Uncategorizedಅಂಕಣ

ಮೇಘ ಸಂದೇಶ/ ಆ ಜಗತ್ತಿನಲ್ಲಿ ನೀವೂ ಇರಬೇಕು! – ಮೇಘನಾ ಸುಧೀಂದ್ರ

ಹುಡುಗ ಹುಡುಗಿಯ ನಡುವೆ ಪ್ರೇಮ ಸಂಬಂಧ ಬೆಳೆದಾಗ ಹುಡುಗಿಗೆ “ಸಮರ್ಪಣಾ ಭಾವ” ಏಕೆ ಬರುತ್ತದೋ ಗೊತ್ತಿಲ್ಲ. ಅವನೇ ಜಗತ್ತು, ಅವನೇ ಜೀವನ ಎಂದು ಭಾವಿಸುತ್ತ ತನ್ನತನವನ್ನು ಕಳೆದುಕೊಳ್ಳುವ ಮಂಪರು ಅವಳನ್ನು ಆವರಿಸಿಬಿಡುತ್ತದೆ. ಆದರೆ ಪ್ರೀತಿಪ್ರೇಮಕಾಮಗಳ ಜೊತೆ ಹುಡುಗಿ ತನ್ನ ಅಸ್ಮಿತೆ, ತನ್ನ ಇಷ್ಟಾನಿಷ್ಟಗಳನ್ನು ಉಳಿಸಿಕೊಳ್ಳುವ ದೃಢತೆ ಇದ್ದರೆ ಒಳ್ಳೆಯದು. ಸಂಬಂಧ ಮುರಿದುಬಿದ್ದಾಗ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ದುಃಖವನ್ನು ನಿರ್ವಹಿಸುವ, ಅದರಿಂದ ಹೊರಬರುವ ಉಪಾಯಗಳು ಕಾಣದೆ ಅವರು ಕಂಗಾಲಾಗುತ್ತಾರೆ. ಉತ್ಕಟ ಪ್ರೀತಿಯಲ್ಲೂ ತನ್ನತನ ಉಳಿಸಿಕೊಳ್ಳುವ ಗಟ್ಟಿಮನ ಅವರಿಗೆ ಬೇಕಲ್ಲವೇ?

ಒಂದು ಕೆಫೆಟೇರಿಯಾದಲ್ಲಿ ಕಾಫಿ ಕುಡಿಯಲು ಹೋಗಿದ್ದೀರಿ. ಈಗ ಮಾಸ್ಕ್ ಹಾಕಿಕೊಂಡು ಕೂತಿದ್ದಾಗ ಪಕ್ಕದ ಟೇಬಲ್ಲಿನಲ್ಲಿ ಒಂದು ದೊಡ್ಡ ಸಂವಾದ ನಡೆಯುತ್ತಿದೆ, “ಅವನಿಗೆ ಎಲ್ಲಾ ಕೊಟ್ಟೆ, ನನ್ನ ಇಡೀ ಜೀವನಾನೆ ಅವನಿಗೆ ಧಾರೆ ಎರೆದೆ, ಎಲ್ಲಾ ಹಾಳಾಯ್ತು” ಎಂದು ಒಂದು ಹುಡುಗಿ ಕಿರುಚುತ್ತಾ ತನ್ನ ಗೆಳತಿಗೆ ಹೇಳುತ್ತಾ ಇದ್ದಳು. ಕೆಫೆಟೇರಿಯಾದಲ್ಲಿ ಮಾಸ್ಕ್ ಹಾಕಿಕೊಂಡರೂ ಕಿವಿಗೆ ಮಾಸ್ಕ್ ಇಲ್ಲವಲ್ಲ ಎಂದು ಕೂತರೇ ಅಲ್ಲಿ ಹುಡುಗಿ ತನ್ನ ಬ್ರೇಕಪ್ ಸ್ಟೋರಿ ಹೇಳುತ್ತಿದ್ದನ್ನು ಕೇಳಿಸಿಕೊಂಡರೆ ಅದು ಎಷ್ಟು ಸಿಲ್ಲಿ ಅಂತಲೂ ಮತ್ತು ಕೆಲವೊಮ್ಮೆ ಹುಡುಗಿಯನ್ನು ನೋಡಿ ಪಾಪ ಅಂತಲೂ ಅನ್ನಿಸಿದ್ದರೆ ಅದು ಬಹಳ ಸಹಜ. ಇಷ್ಟ ಇರೋಳನ್ನ ಅವನನ್ನ ಹೋದ

“ನೀನು ನನ್ನ ಜಗತ್ತು, ನಿನಗೋಸ್ಕರ ಏನೇನೋ ಮಾಡಿದೆ, ಈಗ ನನಗೆ ಹೀಗೆ ಮಾಡಿದ್ದೀಯಾ.” ಎಂದೆಲ್ಲಾ ಹೇಳುವ ಹೆಣ್ಣುಮಕ್ಕಳ ಜನಸಂಖ್ಯೆ ಬಹಳ ಜಾಸ್ತಿ. ಅವರು ಸಂಬಂಧದಲ್ಲಿ ಅಥವಾ ಮದುವೆಯಲ್ಲಿ ಔಟ್ ಆಫ್ ಲೀಗ್ ಗೆ ಹೋಗಿ ಜಾಸ್ತಿ ಹೆಣ್ಣುಮಕ್ಕಳು ತಮ್ಮತನವನ್ನು ಬಿಟ್ಟುಕೊಟ್ಟಿರುತ್ತಾರೆ. ಅದು ಹೆಣ್ಣುಮಕ್ಕಳಿಗೆ ತಾವು ಮಾಡುವ ಪ್ರೀತಿಯ ಭಾಗವೆಂದೇ ಅರಿತುಕೊಂಡು ಅವರದ್ದನ್ನು ಬಿಟ್ಟುಕೊಂಡು ಬರುತ್ತಾರೆ. ಆಮೇಲೆ ಅವರು ಹೇಳದೇ ಮಾಡಿದ ತ್ಯಾಗವನ್ನ ಬಹಳ ನಂಬಿಕೊಂಡು ಅದರ ಬದಲಾಗಿ ಅವರೂ ತಮ್ಮ ಪಾರ್ಟ್ನರ್ ಅಥವಾ ಗಂಡನಿಂದ ಅಂಥದನ್ನೇ ನಿರೀಕ್ಷೆ ಮಾಡಿರುತ್ತಾರೆ. ಆ ಆಶಾಗೋಪುರ ಬಿದ್ದುಹೋಗಿ ಅವರಿಗೆ ನೋವಾಗೋದು ಬ್ರೇಕ್ ಆಪ್ ಆದಾಗ ಮಾತ್ರ.

ಹೆಣ್ಣುಮಕ್ಕಳು ಕೆಲವೊಮ್ಮೆ ಅವರ ಸಂಸಾರಕ್ಕೆ ಮತ್ತು ಪ್ರೀತಿಗೆ ಅವಶ್ಯಕತೆಗಿಂತ ಜಾಸ್ತಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಹೇಗೆಂದರೆ ಒಂದು ಸಂಬಂಧಕ್ಕೆ- ರಿಲೇಶನ್ಶಿಪ್ಪಿಗೆ ಬಂದ ಮೇಲೆ ತಮ್ಮ ಹಳೆಯ ಪ್ರಪಂಚವನ್ನೆಲ್ಲಾ ಮರೆತು ಬಿಟ್ಟು ಇಷ್ಟ ಇರದ ಅಡುಗೆ, ಇಷ್ಟ ಇರದ ಉಡುಗೆಯನ್ನು ತೊಟ್ಟು ಜೀವನ ಸವೆಸುತ್ತಿರುತ್ತಾರೆ. ಯಾರನ್ನಾದರೂ ಮೆಚ್ಚಿಸೋದಕ್ಕೆ ಎಷ್ಟು ವರ್ಷ ನಾವು ನಾಟಕ ಮಾಡಬಹುದು ಹೇಳಿ? ಜೀನ್ಸ್ ಹಾಕೋದಕ್ಕೆ ಇಷ್ಟವಾದವಳನ್ನ ನಾವು  ಸೀರೆ ಉಡಿಸಿ ಎಷ್ಟು ದಿವಸ ಇಟ್ಟುಕೊಳ್ಳಬಹುದು ಹೇಳಿ. ಅಥವಾ ಎಗ್ ಕರಿ ತಿನ್ನುವವಳನ್ನು ಎಷ್ಟು ದಿವಸ ಅನ್ನ ಸಾರಿನಲ್ಲಿ ಮುಳುಗಿಸಬಹುದು ಅಲ್ವಾ ?

ಈ ಆಧುನಿಕ ಹೆಣ್ಣುಮಕ್ಕಳು ಸಹ ಇದನ್ನ ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರೆದಿದ್ದಾರೆ ಎಂಬುದು ಆಶ್ಚರ್ಯವೇ ಸರಿ. ಪ್ರತಿಯೊಂದು ಸಂಬಂಧದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು, ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎನ್ನುವುದನ್ನೇ ಇನ್ನೂ ಬೋಧಿಸಿ ಬೋಧಿಸಿ ಹೆಣ್ಣುಮಕ್ಕಳು ತಮ್ಮದನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಹದಿಹರೆಯದ ಪ್ರೀತಿಯಲ್ಲಿ ಅವನಿಗೆ ಇಷ್ಟ ಎಂದು ಪಾಚಿ ಕಲರ್ ಗ್ರೀನ್ ಬಟ್ಟೆ ಹಾಕಿಕೊಳ್ಳೋದು, ಅಥವಾ ಅವನಿಗೆ ಇಷ್ಟ ಎಂದು ತಮ್ಮ ಫೋನಿನಲ್ಲಿ ವಾಲ್ ಪೇಪರ್ ಅವನು ಹೇಳಿದ ಹಾಗೆ ಹಾಕೋದು, ಇಂದ ಶುರುವಾಗಿ ಒಂದು ವಯಸ್ಸಿಗೆ ಬಂದ ನಂತರ ಅದು ಅವಳು ಇಡುವ ಪ್ರತಿ ಹೆಜ್ಜೆಯನ್ನು ಒಬ್ಬರು ನಿಯಂತ್ರಿಸುವ ಹಾಗೆ ಮಾಡೋದು ಬಹಳ ವಿಷಾದಕರ.

ರಿಲೇಷನ್ಶಿಪ್ ಅಲ್ಲಿ ಇದ್ದಾಕ್ಷಣ ಸುಮ್ಮನೆ ತಮ್ಮನ್ನು ತಾವು ಗೌರವ ಕೊಡೋದು ಅಥವಾ ಪ್ರೀತಿಸುವುದು ಮರೆತೇ ಬಿಡುತ್ತಾರೆ. ಎಲ್ಲವೂ ಪರರಿಗೆ ಸಲ್ಲುತ್ತದೆ. ಹೌದು ಅಷ್ಟು ಸೆಲ್ಫಿಶ್ ಆಗಬಾರದು ಎಂದು ಹೇಳಿದರೂ ಸಹ ನಮ್ಮನ್ನು ನಾವು ಪ್ರೀತಿಸುವುದರಲ್ಲಿ ತಪ್ಪೇನು ಇಲ್ಲ. ಮದುವೆಯಾದ ತಕ್ಷಣ ಬಾಯ್ ಫ್ರೆಂಡ್ ಸಿಕ್ಕ ತಕ್ಷಣ ಹಳೇ ಸ್ನೇಹಿತರು, ಮನೆಯವರನ್ನು ಮರೆಯುವ ಅವಶ್ಯಕತೆ ಇಲ್ಲವೇ ಇಲ್ಲ. ಅದರಲ್ಲಿಯೂ ಸ್ನೇಹಿತರನ್ನು ಕಡೆಗಣಿಸಿ ತಮ್ಮ ಜೀವನವನ್ನು ಸಾಗಿಸುವ ಸಾಹಸಕ್ಕೆ ಕೈ ಹಾಕುತ್ತಾರೆ. ತಮ್ಮ ಐಡೆಂಟಿಟಿಯನ್ನೇ ಮರೆತು ಅವನ ನೆರಳಿನಲ್ಲಿಯೇ ಬದುಕೋಕೆ ಶುರುಮಾಡುತ್ತಾರೆ.

24 ಘಂಟೆಗಳು, 7 ದಿವಸಗಳು ಅವನ್ನನ್ನ ನೋಡಲೇ ಬೇಕು ಇಲ್ಲದಿದ್ದರೆ ನನಗೆ ಹುಚ್ಚು ಹಿಡಿಯುತ್ತದೆ, ನನ್ನ ಪಕ್ಕದಲ್ಲೇ ಇರಬೇಕು ಎಂಬ ಹುಚ್ಚುಗಳನ್ನು ಹತ್ತಿಸಿಕೊಂಡು ಜೀವನ ಕಳೆದರೆ ಅವನ ಹಿಂದೆ ಹಿಂದೆಯೇ ನೆರಳಿನಲ್ಲೇ ಬದುಕಬೇಕಾದ ಸಂದರ್ಭ ಒದಗಿ ಬರಬಹುದು. ಇದು ಹೆಣ್ಣುಮಕ್ಕಳಿಗೆ, ಗಂಡಸರಿಗೆ ಎಲ್ಲರಿಗೂ ಆಗುವ ಅನುಭವಗಳೇ. ಹೊಸದಾಗಿ ನಮ್ಮ ಜೀವನಕ್ಕೆ ಜನ ಬಂದಾಗ ಏನೇ ಆಗಲಿ ಅವರನ್ನ 24 ಘಂಟೆಗಳ ಕಾಲ ನಮ್ಮ ಹತ್ತಿರವೇ ಇಟ್ಟುಕೊಂಡಿರಬೇಕು ಎಂದೆಲ್ಲಾ ಆಸೆಗಳು ಹುಟ್ಟಿ ಜೀವನವನ್ನು ಇನ್ನಷ್ಟು ದುರ್ಭರ ಮಾಡುತ್ತದೆ.

ಹೆಣ್ಣಾಗಲಿ, ಗಂಡಾಗಲಿ ಒಂದು ರಿಲೇಷನ್ ಶಿಪ್ ಗೆ ಬಂದಾಗ ಪೀಪಲ್ ಪ್ಲೀಸರ್ ಆಗೋದನ್ನ ಬಿಡಬೇಕು, ತೀರ ಕೆಟ್ಟ ವಿಷಯಗಳಲ್ಲಿ ಬದಲಾಗಬೇಕೆ ಹೊರತು ಒಳ್ಳೆಯ ವಿಷಯಗಳು, ಹವ್ಯಾಸಗಳನ್ನು ಪರರಿಗೆ ಬದಲಾಯಿಸಿಕೊಳ್ಳುವ ಯಾವುದೇ ಅವಶ್ಯಕತೆ ಇಲ್ಲ. ಕೆಲವರಿಗೆ ಒಂಟಿಯಾಗಿರುವುದಕ್ಕೆ ಭಯ ಅದಕ್ಕೆ ತಮ್ಮತನವನ್ನು ಕಳೆದುಕೊಂಡು ಸಂಬಂಧಗಳನ್ನು ಉಳಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡುತ್ತಾರೆ. ಅದು ಅವರಿಗೆ ಕುತ್ತು ತರುವುದರಲ್ಲಿ ಆಶ್ಚರ್ಯವಿಲ್ಲ.

ಕಾಫಿ ಶಾಪಿನಲ್ಲಿ ನಡೆಯುವ ಸಂಭಾಷಣೆಗಳು ಪೂರ್ತಿಯಾಗಿ ಸತ್ಯವಿಲ್ಲದೇ ಇದ್ದರೂ ಅದರಲ್ಲಿ ಹುಡುಗಿ ಹೇಳುವ, “ನನ್ನ ಲೈಫ್ ನಿನಗೆ ಕೊಟ್ಟೆ” ಎಂಬುದು ಮಾತ್ರ ಸಂಪೂರ್ಣ ಸತ್ಯ. ಅಲ್ಲಿ ಅವಳು ತನ್ನ ಗೆಳೆಯರ ಗುಂಪು, ತನ್ನ ಆಸೆ, ತನ್ನ ಊಟ , ತಿಂಡಿ, ನಡಿಗೆ ಎಲ್ಲವನ್ನೂ ಒಬ್ಬನಿಗೋಸ್ಕರ ಬದಲಾಯಿಸಿಕೊಂಡಿರುತ್ತಾಳೆ. ಅದು ಫಲ ಕೊಡದಿದ್ದಾಗ ಕಳೆದು ದಿವಸಗಳನ್ನ ನೆನೆಸಿಕೊಂಡು ಕೊರಗುವವರು ಹೆಣ್ಣುಮಕ್ಕಳೇ ಜಾಸ್ತಿ.

“ನೀನೇ ನನ್ನ ಜಗತ್ತು” ಎಂದು ಹೇಳಿದಾಗ ಆ “ಜಗತ್ತಿನಲ್ಲಿ ನಿಮ್ಮತನವನ್ನೂ ಸೇರಿಸಿಕೊಂಡರೆ ಜೀವನ ಬಹಳ ಸುಗಮ.

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *