ಮೇಘಸಂದೇಶ/ ಗಿಲ್ಟಿ ಆಗಿ ಮನಸ್ಸನ್ನು ಪಲ್ಟಿ ಹೊಡೆಸಬೇಡಿ! – ಮೇಘನಾ ಸುಧೀಂದ್ರ

ಇಡೀ ಕುಟುಂಬದ ಕೆಲಸ, ಎಲ್ಲ ಬಂಧುಬಾಂಧವರ ಸೇವೆ ನಮ್ಮದೇ ಜವಾಬ್ದಾರಿ ಎಂದು ಹೆಂಗಸರು ನಂಬಿರುತ್ತೇವೆ; ಅವೆಲ್ಲ ಹೆಂಗಸರದೇ ಜವಾಬ್ದಾರಿ ಎಂದು ನಮ್ಮ ಸುತ್ತಮುತ್ತ ಇರುವ ಹೆಂಗಸರೂ ಪದೇಪದೇ ಹೇಳುತ್ತಿರುತ್ತಾರೆ. ಆದರೆ ಮನೆಗೆಲಸದಿಂದ ಬ್ರೇಕ್ ತೆಗೆದುಕೊಂಡಾಗ, ಬೇರೆ ಊರಿಗೆ ಹೋದಾಗ ಏನೋ ತಪ್ಪು ಮಾಡಿದವರಂತೆ ಗಿಲ್ಟಿನಿಂದ ಕೊರಗುವುದು ಬೇಡ. ಅಕಸ್ಮಾತ್ ಅದರ ಜವಾಬ್ದಾರಿ ಬಿಟ್ಟರೆ ಅದೇನು ಮಹಾಪರಾಧ ಅಲ್ಲ! ಮನೆಗೆಲಸದ ಜವಾಬ್ದಾರಿ, ಹಿರಿಯರ ಆರೈಕೆ, ಮಕ್ಕಳ ಪಾಲನೆ ಗಂಡ- ಹೆಂಡತಿ ಇಬ್ಬರಿಗೂ ಸೇರಿದ್ದು ಎಂಬ ಚಿಂತನೆ ಇಬ್ಬರಲ್ಲೂ ಇರುವುದು ಸೂಕ್ತ.

ಸಂದರ್ಭ 1

4 ಜನ ಹೆಣ್ಣುಮಕ್ಕಳು ಆಚೆ ಊಟಕ್ಕೆ ಹೋಗಿದ್ದಾರೆ, ಹಾಗೆ ಉಭಯ ಕುಶಲೋಪರಿ ಮಾತಾಡಿ ಆಮೇಲೆ ಒಂದು ನಿಮಿಷ ಗಡಿಯಾರ ನೋಡಿಕೊಂಡು ಗಬಗಬ ತಿನ್ನುತ್ತಾ ಪಾರ್ಸಲ್ಲೂ ಕಟ್ಟಿಸ್ಕೊಂಡು ಮನೆಗೆ ಹೋಗುವಷ್ಟರಲ್ಲಿ ಗಂಡ ಒಲೆ ಹೊತ್ತಿಸಿ ಅಡುಗೆ ಮಾಡುತ್ತಿರುತ್ತಾನೆ. “ಅಯ್ಯೋ ಸಾರಿ ರೀ ನಿಮ್ಮನ್ನ ಬಿಟ್ಟು ಆಚೆ ಹೋದೆ ನಿಮಗೇ ಅಂತ ಪಾರ್ಸಲ್ ತಂದಿದ್ದೀನಿ ತಗಳ್ಳಿ” ಎಂದು ಮಸ್ಕಾ ಹೊಡೆದು ಮತ್ತೆ ಅದೇ ಗೆಳತಿಯರ ಗುಂಪಿನಲ್ಲಿ, “ಐ ಫೀಲ್ ಗಿಲ್ಟಿ ಯಾ” ಎಂದು ಗಂಡ ಆರಿದ ಫ್ರೈಡ್ ರೈಸ್ ತಿಂದ ಬೇಜಾರುಬಟ್ಟುಕೊಳ್ಳುವ ಹೆಂಗೆಳೆಯರು.

ಸಂದರ್ಭ 2

ಮಧ್ಯ ವಯಸ್ಸಿನ ಅಮ್ಮ ಆಚೆ ಊರಿಗೆ ಹೋಗಿರುತ್ತಾಳೆ. ತನ್ನ ಮಕ್ಕಳಿಗೆ, ಗಂಡನಿಗೆ ಅಡುಗೆ ಮಾಡಿಕೊಳ್ಳಿ ಎಂದು ಹೇಳಿ ತಾನು ಊರಿಗೆ ಹೋದರೂ ಅರ್ಧರ್ಧ ಘಂಟೆಗೆ ಫೋನ್ ಮಾಡಿ ಏನು ಅಡುಗೆ, ಏನು ಊಟ ಏನು ತಿಂಡಿ ಎಲ್ಲವನ್ನು ಕೇಳಿ ಮಾಡಿ ಮನೆಗೆ ಬಂದ ತಕ್ಷಣ ಆಕೆಯೇ ಎಲ್ಲಾ ಅಡುಗೆ ಮಾಡಿ ಸ್ವೀಟು ಮಾಡಿ ಬಡಿಸುವ ಕಾರ್ಯಕ್ರಮ, ಯಾಕೆ ಎಂದರೆ “ಅಯ್ಯೋ ಪಾಪ ನಾನು ಮಜಾ ಮಾಡ್ತಿದ್ದೆ ಆದರೆ ಪಾಪ ನೀವು ಇಲ್ಲೇ ಇದ್ರಿ ಅದಕ್ಕೆ ನನಗೊಂಥರಾ ಅನ್ನಿಸಿತು” ಎಂದು ಹೇಳುವ ಮಾತುಗಳು

ಈ ಎರಡೂ ಸಂದರ್ಭಗಳಲ್ಲಿ ಕಾಣುವ ಒಂದು ಕಾಮನ್ ಪಾಯಿಂಟ್ ಏನೆಂದರೆ ಅದು ಗಿಲ್ಟ್. ಹೆಣ್ಣುಮಕ್ಕಳನ್ನ ಈ ಗಿಲ್ಟಿಂದ ಸಿಕ್ಕಾಪಟ್ಟೆ ಆಟ ಆಡಿಸೋದು ಅವರ ಸುತ್ತ ಮುತ್ತ ಇರುವವರಿಗೆ ಚೆನ್ನಾಗಿ ಅರ್ಥ ಆಗಿದೆ. ಒಂದು ಹುಡುಗಿ  ತನ್ನ ತಾಯಿ ತಂದೆಯ ಜೊತೆ ಮದುವೆಯಾದ ಮೇಲೆ ತುಂಬಾ ದಿವಸ ಇದ್ದರೆ ಅವಳಿಗೆ ಮತ್ತು ಅವಳ ಗಂಡನಿಗೆ ತೊಂದರೆ ಇಲ್ಲದಿದ್ದರೂ ಸಹ ಸುತ್ತಮುತ್ತಲಿನ ಜನಕ್ಕೆ ಮನೆಯವರಿಗೆ ಜೊತೆ ಜೊತೆಗೆ ಮನೆಗೆ ಕೆಲಸ ಮಾಡಿಕೊಡುವುದಕ್ಕೆ ಬರುವುವವರಿಗೂ ಆ ಹುಢುಗಿಯನ್ನು ಗಿಲ್ಟಿಯಾಗಿಸಲು ಕಷ್ಟ ಪಡುತ್ತಾರೆ. ಅವರ ಮಾತುಗಳು ಹೇಗೆ ಅಂದರೆ ತನ್ನ ತಂದೆ ತಾಯಿಯನ್ನು ತಾನು ಚೆನ್ನಾಗಿ ನೋಡಿಕೊಳ್ಳೋದರ ಬದಲು ಸಮಾಜದ ,ಮತ್ತು ರೋಡಿನಲ್ಲಿರುವವರ ಮಾತಿಗೆ ಸರಿಯಾಗಿರಬೇಕು ಅನ್ನೋದೆ ಆಗಿರುತ್ತದೆ. ಹೀಗೆ ಒಂದು ಹುಡುಗಿಯನ್ನು ತನ್ನಷ್ಟಕ್ಕೆ ತಾನು ಇರುವುದಕ್ಕೆ ಬಿಡದೆ ಅವಳನ್ನು ನಿರ್ದೇಶಿಸುವ ಪ್ರಯತ್ನ ಮಾಡುತ್ತಾರೆ.

ಒಂದು ಹೆಣ್ಣು ಮಗಳು ಕೆರಿಯರಿನಲ್ಲಿ ಚೆನ್ನಾಗಿ ಮಾಡುತ್ತಿದ್ದರೆ, ಅಥವಾ ಅವಳ ಕೆಲಸದ ನಂತರ ಇನ್ಯಾಯುವುದೋ ಹಾಬಿಯಲ್ಲಿ ಆರಾಮಾಗಿದ್ದರೆ “ಓಹ್ ಇವಳು ನೋಡು ಮನೆಯ ಕಡೆ ನಯಾ ಪೈಸೆ ನೋಡೋದಿಲ್ಲ ಏನ್ ಮಾಡಿದ್ರೇನು” ಎಂದು ಹೀಯಾಳಿಸುವ ಮಾತುಗಳು ಬರುತ್ತದೆ. ಈ ಸಂಭ್ರಮಕ್ಕೆ ಆಸಕ್ತಿ ಇಲ್ಲದಿದ್ದರೂ ಇಲ್ಲ ನಾನು ಮನೆಯ ಕೆಲಸ ಕಲಿಯಲೇ ಬೇಕು ಎಂದು ಹಠ ತೊಟ್ಟು ತಮ್ಮ ಜೀವನವನ್ನು ತ್ಯಾಗಮಯಿಗಳಾಗಿ ಕಳೆಯಲಿ ಎಂಬ ಸದುದ್ದೇಶ ಕೆಲವರಿಗೆ ಇರುತ್ತದೆ ಇದನ್ನೆಲ್ಲಾ ಸಾಧಿಸೋದು ಅವರು ಈ ಗಿಲ್ಟ್ ಟ್ರಿಪ್ ಮಾಡಿಸಿಯೇ. ಇಂಥದಕ್ಕೆ ಹೆಣ್ಣುಮಕ್ಕಳು ಬೇಗ ಬಲಿಯಾಗುತ್ತಾರೆ. ಅವರನ್ನ ಭಾವನಾತ್ಮಕವಾಗಿ ಬೇಕ ಕುಗ್ಗಿಸಬಹುದು ಎಂಬ ಅಂಶದಿಂದಲೋ ಏನೋ.

ಇನ್ನು ಮದುವೆಯಾಗದೇ ಸಿಂಗಲ್ ಆಗಿರುತ್ತೇವೆ ಎಂದು ಇರುವ ಹೆಣ್ಣುಮಕ್ಕಳಿಗಂತೂ “ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂತಸವನ್ನು ನೀನು ಮಿಸ್ ಮಾಡಿಕೊಳ್ಳುತ್ತೀಯ” ಎಂದು ಹೇಳಿ ಹೇಳಿ ಅವರನ್ನ ಒಂದು ಗಿಲ್ಟ್ ಟ್ರಿಪ್ಪಿಗೆ ದೂಡುತ್ತಾರೆ. ಹೆಣ್ಣುಮಕ್ಕಳು ಒಬ್ಬರೇ ಇರಬಾರದು ಇದ್ದರೆ ಅವರಿಗೆ ಕಷ್ಟ ಎಂದೇ ಬಿಂಬಿಸಲಾಗುತ್ತದೆ. ಅದರ ಜೊತೆಗೆ ತಾಯ್ತನವನ್ನು ಅನುಭವಿಸದಿದ್ದರಂತೂ ಅವರನ್ನು ಅದೆಷ್ಟು ಗಿಲ್ಟಿಯಾಗಿಸಿಬಿಡುತ್ತಾರೆ ಎಂದರೆ ಅವರು ಜೀವನದ ಸುಖ ಸಂತೋಷವನ್ನೆಲ್ಲ ಕಳೆದುಕೊಂಡಿರುವ ಹಾಗೆ ಮಾಡಿಬಿಡುತ್ತಾರೆ.

ಇದನ್ನೇ ಮನಸ್ಸಿನಲ್ಲಿ ಆಲೋಚಿಸಿ ಆಲೋಚಿಸಿ ಹೆಣ್ಣುಮಕ್ಕಳು ಕೆಲವೊಮ್ಮೆ ಡಿಪ್ರೆಶನ್ನಿಗೂ ಹೋಗಿದ್ದಾರೆ. ಹೆಣ್ಣುಮಕ್ಕಳು ಸ್ವಲ್ಪ ಬೇರೆಯವರ ಮಾತುಗಳನ್ನ ಕೇಳಿ ತಮ್ಮ ಜೀವನವನ್ನು ನಡೆಸುವ ಕ್ರಮವನ್ನು ಕೈಬಿಡಬೇಕು. ಯಾರೋ ಏನೋ ಅನ್ನುತ್ತಾರೆ ಎಂದು ಅವರು ಮೆಚ್ಚಿಸಲೇ ಜೀವನವನ್ನು ನಡೆಸುತ್ತಿರುತ್ತಾರೆ. ಒಮ್ಮೊಮ್ಮೆ ಅದು ಅವರ ಜೀವನ ಶೈಲಿಯನ್ನೇ ಬದಲಾಯಿಸಿಬಿಡುತ್ತದೆ.

ಒಬ್ಬೊಬ್ಬರ ಜೀವನ ಒಂದೊಂದು ಥರಹ ಅನ್ನೋದು ಅಂತು ಸತ್ಯ, ಅದರಲ್ಲಿ ಅವರು ಖುಷಿಯನ್ನು ಕಂಡುಕೊಳ್ಳುತ್ತಾರೆ ಹಾಗಿದ್ದಾಗ ನಮ್ಮ ಜೀವನವೇ ಅತ್ಯುತ್ತಮ ಎಂದು ಹೇಳಿ ಅದನ್ನ ಬೇರೋಬ್ಬರ ಮೇಲೆ ಹೇರಿಕೆ ಮಾಡಿ ಅವರನ್ನ ಗಿಲ್ಟಿಯಾಗಿಸಿ ಮತ್ತೂ ಡಿಫ್ರೆಷನ್ನಿಗೆ ತಳ್ಳುವ ಹುನ್ನಾರವನ್ನು ಎಲ್ಲರೂ ಮಾಡುತ್ತಿರುತ್ತಾರೆ. ಇದಕ್ಕೆ ಹೆಣ್ಣುಮಕ್ಕಳು ಬಲಿಯಾಗಬಾರದು. ಅವರ ಜೀವನವನ್ನು ಅವರಿಗೆ ಬೇಕಾದ ಹಾಗೆ ನಡೆಸುವ ಅಧಿಕಾರ ಅವರಿಗಿದೆ ಮತ್ತು ಅದಕ್ಕೆ ಅಪರಾಧಿ ಭಾವನೆಯಲ್ಲಿ ಇರುವ ಅವಶ್ಯಕತೆ ಇಲ್ಲ. ಮನೆಯೇ ಮಂತ್ರಾಲಯವಾದರೂ ಅಕಸ್ಮಾತ್ ಅದರ ಜವಾಬ್ದಾರಿ ಬಿಟ್ಟರೆ ಅದೇನು ಮಹಾಪರಾಧ ಅಲ್ಲ ಅದಕ್ಕೆ ಅಷ್ಟೆಲ್ಲಾ ಅಂದುಕೊಳ್ಳೋ ಅವಶ್ಯಕತೆ ಇಲ್ಲ.

ತಮ್ಮ ಜೀವನವನ್ನು ಸುಖಿಸುವುದಕ್ಕೆ ಗಿಲ್ಟಿಯಾಗುವ ಅವಶ್ಯಕತೆ ಹೆಣ್ಣುಮಕ್ಕಳಿಗೆ ಇಲ್ಲ. ಅದನ್ನ ಅರಿತರೆ ಜೀವನ ಸುಗಮ…

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *