Uncategorizedಸಾಹಿತ್ಯ ಸಂಪದ

ಮೂರು `ಪಾರ್ಸುಗಳ’ ಹಂದರ – ಲಲಿತಾ ಸಿದ್ಧಬಸವಯ್ಯ

ಇಡೀ ಲೋಕದ ಮೇಲೆಷ್ಟು ಬಗೆಬಗೆ ಜನಪದವಿಹುದೋ ಅದಷ್ಟನ್ನೂ ತಮ್ಮ ಕುಂದಾಪ್ರದಲ್ಲೆ ಕಂಡು ಕುಂದಾಪ್ರ ಕನ್ನಡದಲ್ಲೆ ಆಡಿ ಮುಗಿಸಿಬಿಡುತ್ತದೆ. ಹಾಗಾಗಿಯೇ ವೈದೇಹಿ ಅವರ ಕಥೆಗಳು ಒಂದರೊಳಗೊಂದು ಹೊಕ್ಕುಹೊರಡುವ ತುಂಡರಿಸಿದ ಮಹಾ ಕಾದಂಬರಿಯ ಬೇರೆಬೇರೆ ಅಧ್ಯಾಯಗಳು ಎನಿಸುತ್ತವೆ. ಅಥವಾ ನೂರಂಕದ ಮಹಾನಾಟಕ ಒಂದರ ಬಿಡಿಬಿಡಿ ದೃಶ್ಯಗಳೆನಿಸುತ್ತವೆ. ವೈದೇಹಿ ಅವರ ಎಪ್ಪತ್ತೈದರ ಸಂಭ್ರಮದ ಗೌರವ ಗ್ರಂಥ `ಇರುವಂತಿಗೆ’ ಯಲ್ಲಿ ಪ್ರಕಟವಾದ ಲಲಿತಾ ಸಿದ್ಧಬಸವಯ್ಯನವರ ಲೇಖನ ಇಲ್ಲಿದೆ.

ನನಗೊಂದು ಆಸೆಯಿದೆ. ವೈದೇಹಿಯವರ ಮುಂದೆ ಅವರ “ರತ್ನಳ” ರೀತಿಯಲ್ಲಿ ಪಾರ್ಸು ಮಾಡಬೇಕು. ಯಾರ ಪಾರ್ಸು? ಮೊದಲಿಗೆ ಕಣ್ಣುಡಾಕ್ಟ್ರ ಆಸ್ಪತ್ರೆಯಲ್ಲಿ ಔಷ್ತಿ ಹಾಕಿಸಿಕೊಂಡು ಕಣ್ಣುಮುಚ್ಚಿದರೂ ಬಾಯಿ ಮುಚ್ಚಲಾಪದೆ ಕತೆಗೆ ಕತೆ ಪೋಣಿಸಿ ಆಸ್ಪತ್ರೆಯನ್ನೆ ಕಥಾಗಾರ ಮಾಡಿದ ಸರಸೋತತ್ತೆಯ ಪಾರ್ಸು. ಎರಡು, ತನ್ನ ಅಂದಿಗರೇ ಆದರೂ ಯಾರನ್ನೂ ಆಡಿತೋರಿಸದೇ ಬಿಡದ ಸ್ವತಃ ಪಾರ್ಸಿನ ರತ್ನಕ್ಕಳ ಪಾರ್ಸು. ಮೂರನೆಯದು ಬಾಬುಲಿಯ ತಾಯಿಯ ಪಾರ್ಸು!

ನನಗೆ ಗೊತ್ತು, ನಾನು ರತ್ನಕ್ಕನಷ್ಟು ಚೆಂದಾಗಿ ಪಾರ್ಸು ಮಾಡಲಾರೆ. ಆದರೆ ನನಗೆ ಇನ್ನೊಂದೂ ಗೊತ್ತು. ವೈದೇಹಿಯವರು ಬಾಯಲ್ಲಿ ಹೇಳದಿದ್ದರೂ ನನ್ನ ಈ ಮೂರೂ ಪಾರ್ಸುಗಳನ್ನು ಬಹಳ ಮಚ್ಚಿಕೊಳ್ಳುವರು. ಅದು ಹೇಗೆ? ಹೇಗೆಂದರೆ ವೈದೇಹಿಯವರ ಕಥಾಲೋಕ ಮುಕ್ಕಾಲು ಮೂರು ವೀಸೆ ಈ ಮೂರು ಪಾರ್ಸುಗಳ ಹಂದರದ ಮೇಲೆಯೇ ಹಬ್ಬಿರುವಂಥದ್ದು. ಅವರು ರತ್ನಳ ಹಾಗೆಯೇ, ತಮ್ಮ ಎಲ್ಲಾ ಪಾತ್ರಗಳನ್ನೂ ಒಂದು ಪಾರ್ಸಿನಲ್ಲಿ ಒಳಗೊಳಗೇ ಪಾರ್ಸು ಮಾಡುತ್ತ ಹೊರಗೆ ರಚಿಸತಕ್ಕಂಥವರು. ಅವರ “ಜೀವ ಜೀವನದಲ್ಲಿ ಕುಳಿತಿರುವುದೇ” ಈ ಕಥಾಪಾರ್ಸುಗಳಿಂದ. ಹಾಗೆಯೇ ಅವರ ಕಥೆಯ ಸರಸೋತತ್ತೆ ಮತ್ತು ಕಥೆ ಹೇಳುವ ವೈದೇಹಿಯಕ್ಕ ಇಬ್ಬರೂ ಬೇರೇಬೇರೆಯಲ್ಲವೇ ಅಲ್ಲ. ಥೇಟು ಸರಸೋತತ್ತೆಯ ಹಾಗೇ ವೈದೇಹಿಯವರಿಗೆ ಕಣ್ಣು ಮುಚ್ಚಿಕೊಂಡರೆ “ಅವರ ಪ್ರಪಂಚ”ದಲ್ಲಿ ನಡೆದ ಅಷ್ಟೂ ಘಟನೆಗಳು ಚಿತ್ರವತ್ತಾಗಿ ದೃಶ್ಯದೃಶ್ಯಗಳಾಗಿ ವಿಂಗಡಸಿಕೊಳ್ಳುತ್ತ ಹೋಗುತ್ತವೆ. ಅದೂ ಎಷ್ಟು ಸ್ಪೀಡಿನಲ್ಲೆಂದರೆ ಯಾರ ಕಥೆಯನ್ನೋ ಎತ್ತಿಕೊಂಡು ಮುಗಿಸುವಷ್ಟರಲ್ಲಿ ಅದು ಶುಭಂ ಹೇಳಿಸಿಕೊಳ್ಳುವುದಕ್ಕೂ ಮೊದಲೇ ಇನ್ನೊಂದು ಕಥೆಯೆಳೆ ಅದೇ ಸೂಜಿಯೊಳಕ್ಕೆ ಹೊಗುತ್ತದೆ. ಮೊದಲದನ್ನು ಅವಸರವಸರ ಮುಗಿಸಿ ಈ ಹೊಸ ಸೂತ್ರ ಹಿಡಿದು ಅದನ್ನು ಸುರಿದು ಮುಗಿವಷ್ಟರಲ್ಲೆ ಇನ್ನೊಂದರ ಅವತಾರ ಅಲ್ಲಿಯೇ ಹುಟ್ಟಿ ಸಿದ್ಧ! ಕಥೆಗೆ ಕಥೆಯೇ ಕಾರಣ. ಕಥೆಗೆ ಒಂದು ಸ್ಥಳ ನಿರ್ಮಿಸಿಕೊಳ್ಳುವ ಕೃತಕ ದರ್ದು ಅವರಿಗಿಲ್ಲವೆ ಇಲ್ಲ. ಅವೆಲ್ಲ ಅವರ ಪ್ರಪಂಚದಲ್ಲೆ ಅವರ ಮಾತಲ್ಲೆ ನಡೆಯುವುದು.

ಅದಾವುದವರ ಪ್ರಪಂಚ? ವೈದೇಹೀ ಪ್ರಪಂಚ? ಅದಾವುದವರ ಮಾತೂ, ವೈದೇಹೀ ಮಾತು? ಅದು ಭರತಖಂಡೇ ಜಂಬೂದ್ವೀಪೇ ದಕ್ಷಿಣಾಯನೇ ಕರ್ನಾಟಕೇ ಕರಾವಳೀ ಕುಂದಾಪುರ ನಾಮಾಂಕಿತ ಪೇಟೆ!! ಭಾಷೆ, ಅಲ್ಲಿನ ಅವರ ಮನೆಗಳಿಗಷ್ಟೇ ವಿಶಿಷ್ಠವಾದ ಕುಂದಾಪ್ರ ಕನ್ನಡ ತಿಳ್ಕಣೀ. ಅದನಾಡುವ ಸಮಸ್ತವೂ ಅವರ ಕಥಾಲೋಕದೊಳಗೆ ಪಾತ್ರ ಗಿಟ್ಟಿಸಿಯೇ ಸೈ, ಕೊನೆಗೆ ಅಲ್ಲಿನ ಸೂರ್ಯ ಚಂದ್ರಾದಿಗಳೂ ಕುಂದಾಪ್ರ ಕನ್ನಡವಾಡೇ ಸೈ!! ಅದು ಅಂಥಾ “ಗಟ್ಟಿಜನ” ಕಾಣಿ! ಇಡೀ ಲೋಕದ ಮೇಲೆಷ್ಟು ಬಗೆಬಗೆ ಜನಪದವಿಹುದೋ ಅದಷ್ಟನ್ನೂ ತಮ್ಮ ಕುಂದಾಪ್ರದಲ್ಲೆ ಕಂಡು ಕುಂದಾಪ್ರ ಕನ್ನಡದಲ್ಲೆ ಆಡಿ ಮುಗಿಸಿಬಿಡುತ್ತದೆ. ಹಾಗಾಗಿಯೇ ಅವರ ಕಥೆಗಳು ಒಂದರೊಳಗೊಂದು ಹೊಕ್ಕುಹೊರಡುವ ತುಂಡರಿಸಿದ ಮಹಾ ಕಾದಂಬರಿಯ ಬೇರೆಬೇರೆ ಅಧ್ಯಾಯಗಳು ಎನಿಸುತ್ತವೆ. ಅಥವಾ ನೂರಂಕದ ಮಹಾನಾಟಕ ಒಂದರ ಬಿಡಿಬಿಡಿ ದೃಶ್ಯಗಳೆನಿಸುತ್ತವೆ. ಈ ಪ್ರಪಂಚ ಬಿಟ್ಟು ಹೊರಬಂದರೆ ಅವರು ಮೂಗುಬಾಯಿಯದುಮಿ ಹಿಡಿದ ಜೀವವೇ ಸೈ.
ಇದು ಕಥೆಗಾರ್ತಿಯ ಶಕ್ತಿಯೂ ಮಿತಿಯೂ ಹೌದೆನ್ನುತ್ತ ಮಾಮೂಲಿನ ಟಿಪ್ಪಣಿವಾಕ್ಯವೊಂದನ್ನು ಉದುರಿಸಲಾರೆ ನಾನು. ನನಗದು ಆತ್ಮವಿಶ್ವಾಸ, ಕಥೆಗಾರ್ತಿಯ ಅಗಾಧ ಆತ್ಮವಿಶ್ವಾಸ ಎನಿಸಿದೆ. ನನ್ನ ಕುಂದಾಪ್ರ ಜಗತ್ತಿನೊಳಗೇ, ಅದೇ ಕನ್ನಡದೊಳಗೇ ನಾನು ಜಗತ್ತನ್ನು ನಿಮಗೆ ತೆರೆದು ತೋರಿಸಬಲ್ಲೆ ಎನ್ನುವ “ಜಂಭ” ಅದು. ಎಣಿಸಿದ ಕಜ್ಜಾಯದ ಹಾಗೆ ದೇವರು ಹತ್ತುಬಗೆ ಕಾಣಿಸಿಕೊಂಡು ಸುಸ್ತಾಗಿ ಪಾರ್ಸು ನಿಲ್ಲಿಸಿಬಿಟ್ಟ. ಆದರೆ ನೋಡಬನ್ನಿ , ನಾನು ನರಮನುಷರ ಅದೆಷ್ಟು ಬಗೆಬಗೆಯ ಪಾರ್ಸುಗಳನ್ನು ನಿಮಗೆ ತೋರಿಸಬಲ್ಲೆ, ಅದೆಷ್ಟು ಮೇಲಕ್ಕೇರಬಲ್ಲರೋ ಅಷ್ಟೇ ಕೆಳಕ್ಕಿಳಿಯ ಬಲ್ಲ ಈ ಮನಸುಗಳು ತಮ್ಮನ್ನು ಸೃಷ್ಟಿಸಿದ ದೇವರನ್ನೇ ಮರುಸೃಷ್ಟಿಸಿ ಅವನೀಗ ಕಕ್ಕಾವಿಕ್ಕಿ ನಿಲ್ಲುವ ಹಾಗೆ ಮಾಡಿದ್ದಾವೆ. ಹೀಗೆ ಕೂಗಿ ಕರೆದು ಓದುಗರನ್ನು ಕಥೆಯೆಂಬ ಟೆಂಟಿನೊಳಗೆ ಕೂರಿಸಿ ಬಣ್ಣದ ಬಯಾಸ್ಕೋಪು ತೋರಿಸುತ್ತಾರೆ ವೈದೇಹಿ. ಮತ್ತು ನೀವೆಲ್ಲೆ ಹೋದರೂ ಈ ಮಜಕೂರಿನ ಜನವೇ ತಾನೇ ನಿಮಗೆ ಕಾಣಸಿಗುವುದು! ದೇಶವೋ, ಕಾಲವೋ, ಭಾಷೆಯೋ, ಧರ್ಮವೋ, ಜಾತಿಯೋ, ವರ್ಗವೋ , ಲಿಂಗವೋ ಮತ್ತೊಂದೋ ಬೇರೆಯಾಗಬಹುದೇ ವಿನಾಯ್ಸಿ ಮನಸ್ಸು ಇವೇ ಎಲ್ಲಿಯೂ.
ಹಾಗೇ ಅವರು ಕುಂದಾಪ್ರ ಮತ್ತು ಅಲ್ಲಿನ ಕನ್ನಡಗಳೆರಡನ್ನೂ ಮೂಲೆಗೊತ್ತಿ ಇಸ್ತ್ರಿಹಾಕಿದ ಕನ್ನಡ ಭಾಷೆಯೊಂದನ್ನು ಪ್ರಯೋಗಿಸುತ್ತ , ಬಯಲೂರಿನಲ್ಲಿ ತಮ್ಮ ಕುಂದಾಪ್ರದಿಂದೆತ್ತಿ ತಂದ ಪಾತ್ರಗಳನ್ನು ಕುಂಡದಲ್ಲಿ ಬೆಳೆಸುತ್ತ ಕಥೆ ಹೇಳಿದ್ದಿದೆ. ಅಂಥವು ಸಾವಿರದ ಒಂಭೈನೂರಾ ಎಂಭತ್ತಾರರವರೆಗೆ ಬೇಕಾದಷ್ಟು ಬಂದಿವೆ. ಅವು ಕಳಪೆಯೂ ಅಲ್ಲ. ಆದರೆ ಅವುಗಳಲ್ಲಿ ಪಾರ್ಸಿನ ರತ್ನಕ್ಕನೂ ಇಲ್ಲ, ಕಥೆಗೆ ಕಥೆ ಕಾರಣದ ಸರಸೋತತ್ತೆಯೂ ಇಲ್ಲ. ಒಟ್ಟಾರೆ ಅಲ್ಲಿ ವೈದೇಹಿಯೇ ಆಬ್ಸೆಂಟ್. ಸಮಾಜ ಶಾಸ್ತ್ರಗ್ನೆಯ ಟಿಪ್ಪಣಿಯಿಂದ ನಿಜ ವೈದೇಹಿ ಎದ್ದುಬಂದರು ನೋಡಿ. ಅದೆಂಥ ವೈದೇಹಿಯದು ಅಬ್ಬಬ್ಬಾ! ಮುಂದವರನ್ನು ತರುಬುವವರೇ ಇಲ್ಲ.


ಮೇಲ್ಗಡೆ ನಾನು ವೈದೇಹಿಯವರ ಮುಂದೆ ಮೂರು ಪಾರ್ಸು ಮಾಡಬೇಕೆಂದಿದ್ದೇನೆ ಎಂದು ಹೇಳಿದ್ದೆನಲ್ಲವೇ. ಅದರಲ್ಲಿ ಎರಡು ಆದುವು. ಉಳಿದದ್ದು ಮತ್ತು ಮೂರನೆಯದು ಬಾಬುಲಿಯ ತಾಯಿ. ಶಾಲೆಯ ಬಾಬುಲಿಯೆ ಬೇರೆ ಹಾಲಿನ ಬಾಬುಲಿಯೆ ಬೇರೆಯಾಗಿ ಅಷ್ಟು ಚಿಕ್ಕಪ್ರಾಯದಲ್ಲಿ, ನಿಜಜೀವನದಲ್ಲಿ ಸೈತ ಪ್ರತಿದಿನವೂ ಎರಡೆರಡು ಪಾರ್ಸು ಮಾಡಬೇಕಾಗಿ ಬಂದ ಬಾಬುಲಿಯೆಂಬ ಆ ಸ್ಕೂಲು ಹುಡುಗಿಯ ಅಸಹಾಯಕ ಸ್ಥಿತಿಗೂ ಹೆಚ್ಚಾಗಿ ನನ್ನ ಮುಂದೆ ಆ ಬಾಬುಲಿಯ ತಾಯಿಯ ಇನ್ನಷ್ಟು ಅಸಹಾಯಕ ಮುಖ ನಿಂತುಬಿಡುತ್ತದೆ. ಬಾಬುಲಿಗಾದರೋ ಮುಖ ಬದಲಿಸಿಕೊಳ್ಳುವ ಬಗೆ ಗೊತ್ತಿಲ್ಲ. ಆದರೆ ಅವಳ ತಾಯಿಗೆ ತಮ್ಮ ಕುಟುಂಬಕ್ಕೆ ಇರುವ ಹೀನಾಯ ಮುಖವನ್ನೆ ಇನ್ನಷ್ಟು ಚೆಂದ ತೋರಿಸುವ ಬಗೆಯೂ ಬರುತ್ತದೆ ಮತ್ತು ಹಾಗೆ ಕುಟುಂಬದ ಮುಖ ಕೊಂಚ ಮೇಲ್ಕೆತ್ತಿ ಚೆಂದ ತೋರಿಸಲೆ ಬೇಕಾದ ಗರ್ಜು ಅವರಿಗೆ ವೇದ್ಯವಾಗಿದೆ. ಆದರೆ ಅವರ ಆ ‘ಮೇಕಪ್ಪು’ ನಡೆಯುವುದು ಮಾತ್ರ ಬಾಬುಲಿಯ ಗೆಳತಿಯೆಂಬ ಇನ್ನೊಂದು ಚಿಕ್ಕ ಹುಡುಗಿಯ ಬಳಿ ಅಷ್ಟೇ. ಆ ಊರಿನ ಇತರರ ಮುಂದೆ ಊರಿಗೊಗ್ಗದ ಜನವಾದ ಅವರ ಮನೆ, ಅವರ ಪ್ರಾಮಾಣಿಕ ದುಡಿಮೆ, ತುತ್ತಿನ ಜೊತೆಗೇ ಮರ್ಯಾದೆಯುಳಿಸಿಕೊಳ್ಳಲು ಆ ತಾಯಿ ಪುಟ್ಟ ಮಗಳನ್ನು ಕಟ್ಟಿಕೊಂಡು ಹೋರಾಡುವ ವರಸೆ ಎಲ್ಲವೂ ನಗೆಪಾಟಲು. ಇಂಥ ಸೂಕ್ಷ್ಮದ ಈ ಪಾರ್ಸು ಯಾರಾದರು ಮಾಡಿಯಾರೇ, ಸ್ವತಃ ವೈದೇಹಿಯವರನ್ನು ಬಿಟ್ಟು? ರತ್ನಕ್ಕನೂ ಸೋತಾಳು.

ಇಂಥ ಬಾಬುಲಿಯ ತಾಯಿಯಂಥ ಪಾತ್ರಗಳ ಘನತೆಯನ್ನು ವೈದೇಹಿ ಎಂದೂ ಎತ್ತಿ ಹಿಡಿಯುತ್ತಾರೆ. ಅವರ ಈ ಮನೋಧರ್ಮವೇ ಸದಾ ನನಗೆ ವಂದನೀಯ. ಒಲ್ಲದ ಗಂಡನನ್ನು ಬಿಟ್ಟುಹೋದ ಹೆಂಡತಿಯನ್ನು ಮತ್ತೆ ಬಳಿಗೆ ಕರೆದುಕೊಂಡ ಗಂಡನ ಪಾತ್ರವನ್ನು ಅತ್ಯುದಾತ್ತ ಪಾತ್ರವೆಂದು ನಾವು ಒಪ್ಪಿದ್ದೇವೆ. ಕನ್ನಡದ ಕಥೆಗಳಲ್ಲಿ ಇಂಥಾ ಉದಾತ್ತ ಮಹಿಮ ಪತಿಯ ಪಾತ್ರಾವಳೀ ಅಗಾಗ್ಗೆ ಕಾಣಿಸಿಕೊಳ್ಳುತ್ತವೆ. ಆದರೆ ಆ ಗಂಡಿಗೆ ಇದು ಬಿಟ್ಟರೆ ಇಂಥ ಪದಾರ್ಥ ಇನ್ನೆಂದೂ ಸಿಗಲಾರದ್ದಕ್ಕೇ ಅದು ಅದನ್ನೇ ಬರಮಾಡಿಕೊಂಡಿತೆಂಬ ಸತ್ಯ ಮಾತ್ರ ನಮಗೆ ಸದಾ ಅಪಥ್ಯ . ಇಂಥಲ್ಲೆ ಸದ್ದಿಲ್ಲದೆ ವೈದೇಹಿ ಗೆಲ್ಲುವುದು. ಆ ಬಿಟ್ಟು ಹೋದ ಹೆಂಡತಿಗೆ ಗಂಡ ಮತ್ತೆ ತನ್ನನ್ನು ಸೇರಿಸಿಕೊಳ್ಳುವುದು ಮಹಾನ್ ವಿಷಯವೇ ಆಗಿರಬೇಕೆಂದೇನಿಲ್ಲ, ಅವಳಿಗೆ ಗೊತ್ತು, ಈಗ ಬಿಟ್ಟರೆ ನನ್ನಂಥದು ಗಂಡನಿಗೆ ದೊರೆಯಲಾರದು ಮತ್ತು ಹಾಗೆ ಅದು ತನಗೆಂದೂ ಈಡುಜೋಡಾಗದಿದ್ದುದಕೇ ತಾನದನ್ನು ಬಿಟ್ಟು ಹೋದ್ದು ಎಂಬುದು. ಇದೀಗ ಅದೇ ಕರ್ಮವೇ ಮತ್ತೆ ಕರ್ಣನ ಪಾರ್ಸಿನಲ್ಲಿ ಬಂದು ಸುತ್ತಿಕೊಂಡದ್ದಕ್ಕೆ ಅವಳಿಗೆ ಜಿಗುಪ್ಸೆಯೇ ಅಮರಿಕೊಳ್ಳಬಹುದು. ಇದು ಸೂಕ್ಷ್ಮದಲ್ಲಿ ಸೂಕ್ಷ್ಮ. ಮತ್ತೆ ಗಂಡ ಸೇರಿಸಿಕೊಂಡರೆ ಅವನ ಕಾಲ್ತೊಳೆದು ಸೇವಿಸಿಕೊಂಡಿರಬೇಕೆಂಬುದನ್ನೆ ನಾವು ನಿರೀಕ್ಷಿಸುವುದು. ಅಂಥ ನಿರೀಕ್ಷೆಗಳನ್ನು ಫಟ್ಟನೆ ಮುರಿಯುತ್ತಾರೆ ವೈದೇಹಿ. ಸೂಕ್ಷ್ಮವನ್ನು ಮಾತ್ರ ಓದುಗರ ಮುಂದಿಡದೆ ಅವರು ಮುಂದಕ್ಕೇ ಹೋಗರು. ಅಕ್ಕು , ಮಾಂಕಾಳಿಯಮ್ಮ, ಶಾಂತಕ್ಕ, ಸೌಗಂಧಿ, ಶುಭಾಂಟಿ ,,,, ಇವರೆಲ್ಲರೂ ಅಷ್ಟೇ ಬಗೆಬಗೆಯ ಹೆಣ್ಣು ಸೂಕ್ಷ್ಮಗಳ ಪ್ರತಿನಿಧಿಗಳು, ನಿರೀಕ್ಷೆ ಮುರಿದೂ ಕಥಾನಾಯಕಿಯಾದವರು. ಹೀಗೆ ಸದ್ದಿಲ್ಲದೆ ಮುರಿಯುವ ತಾವಿನಲ್ಲಿ ವೈದೇಹಿ ಅವರಿಗವರೇ ಸಮ.

ವೈದೇಹಿಯವರ ಸಾಹಿತ್ಯದ ಕುರಿತು ಬಂದ ಬರವಣಿಗೆಯೇ ಮಹಾನ್ ಸಂಪುಟವಾಗಬಹುದೋ ಏನೋ. ಆ ಒಟ್ಟಲಿಗೆ ನನ್ನದೂ ನಾಲ್ಕು ಸಾಲು. ಆದರೆ ನಾನು ಬರೆದಿರುವ ಈ ಸಂದರ್ಭದ ಬಗ್ಗೆ ನನಗೆ ತುಸು ಬಿಂಕ ಬಿಗುಮಾನವಿದೆ. ಅವರಿಗೆ ಎಪ್ಪೆ ತ್ತೈದರ ಸನ್ಮಾನದ ಅವಸರದಲ್ಲಿ ಬರುವ ಗ್ರಂಥದಲ್ಲಿ ಈ ಸಾಲುಗಳು ಸೇರುವುದು ನನಗೆ ಗರಿ. ಅವರಿಗೆ ಇನ್ನಷ್ಟು ಉತ್ಸಾಹ ಹುರುಪು ಇರಲಿ. ಈ ಖಾಲಿಯಾಗದ ಕಥೆಯ ಸರಸೋತತ್ತೆ ಕಥೆ ಹೇಳುತ್ತ, ಕಥೆ ಕಾಣುತ್ತ ಸದಾ ನಮ್ಮೊಂದಿಗಿರಲಿ. (`ಇರುವಂತಿಗೆ’ – ವೈದೇಹಿ ಎಪ್ಪತ್ತೈದರ ಸಂಭ್ರಮದ ಗೌರವ ಗ್ರಂಥ – ಸಂಪಾದಕರು: ಸವಿತಾ ನಾಗಭೂಷಣ, ತಾರಿಣಿ ಶುಭದಾಯಿನಿ)



– ಲಲಿತಾ ಸಿದ್ಧಬಸವಯ್ಯ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *