Latestದೇಶಕಾಲ

ಮೀ ಟೂ: ಜಡ ಸಮಾಜವನ್ನು ಬಡಿದೆಬ್ಬಿಸಿದ ಹೆಣ್ಣು ಕೂಗು – ಡಾ. ಎಚ್.ಎಸ್. ಅನುಪಮಾ

ಎಲ್ಲ ದಮನಿತರ ಪರವಾಗಿ ನಿಲ್ಲುವುದು, ಲೋಕವನ್ನೇ ಕೆಟ್ಟದರಿಂದ ಕಾಪಿಡುವುದು ಹೆಣ್ತನ. ಇಂಥ ಹೆಣ್ತನವನ್ನು ಪ್ರತಿ ಮಾನವ ಜೀವಿಯಲ್ಲೂ ಉದ್ದೀಪಿಸಿ ನೆಲೆಗೊಳಿಸುವುದು ಸ್ತ್ರೀವಾದ. ಯಾವತ್ತೂ ಸ್ತ್ರೀವಾದವು ಯಶಸ್ಸಿನ ಅಂಕಿಅಂಶಗಳಿಂದ ತೃಪ್ತಿ ಪಡುವುದಿಲ್ಲ. ಮೈನಾರಿಟಿ ಯಶಸ್ಸಿಗಿಂದ ಮೆಜಾರಿಟಿ ವಿಫಲತೆಯ ಕಡೆಗೇ ಅದು ಗಮನ ಹರಿಸುತ್ತದೆ. ನಿಜವಾದ ಬಿಡುಗಡೆಯ ದಾರಿಯನ್ನು ಸ್ತ್ರೀಪುರುಷರೆಲ್ಲರಿಗೂ ಅರಸುತ್ತದೆ. ಮೀಟೂ ಇರಲಿ, ನ್ಯಾಪ್ಕಿನ್ ಇರಲಿ, `ಮುತ್ತು’ ಅಭಿಯಾನವಿರಲಿ, ದೇವಾಲಯ ಪ್ರವೇಶ ಹೋರಾಟವಿರಲಿ – ಜಾತಿಗ್ರಸ್ಥ ಪಿತೃಪ್ರಧಾನ ಭಾರತೀಯ ಸಮಾಜದ ತಳಪಾಯದ ಒಂದು ಕಲ್ಲನ್ನಾದರೂ ಅದು ಅಲುಗಾಡಿಸುವುದಾದರೆ ಅಂಥ ಎಲ್ಲ ಪ್ರಯತ್ನಗಳಿಗೆ ಹೆಣ್ಮನಗಳ ಬೆಂಬಲವಿರಲಿ.

ಭಾರತದ ಸಾಮಾಜೀಕರಣ ಹೇಗಿದೆಯೆಂದರೆ ಹುಟ್ಟಿದ್ದು ಹೆಣ್ಣು ಎಂದು ಗೊತ್ತಾದಕೂಡಲೇ ಒಂದು ಕೀಳುತನ, ಅಧೀನತೆಯನ್ನು ಆರೋಪಿಸಲಾಗುತ್ತದೆ. ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಹಾಗೇ ತರಬೇತಿ ನೀಡಲಾಗುತ್ತದೆ. ಮದುವೆ, ಕುಟುಂಬ, ತಾಯ್ತನವೇ ಮೊದಲಾದ ಸಾಮಾಜಿಕ ಸಂಸ್ಥೆಗಳು ಹೆಣ್ಣಿನ ದಮನದ ಸ್ಥಿತಿಯನ್ನು ಕಾಯಂಗೊಳಿಸುತ್ತ ಸ್ಥಾಪಿತಗೊಂಡಿವೆ. ಅದನ್ನು ಪ್ರಶ್ನಿಸದೆ ಅಮಾಯಕ ಹೆಣ್ಣು ಒಪ್ಪಿಕೊಂಡಿರುವುದು ಅವಳ ಎಲ್ಲ ಸಮಸ್ಯೆಗಳಿಗೂ ಕಾರಣವಾಗಿದೆ.

ಎಂದೇ ಒಂದು ಹೆಣ್ಣಿನ ನಿಟ್ಟುಸಿರು ಸಾವಿರಾರು ಪುಟಗಳು ಹೇಳಲಾಗದ್ದನ್ನು ಹೇಳಿಬಿಡುತ್ತದೆ.

`ಮೀ ಟೂ’ ಹಾಗೆ ಮಾತಾಗಿ ಹೊರಬಂದ ಹಲವು ನಿಟ್ಟುಸಿರುಗಳ ಮೊತ್ತ. ಅವು ಪ್ರಿಯಾ ರಮಣಿಯ, ತನುಶ್ರೀ ದತ್ತಾಳ, ಶ್ರುತಿ ಹರಿಹರನ್‍ಳ, ಕಂಗನಾ ರನೌತ್‍ಳ ವೈಯಕ್ತಿಕ ನೋವುಗಳಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಹೆಣ್ಣುಗಳು ಅನಾದಿಯಿಂದ ನುಂಗಿಕೊಂಡು ಬಂದ ಒಳಸಂಕಟ. ಎಲ್ಲ ಅಭಿಯಾನ, ಹೋರಾಟಗಳ ಅಂತಿಮ ಆಶಯ ಸಮಾನತೆಯೆಡೆಗಿನ ಬದಲಾವಣೆ. ಯಾರು ಅಧೀನರೋ, ದಮನಿತರೋ ಅವರೇ ತಲೆಯೆತ್ತಿ ನಿಂತು ಸಮಾನತೆಯ ದಾರಿ ಹುಡುಕಬೇಕು. `ಮೀ ಟೂ’ ಕೆಲವು ಮಹಿಳೆಯರಿಗಾದರೂ ಅಷ್ಟು ಅವಕಾಶ ಕಲ್ಪಿಸಿದ್ದಲ್ಲಿ ಅಭಿಯಾನ ಸ್ವಾಗತಾರ್ಹ.

ಬಹುಪಾಲು ಸಾಮಾಜಿಕ ಸಂಸ್ಥೆಗಳು ಪುರುಷ ಪ್ರಾಬಲ್ಯವನ್ನು ಅಂತಸ್ಥವಾಗಿಟ್ಟುಕೊಂಡೇ ರೂಪುಗೊಂಡಿರುತ್ತವೆ. ಸಿನಿಮಾ ರಂಗವಿರಲಿ, ಮಾಧ್ಯಮವಿರಲಿ, ಪಿತೃಪ್ರಾಧಾನ್ಯವನ್ನು, ಗಂಡುಮೇಲರಿಮೆಯನ್ನು ಪೋಷಿಸುವಂಥವೇ ಆಗಿದ್ದು ಲೈಂಗಿಕ ದೌರ್ಜನ್ಯಕ್ಕೆ ಪ್ರಶಸ್ತ ತಾಣಗಳಾಗಿವೆ. ಕೆಲಸದ ಸ್ಥಳದಲ್ಲಿ ಹೆಂಗಸರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಗಂಡಸರು ಬಳಸುವ ಒಂದು ಹುನ್ನಾರ ಲೈಂಗಿಕ ದೌರ್ಜನ್ಯ. ಅದನ್ನು ಹೇಳಿಕೊಳ್ಳುವುದು ವ್ಯವಸ್ಥೆಯ ವಿರೋಧ, ದ್ರೋಹ ಎಂದು ಚಿತ್ರಿಸಲಾಗುತ್ತದೆ. ಫ್ರಾಯ್ಡ್ ಹೆಣ್ಣಿನ ಲೈಂಗಿಕತೆ ಆಳದಲ್ಲಿ ನಿಷ್ಕ್ರಿಯವೂ, ಗಂಡಸಿನಿಂದ ಹಿಂಸೆ ಅನುಭವಿಸಿ ಆನಂದಿಸುವಂಥದೂ, ಸ್ವಮೋಹಿಯೂ ಆದ ಗುಣಗಳನ್ನು ಹೊಂದಿದೆ ಎಂಬ ಹೇಳಿಕೆಯಿತ್ತ. ಇದನ್ನು ಬಹುಪಾಲು ಗಂಡಸರು ಒಪ್ಪುತ್ತಾರೆ. ತಾನೆಂದೂ ಗಂಡಿನಿಂದ ಬಯಸಲ್ಪಡಬೇಕಾದವಳು ಎಂಬ ಅಧೀನ ಸ್ಥಿತಿ ಹೆಣ್ಮಕ್ಕಳ ಮನದಲ್ಲೂ ದೃಢವಾಗಿರುವುದರಿಂದ ನಿಜಾರ್ಥದ ಬಿಡುಗಡೆ ಅಸಾಧ್ಯವಾಗಿದೆ. `ಗಣ್ಯ’ ಮಹಿಳೆ-ಪುರುಷರಲ್ಲೂ ಇದೇ ಧೋರಣೆ ಇರುವುದರಿಂದ ಗಣ್ಯ ಮಹಿಳೆಯರ ದುಃಖ-ನೋವುಗಳೂ ಸಹ ಜನಸಾಮಾನ್ಯ ಮಹಿಳೆಯರಿಗೆ ಹೇಗೋ ಹಾಗೇ ಇವೆ.

ಹೆಣ್ಣು ಇಂತಹ ಹಲವು ಸಂದಿಗ್ಧಗಳ ನಡುವೆ ಬದುಕುತ್ತಿರುವಾಗ, `ಮೀ ಟೂ’ ಅಭಿಯಾನ ಸಿನಿಮಾ-ಮಾಧ್ಯಮ ಜಗತ್ತಿನ ಲೈಂಗಿಕ ಕಿರುಕುಳಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ ಕಲ್ಪಿಸಿದೆ. ಮೊದಲು ಭಾರತದಲ್ಲಿ ಮಲಯಾಳ ಸಿನಿಮಾ ಜಗತ್ತಿನ ನಟಿ-ಕಲಾವಿದೆಯರ ಆತ್ಮಗೌರವ-ಘನತೆಯನ್ನು ಎತ್ತಿ ಹಿಡಿಯುವ ಚರ್ಚೆ ದಿಲೀಪ್ ಎಂಬ ನಟನ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದಾಗ ಮೇ 2017ರಲ್ಲಿ ಶುರುವಾಯಿತು. ಮಲಯಾಳಂ ಚಿತ್ರರಂಗದ ಪ್ರಮುಖ ಕಲಾವಿದೆಯರು `ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ ಶುರುಮಾಡಿದರು. ನಂತರ ಹಾಲಿವುಡ್‍ನಲ್ಲಿ ಅಕ್ಟೋಬರ್ 2017ರಲ್ಲಿ ಖ್ಯಾತ ಚಿತ್ರ ನಿರ್ಮಾಟಕ ಹಾರ್ವೆ ವೆಯಿನ್‍ಸ್ಟೀನ್‍ನ ವಿರುದ್ಧ ನಟಿ ಅಲಿಸಾ ಮಿಲಾನೊ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ, `ಮೀಟೂ’ ಹ್ಯಾಷ್ ಟ್ಯಾಗ್ ಹಾಕಿ ಅಭಿಯಾನ ಶುರುವಾಯಿತು. ಬಿರುಸಾಗಿ ಮುಂದುವರೆದು ವಿಶ್ವಾದ್ಯಂತ ಕಾಳ್ಗಿಚ್ಚಿನಂತೆ ಹರಡಿತು. ಅಸಂಖ್ಯ `ಗಣ್ಯ ಮಹಿಳೆ’ಯರು ಅನೇಕ `ಗಣ್ಯಪುರುಷ’ರ ಲಂಪಟತನವನ್ನು ಬಯಲು ಮಾಡಿದರು. ಬಹುಜನರು ಅಭಿಮಾನದಿಂದ ನೋಡುವ, `ಮಾದರಿ’ಗಳೆಂದು ಆದರಿಸುವ ಸಿನಿಮಾ ಲೋಕದ ಪುರುಷೋತ್ತಮರ ಬಣ್ಣ ಬಯಲಾಯಿತು.

ಸೆಪ್ಟೆಂಬರ್ 2018ರಲ್ಲಿ ಭಾರತದ ನಟಿ, ಸದ್ಯ ಸಿನಿಮಾ ರಂಗದಿಂದ ದೂರವಿರುವ ಅಮೆರಿಕವಾಸಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಳು. 10 ವರ್ಷ ಕೆಳಗೆ ನಡೆದ ಕಹಿ ಘಟನೆಗಳು ತನ್ನನ್ನು ಖಿನ್ನತೆಗೆ ದೂಡಿದ್ದು; ಪೌರ್ವಾತ್ಯ ಆಧ್ಯಾತ್ಮ, ಲಡಾಖಿನ ಬೌದ್ಧ ಮಠದ ಸಂಪರ್ಕ, ವಿಪಸ್ಸನ, ಕೊನೆಗೆ ಕ್ರೈಸ್ತ ಧರ್ಮಗಳು ತನ್ನನ್ನು ಖಿನ್ನತೆಯಿಂದ ಹೊರತಂದದ್ದು; ಆದರೂ ಸಿನಿಮಾ ರಂಗ ತೊರೆದು ಅಮೆರಿಕದಲ್ಲಿ ನೆಲೆಸಿದ್ದು ಎಲ್ಲವನ್ನು ಧೈರ್ಯವಾಗಿ ಬಹಿರಂಗಪಡಿಸಿದಳು.

ಹೇಳಿ ಹಗುರಾಗಿಸಿಕೊಳ್ಳುವ ಹೆಣ್ಣುಬಳ್ಳಿ ಹಬ್ಬತೊಡಗಿತು. ಪ್ರಿಯಾ ರಮಣಿ ಎಂಬ ಹಿರಿಯ ಪತ್ರಕರ್ತೆ ಎಂ. ಜೆ. ಅಕ್ಬರ್ ಎಂಬ ಪತ್ರಕರ್ತ- ಪ್ರಭಾವಿ ರಾಜಕಾರಣಿ ಕಂ ಮಂತ್ರಿಯ ವಿರುದ್ಧ ತಮ್ಮ ಅನಿಸಿಕೆಗಳನ್ನು ಬಹಿರಂಗಪಡಿಸಿದರು. ಇದಾದದ್ದೇ ಹಲವರು ತಮ್ಮ ಬಚ್ಚಿಟ್ಟುಕೊಂಡ ನೋವು-ವೇದನೆಗಳ ಹೊರಹಾಕತೊಡಗಿದ್ದಾರೆ. ಕನ್ನಡದಲ್ಲೂ ಇದು ಭಾರೀ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಆಪಾದನೆಗೊಳಗಾದವರು ಅಡ್ಡದಾರಿಗಳಿಂದ, ರಾಜಮಾರ್ಗದಿಂದ ಅಂಥ ಮಹಿಳೆಯರ ಸದ್ದಡಗಿಸುವ, ಅವರ ಕೆರಿಯರ್ ಅನ್ನೇ ಮುಗಿಸಿಬಿಡುವ, ಸಾಕ್ಷಿಗಳನ್ನು ಉಲ್ಟಾ ತಿರುಗಿಸುವ ಹುನ್ನಾರದಲ್ಲಿ ಮುಳುಗಿಹೋಗಿದ್ದಾರೆ. ಮತ್ತೊಂದಷ್ಟು ಕಾಡುಕುದುರೆಗಳು ತಮ್ಮ ಬಣ್ಣವೆಲ್ಲಿ ಬಯಲಾಗಿ ಬಿಟ್ಟೀತೋ ಎಂದು ಮೊದಲೇ ಬಡಬಡಿಸುತ್ತ ಕೆನೆಯತೊಡಗಿದ್ದಾರೆ.

ಇವೆಲ್ಲ ಆಗುಹೋಗುಗಳಿಂದ ವಿದ್ಯೆ-ಸ್ಥಾನಮಾನ-ಕೀರ್ತಿ-ಹಣ ಎಲ್ಲ ಇರುವ, ಮೇಲ್ವರ್ಗವೆಂದು ನಾವು ಭಾವಿಸುವ, ಮಹಿಳಾ ಸಂಘಟನೆ-ಚಳುವಳಿಗಳು ಅಷ್ಟಾಗಿ ಗಮನ ಕೊಡದ ಥಳುಕಿನ ಲೋಕದಲ್ಲೂ ಹೆಣ್ಣು ಬಾಧಿತಳೆ ಎಂಬುದು ಎಲ್ಲರ ಅರಿವಿಗೆ ದಕ್ಕತೊಡಗಿದೆ. ತಮ್ಮೊಳಗಿನ ನೋವು ಹೊರಹಾಕಲು ಇನ್ನೆಷ್ಟೋ ಮಹಿಳೆಯರಿಗೆ ಈ ಕೆಲವರ ದಿಟ್ಟ ನಡೆ ಧೈರ್ಯ ನೀಡುತ್ತಲೂ ಇರಬಹುದಾಗಿದೆ.

`ಮೆಟ್ರೊ ಫೆಮಿನಿಸಂ’!?

ಆದರೆ ಮೀಟೂಗೆ ಒಂದೆರೆಡು ದಿಕ್ಕಿನಿಂದ ಬಲು ಟೀಕೆಯೂ ಬರುತ್ತಿದೆ.

ತನ್ನ ಮೇಲೆ ಅತ್ಯಾಚಾರವಾಯಿತು ಎಂದು ತನ್ನಳಲನ್ನು ಬಹಿರಂಗಗೊಳಿಸಿದ ನಟಿಯ ವಿರುದ್ಧ ಸಹನಟಿಯೇ `ಅವಳು ಸಲಿಂಗಿ’ ಎಂದು ಜರೆಯುವುದು; ಕೆಲವು ನಟಿಯರು ಆರೋಪಿ ಪುರುಷರು ಅಂಥವರಲ್ಲ ಎಂದು ಕ್ಲೀನ್ ಚಿಟ್ ಕೊಡುವುದು, ಜನಪ್ರಿಯತೆ ಗಳಿಸಲು ಹಿಡಿದ ಕೀಳುದಾರಿಯೆಂದು ಇತರ ಮಹಿಳೆಯರೇ ದೂಷಿಸುವುದು ಮುಂದುವರೆದಿದೆ. ಒಂದು ಹೆಣ್ಣಿಗೆ ಮತ್ತೊಂದು ಹೆಣ್ಣಿನ ಅಳಲು ಕೇಳದಂತೆ ಆಗಿರುವುದು, ಅರಿವಾಗದಂತೆ ತಡೆದಿರುವುದು ಯಾವುದು?

ವಿಕಾಸಗೊಂಡ ಮನುಷ್ಯ ಜೀವಿ ನಾಗರಿಕಗೊಳ್ಳುತ್ತ ಹೋದಂತೆ ಮೊದಲು ಗುಲಾಮತನ ಹೇರಿದ್ದು ಹೆಣ್ಣಿನ ಮೇಲೆ. ಫ್ರೆಡೆರಿಕ್ ಏಂಗೆಲ್ಸ್ ಹೇಳುವಂತೆ ಮಾನವ ಸಮಾಜದ ಗುಲಾಮರ ಗುಲಾಮರ ಗುಲಾಮರ ಗುಲಾಮಳು ಹೆಣ್ಣು. ಈ ಗುಲಾಮತನವು ರೂಪಿಸಿದ ಅಧೀನ ಮನಸ್ಥಿತಿ 2018ನೇ ವರ್ಷದಲ್ಲೂ ನಮ್ಮನ್ನು ಗಾಢವಾಗಿ ಆವರಿಸಿದೆ. ಮುಟ್ಟಾಗುವ ವಯೋಮಾನದ ಹೆಣ್ಣು ದೇವಸ್ಥಾನಕ್ಕೆ ಹೋಗಬಾರದೆಂದು ಯಾವ ಶಾಸ್ತ್ರದಲ್ಲಿ ಉಲ್ಲೇಖ ಇಲ್ಲದಿದ್ದರೂ, ಹೋಗಬಹುದೆಂದು ಸುಪ್ರೀಂಕೋರ್ಟು ಹೇಳಿದಾಗಲೂ, ಒಳಹೋಗುವುದು ಬೇಡವೆಂದು ಸ್ವತಃ ಹೆಣ್ಣುಗಳೇ ಪ್ರತಿಭಟಿಸುತ್ತಾರೆ. ಆಯ್ಕೆಯಾದ ಜನಪ್ರತಿನಿಧಿ ಮಹಿಳೆಯರೇ ತಮ್ಮ ಗಂಡ/ಪುರುಷ ಬಂಧು ಮೀಟಿಂಗುಗಳಿಗೆ ಬರಬೇಕೆಂದು ಪಟ್ಟು ಹಿಡಿಯುತ್ತಾರೆ. ಹಾಗೆಯೇ ಮೀಟೂ ಅಭಿಯಾನದಲ್ಲೂ ಮಹಿಳೆಯರ ವಿರುದ್ಧ ಮಹಿಳೆಯರೇ ಮಾತಾಡುವುದೂ ಮುಂದುವರೆದಿದೆ. ಇವೆಲ್ಲ ತಪ್ಪು ಮಾದರಿಗಳ ಪ್ರಭಾವದಿಂದ ರೂಪುಗೊಂಡ ಹೆಣ್ಣಿನ ಗುಲಾಮ ಮನಸ್ಥಿತಿಯ ದ್ಯೋತಕವಾಗಿವೆ.

ಹಾಗಾಗಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ತನ್ನ ಮೇಲೆ ನಡೆಯಿತೆಂದು ಅಂತರಂಗದ ನೋವು ಹೇಳುವುದೇ ಹೆಣ್ಣಿಗೆ ಕಷ್ಟವಾಗಿದೆ. ಹೆಣ್ಣು ಎದುರಿಸುವ ಬಹುಪಾಲು ದೌರ್ಜನ್ಯಗಳು ವೈಯಕ್ತೀಕರಿಸಲ್ಪಟ್ಟು ಮೌನವಾಗಿಸುವುದು, ಮೌನ ಹೇರುವುದು ಸಾಧ್ಯವಾಗಿದೆ.

ಈ ನಿಟ್ಟಿನಲ್ಲಿ ವೈಯಕ್ತಿಕ ನೋವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನವಾಗಿ ಮೀಟೂದಂತಹ ಅಭಿಯಾನಗಳನ್ನು ನೋಡಬೇಕು. `ನನ್ನ ಸಮಸ್ಯೆ ನನ್ನದಷ್ಟೆ ಅಲ್ಲ; ಜಾತಿ-ವರ್ಗ-ಧರ್ಮ ಆಧಾರಿತ ದೌರ್ಜನ್ಯಗಳು ಹೇಗೆ ಸಾಮೂಹಿಕವಾಗಿ ಚರ್ಚಿಸಬೇಕಾದ ವಿಷಯಗಳೋ ಹಾಗೆ ಲೈಂಗಿಕ ದೌರ್ಜನ್ಯವನ್ನೂ ಸಾಮೂಹಿಕಗೊಳಿಸಿ ಚರ್ಚಿಸಬೇಕು. ಪರಿಹಾರವನ್ನು ಸಾಮೂಹಿಕವಾಗಿ ಕಂಡುಕೊಳ್ಳಬೇಕು’ ಎಂಬ ಅರಿವು ಮೂಡಿದ್ದರಿಂದಲೇ ತಮ್ಮ ಗಣ್ಯತೆ-ಭವಿಷ್ಯದ ಚಿಂತೆಗಳ ಒತ್ತಟ್ಟಿಗಿಟ್ಟು ತಮ್ಮ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಗಟ್ಟಿಯಾಗಿ ಆ ಹೆಣ್ಣುಗಳು ನಿಂತಿದ್ದಾರೆ.

ಕೆಲ ಸಂಗಾತಿಗಳು ಮೀ ಟೂ ಅಭಿಯಾನವನ್ನು `ಮೆಟ್ರೊ ಫೆಮಿನಿಸಂ’, `ಕಾರ್ಪೊರೇಟ್ ಫೆಮಿನಿಸಂ’ ಮುಂತಾಗಿ ತಪ್ಪುತಪ್ಪು ಪದಪ್ರಯೋಗಗಳಿಂದ ಜರೆಯತೊಡಗಿದ್ದಾರೆ. ಪ್ರತಿನಿತ್ಯ ದುಡಿಯುವ ವರ್ಗದ ಹೆಣ್ಮಕ್ಕಳು ಲೈಂಗಿಕ ದೌರ್ಜನ್ಯ-ಕಿರುಕುಳ-ಅತ್ಯಾಚಾರಗಳಿಗೆ ಈಡಾಗುತ್ತಿರುವಾಗ ಮೇಲ್ವರ್ಗದ ಗಣ್ಯ ಹೆಣ್ಣುಗಳ ನೋವಷ್ಟೇ ಹೆಚ್ಚು ಜಾಗ ಪಡೆದು ಸುದ್ದಿಯಾಗುತ್ತಿರುವುದು, ಮತ್ತದನ್ನು ಮಾಧ್ಯಮಗಳು-ಸಂಘಟನೆಗಳು ಬೆಂಬಲಿಸಿ ಊರೂರುಗಳಲ್ಲಿ ಚರ್ಚೆಯಾಗುತ್ತಿರುವುದು ಟೀಕಾಕಾರರ ತಕರಾರಿಗೆ ಗುರಿಯಾಗಿದೆ.

ಹೌದು, ಅವರು ಗಣ್ಯ ಮಹಿಳೆಯರು. ಆದರೆ ಗಣ್ಯರನ್ನು ಗಣ್ಯರನ್ನಾಗಿಸಿದ್ದು ಯಾರು? ಖಾಸಗೀತನದ ಪರಾಕಾಷ್ಠೆ ಗಣ್ಯ ವ್ಯಕ್ತಿಗಳಿಗೆ ತಂತಾನೇ ನೀಡಲ್ಪಟ್ಟಿದೆ. ಅವರ ಖಾಸಗಿತನವನ್ನು ಮಾರ್ಕೆಟ್ ಮಾಡಿ ಗಣ್ಯತೆಯನ್ನು ಹೆಚ್ಚಿಸಲಾಗಿದೆ. ಉಳಿದ ಮನುಷ್ಯರಂತೆಯೇ ಉಂಡು-ತಿಂದು-ಹೇತು-ಅತ್ತು ಬದುಕುವ ಗಣ್ಯರು ಮನುಷ್ಯರೆನ್ನುವುದನ್ನೇ ಸಮಾಜ ಮತ್ತು ಮಾಧ್ಯಮ ಮರೆತಿವೆ. ಅವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೆಲ್ಲ ರೋಚಕ ಸುದ್ದಿಯಾಗುತ್ತದೆ.

ಆದರೆ ನೆನಪಿಡುವ, ಗಣ್ಯತೆಯೂ ದೊಡ್ಡ ಹೇರಿಕೆ. ತನ್ನ ಕುಟುಂಬದ, ಮನೆತನದ, ಜಾತಿ-ವರ್ಗದ ಗಣ್ಯತೆಯನ್ನು ಕಾಯುವ ಹೊರೆ ಹೆಣ್ಣಿನ ಮೇಲೇ ಬಿದ್ದಿದೆ. ಗಣ್ಯತೆಯ ಉಳಿವಿಗೆ ಮೌನದ ಮೊರೆ ಹೊಕ್ಕು, ಕೊನೆಗೆ ಬಲಿಯಾಗುವುದು ಹೆಣ್ಣು ಬದುಕುಗಳೇ ಆಗಿವೆ. ಹೀಗಿರುತ್ತ ಈ ಮಹಿಳೆಯರ ಅಳಲು ತಪ್ಪು ಕಾರಣಗಳಿಗೆ ಟೀಕೆಗೊಳಗಾಗಿರುವುದು ವಿಷಾದಕರವಾಗಿದೆ. ಇಂಥ ಹೇಳಿಕೊಳ್ಳುವಿಕೆ ಗಣ್ಯ ಮಹಿಳೆಯರಿಗಷ್ಟೆ ಅಲ್ಲ, ತಳವರ್ಗ, ತಳಜಾತಿಗಳ ಹೆಣ್ಮಕ್ಕಳಿಗೂ ಸಾಧ್ಯವಾಗಬೇಕು, ನಿಜ. ಆದರೆ ಅದನ್ನು ಆಗಮಾಡುವ ಜವಾಬ್ದಾರಿ ಯಾರದು?

ತಳವರ್ಗ, ತಳಸಮುದಾಯಗಳು ಸದಾ ಶೋಷಿತರು, ಸ್ವಾಯತ್ತ ಯೋಚನೆ ಇಲ್ಲದವರು ಎಂಬ ಚಿಂತನೆಯೂ ಇಂಥ ಆರೋಪಗಳ ಹಿಂದಿದೆ. ಈ ಬಗೆಯ ಧೋರಣೆಯೇ ಒಂದು ಯಾಜಮಾನ್ಯ. ದುಡಿಯುವ ವರ್ಗದ ಹೆಣ್ಮಕ್ಕಳು ಬಲು ಸ್ವಾಯತ್ತವಾಗಿ ತಮ್ಮ ಬದುಕಿನ ನಿರ್ಧಾರಗಳ ತಾವೇ ತೆಗೆದುಕೊಳ್ಳುವುದೂ ಇದೆ; ಹಣ, ಅಧಿಕಾರದ ದರ್ಪಕ್ಕೆ ಬಲಿಯಾದದ್ದೂ ಇದೆ. ಹಾಗೆಯೇ ಅರಮನೆಯ ಗೋಡೆಗಳ ಹಿಂದೆ ವಿಲಾಸಿ, ಸೋಮಾರಿ ಹೆಣ್ಣುಗಳೂ ಇದ್ದಾರೆ, ಬಿಕ್ಕುವ ಹೆಣ್ಣುಗಳೂ ಇದ್ದಾರೆ. ಒಂದು ಮಠದ ಸ್ವಾಮಿಯಿಂದ ಅತ್ಯಾಚಾರಕ್ಕೊಳಗಾದ ಗಾಯಕಿಯ ಸಮುದಾಯ ಹೇಳುತ್ತದೆ, `ಅವಳೇನಾದರೂ ತಳವರ್ಗ-ಸಮುದಾಯದ ಹೆಣ್ಣಾಗಿದ್ದರೆ ಅಂತಾರಾಷ್ಟ್ರೀಯ ಸುದ್ದಿ ಆಗಿರುತ್ತಿತ್ತು. ಮೇಲ್ಜಾತಿಯವಳಾಗಿರುವುದರಿಂದ ಯಾರಿಗೂ ಬೇಡವಾಗಿದ್ದಾಳೆ.’ ಇತ್ತ ಮತ್ತೊಂದು ಗುಂಪು ಹೇಳುತ್ತದೆ, `ಖೈರ್ಲಾಂಜಿ-ವಿಜಯಪುರ-ಮಾಲೂರುಗಳ ದಲಿತ ಮಹಿಳೆಯರು ಅತ್ಯಾಚಾರ-ಕೊಲೆಯಾದರೆ ಯಾರಿಗೇನನಿಸುವುದಿಲ್ಲ, ಅದೇ ನಿರ್ಭಯಾ ಆದರೆ ದೇಶವೇ ಬೀದಿಗೆ ಬಂದು ನಿಲ್ಲುತ್ತದೆ.’

ಇದರಲ್ಲಿ ಯಾವುದು ನಿಜ?!

ದೌರ್ಜನ್ಯವೊಂದೇ ಹೆಚ್ಚು ನಿಜ. ಮಥುರಾ ಎಂಬ ಪೋರಿ ಆದಿವಾಸಿ ಬಾಲಕಿಯಿರಬಹುದು, ಅರುಣಾ ಶ್ಯಾನುಭಾಗ್ ನರ್ಸ್ ಇರಬಹುದು, ನಿರ್ಭಯಾ ದೆಹಲಿಯವಳಿರಬಹುದು, ಸೌಜನ್ಯ ಬಡ ಕುಟುಂಬದ ಎಳೆಬಾಲೆಯಿರಬಹುದು, ವಿಜಯಪುರದ-ಕಾಶ್ಮೀರದ ಎಳೆಯ ಹುಡುಗಿಯರು ದಲಿತ-ಮುಸ್ಲಿಮರಾಗಿರಬಹುದು – ಯಾವ ಜಾತಿ-ಧರ್ಮ-ವರ್ಗ-ಕ್ಷೇತ್ರ-ದೇಶದವರೇ ಆಗಿರಲಿ, `ನೊಂದೆ’ ಎಂದು ನಲುಗುವಾಗ ಅವರ ದುಗುಡ ನನ್ನಾಳವನ್ನು ಅಲುಗಿಸಬೇಕು ಎಂಬುದೇ ಸತ್ಯ. ಬೆನ್ನಹಿಂದೆ ತಿವಿತ ಅನುಭವಿಸುತ್ತ ನೆರವಿಗಾಗಿ ಯಾರಾದರೂ ಕರೆದರೆ ಓ ಎಂದು ಧಾವಿಸುವುದು ಎಲ್ಲರ ಕರ್ತವ್ಯ. ಮತ್ಯಾರಿಗೂ ಹಾಗಾಗದಂತೆ ತಡೆಯುವುದು, ಸಮುದಾಯ-ವರ್ಗ-ಲಿಂಗತ್ವಗಳ ಗಡಿದಾಟಿ ಎಲ್ಲರನ್ನೂ ಒಳಗೊಳ್ಳಲೇಬೇಕಾಗಿರುವುದು ಇವತ್ತಿನ ಮಹಿಳಾ ಚಳುವಳಿ ಮತ್ತು ಸಂಘಟನೆಗಳಿಗೆ ಅನಿವಾರ್ಯ.

ಎಲ್ಲ ದಮನಿತರ ಪರವಾಗಿ ನಿಲ್ಲುವುದು, ಲೋಕವನ್ನೇ ಕೆಟ್ಟದರಿಂದ ಕಾಪಿಡುವುದು ಹೆಣ್ತನ. ಇಂಥ ಹೆಣ್ತನವನ್ನು ಪ್ರತಿ ಮಾನವ ಜೀವಿಯಲ್ಲೂ ಉದ್ದೀಪಿಸಿ ನೆಲೆಗೊಳಿಸುವುದು ಸ್ತ್ರೀವಾದ. ಯಾವತ್ತೂ ಸ್ತ್ರೀವಾದವು ಯಶಸ್ಸಿನ ಅಂಕಿಅಂಶಗಳಿಂದ ತೃಪ್ತಿ ಪಡುವುದಿಲ್ಲ. ಮೈನಾರಿಟಿ ಯಶಸ್ಸಿಗಿಂದ ಮೆಜಾರಿಟಿ ವಿಫಲತೆಯ ಕಡೆಗೇ ಅದು ಗಮನ ಹರಿಸುತ್ತದೆ. ನಿಜವಾದ ಬಿಡುಗಡೆಯ ದಾರಿಯನ್ನು ಸ್ತ್ರೀಪುರುಷರೆಲ್ಲರಿಗೂ ಅರಸುತ್ತದೆ. ಮೀಟೂ ಇರಲಿ, ನ್ಯಾಪ್ಕಿನ್ ಇರಲಿ, `ಮುತ್ತು’ ಅಭಿಯಾನವಿರಲಿ, ದೇವಾಲಯ ಪ್ರವೇಶ ಹೋರಾಟವಿರಲಿ – ಜಾತಿಗ್ರಸ್ತ ಪಿತೃಪ್ರಧಾನ ಭಾರತೀಯ ಸಮಾಜದ ತಳಪಾಯದ ಒಂದು ಕಲ್ಲನ್ನಾದರೂ ಅದು ಅಲುಗಾಡಿಸುವುದಾದರೆ ಅಂಥ ಎಲ್ಲ ಪ್ರಯತ್ನಗಳಿಗೆ ಹೆಣ್ಮನಗಳ ಬೆಂಬಲವಿರಲಿ.

 

– ಡಾ. ಎಚ್. ಎಸ್. ಅನುಪಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *