ಮೇಘ ಸಂದೇಶ/ ಅವಳು ಬಹಳ ಜೋರಲ್ವಾ? ಏನಿವಾಗ?- ಮೇಘನಾ ಸುಧೀಂದ್ರ

ಹೆಣ್ಣುಮಕ್ಕಳು ಯಾವತ್ತೂ ದನಿ ಎತ್ತರಿಸಿ ಮಾತನಾಡಬಾರದು, ದಬಾಯಿಸಬಾರದು, ವಾದಿಸಬಾರದು ಎಂದು ಸಾಂಪ್ರದಾಯಿಕ ಸಮಾಜ ನಿರೀಕ್ಷಿಸುತ್ತದೆ. ಈ ನಿರೀಕ್ಷೆ ಜಾಗತಿಕ ವ್ಯಾಪ್ತಿಯ ಕಂಪನಿಗಳು ಸಭೆಗಳಲ್ಲೂ ಇರುತ್ತದೆ ಎನ್ನುವುದು ಗಮನಾರ್ಹ. ಅಲ್ಲೂ ಕೂಡ ಅವಳ ಬಾಯಿ ಮುಚ್ಚಿಸಲಾಗುತ್ತದೆ. ಆದರೆ ಮನೆಯಲ್ಲ ಕಚೇರಿಯಲ್ಲಿ ಹುಡುಗರು ಮಾತ್ರ ಹಾಗೇ ಜೋರು ಮಾಡುತ್ತಾ ಇರಬೇಕು ಎಂಬ ನಿರೀಕ್ಷೆ ಇರುತ್ತದೆ. ಕಾಲ ಬದಲಾಗಿದೆಯೇ ಹೊರತು ಭಾವ ಬದಲಾಗಿಲ್ಲ. ಆದರೆ ಹುಡುಗಿಯರು ಜೋರಾಗಿ ಪ್ರಶ್ನೆಗಳನ್ನು ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ.

ಒಂದು ಆಫೀಸಿನಲ್ಲಿ ಸಂಬಳದ ಹೈಕ್ ವಿಚಾರ ಚರ್ಚೆ ಆಗುತ್ತಿತ್ತು. ಮೀಟಿಂಗಿನಲ್ಲಿ ಹುಡುಗಿಯೊಬ್ಬಳು ಲೆಕ್ಕ ತೆಗೆದು ತೋರಿಸಿ ಇಷ್ಟಿಷ್ಟು ಜಾಸ್ತಿ ಸಂಬಳ ಕೊಡಬೇಕು ಎಂದು ಹೇಳುತ್ತಿದ್ದಳು. “ನೀನೇನು ಪ್ರೈಮರಿ ಅರ್ನಿಂಗ್ ಮೆಂಬರ್ ಅಲ್ಲ” ಎಂದು ಹೇಳಿದರು. ನಂತರ ಅವಳು ಧ್ವನಿ ಎತ್ತರಿಸಿ ಮಾತಾಡಿದ್ದಕ್ಕೆ, “Girls can’t be so loud” ಎಂದು ಹೇಳಿ ಕಳಿಸಿದರು. ಅಂದರೆ ಸಮಾನತೆ, ಸಂಪಾದನೆ ಎಂದೆಲ್ಲಾ ಮಾತಾಡುವ ಬಹುರಾಷ್ಟ್ರೀಯ ಕಂಪೆನಿಯಲ್ಲೂ ಹೆಣ್ಣು ಮಕ್ಕಳು ಜಾಸ್ತಿ ಹೈಕ್ ಕೇಳಬಾರದು, ಜೋರಾಗಿ ಮಾತಾಡಬಾರದು ಮತ್ತು ದಬಾಯಿಸಬಾರದು. ಹಾಗೆ ಮಾಡಿದರೆ ಅವರು ಹೆಣ್ಣೇ ಅಲ್ಲ ಎಂದು ಹೇಳುವವರು ಎಲ್ಲಾ ಕಡೆಯಲ್ಲೂ ಸಿಗುತ್ತಾರೆ.

ಸಾಧಾರಣವಾಗಿ ಮೊದಲ ಬಾರಿಗೆ ಮುಟ್ಟಾದ ನಂತರ ಕೆಲವು ಆಂಟಿಯರೆಲ್ಲ ಬಂದು, “ನೋಡು ಈಗ ನೀನು ಹೆಣ್ಣಾಗಿದ್ದೀಯ, ಸ್ವಲ್ಪ ತಗ್ಗಿ ಬಗ್ಗಿ ಇರಬೇಕು, ಜೋರಾಗಿ ಮಾತಾಡಬಾರದು, ಜೋರಾಗಿ ನಗಬಾರದು, ಸ್ವಲ್ಪ ಲಜ್ಜೆ ಕಲಿ” ಎಂದು ಫ್ರೀ ಅಡ್ವೈಸ್ ಕೊಟ್ಟು ಹೋಗುತ್ತಾರೆ. ಅಂದರೆ ಈಗ ಪರಿಪೂರ್ಣ ಹೆಣ್ಣಾಗಿದ್ದೀಯ ಇನ್ನು ನೀನು ಮೆಲ್ಲಗೆ ಮಾತಾಡಬೇಕು ಎಂದು. ಯಾವುದೇ ಒಂದು ಹೆಣ್ಣಿಗೆ ಧ್ವನಿ ಜೋರಾಗಿದ್ದರೆ, ಅವಳು ಇದ್ದಿದ್ದನ್ನ ಇದ್ದ ಹಾಗೆ ಹೇಳಿದರೆ ಅವಳು ಅವಳ ಮನೆಗೆ ಕಳಂಕ ತರುವವಳು ಎಂದು ಅಂದುಕೊಂಡು ಬಿಡುತ್ತಾರೆ. ಜೋರಾಗಿ ಮಾತಾಡುವ ಹೆಣ್ಣುಮಕ್ಕಳು ಬಹಳ ಒಪೀನಿಯನೇಟಡ್ ಆಗಿರುತ್ತಾರೆ , ಅವರು ಹೇಳಿದ ಮಾತು ಕೇಳಲ್ಲ ಎಂದೆಲ್ಲಾ ಅಂದುಕೊಂಡು ಹುಡುಗಿಯರಿಗೆ ಮುಂದೆ ಮದುವೆಯಾಗಲ್ಲ ಸಂಸಾರ ಸಾಗಿಸೋದಕ್ಕೆ ಸಾಧ್ಯವಿಲ್ಲ ಎಂದೆಲ್ಲಾ ಬಿಟ್ಟಿ ಸಲಹೆ ಕೊಡುತ್ತಾರೆ. ಆದರೆ ಇದನ್ನ ಹೇಳುವವರೂ ಸಹ ಲೌಡ್ ಆಗಿ ಮಾತಾಡುವವರೇ ಆಗಿರುತ್ತಾರೆ.

ಜೋರಾಗಿ ಮಾತಾಡುವವರಿಗೆ ಮಾನ ಮರ್ಯಾದೆ ಇರೋದಿಲ್ಲ ಎಂದೆಲ್ಲಾ ಸುದ್ದಿ ಹಬ್ಬಿಸಿ ಹುಡುಗಿಯರ ಉಸಿರು ತಗ್ಗಿಸುವ ಕೆಲಸ ಮಾಡುತ್ತಿರುತ್ತಾರೆ. ಹೆಣ್ಣುಮಕ್ಕಳ ಧ್ವನಿ ಮನೆಯಿಂದ ಆಚೆ ಯಾರಿಗೂ ಕೇಳಿಸಬಾರದೆಂದೇ ಕೆಲವರು ಹೇಳುತ್ತಾರೆ. ಈ ಕಟ್ಟುಪಾಡುಗಳು ಯಾಕೆ ಬಂದವು ಅಂದರೆ ಅವುಗಳು ಹೆಣ್ಣನ್ನ ಒಬ್ಬರ ಅಡಿಯಾಳಾಗಿ ನೋಡುವ ಪರಿಪಾಠ ಬಂದಾಗಿನಿಂದ. ಆಕೆ ಇನ್ನೊಬ್ಬರ ಮಾತನ್ನ ಕೇಳಬೇಕು, ಕೇಳುಗಳಾಗಿಯೇ ಇರಬೇಕು ಎಂಬ ವಿಚಿತ್ರ ಪೇಟ್ರಿಯಾರ್ಕಲ್ ಯೋಚನೆಯಿಂದ. ಆಕೆ ಮೆಲ್ಲಗೆ ಮಾತಾಡಿದರೆ ಬಹಳ ಒಳ್ಳೆಯ ಹುಡುಗಿ, ಸ್ವಲ್ಪ ರೋಫ್ ಹಾಕಿದರೆ ಕೆಟ್ಟವಳು, ವಿಲನ್ ಎಂದೆಲ್ಲಾ ತೋರಿಸುವ ಸಿನಿಮಾ, ಮನೋರಂಜನೆಯ ಕ್ಷೇತ್ರಗಳು ಸಹ ಈ ಯೋಚನೆಗಳನ್ನ ಬಿತ್ತುವುದರಲ್ಲಿ ಯಶಸ್ವಿಯಾಗಿದೆ.

ಅಲಿಖಿತ ನಿಯಮ

ನಾವು ಹೆಣ್ಣು ಹೀಗಿರಬೇಕು ಹಾಗಿರಬೇಕು ಎಂದು ಮಾತಾಡುವವರು ಗಂಡು ಮಕ್ಕಳು ಜೋರಾಗಿದ್ದಾರೆ ಎಂಬ ಚರ್ಚೆಯನ್ನು ಮಾಡೋದೇ ಇಲ್ಲ. ಯಾಕೆಂದರೆ ಗಂಡು ಜೋರಾಗೇ ಇರಬೇಕು, ಜೋರು ಅನ್ನೋದು ಆತನ ಧ್ವನಿಯಲ್ಲಿ, ಅವನ ಅಗ್ರೆಸಿವ್ ವರ್ತನೆಯಲ್ಲಿ ಮತ್ತು ಜೀವನ ನಡೆಸುವುದರಲ್ಲಿ ಅವನೇ ಮುಂದಾಳತ್ವ ತೆಗೆದುಕೊಳ್ಳಬೇಕು ಎನ್ನುವುದು ಅಲಿಖಿತ ನಿಯಮ. ಅದರ ಜೊತೆ ಹೆಂಡತಿ ಅವನ ಮಾತನ್ನ ಕೇಳಲೇಬೇಕೆಂಬೋದು ಸಹ. ಕೇಳದಿದ್ದರೆ ಮೇಲ್ ಈಗೋ ನ ಹರ್ಟ್ ಮಾಡಿಬಿಟ್ಟೆ' ಎಂದು ದೂರುವ ಸಮಾಜ. ನೀವೇ ಯೋಚನೆ ಮಾಡಿ- ಇವೆಲ್ಲ ಗುಣಗಳು ಹೆಣ್ಣಿಗೆ ಇದ್ದು ಆಕೆಯ ಮಾತನ್ನು ಗಂಡ ಕೇಳಿದ್ದರೆ ನಾವು ಅದೆಷ್ಟು ಸಲೀಸಾಗಿ “ಅಮ್ಮಾವ್ರ ಗಂಡ” ಎಂದು ಕರೆದುಬಿಡುತ್ತಿದ್ದೆವು ಅಲ್ವಾ ? ಯಾಕೆ ಹೇಳಿ `ಅವನ ಹೆಂಡತಿ ಅವನಿಗಿಂತ ಜೋರು ಅವನು ನೋಡು ಪಾಪ ಮಾತೇ ಆಡಲ್ಲ’ ಎಂದು ಬಿರುದು ಕೊಟ್ಟುಬಿಡುತ್ತೇವೆ, ಆದರೆ ಹೆಣ್ಣು ಮಾತಾಡಲ್ಲಿಲ್ಲ ಎಂದರೆ ಅದು ಅವಳ ಸಭ್ಯ ಗುಣದ ಸಂಕೇತ.

ರಾಜಕೀಯದಲ್ಲಾಗಲಿ, ಆಫೀಸಿನಲ್ಲಾಗಲಿ, ಮನೆಯಲ್ಲಾಗಲಿ ಮನೆಯ ದೇವರು ದೇವತೆ ಅದೂ ಇದೂ ಎಂದು ಬೇಕಾಗದಿರುವ ಪಟ್ಟಗಳನ್ನ ಹೆಣ್ಣಿಗೆ ಕಟ್ಟಿ ತನ್ನ ಮನಸ್ಸಿನ ಭಾವನೆಗಳನ್ನ ಅವಳಿಗೆ ಬಂದಹಾಗೆ ಹೊರಗೆ ಹಾಕುವ ಸ್ವಾತಂತ್ರ್ಯವನ್ನು ಸಮಾಜ ಕಿತ್ತುಕೊಳ್ಳಲು ಪ್ರಯತ್ನ ಮಾಡಿದೆ. ಆದರೆ ಹೆಣ್ಣು ತನ್ನ ದನಿಯಿಂದಲೇ ಎದ್ದು ಬಂದಿರುವ ಉದಾಹರಣೆಗಳು ಬಹಳಷ್ಟಿದೆ. ರಾಜಕೀಯ ಚರ್ಚೆಗಳಲ್ಲಿ ಹೆಣ್ಣು ಜೋರಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡಿದರೆ ಅವರನ್ನ ಟ್ರೋಲ್ ಮಾಡೋದು, ಇಲ್ಲದಿದ್ದರೆ ಅವಳ ಧ್ವನಿಯನ್ನೇ ಕಿತ್ತುಕೊಳ್ಳೋದಕ್ಕೆ ಪ್ರಯತ್ನ ಮಾಡೋದು ಒಂದು ಪಾಪ್ಯುಲರ್ ತಂತ್ರ.

ಮಿಷೆಲ್ ಒಬಾಮಾ ತನ್ನ ಪುಸ್ತಕ “Becoming” ನಲ್ಲಿ ತನ್ನ ಧ್ವನಿಯನ್ನು ಯಾರೂ ಅಡಗಿಸೋಕೆ ಸಾಧ್ಯವಾಗಲ್ಲಿಲ್ಲ, ಯಾರೇ ಪ್ರಯತ್ನ ಪಟ್ಟರೂ ಎಂದು ಬರೆದುಕೊಂಡು ಅಮೇರಿಕಾದ ಪ್ರೆಸಿಡೆಂಟಿನ ಹೆಂಡತಿಗಿಂತ ಮಿಷೆಲ್ ಒಬಾಮಾಳ ವ್ಯಕ್ತಿತ್ವವನ್ನ ಎಲ್ಲಾ ಕಡೆ ತೋರಿಸಿದ್ದಾರೆ.

ಬಾಡಿ ಶೇಮಿಂಗ್ ಮಾಡುತ್ತಿರುವ ಕಾಲದಲ್ಲಿ ಲೌಡ್ ಶೇಮಿಂಗನ್ನ ಬಹಳ ಚೆನ್ನಾಗಿಯೇ ಮಾಡುತ್ತಿದ್ದಾರೆ. ಈಗಿನ ಕಾಲದ ಹೆಣ್ಣುಮಕ್ಕಳು ಮಾತಾಡುವ ಸಲುವಾಗಿ ಮಾತಾಡುತ್ತಿಲ್ಲ, ಅಥವಾ ಸುಮ್ಮನೆಯೂ ಇಲ್ಲ. ಮಾತಾಡಬೇಕಾದ ಸಂದರ್ಭದಲ್ಲಿ ದೊಡ್ಡ ಧ್ವನಿಯಲ್ಲಿ ಮಾತಾಡೇ ಆಡುತ್ತಿದ್ದಾರೆ. ಅವಳು ಜೋರಲ್ವಾ ಎಂದು ಕೇಳಿದರೆ ಹೌದು ಅದು ನಾಯ್ಸ್ ಅಲ್ಲ ಮಾತು ಅನ್ನುವಷ್ಟು ಬೆಳೆದಿದ್ದಾಳೆ, ಅದೇ ಖುಷಿ.

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *