ಮೂರನೆಯ ಕಣ್ಣು – ಜಯಶ್ರೀ ದೇಶಪಾಂಡೆ

ಹೂಂ, ತಿಳಿದಿಲ್ಲ ಅನಿಸಿದರೆ ಈಗಲೀಗ ಹೇಳಿಬಿಡಲೇನು?
ನಾ ನಿನ್ನ ಮೂರನೆಯ ಕಣ್ಣು!
ನಿನ್ನ ಗತಸ್ಮೃತಿ ಮೆಲುಕುಗಳ  ಶತಮಾನದಿಂದೆತ್ತಿ ಕಣ್ಣಿದುರು  ಚಾಚಿಬಿಡಬಲ್ಲೆ…
ನನ್ನೆದೆಯೊಳಗೆ ಹಿಡಿದಿಟ್ಟ ಲಕ್ಷಕ್ಷಣಕೋಶದಲ್ಲಿವೆ ನಿನ್ನ ಮಸ್ತಿಷ್ಕಭಿತ್ತಿಯ
ಪ್ರತಿಬಿಂಬಗಳ ಸಾಲು ಸಾಲು..
ಗಭ೯ಚೀಲವೊಡೆದು ಹೊರಬಿದ್ದ ಶಿಶು ಅತ್ತ ಗಳಿಗೆಯ ಹಿನ್ನೆಲೆಯಲಿ ಮರೆತ ಪ್ರಸವವೇದನೆಯ ಪರಾಕಾಷ್ಠೆ!
ಮತ್ತೆ ಬೊಚ್ಚುಬಾಯಿ ತೆರೆದ ಎದೆಮೇಲಿನ ಕೂಸು,
ಮೊಲೆತೊಟ್ಟಿನ ಮಾಗ೯ವಾಗಿ ಒಡಲಮೂಲದವರೆಗೆ  ಚಾಚಿ ಹರಡಿದ ಅಂತ:ಕರಣ ಸೆಲೆಗೆ ಪ್ರತಿಫಲಿಸಿದ ನಿನ್ನ ಮುಗುಳ್ನಗೆ ನಿನ್ನೊಳಡಗಿರುವ ನೆನಪಿನಷ್ಟೇ ಸಿಹಿ ನನಗೂ…
ನೇವರಿಸಿ ನೆತ್ತಿ ಮೃದುಮುದ್ದೆಯ, ಹೂಪಕಳೆಯಂತೆತ್ತಿ ಹನಿಮುತ್ತನೊತ್ತುತ್ತ ಪತಿ ನಿನ್ನೆಡೆಗೆ ಬೀರಿದ ನೋಟ…
ನಿನ್ನ ಪ್ರತಿನೋಟಗಭ೯ದೊಳಗಿರುವ
ಆ ಸಿಹಿಸ್ಮೃತಿಗಳ ಛಾಯೆ ನನ್ನಲ್ಲಿರದೆ
ಇನ್ನೆಲ್ಲಿದೆ ಹೇಳು? ನಿಮ್ಮ ಮಧುರಕ್ಷಣಗಳ ಪ್ರತ್ಯಕ್ಷ ಸಾಕ್ಷಿ ನಾನಲ್ಲದೆ ಇನ್ನಾರು?
ಅಪ್ಪನ ತೋಳಲ್ಲಿ, ಅಮ್ಮನ ಮಡಿಲಲ್ಲಿ ಕೊನೆಗಜ್ಜ ಪಿಜ್ಜನ ತೊಡೆಮೇಲೆ ಕೂತು ಕೇಳಿದ ಮುಗ್ಧ ಪ್ರಶ್ನಾವಳಿ…
ಹಿಂಡಿ ಹೂಕೆನ್ನೆ ಮತ್ತೆ ಮುತ್ತಿಕ್ಕಿ ಕಿವಿಗೆ ಪಿಸುಗುಟ್ಟಿ ನಿನಗುತ್ತರಿಸಿದ ಕುಚೇಷ್ಟೆ ಪದ ಅರಳಿಸಿದ ನಿನ್ನ ಕಣ್ಣುಗಳ ಆ ಹೊಳಪೆಲ್ಲಿ ಬಂದಿ ಗೊತ್ತೇ?
ಇಗೋ ಇಲ್ಲಿ ನನ್ನಲ್ಲಿ!
ಎದೆಗವುಚಿ ಹೊತ್ತಿಗೆ ನಡೆದು ಭಿರಿಭಿರಿ,
ಕಥನಗಳ ಒಡಲುಹೊಕ್ಕು ಹೊರಬಂದು ಪ್ರಶ್ನಾಪ್ರಶ್ನೆಗಳ ಲೋಕಭೇದಿಸಿ ಮಥಿಸಿ,ಮನ್ನಿಸಿ, ಮದಿ೯ಸಿ ಕಡೆದು, ಹೊರಬರುವ ತಥ್ಯಗಳ ಮಿದುಳ ಕೋಶದೊಳಿಟ್ಟು ಕೊನೆಗೊಮ್ಮೆ ಹೊರಚೆಲ್ಲಿ ಹಗುರಾಗಿ ಕೈಚಾಚಿ
ಹಿಗ್ಗಿ ನಕ್ಕ ನಿನ್ನ ಗಳಿಗೆಗಳು
ಇಲ್ಲಿ ನನ್ನಲ್ಲಿ….
ಬೇಕೇನು ಮತ್ತೆ?
ನನಗಿಲ್ಲ ನಿಮ್ಮ ಜಗವ್ಯಾಪಾರಗಳ ನಂಟು, ನನಗಿಲ್ಲ ಕವಚದಡಿಯ ಪದರಗಳ ಅರಿವು.
ಆದರೂ…
ನಂಬಲಾಗದ ನಂಬಲೊಲ್ಲದ ಸತ್ಯದಶ೯ನ ಕ್ಷಣಗಳ
ಘೋರ ನಿನ್ನ ಮುದುಡಿಸಿದಷ್ಟೇ ನನ್ನ ನಡುಗಿಸಿತೆನ್ನಲಾರೆ…
ಏಕೆಂದರೆ ನಾ ಬರಿಯ ಕಾಲಚಕ್ರಯಂತ್ರ ಹಚ್ಚಿಕೊಂಡಿರುವ
ಅಂಗೈ ಕನ್ನಡಿ!
ಇರುವುದನ ಇರುವಂತೆ ಹೇಳುವ
ಅನಿವಾರ್ಯಜನಿತ ಕಣ್ಣು!
ನಿನ್ನ ಬದುಕಿನ ಹಾಳೆಗಳ ತುಂಬ ಮೂಡಿರುವ ಹೆಜ್ಜೆಗಳ ಬಿಂಬ ನಾನಷ್ಟೇ.
ಹಿಂದಿರುಗಿ ನೋಡೊಮ್ಮೆ
ಎಲ್ಲ ಕಂಡು ಕರಗಿಸಿಕೊಳ್ಳುತ್ತ ಮುಗುಳ್ನಗುವೆ ನಾ!
ಜಯಶ್ರೀ ದೇಶಪಾಂಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *