ಮೇಘಸಂದೇಶ/ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿತು, ಮುಂದೆ? – ಮೇಘನಾ ಸುಧೀಂದ್ರ

ಹೆಣ್ಣುಮಕ್ಕಳಿಗೆ ಶಿಕ್ಷಣ, ಉದ್ಯೋಗ, ವೃತ್ತಿ ಯಾವುದಕ್ಕೂ ಅವಕಾಶವಿಲ್ಲದ ಪೀಳಿಗೆಯ ವ್ಯಥೆ ಬೇರೆ; ಇವುಗಳಿಗೆ ಒಂದಷ್ಟು ಅವಕಾಶ ಸಿಕ್ಕಿ ಸಾಧನೆ ಮಾಡಿದರೂ ಹಣಕಾಸು ಸೇರಿ ಎಲ್ಲದರ ಮೇಲಿರುವ ಗಂಡಸರದಲ್ಲಿ ಒದ್ದಾಡುವ ಪೀಳಿಗೆಯ ಕಥೆ ಬೇರೆ. ಆಧುನಿಕ ಕಾಲದಲ್ಲಿ ಮುಂದುವರೆಯುವ ಅವಕಾಶಗಳು ದೊರೆತರೂ “ಅದೆಲ್ಲಾ ನಂಗೆ ಗೊತ್ತಾಗಲ್ಲ” ಎಂದು ಹಿಂದುಳಿಯುವ ಹೆಣ್ಣುಮಕ್ಕಳು ಕಲಿಯುವುದು ಬಹಳ ಇದೆ ಅಲ್ಲವೇ?

ಒಂದು ದೊಡ್ಡ ಕಂಪೆನಿಯಲ್ಲಿ ಅವತ್ತು ಸಿಕ್ಕಾಪಟ್ಟೆ ಕೆಲಸ. ಹೊರದೇಶದ ಕ್ಲೈಂಟುಗಳಿಗೆ ಒಂದು ದೊಡ್ಡ ಪ್ರಾಜೆಕ್ಟನ್ನ ಕೊಡಬೇಕಾಯಿತು. ಅದಕ್ಕೆ ಎಲ್ಲರೂ ಟೀಮಿನಲ್ಲಿ ಕೆಲಸದ ಅವಧಿಗಿಂತ ಜಾಸ್ತಿ ಕೆಲಸ ಮಾಡುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ಥರದ ತಲೆ ನೋವು, ಮನೆಯ ಜವಾಬ್ದಾರಿಗಳು ಇವೆಲ್ಲವೂ ಇದ್ದು ಕೆಲವೊಮ್ಮೆ ಮ್ಯಾನೇಜರ್ ಗಳಿಗೆ ಅವರ ಕಷ್ಟಗಳನ್ನ ಹೇಳುಕೊಳ್ಳುತ್ತಿದ್ದರು. ಒಂದು ಹುಡುಗಿ ಮಾತ್ರ `ಪ್ರೆಶರ್ ಜಾಸ್ತಿ’  ಎಂದು ತನ್ನ ಗಂಡನ ಕೈಲಿ ಹೇಳಿಸಿದಳು. “ಯಾಕೆ ಹೀಗೆ ನಿನ್ನ ವಿಷ್ಯ” ಎಂದು  ಕೇಳಿದಾಗ ಅವಳು “ಅಲ್ಲಾ ನನಗೇನೂ ಗೊತ್ತಾಗೋದಿಲ್ಲ, ಅದಕ್ಕೆ ನನ್ನ ಗಂಡ ನನಗೆ ಸಹಾಯ ಮಾಡುತ್ತಾನೆ” ಎಂದು ಹೇಳಿದಳು. “ನನ್ನ ಸ್ಯಾಲರಿ, ಅದು ಇದು ಎಲ್ಲವೂ ಅವನೇ ನೆಗೋಷಿಯೇಟ್ ಮಾಡೋದು” ಎಂದೂ ಹೇಳಿದಳು. ಓಕೆ ಎಂದು ದೊಡ್ಡ ಕಂಪೆನಿ ಯಲ್ಲೂ ಅಂದರು.

ಆಮೇಲೆ ಪ್ರಾಜೆಕ್ಟ್ ರಿಸೋರ್ಸ್ ಮೀಟಿಂಗಿನಲ್ಲಿ ಇದರ ಬಗ್ಗೆ ಮಾತು ಶುರುವಾಯಿತು, “ನೋಡಿ ಇನ್ನು ಈ ಸ್ಟ್ರೆಸ್ ಪ್ರಾಜೆಕ್ಟಿನಲ್ಲಿ ಬರೀ ಬ್ಯಾಚುಲರ್ ಹುಡುಗರನ್ನ ತೆಗೆದುಕೊಳ್ಳೋಣ. ಅವರಿಗೆ ಸಮಯ ಮತ್ತು ದುಡ್ಡಿನ ಅರಿವಿದೆ. ಮತ್ತು ಬೇಸಿಕಲಿ ಅವರ ಫ್ಯಾಮಿಲಿಯನ್ನ ಇನ್ವಾಲ್ವ್ ಮಾಡಲ್ಲ. ಈ ಡ್ರಾಮಗಳನ್ನ ಹ್ಯಾಂಡಲ್ ಮಾಡೋ ಅವಶ್ಯಕತೆ ಇರೋದಿಲ್ಲ, ನಾವು ಬರೀ ಕೆಲಸವನ್ನ ಮಾತ್ರ ಮಾಡಬಹುದು, ಈ ಎಚ್ ಆರ್ , ಕೌನ್ಸಿಲರುಗಳ ಕಥೆಗಳು ಬರೋದಿಲ್ಲ” ಎಂದು ಮಾತಾಡುತ್ತಿದ್ದರು. ಇದೊಂಥರ ಫೆಮಿನಿಸಮ್, ಸಮಾನತೆ ಅದು ಇದು ಎಂದು ಝಂಡಾ ಹಾರಿಸಿ ನಾವು ಹೆಣ್ಣುಮಕ್ಕಳನ್ನಲ್ಲ ಅವರ ಮನೆಯವರನ್ನೆಲ್ಲಾ ಕೆಲಸಕ್ಕೆ ಸೇರಿಸಿಕೊಂಡಂತೆ ಎಂಬ ಮಾತು ಸತ್ಯ ಅನ್ನಿಸಿಬಿಟ್ಟಿತು.

ಭಾರತದಲ್ಲಿ 26% ಹೆಣ್ಣುಮಕ್ಕಳು ಮಾತ್ರ ಆಫೀಸಿಗೆ ಹೋಗುತ್ತಾರೆ ಎಂದು ವಿಶ್ವ ಲೇಬರ್ ಸಂಸ್ಥೆ ಹೇಳುತ್ತದೆ. ಯಾವುದೇ ಡೆವಲಪಿಂಗ್ ದೇಶಕ್ಕೆ ಇದು ಬಹಳ ಕೆಟ್ಟ ಸಂಖ್ಯೆ. ಒಂದು ಹೆಣ್ಣುಮಗು ಕೆಲಸಕ್ಕೆ ಬರಬೇಕಾದರೆ ಅವರ ಮನೆಯವರ ಸಹಕಾರ ಅತ್ಯಗತ್ಯ. ಅಂದರೆ ಒಂದು ದೊಡ್ಡ ಟೀಮ್ ಅವಳನ್ನ ಕೆಲಸಕ್ಕೆ ಕಳಿಸೋಕೆ ತಯಾರು ಮಾಡುತ್ತದೆ. ಅದಿಲ್ಲದಿದ್ದರೆ ಅವಳು ಮನೆಯಿಂದ ಆಚೆ ಬರೋದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅವಳೇ ಪ್ರೈಮರಿ ಕೇರ್ ಗಿವರ್. ಇದಾದ ಮೇಲೆ ಅವಳ ಸಂಬಳಕ್ಕೆ ಅವಳು ಹಕ್ಕುದಾರಳಾದರೂ ಇನ್ನು ಅವಳ ಕಷ್ಟಗಳನ್ನ ಬಹಳ ನಿಷ್ಠುರವಾಗಿ ಹೇಳುವುದು ಅವಳಿಗೆ ಬರುವುದಿಲ್ಲ ಎಂದು ಅವಳೇ ಅಂದುಕೊಂಡು ಸುಮ್ಮನಿರುತ್ತಾಳೆ. ಈ ಮನಸ್ಥಿತಿ ಯಾಕೆ ಎಂಬುದು ಅರ್ಥಮಾಡಿಕೊಳ್ಳುವಲ್ಲಿ ನಾವು ನಮ್ಮ ಹೆಣ್ಣುಮಕ್ಕಳನ್ನ ಬೆಳೆಸುವ ಪರಿಯಲ್ಲೇ ಗೊತ್ತಾಗುತ್ತದೆ.

ಇನ್ನು ನಮ್ಮ ಮನೆಗೆ ಕೆಲಸಕ್ಕೆ ಬರುವ ಹೆಣ್ಣುಮಕ್ಕಳದ್ದು ಅದೇ ಕಥೆ. “ನಂಗೇನೂ ಗೊತ್ತಾಗಲ್ಲ ಕಣ್ರಮ್ಮ, ಗಂಡಾನೇ ನೋಡ್ಕೋತಾನೆ” ಎಂದು ತಾವು 6-7 ಘಂಟೆ 5 ಮನೆಗಳನ್ನ ಕೆಲಸ ಮಾಡಿದರೂ ಅವರ ಜುಟ್ಟು ಇರುವುದು ಅವರ ಮನೆಯವರ ಹತ್ತಿರ. “ಆರ್ಥಿಕ ಸ್ವಾತಂತ್ರ್ಯ ಇದ್ದರೆ ಅವರು ಎಲ್ಲವನ್ನೂ ಕಲಿಯುತ್ತಾರೆ, ಯಾರ ಹತ್ತಿರ ಆದರೂ ಎದುರು ಹಾಕಿಕೊಳ್ಳುತ್ತಾರೆ” ಎಂಬ ಮಾತು ಅರ್ಧ ಸತ್ಯ. ಆರ್ಥಿಕ ಸ್ವಾತಂತ್ರ್ಯ ನಮ್ಮನ್ನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ ಹೊರತಾಗಿ ಅದೇ ಪೂರ್ತಿ ಹೊಣೆಯಾಗುವುದಿಲ್ಲ.

“ನಮಗೇನು ಗೊತ್ತಾಗತ್ತೆ” ಅನ್ನುವ ಆಟಿಟ್ಯೂಡ್ ನಮ್ಮನ್ನ ಒಂದು ಕಾಲಕ್ಕೆ ‘ಅಯ್ಯೋ ಪಾಪ’ ದವರ ಹಾಗೆ ಮಾಡಿದರೂ ಮುಂದಿನ ಪೀಳಿಗೆಗೆ ಶೋಷಣೆಯ ಮಾರ್ಗವನ್ನ ತೋರಿಸುತ್ತದೆ. ಮೊದಲನೇ ಪೀಳಿಗೆ ಹೆಣ್ಣನ್ನ ಮನೆಯಲ್ಲೇ ಇಟ್ಟುಕೊಂಡಿತು, ಅವಳನ್ನ ದುಡಿಯೋದಕ್ಕೆ ಬಿಡುತ್ತಿರಲಿಲ್ಲ. ಮುಂದಿನ ಪೀಳಿಗೆ ಅವಳ ದುಡಿಮೆ ಓಕೆ, ಆದರೆ ಅದರ ಸುತ್ತಮುತ್ತಲಿನ ನಿರ್ಧಾರಗಳು ಅವಳದ್ದಲ್ಲ, ಅದಕ್ಕೆ ಬಿಡಲಿಲ್ಲ ಎನ್ನುವುದು ಸ್ಥೂಲವಾದ ಹೇಳಿಕೆಯಾದರೂ ಕೆಲವೊಂದು ಚೌಕಟ್ಟುಗಳನ್ನ ಹೆಣ್ಣುಮಕ್ಕಳು ಸುಲಭವಾಗಿ ಮೀರುವುದಿಲ್ಲ -ಅದು ಸ್ವಲ್ಪ ಕಷ್ಟ. ಹೀಗಿದ್ದಾಗ ಕೈಗೆ ದುಡ್ಡು ಬಂದಾಗ ಅದನ್ನ ಸಂಭಾಳಿಸುವುದಕ್ಕೆ ಗೊತ್ತಿಲ್ಲ ಎಂದರೆ ಅವಳನ್ನ ಅಡಿಯಾಳಿಗಿಂತ ಭಿನ್ನವಾಗಿ ಹೇಗೆ ನೋಡೋದಕ್ಕೆ ಸಾಧ್ಯ ಎಂದು ಯೋಚನೆ ಮಾಡಬೇಕಾಗುತ್ತದೆ. ವನ್ನು

ನಮ್ಮ ಹೆಣ್ಣುಮಕ್ಕಳ ದುಡ್ಡು ಕಾಸು ನಮ್ಮ ಮನೆಗೆ ಸಹಕಾರಿಯಾಗುತ್ತಿದ್ದರೆ ಅವಳ ಗಳಿಕೆಯನ್ನು ಏನು ಮಾಡಬೇಕು ಎಂಬ ಸ್ವಾತಂತ್ರ್ಯವನ್ನ ಅವಳಿಗೆ ಕೊಡಬೇಕು (ಕೊಡುವುದು ಎಂದರೆ ಮಾರಲ್ ಸಪೋರ್ಟ್ ಅಷ್ಟೆ  ಪರ್ಮಿಷನ್ ಕೊಡುವುದಲ್ಲ) ಅಥವಾ ಕೊಡದೇ ಇರುವ ಸಂದರ್ಭದಲ್ಲಿ ಹೆಣ್ಣುಮಕ್ಕಳೆ ತೆಗೆದುಕೊಳ್ಳಬೇಕು. ಗೊತ್ತಾಗಲ್ಲ ಎಂದು ಕಣ್ಣುಮುಚ್ಚಿಕೊಂಡರೆ ಏನೂ ನಡೆಯುವುದಿಲ್ಲ. ನಮ್ಮ ಮುಂದೆಯೇ ಶೋಷಣೆಯಾಗಿಬಿಡುತ್ತದೆ.

ಹೆಣ್ಣುಮಕ್ಕಳೂ ಅಷ್ಟೇ ಮನೆ ಮತ್ತು ಮನೆಯವರಿಗೆ ಅವರ ಕೆಲಸದ ಬಗ್ಗೆ ವಿಸ್ತಾರವಾದ ವಿವರಣೆ ಕೊಡುವ ಅಗತ್ಯವಿಲ್ಲ. ಅವರ ಸ್ಟ್ರೆಸ್ ಅನ್ನು ಮತ್ತೊಬ್ಬರು ಹ್ಯಾಂಡಲ್ ಮಾಡುವ ಅವಶ್ಯಕತೆಯೂ ಇಲ್ಲ. ಒಹೋ ನಾನು ಸುಕೋಮಲೆ, ನನ್ನನ್ನ ಯಾರೂ ಹಾಗೆಲ್ಲ ಮಾತಾಡಿಸಿಲ್ಲ , ಅವರ ಹತ್ತಿರ ಮಾತಾಡುವುದಿಲ್ಲ ಎನ್ನುವುದು ನಮ್ಮ ಹೇಡಿತನದ ಪ್ರದರ್ಶನವೇ ಹೊರತು ಇನ್ನ್ಯಾವುದು ಅಲ್ಲ. ನಮ್ಮ ಮಣ್ಣಿನ ಹೆಣ್ಣುಮಕ್ಕಳು ಹೆದರದೇ, ಕುಗ್ಗದೇ, ಜಗ್ಗದೇ ಇರುವವರು, ಅದು ಹಾಗೇ ಇರೋದು, ಹಾಗೇ ಉಳಿಸೋಣ…

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *