ಮೇಘ ಸಂದೇಶ/ ಅಲ್ಲಿ ಹೊಗಳಿಕೆ, ಇಲ್ಲಿ ಮೂದಲಿಕೆ : ಮೇಘನಾ ಸುಧೀಂದ್ರ

ಹೆಣ್ಣುಮಕ್ಕಳಿಗೆ ಮಲ್ಟಿ ಟಾಸ್ಕಿಂಗ್ ಸುಲಭ ಎಂದು ಅಟ್ಟಕೇರಿಸಿ ಏರಿಸಿ ಅವರು ಎಲ್ಲಾ ಕೆಲಸ ಮಾಡುವ ಹಾಗೆ ಮಾಡಿ ನಂತರ, `ಎಲ್ಲಾ ಮೈಮೇಲೆ ಎಳೆದುಕೊಂಡು ಮಾಡುವ ಅವಳನ್ನ ಹೇಗೆ ಒಳ್ಳೆ ಮ್ಯಾನೇಜರ್ ಅನ್ನೋದಕ್ಕಾಗತ್ತೆ ‘ ಎಂಬ ಮೂದಲಿಕೆ! ಹೆಣ್ಣುಮಕ್ಕಳಿಗೆ ನಾನು ಇವೆಲ್ಲವನ್ನು ತಲೆ ಮೇಲೆ ಹೊತ್ತಿಕೊಂಡು ಮಾಡದಿದ್ದರೆ ನನಗೆ ಗೌರವ ಆದರಗಳು ಕಡಿಮೆಯಾಗುತ್ತದೆ ಎಂಬ ಭಯ ಮತ್ತು ಅಂಜಿಕೆ.

ಒಂದು ಕಛೇರಿಯಲ್ಲಿ ದೊಡ್ಡ ದೊಡ್ಡ ಮ್ಯಾನೇಜರುಗಳಿಗೆ ಹೇಗೆ ಒಳ್ಳೆ ಮ್ಯಾನೇಜರ್ಸ್ ಆಗೋದು ಎಂಬ ಕಾರ್ಯಾಗಾರ ಏರ್ಪಟ್ಟಿತ್ತು. ಅದರಲ್ಲಿ ಟ್ರೈನರ್ ಉದಾಹರಣೆ ಕೊಡುವಾಗ “ಹೋಂ ಮೇಕರ್ಸ್ ಹಾಗೆ ನೀವೂ ಮಲ್ಟಿ ಟಾಸ್ಕ್ ಮಾಡಬೇಕು ಮತ್ತು ಅವರ ಹಾಗೆ ಕೆಲಸವನ್ನು ಮ್ಯಾನೇಜ್ ಮಾಡಬಾರದು” ಎಂದು ಹೇಳಿ ಸುಮ್ಮನಾದರು. ನನ್ನ ಆಂತರ್ಯದಲ್ಲಿ ಇದ್ದ ಫೆಮಿನಿಸ್ಟ್ ಅದನ್ನ ಒಪ್ಪಿಕೊಳ್ಳಲ್ಲಿಲ್ಲ. “ಅದು ಹೇಗೆ ಹೀಗೆಲ್ಲಾ ಹೇಳುತ್ತೀರಾ, ಹೆಣ್ಣುಮಕ್ಕಳಿಗೆ ನೀವು ಮಾಡುತ್ತಿರುವ ಅವಮಾನ” ಎಂದು ನನ್ನ ಪ್ರತಿಭಟನೆಯನ್ನ ದಾಖಲಿಸಿದ ನಂತರ, ಅವರು ಮಲ್ಟಿ ಟಾಸ್ಕ್ ಮಾಡುವಾಗ ಹೆಣ್ಣುಮಕ್ಕಳನ್ನ ಹೊಗಳಿದ್ದನ್ನು ನೆನಪಿಸಿ , ಮತ್ತೊಬ್ಬ ಹುಡುಗಿಯನ್ನ ಎಬ್ಬಿಸಿ, ಪ್ರಶ್ನೆಗಳನ್ನ ಉತ್ತರಿಸಲು ಹೇಳಿದರು. “ತರಕಾರಿ ತರೋದು ಯಾರು?”, “ಹಾಲು ತರೋದು ಯಾರು”, “ಗಿಡಕ್ಕೆ ನೀರು ಹಾಕೋದು ಯಾರು?”, “ಕೆಲಸದವಳಿಗೆ ಕೆಲಸ ಮಾಡಿಸೋದು ಯಾರು?”, “ಚಪಾತಿ ಹಿಟ್ಟು ಕಲಿಸೋದು ಯಾರು?”, “ಲೈಟ್ ಬಿಲ್ಲ್ ಕಟ್ಟೋದು ಯಾರು”? ಹೀಗೆ ಒಂದು ಐವತ್ತು ಪ್ರಶ್ನೆಗಳನ್ನು ಆ ಟ್ರೈನರ್ ಕೇಳಿದ. ಎಲ್ಲದಕ್ಕೂ ಆ ಹುಡುಗಿ ಹೇಳಿದ ಒಂದೇ ಹೆಸರು, “ಅಮ್ಮ” ಎಂದು.

ಅಂದರೆ ಆಕೆ ಕೆಲಸಕ್ಕೆ ಹೋಗೋದಿಲ್ಲ ಎಂಬ ಕಾರಣಕ್ಕೆ ಇಷ್ಟೂ ಕೆಲಸಗಳನ್ನ ಅವಳ ತಲೆ ಮೇಲೆ ಎತ್ತಾಕಿ ಅಥವಾ ಅವಳೇ ಕೆಲಸಕ್ಕೆ ಹೋಗೋದಿಲ್ಲ ಎಂಬ ಗಿಲ್ಟಿನಿಂದ “ಆಫೀಸಿಗೆ ಹೋಗೋದು ಅಪ್ಪ, ಮಕ್ಕಳ ಕೆಲಸ ಮಿಕ್ಕಿದ್ದೆಲ್ಲಾ ಕೆಲಸಗಳೂ ನನ್ನದೇ” ಎಂದು ಮೈಮೇಲೆ ಎಳೆದುಕೊಂಡು ಮಾಡುವ ಅವಳನ್ನ ಹೇಗೆ ಒಳ್ಳೆ ಮ್ಯಾನೇಜರ್ ಅನ್ನೋದಕ್ಕಾಗತ್ತೆ ಎಂದು ಹೇಳಿದರು. ಸೈಂಟ್ರಲೈಝ್ಡ್ ಆಗಿ ಕೆಲಸ ಮಾಡುತ್ತಿದ್ದರೆ ಯಾವ ಕೆಲಸವೂ ಎಫೀಷಿಯೆಂಟಾಗಿ ಆಗೋದಿಲ್ಲ ಎಂದು ಟ್ರೈನರ್ ಹೇಳಿ ನಕ್ಕುಬಿಟ್ಟರು.

ಇದನ್ನೇ ನಾನೂ ಯೋಚನೆ ಮಾಡಿಕೊಂಡು ಬಂದೆ. ಇಲ್ಲಿ ಹೆಣ್ಣುಮಕ್ಕಳಿಗೆ ಮಲ್ಟಿ ಟಾಸ್ಕಿಂಗ್ ಸುಲಭ ಎಂದು ಅಟ್ಟಕೇರಿಸಿ ಏರಿಸಿ ಅವರನ್ನ ಎಲ್ಲಾ ಕೆಲಸ ಮಾಡುವ ಹಾಗೆ ಮಾಡಿ ನಂತರ ಅದೇನು ನಿನ್ನ ಗೋಳು ಮನೆಗೆ ಬಂದ ತಕ್ಷಣ ಎಂದು ಬೈಸಿಕೊಳ್ಳುವ ಹೆಣ್ಣುಮಕ್ಕಳಾಗಿ ಯಾಕಿದ್ದೇವೆ ಎಂದು ಯೋಚನೆ ಬಂತು.

ಮುಂಚಿನ ಕಾಲದಿಂದ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳು ಮನೆಮಟ್ಟಿಗೆ ಕೆಲಸ ಮಾಡಿಕೊಂಡು ಖುಷಿಯಾಗಿ ಇದ್ದರು (ಅಥವಾ ಹಾಗೆ ಭಾವಿಸಿಕೊಂಡೆವೇನೋ ಗೊತ್ತಿಲ್ಲ). ಗಂಡಸರು ಮನೆಯ ಆಚೆಗಿನ ಕೆಲಸ ಮಾಡುತ್ತಿದ್ದರು. ಒಟ್ಟಿನಲ್ಲಿ ಕೆಲಸ ಇಬ್ಬರಿಗೂ ಸಮಪಾಲಿತ್ತು. ಈಗ ಕಾಲ ಬದಲಾಗಿ ಇಬ್ಬರೂ ಹೊರಗೆ ಹೋದರೂ ಒಳಗೆ ಕೆಲಸ ಮಾಡುವವರು ಒಬ್ಬರೇ ಆಗಿದ್ದಾರೆ. ಅಥವಾ ಮನೆಯಲ್ಲೇ ಇರುತ್ತಾರೆ ಎಂದರೆ ಎಲ್ಲಾ ಕಾರ್ಯಗಳೂ ಯಾಕೆ ಒಬ್ಬರೇ ಮಾಡಬೇಕು ಎಂಬ ಪ್ರಶ್ನೆಗೆ ಸಿಗುವ ಉತ್ತರ ಇನ್ ಸೆಕ್ಯೂರಿಟಿ.

ಅಂದರೆ ನಾನು ಇವೆಲ್ಲವನ್ನು ತಲೆ ಮೇಲೆ ಹೊತ್ತಿಕೊಂಡು ಮಾಡದಿದ್ದರೆ ನನಗೆ ಗೌರವ ಆದರಗಳು ಕಡಿಮೆಯಾಗುತ್ತದೆ ಎಂಬ ಭಯ ಮತ್ತು ಅಂಜಿಕೆ. ಒಂದು ಮನೆಯಲ್ಲಿ ಬೇಕಾದರೆ ನೋಡಿ ಹೊಸದಾಗಿ ಸೊಸೆ ಬಂದರೆ ಸೊಸೆ ಕಾಫಿ ಮಾಡಬೇಕು ಆದರೆ ಕೊಡುವ ಕೆಲಸ ಮಾತ್ರ ಅತ್ತೆಯದು. ಅಂದರೆ ತಾನು ಕಾಫಿ ಕೊಟ್ಟೂ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದೇನೆ, ಮಗನಿಗೆ ನನ್ನ ಇರುವಿಕೆಯನ್ನು ಇನ್ನೂ ಭದ್ರಪಡಿಸಿಕೊಂಡಿದ್ದೇನೆ ಎಂದು ಅರ್ಥ. ಇಲ್ಲಿ ಇಬ್ಬರು ಹೆಣ್ಣುಮಕ್ಕಳೂ ಕೆಲಸಕ್ಕೆ ಹೋಗದಿದ್ದಾಗ ಅವರು ಇಷ್ಟೆಲ್ಲಾ ಕೆಲಸ ಮಾಡುವ ಪರಿಪಾಟಲಿಗೆ ಬೀಳುತ್ತಾರೆ.

ಒಳ್ಳೆ ಮ್ಯಾನೇಜರ್ ಆದವರು ಬುದ್ಧಿವಂತಿಕೆಯಿಂದ ಎಲ್ಲರ ಹತ್ತಿರ ಎಫೀಷಿಯೆಂಟಾಗಿ ಕೆಲಸ ಮಾಡಿಸುವವರು. ಎಲ್ಲರ ತಲೆ ಮೇಲೆ ಸಿಕ್ಕಾಪಟ್ಟೆ ಕೆಲಸ ಹಾಕದೇ ಇರದವರು. ಈಗ ಮನೆಯ ಬಿಲ್ಲುಗಳನ್ನು online ನಲ್ಲಿ ನೀನು ಕಟ್ಟು ಎಂದು ಒಬ್ಬ ಮಗಳಿಗೆ, ಹಾಲು ಆಫೀಸಿನಿಂದ ಬರುವಾಗ ತೆಗೆದುಕೊಂಡು ಬಾ ಎಂದು ಇನ್ನೊಬ್ಬ ಮಗಳಿಗೆ, ಗಂಡನಿಗೆ ಒಮ್ಮೆ ಬಟ್ಟೆ ತೆಗೆಯಿರಿ ಎಂದು ಹೇಳಿ ಆಗಾಗ ಅಭ್ಯಾಸ ಮಾಡಿಸಿದರೆ ತನಗೆ ಬೇಕಾಗುವ ಕೆಲಸ ಮಾಡೋದಕ್ಕೆ ಸಮಯವಾಗುತ್ತದೆ. ಅದನ್ನ ಬಿಟ್ಟು ನಾನು ಮನೆಯಲ್ಲಿರುತ್ತೇನೆ ಅವರೆಲ್ಲಾ ಆಫೀಸಿಗೆ ಹೋಗುತ್ತಾರೆ ಎಂದು ತಾನೇ ಗಿಲ್ಟ್ ಪಟ್ಟುಕೊಂಡು ಕೆಲಸ ಮಾಡದೇ ಒಂದಷ್ಟು ಬೇರೆಯವರಿಗೂ ವಹಿಸಿ Decentralise ಮಾಡಿದರೆ ಮಾತ್ರ ಎಲ್ಲರ ಕೆಲಸ ಹಗುರ ಮತ್ತು ಜವಾಬ್ದಾರಿ ಕಡಿಮೆಯಾಗುತ್ತದೆ.

ಯಾರೇ ಆಗಲಿ ಮನೆ ಎಂದ ಮೇಲೆ ಒಂದು ಕೆಲಸ ಮಾಡಬೇಕು, ಅದು ಅವರ ಜವಾಬ್ದಾರಿಯಾಗಿರಬೇಕು, ಯಾವುದೇ ಕಾರಣಕ್ಕೂ ಅದು ಒಬ್ಬರ ತಲೆ ಮೇಲಿರುವ ಭಾರವಾಗಬಾರದು. ಹೆಣ್ಣು ಮಕ್ಕಳು ಮಲ್ಟಿ ಟಾಸ್ಕ್ ಮಾಡುತ್ತಾರೆ ಸರಿ ಆದರೆ ಅವರು ಮಾಡುತ್ತಾರೆ ಬಿಡಿ ಎಂದು ಮಗಮ್ಮಾಗಿ ಬೇರೆಯವರು ಕೂರೋದು ಬಹಳ ತಪ್ಪು. ಮಕ್ಕಳಿಗೆ ಗೊತ್ತಾಗಲ್ಲ, ಮಾಡೋದಕ್ಕೆ ಬರಲ್ಲ, ಗಂಡು ಮಕ್ಕಳು, ಹೆಣ್ಣು ಮಕ್ಕಳು ಎಂದು ಸಬೂಬು ಹೇಳಿಕೊಂಡು ಕೂತರೆ ಕಡೆಗೆ ಮನೆ ಕೆಲಸಕ್ಕೆ ಮಾತ್ರ ಇವರಿದ್ದಾರೆ ಎಂಬ ಮರ್ಯಾದೆ ಬರುತ್ತದಷ್ಟೆ. ಅದು ಒಳ್ಳೆ ಮ್ಯಾನೇಜರ್ ಲಕ್ಷಣ ಅಲ್ಲ.

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *