ಮೇಘ ಸಂದೇಶ / ಟ್ರೋಲ್ ವೀರರ ಆನ್ ಲೈನ್ ಅವತಾರ – ಮೇಘನಾ ಸುಧೀಂದ್ರ
ಹೆಣ್ಣು ಮಕ್ಕಳನ್ನು ಬಾಯಿಗೆ ಬಂದ ಹಾಗೆ ಅನ್ನುವ ನಮ್ಮ ಸಮಾಜದ ಪರಂಪರಾಗತ ಕೆಟ್ಟ ಬುದ್ಧಿ ಈಗ ಆನ್ ಲೈನ್ ಎಂಬ ಅಮೂರ್ತ ಅವತಾರವನ್ನು ಎತ್ತಿದೆ. ಟ್ರೋಲ್ ವೀರರು ತಮ್ಮ ಹೆಸರು, ವಿಳಾಸ ಏನೂ ಹೇಳದೆ ಲೋಕದ ಯಾವ ಹೆಣ್ಣನ್ನಾದರೂ ಟ್ರೋಲ್ ಮಾಡಬಹುದು. ಅವರ ಕಂತ್ರಿ ನಡವಳಿಕೆಗೆ ಈಗ ತಂತ್ರಾಂಶದ ನೆರವು ಸಿಕ್ಕಿದೆ. ಇನ್ನು ಹೀಗೆ ವರ್ಚುಯಲ್ ವಧೆಗೆ ಒಳಗಾಗುವ ಹೆಣ್ಣುಮಕ್ಕಳಿಗೆ, ಅದಕ್ಕೆ ವೇದಿಕೆ ಒದಗಿಸುವ ಕಂಪೆನಿಗಳ ನೆರವು ಸಿಗುವುದು ಮಾತ್ರ ಇಲ್ಲವೇ ಇಲ್ಲ!
“ಇವಳಿಗೆ ಏನು ತಲೆ ಸರಿ ಇಲ್ವಾ, ಅದ್ಯಾಕೆ ಹೀಗೆ ಬಟ್ಟೆ ಹಾಕಿಕೊಂಡಿದ್ದಾಳೆ ”
“ಆಂಟಿ ಆದ್ರೂ ಟಿಕ್ ಟಾಕ್ ಮಾಡ್ತಾಳೆ”
“ಇವಳ ಏನ್ ಬರೆದಿದ್ದಾಳೆ ನೋಡು, ಅದೆಷ್ಟು ಗಾಂಚಾಲಿ “
ಇವೆಲ್ಲಾ ಸಿನಿಮಾದ ಡೈಲಾಗುಗಳಂತೂ ಅಲ್ಲ.
ಇವೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಹೆಣ್ಣು ಒಂದು ಭಾವಚಿತ್ರವೋ ಇಲ್ಲ ಬರಹವನ್ನೋ ಹಾಕಿದರೆ ಅವಳಿಗೆ ಸಿಗುವ ಬಿರುದು ಬಾವಲಿಗಳು.
ಎಲ್ಲರೂ ಹಾಗಿರುವುದಿಲ್ಲ, ಆದರೆ ಹೆಣ್ಣನ್ನ ಬಹಳ ಸುಲಭವಾಗಿ ಟ್ರೋಲ್ ಮಾಡುವ ಯುಗದಲ್ಲಿ ನಾವಿದ್ದೇವೆ. ಶಾಲೆಯಲ್ಲಿದ್ದಾಗಲಂತೂ ಕಡ್ಡಾಯವಾಗಿ ಒಬ್ಬಳು ಉಬ್ಬಲ್ಲು ಸುಬ್ಬಿ, ಮೊಟ್ಟೆ ಪಂಕಜಾ, ಬೋಡಿ ನಿರ್ಮಲಾ ಇದ್ದೆ ಇದ್ದರು. ಅವರ ಗುಣಗಳನ್ನ ಬಿಟ್ಟು ಬರಿ ಅವರ ವಿಶೇಷಣಗಳನ್ನ ಎತ್ತಿ ಹಿಡಿದು ಕರೆಯುವುದು ಬಹಳ ಫನ್ನಿಯಾಗಿ ಕಾಣಿಸುತ್ತಿತ್ತು. ಚಿಕ್ಕವಯಸ್ಸಿನಲ್ಲೇ ಇದನ್ನ ನಾವು ಕಡಿಮೆ ಮಾಡದೆ ಬೆಳೆಯೋಕೆ ಬಿಟ್ಟಿದರ ಪ್ರಯುಕ್ತ ದೊಡ್ಡವರಾದ ಮೇಲೆ ಇದು ಯಾರಿಗೂ ತೊಂದರೆ ಮಾಡುವಂಥದಲ್ಲ ಇದು ನಗುವಂಥದ್ದು ಎಂದು ಅಂದುಕೊಂಡೆ ನಾವು ಈ ತಮಾಷೆಗಳನ್ನ ಮಾಡುತ್ತಾ ಕೂತಿರುತ್ತೇವೆ. ಹೆಣ್ಣುಮಕ್ಕಳಂತೂ ಇದಕ್ಕೆ ಬಹಳ ಬೇಗ ನಗೆಪಾಟಲಿಗೀಡಾಗುವ ಪ್ರಾಣಿಗಳು. ಅಂದರೆ ಹೆಣ್ಣನ್ನ ಅಳೆಯುವುದೇ ಅವಳ `ಬಿಹೇವಿಯರ್’ ನಿಂದ. ಸೈಲೆಂಟಾಗಿ, ತಗ್ಗಿ, ಬಗ್ಗಿ ನಡೆಯುವ ಬಹಳ ಸುಸಂಸ್ಕೃತ ಹೆಣ್ಣುಮಕ್ಕಳನ್ನ ಇಷ್ಟ ಪಡುವ ಸಮಾಜ, ವಾಚಾಳಿಗಳು, ಗಟ್ಟಿಯಾಗಿ ಮಾತಾಡುವ ಹೆಣ್ಣುಮಕ್ಕಳನ್ನ ಬೇಗ ತಿರಸ್ಕಾರ ಮಾಡುತ್ತದೆ. ಇನ್ನೂ ಜಗ್ಗಿಸಬೇಕಂದರೆ ಟ್ರೋಲ್ ಮಾಡುತ್ತದೆ.
ಟ್ರೋಲ್ ಎಂದರೆ ಬೇಕೆಂತಲೇ ಒಬ್ಬರ ಬಗ್ಗೆ ಕೆಟ್ಟದಾಗಿ ಬರೆದು ಅಥವಾ ಅವರ ಭಾವಚಿತ್ರವನ್ನ ಕೆಟ್ಟರೀತಿಯಲ್ಲಿ ಬಿಂಬಿಸಿ ಮಜಾ ತೆಗೆದುಕೊಳ್ಳುವುದು. ವಿಕೃತ ಖುಷಿಯಷ್ಟೇ ಇದು ಬಹಳ ಅಪಾಯಕಾರಿ. ಭಾರತದಲ್ಲಿ ಮಹಿಳೆಯರು ಹೆಚ್ಚು ಟ್ರೋಲ್ ಆಗುವುದು ಟಿಕ್ ಟಾಕ್ ನಲ್ಲಿ ಮತ್ತು ಮಹಿಳಾ ರಾಜಕಾರಣಿಯರು ಜಾಸ್ತಿ ಟ್ವಿಟರ್ ನಲ್ಲಿ. ಒಂದು ಅಂಕಿ ಅಂ ಪ್ರಕಾರ ಟ್ವಿಟರಿನಲ್ಲಿ ಬರುವ ಪ್ರತಿ ಏಳು ಟ್ವೀಟ್ಟ್ ಗಳಲ್ಲಿ 1 ಟ್ವೀಟ್ಟ್ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡುವುದೇ ಆಗಿರುತ್ತದೆ. ಇನ್ನು ಮಹಿಳಾ ರಾಜಕಾರಣಿಗಳನ್ನ ಮೆನ್ಷನ್ ಮಾಡಿ ಸುಮಾರು 74% ಜನರನ್ನ ಟ್ರೋಲ್ ಮಾಡಲಾಗುತ್ತದೆ. ಅಂದರೆ ಅವರ ಹೆಸರನ್ನು ಯಾವುದೇ ಭಯವಿಲ್ಲದೆ ಬೇಕಾಬಿಟ್ಟಿ ಮಾತಾಡಿ ಬರೆಯಬಹುದಾದ ಸ್ವಾತಂತ್ರ್ಯ ನಮ್ಮಲ್ಲಿದೆ. “ನಿನ್ನನ್ನ ರೇಪ್ ಮಾಡುತ್ತೇನೆ” ಎಂದು ಒಂದು ಪತ್ರಕರ್ತೆಗೆ ಟ್ವಿಟರಿನಲ್ಲಿ ಒಬ್ಬ ಗಂಡಸು ಬರೆದಿದ್ದನ್ನು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಅದು ಆತ ಬರೆದ್ದದ್ದು ತನ್ನ ನೆಚ್ಚಿನ ಹೀರೋನ ಕೆಟ್ಟ ಸಿನಿಮಾದ ವಿಮರ್ಶೆ ಬರೆದಿದ್ದಕ್ಕೆ. ಇನ್ನೂ ಒಂದು ಪತ್ರಕರ್ತೆಯ ರಾಜಕೀಯ ನಿಲುವನ್ನ ಖಂಡಿಸಿ ಆಕೆಗೆ ಕೊಲೆ ಬೆದರಿಕೆ ಹಾಕಲಾಯಿತು. ಇನ್ಸ್ಟಾ ಗ್ರಾಮ್ ಗೆ ಅವರು ದೂರು ಕೊಟ್ಟಾಗ ಅವರ ಗೈಡ್ ಲೈನ್ಸ್ ಅನ್ನು ಅದು ಮೀರೋದಿಲ್ಲ ಎಂದು ಹೇಳಿ ದೂರನ್ನ ವಾಪಸ್ಸು ಮಾಡಿ ಎಂದರು. ಹೀಗೆ ಆನ್ ಲೈನ್ ಅಲ್ಲದಿದ್ದರೂ ಹೆಣ್ಣಿಗೆ ಹೀಗೆಲ್ಲಾ ಜಬರ್ದಸ್ತ್ ಮಾಡಿ ಕೂಡಿಸುವವರು ಇದ್ದೆ ಇರುತ್ತಾರೆ. ಆಫ್ ಲೈನ್ ಅಬ್ಯುಸಿನ ಮುಂದುವರಿದ ಭಾಗವೇ ಈ ಟ್ರೋಲಿಂಗ್ .
ಆನ್ ಲೈನ್ ನಲ್ಲಂತೂ ಯಾವುದೇ ತರಹದ ಮುಖ ಸಹ ಇರೋದಿಲ್ಲ. ಯಾವುದೋ ಟಾಮ್ ಎಂದು ಹೆಸರು ಬರೆದುಕೊಂಡು ಸಹ ಹೆಣ್ಣಿನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಬಹುದು. ಜಾಸ್ತಿ ಕೇಳಿದರೆ ನಿಮಗೆ ಜೋಕ್ ಅರ್ಥವಾಗುವುದಿಲ್ಲ, ನಾವು ಸುಮ್ಮನೆ ಹೇಳಿದ್ದು ಎಂದು ದೊಡ್ಡ ಭಾಷಣ ಬಿಗಿಯುವ ಭಾಷಣಕಾರರಿಗೆ ಅರ್ಥವಾಗದ ವಿಷಯವೆಂದರೆ “ರೇಪ್ ಮಾಡುತ್ತೇನೆ” ಎನ್ನುವುದು ಯಾವುದೇ ಕಾಲಕ್ಕೂ, ಕಾರಣಕ್ಕೂ ತಮಾಷೆಯ ವಿಷಯವಾಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು!
ಇನ್ನು ಹೆಣ್ಣಿನ ಹಳೆಯ ಸಂಬಂಧಗಳನ್ನ ತೆಗೆದು ಆ ಫೋಟೋಗಳನ್ನ ಶೇರ್ ಮಾಡಿ ಸಹ ಟ್ರೋಲ್ ಮಾಡುವ ಮಂದಿ ಇದ್ದಾರೆ. ಅವಳಿಗೆ ಯಾವುದಾದರೂ ಸಂಬಂಧ ಸರಿಹೋಗದಿದ್ದರೆ ಅವನನ್ನ ಬಿಟ್ಟು ಮತ್ತೊಬ್ಬನನ್ನ ಮದುವೆಯಾದರೆ, ಮೂವ್ ಆನ್ ಆದರೆ ಸಂಬಂಧ ಪಡದಿರುವ ವ್ಯಕ್ತಿ ಅವಳ ಚಾರಿತ್ರ್ಯ ಹರಣ ಮಾಡಬಹುದು. ಅವಳನ್ನ ಕಂಡ ಕಂಡ ಶಬ್ಧಗಳಲ್ಲಿ ಬೈಯ್ಯಬಹುದು , ಅವರ ಅಪ್ಪ ಅಮ್ಮ ಅಕ್ಕ ತಂಗಿಯನ್ನು ತಂದು ಬೈಯ್ಯಬಹುದಾದ ಎಲ್ಲಾ ಹಕ್ಕುಗಳನ್ನ ಕೆಲವರು ಪಡೆದುಕೊಳ್ಳುತ್ತಾರೆ. ಒಂದು ಹೆಣ್ಣು ಈಗ ಆಫ್ ಲೈನ್ ಅಷ್ಟೇ ಅಲ್ಲ ಆನ್ ಲೈನ್ ನಲ್ಲಿಯೂ ತಗ್ಗಿ ಬಗ್ಗಿ ನಡೆಯಬೇಕಾದ ಸಂದರ್ಭಗಳನ್ನ ಸೃಷ್ಟಿಸುತ್ತಿದ್ದಾರೆ ಈ ಟ್ರೋಲ್ ವೀರರು.
ಕಡೆಯಲ್ಲಿ ಒಂದು ನನ್ನ ಅನುಭವವನ್ನೇ ಹೇಳುತ್ತೇನೆ, ಒಂದು ಅಂಕಣದಲ್ಲಿ ರೈತರ ಕಷ್ಟಗಳನ್ನ ಬರೆಯುವಾಗ ನನ್ನ ಸಂಬಂಧಿಕರು ಹೇಳಿದ್ದ ಮಾತನ್ನು ಯಥಾವತ್ತಾಗಿ ಬರೆದಿದ್ದೆ. ಅವರು ನಿನಗೆ ತಿಂಗಳಿಗೆ ಇಷ್ಟು ದುಡ್ಡು ಬರುತ್ತದೆ, ನಮಗೆ ಅದಿಲ್ಲ, ಅದಕ್ಕೆ ಈ ಉಟ್ಟುವ ಕೆಲಸಕ್ಕಿಂತ ನಿನ್ನ ಕೆಲಸವೇ ಲೇಸು ಎಂದಿದ್ದರು. ಅದನ್ನ ಪ್ರಕಟಿಸಿದ ನಂತರ ನನಗೆ ಅಪ್ಪ, ಅಮ್ಮ, ಅಕ್ಕ ಎಲ್ಲಾ ಬೈಗುಳಗಳು ಬಂದು ಸೆಗಣಿ ತಿನ್ನು, ಇನ್ನೇನೋ ತಿನ್ನು ಎಂದು ಬರೆದು ಕೆಟ್ಟದಾಗಿ ಮಾತಾಡಿದ್ದರು. ಅವರ ಪ್ರೊಫೈಲುಗಳನ್ನು ಹುಡುಕಿದಾಗ ಸಿಕ್ಕಿದ್ದು 16 ವರ್ಷ, 18 ವರ್ಷ ಯಾವುದೋ ದೊಡ್ಡ ತಾರೆಯ ಅಭಿಮಾನಿಗಳು ಎಂದು ಅಷ್ಟೇ…
ಇನ್ನುಈ ಮಕ್ಕಳಿಗೆ ಹೇಳುವುದು ಕೇಳುವುದು ಏನು ಇರದಾಯಿತು.
ಇಲ್ಲಿಗೆ ಈ ಫೇಸ್ ಲೆಸ್ ಟ್ರೋಲ್ ಕಥೆ ಇಷ್ಟೇ ಆಯಿತು.
ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.