ಮೇಘಸಂದೇಶ/ ರಿಸರ್ಚ್ ಕ್ಷೇತ್ರದಲ್ಲಿ ಹೆಣ್ಣನ್ನು ಹುಡುಕೋಣ!- ಮೇಘನಾ ಸುಧೀಂದ್ರ

ವಿಜ್ಞಾನ ತರಗತಿಗಳಲ್ಲಿ ನೂರಕ್ಕೆ ನೂರು ಪಾಠ ಕೇಳಿಸಿಕೊಂಡು ನೂರಕ್ಕೆ ನೂರು ತೆಗೆದುಕೊಂಡವರು ಎಲ್ಲಿ ಹೋದರು ಎಂಬ ಪ್ರಶ್ನೆ ನಮ್ಮನ್ನ ಕಾಡುತ್ತಲೇ ಇರುತ್ತದೆ. ಇಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಮೆಕಾನಿಕಲ್, ಸಿವಿಲ್ ಮತ್ತು ಎಲಕ್ಟ್ರಿಕಲ್ ಬ್ರಾಂಚುಗಳಲ್ಲಿ ಹುಡುಗಿಯರು ಸುಮಾರು ಇರುವುದೇ ಇಲ್ಲ. ಸಂಶೋಧನಾ ವಿಭಾಗದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಾಗಿಯೇ ಇದ್ದಾರೆ. ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿಕೊಂಡಾಗ ಮತ್ತೆ ಸುತ್ತಿ ಬಳಸಿ ನಮ್ಮ ದೇಶದ ಕೌಟುಂಬಿಕ ವ್ಯವಸ್ಥೆಯನ್ನೇ ದೂರಬೇಕಾಗುತ್ತದೆ.

ಲಾಕ್ ಡೌನ್ ಇಲ್ಲದೇ ಇದ್ದಿದ್ದರೆ ಈಗಾಗಲೇ ನಮ್ಮ ರಾಜ್ಯದ ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿ ಪರೀಕ್ಷೆಯ ಫಲಿತಾಂಶಗಳು ಬರುತ್ತಿದ್ದವು. ಎಲ್ಲಾ ಪತ್ರಿಕೆಗಳೂ “ಹೆಣ್ಣುಮಕ್ಕಳ ಮೇಲುಗೈ” ಎಂಬ ಒಂದೇ ತೆರನಾದ ಹೆಡ್ ಲೈನ್ ಬರೆದು ಕೈತೊಳೆದುಕೊಳ್ಳುತ್ತಿದ್ದವು. ಕಾಲೇಜಿನಲ್ಲಿ ಗಿಜಿಗಿಡುವ ಹುಡುಗಿಯರು ಇನ್ನು ಬ್ಯಾಚುಲರ್ ಅಥವಾ ಸ್ನಾತಕೋತ್ತರ ಪದವಿಯ ಕ್ಲಾಸುಗಳಲ್ಲಿ ಅಲ್ಪಸಂಖ್ಯಾತರಾಗಿಯೇ ಕೂರುತ್ತಾರೆ. ಇನ್ನು ಇಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಮೆಕಾನಿಕಲ್, ಸಿವಿಲ್ ಮತ್ತು ಎಲಕ್ಟ್ರಿಕಲ್ ಬ್ರಾಂಚುಗಳಲ್ಲಿ ಹುಡುಗಿಯರು ಸುಮಾರು ಇರುವುದೇ ಇಲ್ಲ. ನಾನು ಓದಿದ ಸಮಯದಲ್ಲೂ 50 ಜನರ ತರಗತಿಯಲ್ಲಿ 10 ಜನ ಎಲೆಕ್ಟ್ರಿಕಲ್ ಬ್ರಾಂಚಿನ ಹುಡುಗಿಯರಿದ್ದೆವು. ಮೆಕಾನಿಕಲ್ ಮತ್ತು ಸಿವಿಲ್ ವಿಭಾಗದಲ್ಲಿ ಯಾರೂ ಇರಲೇ ಇಲ್ಲ. ಇದು ಕೇವಲ ಏಳು ವರ್ಷದ ಹಿಂದಿನ ಸ್ಟಾಟ್ಸ್. ಬೇರೆ ಬೇರೆ ಕಾಲೇಜಿನಲ್ಲಿ ಒಂದೋ ಎರಡೋ ಹುಡುಗಿಯರಿರಬಹುದು. ಕಂಪ್ಯೂಟರ್ ಸೈನ್ಸ್ ಮತ್ತು ಆರ್ಕಿಟೆಕ್ಚರ್ ವಿಭಾಗದಲ್ಲಿ ಜಾಸ್ತಿ ಹುಡುಗಿಯರಿದ್ದಾರೆ ಎಂದು ಸಂಖ್ಯೆಗಳು ಹೇಳುತ್ತವೆ.

ನಮ್ಮ ದೇಶದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ 14% ಹೆಣ್ಣುಮಕ್ಕಳು ಮಾತ್ರ ಇದ್ದಾರೆ. 2.8 ಲಕ್ಷ ವಿಜ್ಞಾನಿಗಳಲ್ಲಿ 38 ಸಾವಿರ ಹೆಣ್ಣುಮಕ್ಕಳಿದ್ದಾರೆ ಎಂಬುದು ಈಗಿನ ವಿಷಯ. ಹಾಗಿದ್ದಲ್ಲಿ ವಿಜ್ಞಾನ ತರಗತಿಗಳಲ್ಲಿ ನೂರಕ್ಕೆ ನೂರು ಪಾಠ ಕೇಳಿಸಿಕೊಂಡು ನೂರಕ್ಕೆ ನೂರು ತೆಗೆದುಕೊಂಡವರು ಎಲ್ಲಿ ಹೋದರು ಎಂಬ ಪ್ರಶ್ನೆ ನಮ್ಮನ್ನ ಕಾಡುತ್ತಲೇ ಇರುತ್ತದೆ. ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿಕೊಂಡಾಗ ಮತ್ತೆ ಸುತ್ತಿ ಬಳಸಿ ನಮ್ಮ ದೇಶದ ಕೌಟುಂಬಿಕ ವ್ಯವಸ್ಥೆಯನ್ನೇ ದೂರಬೇಕಾಗುತ್ತದೆ.

2017ರಲ್ಲಿ ಹೆಣ್ಣುಮಕ್ಕಳನ್ನ ಸಮೀಕ್ಷೆ ಮಾಡಿದ್ದಾಗ ತಿಳಿದದ್ದು ಅವರಿಗೆ ಅವರ ಬಯಾಲಾಜಿಕಲ್ ಕ್ಲಾಕ್ ಮತ್ತು ಕೌಟುಂಬಿಕ ಒತ್ತಡಗಳಿಂದ ಅವರಿಗೆ ಬೇಕಾದದ್ದನ್ನ ಮಾಡಲು ಸಾಧ್ಯವಿಲ್ಲ. ಅಂದರೆ ಆಕೆ ಓದಿದರೂ, ಗೀಚಿದರೂ ಒಲೆ ಹಚ್ಚಬೇಕು, ತಾಯಿಯಾಗಬೇಕು. 26-27 ವಯಸ್ಸಿನಲ್ಲಿಯೇ ಅವರ ಮಾಸ್ಟರ್ಸ್, ಪಿಎಚ್.ಡಿ ಗಳಿಗೆ ಡೆಡ್ ಲೈನ್ ಇರುವಾಗ ಅದೇ ಸಮಯದಲ್ಲಿ ತಾಯಿಯಾಗುವ, ಮದುವೆಯಾಗುವ, ಸಂಸಾರ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ನಮ್ಮ ಸಮಾಜ ಒತ್ತಿ ಒತ್ತಿ ಹೇಳುತ್ತದೆ. ನಯವಾಗಿ “ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕಮ್ಮ” ಎಂದು ತಲೆಸವರಿರುತ್ತಾರೆ. ಹೆಣ್ಣು ಅಂದಾಕ್ಷಣ ಅವಳು ಎಲ್ಲವನ್ನೂ ಸಮಚಿತ್ತ ಮತ್ತು ಸಮತೋಲನದಿಂದ ನೋಡುತ್ತಾಳೆ ಎಂದು ನಂಬೇ ಇರುತ್ತಾರೆ.

ಹೆಣ್ಣುಮಕ್ಕಳು ಅಲ್ಪತೃಪ್ತರೂ ಆಗಿರುತ್ತಾರೆ. “ಅಯ್ಯೋ ಸಾಕಪ್ಪ ಈ ಇಂಜಿನಿಯರಿಂಗ್ ಮಾಡೋದ್ರಲ್ಲೇ ಆಯ್ತು, ಏನೋ ಒಂದು ಕೆಲ್ಸ ಮತ್ತು ಸಂಬಳ ಬಂದರೆ ಸಾಕು” ಎಂದು ಸುಮ್ಮನಾಗಿ ಬಿಡುತ್ತಾರೆ. ಇದು ತಪ್ಪಲ್ಲ, ಆದರೆ ಸಾಮರ್ಥ್ಯ ಇದ್ದಾಗಲೂ “ಹೆಣ್ಣು” ಎಂದು ಒಳಗೆ ಕೂಡುವುದು ಸರಿಯಾಗುವುದಿಲ್ಲ. ಹೆಣ್ಣುಮಕ್ಕಳು “ಗುಡ್ ಗರ್ಲ್ ಸಿಂಡ್ರೋಮ್” ಗೆ ಬೇಗ ಬಲಿಯಾಗುತ್ತಾರೆ. ಅಂದರೆ “ನಾನು ನನ್ನ ಸುತ್ತಮುತ್ತಲಿರುವರನ್ನ ನಾನು ನೊಂದರೂ ನೋಯಿಸುವುದಿಲ್ಲ, ಎಲ್ಲವನ್ನೂ ನಿಭಾಯಿಸಿ ಸೂಪರ್ ಮಾಮ್ ಆಗುತ್ತೇನೆ, ನನ್ನ ಕುಟುಂಬಕ್ಕಿಂತ ಯಾವುದೂ ಮಿಗಿಲಾಗಿಲ್ಲ” ಎನ್ನುವ ವಿಷಯಗಳು ಜಾಸ್ತಿ ಅವಳ ತಲೆ ಒಳಗೆ ಕೊರೆಯುತ್ತಿರುತ್ತದೆ. ಇನ್ನು ಒಂದು ಸಮಯ ಆದ ಮೇಲೆ ಸುರಕ್ಷತೆ ದೃಷ್ಟಿಯಿಂದ ಅವಳು ಸುಮ್ಮನೆ ನೆಟ್ವರ್ಕಿಂಗ್ ಮಾಡಿಕೊಂಡು ಆಫೀಸಿನಲ್ಲಿರುವುದು ಕಷ್ಟ. ಈ ಥರದ ಸುಮಾರು ವಿಷಯಗಳು ಹೆಣ್ಣುಮಕ್ಕಳನ್ನ ಬಾಧಿಸುತ್ತದೆ.

ಹೆಣ್ಣುಮಕ್ಕಳು ಇರುವ ಲ್ಯಾಬೊರೇಟರಿಗಳಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತದೆ ಎಂಬುದು ಸಾಕ್ಷಿ ಸಮೇತ ಪ್ರೂವ್ ಆಗಿದೆ. ಈ ಹೃದಯ ರೋಗವನ್ನು ಹೇಗೆಲ್ಲಾ ಪತ್ತೆ ಮಾಡಬಹುದು ಯಾವ್ಯಾವ ಸಿಂಪ್ಟಮ್ಸ್ ಇದೆ ಎಂದು ಒಂದು ದೊಡ್ಡ ಸಂಶೋಧನೆ ಆಯಿತು. ಅದರಿಂದ ಕೆಲವೊಂದು ತೀರ್ಮಾನಗಳು ಆದವು. ಆದರೆ ಅಲ್ಲೊಂದು ದೊಡ್ಡ ಎಡವಟ್ಟಾಯಿತು. ಹೆಣ್ಣುಮಕ್ಕಳನ್ನ ಅಲ್ಲಿ ಒಂದು ಡೆಮೋ ಪೀಸ್ ಆಗಿ ನೋಡಲೇ ಇಲ್ಲ. ಗಂಡಸರಿಗೆ ಹೃದಯ ಬೇನೆ ತಗುಲಿದಾಗ, ಹೆಂಗಸರಿಗೆ ಹೃದಯಬೇನೆ ಅಥವ ಆಘಾತ ಆದಾಗ ದೇಹ ಬೇರೆ ಬೇರೆ ಥರಹದ ಇಂಡಿಕೇಷನ್ಸ್ ನೀಡುತ್ತದೆ. ಇನ್ನು ನಿದ್ರೆ ಮಾತ್ರೆಗಳು, ಆಂಟಿಬಯಾಟಿಕ್ಸ್ ಔಷಧಿಗಳಿಗೆ ಇರುವ ಸುಮಾರು ಕ್ಲಿನಿಕಲ್ ಟ್ರಯಲ್ ಗಳಿಗೆ ಬರೀ ಮಧ್ಯವಯಸ್ಕ ಗಂಡಸರ ಮೇಲೆ ಪ್ರಯೋಗ ಮಾಡಿ ಅದನ್ನ ಮಾರುಕಟ್ಟೆಗೆ ಬಿಡುತ್ತಾರೆ. ಹೆಣ್ಣು ಮಕ್ಕಳ ದೇಹ ಪ್ರಕೃತಿಗೆ ಇದು ಹೇಗೆ ಒಗ್ಗಿಕೊಳ್ಳತ್ತೆ ಎಂಬ ಸಣ್ಣ ಸಂಶಯವೂ ಬರದೆ ಅದನ್ನ ಮುಂದುವರೆಸುತ್ತಾರೆ. ಈ ಹೃದಯ ಖಾಯಿಲೆಗಳಿಗೆ ಹೆಣ್ಣುಮಕ್ಕಳು ಬಲಿಯಾಗುವುದು ಅಂಕಿ ಅಂಶದಲ್ಲಿ ಕಡಿಮೆಯಿದ್ದರೂ ಅದನ್ನ ಸರಿಯಾಗಿ ಕಂಡುಹಿಡಿಯದೇ ಸಾವನ್ನ ಅಪ್ಪಿದ್ದು ಬಹಳ ಮಂದಿ. ಹೀಗೆ ಇಂಥ ಎಡವಟ್ಟುಗಳನ್ನು ಹೆಣ್ಣುಮಕ್ಕಳೇ ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟರೆ ಪೂರ್ತಿಯಾಗಲ್ಲ, ಸ್ವಲ್ಪ ಕಡಿಮೆ ಮಾಡಬಹುದು. ಹುಡುಕು

ಇನ್ನು ಈ ಆಫೀಸ್ ಸಮಯದ ಬಗ್ಗೆಯೂ ಕೆಲವೊಂದು ಬದಲಾವಣೆಗಳನ್ನ ಮಾಡಿಕೊಳ್ಳಬೇಕಾಗಿದೆ. ಗಂಡಸರು ಕೆಲಸ ಮಾಡಬಾರದ ಸಮಯದಲ್ಲೂ ಕೆಲಸ ಮಾಡುತ್ತಿರುತ್ತಾರೆ ಎಂದು ಮಾತು ಸಂಶೋಧನಾ ಕ್ಷೇತ್ರದಲ್ಲಿದೆ. ಅಂದರೆ ಅವರಿಗೆ ಕೆಲಸದ ಅವಧಿ 6 ಅಥವಾ 7 ಘಂಟೆಯಾದ ನಂತರ ಬೇರೆ ಜವಾಬ್ದಾರಿಗಳು ಇರುವುದಿಲ್ಲ. ಸುಮ್ಮನೆ ಲಾಗ್ ಇನ್ ಆಗಿ ಕೂರೋದು ಅಥವಾ ಮತ್ತೇನೋ ಈಮೇಲ್ ಕಳಿಸಿದಾಕ್ಷಣ ಅವರ ಜಾಗದಲ್ಲಿ ಕೂರುವ ಹೆಣ್ಣಿನ ಬಗ್ಗೆ ಸಹ ಅದೇ ಅಭಿಪ್ರಾಯ ಇಟ್ಟುಕೊಂಡಿರುತ್ತಾರೆ. ಆದರೆ ಅವಳು 6 ಘಂಟೆಯ ನಂತರ ಎದ್ದು ಹೋಗಲೇ ಬೇಕು. ಅಲ್ಲಿ ಒಂದು ದೊಡ್ಡ ಯುದ್ಧವೇ ನಡೆದುಹೋಗುತ್ತದೆ.

ಇವೆಲ್ಲವನ್ನು ಗಮನಿಸಿದಾಗ ನಮಗೆ ಅರ್ಥವಾಗಬೇಕಾದ್ದದ್ದು ಒಂದೇ- ಮುಂದೆ ಹುಡುಗಿಯರು ಓದದಿದ್ದರೆ ಅವರುಗಳು ಉನ್ನತ ಹುದ್ದೆಯನ್ನು ಏರದಿದ್ದರೆ ಒಂದು ಆಫೀಸ್ ಗೆ ಅಥವಾ ಕೆಲಸ ಮಾಡುವ ಜಾಗಕ್ಕೆ ಮತ್ತೊಂದು `ದೃಷ್ಟಿಕೋನ’ ವೇ ಬರುವುದಿಲ್ಲ!

-ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಮೇಘಸಂದೇಶ/ ರಿಸರ್ಚ್ ಕ್ಷೇತ್ರದಲ್ಲಿ ಹೆಣ್ಣನ್ನು ಹುಡುಕೋಣ!- ಮೇಘನಾ ಸುಧೀಂದ್ರ

 • May 14, 2020 at 2:09 am
  Permalink

  ಚನ್ನಾಗಿದೆ ಮೇಘನ
  ಹೆಣ್ಮಕ್ಕಳ ಸಾಧನೆಯ ಮಾಪನ ಚಂದ ಮಾಡಿದ್ದೀಯ
  ಹೊಸ ದೃಷ್ಟಿಕೋನದಿಂದ ನೋಡಿದ್ದೀಯ .

  Reply

Leave a Reply

Your email address will not be published. Required fields are marked *