ಮೇಘಸಂದೇಶ/ ಬೇರೆಯವರನ್ನ ಖುಷಿ ಪಡಿಸಲು ಮಾತ್ರ… – ಮೇಘನಾ ಸುಧೀಂದ್ರ

ಎಲ್ಲದರಲ್ಲೂ ನಂಬರ್ ಒನ್ ಆಗಲುಂಟೇ? ಮಿಲೇನಿಯಲ್ ಹುಡುಗಿಯರ ಬದುಕು ಬಹಳ ಸುಲಭವೇ? ಕೆಲಸದಲ್ಲೂ ಮನೆಯಲ್ಲೂ ಅಮ್ಮನ ಪಾತ್ರದಲ್ಲೂ ಒಂದೇ ರೀತಿ ಮಿಂಚಲು ಸಾಧ್ಯವೇ? ಎಲ್ಲದರಲ್ಲೂ ಪರ್ಫೆಕ್ಟ್ ಆಗಿದ್ದರೆ ಮನುಷ್ಯರಾಗಿ ಇರಬಹುದೇ? ಜಗತ್ತಿನಲ್ಲಿ ಯುವತಿಯರ ಸಂತೋಷ ಸೂಚಿ ಉತ್ತಮ ರೀತಿಯಲ್ಲಿ ಇದೆಯೇ? ಯಾವ ಪ್ರಶ್ನೆಗೆ ಉತ್ತರ ಹುಡುಕುವುದು?!

ಒಂದು ಲೇಟ್ ಇಪ್ಪತ್ತು ವರ್ಷದ ಮಗಳಿಗೆ ಐವತ್ತರ ಆಸುಪಾಸಿನ ಅಮ್ಮ ಹೇಳುತ್ತಾ ಇದ್ದಳು, “ನಿಮ್ಮ ಜೆನ್ ಅದೇ ಮಿಲೇನಿಯಲ್ ಮಿಲೇನಿಯಲ್ಲೂ ಎಂದು ಬಡ್ಕೋತಿರ್ತೀರಲ್ಲಾ ನೀವುಗಳು ನಮಗಿಂತ ಖುಷಿಯಾಗೇನ್ ಇಲ್ಲ, ಅದರಲ್ಲೂ ಹೆಣ್ಣುಮಕ್ಕಳು ಸ್ವಲ್ಪ ಕೂಡ ನೆಮ್ಮದಿಯಾಗಿಲ್ಲ, ಕೈಯಲ್ಲಿ ದುಡ್ಡಿದೆ ಅಷ್ಟೇ” ಎಂದು ಅಮ್ಮ ಮಗಳ ಸಂಭಾಷಣೆ ನಡೆಯುತ್ತಿದ್ದರೆ, ಮಗಳು ಮಾತ್ರ, “ಅಯ್ಯೋ ಈ ದೊಡ್ಡವರದಿಷ್ಟೇ, ಮುಂದಿನ ಪೀಳಿಗೆಯವರನ್ನ ಯಾವಾಗಲೂ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಹೇಳುವವರೇ” ಎಂದು ಸುಮ್ಮನೆ ಈಗಿನ ಕಾಲದ ಹುಡುಗಿ ಆರಾಮಾಗಿ ಇದ್ದಳು.

ಆದರೆ ಮರುದಿವಸ ಆಫೀಸಿನ ವಾಷ್ ರೂಮ್ ಸಂಭಾಷಣೆಯಲ್ಲಿ ಸಿಕ್ಕ ಮಾತುಗಳು ಅಮ್ಮನ ಮಾತಿಗೆ ಪುಷ್ಟಿ ಕೊಡುತ್ತಿತ್ತು. “ಅಯ್ಯೋ ಯಾರಿಗೆ ಬೇಕು ಈ ಕೆಲಸ, ಅಯ್ಯೋ ನಮ್ಮ ಮನೆಯಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ ಅದು ಇದು” ಎಂದು ಗೊಣಗಿಕೊಂಡೇ ಲಿಪ್ ಸ್ಟಿಕ್ ಸರಿ ಮಾಡಿಕೊಳ್ಳುವ ಪ್ರಮೇಯ ಬಂದಿರುತ್ತದೆ. ಸರಿ ಎಂದು ಸುಮ್ಮನೆ ಒಂದು ಸರ್ವೇ ಮಾಡೋಣ ಎಂದು ಕೇಳಿದಾಗ ಸುಮಾರು ಹೆಣ್ಣುಮಕ್ಕಳು “ಅಯ್ಯೋ” ಎಂದೇ ತಮ್ಮ ಕಥೆ ಶುರುಮಾಡುತ್ತಾರೆ. ಇದೇ ಅಂಕಣ ದಲ್ಲಿ ಬರೆದಿದ್ದು ನಿಮಗೆ ನನಪಿರಬಹುದು ಹೆಣ್ಣುಮಕ್ಕಳಿಗೆ ಸೂಪರ್ ವುಮೆನ್ ಸಿಂಡ್ರೋಮ್ ಹತ್ತಿಬಿಟ್ಟಿದೆ ಎಂದು. ಅಂದರೆ ಆಕೆ ಕೆಲಸದಲ್ಲೂ ನಂಬರ್ ಒನ್ ಆಗಬೇಕು, ಮನೆಯಲ್ಲಿ ಅಡುಗೆಗೂ ನಂಬರ್ ಒನ್ ಆಗಬೇಕು, ಮಕ್ಕಳನ್ನು ನೋಡಿಕೊಳ್ಳುವುದರಲ್ಲೂ ನಂಬರ್ ಒನ್ ಆಗಬೇಕು ಮತ್ತು ಅವರನ್ನು ಯಾವುದೇ ಕಾರಣಕ್ಕೂ ಯಾವುದಕ್ಕೂ ದೂರಬಾರದು ಎಂದು. ಇದು ಯಾವುದೇ ಮನುಷ್ಯನಿಗೂ ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಎಫೀಷಿಯನ್ಸಿ ಅಂತ ಒಂದಿರುತ್ತದೆ. ಅದರ ಮುಂದೆ ಇನ್ನೇನು ಮಾಡೋದಕ್ಕೆ ಸಾಧ್ಯವಿಲ್ಲ. ಆಮೇಲೆ ಅಷ್ಟು ಪರ್ಫೆಕ್ಟ್ ಆಗಿಬಿಟ್ಟರೆ ಅವರು ಮನುಷ್ಯರಾ ಎಂಬ ಸಂದೇಹ ಬರುತ್ತದೆ. ಇರಲಿ ನಾಲ್ಕು ದಶಕದಿಂದ ಹೆಣ್ಣುಮಕ್ಕಳ ಖುಷಿಯ ಇಂಡೆಕ್ಸನ್ನ ಟ್ರಾಕ್ ಮಾಡಲಾಗುತ್ತಿದೆ ಅದರಲ್ಲಿ ಈಗಿನ ಜಮಾನದಲ್ಲೇ ಸರಾಸರಿ ಅಷ್ಟು ಖುಷಿಯಾಗಿ ಇಲ್ಲದೇ ಇರುವವರು ಎಂಬ ವರದಿ ಓದಿದರೆ ನಮಗೆ ಶಾಕ್ ಆಗುತ್ತದೆ.

ಸಂತೋಷವನ್ನು ಒಂದು ವಸ್ತುವಿಗೆ ಸಮೀಕರಿಸಿ ಅದು ನಮ್ಮನ್ನ ಖುಷಿಯಾಗಿ ಇರಿಸುತ್ತದೆ ಎಂದಾದರೆ ಅದು ಯಾವತ್ತೂ ಸರಿಯಾಗುವುದಿಲ್ಲ. ಈಗಿನ ಕಾಲದ ಹೆಣ್ಣುಮಕ್ಕಳಿಗೆ ಎಲ್ಲದರಲ್ಲೂ ಆಯ್ಕೆ ಇದೆ ಮದುವೆಯಲ್ಲಿ, ಯಾವಾಗ ಮಗು ಮಾಡಿಕೊಳ್ಳಬೇಕೆಂದು, ಕೆಲಸಕ್ಕೆ ಹೋಗಬೇಕಾ ಬೇಡವಾ ಎಂಬುದಕ್ಕೆಲ್ಲಾ ಆದರೆ ಇವಷ್ಟು ಇದ್ದರೂ ಇನ್ನೂ ಒದ್ದಾಡುತ್ತಿದ್ದಾರೆ ಎಂದರೆ ಏನು ಕಾರಣ ಎಂದು ಹುಡುಕಲು ಜಸ್ಟಿನ್ ವುಲ್ಫರ್ಸ್ ಮತ್ತು ಬೆಟ್ಸಿ ಸ್ಟೀವೆನ್ಸನ್ ಎಂಬ ಅರ್ಥಶಾಸ್ತ್ರಜ್ಞರು ಹುಡುಕ ಹೊರಟಾಗ ಸಿಕ್ಕ ಡೇಟಾ ಬಹಳ ಬೆಚ್ಚಿಳಿಸೋವಂಥದ್ದು. ಅವರಿಗೆ ಅದು ಪಝಲ್ ಎಂದು ಅನ್ನಿಸಿತ್ತಂತೆ. ಆದರೆ ಇದು ಈಗಿನ ಕಾಲಕ್ಕೂ ಸತ್ಯ ಎಂದು ಹೇಗೆ ಎಂದು ಅವರಿಗೂ ಭಯವಾಯಿತಂತೆ.

ಈಗಿನ ಹೆಣ್ಣುಮಕ್ಕಳಿಗೆ ಸೆಕೆಂಡ್ ಶಿಫ್ಟ್ ಸಿಂಡ್ರೋಮ್ ಶುರುವಾಗಿದೆ, ಅಂದರೆ ಈಗಲೂ ಈಗಿನ ಕಾಲದಲ್ಲೂ ಅವರು ಮಕ್ಕಳ ಹತ್ತಿರ ಜಾಸ್ತಿ ಸಮಯ ಕಳೆಯಬೇಕು, ಅವರ ಜವಾಬ್ದಾರಿ ಪೂರ್ತಿ ಅವರದ್ದೇ, ಮತ್ತು ಮನೆಯ ಎಲ್ಲಾ ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಅವರಿಗೇ ಇರುವ ಜವಾಬ್ದಾರಿ. ಅದು ಅವರನ್ನ ಕೆಲವೊಮ್ಮೆ ಓವರ್ ಸ್ಟ್ರೆಸ್ ಮಾಡಿಸಿಬಿಡುತ್ತದೆ. ಮನೆಯ ಕೆಲಸಗಳನ್ನ ಹಂಚಿಕೊಂಡು ಮಾಡಬಹುದಾದರೂ ಈ ಸಂಬಂಧಗಳನ್ನ ಫಿಕ್ಸ್ ಮಾಡೋದು, ಸಂಭಾಳಿಸೋದು ಎಲ್ಲಾ ಸ್ವಲ್ಪ ಕಷ್ಟದ ಕೆಲಸವೇ ಎಂಬುದು ಅರಿವಾಗಿದೆ. ಈ ರೋಲ್‍ಗಳೂ ಇನ್ನೂ ಗಂಡಸರಿಗೆ ದಾಟಿಲ್ಲ.

ಅವರ ಬ್ರೇಕ್ ಸಮಯ, ಅವರ ಖುಷಿ ಸಮಯಗಳು ಬೇರೆಯವರನ್ನ ಖುಷಿ ಪಡಿಸಲು ಮಾತ್ರ ಉಪಯೋಗಿಸಿ ಸ್ವಲ್ಪವೂ ನೆಮ್ಮದಿಯಾಗಿರೋದಕ್ಕೆ ಹೆಣ್ಣುಮಕ್ಕಳಿಗೆ ಆಗುತ್ತಿಲ್ಲ. ಹೆಣ್ಣುಮಕ್ಕಳಿಗೆ ಮತ್ತೊಂದು ತುಂಬಾ ಯೋಚನೆ ಮಾಡೋದು, ಆಕಸ್ಮಾತ್ ಅವರು ಖಾಸಗಿ ಜೀವನದಲ್ಲಿ ಎಡವಿದರೆ ಅವರ ವೃತ್ತಿ ಸಹ ಅಷ್ಟೇನೂ ಚೆನ್ನಾಗಿಲ್ಲ ಎಂದೇ ನಂಬಿರುತ್ತಾರೆ. ಈ ಎಲ್ಲವನ್ನೂ ಮಾಡುವ ಭರದಲ್ಲಿ ಕೆಲವೊಮ್ಮೆ ಐಸೋಲೇಟ್ ಸಹ ಆಗಿಬಿಡುತ್ತಾರೆ. ಯಾವಗಲೂ ಇದನ್ನ 100ಕ್ಕೆ ನೂರು ಮಾಡಲೇ ಬೇಕು ಎನ್ನುವ ಹುಚ್ಚು ಕೆಲವೊಮ್ಮೆ ಚಿಲ್ ಮಾಡಲು ಮರೆಸಿಬಿಡುತ್ತದೆ .

“ಬೋಲಿಂಗ್ ಅಲೋನ್” ಎಂಬ ಪುಸ್ತಕ 2000ನೇ ಇಸವಿಯಲ್ಲಿ ಪ್ರಕಟ ಆಯಿತು. ಅದರಲ್ಲಿ ಕ್ಲಬ್ ಮೀಟೀಂಗ್ಸ್ 58 ಪ್ರತಿಶತ ಕಡಿಮೆಯಾಗಿದೆ, ಒಟ್ಟಿಗೆ ಊಟ ಮಾಡೋದು 43 ಪ್ರತಿಶತ ಕಡಿಮೆಯಾಗಿದೆ, ಸುಮ್ಮನೆ ಸ್ನೇಹಿತರು ಬಂದು ಮಾತಾಡುವುದು 28 ಪ್ರತಿಶತ ಕಡಿಮೆಯಾಗಿದೆ ಎಂದು ಈ ಪುಸ್ತಕದ ಬರಹಗಾರ ರಾಬರ್ಟ್ ಪುಟ್ಮನ್ ಬರೆದಿದ್ದಾರೆ.

ಹೆಣ್ಣುಮಕ್ಕಳು ತುಂಬಾ ಕಷ್ಟ ಪಟ್ಟು ಅವರ ಸೋಶಿಯಲ್ ನೆಟ್ವರ್ಕ್ಕನ್ನ ಕಾಪಾಡಿಕೊಳ್ಳಬೇಕು. ಲೇಖಕಿ ಜಾಕ್ಲೀನ್ ಓಲ್ಡ್ಸ್ ತನ್ನ ಪುಸ್ತಕದಲ್ಲಿ ಬರೆಯುವ ಸಂಗತಿಗಳು ಬಹಳ. ಮದುವೆ ಅಥವಾ ಮಕ್ಕಳಾದ ಮೇಲೆ ಹೆಣ್ಣುಮಕ್ಕಳು ಬೇಗ ತಮ್ಮ ಸೋಷಿಯಲ್ ಸರ್ಕಲ್ಲಿಂದ ಆಚೆ ಬಂದುಬಿಡುತ್ತಾರೆ, ಗೆಳತಿಯರಿರಬಹುದು ಅಥವಾ ಅವರನ್ನ ಪೋಷಿಸಿದ ಬೇರೆ ಬಂಧುಗಳು ಇರಬಹುದು. ಅದು ಅವರನ್ನ ಐಸೋಲೇಟ್ ಮಾಡಿಬಿಡುತ್ತದೆ. ತಾವು ಏನೋ ಮಹತ್ಕಾರ್ಯ ಮಾಡುತ್ತಿದ್ದೇನೆ ಎಂದೆಲ್ಲಾ ಅನಿಸಿ ಆ ಕೆಲಸದಲ್ಲೇ ಮುಳುಗಿ ಕೆಲವೊಮ್ಮೆ ಮನುಷ್ಯ ಸಂಬಂಧಗಳನ್ನ ಮರೆತೇ ಬಿಡುತ್ತಾರೆ.

ಹ್ಯಾಪಿನಸ್ಸಿಗೆ ಪರ್ಫೆಕ್ಟ್ ಪ್ರಿಸ್ಕ್ರಿಪ್ಷನ್ ಇಲ್ಲ ಆದರೆ ಸ್ವಲ್ಪ ಚಿಲ್ ಮಾಡಿ ಒಂದು ದೀರ್ಘ ಉಸಿರು ಬಿಟ್ಟರೆ ಸಿಗಬಹುದೇನೋ ಉತ್ತರ….

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *