FEATUREDಜಗದಗಲ

ಮೆಕ್ಸಿಕೋನಲ್ಲಿ ಮಹಿಳೆಯರ ಮತದಾನದ ಹಕ್ಕಿಗೆ ನಾಂದಿ – ಡಾ. ಜಿ. ರಾಮಕೃಷ್ಣ


ಅಮೆರಿಕಾದ ಪತ್ರಕರ್ತ ಜಾನ್ ರೀಡ್ ಒಮ್ಮೆ ವಿಲ್ಲಾನನ್ನು ಕೇಳಿದ: “ಕ್ರಾಂತಿಯ ನಂತರ ನಿನ್ನ ಗಣರಾಜ್ಯದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರುತ್ತದೆಯೆ?” ಎಂದು. ಇದೆಂತಹ ಪ್ರಶ್ನೆಯೆಂದು ವಿಲ್ಲಾ ಮೂಕನಾದ. ಆಮೇಲೆ ತಡೆದು ಕೇಳಿದ: “ಮತದಾನ, ಹಾಗೆಂದರೇನು? ಸರ್ಕಾರವನ್ನು ಚುನಾಯಿಸುವುದಲ್ಲವೇ? ಅದರಲ್ಲಿ ಮಹಿಳೆಯರಿಗೆ ಏನು ಪಾತ್ರ?” ಅಮೆರಿಕಾದಲ್ಲಿ ಅಂತಹ ಅವಕಾಶ ಉಂಟೆಂದು ರೀಡ್ ಹೇಳಿದ. ವಿಲ್ಲಾ ನುಡಿದ: “ಹಾಗೋ? ಹಾಗಿದ್ದರೆ ನಮ್ಮಲ್ಲೂ ಅದು ಏಕಿರಬಾರದು?”


1910ರ ದಶಕದ ಮೆಕ್ಸಿಕೊ (ಅದನ್ನು ಮೇಹಿಕೊ ಎನ್ನುತ್ತಾರೆ) ಅನೇಕ ವಿಧ್ವಂಸಕ ಮತ್ತು ಕ್ರಾಂತಿಕಾರಿ ಘಟನೆಗಳನ್ನು ಕಂಡಿತು. ಆಗ ಜನತೆಯ ಕ್ರಾಂತಿಗೆ ಅನೇಕರು ನಾಯಕತ್ವ ನೀಡಿದರು. ಅವರಲ್ಲಿ ಮದೆರೋ ಮತ್ತು ಫ್ರಾನ್ಸಿಸ್ಕೋ ವಿಲ್ಲ ಪ್ರಮುಖರು. ವಿಲ್ಲಾ ಎಂಬುವವನಿಗೆ ಪಾಂಚೋ ವಿಲ್ಲಾ(ವಿಯ್ಯಾ) ಎಂಬ ಹೆಸರು ಹೆಚ್ಚು ಪ್ರಸಿದ್ಧ. ಅವನ ಕಾಲ 1878ರಿಂದ 1923. ಕ್ರಾಂತಿವಿರೋಧಿಗಳು ಅವನಿಗೆ ಗುಂಡಿಕ್ಕಿ ಕೊಂದಿದ್ದರು. ಅವನ ಕಾಲದಲ್ಲಿ ನಡೆದ ಘಟನೆಯಿದು.
ಈ ಪಾಂಚೋ ವಿಲ್ಲಾ ಬಹುಮಟ್ಟಿಗೆ ಅನಕ್ಷರಸ್ಥ, ಆದರೆ ಧೀಮಂತ ನಾಯಕ ಹಾಗೂ ಹೋರಾಟಗಾರ. ರೈತಾಪಿ ಜನರಂತೂ ಅವನನ್ನು ದೀನಬಂಧುವೆಂದು ಆದರಿಸುತ್ತಿದ್ದರು. ಅವನು ಮೆಕ್ಸಿಕೋದ ರಾಬಿನ್ ಹುಡ್ ಆಗಿದ್ದನೆನ್ನಬಹುದು. ಆರಂಭದಲ್ಲಿ ಅವನು ದರೋಡೆ ಮಾಡಲು ಹೇಸುತ್ತಿರಲಿಲ್ಲ. ಮುಲಾಜಿಲ್ಲದೆ ಶ್ರೀಮಂತರ ಆಸ್ತಿಯನ್ನು ಲೂಟಿ ಮಾಡಿ ಬಡರೈತರಿಗೆ ಹಂಚಿಬಿಡುತ್ತಿದ್ದ. ಯುವಕನಾಗಿದ್ದಾಗ ಸುಮಾರು ಹತ್ತು ವರ್ಷ ಈ ರೀತಿಯ ಜೀವನ ಅವನದಾಗಿತ್ತು. ಅವನು ಚಿಹ್ವಾಹ್ವ ಪ್ರಾಂತ್ಯದವನು; ಆ ಪ್ರಾಂತ್ಯವು ಅಮೆರಿಕಾದ ಟೆಕ್ಸಾಸ್‍ಗೆ ಹೊಂದಿಕೊಂಡಂತಿದೆ. ಟೆಕ್ಸಾಸ್ ಹೇಗೂ ಮೂಲತಃ ಮೆಕ್ಸಿಕೋದ್ದೇ ತಾನೆ!
ರೈತರೂ ಸೇರಿದಂತೆ ಒಂದು ಕ್ರಾಂತಿಕಾರಿ ಸೈನ್ಯ ವಿಲ್ಲಾನ ನೇತೃತ್ವದಲ್ಲಿ ಅದ್ಭುತವಾದ ಹೋರಾಟ ನಡೆಸಿತ್ತು. ಅವನೊಬ್ಬ ಮುಗ್ಧ, ಆದರೆ ಯಶಸ್ವೀ ದಂಡನಾಯಕ; ಸೋವಿಯೆತ್ ರಷ್ಯಾದಲ್ಲಿ ಕ್ರಾಂತಿಯ ಪರವಾಗಿ ಕ್ರಾಂತಿವಿರೋಧಿ ಸೈನ್ಯಗಳನ್ನು ಹಿಮ್ಮೆಟ್ಟಿಸಿದ್ದ ರೈತ ಚಪಾಯೇವ್ ಇದ್ದಂತೆ. ವಿಲ್ಲಾ ಸಮಾಜವಾದದ ಹೆಸರು ಕೇಳಿದ್ದ; ಹಾಗೆಂದರೇನು ಎಂದು ಕೇಳಿದರೆ “ಅದೇನೋ ತಿಳಿಯದು. ಪುಸ್ತಕಗಳಲ್ಲಿ ಇದೆಯಂತೆ; ಆದರೆ ನಾನು ಪುಸ್ತಕ ಓದಲಾರೆನಲ್ಲ” ಎಂದು ಬಿಡುತ್ತಿದ್ದ. “ವಿಶ್ವವನ್ನು ನಡುಗಿಸಿದ ಆ ಹತ್ತು ದಿನ” ಎಂಬ ಗ್ರಂಥವನ್ನು ರಚಿಸಿದ ಜಾನ್ ರೀಡ್ ಅಮೆರಿಕಾದ ಪತ್ರಕರ್ತ. ರಷ್ಯಾದ ಕ್ರಾಂತಿಯ ಸಮಯದಲ್ಲಿ ಅವನು ಅಲ್ಲಿದ್ದು ಲೆನಿನ್ ಮುಂತಾದ ನಾಯಕರನ್ನೆಲ್ಲಾ ಕಂಡಿದ್ದ ಮತ್ತು ಸಂದರ್ಶಿಸಿದ್ದ. ರಷ್ಯಾಕ್ಕೆ ಹೋಗುವ ಮುನ್ನ ಅವನು ಮೆಕ್ಸಿಕೋ ಕ್ರಾಂತಿಯನ್ನು ವರದಿ ಮಾಡಲು ಮೆಕ್ಸಿಕೋದ ಚಿಹ್ವಾಹ್ವ ಪ್ರಾಂತ್ಯದಲ್ಲಿದ್ದ ಮತ್ತು ವಿಲ್ಲಾನ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಎಷ್ಟೊ ದಿನ ಅವನ ಜೊತೆಯಲ್ಲೇ ಇರುತ್ತಿದ್ದ ಮತ್ತು ಅವನೊಡನೆ ಕುದುರೆಯ ಮೇಲೆ ಕುಳಿತು ಯುದ್ಧಭೂಮಿಯಲ್ಲಿ ಸಂಚರಿಸುತ್ತಿದ್ದ.
ವಿಲ್ಲಾನನ್ನು ಅವನೊಮ್ಮೆ ಕೇಳಿದ: “ಕ್ರಾಂತಿಯ ನಂತರ ನಿನ್ನ ಗಣರಾಜ್ಯದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರುತ್ತದೆಯೆ?” ಎಂದು. ಇದೆಂತಹ ಪ್ರಶ್ನೆಯೆಂದು ವಿಲ್ಲಾ ಮೂಕನಾದ. ಆಮೇಲೆ ತಡೆದು ಕೇಳಿದ: “ಮತದಾನ, ಹಾಗೆಂದರೇನು? ಸರ್ಕಾರವನ್ನು ಚುನಾಯಿಸುವುದಲ್ಲವೇ? ಅದರಲ್ಲಿ ಮಹಿಳೆಯರಿಗೆ ಏನು ಪಾತ್ರ?” ಅಮೆರಿಕಾದಲ್ಲಿ ಅಂತಹ ಅವಕಾಶ ಉಂಟೆಂದು ರೀಡ್ ಹೇಳಿದ. ವಿಲ್ಲಾ ನುಡಿದ: “ಹಾಗೋ? ಹಾಗಿದ್ದರೆ ನಮ್ಮಲ್ಲೂ ಅದು ಏಕಿರಬಾರದು?” ಇದೆಂತಹ ಪದ್ಧತಿಯೆಂದು ಅವನು ವಿಸ್ಮಯದಿಂದಲೇ ಮುಂದುವರಿಸಿದ: “ನೋಡು ನನಗಿದು ಹೊಳೆದೇ ಇರಲಿಲ್ಲ. ಆ ಬಗ್ಗೆ ನಾನೆಂದೂ ಯೋಚನೆಯೇ ಮಾಡಿರಲಿಲ್ಲವಲ್ಲ! ನಾನು ತಿಳಿದಿದ್ದೆ, ಮಹಿಳೆಯರಿಗೆ ಪ್ರೇಮ, ಸಂರಕ್ಷಣೆ ಅಗತ್ಯವೆಂದು. ಆದರೆ ಮತ ನೀಡುವುದು ಎಂದರೇನು? ಅವರಿಗೆ ಗಟ್ಟಿ ಮನಸ್ಸು ಇರುವುದಿಲ್ಲ. ಸರಿ – ತಪ್ಪುಗಳ ವಿವೇಚನೆ ಅವರಿಗೆಲ್ಲಿದೆ? ಮಾರ್ದವತೆ ಮತ್ತು ಕನಿಕರ ಅವರ ಲಕ್ಷಣಗಳು. ಈಗ ನೋಡು, ಒಬ್ಬ ದೇಶದ್ರೋಹಿ ಇದ್ದಾನೆನ್ನು; ಅವನಿಗೆ ಮರಣದಂಡನೆ ವಿಧಿಸಲು ಮಹಿಳೆಯು ಒಪ್ಪುವುದಿಲ್ಲವಲ್ಲ!” ರೀಡ್ ಹೇಳಿದ: “ಅದೇಕೆ ಹಾಗೆ ಭಾವಿಸುವೆ? ಪುರುಷರಿಗಿಂತಲೂ ಹೆಚ್ಚು ಕಾಠಿಣ್ಯ ಮತ್ತು ಕ್ರೌರ್ಯ ಅವರಿಗೆ ಸಾಧ್ಯ.” ಎಲಾ ಇವನ, ಇವನೇನು ಹೇಳುತ್ತಿದ್ದಾನೆಂದು ವಿಲ್ಲಾ ಭ್ರಾಂತಿಗೊಂಡ. ಹಾಗೆಯೇ ಮೀಸೆಯ ಮೇಲೆ ಬೆರಳಾಡಿಸುತ್ತಿದ್ದ. ಅವನ ಹೆಂಡತಿ ಊಟವನ್ನು ಅಣಿಗೊಳಿಸುತ್ತಿದ್ದಳು. ಅವಳನ್ನು ಕರೆದು ವಿಲ್ಲಾ ಕೇಳಿದ: “ಅಲ್ವೇ, ಬಾ ಇಲ್ಲಿ. ನೋಡು, ನಿನ್ನೆ ರಾತ್ರಿ ನಾನು ಮೂವರು ದೇಶದ್ರೋಹಿಗಳನ್ನು ಹಿಡಿದು ತಂದೆ. ನದಿಯನ್ನು ದಾಟಿ ಬಂದಿದ್ದ ಅವರು ರೈಲ್ವೆ ಹಳಿಗಳನ್ನು ಸ್ಫೋಟಿಸಬೇಕೆಂದಿದ್ದರು. ನಾನೀಗ ಅವರನ್ನೇನು ಮಾಡಲಿ? ಗುಂಡು ಹೊಡೆದು ಸಾಯಿಸಬಿಡಲೆ?” ಅವನ ಕೈಹಿಡಿದು ಚುಂಬಿಸಿ ಮಡದಿ ಹೇಳಿದಳು, “ಎಲ್ಲಾದರೂ ಉಂಟೆ? ಇರಲಿ, ನನಗೆ ಅದೆಲ್ಲಾ ತಿಳಿಯುವುದಿಲ್ಲ. ನಿನಗಾದರೆ ಎಲ್ಲಾ ತಿಳಿಯುತ್ತದೆ. ಏನು ಮಾಡುತ್ತೀಯೋ ಮಾಡು.” ವಿಲ್ಲಾ ಸುಮ್ಮನಾಗಲಿಲ್ಲ. ಮುಂದುವರಿದು ಹೇಳಿದ: “ ಇಲ್ಲ, ಇಲ್ಲ; ಅದು ನೀನು ಹೇಳಿದಂತೆಯೇ ಆಗಬೇಕು. ನೋಡು, ಅವರು ಯುವಾರಜ್ ಮತ್ತು ಚಿಹ್ವಾಹ್ವಾ ನಡುವೆ ಸಂಪರ್ಕ ಕಡಿತಗೊಳಿಸಬೇಕೆಂದಿದ್ದರು. ಅವರು ದೇಶದ್ರೋಹಿಗಳು. ಡಿಯಾಜ್ ನ ಫೆಡರಲ್‍ಗಳಿದ್ದಾರಲ್ಲ, ಅವರ ಕಡೆಯವರು. ಹೇಳು, ನಾನೇನು ಮಾಡಲಿ? ಅವರಿಗೆ ಗುಂಡಿಕ್ಕಿ ಸಾಯಿಸಲೋ ಬೇಡವೋ?”
ಮಡದಿ ಚೀರಿದಳು: “ಅಯ್ಯೋ, ಅವರಿಗೆ ಮೊದಲು ಕೂಡಲೆ ಗುಂಡಿಕ್ಕಿ ಕೊಲ್ಲು.”
ವಿಲ್ಲಾ ಆಗ ಜಾನ್ ರೀಡ್ ಕಡೆ ತಿರುಗಿ ನುಡಿದ: “ಏ, ನೀನು ಹೇಳುವುದು ಸರಿ ಎನಿಸುತ್ತದೆ.” ನಂತರದ ದಿನಗಳಲ್ಲಿ ಅವನು ಭೇಟಿಯಾದ ಹೆಂಗಸರನ್ನೆಲ್ಲಾ ಕೇಳತೊಡಗಿದ: “ಏನಮ್ಮಾ, ನಿನ್ನ ಪ್ರಕಾರ ಮೆಕ್ಸಿಕೋಗೆ ಯಾರು ಅಧ್ಯಕ್ಷನಾಗಬೇಕು?”
ಅಂದರೆ, ಅವರಿಗೆ ಮತದಾನದ ಹಕ್ಕನ್ನು ಆಗಲೇ ಮಂಜೂರು ಮಾಡಿಬಿಟ್ಟಿದ್ದ.

ಜಿ. ರಾಮಕೃಷ್ಣ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *