ಮೇಘಸಂದೇಶ/ ಲಾಕ್ ಡೌನ್ ತಂದ ಸಂಕಟಗಳು – ಮೇಘನಾ ಸುಧೀಂದ್ರ

ಒಂದು ಕಾಲದಲ್ಲಿ ಹೆಣ್ಣುಮಕ್ಕಳನ್ನು ಲಾಕ್ ಡೌನ್ ಮಾಡಿ ಮೆರೆದ ಸಮಾಜವಲ್ಲವೇ ನಮ್ಮದು? ಒಂದಷ್ಟು ಮನೆಗಳಲ್ಲಿ ಈಗಲೂ ಹೆಣ್ಣಿಗೆ ಆಯ್ಕೆಗಳಿಲ್ಲ, ಗಂಡಿನ ಆಯ್ಕೆಯನ್ನು ಮುಂದುವರೆಸಿಕೊಂಡೋ ಮೆರೆಸಿಕೊಂಡೋ ಹೋಗುವ ಕೆಲಸ ಅವಳದ್ದು. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಈ ಲಾಕ್ ಡೌನ್ ಅನ್ನೋದು ಭಾರಿ ತಲೆನೋವಾಗಿ ಪರಿಣಮಿಸಿದೆ. ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ.

“ಶಂಕ್ರಮ್ಮ ಅಜ್ಜಿ  ಏನು ಲಾಕ್ ಡೌನ್ ಅಂತೆ, ಏನ್ ಕಥೆ ಅಲ್ವಾ ಮನೇಲೆ ಬಂಧಿಯಾಗಿರಬೇಕು, ಕಷ್ಟ ಕಷ್ಟ ” ಎಂದು ಸಂದೀಪ್ತಿ ಪಕ್ಕದ ಮನೆಯ ಅಜ್ಜಿಗೆ ಹೇಳಿದಳು. ಅಜ್ಜಿ ಮಾತ್ರ ಥಟ್ ಅಂತ, ” ಆ ಥರ ಎಲ್ಲಾ ಏನಿಲ್ಲ, ನಾವೆಷ್ಟೋ ವರ್ಷ ಬಂಧಿಯಾಗಿದ್ವಿ, ಹೊಸದೇನಿದೆ ಈ ಲಾಕ್ ಡೌನಿನಲ್ಲಿ ” ಎಂದು ಹೇಳಿದ ನಂತರ ಸಂದೀಪ್ತಿಗೆ ಸ್ವಲ್ಪ ಕಸಿವಿಸಿಯಾಯಿತು. ಅಂದರೆ ಒಂದು ಕಾಲದಲ್ಲಿ ಹೆಣ್ಣುಮಕ್ಕಳನ್ನ ಲಾಕ್ ಡೌನ್ ಮಾಡಿ ಮೆರೆದ ಸಮಾಜವಲ್ಲವೇ ನಮ್ಮದು ಎಂದು ಥಟ್ಟನೆ ನೆನಪಾಯಿತು. ಒಂದಷ್ಟು ಮನೆಗಳಲ್ಲಿ ಈಗಲೂ ಹೆಣ್ಣಿಗೆ ಆಯ್ಕೆಗಳಿಲ್ಲ, ಗಂಡಿನ ಆಯ್ಕೆಯನ್ನು ಮುಂದುವರೆಸಿಕೊಂಡೋ ಮೆರೆಸಿಕೊಂಡೋ ಹೋಗುವ ಕೆಲಸ ಅವಳದ್ದು. “ಇವರಿಗೆ ಬದನೆಕಾಯಿ ಇಷ್ಟ, ಅದರ ಹುಳಿಯನ್ನೇ ಮಾಡೋದು, ಇವರೇನು ತರುತ್ತಾರೋ ಅದನ್ನೇ ಮಾಡೋದು”  ಎಂದು ಕನಿಷ್ಠ ತಿನ್ನುವ ವಿಷಯದಲ್ಲೂ ಸ್ವಾತಂತ್ರ್ಯ ಇರದ ಮಹಿಳೆಗೆ ಈ ಲಾಕ್ ಡೌನ್ ಅನ್ನೋ ಮನೆಯಲ್ಲೇ ಇರುವ ಶಿಕ್ಷೆ ಹೊಸದಲ್ಲ.

ಈ ಲಾಕ್ ಡೌನ್ ಅನೌನ್ಸ್ ಆದ ತಕ್ಷಣ ಕೆಲಸಕ್ಕೆ ಹೋಗುವ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಅವರಿಗೆ ಕೆಲಸದವರು ಮನೆಗೆ ಬರುವುದರಿಂದಲೇ ಆಫೀಸಿನಲ್ಲಿ ನೆಮ್ಮದಿಯಾಗಿ ಕೆಲಸ ಮಾಡೋದಕ್ಕೆ ಸಾಧ್ಯವಾಗಿರೋದು. ಮನೆಯಲ್ಲಿ ಕೆಲಸವನ್ನೂ ಮಾಡಿಕೊಂಡು ಆಫೀಸನ್ನೂ ತೂಗಿಸಿಕೊಂಡು ಕಷ್ಟವಾಗುತ್ತದೆ. ಒಮ್ಮೊಮ್ಮೆ ಸಹೋದ್ಯೋಗಿಗಳೆಲ್ಲ “ಕೆಲಸ ಮಾಡೋದು ಬರಿ ಕೆಲಸದವರಿಗೆ ಸಂಬಳ ಕೊಡೋದಕ್ಕೆ” ಎಂದು ಅವರನ್ನ ಅವರುಗಳೇ ತಮಾಷೆ ಮಾಡಿಕೊಳ್ಳುತ್ತಿರುತ್ತಾರೆ. ಗಂಡ ಹೆಂಡತಿ ಇಬ್ಬರೂ ಸೇರಿ ಕೆಲಸ ಮಾಡುವ ಬದಲು ನನಗೂ ಬೇಡ ನಿನಗೂ ಬೇಡ ಎಂದು ಇಬ್ಬರೂ ಒಂದು ಹುಲ್ಲುಕಡ್ಡಿಯನ್ನೂ ತೆಗೆದಿಡದೆ ಮತ್ತೊಬ್ಬರಿಗೆ ಕೆಲಸವನ್ನ ವರ್ಗಾಯಿಸುವ ಕಥೆಗಳು ಬಹಳ. ಲಾಕ್ ಡೌನ್ ಆಗಿರೋದರಿಂದ ಇವರೆಲ್ಲರಿಗೂ ಒಂದು ದೊಡ್ಡ ಪಾಥೋ ಕಥೆಯಾಗಿರೋದ್ರಲ್ಲಿ ಆಶ್ಚರ್ಯವಿಲ್ಲ. ಪೂರ್ತಿ ಮನೆಯಲ್ಲೇ ಇದ್ದು ಕೆಲಸ ಮಾಡುವವಳು ಅಥವಾ ಅರೆಕಾಲಿಕ ಕೆಲಸದವಳು ಬರದೇ ಹೆಣ್ಣುಮಕ್ಕಳು ಹೈರಾಣವಾಗಿದ್ದಾರೆ.

ಇಲ್ಲಿ ಹೆಣ್ಣುಮಕ್ಕಳೆಂದೇ ಯಾಕೆ ಒತ್ತಿ ಹೇಳುತ್ತಿದ್ದೇನೆಂದರೆ Oganization for Economic Co operation and Development ಅನ್ನೋ ಸಂಸ್ಥೆ ಈ ಲಾಕ್ ಡೌನ್ ಸಮಯದಲ್ಲಿ ಒಂದು ಸಮೀಕ್ಷೆ ಮಾಡಿತ್ತು. ಅದರಲ್ಲಿ ಈ ಲಾಕ್ ಡೌನ್ ಸಮಯದಲ್ಲಿ ಹೆಣ್ಣುಮಕ್ಕಳು 5 ಘಂಟೆ ಸಂಬಳರಹಿತ ಮನೆ ಕೆಲಸ ಮಾಡುತ್ತಾರೆ ಮತ್ತು ಗಂಡು ಮಕ್ಕಳು 52 ನಿಮಿಷಗಳು ಸಂಬಳರಹಿತ ಮನೆಕೆಲಸ ಮಾಡುತ್ತಾರೆ. ಹೆಣ್ಣುಮಕ್ಕಳ ಕೆಲಸದಲ್ಲಿ ಮೆಕ್ಸಿಕೋ ನಮ್ಮನ್ನ ಮೀರಿಸುತ್ತದೆ. ಸಮಾನತೆಯ ವಿಷಯದಲ್ಲಿ ಡೆನ್ಮಾರ್ಕ್ ನಲ್ಲಿ ಗಂಡು ಮಕ್ಕಳು ಮನೆಕೆಲಸ ಜಾಸ್ತಿ ಮಾಡುತ್ತಾರೆ. ಹೀಗೆ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಈ ಲಾಕ್ ಡೌನ್ ಅನ್ನೋದು    ಭಾರಿ ತಲೆನೋವಾಗಿ ಪರಿಣಮಿಸಿದೆ.

ಇನ್ನು ಮನೆಯಲ್ಲಿ ಇರುವ ಹೆಣ್ಣುಮಕ್ಕಳಿಗೆ ಕೆಲಸ ದಿನನಿತ್ಯವೂ ಕಷ್ಟವೇ. ಅದರ ಜೊತೆಗೆ ಮನೆಯಲ್ಲಿರುವ ಗಂಡ ಮಕ್ಕಳಿಗೆ ಕಾಲಕಾಲಕ್ಕೆ ಊಟ ತಿಂಡಿ ಸ್ನಾಕ್ಸು ಒದಗಿಸಿ ಒದಗಿಸಿ ಬೆನ್ನು ಬಿದ್ದುಹೋಗಿದೆ. ಕನಿಷ್ಠ ಕಾಫಿ ಕುಡಿದ ಲೋಟವನ್ನು ತೊಳಿಯದ ಸೌಜನ್ಯ ಇನ್ನೂ ಮನೆಯವರಿಂದ ಮುಂದುವರೆದಿದೆ. ಕಾಲಕಾಲಕ್ಕೆ ಪೂರಿ ಕರಿಯೋದು, ಓಂಪುಡಿ ಮಾಡೋದು, ಎಣ್ಣೆ ಉಪಯೋಗಿಸೋದು ಇನ್ನೂ ಹೆಚ್ಚಾಗಿ ಮನೆಯ ಬಡ್ಜೆಟ್ ಮನೆಯ ಸಂಬಳಕ್ಕಿಂತ ಜಾಸ್ತಿಯಾಗಿದೆ. ಇನ್ನೂ ಅದೇ ಸಮಯದಲ್ಲಿ ಮಿಕ್ಸಿ, ವಾಷಿಂಗ್ ಮಿಷೀನು ಗಬ್ಬೆದ್ದುಹೋಗಿ ಕೆಲಸ ಇನ್ನೂ ಜಾಸ್ತಿಯಾಗಿದೆ.

ಇನ್ನು ಹುಡುಗಿಯರಿಗೆ ಇನ್ ಬಾಕ್ಸ್ ಗೆ ಬರುವ ಕೊಳಕು ಮೆಸೇಜುಗಳು ಜಾಸ್ತಿಯಾಗಿದೆ. ಟ್ವಿಟರಿನಲ್ಲಿ ಒಂದು ವಾರದ ಹಿಂದೆ ಹೆಣ್ಣುಮಕ್ಕಳು ಅವರ ಇನ್ ಬಾಕ್ಸ್ ಗೆ ಬರುವ ಮೆಸೇಜುಗಳ ಬಗ್ಗೆ ಮಾತಾಡುತ್ತಿದ್ದರು. ಮುಂಚಿನದಕ್ಕಿಂತ ಈಗ ಲಾಕ್ ಡೌನ್ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಕೆಟ್ಟ ಕೊಳಕ ಮೆಸೇಜುಗಳು ಜಾಸ್ತಿಯಾಗುತ್ತಿದೆ ಎಂದು. ಅದರಲ್ಲಿ ಅವರು ಕೊಟ್ಟ ಕಾರಣ ಆಫೀಸಿನಲ್ಲಿ ಫೋನ್ ತೆಗೆದಾಗ, ಮತ್ತೇನೋ ಕೆಲಸ ಮಾಡಿದಾಗ ಕಂಡುಹಿಡಿಯುವ ಗೊಡವೆಗಳು ಗಂಡಸರಿಗೆ ಇಲ್ಲ. ಅದಕ್ಕೆ ಮನೆಯಲ್ಲಿ ಅವರಿಷ್ಟದ ಹಾಗೆ ಅವರ ತಡೆ ಹಿಡಿಯದ ಆಸೆಗಳನ್ನ ಬಗೆಹರಿಸಿಕೊಳ್ಳೋದಕ್ಕೆ ಕಂಡ ಕಂಡ ಹೆಣ್ಣುಮಕ್ಕಳ ಇನ್ಬಾಕ್ಸ್ ಸಹಾಯಕಾರಿ. ಮುಂಚೆ ಬರುವುದಕ್ಕಿಂತ ಹತ್ತು ಪಟ್ಟು ಕೆಟ್ಟ ಮೆಸೇಜುಗಳು ಜಾಸ್ತಿಯಾಗಿವೆ ಎಂಬುದು ಈ ಹೆಣ್ಣುಮಕ್ಕಳ ಅಳಲು.

ಮೊನ್ನೆ ಪೇಪರಿನಲ್ಲಿ ಕರೋನಾ ಪೀಡಿತ ಹೆಣ್ಣು ಪೇಷೆಂಟೊಬ್ಬಳನ್ನ ಆಸ್ಪತ್ರೆಯ ವಾರ್ಡ್ ಬಾಯ್ ಗಳೆಲ್ಲಾ ಸೇರಿ ರೇಪ್ ಮಾಡಿದ್ದರು ಎಂಬ ಸುದ್ದಿ ಓದಿ ಆಘಾತವಾಯಿತು. ಅಂದರೆ ಹೆಣ್ಣೊಬ್ಬಳು ರೋಗ ಬಂದು ಆಸ್ಪತ್ರೆಯಲ್ಲಿ ಐಸೋಲೇಟ್ ಆದರೂ ಅವಳು ಆರಾಮವಾಗಿ ಇರಲಾಗುವುದಿಲ್ಲ. ಎಂತಹಾ ವಿಪರ್ಯಾಸವಿದು ಎಂದು ನೋಡಿ ತಲೆ ಚಚ್ಚಿಕೊಳ್ಳಬೇಕಾಗಿ ಬಂತು.

ಇನ್ನೊಂದಷ್ಟು ಕಡೆ ಹೆಣ್ಣುಮಕ್ಕಳ ಕುಡುಕರ ಗಂಡಂದಿರು ಮದ್ಯ ಸಿಗದೆ ಆ ಕೋಪಕ್ಕೆ ಹೆಂಡತಿಯರನ್ನೇ ಹೊಡೆದು ಬಡಿದು ಮಾಡುತ್ತಿರುವುದ್ದಾಗಿ ಎಷ್ಟೋ ವರದಿಗಳನ್ನ ಓದಿದ್ದೇವೆ. ಆಶಾ ಕಾರ್ಯಕರ್ತೆಯರು, ವೈದ್ಯರೆಲ್ಲರ ಮೇಲೆ ಹಲ್ಲೆಯನ್ನೂ ನೋಡಿದ್ದೇವೆ. ಲಾಕ್ ಡೌನಿನಲ್ಲೂ ಸುಮಾರು ಜನ ಹೆಣ್ಣುಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಡಲು ಆಗದಿರುವುದು ಖೇದಕರ ಸಂಗತಿ.

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಮೇಘಸಂದೇಶ/ ಲಾಕ್ ಡೌನ್ ತಂದ ಸಂಕಟಗಳು – ಮೇಘನಾ ಸುಧೀಂದ್ರ

Leave a Reply

Your email address will not be published. Required fields are marked *