ಮೇಘ ಸಂದೇಶ/ ನಿಮ್ಮ ಸಮಯ, ನಿಮ್ಮ ಫಿಟ್ನೆಸ್ – ಮೇಘನಾ ಸುಧೀಂದ್ರ

ಮನೆಯಲ್ಲಿ ಎಲ್ಲರನ್ನೂ ನೋಡಿಕೊಳ್ಳುವ ಹೆಣ್ಣುಮಕ್ಕಳು ತಮ್ಮನ್ನು ನೋಡಿಕೊಳ್ಳಲು ಸಮಯ ಹೊಂದಿಸಿಕೊಳ್ಳುವುದು ಬಹಳ ಕಷ್ಟ. ಅದರಲ್ಲೂ ಆರೋಗ್ಯ, ಮೈತೂಕ, ಫಿಟ್‍ನೆಸ್ ಇದಕ್ಕೆಲ್ಲಾ ಸಮಯ ಮೀಸಲಿಡಲು ವಿಶೇಷ ಪ್ರಯತ್ನ ಮಾಡಲೇಬೇಕು. ಅದಕ್ಕೆ ಹಲವು ಬಗೆಯ ಟೀಕೆಟಿಪ್ಪಣಿ ಎದುರಿಸಬೇಕು. ಆದರೆ ದೃಢ ನಿರ್ಧಾರ ಮಾಡಿದರೆ ಸಿಗುವ ಫಲಿತಾಂಶ, ಫಲಶ್ರುತಿ ಎಲ್ಲದಕ್ಕೂ ಉತ್ತರ ಹೇಳಬಹುದು. ಅವೆಲ್ಲವನ್ನೂ ಮೀರಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಬಹುದು. ದೇಹ ದಂಡಿಸಲು ಮೊದಲು ಮನಸ್ಸು ಮಾಡಬೇಕು.

ಮನೆಯಲ್ಲಿ ಒಂದು ದೊಡ್ಡ ಚರ್ಚೆ. “ನಾನು ದಿನಾ ಬೆಳಗ್ಗೆ ಏಳೋದರಿಂದ ಹಿಡಿದು ರಾತ್ರಿ ಮಲಗೋವರೆಗೂ ಕೆಲಸ ಮಾಡ್ತಾನೆ ಇರ್ತೀನಿ, ಅಷ್ಟಾದ್ರೂ ಒಂದು ನಯಾಪೈಸೆ ಸಣ್ಣ ಆಗಿಲ್ಲ. ಸುಮ್ಮನೆ ನನಗೆ ಬೊಜ್ಜು ಬರುತ್ತಿದೆ” ಎಂದು ಮನೆಯ ಹೆಂಗಸರು ಗೊಣಗುತ್ತಿದ್ದರು – ಇದು ಎಲ್ಲಾ ಮಧ್ಯಮ ವರ್ಗದ ಮನೆಯ ಕಥೆ. ಕೆಳವರ್ಗದ ಮನೆಯಲ್ಲಿ ನಾಲ್ಕಾರು ಕಿಲೋಮೀಟರ್ ನೀರಿಗಾಗಿ (ಈ ಸಮಸ್ಯೆ ಬೆಂಗಳೂರಿನಂತಹ ಬೆಂಗಳೂರಿನಲ್ಲಿಯೇ ಇದೆ) ಅಲೆದು ದೇಹ ದಣಿಯಬಹುದು. ಹಾಗೆಯೇ ಅತೀ ಶ್ರೀಮಂತರು ದುಡ್ಡು ಕೊಟ್ಟು ಜಿಮ್ಮಿನಲ್ಲಿ ಬೆವರು ಹರಿಸಬಹುದು. ಆದರೆ ಈ ಮಧ್ಯಮ ವರ್ಗದವರ ಸ್ಥಿತಿಯೋ ಆರಕ್ಕೇರಲ್ಲ ಮೂರಕ್ಕಿಳಿಯಲ್ಲ, ದುಬಾರಿ ಮನೆ ಕಟ್ಟಿ ಅದಕ್ಕೆ ಈ ಎಮ್ ಐ ಕಟ್ಟೋದಕ್ಕೆ ಪೈಸಾ ಪೈಸಾ ಸೇರಿಸಿ ಎಲ್ಲೆಲ್ಲಿ ಉಳಿಸಬೇಕೋ ಅಲ್ಲಲ್ಲಿ ಉಳಿಸಿ ಒಬ್ಬರ ಸಂಪಾದನೆಯಲ್ಲೇ ಮನೆ ನಡೆಸುವವರು ಈ ಮಂದಿ. ಅಲ್ಲಿಗೆ ಮನೆಯ ಕೆಲಸವೆಲ್ಲಾ ಹೆಣ್ಣುಮಕ್ಕಳ ಮೇಲೆ ಬೀಳತ್ತೆ, ಅದಾದ ಮೇಲೆ ಆ ಕೆಲಸಗಳನ್ನೆಲ್ಲಾ ಮಾಡುವಷ್ಟರಲ್ಲಿ ಹೆಣ ಬೀಳತ್ತೆ (ಈ ಮಾತು ಮನೆಯಲ್ಲಿ ಕೇಳಿರುತ್ತೀರಿ ಅಲ್ವಾ ?) ಅದಾದ ಮೇಲೆ ವಾಕಿಂಗು, ಯೋಗ ಅದಕ್ಕೆಲ್ಲಾ ಸಮಯ ಹೊಂದಿಸಿಕೊಳ್ಳೋದಕ್ಕೆ ಆಗತ್ತಾ ? ಚೆ ಚೆ ಸಾಕಾಗೋಗತ್ತಪ್ಪ…

ಇವೆಲ್ಲ ನಾವು ದಿನ ನಿತ್ಯ ಮನೆಯಲ್ಲಿ ಕೇಳುವ ಮಾತುಗಳು. ಆದರೆ ಭಾರತದಲ್ಲಿ ಹೆಣ್ಣುಮಕ್ಕಳು ಎಷ್ಟು ಒಬೇಸ್ – ಜಾಸ್ತಿ ತೂಕ ಆಗಿದ್ದಾರೆ ಎನ್ನುವ ಅಂಕಿಅಂಶ ತಿಳಿದರೆ ನಮಗೆ ಆಘಾತ ಆಗುತ್ತದೆ. ಭಾರತದಲ್ಲಿ ಅಪೌಷ್ಟಿಕತೆ ಸಮಸ್ಯೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ ಆದರೆ ನಗರಗಳಲ್ಲಿ ತುಂಬಾ ಜನ ಒಬೇಸ್ ಇದ್ದಾರೆ ಎಂದರೆ ನಂಬೋಕ್ಕಾಗತ್ತಾ ? ದ್ವಂದ್ವಗಳೇ ತುಂಬಿರುವ ದೇಶದಲ್ಲಿ ಇದೊಂದು ಹೊಸ ಸಮಸ್ಯೆಯೇ. 30 ಮಿಲಿಯನ್ ಜನರು ಭಾರತದಲ್ಲಿ ಒಬೇಸ್ ಅಥ್ವಾ ಜಾಸ್ತಿ ತೂಕ ಹೊಂದಿದ್ದಾರೆ. ಅದರಲ್ಲಿ 23 ಪ್ರತಿಶತ ಹೆಣ್ಣುಮಕ್ಕಳೇ, ಅದು ಬಹಳ ಸಮಸ್ಯೆಯ ವಿಷಯ. ಅದೂ 35 + ವಯಸ್ಸಿನ ಹೆಣ್ಣುಮಕ್ಕಳಲ್ಲಿ ಇದು ಜಾಸ್ತಿ. “ಏನು ಸಣ್ಣ ದಪ್ಪ ಎಂದು ಹೀಗಳೆಯುತ್ತೀಯ “ ಎಂದು ನೀವು ಅಂದುಕೊಂಡರೆ ಅದು ಶುದ್ಧ ಸುಳ್ಳು. ಇದರಲ್ಲಿ ನಾನು ಹೇಳೋಕೆ ಹೊರಟಿರೋದು ನಿಮ್ಮ ಸಣ್ಣ ದಪ್ಪದ ವಿಷಯಕ್ಕಿಂತ ನೀವು ಎಷ್ಟು ಆಕ್ಟೀವ್ ಆಗಿದ್ದೀರಾ ಎಂಬ ವಿಷಯ ಕೇಳೋದಕ್ಕೆ.

50 ಪ್ರತಿಶತ ಹೆಣ್ಣುಮಕ್ಕಳು ವ್ಯಾಯಾಮ ಮಾಡೋದೇ ಇಲ್ಲ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಸೌತ್ ಈಸ್ಟ್ ಏಷಿಯಾದಲ್ಲಿ ಭಾರತವೇ ಕೊನೆಯ ಸ್ಥಾನದಲ್ಲಿ ಇರೋದು. ವ್ಯಾಯಾಮ ಮಾಡದೇ ಇರೋದಕ್ಕೆ ಕಾರಣಗಳೇನು ಎಂದು ಹುಡುಕಲು ಹೊರಟರೆ ಸ್ವಲ್ಪ ವಿಚಿತ್ರವೇ ಅನ್ನಿಸುತ್ತದೆ. ಆಲಸ್ಯ ಅನ್ನೋದು ದೊಡ್ಡ ಕಾರಣ ಆದರೂ ಕೆಲವು ಸಮಸ್ಯೆಗಳು ಇವೆ. ಒಂದು ಹೆಣ್ಣುಮಕ್ಕಳಿಗೆ ಆರಾಮಾಗಿ ಆಚೆ ಹೋಗುವ ವಾತಾವರಣವಿರದೇ ಇರುವುದು. ಅದು ಸೇಫ್ಟಿ ವಿಚಾರವಾಗಿಯೂ ಸತ್ಯ ಮತ್ತು ಮನೆಯ ಕೆಲಸಗಳೆಲ್ಲವೂ ಅವರ ತಲೆಯ ಮೇಲೆ ಬಿದ್ದಿರುವ ಕಾರಣವೂ ಸತ್ಯ. ಇನ್ನು ಸಮಾಜದಲ್ಲಿ “ಇವಳು ವ್ಯಾಯಾಮ ಮಾಡ್ತಾಳಂತೆ” ಎನ್ನುವ ಕುಹಕದಿಂದಲೂ ಹಿಂದೆ ಸರಿಯುವ ಮಂದಿ ಬಹಳಷ್ಟು ಜನ ಇದ್ದಾರೆ.

ಫಿಟ್ನೆಸ್ ಅನ್ನೋದು ದಪ್ಪ ಮತ್ತು ಸಣ್ಣ ವಿಚಾರವಲ್ಲ ಅದು ನಿಮ್ಮ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಡುವ ಒಂದು ಸಾಧನ. ನಿಮ್ಮ ಜೊತೆ ಸಮಯ ಕಳೆಯುವ ಒಂದು ವಿಚಾರ. ಬಿರುಸಿನ ನಡಿಗೆಯೋ , ಓಟವೋ, ಈಜು ಅಥವಾ ಇನ್ನ್ಯಾವುದೋ ಕ್ರೀಡೆಯನ್ನು ಆಡುವುದರಿಂದ ಮನಸ್ಸು ಮುದಗೊಳ್ಳುತ್ತದೆ, ಜೀವನ ಸುಗಮವಾಗುತ್ತದೆ. ಇಲ್ಲದಿದ್ದರೆ ಜಡತ್ವ ಅಂಟಿಕೊಂಡು ಜೀವನ ಬಹಳ ದುಃಖಮಯವಾಗುತ್ತದೆ. ಅದೆಷ್ಟೋ ವೈದ್ಯರು ಹೇಳುವ ಪ್ರಕಾರ ಮಾನಸಿಕ ಆರೋಗ್ಯಕ್ಕೂ ವ್ಯಾಯಾಮ ಬೇಕೇ ಬೇಕು.

ಎಲ್ಲರ ದೈನಂದಿನ ಚಟುವಟಿಕೆಗಳ ಮಧ್ಯ ಒಂದು ಘಂಟೆ ನಮಗಾಗಿಯೇ ಇಟ್ಟುಕೊಂಡರೆ ಆ ಸಮಯದಲ್ಲಿ ಒಂದಷ್ಟು ನಡಿಗೆಯೆಲ್ಲಾ ಮಾಡಿದರೆ ಮನಸ್ಸು ಉಲ್ಲಾಸದಿಂದ ನಲಿಯುತ್ತದೆ. ಅದು ದೇಹಕ್ಕೆ ಅವಶ್ಯಕ. ವಾರಕ್ಕೆ ಮಿನಿಮಮ್ 240 ನಿಮಿಷಗಳಷ್ಟಾದರೂ ಫಿಸಿಕಲ್ ಆಕ್ಟಿವಿಟಿ ಅವಶ್ಯಕ ಎಂದು ಅದೆಷ್ಟು ಸರ್ವೆಗಳು ಹೇಳಿವೆ ಗೊತ್ತಾ ? ಆ ಸಂಖ್ಯೆ ಬಿಟ್ಟಾಕಿ, ನಾವು ಒಂದು 100 ಮೆಟ್ಟಿಲನ್ನಾದರೂ ಆರಾಮಾಗಿ ಹತ್ತಬೇಕು ಏದುಸಿರು ಬಿಡದೇ ಎಂದು ಅನ್ನಿಸುವುದಿಲ್ಲವೇ ? ಇಂಥದೆಲ್ಲಾ ಪ್ರಶ್ನೆಗಳು ಕೇಳಿಕೊಂಡರೆ ನಿಜವಾಗಿಯೂ ನಾಳೆ ನಾವು ಧೂಳು ಹಿಡಿದು ಕೂತಿರುವ ವಾಕಿಂಗ್ ಶೂಸನ್ನು ಕ್ಲೀನ್ ಮಾಡೋಣ ಅನ್ನಿಸುತ್ತೆ ಅಲ್ವಾ ?

ಹೆಣ್ಣುಮಕ್ಕಳು ಅದೂ ನನ್ನ ಹಾಗೆ ಐಟಿಯಲ್ಲಿ ಕೆಲಸ ಮಾಡುವವರಿಗಂತೂ ಕೂತು ಕೂತು ಆಗುವ ಅನಾಹುತಗಳು ಒಂದಾ ಎರಡಾ ? ಅದೆಲ್ಲವನ್ನು ತಡೆಗಟ್ಟೋದಕ್ಕಾದರೂ ಈ ವ್ಯಾಯಾಮ ಅತ್ಯವಶ್ಯಕ. ಇನ್ನು ಈ ಅಂಕಣವನ್ನು ನನ್ನ ಆಫೀಸ್ ಕೆಲಸ ಮುಗಿಸಿ, ಮನೆ ಕೆಲಸ ಮುಗಿಸಿ ಒಂದು ಘಂಟೆ ಭರ್ತಿ ಬ್ರಿಸ್ಕ್ ವಾಕ್ ಮಾಡಿದ ಮೇಲೆಯೇ ಬರೆದದ್ದು. ಅಷ್ಟು ಸಮಯ ನಮಗೆಲ್ಲರಿಗೂ ಇದೆ. ಸದುಪಯೋಗ ಪಡಿಸಿಕೊಳ್ಳೋಣ ಅಲ್ವಾ ? ಇನ್ನು ಯಾವ ಪಾರ್ಕಿನಲ್ಲಿ ಸಿಗ್ತೀರಾ ಡಿಯರ್ ಲೇಡೀಸ್ ? ಅಲ್ಲಿ ಬೆಂಚಿನ ಮೇಲೆ ಕೂತು ಅತ್ತೆ ಸೊಸೆಯರ ರಗಳೆಯನ್ನು ಮಾತಾಡೋ ಬದಲು ಒಂದು ಎಂಟು ರೌಂಡು ಎಕ್ಸ್ಟ್ರಾ ಹಾಕಿ ಏನಂತೀರಾ ? ಈ ಹೊಸ ವರ್ಷಕ್ಕೆ ಶುರು ಮಾಡ್ಕೊಳಿ…

  • ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *