ಮೇಘಸಂದೇಶ/ ನಿನ್ನ ಹಣಕ್ಕೆ ನೀನೇ ಯಜಮಾನಿ – ಮೇಘನಾ ಸುಧೀಂದ್ರ
ನಮ್ಮ ಮಕ್ಕಳನ್ನು ನಾವೇ ಸಾಕುವ ಹಾಗೆ ನಮ್ಮ ದುಡಿಮೆಯ ಹಣವನ್ನು ನಾವೇ ಮ್ಯಾನೇಜ್ ಮಾಡಬೇಕು ಎಂಬುದನ್ನು ನಮ್ಮ ಹೆಣ್ಣುಮಕ್ಕಳು ತಿಳಿಯುವುದು ಯಾವಾಗ? ಹೊರಗೆ ದುಡಿದರೂ ನಮ್ಮದೇನಿದ್ದರೂ ಮನೆಯೊಳಗಿನ ಜವಾಬ್ದಾರಿ, ಹೊರಗಿನದೆಲ್ಲಾ ಗಂಡಸರದು ಎಂಬ ನಂಬಿಕೆ ಬದಲಾಗುವುದು ಯಾವಾಗ? ನಮ್ಮ ಆಲೋಚನೆ ಬದಲಾಗಲು ಇನ್ನೆಷ್ಟು ಶತಮಾನ ಬೇಕು?
ಒಂದು ವಾರದ ಹಿಂದೆ ನನ್ನ ಆಫೀಸಿನಲ್ಲಿ ಯಾವುದೋ ಫೈನಾನ್ಶಿಯಲ್ ಫಾರ್ಮ್ ಭರ್ತಿ ಮಾಡಲು ಹೇಳಲಾಗಿತ್ತು. ನಾನು ನನ್ನ ನೆನಪಿನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಎಲ್ಲೆಲ್ಲಿ ಮಾಹಿತಿ ಇತ್ತೋ ಅಲ್ಲಲ್ಲಿ ಹುಡುಕಿ ತೆಗೆದು ಭರ್ತಿ ಮಾಡಿದೆ. ಸುಮಾರು ನಾಲ್ಕೈದು ಜನ ಮಹಿಳಾ ಸಹೋದ್ಯೋಗಿಗಳು ,” ಮನೆಗೆ ತೆಗೆದುಕೊಂಡು ಹೋಗುತ್ತೇವೆ, ನಾಳೆ ಕೊಡುತ್ತೇನೆ” ಎಂದು ಸಬೂಬು ಹೇಳಿ ಒಂದು ದಿವಸದ ಸಮಯ ಕೇಳಿಕೊಂಡರು. ನಾನು ಸುಮ್ಮನೆ ಕುತೂಹಲಕ್ಕೆ, “ಯಾಕೆ ಮನೇಲಿ ಒಂದು ಕಡೆ ಎಲ್ಲಾ ಬರೆದಿದ್ದೀರಾ” ಎಂದಾಗ “ಇಲ್ಲ ಇಲ್ಲ ನನ್ನ ಪೈನಾನ್ಸ್ ಎಲ್ಲಾ ನನ್ನ ಗಂಡನೇ ನೋಡಿಕೊಳ್ಳೋದು, ಸಂಬಳ ಬಂದ ದಿವಸ ಅವರಿಗೆ ತಿಳಿಸುತ್ತೇನೆ, ಅವರು ಎಲ್ಲಾ ಎಲ್ಲೆಲ್ಲಿ ಏನೇನು ಹೋಗುತ್ತದೆ ಎಂಬ ವಿಷಯವೆಲ್ಲಾ ಅವರದ್ದೆ, ಆಗಾಗ ಬಂದು ಸೈನ್ ಮಾಡಿಸಿಕೊಳ್ಳುತ್ತಾರೆ ಅಷ್ಟೆ, ನನ್ನ ಹೆಸರಲ್ಲಿ ಏನೇನಿದೆ ಎಂಬ ಅರಿವೂ ನನಗಿಲ್ಲ, ನನ್ನ ಟ್ಯಾಕ್ಸ್ ಫೈಲ್ ಮಾಡೋದು ಅವರೇ” ಎಂದು ಹೇಳಿದಾಗ, ನನಗೆ ತಡೆದುಕೊಳ್ಳಲಾಗದೇ, “ನಿಮ್ಮ ಗಂಡ ಏನು ಸಿ.ಎ. ನಾ” ಎಂದು ಕೇಳಿದೆ. “ಇಲ್ಲಪ್ಪ ದುಡ್ಡಿನ ವ್ಯವಹಾರ ಎಲ್ಲಾ ಹುಡುಗಿಯರಿಗೆ ಎಲ್ಲಿ ಗೊತ್ತಾಗುತ್ತದೆ. ಮನೆಯ ಅಡುಗೆ ನನ್ನದು, ಆಚೆಯ ದುಡ್ಡಿನ ವ್ಯವಹಾರ ಅವರದ್ದು , ಆಚೆ ವ್ಯವಹಾರ ಹೆಣ್ಣುಮಕ್ಕಳಿಗೆ ಗೊತ್ತಾಗಲ್ಲ, ನೀನು ಗಂಡುಬೀರಿ ಅಲ್ವಾ ಅದಕ್ಕೆ ಎಲ್ಲಾ ಗೊತ್ತಾಗತ್ತೆ” ಎಂದು ಕೆಟ್ಟ ಜೋಕ್ ಮಾಡಿ ಅವಳೇ ನಕ್ಕಳು.
ನನಗೊಂದು ನಿಮಿಷ ಏನು ಹೇಳೋದು ಅಂತಾನೆ ಗೊತ್ತಾಗದೇ ಸುಮ್ಮನೆ ಇದ್ದೆ. ಇಲ್ಲಿ ಮಹಿಳೆಯರೇ ಆರ್ಥಿಕ ಸಬಲೀಕರಣದ ಮಾತನ್ನಾಡುವವರು ಇನ್ನೂ ಅವರ ದುಡ್ಡನ್ನ ಎಲ್ಲಿ ಹೇಗೆ ಇನ್ವೆಸ್ಟ್ ಮಾಡಬೇಕು ಎಂಬ ವಿಷಯದ ಅರಿವೇ ಇಲ್ಲದಿರುವುದು ನನಗೆ ಬಹಳ ಆಶ್ಚರ್ಯಗೊಳಿಸಿತು. ಹಾಗೆಯೇ ನನ್ನ ಸಿ.ಎ. ಗೆಳತಿ ಹತ್ತಿರ ಮಾತಾಡೋವಾಗ, “ನೀನು ಹೇಳಿದ್ದು ಸರಿ ಕಣೆ, ದೊಡ್ಡ ದೊಡ್ಡ ವ್ಯವಹಾರವೆಲ್ಲಾ ಅವರ ಹೆಸರಲ್ಲೇ ಇರೋದು, ಅದು ಟ್ಯಾಕ್ಸ್ ಏನೋ ಕಡಿಮೆಯಾಗತ್ತೆ ಅಂತ, ಅವರು ಪ್ರತಿ ಬಾರಿ ಬಂದಾಗಲೂ ಇಲ್ಲಿ ನಾಲಕ್ಕು ಕಡೆ ಕ್ರಾಸ್ ಮಾಡಿದ್ದೇವೆ, ಇಲ್ಲಿ ಸಹಿ ಹಾಕಿ ಎಂದು ಗಂಡ ಅಥವಾ ಅಪ್ಪ ಹೇಳಿದ ಮೇಲೆ ನಮ್ಮ ಮುಂದೆಯೇ ಸಹಿ ಹಾಕಿ ಸುಮ್ಮನಿರುತ್ತಾರೆ, ಅವರಿಗೆ ವ್ಯವಹಾರದ ತಲೆಬುಡ ಅರ್ಥವಾಗುವುದಿಲ್ಲ. ಕೇಳಿದರೆ ನಮ್ಮ ಕೈಗೆ ಇಷ್ಟು ದುಡ್ಡು ಬಂದರೆ ಸಾಕು, ಮಿಕ್ಕಿದ್ದೆಲ್ಲಾ ನನಗೆ ಸಂಬಂಧವಿಲ್ಲ ಎಂದು ಕೂಲಾಗಿ ಹೇಳುತ್ತಾರೆ” ಎಂದು ಅವಳು ನನಗೆ ಭಯಾನಕ ಸ್ಟಾಟ್ಸ್ ಹೇಳಿ ಹೆದರಿಸಿದಳು.
ನಮ್ಮ ಸಂಸ್ಕೃತಿಯಲ್ಲಿ ಗೃಹ ಕಾರ್ಯಗಳನ್ನ ಅಚ್ಚುಕಟ್ಟಾಗಿ ಮಾಡುವ ಹೆಣ್ಣನ್ನ ಅತಿ ಎತ್ತರದ ಸ್ಥಾನದಲ್ಲಿ ಕೂರಿಸಿ ಪೂಜಿಸಲಾಗುತ್ತದೆ ಅವಳು ಅಡುಗೆ ಮಾಡಿ, ಮಕ್ಕಳನ್ನ ಒಂದು ರೀತಿಯಲ್ಲಿ ಬೆಳೆಸಿದರೆ ಅವಳ ಕೆಲಸ ಮುಗೀತು. ಮನೆಯ ವ್ಯವಹಾರ ಇನ್ವೆಸ್ಟ್ಮೆಂಟ್ಸ್ ಎಲ್ಲವೂ ಅವಳಿಗೆ ಗೊತ್ತಾಗದೇ ನಡೆಯುತ್ತಿರುತ್ತದೆ. ಮನೆಯ ಖರ್ಚಿಗೆ ಒಂದಷ್ಟು ದುಡ್ಡು ಕೊಟ್ಟು ಅವಳನ್ನ ಸಾಗುಹಾಕುತ್ತಾರೆ. ಅತಿ ರೊಮ್ಯಾಂಟಿಕ್ ಆಗಿ ಆಕೆ , ನನಗೆ ಕುಂಕುಮಕ್ಕೆ ಕೊಟ್ಟ ದುಡ್ಡು, ಹಬ್ಬಕ್ಕೆ ಕೊಟ್ಟ ದುಡ್ಡು ಎಂದು ಯಾವುದೋ ಡಬ್ಬದಲ್ಲಿ ಎತ್ತಿಟ್ಟಿದ್ದನ್ನು ಆಕೆಯ ಸಾಧನೆ ಎಂದು ಬಿಂಬಿಸಲಾಗುತ್ತದೆ. ಇದು ಒಂದು ಭಾಗ. ಮತ್ತೊಂದು ಭಾಗ ಕೆಲಸಕ್ಕೆ ಹೋಗುತ್ತಾರೆ, ಲಕ್ಷಾಂತರ ದುಡಿಯುತ್ತಾರೆ, ಆದರೂ ಹೆಣ್ಣಿಗೆ ನಂಬರ್ಸ್ ಅರ್ಥವಾಗುವುದಿಲ್ಲ ಎಂಬ ಮನಸ್ಥಿತಿಯಿಂದ ಆಚೆಯೇ ಬಂದಿರುವುದಿಲ್ಲ.
ಯುಬಿಸ್ ನ ಸರ್ವೇ ಪ್ರಕಾರ ೫೮ ಪ್ರತಿಶತ ಡುಡಿಯುವ ಹೆಣ್ಣುಮಕ್ಕಳು ತಮ್ಮ ಆರ್ಥಿಕ ನಿರ್ಧಾರಗಳನ್ನು ಅವರ ಗಂಡನಿಗೆ/ ಅಥವಾ ಅಪ್ಪನಿಗೆ ಬಿಡುತ್ತಾರೆ. ಇದರಲ್ಲಿ ಏನು ತಪ್ಪು ಅಥವಾ ಒಪ್ಪು ಎಂದು ಕೇಳುವ ಮುನ್ನ, ಸಂಪಾದನೆ ಮಾಡುವುದು ಎಷ್ಟು ಮುಖ್ಯವೋ ಸಂಪಾದನೆಯನ್ನ ಎಲ್ಲೆಲ್ಲಿ ಹೇಗೆ ಇನ್ವೆಸ್ಟ್ ಮಾಡುವುದು ಎಂಬುದನ್ನು ಕಲಿತುಕೊಂಡರೆ ನಾವು ಯಾರ ಮೇಲೂ ಡಿಪೆಂಡ್ ಆಗುವ ಪ್ರಮೇಯ ಬರುವುದಿಲ್ಲ. ನಮ್ಮ ಜೊತೆ ಯಾವಾಗಲೂ ಯಾರೂ ಇರುವುದಿಲ್ಲ.
ಮೊನ್ನೆ ಶೆರಿಲ್ ಸಾಂಡ್ ಬರ್ಗ್ ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು, “ಲೇಡೀಸ್ ನಿಮ್ಮ ಮೈಮೇಲಿನ ಬಟ್ಟೆ, ನೀವು ಹಾಕಿಕೊಳ್ಳುವ ಕೂದಲಿನ ಬಣ್ಣ, ನಿಮ್ಮಿಷ್ಟದ ಸೆಂಟ್ ನಿಮ್ಮ ಆಯ್ಕೆಯೇ ಆಗಿದ್ದರೆ ನಿಮ್ಮ ದುಡ್ಡು ಕಾಸು ಸಹ ನಿಮ್ಮ ಆಯ್ಕೆಯೇ ಆಗಿರಬೇಕು, ನಿಮ್ಮ ಸ್ವಂತ ಕೆಲಸವನ್ನ ಮತ್ತೊಬ್ಬರಿಗೆ ಡೆಲಿಗೇಟ್ ಮಾಡುವ ಕೆಲಸವನ್ನ ಯಾವತ್ತೂ ಮಾಡಬೇಡಿ, ನಿಮ್ಮ ಮನೆಯ ಪೂರ್ತಿ ವ್ಯವಹಾರಗಳು ನಿಮಗೆ ಗೊತ್ತಿರಬೇಕು, ನನ್ನ ಗಂಡ ಸಡನ್ನಾಗಿ ಹೋದಾಗ ಒಂದು ತಿಂಗಳಾಯಿತು ನನಗೆ ಅವರ ಎಲ್ಲಾ ದುಡ್ಡಿನ ವ್ಯವಹಾರ ತಿಳಿಯಲು. ಈ ತಪ್ಪು ನಿಮ್ಮಿಂದಾಗಬಾರದು, ದುಡ್ಡು ನಿಮ್ಮ ಬಳಿ ಇದ್ದರೆ ಅದರ ಮ್ಯಾನೇಜ್ಮೆಂಟ್ ಸಹ ನಿಮಗೆ ಗೊತ್ತಿರಬೇಕು. ನೀವು ಹೆತ್ತ ಮಕ್ಕಳನ್ನ ಬೇರೆಯವರಿಗೆ ನೋಡಿಕೊಳ್ಳುವ ಜವಾಬ್ದಾರಿ ಕೊಡದಿರುವ ಹಾಗೆ ಇದೂ ಸಹ ಬಹಳ ಮುಖ್ಯ” ಎಂದು ಅವರ ಮಾತು ನಿಲ್ಲಿಸಿದರು.
ಸಂಕ್ರಾಂತಿಗೆ ಸೂರ್ಯನೇ ಪಥ ಬದಲಿಸುತ್ತಾನೆ. ನಮ್ಮ ಆಲೋಚನೆ, ಯೋಜನೆಗಳು ಬದಲಾಗೋದಕ್ಕೆ ಇನ್ನೆಷ್ಟು ಶತಮಾನಗಳು ಬೇಕು ಹೇಳಿ ? ಕಮಾನ್ ಹುಡುಗಿಯರೇ you can be more than a signing authority and make a profit of your money.
- ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Eshtu sariyagi barediddiri Meghana,ishtavaythu.