ಮೇಘ ಸಂದೇಶ / ಅತ್ಯಾಚಾರ ಎಂಬ ಲೋಕದ ಅಸಹ್ಯ- ಮೇಘನಾ ಸುಧೀಂದ್ರ

ಈ ಸಮಾಜದಲ್ಲಿ ಹೆಣ್ಣು ಆಗಸಕ್ಕೆ ಹಾರಿದರೂ ಅವಳ ಅಡುಗೆ ಮತ್ತು ಶೀಲದ ಮೇಲೆ ಅವಳ ಹೆಣ್ಣುತನವನ್ನ ಅಳೆಯುವುದರಿಂದ ಬಲವಂತವಾಗಿ ಅವಳ ಸಮ್ಮತಿಯಿಲ್ಲದೆ ಅವಳ ಮೇಲೆ ತಮ್ಮ ಕಾಮುಕತನ ತೋರ್ಪಡಿಸುವುದು ಗಂಡಸ್ತನ ಎಂದು ಬಹಳ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಪ್ರತಿ 16 ನಿಮಿಷಕ್ಕೆ ಒಂದು ಅತ್ಯಾಚಾರದ ಪ್ರಕರಣ ಬೆಳಕಿಗೆ ಬರುತ್ತದೆ ಎಂಬುದು ಬಹಳ ಭಯಪಡಬೇಕಾದ ವಿಚಾರ. ಅತ್ಯಾಚಾರ ಆದಾಗ ಆದವಳದ್ದು ಏನೂ ತಪ್ಪಿರುವುದಿಲ್ಲ, ಅವಳು ಗಿಲ್ಟಿ ಅಲ್ಲ. ಆದರೆ ಬದಲಾಗಬೇಕಾಗಿರೋದು ಸಮಾಜ, ನ್ಯಾಯಾಂಗ, ಮನಸ್ಥಿತಿ.

ಒಂದು ಸಿನಿಮಾ ನೋಡುತ್ತಿರುತ್ತೀರಿ, ಅದರಲ್ಲಿ ಒಂದು ಹೀರೋಯಿನ್ ಅಥವಾ ಬಹಳ ಕೊಬ್ಬಿರುವ (ಸಿನಿಮಾ ಭಾಷೆಯಲ್ಲಿ ) ಹೆಣ್ಣು ಮೆರೆಯುತ್ತಿದ್ದರೆ, ವಿಲನ್ ಹೇಳುತ್ತಾನೆ `ಇವಳಿಗೆ ನೀರಿಳಿಸುವ ದಾರಿ ನನಗೆ ಗೊತ್ತು, ಅಹಹಹ’ ಎಂದು . ಸೀನ್ ಕಟ್ ಮಾಡಿದರೆ ಒಂದು ಹೆಣ್ಣಿನ ಹರಿದ ಬ್ಲೌಸು, ಅಥವಾ ಚೂಡಿದಾರ, ಅವಳ ಹಣೆಯ ಕುಂಕುಮ ಅರ್ಧ ಅಳಿಸಿರುತ್ತದೆ, ಮೈ ಮೇಲೆ ಉಗುರಿನ ಮಾರ್ಕುಗಳು, ಮತ್ತು ಆಕೆ ಜೋರಾಗಿ ಕಿರುಚಿ ಕೂಗುವ ವೇದನೆಯ ಧ್ವನಿ. ಇದು ಪ್ರಾಯಶಃ ಈಗಿನ ಆಗಿನ ಮಕ್ಕಳಿಗೆ ಸಿನಿಮಾದಲ್ಲಿ ಅತ್ಯಾಚಾರ ಎಂಬ ಅಸಹ್ಯ ವಿಷಯಕ್ಕೆ ಸಿಗುತ್ತಿದ್ದ ಮುನ್ನುಡಿ. ಒಂದು ಹೆಣ್ಣು ಸೆಟೆದು ನಿಂತರೆ, ಬಹಳ ಪವರ್ಫುಲ್ ಆಗಿ ಬೆಳೆದರೆ ಆಕೆಯನ್ನ ಮಟ್ಟ ಹಾಕಲು ಬುದ್ಧಿವಂತಿಕೆ ಬೇಡ, ಅಥವಾ ಶಕ್ತಿಯೂ ಬೇಡ, ಆಕೆಯನ್ನು ಅತ್ಯಾಚಾರ ಮಾಡಿದರೆ ಮುಗಿಯಿತು, ಅಲ್ಲಿಗೆ ಅವರ ಸೇಡು ಸಮಾಪ್ತಿಯಾಯಿತು.

ಈ ಅತ್ಯಾಚಾರಗಳು ಯಾವುದೇ ಕಾರಣಕ್ಕೂ ಲೈಂಗಿಕತೆಗೆ ಸಂಬಂಧ ಪಟ್ಟಿದ್ದಲ್ಲ, ಅಥವಾ ಘನತೆವೆತ್ತ ಮಾಜಿ ನ್ಯಾಯಮೂರ್ತಿಗಳು ಹೇಳಿದ ಹಾಗೆ ನಿರುದ್ಯೋಗಿಗಳು ಮತ್ತು ಗಂಡಸರ ನ್ಯಾಚುರಲ್ ಅರ್ಜ್ ಸೆಕ್ಸಿಗಂತೂ ಸಂಬಂಧ ಪಟ್ಟಿದ್ದೇ ಅಲ್ಲ, ಅದು ಹೆಣ್ಣನ್ನ ತನ್ನ ತೆಕ್ಕೆಗೆ , ತನ್ನ ಅಧೀನಕ್ಕೆ ಪಡೆದುಕೊಳ್ಳುವ ಒಂದು ವಿಧಾನ. ಮುಂಚೆ ಅತ್ಯಾಚಾರ ಮಾಡಿ ಹೆಣ್ಣನ್ನೇ ದೂರುತ್ತಾ ನ್ಯಾಯಾಂಗ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಹೇಗೋ ಓಡಾಡಿಕೊಂಡು ಇದ್ದವರು ಈಗ ತಡವಾಗಿ ಆದರೂ ನ್ಯಾಯಾಂಗದಿಂದ (ಬಹುತೇಕ) ಶಿಕ್ಷೆ ಅಥವಾ ಗುಂಡೇಟಿನ ನ್ಯಾಯವಾಗುತಿರುವ ಹಿನ್ನೆಲೆಯಲ್ಲಿ ಈಗ ಅತ್ಯಾಚಾರ ಮಾಡಿ ಹೆಣ್ಣುಮಕ್ಕಳನ್ನ ಬರ್ಬರವಾಗಿ ಕೊಂದು ಹೆಣ್ಣನ್ನು ಒಂದು ವಸ್ತುವಿಗಿಂತ ಕಡೆಯಾಗಿ ನೋಡುವ ಪರಿಪಾಠ ಬೆಳೆದು ಬಂದಿದೆ.

ಒಂದು ಕುಟುಂಬದ ಮಾನ ಮರ್ಯಾದೆಯನ್ನ, ಹೆಣ್ಣಿನ ಆತ್ಮ ಗೌರವವನ್ನ ನಾವು ಅವಳ ಯೋನಿಯಲ್ಲಿ ಇರಿಸಿದ್ದೇವೆ. ಅಂದರೆ “ಶೀಲ” ಎನ್ನುವ ಬಿನ್ನಾಣದ ಪದ ಕಟ್ಟಿ, ಅದನ್ನ ಕಳೆದುಕೊಳ್ಳೋದು ದೊಡ್ಡ ಅಘಾತಕಾರಿ ವಿಷಯ ಎಂದು ಹೆಣ್ಣುಮಕ್ಕಳಿಗೆ ಹುಟ್ಟಿನಿಂದಲೇ ಹೇಳಿಕೊಡುತ್ತಾರೆ. ಈ ಸಮಾಜದಲ್ಲಿ ಹೆಣ್ಣು ಆಗಸಕ್ಕೆ ಹಾರಿದರೂ ಅವಳ ಅಡುಗೆ ಮತ್ತು ಶೀಲದ ಮೇಲೆ ಅವಳ ಹೆಣ್ಣುತನವನ್ನ ಅಳೆಯುವುದರಿಂದ ಬಲವಂತವಾಗಿ ಅವಳ ಸಮ್ಮತಿಯಿಲ್ಲದೆ ಅವಳ ಮೇಲೆ ತಮ್ಮ ಕಾಮುಕತನವನ್ನ ತೋರ್ಪಡಿಸುವುದು ಗಂಡಸ್ತನ ಎಂಬುದನ್ನ ಬಹಳ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವಳ ಸಮ್ಮತಿಯಿಲ್ಲದೆ ಅವಳ ಮೇಲೆ ಎರಗಿದಾಗ ಅವಳು ಕಿರುಚಿ ಕೂಗಿ ಮಾಡುವ ಶಬ್ದಗಳು ಅವರ ವಿಕೃತ ಸಂತೋಷವನ್ನು ವಿಪರೀತ ಹೆಚ್ಚಿಸುತ್ತದೆ. ಹಾಗೂ ಹೆಣ್ಣು ತನ್ನನ್ನು ನಿರಾಕರಿಸಿದಳು, ಇಲ್ಲ ಅವಳ ಜಾಗವನ್ನ ಅವಳಿಗೆ ತೋರಿಸಿ ಕೇಳು ಮಟ್ಟದಲ್ಲೇ ಇಡಲು ಇಂತಹ ಹೇಯ ಕೃತ್ಯವನ್ನ ಮಾಡಿ ಅದರ ಬಗ್ಗೆ ಒಂದಿಂಚೂ ರಿಮಾರ್ಸ್ ಇಲ್ಲದೆ ಇರುವ ಗಂಡಸರು ಬಹಳ ಇದ್ದಾರೆ. ಹೆಣ್ಣು ಅವರ ಕಾಮತೃಷೆಯನ್ನ ತೀರಿಸಿಕೊಳ್ಳೋದಕ್ಕೆ ಇರುವ ವಸ್ತು ಎಂದು ತಾವೆ ನಿರ್ಧರಿಸಿ ಮಾಡುವ ಕೃತ್ಯ.

ಕ್ರೈಮ್ಸ್ ಇನ್ ಇಂಡಿಯಾ 2019 ವರದಿ ಪ್ರಕಾರ ಭಾರತದಲ್ಲಿ ಹೆಣ್ಣಿನ ವಿರುದ್ಧ ನಡೆಯುವ ಕ್ರೈಮುಗಳು ವರ್ಷದಿಂದ ವರ್ಷಕ್ಕೆ ಏರುತ್ತಿದೆ, 2018ರಿಂದ 2019ರಲ್ಲಿ ಇಂತಹ ಪ್ರಕರಣಗಳು 7.3 ಪ್ರತಿಶತದಷ್ಟು ಜಾಸ್ತಿಯಾಗಿದೆ. ಪ್ರತಿ 16 ನಿಮಿಷಕ್ಕೆ ಒಂದು ಅತ್ಯಾಚಾರದ ಪ್ರಕರಣ ಬೆಳಕಿಗೆ ಬರುತ್ತದೆ ಎಂಬುದು ಬಹಳ ಭಯಪಡಬೇಕಾದ ವಿಚಾರ, 2019ರಲ್ಲಿ ಒಂದು ದಿನಕ್ಕೆ ಸರಾಸರಿ 88 ರೇಪ್ ಕೇಸುಗಳನ್ನ ಭಾರತ ರೆಕಾರ್ಡ್ ಮಾಡಿದೆ. ಇದು ಬಹಳ ಯೋಚಿಸಬೇಕಾದ ವಿಷಯ. ಯಾವುದೇ ಕ್ರೈಮ್ ಮಾಡುವ ಅಮಾನುಷ ವ್ಯಕ್ತಿ ಇಂತಹ ಕಚಡಾ ಕೆಲಸ ಮಾಡಿದರೆ ತನಗೆ ಶಿಕ್ಷೆಯಾಗುತ್ತದೆ ಎಂದು ಗೊತ್ತಿದೂ ಅದನ್ನ ಧೈರ್ಯವಾಗಿ ಮಾಡುತ್ತಾನೆ ಯಾಕೆ ? ಬರಿ ಕಾಮಕ್ಕಾ? ಉಹೂ ಖಂಡಿತಾ ಅಲ್ಲ, ಅವನು ನ್ಯಾಯಾಂಗ ವ್ಯವಸ್ಥೆಯ ಲೂಪ್ ಹೋಲನ್ನ ಸಮರ್ಥವಾಗಿ ಬಳಸಿಕೊಳ್ಳುವ ಒಂದು ಸಪೋರ್ಟ್ ಇದೆ, ಇಲ್ಲಾ ಅವನು ನ್ಯಾಯಾಂಗ ವ್ಯವಸ್ಥೆಗಿಂತ ದೊಡ್ಡ ಹುದ್ದೆಯಲ್ಲಿದ್ದಾನೆ ಎಂಬ ಹುಂಬತನ. ಇದು ಜಾತಿಯಾಗಿರಬಹುದು, ಹಣವಾಗಿರಬಹುದು ಅಥವಾ ಅಧಿಕಾರವಾಗಿರಬಹುದು ಅದರ ಮದವೇರಿ ಆಡುವ ಆಟಗಳು.

94% ಅತ್ಯಾಚಾರದ ಪ್ರಕರಣಗಳಲ್ಲಿ ಈ ಕೃತ್ಯ ಮಾಡುವವರು ಆ ಹೆಣ್ಣನ್ನ ಬಲ್ಲವರೇ ಆಗಿರುತ್ತಾರೆ ಅಂದರೆ ಅವರಿಗೆ ಸೇಡು ತೀರಿಸಿಕೊಳ್ಳುವ ಇರಾದೆಯೇ ಇರುತ್ತದೆ. ಇನ್ನು ಇಂಥದ್ದು ವರ್ಷಾನುಗಟ್ಟಲೆ ನಡೆಯುತ್ತಿದ್ದರೂ ನಮ್ಮ ಸಮಾಜ, ನ್ಯಾಯಾಂಗ ಹಾಗೂ ನಮ್ಮ ಮನಸ್ಥಿತಿ ಕೊಂಚ ಕೂಡ ಬದಲಾಗಿಲ್ಲ. ಸಮಾಜ ಹೆಣ್ಣು ಅಂಕೆಯಲ್ಲಿರಬೇಕು ಅನ್ನುತ್ತದೆ, ನ್ಯಾಯಾಂಗದ ಶಿಕ್ಷೆಗಳು ಇಂತಹ ಪ್ರಕರಣದಲ್ಲಿ ಸತ್ತ ವ್ಯಕ್ತಿಯನ್ನು ಬದುಕಿಸೋಕೆ ಸಾಧ್ಯವಿಲ್ಲ, ಮನಸ್ಥಿತಿ ಹೆಣ್ಣು ಸುಮ್ಮನೆ ಇಂಥದಕ್ಕೆಲ್ಲಾ ಯಾಕೆ ಸಿಕ್ಕಿಹಾಕಿಕೊಳ್ಳಬೇಕು , ಸಮಾನತೆಯೆಂದು ಗಲಾಟೆ ಮಾಡಿಕೊಳ್ಳದೇ ಮನೆಯಲ್ಲಿದ್ದರೆ ಆಯಿತೆಂದು ಹೇಳುತ್ತದೆ.

ಅತ್ಯಾಚಾರ ಆದಾಗ ಆದವಳದ್ದು ಏನೂ ತಪ್ಪಿರುವುದಿಲ್ಲ, ಅವಳು ಗಿಲ್ಟಿ ಅಲ್ಲ. ಆದರೆ ಬದಲಾಗಬೇಕಾಗಿರೋದು ಸಮಾಜ, ನ್ಯಾಯಾಂಗ, ಮನಸ್ಥಿತಿ . ಅದರ ಒಟ್ಟಾರೆ ಬದಲಾವಣೆ ಆಗದಿದ್ದಷ್ಟು ನಾವು ಇಂತಹ ಕೆಟ್ಟ ಕೃತ್ಯಗಳನ್ನ ಕಣ್ಣಾರೆ ನೋಡುತ್ತೇವೆ, ಕಣ್ಣೀರು ಹಾಕುತ್ತೇವೆ, ನಾಲ್ಕು ದಿವಸದ ನಂತರ ಮರೆಯುತ್ತೇವೆ. ಅದು ಆಗ ಬಾರದು, ಜಾತಿ, ದುಡ್ಡು ಮತ್ತು ಅಧಿಕಾರದ ಮೋಹದ ಮತ್ತು ಮತ್ತಿನಲ್ಲಿ ಹುಚ್ಚಾಟ ಆಡಿ ಒಂದು ಜೀವವನ್ನೇ ಬಲಿ ತೆಗೆದುಕೊಳ್ಳುವ ಈ ಕೃತ್ಯಗಳನ್ನ ಹೆಣ್ಣು ಕುಲ ಯಾವತ್ತೂ ಕ್ಷಮಿಸೋದಿಲ್ಲ….. ಅಷ್ಟೇ…

-ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಮೇಘ ಸಂದೇಶ / ಅತ್ಯಾಚಾರ ಎಂಬ ಲೋಕದ ಅಸಹ್ಯ- ಮೇಘನಾ ಸುಧೀಂದ್ರ

  • October 6, 2020 at 2:21 pm
    Permalink

    ಮೇಘನಾ ಈ ಬರಹ ಚೆನ್ನಾಗಿದೆ ಎಂದು ಹೇಳಲೂ ದುಃಖವೆ ಆಗುತ್ತಿದೆ ನನಗೆ. ನಾನು ವಾಸ್ತವವನ್ನು ನಿರಾಕರಿಸುತ್ತ ಇಲ್ಲ. ಆದರೂ ಇಂತಹ ಭಯಂಕರ ವಾತಾವರಣ ನಮ ನಡುವೆಯೇ ಇದೆ. ನಮಗೆ ಎಂತ ಮಾಡಲೂ ಆಗಲ್ಲ ಎಂಬ ಅರಿವಿನಿಂದ ಮರಗಟ್ಟಿದ್ದೇನೆ ನಾನು.
    ಎರಡನೆಯ ದರ್ಜೆಯವಳಾಗಿ ಹೆಣ್ಣನ್ನ ನೋಡುವ, ಒಂದು ಕಮಾಡಿಟಿಯಾಗಿ ಮಾತ್ರವೆ ಅವಳ ಉಪಯುಕ್ತತೆಯನ್ನ ಮಿತಿಗೊಳಿಸುವ ನಮ್ಮ ಸಮಾಜ ಎಂದು ಬದಲಾಗುತ್ತದೋ! ಇದು ಶತಮಾನಗಳಿಂದ ಹಾಗೇ ಇದೆ.

    Reply

Leave a Reply

Your email address will not be published. Required fields are marked *