ಮೇಘ ಸಂದೇಶ/ ಪರವಾಗಿಲ್ಲ ಸುಮ್ಮನೆ ಕೂರಬಹುದು – ಮೇಘನಾ ಸುಧೀಂದ್ರ
`ಏನಾದರೂ ಮಾಡುತಿರು ಮಗಳೇ ಸುಮ್ಮನಿರಬೇಡ’ ಎಂಬ ಉಪದೇಶ ಮಂತ್ರ ಮತ್ತು ಬದುಕಿನ ಸೂತ್ರದೊಡನೆ ಹೆಣ್ಣುಮಕ್ಕಳನ್ನು ಬೆಳೆಸಲಾಗುತ್ತದೆ. ಅವರಿಗೆ ಮೈಮೇಲೆ ಕೆಲಸ ಎಳೆದುಕೊಳ್ಳುವ ಚಾಳಿ ಹೆಚ್ಚು. ಆದರೆ ಎಲ್ಲರಿಗೂ ಅವರದೇ ಆದ ಬಿಡುವಿನ ಸಮಯ ಬೇಕೇಬೇಕು. ಬೆಟ್ಟ ಹತ್ತುವವರೂ ಸ್ವಲ್ಪ ಹೊತ್ತು ಕೂರಬೇಕು ಅನ್ನುವುದನ್ನು ಅರ್ಥ ಮಾಡಿಕೊಳ್ಳೋಣ.
ಕರೋನಾ ಎಂಬ ಮಹಾಮಾರಿ ಮನೆ ಬಾಗಿಲಿಗೆ ಬಂದು ನಿಂತಿದೆ, ಮನೆ ಕೆಲಸದವರಿಗೆ ರಜೆ, ಮನೆಯಲ್ಲಿ ವರ್ಕ್ ಫ್ರಮ್ ಹೋಂ, ಮೀಟಿಂಗಿನ ಮಧ್ಯ ವಾಷಿಂಗ್ ಮಿಷೀನ್ ಕೂಗುತ್ತದೆ, ಇಲ್ಲ ಕುಕ್ಕರ್ ಕೂಗುತ್ತದೆ, ಫೋನ್ ಬಡಿದುಕೊಳ್ಳುತ್ತದೆ. ಸಾಧಾರಣ ಎಲ್ಲರ ಮನೆಯಲ್ಲಿ ಇದೊಂದು ಹೊಸ ರಿವಾಜು ಶುರುವಾಗಿದೆ. ಸಣ್ಣ ಮಕ್ಕಳಿದ್ದರಂತೂ ಅವರ ಕೂಗಿಗೂ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಹೀಗಿದ್ದಾಗ ಹೆಣ್ಣು ಮಕ್ಕಳಾಗಲೀ ಗಂಡು ಮಕ್ಕಳಾಗಲೀ ಒಂದು ನಿಮಿಷ ಸುಮ್ಮನೆ ಕೂರುವ ಪ್ರಮೇಯ ಬರುವುದಿಲ್ಲ. ಅಷ್ಟರಲ್ಲಿ ಹೆಣ್ಣುಮಕ್ಕಳಿಗೆ ಒಂದು ನಿಮಿಷ ಬಿಡುವಿದ್ದರೆ ಅವರಿಗೇ ಗಿಲ್ಟಿಯಾಗಲು ಶುರುವಾಗುತ್ತದೆ. ಅಯ್ಯೋ ನಾನು ಯಾವುದೋ ಕೆಲಸ ಸರಿಯಾಗಿ ಮಾಡಿಲ್ಲ, ಅಥವಾ ಈ ಕೆಲಸ ಮುಗಿದಿಲ್ಲ ಎಂದು.
ಆ ಮನೋಭಾವವನ್ನೇ ತಮ್ಮ ಮಕ್ಕಳಿಗೂ ಸುಮಾರು ಜನ ಹೆಣ್ಣುಮಕ್ಕಳು ದಾಟಿಸುತ್ತಾರೆ. “ನೋಡು ಸುಮ್ಮನೆ ಕೂರಬಾರದು ಏನಾದರೂ ಮನೆಕೆಲಸ ಮಾಡುತ್ತಲೇ ಇರಬೇಕು, ಇಲ್ಲದಿದ್ದರೆ ಜನ ನೀನು ಏನೂ ಮಾಡುವುದಿಲ್ಲ ಎಂದುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಸಂಡಿಗೆ ಇಡು, ಛಳಿಗಾಲದಲ್ಲಿ ಅದನ್ನ ಕರಿದುಕೊಂಡು ತಿನ್ನು” ಎಂದು ಏನೇನೋ ಹೇಳುತ್ತಲೇ ಇರುತ್ತಾರೆ. ಮನೆಕೆಲಸವೇ ಆಗಲಿ ಆಫೀಸಿನ ಕೆಲಸವೇ ಆಗಿರಲಿ, ಎಲ್ಲದಿಕ್ಕೂ ಒಂದು ಮ್ಯಾಕ್ಸಿಮಮ್ ಕರ್ವ ಇರುತ್ತದೆ. ಅಂದರೆ ಒಂದು ಹಂತದವರೆಗೆ ಮಾಡಿದ ಮೇಲೆ ಬುದ್ಧಿ ಮತ್ತು ದೇಹ ಎರಡೂ ಸಾಥ್ ಕೊಡುವುದಿಲ್ಲ.
ಹಾಗಿದ್ದಾಗ, ಒಂದೇ ಸಮನೆ ಹೇಗೆ ಯಾರಾದರೂ ೧೨ ಘಂಟೆಯೂ ೧೮ ಘಂಟೆಯೋ ಕೆಲಸ ಮಾಡಲು ಸಾಧ್ಯ. ಪ್ರಾಣ ಉಳಿಸುವ ವೈದ್ಯರೋ,ನಮ್ಮನ್ನ ಕಾಯುವ ದೇಶದ ಯೋಧರೋ, ಅಥವಾ ಸಾಮಾಜಿಕ ಸಮತೋಲನ ಕಾಯುವ ಪೊಲೀಸರಿಗೆ ಮಾತ್ರ ಹೀಗೆ ಕೆಲಸ ಮಾಡುವ ಅನಿವಾರ್ಯ. ಆದರೆ ಸಾಮಾನ್ಯ ಸಾಧಾರಣ ಮನುಷ್ಯರಾದ ನಮಗೆ ಇದರ ಅಭ್ಯಾಸ ಕಡಿಮೆ. ಒಂದೇ ಸಮನೆ ಮನೆ ಕೆಲಸ, ಆಫೀಸು ಕೆಲಸ ಎಂದು ಸ್ವಲ್ಪವೂ ಬಿಡುವಿಲ್ಲದೇ ಮಾಡಿದರೆ ದೇಹ ಮತ್ತು ಮನಸ್ಸು ಪೂರ್ತಿ ದಣಿದು ಮುಂದೆ ಏನನ್ನೂ ಮಾಡದಿರುವ ಸ್ಥಿತಿಗೆ ಬರುತ್ತದೆ. ಆಮೇಲೆ ಮುಟ್ಟಿ ಮಾತಾಡಿಸಿದರೆ ಕೋಪ ಬರುವಷ್ಟು ಚಂಚಲ ಮನಸ್ಸಾಗಿರುತ್ತದೆ.
ಹೆಣ್ಣುಮಕ್ಕಳಲ್ಲಿ ಈ ಥರ ಮೈಮೇಲೆ ಕೆಲಸ ಎಳೆದುಕೊಳ್ಳುವ ಚಾಳಿ ಹೆಚ್ಚು. ಟೇಬಲ್ಲಿನ ಅಂಚಿನಲ್ಲಿ ಯಾರ ಕಣ್ಣಿಗೂ ಕಾಣದ ಧೂಳು, ಅಡುಗೆಮನೆಯಲ್ಲಿ ಕಾಣದಿರುವ ಕಪಾಟಿನ ಸ್ಕ್ರೂ, ಒಮ್ಮೆ ಮಾತ್ರ ಉಡುವ ಸೀರೆಗೆ ಫಾಲ್ಸ್, ಯಾವುದೋ ಚಾನೆಲ್ಲಿನಲ್ಲಿ ಬರುವ ಅಡುಗೆಯನ್ನ ಮಾಡಬೇಕೆಂಬ ಹಠ ಇವೆಲ್ಲವೂ ಅವರ ಆಯ್ಕೆಯಾಗಿರುತ್ತದೆ. ಆ ಅಯ್ಕೆಯನ್ನ ಗೌರವಿಸೋಣ ಆದರೆ ಅದೇನನ್ನೂ ಮಾಡದೇ ಸುಮ್ಮನೆ ಯಾವ ಕೆಲಸವನ್ನೂ ತಲೆಗೆ ಹಚ್ಚಿಕೊಳ್ಳದೇ ಸುಮ್ಮನೆ ಕೂರುವುದೂ ಒಂದು ಕಲೆ . ಅಂದರೆ ಅವರಿಗೆ ಬೇಕಾದ್ದದ್ದೇನೋ ನೋಡುವುದು ಕೇಳುವುದು ಒಟ್ಟಿನಲ್ಲಿ ಯಾವ ಡೆಡ್ ಲೈನ್ ಇಲ್ಲದಿರುವ ಕೆಲಸ ಮಾಡಿದರೆ ನಮ್ಮ ಬುದ್ಧಿ ಸ್ವಲ್ಪ ಸ್ವಲ್ಪವೇ ರಿಜುವನೇಟ್ ಆಗುತ್ತದೆ. ಅದರಲ್ಲಿ ಯಾವ ಸಂಶಯವೂ ಇಲ್ಲ.
ಎಲ್ಲ ಮನುಷ್ಯರಿಗೂ ಅವರ ಫ್ರೀ ಟೈಮ್ ಅತ್ಯವಶ್ಯಕ. ಇದು ಸಾಧ್ಯವಾಗೋದು ಮನೆಯ ಅಥವಾ ಆಫೀಸಿನ ಕೆಲಸವನ್ನ ಡಿವೈಡ್ ಮಾಡಿದಾಗಲೇ. ಅಂದರೆ ಇಷ್ಟೊತ್ತಿನಿಂದ ಇಷ್ಟೊತ್ತು ಈ ಕೆಲಸ ನಿಮ್ಮದು, ಅದು ನೀವು ಹೇಗೆ ಮಾಡುತ್ತೀರೋ, ಯಾವಾಗ ಮಾಡುತ್ತೀರೋ ಗೊತ್ತಿಲ್ಲ ಎಂದು ಸುಮ್ಮನಾದರೆ ಮಾತ್ರ ನಮ್ಮ ನಮ್ಮ ಫ್ರೀ ಟೈಮ್ ನಮಗೆ ಸಿಗುವುದು.
`ಇಂಡಿಪೆಂಡೆಂಟ್’ ಎಂಬ ಯುಕೆ ದಿನಪತ್ರಿಕೆ ಒಂದು ಸರ್ವೆ ಮಾಡಿತ್ತು. ಅದರಲ್ಲಿ ಹೆಣ್ಣು ಮಕ್ಕಳು ವಾರದಲ್ಲಿ ೩೮ ಘಂಟೆ ಫ್ರೀಯಾಗಿರುತ್ತಾರೆ ಮತ್ತು ಗಂಡು ಮಕ್ಕಳು ೪೩ ಘಂಟೆ ಎಂದು. ಇಲ್ಲಿ ಗಂಡು ಹೆಣ್ಣು ಎಂಬ ಎರಡು ಕಾಲಮ್ ಮಾಡಿದ್ದು ಹೆಣ್ಣು ಯಾಕೆ ಕಡಿಮೆ ಸಮಯ ತನಗೇ ತಾನೇ ಎತ್ತಿಟ್ಟುಕೊಳ್ಳುತ್ತಾಳೆ ಎಂದು ತಾಳೆ ಹಾಕಲು. ಅದ್ಯಾಕೆ ಹೀಗೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಾಗ, ಹೆಣ್ಣುಮಕ್ಕಳು ತಮ್ಮ ಮೈ ಮೇಲೆ ಕೆಲಸ ಎಳೆದುಕೊಳ್ಳಲು ಶುರುಮಾಡುತ್ತಾರೆ ಎಂಬ ಒಂದು ಕ್ರಿಯೆಯಿಂದ.
ಒಂದು ಮನೆಯ ವಾತಾವರಣವನ್ನ ಗಮನಿಸಿ, ಮಗನಿಗೆ ಗ್ಯಾಸ್ ಆಪರೇಟ್ ಮಾಡಲು ಬರುವುದಿಲ್ಲ ಎಂದು ಅಂದುಕೊಳ್ಳಿ, ಆತನಿಗೆ 20 ವಯಸ್ಸಿರಬಹುದು, ಅವನಿಗೆ 50 ಆದರೂ “ಆಯ್ಯೋ ಅವನಿಗೆ ಗ್ಯಾಸೇ ಆಪರೇಟ್ ಮಾಡಿಕೊಳ್ಳಲು ಬರುವುದಿಲ್ಲ, ಗ್ಯಾಸ್ ಒಲೆ ಹಚ್ಚುವುದು ಬರುವುದಿಲ್ಲ, ಯಾರಾದರೂ ಒಬ್ಬರು ಇರಲೇಬೇಕು ಅದಕ್ಕೆ ಕಾಫಿ ನಾನೇ ಮಾಡಿಕೊಡುತ್ತೇನೆ” ಎಂದು ಹೇಳುವ ಹೆಣ್ಣುಮಕ್ಕಳು ಕಡಿಮೆ ಇಲ್ಲ. ಅಂದರೆ ಒಂದು ವಯಸ್ಸಿನವರೆಗೆ ಅವೆಲ್ಲವೂ ಚೆಂದ, ಆಮೇಲೆ ನಮ್ಮ ಯೌವ್ವನದ ಸುಮಾರು ವರ್ಷಗಳು ಬಿಡುವೇ ಇಲ್ಲದೇ ಕೆಲಸಗಳನ್ನ ಮಾಡುತ್ತಲಿದ್ದರೆ ಒಂದು ವಯಸ್ಸಾದ ನಂತರ ಆ ಕೊರಗು ಕಾಡೋಕೆ ಶುರುವಾಗುತ್ತದೆ.
ಒಂದು 400 ಮೀಟರ್ ಓಡಿದ ನಂತರ ಒಂದು ಕೂಲ್ ಡೌನ್ ಅವಶ್ಯಕತೆ ಇರುತ್ತದೆ. ಇಲ್ಲ ದೊಡ್ದ ಬೆಟ್ಟವನ್ನ ಹತ್ತುವ ಚಾರಣ ಸಮಯದಲ್ಲೂ ಸ್ವಲ್ಪ ನೆಮ್ಮದಿಯಾಗಿ ಕೊಂಚ ರೆಸ್ಟ್ ತೆಗೆದುಕೊಳ್ಳಲೇ ಬೇಕಾಗುತ್ತದೆ. ಅದು ದೇಹಕ್ಕೆ ಮತ್ತು ಮನಸ್ಸಿಗೆ ಎರಡೂ ಬಹಳ ಅವಶ್ಯಕ. ಹಾಗೆಯೇ ಮನೆ ಕೆಲಸದ ಒತ್ತಡ – ಆಫೀಸಿನ ಕೆಲಸ ಇದ್ದಾಗ, ಪ್ಲೀಸ್ ಟೇಕ್ ಎ ಚಿಲ್ ಪಿಲ್, ಆರಾಮಾಗುತ್ತದೆ ಸ್ವಲ್ಪ…. ಅದು ಅವಶ್ಯಕ, ಗಿಲ್ಟಿಯಾಗಬೇಕಿಲ್ಲ…

-ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಹೌದು ಸತ್ಯ. Chill up every body.
ಚೆನ್ನಗಿದೆ ಮೇಘನಾರವರೇ….