಟು ಎಮೋಷನಲ್ ಬ್ಲಾಕ್ ಮೇಲ್ ಮಾಡುವ ಹಂತಕ್ಕೆ ತಲುಪುತ್ತಾರೆ. ಅದು ಸರಿ ಈ ಹೆಣ್ಣುಮಕ್ಕಳ ಬಗ್ಗೆ ಅದ್ಯಾಕೆ ಅಷ್ಟೊಂದು ತಾತ್ಸಾರ ಅಥವಾ ಅವಳನ್ನು ಯಾಕೆ ಹೀಗೆ ನೋಡುತ್ತಾರೆ ಎನ್ನುವುದನ್ನ ನಾವು ಸ್ವಲ್ಪ ಸರಿಯಾಗಿ ಗಮನಿಸಬೇಕು.
ಪ್ರತಿಯೊಬ್ಬ ಮನುಷ್ಯನಿಗೂ ಮತ್ತೊಬ್ಬನ್ನನ್ನ ಕಂಟ್ರೋಲ್ ಮಾಡುವ ಮನಸ್ಥಿತಿ ಇದೆ. ಅಂದರೆ ತನ್ನ ಮಾತನ್ನು ಎಲ್ಲರೂ ಕೇಳಬೇಕು ತಾನು ಮಾಡಿದ್ದೆ ಸರಿ ಎಂದು. ಪವರ್ ನ ಹಸಿವು. ತಾನು ಎಲ್ಲರಿಗಿಂತ ಪವರ್ ಫುಲ್ ಎಂದು ತೋರಿಸಿಕೊಳ್ಳಬೇಕಲ್ಲವಾ? ಅದಕ್ಕೆ ಅಸಂಬದ್ಧವಾದ ವಾದಗಳನ್ನು ಹುಟ್ಟುಹಾಕಿ ತನ್ನ ಜೊಳ್ಳನ್ನು ಗಟ್ಟಿಮಾಡಲು ಹೊರಡುತ್ತಾನೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣನ್ನ ಆದಿಶಕ್ತಿ ಎನ್ನುತ್ತಾರೆ. ಸಕಲಚರಾಚರಕ್ಕೂ ಅವಳೇ ಮೂಲ ಎನ್ನುತ್ತಾರೆ. ಅದನ್ನ ಒಪ್ಪಿಕೊಳ್ಳೋದು ಕಷ್ಟವಲ್ಲವಾ, ಅದಕ್ಕೆ ಅವಳಿಗೆ ಋತುಚಕ್ರವಾಗುತ್ತದೆ, ರಕ್ತ ಬರುತ್ತದೆ ಎಂದು ಅವಳನ್ನ ಬಲಹೀನ ಎಂದು ಗುರುತಿಸಿ ಮೂಲೆಗುಂಪು ಮಾಡುತ್ತಾರೆ. ಇಲ್ಲಿ ಮೆಜಾರಿಟಿ ಗಂಡಸರೇ ಆದ್ದರಿಂದ ಅವರ ಮೊದಲ ಸ್ಥಾನಕ್ಕೆ ಕುತ್ತು ಬಂದದಕ್ಕೆ ಈ ಸಾಹಸಗಳು.
ಇನ್ನು ಈ ಹೆಣ್ಣುಮಕ್ಕಳ Unbecoming ಗೆ ಬಹು ದೊಡ್ಡ ಕಾರಣ ನಮ್ಮ ಹೆಣ್ಣುಮಕ್ಕಳೇ. ಅದರಲ್ಲಿ ಎರಡು ಮಾತಿಲ್ಲ. ತಾವು ತುಳಿಸಿಕೊಂಡ ಅವಮಾನವನ್ನು ತಮ್ಮ ಮುಂದಿನ ಪೀಳಿಗೆಯೂ ಅನುಭವಿಸಲಿ ಎಂಬ ವಿಲಕ್ಷಣ ಮನಸ್ಸು ಹೆಣ್ಣು ಹೇಗಿರಬೇಕು ಎಂದು ತಾವೇ ನಿರ್ಧರಿಸಿಬಿಡುತ್ತಾರೆ. “ಅವಳಿಗೆ ಮದುವೆಯಾಗಿದೆ, ಹೀಗ್ಯಾಕೆ ಇಲ್ಲ ” ಎಂಬ ಪ್ರಶ್ನೆಗೆ ಉತ್ತರ ಅವಳ ಪರ್ಸನಲ್ ವಿಷಯ ಅದು ಅನ್ನುವುದೇ ಹೊರತು ಇದು ಹೀಗೇ ಇರಬೇಕು ಅನ್ನುವುದಲ್ಲ. ನಮ್ಮ ಮೈಮೇಲಿರುವ ವಸ್ತುಗಳು ಮದುವೆಯ ಸಾಂಕೇತಿಕ ಕುರುಹುಗಳೇ ಹೊರತು ಅದು ಪ್ರೀತಿ ಪ್ರೇಮದ ಪರಾಕಾಷ್ಠೆಯ ಲಕ್ಷಣಗಳಂತೂ ಅಲ್ಲ. ಹೀಗಿದ್ದಾಗ ತಾನು ಒಂದು ಹೆಣ್ಣಾಗಿ ಹೀಗಿದ್ದೇನೆ ಎಂಬ ಕಾರಣಕ್ಕೆ ಯಾಕೆ ಮತ್ತೊಬ್ಬರನ್ನ `ಹೀಗಿದ್ದರೆ ಹೆಣ್ಣು’ ಎಂದು ನಿರ್ಧಾರ ಮಾಡುವ ಹಕ್ಕನ್ನ ಮತ್ತೊಬ್ಬ ಹೆಣ್ಣಿಗೆ ಕೊಟ್ಟಿದ್ದಾರೆ ? ಇಲ್ಲಿ ಗಂಡಸರ ಸಣ್ಣ ಮನಸ್ಸಿನ ಜೊತೆಗೆ ಹೆಣ್ಣಿನ ಹೊಟ್ಟೆಕಿಚ್ಚು ಸಹ ಒಂದು ಹೆಣ್ಣನ್ನ ಹೆಣ್ಣು ಅಲ್ಲ ಎಂದು ಘೋಷಿಸುವುದಕ್ಕೆ ಕಾರಣ ಎಂಬುದು ಸತ್ಯ.
ಒಂದು ಹೆಣ್ಣು ಧೈರ್ಯದಿಂದ, ಸ್ವಾತಂತ್ರ್ಯದಿಂದ ಓಡಾಡುವುದು, “Unbecoming of Women” ಆದರೆ – ಅವಳು ಹಾಗೇ ಇರಲಿ!

-ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.