ಮೇಘಸಂದೇಶ/ ಹೆಣ್ಣಿಗೆ ಬೇಕಿದೆ ತನ್ನಿಚ್ಛೆಯಂತೆ ಬಟ್ಟೆಯುಡುವ ಸ್ವಾತಂತ್ರ್ಯ – ಮೇಘನಾ ಸುಧೀಂದ್ರ

ಪ್ರತಿಯೊಬ್ಬರೂ ಅವರವರ ಮನಸ್ಸಿಗೆ ಅನುಗುಣವಾಗಿ ಹೆಣ್ಣಿನ ಮೈಮೇಲೆ ಏನಿರಬೇಕು ಏನಿರಬಾರದು ಎಂದು ನಿರ್ಧರಿಸುವ ಮನಸ್ಥಿತಿಗಳು ಈ ಇಪ್ಪತೊಂದನೆಯ ಶತಮಾನದಲ್ಲಿಯಾದರೂ ಬದಲಾಗಲಿ. ಒಂದು ಹೆಣ್ಣಿಗೆ ತನ್ನ ಮೈಮೇಲೆ, ಮುಖದ ಮೇಲೆ ಏನಿರಬೇಕು ಎನ್ನುವ ಕನಿಷ್ಟ ಸ್ವಾತಂತ್ರ್ಯವೂ ಅವಳಿಗಿರದೆ ಇದ್ದರೆ ಅವಳ ಐಡೆಂಟಿಟಿಗೆ ಧಕ್ಕೆಯೇ ಸರಿ.

ಒಂದು ಆಫೀಸಿನ ವಾಟ್ಸಾಪ್ ಗುಂಪಿನಲ್ಲಿ ಚರ್ಚೆ. “ಆಫೀಸಿನಲ್ಲಿ ಇನ್ನು ಡ್ರೆಸ್ ಕೋಡ್ ಮಾಡುತ್ತಾರಂತೆ, ಬೇಕಾದ ಬಟ್ಟೆ ಹಾಕಿಕೊಂಡು ಬರೋದಕ್ಕೆ ಆಗಲ್ಲ ” ಎಂದು ಪೇಚಾಡಿಕೊಂಡು ಮಾತಾಡುತ್ತಿದ್ದರು. ಅಷ್ಟರಲ್ಲೇ “ಈ ಹುಡುಗಿ ಪ್ರೊವೊಕೇಟಿವ್ ಆಗಿ ಬಟ್ಟೆ ಹಾಕಿಕೊಂಡು ಬರೋದಕ್ಕೆ ನಮ್ಮ ಎಲ್ಲರಿಗು ಡ್ರೆಸ್ ಕೋಡ್ ಮಾಡಿದ್ದಾರೆ” ಎಂದು ಒಂದು ಸಣ್ಣ ಕಾಮೆಂಟ್ ಬಂದು ಹೋಯ್ತು. ಇತರದ ಪಾಸಿಂಗ್ ಕಾಮೆಂಟ್ ನಾವದೆಷ್ಟು ಬಾರಿ ಕೇಳಿರಬಹುದು ಆಲ್ವಾ. ಒಂದು ಹುಡುಗಿ ಹಾಕುವ ಬಟ್ಟೆ ಪ್ರವೋಕೇಟಿವ್ ಹೇಗೆ ಆಗುತ್ತದೆ ಎಂಬ ಪ್ರಶ್ನೆ ನಮಗೆಲ್ಲರಿಗೆ ಕಾಡುವುದು ಸಹಜ. ಹೆಣ್ಣುಮಕ್ಕಳು ಹಾಕುವ ಬಟ್ಟೆ ಅವರನ್ನ ಡೇಂಜರಸ್ ಪ್ರಸಂಗಗಳಿಗೆ ದೂಡುತ್ತದೆ ಎಂಬುದು ಕೆಲವರ ವಾದ. ಇಲ್ಲ ಆಕೆ ನಮ್ಮಣ್ಣ ಡಿಸ್ಟ್ರಾಕ್ಟ್ ಮಾಡುತ್ತಾರೆ ಎಂಬುದು ಕೆಲವರ ವಾದ.  

ನಾವು ಎವಾಲ್ವ್  ಆಗುವಾಗ ಬಟ್ಟೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗತೊಡಗಿತು. ನಾಚಿಕೆ ಇರುವವವರು ಬಟ್ಟೆ ಹಾಕಿಕೊಳ್ಳುತ್ತಾರೆ ಅಥವಾ ಮೈಮುಚ್ಚಿಕೊಳ್ಳುತ್ತಾರೆ, ನಾಚಿಕೆ ಇಲ್ಲದವರು ಎಲ್ಲ ಬಿಟ್ಟುಕೊಂಡು ಓಡಾಡುತ್ತಾರೆ ಎಂಬ ಮಾತು ಎಲ್ಲರ ಬಾಯಲ್ಲೂ ಓಡಾಡುತ್ತಿದೆ. ಬಟ್ಟೆ ಹಾಕಿಕೊಳ್ಳದಿರದವರು ಅನಾಗರಿಕರು ಎಂದು ನಮ್ಮ ಸೋಷಿಯಲ್  ಸೈನ್ಸಸ್ ಪಾಠವು ಹೇಳುತ್ತದೆ. ಸರಿಯಾಗಿ ಬಟ್ಟೆ ಹಾಕದವರು ಸಮಾಜದಲ್ಲಿ ಇರುವುದಕ್ಕೆ ಅನರ್ಹರು ಎಂದು ಹೇಳುವವರು ಇದ್ದಾರೆ. ಹೀಗೆ ನಮ್ಮ ನಮ್ಮ ಅಭಿಪ್ರಾಯಕ್ಕೆ ನಮ್ಮ ಆಸೆಗಳಿಗೆ ಬೇರೆಯವರ ಮೈಮೇಲೆ ಏನಿರಬೇಕು ಎಂದು ಹೇಳುವುದು ದಡ್ಡತನವೆಂದು ತಿಳಿಯಲು ನಮಗೆ ಅದೆಷ್ಟು ಶತಮಾನಗಳು ಬೇಕೋ ಗೊತ್ತಿಲ್ಲ.

ಇನ್ನು ಈ ಪ್ರೊವೊಕೇಟಿವ್ ಬಟ್ಟೆಗಳ ಬಗ್ಗೆ ಯೋಚನೆ ಮಾಡುವುದಾದರೆ ಒಂದು ವಿಧವಾದ ಬಟ್ಟೆಯನ್ನು ನಾವು ಹಾಕಿಕೊಂಡು ಅದು ಕೆಲವರಿಗೆ ಕೋಪ ಮತ್ತು ಅವರಲ್ಲಿ   ಬೇರೆ ಯಾವುದೋ ರೀತಿಯ ಭಾವನೆಗಳನ್ನು ಉದ್ರೇಕಿಸಿ ಬಟ್ಟೆ ಹಾಕಿಕೊಂಡವರಿಗೆ ತೊಂದರೆ ಆಗುತ್ತದೆ ಎಂದು ಷರಾ ಬರೆದು ಹೆಣ್ಣುಮಕ್ಕಳಿಗೆ ಮಾತ್ರ ಇಂಥದ್ದೇ ಬಟ್ಟೆ ಹಾಕಿಕೊಳ್ಳಬೇಕು ಎಂದು ಇಲ್ಲ ಸಲ್ಲದ ರೂಲ್ಸ್ ಮಾಡುತ್ತಾರೆ. “ಈ ಬಟ್ಟೆ ಡೀಸೆಂಟ್ ಅಲ್ಲ” ಅನ್ನುವುದಕ್ಕೆ ನಾನಾ ವಿಧದ ಅರ್ಥವಿದೆ. ಕೆಲವರಿಗೆ ಅ ಹುಡುಗಿಯ ಸೈಜಿಗೆ ಸರಿಯಾದ ಬಟ್ಟೆ ಅಲ್ಲ, ಅವಳ ಅಂಗಾಂಗಗಳು ಹೆಚ್ಚಾಗಿ ಕಾಣುತ್ತಿದೆ, ಅವಳ ವಯಸ್ಸಿಗೆ ತಕ್ಕದಾದ ಬಟ್ಟೆ ಅಲ್ಲ ಅದು, ಅವಳ ಮನೆಯ ಸಂಪ್ರದಾಯಕ್ಕೆ ಒಗ್ಗುವುದಿಲ್ಲ ಎಂಬ ಅದೆಷ್ಟೋ ವಿಷಯಗಳು ಅಡಗಿವೆ. ಒಂದೊಂದು ಕಾಲೇಜಿನಲ್ಲಂತೂ ಸಲ್ವಾರ್ ಸೂಟ್  ಹಾಕಿದರೆ ಅದಕ್ಕೆ ದುಪ್ಪಟ್ಟ ಹಾಕಲೇ ಬೇಕು. ಕುತ್ತಿಗೆಯ ಅಂಚಿನವರೆಗೆ ಬಟ್ಟೆ ಕವರ್ ಆಗಿದ್ದರೂ ಸಹ ದುಪ್ಪಟ್ಟಾ ಬೇಕೇ ಬೇಕು, ಇನ್ನು ಈ ಉದ್ರೇಕಗೊಳಿಸುವ ವಸ್ತ್ರಗಳಲ್ಲಿ ಮೊದಲ ಸ್ಥಾನ ಇರುವುದು ಜೀನ್ಸಿಗೆ. ಅದು ಮೈ ಮುಚ್ಚಿ ಅದರೆ ಮೇಲೆ ಲಾಂಗ್ ಟಾಪ್ ಹಾಕಿದರೂ ಅದು ಡೀಸೆಂಟ್ ಅಲ್ಲಾ ಎಂಬುದು ಕೆಲವು ಜನರ ಅಭಿಪ್ರಾಯ. 

ಕೆಲವರನ್ನ ನೋಡಿ ನಮಗೆ ಕೆಲವೊಮ್ಮೆ ಕೋಪ ಬರುತ್ತದೆ. ಅವರನ್ನ ನೋಡಿದರೆ ಚಚ್ಚಿ ಸಾಯಿಸೋಣ ಅನ್ನಿಸುತ್ತೆ, ಯಾಕೆಂದರೆ ಅವರು ನೀವು ಹೇಳಿದ ಹಾಗೆ ಕೇಳುತ್ತಿಲ್ಲ ಎಂದು. ಈ ಸಮಸ್ಯೆ ಹಿಡಿದುಕೊಂಡು ನೀವು ಸಲಹೆ ಕೇಳಲು ಹೋಗುತ್ತೀರಾ ಅಂದುಕೊಳ್ಳಿ, ಯಾರಾದರೂ ಮೊದಲು ನಿಮಗೆ ಏನು ಹೇಳಿತ್ತಾರೆ, “ನಿಮಗೆ ಯಾರು ಕೋಪ ಬರಿಸುತ್ತಿದ್ದಾರೋ ಅವರನ್ನ ನೀವು ಅವಾಯ್ಡ್ ಮಾಡಿ, ಅವರ ಹತ್ತಿರ ಸುಳಿಯಬೇಡಿ, ಇನ್ನೂ ರೇಗಿದರೆ 1 ರಿಂದ 10 ಎಣಿಸಿ , ಓಂ ಎಂದು ಹೇಳಿಕೊಂಡು ಧ್ಯಾನ ಮಾಡಿ” ಎಂದು ಹೇಳುತ್ತಾರೆ ಹೊರತಾಗಿ, “ನಿಮಗೆ ಅವನ್ನನ್ನ ಕಂಡರೆ ರೇಗುತ್ತಿದ್ದೆ ತಾನೆ ಹಾಗಾದರೆ ಅವನ್ನನ್ನ ಕೊಂದು ಬಿಡಿ” ಎಂದು ಚಾಕು ಕೊಡುವುದಿಲ್ಲ. ನಿಮಗೆ ಒಬ್ಬರನ್ನ ನೋಡಿದರೆ ಮನಸ್ಸಿಗೆ ತೊಂದರೆ ಆಗಿತ್ತಿದೆಯಾದರೆ ಅವರನ್ನ ನೀವು ಬದಲಾಯಿಸುವುದಲ್ಲ. ನೀವು ಅವರನ್ನ ಇಗ್ನೋರ್ ಮಾಡಬಹುದು ಅಥವಾ ನಿಮ್ಮನ್ನ ನೀವು ಬದಲಾಯಿಸಿಕೊಳ್ಳಬಹುದು. ಇದು ಈ ಬಟ್ಟೆಯ ವಿಷಯದಲ್ಲೂ ಹಾಗೆ ಆಗುತ್ತದೆ. 

ಪ್ರೊವೋಕೇಟಿವ್ ಅನ್ನೋದು ಟೀನೇಜರ್ಸಿಗೆ ಹೇಳುವ ಪದ. ಆದರೆ ಅದೂ ವಯಸ್ಸಾದ ಗಂಡಸರಿಗೂ ಅಥವಾ ಹೆಂಗಸರಿಗೆ ಬೇರೆ ಯಾವುದೋ ಹೆಣ್ಣು ಹಾಕಿಕೊಳ್ಳುವ ಬಟ್ಟೆಯಲ್ಲಿ ಆಗುತ್ತದೆ ಎಂದರೆ ಅವರ ಮಾನಸಿಕೆ ಸ್ಥಿತಿ ಹೇಗಿದೆ ಎಂದು ಅರಿತುಕೊಳ್ಳಬೇಕು. ನಮ್ಮ ಮನಸ್ಸನ್ನ ಹತೋಟಿಗೆ ಇಟ್ಟುಕೊಳ್ಳದೇ ಬೇರೆಯವರು ಹೇಗೆ ಜೀವನ ನಡೆಸಬೇಕು ಎಂದು ಹೇಳುವವರು ಪ್ರಾಯಶಃ ಅಥೋರಿಟೇಟಿವ್ ಎಂದು ನನಗೆ ಅನ್ನಿಸುತ್ತದೆ. 
ಡೀಸೆನ್ಸಿ ಅನ್ನೋದು ಕೆಲವು ಸಂದರ್ಭ ಸಮಯಗಳನ್ನ ಅನ್ವಯಿಸುತ್ತದೆ. ಸೀರೆ ಡೀಸೆಂಟ್ ಅನ್ನುವವರಿಗೆ ಸೊಂಟ ಬೆನ್ನು ಕಾಣುತ್ತದೆ ಎನ್ನುವವರಿದ್ದಾರೆ, ಪ್ಯಾಂಟ್ ಡೀಸೆಂಟ್ ಅನ್ನುವವರಿಗೆ ಸೊಂಟ ಕಾಣಿಸುವ ಟೀ ಷರ್ಟ್ ಹಾಕುವವರನ್ನ ಇನ್ ಡೀಸೆಂಟ್ ಅನ್ನುತ್ತಾರೆ, ಸ್ಕರ್ಟ್ ಒಂದು ರಾಷ್ಟ್ರದಲ್ಲಿ ಬ್ಯಾನ್ ಆಗಿದೆ, ಮತ್ತೊಂದು ರಾಷ್ಟ್ರದಲ್ಲಿ ಸ್ಕರ್ಟ್ ಡೀಸೆಂಟ್ ಉಡುಪು.. ಹೀಗೆ ಅವರವರ ಮನಸ್ಸಿಗೆ ಅನುಗುಣವಾಗಿ ಪ್ರತಿ ಬಾರಿಯೂ ಹೆಣ್ಣಿನ ಮೈಮೇಲೆ ಏನಿರಬೇಕು ಏನಿರಬಾರದು ಎಂದು ನಿರ್ಧರಿಸುವ ಮನಸ್ಥಿತಿಗಳು ಈ ಇಪ್ಪತೊಂದನೆಯ ಶತಮಾನದಲ್ಲಿಯಾದರೂ ಬದಲಾಗಲಿ. ಒಂದು ಹೆಣ್ಣಿಗೆ ತನ್ನ ಮೈಮೇಲೆ, ಮುಖದ ಮೇಲೆ ಏನಿರಬೇಕು ಎಂದು ಕನಿಷ್ಟ ಸ್ವಾತಂತ್ರ್ಯ ಅವಳಿಗಿರದೆ ಇದ್ದರೆ ಅವಳ ಐಡೆಂಟಿಟಿಗೆ ಧಕ್ಕೆ ಎಂದು ನನ್ನ ಅಭಿಪ್ರಾಯ. 

ಮೇ
ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *