ಮೇಘಸಂದೇಶ / ಔಕಾತ್ ಅನ್ನುವ ಪದ ಒಗೆಯೋಣ – ಮೇಘನಾ ಸುಧೀಂದ್ರ

ಮಾನಭಂಗ ಮಾಡಿ ಸಾಯಿಸುವಾಗಲೂ ತನ್ನ ಅಮ್ಮನನ್ನು ಸಾಯಿಸುವಾಗಲೂ ಗಂಡಸರಿಗೆ ಒಂದೇ ಮನೋಭಾವ – ಹೆಣ್ಣು ತನ್ನ ಸ್ಥಾನ ಮತ್ತು ಅದರ ಮಿತಿಯನ್ನು ಅರಿತುಕೊಂಡು ಇಟ್ಟ ಹಂಗೆ ಇರಬೇಕು. ಕೊನೆಗೆ ಈ ಆಧುನಿಕ ಕಾಲದ ಅತ್ಯಾಧುನಿಕ ಆಫೀಸುಗಳಲ್ಲೂ ಅದೇ ಮನೋಭಾವ ಇರುವುದೆಂದರೆ? ಆಗಲೂ ಈಗಲೂ ಅದನ್ನು ಯಾಕೆ ಸಹಿಸಿಕೊಳ್ಳಬೇಕು? ಯಾಕೆ ಸುಮ್ಮನಿರಬೇಕು?

ಸಂಧ್ಯಾ ಹೊಸ ಕಂಪೆನಿಗೆ ಕೋಡಿಂಗ್ ಟೀಮಿಗೆ ಸೇರಿಕೊಂಡಳು. ಸೇರುವ ಮುನ್ನವೇ ಅವಳ ಮೇಲೆ ಸುಮಾರು ಸಂದೇಹಗಳು ಇದ್ದವು. ಅವಳಿಗೆ ಕೋಡಿಂಗ್ ಬರುತ್ತದಾ, ಅಥವಾ ಅವಳಿಗೆ ಮದುವೆಯಾಗಿದೆ, ಇಂತಹ ಜವಾಬ್ದಾರಿಗಳನ್ನೆಲ್ಲಾ ನಿಭಾಯಿಸುವುದಕ್ಕೆ ಸಾಧ್ಯವಾ ಎಂದು. ಹಾಗು ಹೀಗೂ ಹೊಡೆದಾಡಿ ಕೆಲಸಕ್ಕೆ ಸೇರಿಕೊಂಡಳು. ಸೇರಿದ ದಿವಸ ಬಾಸ್ ಮತ್ತು ಎಚ್ ಆರ್ ಹೇಳಿದ್ದು, “ಅದು ಸದ್ಯಕ್ಕೆ ಪ್ರಾಜೆಕ್ಟ್ ಇಲ್ಲ, ನೀವು ಯಾಕೆ ಟೆಸ್ಟಿಂಗ್ ಮಾಡಬಾರದು” ಎಂದು. ಸರಿ ಕೆಲಸ ಕೆಲಸವೇ ಎಂದು ಸಂಧ್ಯಾ ತುಟುಕ್ ಪಿಟಿಕ್ ಎನ್ನದೆ ಕೆಲಸ ಶುರುಮಾಡಿದ್ದಳು. ಅವಳ ಕೆಲಸದಲ್ಲಿ ಯಥಾಪ್ರಕಾರ ಗಂಡಸರೇ ಜಾಸ್ತಿ ತುಂಬಿದ್ದರು. ಅವರ ಕೆಲಸವನ್ನ ನೋಡಿ ಇದು ಪ್ರಾಡಕ್ಟ್ ಚೆನ್ನಾಗಿದೆ/ಚೆನ್ನಾಗಿಲ್ಲ ಎಂದು ಹೇಳುವ ಕೆಲಸ. ಹಿಂದೆ ಇದೇ ಕೆಲಸ ಮಾಡುತ್ತಿದ್ದ ಹುಡುಗಿ, ಮೆಲ್ಲಗೆ ಕಿವಿಯಲ್ಲಿ ,” ಅವರ ಇಗೋ ಸಂಭಾಳಿಸಬೇಕು ಹುಷಾರು” ಎಂದು ಹೇಳಿ ಕೆಲಸ ಬಿಟ್ಟಿದ್ದಳು.

ಅದೆಲ್ಲಾ ಯಾಕೆ ಇಲ್ಲಿ ಬರುತ್ತದೆ ಎಂದು ತನ್ನ ಪಾಡಿಗೆ ತನ್ನ ಕೆಲಸ ಶುರುಮಾಡಿದ್ದಳು. ಮೊದಲು ಸಿಕ್ಕ ಪ್ರಾಡಕ್ಟ್ ನಲ್ಲಿ ಸುಮಾರು ಹುಳುಕುಗಳಿದ್ದವು. ಅದನ್ನ ಪಟ್ಟಿಮಾಡಿ ಅವಳು ಕಳಿಸಿದ್ದಳು. ತುಂಬಾ ವರ್ಷ ಕೆಲಸ ಮಾಡಿದ್ದ, ತುಂಬಾ ಸೀನಿಯರ್ ಮನುಷ್ಯ ಇದನ್ನ ಒಪ್ಪಿಕೊಳ್ಳಲಿಲ್ಲ. ನೆನ್ನೆ ಮೊನ್ನೆ ಬಂದವಳು ಹೀಗೆಲ್ಲಾ ಮಾತಾಡೋಹಾಗಿಲ್ಲ ಎಂದು ದೊಡ್ಡ ಗಲಾಟೆಯನ್ನೇ ಎಬ್ಬಿಸಿದ. ಮಧ್ಯ ಮಧ್ಯ ಮಾತಾಡುತ್ತ “ಒಂದು ಹುಡುಗಿ ಈ ಟೋನಿನಲ್ಲಿ ಹುಡುಗರ ಬಗ್ಗೆ ಮಾತಾಡಬಾರದು, ಅವರ ಲಿಮಿಟೇಷನ್ಸ್ ತಿಳಿದುಕೊಳ್ಳಬೇಕು” ಎಂದು ಸೆಕ್ಸಿಸ್ಟ್ ಮಾತು ಆಡಿ ಎದ್ದು ಹೋದ.

ಅವಳ ಕೆಲಸದ ಬಗ್ಗೆ ಮಾತಾಡಿದರೆ ಅಥವಾ ಅಲ್ಲಿ ಸಮಸ್ಯೆ ಇದೆ ಎಂದರೆ ಅದನ್ನ ಅವಳು ಬಗೆಹರಿಸಿಕೊಳ್ಳುತ್ತಿದ್ದಳು. ಆದರೆ ಇದು ಒಂದು ಹೆಣ್ಣು ಗಂಡಿನ ಬಗ್ಗೆ, ಅವನ ತಪ್ಪುಗಳನ್ನ ಹೀಗೆ ಎತ್ತಿ ತೋರಿಸಬಾರದೆಂಬ ಧೋರಣೆ ಅವನಲ್ಲಿ ಮನೆ ಮಾಡಿತ್ತು. ಆ ಮನುಷ್ಯ ಸರೀಗಿಲ್ಲ ಎಂದು ಅದನ್ನ ಇಗ್ನೋರ್ ಮಾಡಿದಳು.

ಮತ್ತೆ ಅದೇ ಅದೇ ಈಮೇಲುಗಳು. ಅವಳು ಹಾಗೆಲ್ಲ ಮಾತಾಡುವ ಹಾಗಿಲ್ಲ ಎಂದು. ಬಾಸ್ ಅನಿಸಿಕೊಂಡವ ಈ ಥರದ ಜಗಳಗಳಾದಾಗ ಬೇರೆ ದೇಶಕ್ಕೆ ಹೋಗಿ ಕೂರೋದು. ಇನ್ನು ಆ ಹೆಚ್ ಆರ್ ಅಂತೂ “ಹೆಣ್ಣು ಮಕ್ಕಳಿಗೆ ಇಷ್ಟೆಲ್ಲಾ ಮಾಡೋಕೆ ಆಗದೆ ಇರೋದಕ್ಕೇನೆ ನಾವು ಹೆಣ್ಣು ಮಕ್ಕಳನ್ನ ಅಷ್ಟು ಸೇರಿಸಿಕೊಳ್ಳೋದಿಲ್ಲ” ಎಂದು ಬಹಳ ಸಲೀಸಾಗಿ ಕಾಮೆಂಟ್ ಮಾಡಿದ. ಒಟ್ಟಿನಲ್ಲಿ ಒಂದು ಹೆಣ್ಣಿಗೆ ಆ ಜಾಗ ಕೆಲಸ ಮಾಡಲು ಬಹಳ ಅಸಹನೀಯವಾಗಿ ಕಂಡಿತು.

ಅವಳ ಇಂಟಿಗ್ರಿಟಿ ಮತ್ತು ಅವಳ ಬುದ್ಧಿವಂತಿಕೆಗೆ ಬಹಳ ಪೆಟ್ಟು ಬಿತ್ತು. ಇದನ್ನೇ ಹೈಯರ್ ಅಧಿಕಾರಿಗಳಲ್ಲಿಗೆ ತೆಗೆದುಕೊಂಡು ಹೋದಾಗ ಅವರೂ ಕೈಚೆಲ್ಲಿದ್ದು “ಆ ರಿಸೋರ್ಸುಗಳು ಇವಳಿಗಿಂತ ಹಳಬರು ಮತ್ತು ಬೆಲೆ ಬಾಳುವ ಕಾರಣ ಇವಳೇ ಅನುಸರಿಸಿಕೊಂಡು ಹೋಗಬೇಕು” ಎಂದು. ಥೇಟ್ ಅವಳ ಅಜ್ಜಿ ಅವಳ ಮದುವೆಯ ದಿವಸ ಗಂಡಸಿಗೆ ಎದುರಾಡದೇ ಇರು ಎಂದು ಹೇಳಿದ್ದು ನೆನಪಿಗೆ ಬಂತು.

ಇನ್ನು ಸಂಧ್ಯಾಗೆ ಅಸಹನೀಯವಾದಾಗ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದಳು. ಅದರಲ್ಲೂ ರಿಪೋರ್ಟಿಂಗ್ ಮ್ಯಾನೇಜರಿನ ಅಹಂ ಅವಳ ಹತ್ತಿರ ಮತ್ತೆ ಮಾತಾಡಿ ಉಳಿಸಿಕೊಳ್ಳುವ ಮಾತನ್ನೂ ಕಸಿದುಕೊಂಡಿತು. ಹೀಗೆ ಬೇರೆ ಕೆಲಸ ಮತ್ತು ಬೇರೆ ದಾರಿ ಹುಡುಕಿಕೊಂಡು ಹೊರಟವಳಿಗೆ ಒಳ್ಳೆ ಜಾಗವೇ ಸಿಕ್ಕಿತ್ತು. ಒಂದು ಹೆಣ್ಣು ತನ್ನನ್ನ ಪ್ರಶ್ನೆ ಮಾಡುವ ಹಾಗಿಲ್ಲ, ಅವಳು ನನ್ನ ವಿರುದ್ಧ ಮಾತಾಡುವ ಹಾಗಿಲ್ಲ ಎಂಬ ಧೋರಣೆ ಯಾವ ಮಟ್ಟಕ್ಕೆ ತಂದು ನಿಲ್ಲಿಸಿತು ನೋಡಿ!

ಮೊನ್ನೆ `ಮರ್ದಾನಿ’ ಸಿನೆಮಾದಲ್ಲಿ ಸಹ ಮಾನಭಂಗ ಮಾಡಿ ಸಾಯಿಸುವ ಹುಡುಗನಿಗೆ ಸುಮಾರು ಅದೇ ಥರದ ಮನಸ್ಥಿತಿ. ಹೆಣ್ಣು ಮಕ್ಕಳು ಅವರ ಜಾಗವನ್ನು ಅರಿತುಕೊಳ್ಳಬೇಕು, ಅದರಿಂದ ಆಚೆ ಬರಬಾರದು ಎಂದು. ಆ ಹುಡುಗ ಕಡೆಗೆ ತನ್ನ ಅಮ್ಮ ನ್ನನ್ನೂ ಕೊಲೆ ಮಾಡಿದ್ದು ಅವಳು ಆ ಏರಿಯಾಗೆಲ್ಲಾ ದೊಡ್ಡ ಧ್ವನಿಯಲ್ಲಿ ಮಾತಾಡುತ್ತಾಳೆ ತನ್ನ`ಔಕಾತ್’ – ಸ್ಥಾನ ತಿಳಿಯದೇ ಎಂದು.

ಡಾ. ವಿಜಯಾ ಅವರ `ಕುದಿ ಎಸರು’ ಪುಸ್ತಕದಲ್ಲೂ ಹೆಣ್ಣು ಮೆಲುದನಿಯಲ್ಲಿ ಮಾತಾಡಬೇಕು, ಮನೆಯ ಕೆಲಸ ಮಾಡಬೇಕು ಮತ್ತು ಸಂಭೋಗ ಮಾಡುವ ವಿಷಯದಲ್ಲೂ ಅವಳು ಎರಡನೇ ದರ್ಜೆಯ ವ್ಯಕ್ತಿ ಎಂದು ಕಾಣುವುದು ಬಹಳ ಅಸಹನೀಯ.

ಇಲ್ಲಿ ಹೆಣ್ಣಾಗಿ ಹುಟ್ಟಿದ್ದರಿಂದ ಇಂತಿಂಥ ಕಾರ್ಯಗಳನ್ನ ಪ್ರತಿಪಾದಿಸುವ ಧಾರ್ಮಿಕ ಆಚರಣೆಗಳೂ ಒಮ್ಮೊಮ್ಮೆ ಹೆಣ್ಣಿನ ಸ್ಥಾನವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಇವೆಲ್ಲವೂ ಕಾಲಾಂತರದಿಂದ ನಡೆದುಕೊಂಡು ಬಂದಿರುವ ಆಚರಣೆ. ಏನು ಬದಲಾಗಿದೆ, ಹೆಣ್ಣಿನ integrity ಯನ್ನು ಕೆಣಕಲು ಇನ್ನೆಷ್ಟು ಪ್ರಯತ್ನ ಮಾಡುತ್ತಾರೋ ಗೊತ್ತಿಲ್ಲ. ಆಗಲೂ ಈಗಲೂ ಯಾಕೆ ಅದನ್ನು ಸಹಿಸಿಕೊಳ್ಳಬೇಕು? ಯಾಕೆ ಸುಮ್ಮನಿರಬೇಕು? ಸುಮ್ಮನಿರದಿದ್ದರೂ ಅವಳಿಗೆ ಸಹನೀಯವಾಗುವಂಥ ಪರಿಹಾರ ಯಾಕೆ ಸಿಗೋದಿಲ್ಲ?

ಮನೆಯಲ್ಲಿ, ಮಠದಲ್ಲಿ, ಆಫೀಸಿನಲ್ಲಿ, ಬಸ್ಸಿನಲ್ಲಿ, ಮಂಚದಲ್ಲಿ ಹೆಣ್ಣಿನ `ಔಕಾತ್’ ತೋರಿಸುವುದು ಯಾವಾಗ ನಿಲ್ಲುತ್ತದೆ ಗೊತ್ತಿಲ್ಲ.
ಹೊಸ ವರ್ಷಕ್ಕೆ ಈ `ಔಕಾತ್’ ಅನ್ನೋ ಪದವನ್ನೇ ಕಿತ್ತೊಗೆಯಬೇಕು.

  • ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *