ಮೇಘ ಸಂದೇಶ/ ಅವಳು ಏನಾದರೇನು ಅಮ್ಮ ಆಗಿರಬೇಕು! – ಮೇಘನಾ ಸುಧೀಂದ್ರ
ನಾವು ಹೆಣ್ಣನ್ನು ನೋಡುವ ಪರಿ ಎಂಥದ್ದು ಎಂಬ ಪ್ರಶ್ನೆ ಮುಂಚಿನಿಂದಲೂ ಇದೆ. ಹೌದು ಗಂಡು ಮತ್ತು ಹೆಣ್ಣು ಅವರ ಫಿಸಿಯಾಲಜಿ ಬೇರೆ, ಸೈಕಾಲಜಿ ಬೇರೆ, ಹಾಗಂತ ಒಂದು ಹೆಣ್ಣಿನ ಬಗ್ಗೆ ಕಥೆ ಹೇಳುವಾಗ ಅವಳ ಕುಟುಂಬ, ಮಗಳ ದೃಷ್ಟಿಕೋನದಿಂದಲೇ ಹೇಳುವುದು ಬಹಳ ಅಸಮಂಜಸ ಅನ್ನಿಸುತ್ತದೆ. ಆಕೆ ತಾಯಿಯಾಗಿ, ಮಗಳಾಗಿ ಹೇಗಿದ್ದಳು ಎನ್ನುವುದನ್ನೇ ಆಕೆಯ ಸಾಧನೆಯ ಕಿರೀಟ ಎನ್ನುವುದು ನೋಡುವುದು ಖೇದಕರ.
“ನೋಡು ಹೆಣ್ಣು ಏನಾದರೂ ಅಷ್ಟೇ ತಾಯಿಯಾದಾಗಲೇ ಅವಳ ಜನ್ಮ ಸಾರ್ಥಕ” ಎಂದು ಒಂದು 90ರ ದಶಕದ ಕನ್ನಡ ಸಿನಿಮಾದಲ್ಲಿ ಸುಮಾರಾಗಿ ಕೇಳಿ ಬರುತಲ್ಲಿದ್ದ ಡೈಲಾಗ್. ಜಗತ್ತನ್ನೇ ಅವಳು ಗೆದ್ದರೂ ಅವಳು ತಾಯಿಯಾಗಿ , ಮನೆಯಲ್ಲಿ ಗುಂಡು ಚಪಾತಿಯನ್ನ ಲಟ್ಟಿಸುತ್ತಾಳಾ ಎಂಬುದೇ ಹೆಣ್ಣನ್ನ ಅಳೆಯುವ ಮಾಪನ ಸುಮಾರು ಕಡೆಗಳಲ್ಲಿ ಇದೆ. ಒಂದು ಕಾಲದಲ್ಲಿ ಲೆಕ್ಕ ಮಾಡಿ ಜಗತ್ತನ್ನೇ ಗೆದ್ದ ವಿದ್ಯಾವಂತಳಾದರೂ ಸರಿಯೇ ಅವಳನ್ನೂ ಕೊಂಚ ತಾಯಿ ಹೃದಯವನ್ನು ತೋರಿಸುವ ಪ್ರಯತ್ನವನ್ನೇ ಮಾಡುತ್ತಾರೆ. ಹೆಣ್ಣನ್ನ ನಾವು ಕಲ್ಪಿಸಿಕೊಳ್ಳುವ ಜಗತ್ತಿನಲ್ಲಿ ಆಕೆ ಬಹಳ ಸಂಸ್ಕಾರವಂತಳೂ ತುಂಬಾ ಲಜ್ಜೆಯಿರುವವಳೂ ಹಾಗೆ ಹೀಗೆ ಎಂದೆಲ್ಲಾ ಬರೆದು ಒಂದು ಎಕ್ಸ್ ಟ್ರೀಮ್ ಗೆ ತಳ್ಳಿದರೆ ಮತ್ತೊಂದೆಡೆ ಅವಳು ಯಾರಿಗೂ ಕೇರ್ ಮಾಡಲ್ಲ, ಅವಳು ಇರೋದೇ ಹಾಗೆ, ಅವಳಿಷ್ಟ ಎಂದು ಮತ್ತೊಂದು ಎಕ್ಸ್ ಟ್ರೀಮ್ ಗೆ ತಳ್ಳಿ ಒಂದೋ ಅವಳನ್ನ ತಾಯಿ ಮಾಡಿಬಿಡುತ್ತಾರೆ, ಇಲ್ಲಾ ಅವಳನ್ನ ಲಜ್ಜೆಗೆಟ್ಟವಳು ಎಂದು ಹಣೆಪಟ್ಟಿ ಅಂಟಿಸಿ ಸಂತಸ ಪಡುತ್ತಾರೆ.
ಒಬ್ಬ ದೊಡ್ಡ ಗಣಿತದ ಅತ್ಯಂತ ಪ್ರತಿಭಾನ್ವಿತೆಯ ಕಥೆಯನ್ನೂ ಅವಳ ಕುಟುಂಬದ ದೃಷ್ಟಿಕೋನದಿಂದ ಹೇಳುವುದು ಆ ಪ್ರೊಟಾಗನಿಸ್ಟ್ ಹೆಣ್ಣಾದಾಗಲೇ. ಅಂದರೆ ಅವಳ ಜೀವನದ ಎಲ್ಲಾ ಸ್ತರಗಳನ್ನ ತೋರಿಸಬೇಕು. ಅವಳಿಗೆ ಪ್ರೇಮವಾದಾಗ, ಅವಳಿಗೆ ಮದುವೆಯಾದಾಗ, ಮಕ್ಕಳಾದಾಗ, ಮಕ್ಕಳ ಜೊತೆ ಮಾನಸಿಕ ಸಂಘರ್ಷ, ಆಮೇಲೆ ಅಮ್ಮ ಮಗಳು ತೀರಾ ಕೃತಕವಾಗಿ ಒಂದಾಗೋದು, ಕಡೆಗೆ ಅವಳು ಎಂಥ ಪ್ರತಿಭಾನ್ವಿತೆ ಆದರೂ ಒಳ್ಳೆ ಅಮ್ಮ ಆಗಿಬಿಟ್ಟಳು ಎಂಬಲ್ಲಿಗೆ ಈ ಕಥೆ ಮುಕ್ತಾಯ.
ನಾವು ಹೆಣ್ಣನ್ನು ನೋಡುವ ಪರಿ ಎಂಥದ್ದು ಎಂಬ ಪ್ರಶ್ನೆ ಮುಂಚಿನಿಂದಲೂ ಇದೆ. ಶಾಲೆಯಲ್ಲಿ ಒಂದೆರಡು ಮಾರ್ಕಿಗೆ ಹೊಡೆದಾಡುವಾಗಲೇ ಕೆಲವು ಗಂಡು ಟೀಚರುಗಳು ಸುಮ್ಮನೆ ಒಂದು ಕಾಮೆಂಟ್ ಮಾಡುತ್ತಿದ್ದರು, “ಯಾಕೆ ಇಷ್ಟೆಲ್ಲಾ ಹೊಡೆದಾಡುತ್ತೀರಾ, ಮುಂದೆ ನಿಮ್ಮ ಜಾಗ ಅಡುಗೆ ಮನೆಯಲ್ಲಲ್ಲವೇ?” ಎಂದು. “ಅಯ್ಯೋ ಎರಡು ಹೆಣ್ಣುಮಕ್ಕಳಿರುವ ಮನೆಯನ್ನು ಯಾಕೆ ಇಷ್ಟು ದೊಡ್ಡದಾಗಿ ಕಟ್ಟುತ್ತಿದ್ದೀರಾ , ಅವರು ಹೇಗಿದ್ದರೂ ಮನೆ ಬಿಟ್ಟು ಹೋಗುತ್ತಾರೆ, ಅವರಿಗ್ಯಾಕೆ ಮಾಸ್ಟರ್ಸ್ ಓದಿಸುತ್ತೀರಾ, ಮದುವೆಗೆ ಖರ್ಚು ಮಾಡಬೇಡವೇ?” ಎಂದು ಬಹಳ ಹಗುರವಾಗಿ ಮಾತಾಡುವ ಹೊತ್ತಲ್ಲಿ ಕೆಲವು ಮಹಿಳಾ ಸಾಧಕಿಯರನ್ನು ತೋರಿಸುವ ಸಿನಿಮಾಗಳು ಕೆಲವೊಮ್ಮೆ ಕ್ಲೀಷೆಯಾಗಿಯೇ ಮಾಡಿಬಿಡುತ್ತಾರೆ.
ಹೆಣ್ಣುಮಕ್ಕಳು ಯಾವಾಗಲೂ ಡೊಮೆಸ್ಟಿಕೇಟೆಡ್ ಆಗಿರಲ್ಲ ಎಂದು ತೋರಿಸುವ ಒಂದು ಉಮೇದಿನಲ್ಲಿ ಅವಳನ್ನ ಒಂದು ಸೆಲ್ಫ್ ಸೆಂಟರ್ಡ್ ಮನುಷ್ಯಳನ್ನಾಗಿ ತೋರಿಸುವ ಹುನ್ನಾರ ನಡೆಯುತ್ತದೆ. ಒಂದು ಗಂಡು ಇಷ್ಟೇ ಯಶಸ್ವಿಯಾಗಿದ್ದಾರೆ ಅವನ ಪ್ರೇಮ ಸಲ್ಲಾಪ, ಅವನ ಮದುವೆ, ಮನೆ ಮಕ್ಕಳು, ನೀನು ಒಳ್ಳೆ ತಂದೆ ಆಗಲ್ಲಿಲ್ಲ ಎಂಬೆಲ್ಲ ವಿಷಯಗಳು ಬಹಳ ಸಣ್ಣದು. ನಾಲ್ಕು ಸೀನುಗಳಲ್ಲಿ ಬರಬಹುದು ಅದರ ಹೊರತಾಗಿ ಅದೇ ಅವನ ಕಲ್ಯಾಣ ಗುಣ ಎಂದು ಹೊಗಳುವ ಹುಚ್ಚಿಗೆ ಹೋಗೋಲ್ಲ. ಹೌದು ಗಂಡು ಮತ್ತು ಹೆಣ್ಣು ಅವರ ಫಿಸಿಯಾಲಜಿ ಬೇರೆ, ಸೈಕಾಲಜಿ ಬೇರೆ ಹಾಗಂತ ಒಂದು ಹೆಣ್ಣಿನ ಬಗ್ಗೆ ಕಥೆ ಮಾಡಿಕೊಳ್ಳುವಾಗ ಅವಳ ಕುಟುಂಬ, ಮಗಳ ದೃಷ್ಟಿಕೋನದಿಂದಲೇ ಮಾಡುವುದು ಬಹಳ ಅಸಮಂಜಸ ಅನ್ನಿಸುತ್ತದೆ.
ಸೀರೆ ಉಟ್ಟು ಎರಡು ಜಡೆ ಹಾಕಿಕೊಂಡು ನಮ್ಮ ದೇಶವಲ್ಲದ ದೇಶಕ್ಕೆ ಹೋಗಿ ರಾಯಲ್ ಮ್ಯಾಥಮ್ಯಾಟಿಕ್ಸ್ ಸೊಸೈಟಿಗೆ ಹೋಗಬೇಕಾದರೆ ಅದಕ್ಕೆ ಪಡುವ ಕಷ್ಟಗಳು , ಅಲ್ಲಿ ಅವಳ ಮುಖಚರ್ಯೆ ನೋಡಿಯೇ ಜಡ್ಜ್ ಮಾಡುವ ಗಂಡಸರು, ಮ್ಯಾಥ್ಸ್ ಎನ್ನುವ ಫೀಲ್ಡಿನಲ್ಲಿ ಒಂದೋ ಎರಡು ಹೆಣ್ಣು ಮಕ್ಕಳು ಇರುವಾಗ ಹೋರಾಟ ಇರೋದು ಅಲ್ಲಿ, ಒಳಗಡೆ ಬಿಡುವುದಕ್ಕೆ ಅದೆಷ್ಟು ತಕರಾರು ಮಾಡಿರುತ್ತಾರೆ, ಇನ್ನು ಭಾರತದಂತಹ ದೇಶದಿಂದ ಒಂದು ಹೆಣ್ಣುಮಗಳು ಹೀಗೆ ಗಣಿತವನ್ನು ನೀರು ಕುಡಿದಂತೆ ಕುಡಿಯುತ್ತಾಳೆ ಎಂದರೆ ವರ್ಷಾನುಗಟ್ಟಲೆ ಅದರ ಮೇಲೆ ಪಿಎಚ್ ಡಿ, ಪೋಸ್ಟ್ ಡಾಕ್ಟೊರಲ್ ಮಾಡುತ್ತಲೇ ಇರುವವರು ಅಚ್ಚರಿ ಪಡಬೇಕು ಇಲ್ಲಾ ಅವಳನ್ನ ಅವಮಾನಿಸಬೇಕು ಇಲ್ಲಾ ಶ್ಲಾಘಿಸಬೇಕು ಅವೆಲ್ಲವೂ ಜಾಸ್ತಿ ಶೋಕೇಸ್ ಆಗಬೇಕೆ ಹೊರತು ಟಿವಿ ಧಾರಾವಾಹಿಯಲ್ಲಿ ತೋರಿಸುವ ಅದೇ ಅದೇ ಅಮ್ಮ ಮಗಳ ಗೋಳಿನ ಸಂಭಾಷಣೆಯನ್ನಲ್ಲ.
“ಆಯ್ತು ಹೀಗೆಲ್ಲಾ ತೋರಿಸಿದರೆ ಏನಾಯ್ತು, ಅದು ಅವರ ಪರ್ಸೆಪ್ಷನ್” ಎಂದು ಬಿಟ್ಟುಬಿಡಬಹುದು, ಆದರೆ ಭಾರತದಂತಹ ದೇಶದಲ್ಲಿ ಒಂದು ಹೆಣ್ಣು ಸಾಧನೆ ಮಾಡಬೇಕಾದರೆ ಆಕೆಗೆ ಎದುರಾಗುವ ಸಂಕಷ್ಟಗಳು ಬಹಳ. ಹೆಣ್ಣುಮಕ್ಕಳಲ್ಲಿ ಇರುವ ಕೆಟ್ಟ ಗುಣಗಳನ್ನ ಯಾವುದೇ ಮುಲಾಜಿಲ್ಲದೆ ತೋರಿಸಲಿ. ಆದರೆ ಭಾರತದಲ್ಲಿ ಹೆಣ್ಣುಮಕ್ಕಳನ್ನ ಜೀವನವನ್ನ ಕ್ರಾನಿಕಲ್ ಮಾಡುವುದೇ ಬಹಳ ಕಡಿಮೆ. ಅದರಲ್ಲೂ ಹೀಗೆ “ಅಮ್ಮನ ಮುಖವಾಡದಿಂದ” ತೋರಿಸಿದರೆ ಒಂದು ಹೆಣ್ಣಿನ ಕಥೆಯನ್ನು ಆಕೆ ಎಷ್ಟು ಒಳ್ಳೆಯ ಮಗಳು, ಎಷ್ಟು ಒಳ್ಳೆಯ ತಾಯಿ, ಎಷ್ಟು ಒಳ್ಳೆಯ ಅಕ್ಕ ಎಂದೇ ಗೂಟ ಹಾಕಿಕೊಂಡು ಕೂರುವ ಹಾಗಾಗುತ್ತದೆ.
ಒಂದು ರಿಸರ್ಚ್ ಲ್ಯಾಬಿಗೆ ಹೆಣ್ಣುಮಕ್ಕಳು ಈಗಲೂ ಕಾಲಿಡುವುದು ಒಂದು ಹುಬ್ಬೇರಿಸುವ ಸಂಗತಿಯೇ, ಆ ಕಥೆಗಳು ನಮಗೆ ಬೇಕು, ಅವಳು ಮಾಡುವ ತಯಾರಿ, ಅವಳನ್ನ ಮಾನಸಿಕವಾಗಿ ಕೊಂದು ಹಾಕಲು ಮಾಡುವ ಹುನ್ನಾರವನ್ನ ತಡೆಯುವ ಶಕ್ತಿ ಇವೆಲ್ಲವನ್ನು ನಾವು ನೋಡಬೇಕೆ ಹೊರತು ಆಕೆ ತಾಯಿಯಾಗಿ, ಮಗಳಾಗಿ ಹೇಗಿದ್ದಳು ಎನ್ನುವುದನ್ನೇ ಆಕೆಯ ಸಾಧನೆಯ ಕಿರೀಟ ಎನ್ನುವುದು ನೋಡುವುದು ಖೇದಕರ. ಆ ವಿಷಯಗಳು ಅವಳ ಸಾಧನೆಯ ಹಾದಿಯಲ್ಲಿ ನಗಣ್ಯ ಅಥವಾ ತೀರಾ ಅಮುಖ್ಯ.

ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.