ಮೇಘ ಸಂದೇಶ / `ಪೀರಿಯಡ್ ಲೀವ್’ ಬೇಕೇ? ಬೇಡವೇ? – ಮೇಘನಾ ಸುಧೀಂದ್ರ

ಮುಟ್ಟಿನ ದಿನಗಳಲ್ಲಿ ವಿಶೇಷ ರಜೆ ತೆಗೆದುಕೊಳ್ಳುವ ಸೌಲಭ್ಯವನ್ನು ವೃತ್ತಿನಿರತ ಮಹಿಳೆಯರಿಗೆ ಕೊಡುವ ವಿಷಯ ಮತ್ತೆ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕಿದೆ. ಇಂಥ ಕ್ರಮ ಮಹಿಳಾ ಸಮಾನತೆಗೆ ವಿರೋಧ ಎಂದು ಕೆಲವರು ವಾದಿಸಿದರೆ, ಮಿಕ್ಕವರು ವಿಶಿಷ್ಟ ದೇಹ ಪ್ರಕೃತಿಗೆ ವಿಶಿಷ್ಟ ಸೌಲಭ್ಯ ನೀಡಿದರೆ ತಪ್ಪೇನು ಎಂದು ಕೇಳುತ್ತಿದ್ದಾರೆ. ಆದರೆ ಐಟಿ ಕಂಪೆನಿ ಇರಲಿ, ಗಾರೆ ಕೆಲಸ ಇರಲಿ, ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಬಾಧೆಗಳು ಸಾಮಾಜಿಕ ಅನುಕಂಪಕ್ಕೆ ಅರ್ಹವಾದವು.

ದೇಶದ ಪ್ರತಿಷ್ಠಿತ ಕಂಪೆನಿಯೊಂದು ತನ್ನ ಆಫೀಸಿನಲ್ಲಿರುವ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ದಿನಗಳಲ್ಲಿ ಪೀರಿಯಡ್ ಲೀವ್' ನೀಡಬೇಕೆಂಬ ಆದೇಶ ಹೊರಡಿಸಿದ ನಂತರ ನಮ್ಮ ಅಂತರಜಾಲದಲ್ಲಿ ಭೋರ್ಗರೆವ ಪ್ರವಾಹದಂತೆ ಕಮೆಂಟುಗಳು ಬರಲಾರಂಭಿಸಿದವು. ಕೆಲವರು ಅದರ ಬಗ್ಗೆ ಹೆಮ್ಮೆ ಪಡುತ್ತಾ, ಮತ್ತೆ ಕೆಲವರು ಅದನ್ನು ಬಾಯಿಗೆ ಬಂದಹಾಗೆ ಬೈಯುತ್ತಾಸಮಾನತೆ ಹಳ್ಳಕ್ಕೆ ಬಿತ್ತು’ ಎಂದೆಲ್ಲಾ ಮಾತಾಡುವ ಸಂದರ್ಭದಲ್ಲಿ ಪೀರಿಯಡ್ ಬಗ್ಗೆ ಅಥವಾ ಈ ರಜೆಯ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.

ಮೆನ್‍ಸ್ಟ್ರುಯೇಶನ್ ಬೆನಿಫಿಟ್ಸ್ ಬಿಲ್ ಎಂಬುದನ್ನ ೨೦೧೮ ರಲ್ಲಿ ಅರುಣಾಚಲ ಪ್ರದೇಶದ ಸಂಸದ ನಿನೊಂಗ್ ಎರಿಂಗ್ ನಮ್ಮ ಸಂಸತ್ ಅಧಿವೇಶನದಲ್ಲಿ ಹೇಳಿದಾಗ ಒಂದು ದೊಡ್ಡ ಗಲಾಟೆಯೇ ನಡೆದಿತ್ತು. ಪ್ರತಿ ತಿಂಗಳು ಹೆಣ್ಣುಮಕ್ಕಳಿಗೆ ಮುಟ್ಟಾದಾಗ ರಜೆ ಕೊಡಬೇಕೆಂದು ಇದರ ಆಗ್ರಹ.

ಈ ಮಸೂದೆಯಲ್ಲಿ ಪ್ರತಿತಿಂಗಳು ಹೆಣ್ಣು ಮಕ್ಕಳಿಗೆ ಎರಡು ರಜೆ ಮತ್ತು ಸರ್ಕಾರ ಅನುದಾನಿತ ಶಾಲೆಗಳಲ್ಲಿ ೮ನೇ ತರಗತಿಯ ನಂತರ ರಜೆ ಮತ್ತು ವಿಶ್ರಾಂತಿ ಕೊಠಡಿಗಳು ಬೇಕು ಎಂಬುದು ಸಹ ಇದೆ. ಇದು ಎಲ್ಲಾ ಸ್ಥರದ ಹೆಣ್ಣುಮಕ್ಕಳಿಗೂ ಅನ್ವಯವಾಗುವಂತಹ ಮಸೂದೆ ಎಂದು ಪರಿಗಣಿಸಲ್ಪಟ್ಟಿದೆ. ಇದು ಮೊದಲನೇ ಬಾರಿ ಕಾರ್ಯಗತಗೊಳ್ಳಲಿಲ್ಲ. ೧೯೧೨ರಲ್ಲಿ ಕೇರಳದ ಶಾಲೆಯೊಂದು ಹೀಗೆ ರಜೆ ಕೊಟ್ಟಿತ್ತು ಮತ್ತು ಬಿಹಾರ ೧೯೯೨ರಲ್ಲಿ ಸ್ಪೆಷಲ್ ಕ್ಯಾಶುಯಲ್ ರಜೆಯೆಂದು ಹೆಣ್ಣುಮಕ್ಕಳಿಗೆ ಪೀರಿಯಡ್ ಲೀವ್ ನೀಡುತ್ತಿತ್ತು.

೨೦೧೬ರಲ್ಲಿ, ಲಂಡನ್ ಯೂನಿವರ್ಸಿಟಿಯ ಪ್ರೊಫೆಸರ್ ಜಾನ್ ಗಿಲ್ಬಾಡ್ ಹೆಣ್ಣುಮಕ್ಕಳ ಮುಟ್ಟಿನ ನೋವು ಕೆಲವೊಮ್ಮೆ ಹೃದಯಾಘಾತದ ನೋವಿಗಿಂತಲೂ ಜಾಸ್ತಿ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಶೇ. ೨೦ ರಷ್ಟು ಹೆಂಗಸರಿಗೆ ಈ ನೋವು ತಮ್ಮ ದಿನನಿತ್ಯದ ಚಟುವಟಿಕೆಗಳನ್ನ ಬಾಧಿಸುತ್ತದೆ ಎಂದು ಅಂಕಿಅಂಶವನ್ನು ಒಂದು ರಿಸರ್ಚ್ ಪೇಪರ್ ತಿಳಿಸಿದೆ. ಹೀಗಿದ್ದಾಗ ಹೆಣ್ಣಿಗೆ ಈ ರಜೆಯ ಹಕ್ಕುಗಳು ಬೇಕು ಎಂಬುದು ತುಂಬಾ ಜನ ಹೆಣ್ಣುಮಕ್ಕಳ ಅಭಿಪ್ರಾಯ.

ಜಪಾನ್, ಕೊರಿಯಾ, ತೈವಾನ್ ದೇಶಗಳಲ್ಲಿ ಎರಡನೇ ಮಹಾಯುದ್ಧದ ಸಮಯದಿಂದಲೂ ಹೀಗೆ ಸಂಬಳ ಸಹಿತ ರಜೆ ಕೊಡುವುದು. ಜಾರಿಯಲ್ಲಿತ್ತು ಆದರೆ ಹೆಣ್ಣುಮಕ್ಕಳು ತಮಗೆ ಪಿರಿಯಡ್ಸ್ ಇದೆ ಎಂದು ಸಾಬೀತು ಪಡಿಸಬೇಕಾದಾಗ ಆ ರಜೆಯನ್ನು ಹೆಣ್ಣುಮಕ್ಕಳು ತೆಗೆದುಕೊಳ್ಳಲು ಹಿಂಜರಿದರು. ಈ ರಜೆ ಕೆಲವರಿಗೆ ಅವರವರ ದೇಹದ ಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ಮೇನಾರಾಗಿಯಾ, ಫೈಬ್ರಾಯ್ಡ್ಸ್, ಎಂಡೋಮೆಟ್ರಿಯಾಸಿಸ್, ಪೆಲ್ವಿಕ್ ಇನ್‍ಫ್ಲಮೇಟರಿ ರೋಗಗಳೂ ಕೆಲವೊಮ್ಮೆ ಹೆಣ್ಣುಮಕ್ಕಳನ್ನ ಬಾಧಿಸುತ್ತದೆ. ಮುಟ್ಟಿನ ಸಮಯದಲ್ಲಿ ಇದರ ನೋವುಗಳು ಸಿಕ್ಕಾಪಟ್ಟೆ ಬಾಧಿಸುತ್ತದೆ. ಇವೆಲ್ಲದರ ಪರಿಣಾಮ ರಜೆಯನ್ನು ಮಂಜೂರು ಮಾಡುವುದು ಅಥವಾ ಆ ಸೌಲಭ್ಯವನ್ನ ಹೆಣ್ಣುಮಕ್ಕಳು ತೆಗೆದುಕೊಳ್ಳುವುದು ಅವಶ್ಯ.

ಒಪ್ಪುತ್ತಿಲ್ಲ : ಆದರೆ ಕೆಲವು ಹೆಣ್ಣುಮಕ್ಕಳೇ ಈ ಸೌಲಭ್ಯವನ್ನ ಒಪ್ಪುತ್ತಿಲ್ಲ. ಇದಕ್ಕೆ ಕಾರಣಗಳು ಹಲವು, ಮೊದಲನೆಯದಾಗಿ, ಈ ರಜೆ ಕೊಡಬೇಕೆಂದೇ ಕೆಲವು ಕಂಪೆನಿಗಳು ಇವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಇನ್ನು ರಜೆ ತೆಗೆದುಕೊಳ್ಳುತ್ತಾರೆ ಎಂದೇ ಮುಖ್ಯವಾದ ಪ್ರಾಜೆಕ್ಟುಗಳಿಗೆ ಹಾಕುವುದಿಲ್ಲ , ಸಂಬಳವನ್ನು ಕಡಿಮೆ ಕೊಡುವ ಪ್ರಮೇಯಗಳು ಜಾಸ್ತಿ. ಮೊದಲೇ ಹೆಣ್ಣುಮಕ್ಕಳ ವರ್ಕ್ ಫೋರ್ಸ್ ಕಡಿಮೆ ಇರುವಾಗ ಇದನ್ನೂ ಸಹ ಮೆಟ್ಟಿ ನಿಲ್ಲಬೇಕಾದುದು ಮತ್ತೊಂದು ದೊಡ್ಡ ಸವಾಲಾಗಿಯೇ ಇರುತ್ತದೆ. ಇನ್ನು ತಮಗೆ ಮುಟ್ಟಾಗಿದೆ ಎಂದು ಪ್ರೂವ್ ಮಾಡಬೇಕಾಗಬಹುದು ಅಥವಾ ಆಫೀಸಿನ ಜನರು ಅವರ ಪೀರಿಯಡ್ ಸೈಕಲ್ಲುಗಳನ್ನ ಟ್ರಾಕ್ ಮಾಡಿ ಅದನ್ನು ದೊಡ್ಡ ವಿಷಯವನ್ನಾಗಿ ಮಾಡಬಹುದು.

ಆದರೆ ಇದೆಲ್ಲದಕ್ಕೂ ನಾವು ಹೆಣ್ಣುಮಕ್ಕಳನ್ನ ದೂಷಿಸುವುದಕ್ಕೆ ಸಾಧ್ಯವಿಲ್ಲ. ಅವರ ದೇಹದ ಪ್ರಕೃತಿ ಇರುವುದು ಹಾಗೆಯೇ. ಇಲ್ಲಿ ಸಮಾನತೆಯ ಅಂಶ ಬರುವುದು ಆಕೆಯಾ ದೇಹದ ಪರಿಸ್ಥಿತಿಗೆ ಅವಳಿಗೆ ಕೊಡಬೇಕಾದ ಸೌಲಭ್ಯ ಕೊಟ್ಟು ಆಕೆ ಕೆಲಸ ಮಾಡದಿದ್ದಾಗ ಮಾತ್ರ ಹೊರತಾಗಿ ಆಕೆಯ ದೇಹದಲ್ಲಿ ಆಗುವ ನೈಸರ್ಗಿಕ ಪ್ರಕ್ರಿಯೆಗೆ ಅವಳು ತೆಗೆದುಕೊಳ್ಳುವ ಸೌಲಭ್ಯದ ವಿರುದ್ಧ ಅಲ್ಲ.

ಹೆಣ್ಣುಮಕ್ಕಳು ಪೀರಿಯಡ್ ಅನ್ನಾಗಲೀ ಅದರ ನೋವನ್ನಾಗಲೀ ಅವರೇ ಆಯ್ಕೆ ಮಾಡಿಕೊಂಡಿದ್ದಲ್ಲ ಅದು ಅವರಿಗೆ ಪ್ರಕೃತಿ ಕೊಟ್ಟಿದ್ದು. ಆಯ್ಕೆ ಸ್ವಾತಂತ್ರ್ಯವಿಲ್ಲದ ಯಾವುದೇ ವಿಷಯಕ್ಕೆ ಯಾರನ್ನೂ ದೂಷಿಸಬಾರದು ಎಂಬುದೊಂದು ಅಲಿಖಿತ ನಿಯಮವಿರುವುದಂತೂ ಖಚಿತ. ಹೀಗಿದ್ದಾಗ ನಾವು ಅದನ್ನ `ಸಮಾನತೆ’ ಅನ್ನುವ ನಿಟ್ಟಿನಲ್ಲಿ ಹೋರಾಡುವುದು ತಪ್ಪು. ಇನ್ನು ಈ ಸೌಲಭ್ಯ ಬರಿ ಐಟಿ ಕಂಪೆನಿಗಳಲ್ಲಿ, ಅಥವಾ ಸರ್ಕಾರಿ ಕಚೇರಿಗಳಲ್ಲಿ ಸಿಕ್ಕರೆ ಈ ಸೌಲಭ್ಯದ ಗೆಲುವಲ್ಲ. ಇದು ನಮ್ಮ ಮನೆ ಕೆಲಸದ ಸಹಾಯಕರಿಗೆ, ಪೌರ ಕಾರ್ಮಿಕರಿಗೆ, ಗಾರ್ಮೆಂಟ್ ಮಹಿಳೆಯರಿಗೆ, ಕೂಲಿ ಕೆಲಸಗಾರ್ತಿಯರಿಗೆ ಹೀಗೆ ಎಲ್ಲ ಕೆಲಸ ಮಾಡುವ ಮಹಿಳೆಯರಿಗೆ ಸಿಕ್ಕಾಗ ಮಾತ್ರ ಇದರ ಗೆಲುವು.

ಇನ್ನು ಕೆಲವು ಹೆಣ್ಣುಮಕ್ಕಳು ಪೀರಿಯಡ್ ರಜೆ ಕೊಡಬೇಕಾಗಿಲ್ಲ, ಆದರೆ ಮನೆಯಿಂದ ಕೆಲಸ ಮಾಡುವ ಆಯ್ಕೆ ಕೊಟ್ಟರೆ ಇನ್ನೂ ನೆಮ್ಮದಿಯಾಗಿರುತ್ತದೆ ಎಂದು ಹೇಳುತ್ತಾರೆ. ಸುಮ್ಮನೆ ಅದು ಎರಡು ಅತಿಗಳ ನಡುವೆ ಇರುವ ಸರಿಯಾದ ಆಯ್ಕೆ ಎಂದು ಕೆಲವರ ನಂಬಿಕೆ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗೋದು, ತುಂಬಾ ಹೊತ್ತು ಕೂರೋದು ಕಷ್ಟ ಆದಾಗ ಮನೆಯಲ್ಲಿ ಸಿಗುವ ಆರಾಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಬೇಕು ಎನ್ನುವುದು ಕೆಲವರ ಅನಿಸಿಕೆ.

ಮುಟ್ಟಿನ ಬಗ್ಗೆ ಮಾತನಾಡವುದಕ್ಕೇ ಹಿಂಜರಿಯುವಂತಹ ನಮ್ಮ ಸಮಾಜದಲ್ಲಿ ಹೀಗೆ ಹೆಣ್ಣುಮಕ್ಕಳಿಗೆ ಅವರಿಗೆ ಸಿಗಬೇಕಾದ ರಜೆ ಮತ್ತು ಸೌಲಭ್ಯಗಳನ್ನು ಕೊಟ್ಟರೆ, ಈ ಥರದ ಕಾರಣಕ್ಕೆ ಕೆಲಸ ಬಿಟ್ಟಿರುವ ಹೆಣ್ಣುಮಕ್ಕಳನ್ನು ಮತ್ತೆ ಮರಳಿ ಉದ್ಯೋಗಕ್ಕೆ ಸೇರಿಸುವ ಒಂದು ದೊಡ್ಡ ಪ್ರೇರಣೆ ಸಹ ಆಗಬಹುದು.

-ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *