ಮೇಘ ಸಂದೇಶ / ಅವಳ ಸಮಯ ಅವಳಿಗೆ ಕೊಡಿ – ಮೇಘನಾ ಸುಧೀಂದ್ರ
ನಮ್ಮ ಸಮಾಜ ಹೆಣ್ಣು ಎಂಬ ಜೀವಕ್ಕೆ ಏನೇನು ಜವಾಬ್ದಾರಿ ಹೊರಿಸಿದೆ, ಆ ಮೂಲಕ `ಅವಳತನ’ ಹೇಗೆ ನಾಶವಾಗಿದೆ ಎನ್ನುವುದನ್ನು ವರ್ಣಿಸಲು ಸಾಧ್ಯವಿಲ್ಲ. ಆದರೆ ತನ್ನ ಆಸೆಯನ್ನು ಗುರುತಿಸಿಕೊಳ್ಳುವ ಮತ್ತು ಅಸ್ಮಿತೆಯ ಹುಡುಕಾಟದಲ್ಲಿರುವ ಅಮ್ಮಂದಿರಿಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಮನೆಯೊಳಗಿನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಂಥ ಆಶಯದೊಂದಿಗೆ ಮೇಘನಾ ಸುಧೀಂದ್ರ ಅಂಕಣ ಆರಂಭ.
ನೀವು ಇಪ್ಪತ್ತು ಮೂವತ್ತು ವರ್ಷದ ಗಂಡು, ಹೆಣ್ಣು ಮಕ್ಕಳಾಗಿದ್ದರೆ, ನಿಮ್ಮ ಅಮ್ಮಂದಿರಿಗೆ ಐವತ್ತು ಸಮೀಪಿಸುತ್ತಿದ್ದರೆ ಅಥವಾ ಐವತ್ತು ಆಗಿದ್ದರೆ ನಿಮಗೊಂದು ಕಿವಿಮಾತು: ಅವಳ ಸಮಯ ಅವಳಿಗೆ ಕೊಡಿ, ಅವಳನ್ನ ಅವಳಾಗಿಯೇ ಇರೋದಕ್ಕೆ ಬಿಡಿ….
ಈಗ ಕಥೆ ಶುರುಮಾಡೋಣ, ಒಂದು ಮನೆ, ಆ ಮನೆಯಲ್ಲಿ ಅಜ್ಜಿ, ತಾತ, ಅಪ್ಪ, ಅಮ್ಮ ಇಬ್ಬರು ಮಕ್ಕಳು. ಅಮ್ಮ ಆ ಮನೆಯ ಜೀವಾಳ. ಅವಳು ಇಲ್ಲದಿದ್ದರೆ ಆ ಮನೆ ಅಲ್ಲೋಲಕಲ್ಲೋಲ. ಅವಳಿಗೆ ಹುಷಾರಿದೆಯೋ ಇಲ್ಲವೋ, ಅವಳಿಗೆ ಆಸಕ್ತಿ ಇದೆಯೋ ಇಲ್ಲವೋ, ಅವಳಿಗೆ ಬೇಕೋ ಬೇಡವೋ ಸಮಯಕ್ಕೆ ಸರಿಯಾಗಿ ತಿಂಡಿ, ಊಟ, ಮನೆ ಕೆಲಸ ಆಗುತ್ತಲೇ ಇರಬೇಕು. ಗಾಣದೆತ್ತಿನ ಥರ.
ಒಂದು ಇಪ್ಪತ್ತೈದು ವರ್ಷ ಕಳೆದ ನಂತರ ಅತ್ತೆ ಅಥವಾ ಮಾವ ವಯಸ್ಸಾಗಿದೆ ಎಂದು ಅವರ ಎಲ್ಲಾ ಮಕ್ಕಳ ಮನೆಗೆ ಆಗಾಗ ಹೋಗಿ ಬರುತ್ತಾರೆ ಅಥವಾ ಇರುವುದೇ ಇಲ್ಲ, ಮಕ್ಕಳು ಅವರವರ ಪಾಡು ನೋಡಿಕೊಂಡು ಹೋಗುತ್ತಾರೆ. ಇನ್ನು ಗಂಡನಿಗೆ ಆಗ ಹೆಂಡತಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾಳೆ ಎಂಬ ಅರಿವಾಗಿ ಸ್ವಲ್ಪ ಸಹಾಯಕ್ಕೆ ಬರುತ್ತಾನೆ. ಈಗ ಅವಳಿಗೆ ಸಾಕಷ್ಟು ಅವಳ ಸಮಯ ಇರುತ್ತದೆ. ಏನು ಮಾಡಬೇಕು ಎಂದು ಮರೆತು ಹೋಗುವಷ್ಟು ಆಫೀಸಿನಲ್ಲಿ ಕಟಕಟ ಎಂದು ಟೈಪ್ ರೈಟರ್ ಕುಟ್ಟಿರುತ್ತಾಳೆ, ಮನೆಯಲ್ಲಿ ಸಬೀನಾ ಬಳಸಿರುತ್ತಾಳೆ, ನಿರ್ಮಾ ಬಳಸಿರುತ್ತಾಳೆ. ನಾಲ್ಕು ಜನ್ಮಕ್ಕಾಗುವಷ್ಟು ಬೈಗುಳ ಮತ್ತು ಬುದ್ಧಿಮಾತನ್ನ ಹೇಳುವಷ್ಟು ಜಾಣೆಯಾಗಿರುತ್ತಾಳೆ. ಆದರೆ ತನಗಾಗಿಯೇ ತಾನು ಏನು ಮಾಡಿಕೊಳ್ಳಬೇಕು ಎಂಬುದನ್ನು
ಮರೆತಿರುತ್ತಾಳೆ.
ನಮ್ಮ ಸಮಾಜ ಬಹಳ ಅಚ್ಚುಕಟ್ಟಾಗಿ ಹೆಣ್ಣಿಗೆ ಏನೇನೋ ಜವಾಬ್ದಾರಿ ಹೊರೆಸಿ ಅವಳತನವನ್ನ ಹಂತಹಂತವಾಗಿ ನಾಶ ಮಾಡುತ್ತಾ ಬಂದಿದೆ. ಸ್ವಲ್ಪ ನಿಮ್ಮ ಸುತ್ತ ಮುತ್ತ ನೋಡಿ, ಹೊಸದಾಗಿ ಮದುವೆಯಾದ ದಂಪತಿಗಳನ್ನ ಮನೆಗೆ ಕರೆದಾಗ, ಮೊದಲು ಹಾಸ್ಯವಾಗಿಯೋ ವ್ಯಂಗ್ಯವಾಗಿಯೋ “ಏನು ಅಡುಗೆ ಚೆನ್ನಾಗಿ ಮಾಡಿ ಹಾಕುತ್ತಾಳಾ ನಿನ್ನ ಹೆಂಡತಿ ಹಿ ಹಿ” ಎಂದು ಕೇಳುತ್ತಾರೆ. ಒಂದೇ ಕಾಲೇಜಿನಲ್ಲಿ ಒಂದೇ ಕಂಪೆನಿಯಲ್ಲಿ ಒಟ್ಟೊಟ್ಟಿಗೆ ಓದುತ್ತಾ ಕೆಲಸ ಮಾಡುತ್ತಾ ಪ್ರೀತಿ ಮಾಡುತ್ತಾ ಮದುವೆಯಾದವರಿಗೂ ಸಹ ಕೇಳುವುದು ಅದೇ ಪ್ರಶ್ನೆ. ಹೆಣ್ಣುಮಕ್ಕಳಿಗೆ ಡಿ ಎನ್ ಏ ನಲ್ಲಿಯೇ ಅಡುಗೆ ಜೀನ್ಸ್ ಬಂದಿರುತ್ತೆ ಎಂಬ ಹುಚ್ಚು ಕಲ್ಪನೆಯಲ್ಲಿರುತ್ತಾರೆ. ‘ಹೊಸದಾಗಿ ಹೋದ ಮನೆಯಲ್ಲಿ ಗಲಾಟೆ ಮಾಡಿಕೊಳ್ಳಬೇಡ’ ಎಂದು ಅಮ್ಮ ಹೇಳಿದ್ದಕ್ಕೆ ಅವಳು ಬಲವಂತವಾಗಿ ಅಡುಗೆ ಕಲಿಯುತ್ತಾಳೆ. ಅಲ್ಲಿಗೆ ಊರಿಗೆ ಊರೇ ಬಿದ್ದು ಹೋಗಲಿ, ಭೂಮಿಯೆ ಬಿರಿಯಲಿ, ಗಗನವೇ ನಡುಗಲಿ, ಸಾಗರ ಕೆರಳಲಿ ಅಡುಗೆ ಮನೆ ಅವಳ ಖಾಯಂ ಮನೆಯಾಗುತ್ತದೆ.
ಇನ್ನು ಮನೆ ಕೆಲಸ, ‘ಗೃಹಿಣಿಗೆ ಇರಬೇಕಾದ ಹತ್ತು ಶೋಭಾಯಮಾನವಾದ ಗುಣ ಲಕ್ಷಣಗಳು’ ಎಂಬ ನಗು ತರಿಸುವ ಲೇಖನವನ್ನು ನಾವು ಯಾವುದೇ ಸಮಯದಲ್ಲಿ ಓದಿಯೇ ಇರುತ್ತೇವೆ. ಅದೇ ಪರಮ ಸತ್ಯವೆಂದೂ ಅಂದುಕೊಂಡಿರುತ್ತೇವೆ. ಮನೆಯನ್ನು ಹೋಟೆಲ್ಲಿನ ಹಾಗೆ ಫಳಫಳ ಇಡುವ ಕೆಲಸವನ್ನ ಹೆಣ್ಣು ತನ್ನ ಈಗೋಗೆ ತೆಗೆದುಕೊಳ್ಳುತ್ತಾಳೆ. ಸರಿ ಇನ್ನು ಅದು ಅವಳ ತಲೆಯಲ್ಲೇ ಉಳಿಯುತ್ತದೆ. ಒಟ್ಟಿನಲ್ಲಿ ಜನ್ಮ ಜನ್ಮಕ್ಕಾಗಿವಷ್ಟನ್ನು ತಲೆ ಮೇಲೆ ಎಳೆದುಕೊಂಡು ಅವಳ ಕಸೂತಿ, ಪುಸ್ತಕ ಓದುವುದು, ಅವಳ ಸಂಗೀತ ಇವೆಲ್ಲವನ್ನ ಅಟ್ಟದ ಮೇಲೆ ಕಟ್ಟಿಟ್ಟು ಅದೇ ಅವಳಿಗೆ ಹೊರಿಸಿರುವ ದೊಡ್ಡ ಸಂಪತ್ತೆಂದು ತಲೆ ಮೇಲೆ ಹೊತ್ತು ತಿರುಗುತ್ತಾಳೆ.
ಇಪ್ಪತ್ತು ಮೂವತ್ತು ವರ್ಷ ಹಾಗೆ ಹುಚ್ಚಿನ ಹಾಗೆ ಕೆಲಸ ಮಾಡಿ ಅಷ್ಟು ಬೇಗ ಮರೆತು ಹೋದ ಮಾಯಮಾಳವಗೌಳ ರಾಗ, ತ ರಾ ಸು ಕಾದಂಬರಿ, ಫಿಷರ್ ಮೆನ್ ನಾಟ್ ಎಲ್ಲವೂ ನೆನಪಿಗೆ ಬರುವುದಕ್ಕೆ ಕಷ್ಟ ಪಡುವುದಕ್ಕಿಂತ ತನ್ನ ಕೆಲಸವನ್ನ ಮಗಳಿಗೋ ಸೊಸೆಗೋ ವರ್ಗಾಯಿಸುವುದು ಸುಲಭವೆಂದು ನಂಬುತ್ತಾಳೆ. ಅಲ್ಲಿಗೆ ಪೀಳಿಗೆ ಪೀಳಿಗೆಯ ಹೆಣ್ಣುಮಕ್ಕಳಿಗೆ ಇದೇ ವ್ಯಸನವಾಗಿಬಿಡುತ್ತದೆ.
ಆಗಿನ ಕಾಲದ್ದು ಆಗಿನದ್ದಕ್ಕೆ ಬಿಡೋಣ. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಏನು ಮಾಡಬಹುದು ಎಂಬ ಯೋಚನೆಗೆ ಬರೋಣ. ಮೊದಲು ಹೆಣ್ಣು ಮನೆಯ ಕೆಲಸ, ಅಡುಗೆ ಕೆಲಸ ಹೆಣ್ಣು ಮಕ್ಕಳದ್ದು ಎಂಬ ಜೆಂಡರ್ ಬಯಾಸ್ ಅನ್ನು ಬಿಡಬೇಕು. ಯಾವ ಕೆಲಸವೂ ಮನುಷ್ಯರ ಲಿಂಗ ಆಧಾರಿತ ಅಲ್ಲ. ನನ್ನ ತಾಯಿಯ ತಂದೆ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದರು. ಒಬ್ಬಟ್ಟನ್ನು ಸಹ ಅವರಷ್ಟು ಚೆನ್ನಾಗಿ ಯಾರೂ ಮಾಡಲು ಸಾಧ್ಯವಿರಲ್ಲಿಲ್ಲ, ನನ್ನ ಅಮ್ಮ ಬಹಳ ಚೆನ್ನಾಗಿ ಗಾಡಿ. ಕಾರು ಓಡಿಸುತ್ತಾಳೆ. ಎಷ್ಟೆಂದರೆ ನನ್ನ ಅಪ್ಪನ ಅಪ್ಪ ತನ್ನ ಮಗನಿಗಿಂತ ಸೊಸೆಯ ಚಾಲನೆಯ ಬಗ್ಗೆಯೇ ಕೊಂಡಾಡುತ್ತಿದ್ದರು. ಇದು ಸಣ್ಣ ಉದಾಹರಣೆ. ಮನೆಯಲ್ಲಿ ಇದ್ದಾರೆಂದರೆ ಎಲ್ಲರೂ ಮನೆಯ ಕೆಲಸಕ್ಕೆ ಸಹಕಾರಿಯಾಗಬೇಕು, ಎಲ್ಲರೂ ತಿನ್ನುತ್ತಾರೆಂದರೆ ಎಲ್ಲರೂ ಅಡುಗೆ ಮಾಡಲು ಕಲಿಯಬೇಕು ಮತ್ತು ನಿಮ್ಮ ಸಮಯದಷ್ಟೆ ನಿಮ್ಮ ಅಮ್ಮನ, ಅತ್ತೆಯ, ಅಜ್ಜಿಯ ಸಮಯವೂ ಮೌಲ್ಯ ಎಂದು ಅರಿತುಕೊಳ್ಳಬೇಕು.
ಹೆಣ್ಣುಮಕ್ಕಳೂ ಸಹ ಸಂಜೆ ಐದರಿಂದ ಆರು ನನಗೆ ಸಂಗೀತ ಕ್ಲಾಸ್ ಇದೆಯೋ, ಭಜನೆ ಕ್ಲಾಸ್ ಇದೆಯೋ ಇನ್ನೇನಿದೆಯೋ ಆರಾಮಾಗಿ ಹೋಗಬೇಕು. ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಹೆದರಿಕೆ. ಆದರೀಗ ಪೇರೆಂಟಿಂಗ್ ಅನ್ನೋದು ಶೇರ್ಡ್ ಆಗಿರುವ ಕಾರಣ ಗಂಡನಿಗೂ ಸಹ ಜವಾಬ್ದಾರಿ ವಹಿಸಿ ಹೊರಡಬಹುದು. ಇನ್ನು ತನ್ನ ವ್ಯಕ್ತಿತ್ವವನ್ನು ಯಾವುದೇ ಕಾರಣಕ್ಕೂ ಮರೆಯಬಾರದೆಂಬ ಸತ್ಯವನ್ನು ಅವರು ಅರಿಯಬೇಕು. ನಿಮ್ಮತನ ನಿಮಗೆ ಜಾಗರೂಕವಾಗಿರಲಿ.
ಇವೆಲ್ಲವನ್ನೂ ಬರೆಯುವ ಸಮಯದಲ್ಲಿ ವಸುಂಧರಾ ಅಜ್ಜಿ ಭಾರತದ ಎಲ್ಲಾ ರಾಜ್ಯಗಳನ್ನೂ ನೋಡಿದ್ದೇನೆ ಇನ್ನೊಂದು ರಾಜ್ಯ ಸರಿಯಾಗಿ ನೋಡಿಲ್ಲ, ಇದರ ಮಾಹಿತಿ ಎಲ್ಲಿ ಸಿಗುತ್ತದೆ ಎಂದು ಹುಡುಕುತ್ತಿದ್ದರು! ಪ್ರೇಮಾ ಅಜ್ಜಿ ಶ್ರೀಲಂಕಾದ ಸಿಗಿರಿಯಾ ಅರಮನೆಯ ಬಗ್ಗೆ ನಾನೊಂದಷ್ಟು ಓದಿದೆ ಎಂದು ಫೋನಿನಲ್ಲಿ ಇಪ್ಪತ್ತು ನಿಮಿಷ ಹೇಳಿದರು. ನನ್ನ ಅಜ್ಜಿಯರು ಬದಲಾಗಿದ್ದಾರೆ… ಇನ್ನು ನಿಮಗೆಲ್ಲಾ ಬದಲಾಗುವ ಕ್ಷಣ ಬಂದಿಲ್ಲವಾ?

-ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.