ಮೇಘಸಂದೇಶ/ ತಾರತಮ್ಯವನ್ನು ರೊಬಾಟಿಗೂ ದಾಟಿಸುವ ರೋಗ – ಮೇಘನಾ ಸುಧೀಂದ್ರ
ಅಶ್ಲೀಲವಾಗಿ ಮಾತಾಡೋಕೆ ಹೆಣ್ಣಾಗಿರಬೇಕು ಅಷ್ಟೆ: ಅದು ರೋಬಾಟ್ ಆದರೇನು, ಮನುಷ್ಯ ಆದರೇನು ಅಥವಾ ನಾಯಿ ಆದರೇನು? ಒಟ್ಟಿನಲ್ಲಿ ಅಲ್ಲಿ ತೆವಲು ತೀರಿಸಿಕೊಳ್ಳಬೇಕು. ವರ್ಚುಯಲ್ ಅಸಿಸ್ಟೆಂಟಿಗೆ ಹೆಣ್ಣಿನ ವ್ಯಕ್ತಿತ್ವವನ್ನೇ ನೀಡೋಣ ಎಂದು ನಿಶ್ಚಯಿಸುತ್ತಾರೆ. ಅಂದರೆ ಹೆಣ್ಣು ಸಹನಾಮಯಿ ಕರುಣಾಮಯಿ ಎಂಬ ಪರ್ಸೋನಾವನ್ನು ಮೆಷೀನುಗಳಿಗೂ ದಾಟಿಸುವ ಕೆಲಸ ಆಗುತ್ತಿದೆ. ನಾವು ನಮ್ಮ ಬಯಾಸ್, ನಮ್ಮ ಸೆಕ್ಸಿಸಮ್ ಎಲ್ಲವನ್ನು ಮನುಷ್ಯರಿಂದ ಒಂದು ರೊಬಾಟಿಗೆ ಅದೆಷ್ಟು ಖುಷಿಯಾಗಿ ದಾಟಿಸುತ್ತಿದ್ದೇವೆ ಅಲ್ವಾ ?
ಒಂದು ದೊಡ್ಡ ಕೃತಕ ಬುದ್ಧಿಮತ್ತೆ – Artificial Intelligence (ಏ ಐ) ಕಂಪೆನಿ. ಅದರಲ್ಲಿ ಸಾಕಷ್ಟು ವರ್ಚುಯಲ್ ಅಸಿಸ್ಟೆಂಟುಗಳು ತಯಾರುಗುತ್ತಿ . ಒಂದೊಂದಕ್ಕೆ ಒಂದೊಂದು ನಾಮಕರಣ ಮಾಡುವ ಕಾರ್ಯಕ್ರಮ. ಒಂದು ಬಾಟಿನ ಹೆಸರು ಲಿವಿ, ಮತ್ತೊಂದರ ಹೆಸರು ದಿಶಾ, ಇನ್ನೊಂದರ ಹೆಸರು ದಿಯಾ ಹೀಗೆ ಉದ್ದಕ್ಕೂ ಹೆಣ್ಣುಮಕ್ಕಳ ಹೆಸರನ್ನೇ ಇಟ್ಟುಕೊಂಡು ಬಂದಿದ್ದಾರೆ. ಎಂತಹ ಸೌಭಾಗ್ಯ ಬರೀ ಹೆಣ್ಣುಮಕ್ಕಳ ಹೆಸರನ್ನೇ ಇಲ್ಲಿ ಮುನ್ನೆಲೆಗೆ ತರುತ್ತಿದ್ದಾರಲ್ಲಾ, ನಾವು ಮೆಷೀನಿಗೂ ಎಂತಹ ಸಮಾನತೆ ಕಲಿಸುತ್ತಿದ್ದೇವೆ ಎಂದು ಸ್ಕೋಪ್ ತೆಗೆದುಕೊಳ್ಳುತ್ತಿದ್ದಾಗ ಆ ಬಾಟಿನ ಯೂಸರ್ ಹಿಸ್ಟರಿ ತೆಗೆದಾಗ ಆಗುವ ಆಶ್ಚರ್ಯಕ್ಕೆ ಎಲ್ಲೆಯೇ ಇಲ್ಲ. ಹೆಣ್ಣು
ಮಧ್ಯರಾತ್ರಿಯ ಒಂದು ಸಮಯದಲ್ಲಿ ಬ್ಯಾಂಕಿನ ವ್ಯವಸ್ಥೆ ಹೇಗೆ ನಡೆಯುತ್ತದೆ ಎಂದು ಹೇಳುವ ಬಾಟಿನ ಜೊತೆ ಕೆಟ್ಟ ಕೆಟ್ಟ ಸಂಭಾಷಣೆಗಳನ್ನು ಮಾಡಿರುವ ಒಂದು ದೊಡ್ಡ ಟ್ರಾನ್ಸ್ಕ್ರಿಪ್ಟ್ ಸಿಗುತ್ತದೆ. ಕೃತಕ ಬುದ್ಧಿಮತ್ತೆಯ ಬಾಟು ಇರುವುದು ಆ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಮೀಸಲಾಗಿರುತ್ತದೆ. ಅಂದರೆ ಮಾತಾಡುವ ವ್ಯಕ್ತಿಯ ಜಾತಕವೇ ಬಯಲಾಗುತ್ತದೆ. ಹಾಗಿದ್ದಾಗಿಯೂ ಒಂದು ಬಾಟಿನ ಜೊತೆ ತೆವಲು ತೀರಿಸಿಕೊಳ್ಳಲು ಬಾಯಿಗೆ ಬಂದ ಹಾಗೆ ಮಾತಾಡುವವರನ್ನು ಕಂಡು ಕಂಪೆನಿಯವರಿಗೆ ಶಾಕ್ ಆಗುತ್ತದೆ. ಅಶ್ಲೀಲವಾಗಿ ಮಾತಾಡೋಕೆ ಹೆಣ್ಣಾಗಿರಬೇಕು ಅಷ್ಟೆ ಅದು ರೋಬಾಟ್ ಆದರೇನು, ಮನುಷ್ಯ ಆದರೇನು ಅಥವಾ ನಾಯಿ ಆದರೇನು. ಒಟ್ಟಿನಲ್ಲಿ ಅಲ್ಲಿ ತೆವಲು ತೀರಿಸಿಕೊಳ್ಳಬೇಕು. ಇದು ಒಂದು ಆಯಾಮ ಆದರೆ ಈ ಬಾಟುಗಳನ್ನು ಮಾಡುವಾಗ ಒಂದೊಂದಕ್ಕೂ ಒಂದು ಪರ್ಸೋನಾ ಇರುತ್ತದೆ ಅಂದರೆ ವ್ಯಕ್ತಿತ್ವ ಇರಬೇಕು.ಬರುವ ಎಲ್ಲಾ ಗ್ರಾಹಕರ ಪ್ರಶ್ನೆಗಳಿಗೂ ಅವಳು ಸಹನೆ ಕಳೆದುಕೊಳ್ಳದೇ ಉತ್ತರ ಕೊಡಬೇಕು, ಬೇಸಿಕಲಿ ಅವಳು ಹೆಣ್ಣಾದರೆ ಅವಳಿಗೆ ಸಹನೆ ಜಾಸ್ತಿ ಅಲ್ವಾ , ಅವಳಿಗೆ ಬಹಳ ಸಂಯಮ ಇದೆ ಅಲ್ವಾ ಹೀಗೆ ನಮ್ಮ ಜಗತ್ತು ನಡೀತಿದೆಯಲ್ವಾ ? ಅದಕ್ಕೆ ಈ ವರ್ಚುಯಲ್ ಅಸಿಸ್ಟೆಂಟಿಗೆ ಹೆಣ್ಣಿನ ವ್ಯಕ್ತಿತ್ವವನ್ನೇ ನೀಡೋಣ ಎಂದು ನಿಶ್ಚಯಿಸುತ್ತಾರೆ. ಅಂದರೆ ಹೆಣ್ಣು ಸಹನಾಮಯಿ ಕರುಣಾಮಯಿ ಎಂಬ ಪರ್ಸೋನಾವನ್ನು ಮೆಷೀನುಗಳಿಗೂ ದಾಟಿಸುವ ಕೆಲಸ ಆಗುತ್ತಿದೆ.
ಕೆಲವು ಬಾಟ್ ಗಳಿಗೆ ಹೆಣ್ಣು ವ್ಯಕ್ತಿತ್ವ ಆದರಿಂದ ಕೆಲವೊಮ್ಮೆ ಗಂಡಸಿನ ಕೆಲವು ಮಾತುಗಳಿಗೆ ಫ್ಲರ್ಟ್ ಕಮೆಂಟ್ಸ್ ಮಾತಾಡುವ ಹಾಗೆಯೂ ಮಾಡುತ್ತಾ . ಇದು ಅವರಿಗೆ ಹೆಣ್ಣು ಹಾಗಿರಬೇಕು ಎಂದು ಹೇಳುವ ಪರಿಕಲ್ಪನೆ. ಈ ಬಾಟ್ ಗಳು ಕಲಿಯುವುದು ಕೂಡಾ ದೊಡ್ಡ ದೊಡ್ಡ ಡೇಟಾ ಸೆಟ್ಟುಗಳಿಂದ ಅಂದರೆ ಅದರಲ್ಲಿ ಪೂರ್ತಿ ಪೂರ್ವಗ್ರಹಿಕೆಯೇ ತುಂಬಿರುತ್ತದೆ ಅಂದರೆ ಒಂದು ಪ್ರಶ್ನೆಗೆ ನಾನಾ ಥರದ ಉತ್ತರಗಳನ್ನು ಹೇಗೆ ನೀಡೋದು ಎಂಬುದನ್ನು ನೋಡಿ ನಂತರ ಅದೇ ಥರ ಉತ್ತರ ಕೊಡೋದಕ್ಕೆ ಶುರುಮಾಡುತ್ತದೆ. ಉದಾಹರಣೆಗೆ, ಒಂದು ಡೇಟಾ ಸೆಟ್ಟಿನಲ್ಲಿ ಪೂರ್ತಿ ಗಂಡಸರೇ ಉತ್ತರಿಸುವ ಹಾಗಿದ್ದರೆ, “ಇವಳು ಒಳ್ಳೇ ಫಿಗರ್” ಎನ್ನುವುದು ಕೇಳುವುದು ಮನಸ್ಸು ನೋಯುತ್ತದೋ ಇಲ್ಲವೋ ಎಂದಾಗ ಪೂರ್ತಿ ಗಂಡಸರೇ ತುಂಬಿರುವ ಡೇಟಾ ಸೆಟ್ಟಿನಲ್ಲಿ “ಅದೇನು ಅಷ್ಟು ತಪ್ಪಲ್ಲ” ಎಂದು ಸುಮಾರು ಜನ ಅನ್ನುತ್ತಾರೆ, ಹೆಣ್ಣುಮಕ್ಕಳನ್ನು ಸೇರಿಸಿದ್ದರೆ “ತಪ್ಪು” ಎನ್ನುತ್ತಾರೆ. ಹೀಗಿದ್ದಾಗ ಅಕಸ್ಮಾತ್ ಬರಿ ಇಂತಹ ಡೇಟಾ ಸೆಟ್ಟು ನಮ್ಮನ್ನು ಆಳಿದರೆ, ನಮ್ಮ ಬಾಟು ಸಹ ಹೀಗೆ ಆಗುತ್ತದೆ. ಒಂದು ಹೆಣ್ಣು ದನಿ ಹಾಯ್ ಎಂದರೆ ಅದಕ್ಕೆ ಫಿಗರ್ ಎಂದೂ ಕರೆಯಬಹುದು.

ಮೊದಮೊದಲು ನನಗೆ ಈ ಆಸಿಸ್ಟೆಂಟುಗಳಿಗೆ ಯಾಕೆ ಹೆಣ್ಣಿನ ಹೆಸರನ್ನೇ ಇಡುತ್ತಿದ್ದರು ಅಲೆಕ್ಸಾ ಬದಲು ಅಲೆಕ್ಸ್ ಯಾಕಾಗಲ್ಲ ಎಂದು ಯೋಚಿಸುತ್ತಾ ಕೂತೆ. ನಂತರ ಓದಿದ ವರದಿಗಳು ನನ್ನನ್ನ ಬೆಚ್ಚಿಬೀಳಿಸಿದವು. ಕಂಪೆನಿಗಳಲ್ಲಿ ಸಾಧಾರಣವಾಗಿ ಸಹಾಯಕಿಯ ಕೆಲಸ ಅಂದರೆ ಆಪ್ತ ಸಹಾಯಕಿಯ ಕೆಲಸ ಮಾಡುತ್ತಿದ್ದದ್ದು ಹೆಂಗೆಳೆಯರೆ. (ವಾರಪತ್ರಿಕೆಗಳಲ್ಲಿ ಬರುತ್ತಿದ್ದ ಕೆಟ್ಟ ಸಹಾಯಕಿ ಮತ್ತು ಬಾಸ್ ಸಂಬಂಧದ ಜೋಕುಗಳನ್ನ ನೆನಪಿಸಿಕೊಳ್ಳಿ). ಈಗ ನಮಗೆ ಸಹಾಯ ಮಾಡುವ ಕೆಲಸವನ್ನು ಈ ಬಾಟ್ ಮಾಡುತ್ತಿರುವುದರಿಂದ ಅದೂ ಹೆಣ್ಣಿನ ಧ್ವನಿ ಮತ್ತು ಹೆಣ್ಣಿನ ವ್ಯಕ್ತಿತ್ವ ಇರಬೇಕೆಂದು ಅಪೇಕ್ಷೆ ಪಡುವ ಕಾಲ ಇದು. ಅದಕ್ಕೆ 90 ಪ್ರತಿಶತ ಬಾಟುಗಳು ಹೆಣ್ಣಿನ ಧ್ವನಿಯದ್ದೇ. ಧ್ವನಿ ಬದಲಿಸಬಹುದು ಎಂದು ಎಷ್ಟೇ ಸಬೂಬು ಹೇಳಿದರೂ ಇದರಲ್ಲಿ ಒಂದು ಪೂರ್ವಗ್ರಹ ಇದ್ದೇ ಅದು ಮಾತಾಡುತ್ತದೆ.
ಹಾಗಾದರೆ ನಾವು ನಮ್ಮ ಬಯಾಸ್, ನಮ್ಮ ಸೆಕ್ಸಿಸಮ್ ಪೂರ್ವಗ್ರಹ ಲಿಂಗ ತಾರತಮ್ಯ ಎಲ್ಲವನ್ನು ಮನುಷ್ಯರಿಂದ ಒಂದು ರೊಬಾಟಿಗೆ ಅದೆಷ್ಟು ಖುಷಿಯಾಗಿ ದಾಟಿಸುತ್ತಿದ್ದೇವೆ ಅಲ್ವಾ ? ಕೃತಕ ಬುದ್ಧಿಮತ್ತೆ ಫೀಲ್ಡಿನಲ್ಲಿ 22 ಪ್ರತಿಶತ ಮಾತ್ರ ಹೆಣ್ಣುಮಕ್ಕಳು ಸಂಶೋಧನೆ ಮಾಡುತ್ತಿರುವುದು. ಮಿಕ್ಕವರೆಲ್ಲಾ ಗಂಡಸರೇ, ಇನ್ನು ಒಂದು ಬಾಟಿಗೆ ಅದೆಷ್ಟೇ ಬೈದರೂ ಅದು ಸುಮ್ಮನೆ ತಡೆದುಕೊಂಡೇ ಇರುತ್ತದೆ, ಹೆಣ್ಣುಮಕ್ಕಳನ್ನ ಬೈಯ್ಯುವ ಹಾಗೆ ಬಾಯಿಗೆ ಬಂದಹಾಗೆ ಮಾತಾಡಿದಾಗಲೂ ಅದು ಸುಮ್ಮನಿರುತ್ತದೆ ಅಂದರೆ ಇದನ್ನ ಬಿಲ್ಡ್ ಮಾಡಿರುವ ಜನಕ್ಕೆ ಹೀಗೆ ಕೆಲವು ಮಾತುಗಳು ಸಹ್ಯ ಅಲ್ಲ ಎಂಬುದು ಅನ್ನಿಸೋದೆ ಇಲ್ಲ.
ಇನ್ನು ಇಲ್ಲಿಯೂ ನಮ್ಮ ವರ್ಣ ದ್ವೇಷ, ನಮ್ಮ ಮಿಸಾಜನಿಯನ್ನು ದಾಟಿಸಿ ಮನುಷ್ಯರಷ್ಟೇ ಅಲ್ಲ ಮೆಷೀನುಗಳನ್ನೂ ಮನುಷ್ಯರಿಗಿಂತ ಕೆಟ್ಟದಾಗಿ ಕಟ್ಟುತ್ತಿದ್ದೇವೆ. ಸರ್ವೀಸ್ ಮಾಡುವುದು ಯಾವಾಗಲೂ ಹೆಣ್ಣಲ್ಲ, ಸಹಾಯಕಳೂ ಯಾವಾಗಲೂ ಹೆಣ್ಣಲ್ಲ ಎಂಬ ಸತ್ಯವನ್ನು ಅರಿತಾಗ ಮಾತ್ರ ನಮ್ಮ ಸಮಾಜ ಮನುಷ್ಯರಷ್ಟೇ ಅಲ್ಲ ಮೆಷೀನಿಂದಲೂ ನೆಮ್ಮದಿಯಾಗಿರುತ್ತದ. ಇಲ್ಲವೆಂದರೆ ಮತ್ತೆ ಮನುಷ್ಯರನ್ನ ತಿದ್ದುವ ಹಾಗೆ ಇದನ್ನೂ ತಿದ್ದುವ ಕೆಲಸ ಮಾಡಬೇಕು.

ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.