ಮೇಘ ಸಂದೇಶ / ನಮಗೆ ಶೌಚಾಲಯ ಕೊಡಿ – ಮೇಘನಾ ಸುಧೀಂದ್ರ
ಹೆಣ್ಣುಮಕ್ಕಳಿಗೆ ಶೌಚಾಲಯದ ಕೊರತೆಯೇ ದೇಶದ ನಂಬರ್ 1 ಮತ್ತು ನಂಬರ್ 2 ಸಮಸ್ಯೆ ಎಂಬ ಮಾತು ಹಾಸ್ಯ ಅಥವಾ ತಮಾಷೆ ಅಲ್ಲ. ಹಳ್ಳಿಯಿಂದ ನಗರದವರೆಗೆ ಶೌಚಾಲಯದ ಕೊರತೆ, ಮತ್ತು ಅದಿರುವ ಕಡೆ ಸ್ವಚ್ಛತೆಯ ಕೊರತೆಯಿಂದ ಹೆಣ್ಣುಮಕ್ಕಳು ಅನುಭವಿಸುವ ಪಾಡು ಅವರ ಜೀವನದ ಕೆಟ್ಟ ಕನಸುಗಳಲ್ಲೊಂದು.
ಎಂಬತ್ತು ಜನ ಇರುವ ಕಂಪನಿಯಲ್ಲಿ ಹೆಣ್ಣುಮಕ್ಕಳನ್ನ ಡೈವರ್ಸಿಟಿಗೋಸ್ಕರವೇ ಹೈರ್ ಮಾಡಿದ್ದಾರೆ. ಸರ್ಕಾರಕ್ಕೆ ಅವರು ಲೆಕ್ಕ ತೋರಿಸಬೇಕಾಗುತ್ತದೆ. ಇಷ್ಟು ಬಂಡವಾಳ, ಇಷ್ಟು ಲಾಭ ಜೊತೆ ಜೊತೆಗೆ ಇಷ್ಟು ಗಂಡು, ಇಷ್ಟು ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂದು. ಕೆಲವೊಮ್ಮೆ ಅದಕ್ಕೋಸ್ಕರ ಮಾತ್ರ ಹೆಣ್ಣುಮಕ್ಕಳನ್ನ ಆಯ್ಕೆ ಮಾಡಿರುತ್ತಾರೆ. ಹೆರಿಗೆ ರಜೆ, ಮನೆಯಿಂದಲೇ ಕೆಲಸ, ಅದು ಇದು ಎಲ್ಲಾ ಹೇಳಿದ ಮೇಲೆ ಸೇರಿಕೊಂಡ ಹುಡುಗಿಯರಿಗೆ ಲೇಡೀಸ್ ವಾಷ್ ರೂಮ್ ಕುರಿತ ಕರ್ಮಕಾಂಡ ಗೊತ್ತಾಗುತ್ತದೆ. ಅಲ್ಲಿ ಸ್ಯಾನಿಟರಿ ಪ್ಯಾಡ್ ಇಲ್ಲ, ಏರ್ ಫ್ರೆಷ್ನರ್ ಇಲ್ಲ, ಎರಡು ಡಸ್ಟ್ ಬಿನ್ ಇಲ್ಲ, ವಾಸನೆ ಬರುತ್ತಿದೆ ಎಂಬುದೆಲ್ಲ ಗೊತ್ತಾಗುತ್ತದೆ. ಎಂಬತ್ತು ಜನರ ಕಂಪನಿಯಲ್ಲಿ 6 ಜನ ಹುಡುಗಿಯರಿದ್ದರೆ 7 % ಜನಕ್ಕೆ ಯಾಕೆ ಇಷ್ಟೆಲ್ಲಾ ಕಷ್ಟ ಪಡಬೇಕು ಎಂದು ಬೇಕಾದಾಗ ಕ್ಲೀನ್ ಮಾಡೋದು, ಮತ್ತೇನೋ ಮಾಡೋದು ಕೆಲವು ಆಫೀಸುಗಳ ಅಭ್ಯಾಸ.
ಹಾಳಾಗಿ ಹೋಗಲಿ ಸ್ಟುಪಿಡ್ ನಂಬರ್ಸ್ ಎಂದು ಗೊಣಗಿದರೂ ಭಾರತೀಯ ರೇಲ್ವೆಯಲ್ಲಿ ಅಂದಾಜು 30 ರಿಂದ 40 ಪ್ರತಿಶತ ಹೆಣ್ಣುಮಕ್ಕಳೇ ಓಡಾಡುತ್ತಾರೆ ಎಂದಿಟ್ಟುಕೊಳ್ಳಿ, ಅದರಲ್ಲಿ ಪೀರಿಯಡ್ಸ್ ಆಗುತ್ತಿರುವವರು ಒಂದು 2 ಪ್ರತಿಶತ, ಗರ್ಭಿಣಿಯರು 10 ಪ್ರತಿಶತ, ವಯಸ್ಸಾದವರು ಒಂದಷ್ಟು ಇಷ್ಟಿದ್ದಾಗಿಯೂ ರೈಲಿನ ಶೌಚಾಲಯಗಳು ಗಬ್ಬು ಹೊಡೆಯುತ್ತದೆ. ಜನರಲ್ ಬೋಗಿಯಲ್ಲಂತೂ ಹೋಗಲು ಅಸಾಧ್ಯ, ಸೆಕೆಂಡ್ ಕ್ಲಾಸ್ ಏಸಿಯಲ್ಲಿಯೂ ಮೂಗು ಮುಚ್ಚಿಕೊಂಡು ಹೋಗಬೇಕಾಯ್ತು. ಫಸ್ಟ್ ಕ್ಲಾಸ್ ಏಸಿಯಲ್ಲಿ ಪರವಾಗಿಲ್ಲ.
ಹಂಪಿ ಜಗತ್ತಿನ ಎರಡನೇ ದೊಡ್ಡ ಯುನೆಸ್ಕೋ ಸೈಟ್. ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಕಾಲ್ನಡಿಗೆಯಲ್ಲೇ ಎಷ್ಟೋ ಪ್ರದೇಶಗಳನ್ನ ನೋಡಬೇಕು. ನವೆಂಬರ್ ತಿಂಗಳಿನಲ್ಲಿಯೂ ಸಿಕ್ಕಾಪಟ್ಟೆ ಬಿಸಿಲಿಗೆ ಬೆವರುವ ಜಾಗ. ಕೆಲವೊಂದು ಜಾಗಗಳಲ್ಲಿ, ಮ್ಯೂಸಿಯಂಗಳಲ್ಲಿ ಕರ್ನಾಟಕದ ಸುವರ್ಣ ಯುಗವನ್ನ ಹೊಗಳುವ ವಿಷಯಗಳನ್ನು ಹೇಳುವ ಜಾಗಗಳು. ಸುಸ್ತಾಯಿತೆಂದು ಎಳನೀರು ಕುಡಿದಿರೋ, ನಿಮ್ಮ ಕಥೆ ಮುಗೀತು.
ಇನ್ನು ಜಗದ್ವಿಖ್ಯಾತ ಹಂಪಿ ಎಕ್ಸ್ ಪ್ರೆಸ್ಸಿನಲ್ಲಿ ಹೋದರಂತೂ ಕಿಟಕಿಯಲ್ಲಿ ನೋಡಿದರೆ ರೈಲ್ವೇ ಟ್ರಾಕಿನ ಬಳಿ ಕುಳಿತ ಹುಡುಗ ಹುಡುಗಿಯರ ಸರತಿ ಸಾಲೇ ಜಾಸ್ತಿ. ಅದರಲ್ಲಿ ಹೆಣ್ಣು ಮಕ್ಕಳ ಕಥೆಯಂತೂ ಕೇಳಲೇಬೇಡಿ. ಋತುಸ್ರಾವವಾಗುವ ಹೊತ್ತಲ್ಲೂ ಇವರಿಗೆ ಬಯಲೇ ಗತಿ. ಬೆಳಗ್ಗೆ ಬೆಳಗ್ಗೆ ಟ್ರೈನಿನಿಂದ ಎಲ್ಲರಿಗೂ ದಿವ್ಯ ದರ್ಶನ.
ಇದೆಲ್ಲಾ ಈಗಿನ ಕಾಲ, ಈಗಿನ ಯುಗದ ಹೆಣ್ಣುಮಕ್ಕಳ ಸಮಸ್ಯೆಯೆಂದು ಹೇಳಿದರೆ ಒಮ್ಮೊಮ್ಮೆ ನಗು ಬರುತ್ತದೆ. ಬೇಸಿಕ್ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳದೇ ಇದ್ದೀವಲ್ಲಾ ಎಂದು. ಗೆಳತಿಯರ ಗುಂಪು ಟ್ರಿಪ್ ಎಂದಾಗ ಮೊದಲು ಆ ರೆಸಾರ್ಟಿನವನನ್ನೋ, ಹೋಟೇಲ್ಲಿನವನನ್ನೋ ಟಾಯ್ಲೆಟ್ ಸರಿಗಿದ್ಯಾ ಎಂದು ಕೇಳು ಅನ್ನುವ ಮಟ್ಟಕ್ಕೆ ಈಗಿನ ಟ್ರಿಪ್ ಪ್ಲಾನಿಂಗ್ ಗಳು ಶುರುವಾಗಿದೆ.
ಮುಳ್ಳಯ್ಯನ ಗಿರಿ ಬೆಟ್ಟದ ಮೇಲೆ ಇಲ್ಲ ಇನ್ಯ್ಯಾವುದೋ ಬೆಟ್ಟದ ಮೇಲೆ ಮೇಕ್ ಶಿಫ್ಟ್ ಬಾತ್ ರೂಮ್ಸ್ ಮಾಡಬಹುದು. ತೀರ ಹುಲ್ಲಿನ ಹಾಸಿಗೆಯ ಮೇಲೆ ಈ ಕಾರ್ಯಗಳನ್ನೆಲ್ಲಾ ಮಾಡಿ ಎನ್ನುವಷ್ಟು ಪ್ರಕೃತಿ ಪ್ರಿಯರು ನಾವಾಗಬೇಕಿಲ್ಲ. ಒಮ್ಮೆಹುಡುಗಿ ಮತ್ತು ಅವಳ ಗೆಳೆಯರು ಉತ್ತರ ಭಾರತದ ಒಂದು ಹಳ್ಳಿ ಮಧ್ಯದಲ್ಲಿ ಡ್ರೈವರಿಗೆ ಹೇಳಿದರೆ ವಡ್ಡು ವಡ್ಡಾಗಿ ನಕ್ಕು ಸುಮ್ಮನಾದ. ಒಂದು ಪೆಟ್ರೋಲ್ ಬಂಕಿನಲ್ಲಿ ಹೋಗೋಣ ಎಂದು ಹೋದರೆ ಅಲ್ಲಿ ಒಂದು ಪ್ರಣಯ ಪ್ರಸಂಗ ನಡೆಯುತ್ತಿತ್ತು. ಕರ್ಮ ಎಂದುಕೊಂಡು ವಾಪಸ್ಸು ಬಂದಳು. ಅವಳು ಗೆಳೆಯರಿಗೆ “ಟ್ರೈನ್ ನಲ್ಲಿ ಹೋಗಿದ್ದರೆ ಕನಿಷ್ಠ ಪಕ್ಷ ಮೂಗು ಹಿಡಿದುಕೊಂಡಾದರೂ ಈ ಕೆಲಸ ಮುಗಿಸಿಬಹುದಿತ್ತು, ಈ ಕಾರಿನಲ್ಲಿ ಸಿಕ್ಕಿಹಾಕೊಂಡು ಒದ್ದಾಡುತ್ತಿದ್ದೇವೆ” ಎಂದು ಬೈಯುತ್ತಾ ಕೂತಳು . ಆ ಮೈಲಿಗಟ್ಟಲೆ ಟ್ರಾಫಿಕ್ ಜಾಮಿನಲ್ಲಿ ಗಂಡಸರು ಒಬ್ಬೊಬ್ಬರೆ ಇಳಿದು ಅವರ ಕಾರ್ಯವನ್ನ ಮುಗಿಸಿಬರುತ್ತಿದ್ದರು. ನಮಗೆ ಮಾತ್ರ ದೊಡ್ಡ ಪನಿಷ್ಮೆಂಟ್. ಬೇರೆ ಕಾರು, ಟ್ರಕ್ಕಿನಲ್ಲಿದ್ದ ಕೆಲವು ಹೆಂಗಸರೂ ಸಹ ಲೈನಾಗಿ ರಸ್ತೆಯ ಅಂಚಿನಲ್ಲಿ ಕೂತಿದ್ದರು. “ಇಧರ್ ಉಧರ್ ಮತ್ ದೇಖೋ ಮೇಡಮ್, ಸಬ್ಕಾ ಹೋ ರಹಾ ಹೇ” ಎಂದು ಹೇಳಿದ್ದ. ನಮಗೆ ಈ ಟ್ರಾಫಿಕ್ ಜಾಮ್ ಮುಗಿಯುವ ಯಾವ ಲಕ್ಷಣವೂ ಕಾಣುತ್ತಿರಲ್ಲಿಲ್ಲ.
ಸಡನ್ನಾಗಿ ಅವಳ ಸ್ನೇಹಿತ “ಸಿಟಿಯಲ್ಲೆಲ್ಲ ಇಂಥದ್ದೇ, ಯಾವುದಾದರೂ ಊರಿನ ಕಡೆ ತಿರುಗಿಸಿ, ಅಲ್ಲಿ ಬಯಲಾದರೂ ಸಿಗಬಹುದು” ಎಂದ. ಡ್ರೈವರ್ ಒನ್ ವೇ ಅದೂ ಇದೂ ಏನ್ನನ್ನೂ ನೋಡದೇ ಎಲ್ಲೆಲ್ಲೋ ತಿರುಗಿಸಿದ. ಒಂದು ಊರು, ಅಲ್ಲಿದ್ದ ಹೆಣ್ಣು ಮಕ್ಕಳಿಗೆ ಕೇಳಿದ ನಂತರ ಒಂದು ಬಯಲನ್ನ ತೋರಿಸಿದರು. ಹಂಗೂ ನಿಮ್ಮ ಮನೆಯಲ್ಲಿ ಜಾಗವಿದೆಯಾ ಎಂದು ಕೇಳಿದಾಗ, “ನೀವ್ ಸಿಟಿಯವರು ಕಂಡಕಂಡವರನ್ನೆಲ್ಲಾ ಹೀಗೆ ಒಳಗೆ ಬಿಟ್ಟುಕೊಳ್ಳುತ್ತೀರಾ, ಹೋಗಿ ಬಯಲಿನಲ್ಲಿ ” ಎಂದು ಬೈದು ಒಂದು ಅಜ್ಜಿ ಕಳಿಸಿದರು. ಯಾವತ್ತೋ ಅತ್ತೆ ಅವರ ಸೋದರತ್ತೆ ಬಯಲಿನಲ್ಲಿ ಹಾವು ಕಡಿದು ಸತ್ತರು ಎಂಬ ಕಥೆ ಕೇಳಿದ್ದಳು. ನನಗೂ ಅದೇ ಕಥೆ ಎಂದು ನಡೆಯುತ್ತಾ ಹೋದಳು ಹುಡುಗಿ.
ಅವಳ ಗೆಳತಿ ಸಡನ್ನಾಗಿ ಏನು ಅನ್ನುವಷ್ಟರಲ್ಲಿ ಎಳೆದುಕೊಂಡು ಹೋದಳು. ಅಲ್ಲಿದ್ದ ಪೋಲಿ ಗಂಡಸರು ಅವರೆಲ್ಲಾ ಅಲ್ಲಿ ಹೋಗುವುದನ್ನ ನೋಡಿ ವೀಡಿಯೋ ಚಿತ್ರೀಕರಣಮಾಡಲು ಅಣಿಯಾಗಿದ್ದರು. ಒಬ್ಬ ಹುಡುಗ ಸದ್ದು ಮಾಡಿದ್ದಾನೆ ಗೊತ್ತಾಗಿದೆ. ಆಮೇಲೆ ಇಬ್ಬರೂ ಕಿರುಚಿ ಹೆಣ್ಣುಮಕ್ಕಳು ಬಂದು ಆ ಗಂಡಸರಿಗೆ ಹೊಡೆದು ಒದ್ದು, ಅವರನ್ನ ಅವರ ಮನೆಗೆ ಕರೆದುಕೊಂಡು ಹೋಗಿ ಕೆಲಸ ಮುಗಿಸಲು ಅನುವು ಮಾಡಿಕೊಟ್ಟರು. ಹೀಗೆ ಬಯಲಿಗೆ ಶೌಚಕ್ಕೆ ಹೋದ ಹೆಣ್ಣು ಮಕ್ಕಳನ್ನ ರೇಪ್ ಸಹ ಬೇರೆ ಊರಿನಲ್ಲಿ ಮಾಡಿದ್ದಾರೆ ಎಂಬ ವಿಷಯನ್ನೂ ತಿಳಿಸಿ ಕಳಿಸಿದರು. ಪೋಲಿಸ್, ಕೋರ್ಟ್ ಅಂದ್ರೆ, ಸಬ್ ಉನ್ಕೆ ಸಾಥ್ ಹೈ, ಹೆಣ್ಣುಮಕ್ಕಳು ಎಲ್ಲವನ್ನು ತಡೆಯಲು ಕಲಿಯಬೇಕೆಂಬ ಬುದ್ಧಿಮಾತನ್ನೂ ಹೇಳಿಕಳಿಸಿದರು…
ಇದು ನಮ್ಮ ವ್ಯಥೆ, ಇದಕ್ಕೆ ಏನು ಪರಿಹಾರ ?
ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.