’ಮಿ ಟೂ’ ಅಭಿಯಾನ ಸೃಷ್ಟಿಸಿದ  ಸಂಚಲನ – ಜ್ಯೋತಿ ಇರ್ವತ್ತೂರು

 

ಕಳೆದ ಎರಡು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗುತ್ತಿರುವ ‘ಮಿ ಟೂ’ ಅಭಿಯಾನ ಸಾಂಪ್ರದಾಯಿಕತೆಯ ಮುಸುಕು ಹೊದ್ದ ಭಾರತೀಯ ಸಮಾಜದಲ್ಲಿ ಹೊಸ ಬದಲಾವಣೆ ತರುತ್ತಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಮುಕ್ತವಾಗಿ ತಮ್ಮ ಅನುಭವ ಹೇಳಿಕೊಳ್ಳುತ್ತಿದ್ದಾರೆ.

 

ಆಗಿನ್ನು ಚಿಕ್ಕವಳು. ಬಸ್ ನಲ್ಲಿ ಹಲವು ಬಾರಿ ಪ್ರಯಾಣಿಸುವ ಸಂದರ್ಭ. ರಾತ್ರಿ ಪ್ರಯಾಣ ಮಾಡುತ್ತಿದ್ದರಂತೂ ರಾತ್ರಿಯಿಡೀ ಜಾಗರಣೆಯಾಗಬೇಕಾದ ಅನಿವಾರ್ಯತೆ. ಕಾರಣ ಇಷ್ಟೆ, ಹಿಂದೆ ಕೂತವರ ಕೈಬೆರಳುಗಳು, ಕಾಲ್ಬೆರಳುಗಳು ಭೂತದಂತೆ ಮೈ ಮುಟ್ಟಲು ಮಾಡುತ್ತಿದ್ದ ಪ್ರಯತ್ನ. ಇದಕ್ಕೆ ಪರಿಹಾರ ಸುಲಭವಿತ್ತು. ಜೋರಾಗಿ ಕಿರುಚಿ ಕಂಡೆಕ್ಟರ್ ಗೆ ಹೇಳಿ ವ್ಯಕ್ತಿಯ ಘನತೆ ಕುರಿತು ಕನಿಷ್ಟ ಪರಿಜ್ಞಾನವಿರದವನಿಗೆ ಮಂಗಳಾರತಿ ಮಾಡಬಹುದಿತ್ತು. ಆದರೆ ಮಾತಾಡುವು ಧೈರ್ಯ ಆಗಿರುತ್ತಿರಲಿಲ್ಲ. ಬೆಳೆದಂತೆ ಮಾತಾಡುವ, ದುರುಗುಟ್ಟಿ ನೋಡುವ ಧೈರ್ಯ ಬಂತು.

ಇಂತಹ ಅನುಭವಗಳು ಬಹುತೇಕರದ್ದು. ನಾನು ಬಹಳಷ್ಟು ಮಂದಿಯ ಜೊತೆಗೆ ಮಾತಾಡುವ ಸಂದರ್ಭದಲ್ಲಿ ಇದನ್ನು ಕೇಳಿಸಿಕೊಂಡಿದ್ದೇನೆ. ಹುಡುಗಿ, ಮಹಿಳೆಯೆಂದರೆ ಕೇವಲ ಉತ್ಪನ್ನವಾಗಿ ನೋಡುವ ಮನಸ್ಥಿತಿಗಳು ಮಹಿಳೆಯರನ್ನು ಹೀಗೆಯೇ ಇನ್ನೂ ನೋಡುತ್ತಲೇ ಇವೆ. ಮೊನ್ನೆ ಮೊನ್ನೆ ಸಿಕ್ಕಿದ ಹುಡುಗಿಯರು ಕೂಡ ಕೆಲವರು ತಮ್ಮನ್ನು ನೋಡೋ ದೃಷ್ಟಿಕೋನ ಸರಿಯಿಲ್ಲ, ಎದುರು ಹಾಕಿಕೊಂಡರೆ ನಮಗೆ ಕಷ್ಟ ಎಂದು ಹೇಳಿದ ಮಾತನ್ನು ಕೇಳಿಸಿಕೊಂಡಿದ್ದೇನೆ.

ಇಂತಹ ಅನುಭವದ ಕುರಿತಂತೆ ನಟಿ ತನುಶ್ರೀ ದತ್ತಾ ಇತ್ತೀಚೆಗೆ ಮಾತಾಡಿದಾಗ ಇದು ದೊಡ್ಡದೊಂದು ಅಭಿಯಾನವಾಗುತ್ತದೆ ಅನ್ನೋ ಅರಿವು ನನಗಿತ್ತು. ಹಾಗೆಯೇ  ’ಮಿ ಟೂ (# Me  too)’ ಅಭಿಯಾನ ತೀವ್ರತೆಯನ್ನು ಪಡೆದಿದೆ. ದೇಶಾದ್ಯಂತ  ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಬೇರೆ ಬೇರೆ ಕ್ಷೇತ್ರದಿಂದ ಮಾತಾಡಲು ಆರಂಭಿಸಿದ್ದಾರೆ, ಕೆಲವರು ಈ ಆರೋಪದಿಂದ ತಾವು ಹೊತ್ತಿದ್ದ ದೊಡ್ಡ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಹಿರಿಯ ನಟ ನಾನಾ ಪಾಟೇಕರ್ ಶ್ರೇಷ್ಠ ನಟ ಇದರಲ್ಲಿ ಎರಡು ಮಾತಿಲ್ಲ, ಆದರೆ ನಟನೆಗು ವೈಯಕ್ತಿಕ ಬದುಕಿಗು, ವೈಯಕ್ತಿಕ ವರ್ತನೆಗು ತಾಳೆಹಾಕೋ ಅಗತ್ಯವೇ ಇಲ್ಲ. ಸರಿನೋ ತಪ್ಪೋ ಅನ್ನೋದಕ್ಕಿಂತ ನಟಿಯೊಬ್ಬರು ಮಾತನಾಡಿದಾಗ ಕೇಳಿಸಿಕೊಳ್ಳುವ ತಾಳ್ಮೆ ಮಾನವೀಯತೆ  ನಮಗೆ ಇರಬೇಕಾಗುತ್ತದೆ. ಆದರೆ ನಮ್ಮ ಪೂರ್ವಗ್ರಹಪೀಡಿತ ಮನಸ್ಸು ಯಾರನ್ನೋ ಒಳ್ಳೆಯವರೆಂದು ಕೆಟ್ಟವರೆಂದು ನಿರ್ಧರಿಸಿಬಿಟ್ಟಿರುತ್ತೆ. ಹಾಗಾಗಿಯೇ ನಾವೇ ತೀರ್ಪು ಕೊಡುತ್ತೇವೆ. ಇಲ್ಲಿ ನಾವು ಗಮನಿಸಬೇಕಾದ ಅಂಶ ಅಂದ್ರೆ  ಸತ್ಯಕ್ಕೆ ಹಲವು ಆಯಾಮಗಳು ಇರುತ್ತವೆ.

ಏನೇ ಆಗಲಿ ತನುಶ್ರೀ ದತ್ತಾ ಹೇಳಿಕೆಯ ನಂತರ ತೀವ್ರವಾದ ಸಂಚಲನವೊಂದು ಪ್ರಾರಂಭವಾಗಿದೆ, ಘಟಾನುಘಟಿಗಳ ಕುರಿತು ಕೆಲವರು ಮಾತಾಡಲಾರಂಭಿಸಿದ್ದಾರೆ. ಕೆಲವರು ಈ ಹಿನ್ನೆಲೆಯಲ್ಲಿ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಅಮೆರಿಕಾದಲ್ಲಿ ಈ ಆಂದೋಲನ ಒಂದು ವರ್ಷದಿಂದಲೇ ಸದ್ದು ಮಾಡುತ್ತಿದೆ. ಹಾಲಿವುಡ್ ನ ಖ್ಯಾತ ನಟಿ ಅಂಜಲಿನಾ ಜ್ಯೂಲಿ ಸೇರಿದಂತೆ ಅಮೆರಿಕಾದ ಅನೇಕ ನಟಿಯರು ಖ್ಯಾತ ನಿರ್ಮಾಪಕ ಹಾರ್ವೇ ವಿನ್ ಸ್ಟೀನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ರು. ಹೀಗೆ ಆರಂಭವಾದ ಚಳವಳಿ ತೀವ್ರತೆ ಪಡೆದು ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಘಟಾನುಘಟಿಗಳ ವಿರುದ್ಧ 429 ಪ್ರಕರಣಗಳು ದಾಖಲಾಗಿವೆ.

ನಾನು ಪುರುಷ ವಿರೋಧಿ ಅಲ್ಲ ಅನ್ನೋದನ್ನು ಹೇಳುತ್ತಲೇ ಈ ಮಿ  ಟೂ ಆಂದೋಲನದ ಬಗ್ಗೆ ನಾನು ಬರೆಯುತ್ತಿದ್ದೇನೆ.ಯಾಕಂದರೆ ನಮ್ಮನ್ನು ಪ್ರೋತ್ಸಾಹಿಸುವ ತಂದೆಯಂತವರು, ಆತ್ಮೀಯರು, ಸ್ನೇಹಿತರು, ಸಹೋದರರು ಎಲ್ಲರು ಪುರುಷರೇ ಅಲ್ಲವೇ?  ಹಾಗಾಗಿ ಇಲ್ಲಿ ಪ್ರಮುಖವಾಗೋದು ನಿಜವಾದ ಸಮಸ್ಯೆ. ಪಿಂಕ್ ಸಿನಿಮಾದಲ್ಲಿ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಅಮಿತಾಬ್ ಬಚ್ಚನ್ ಹೇಳೋ ಡಯಲಾಗ್ ಕೇಳಿ ಕಣ್ಣಂಚಿನಲ್ಲಿ ನಮ್ಮಂತವರು ಕಂಬನಿ ಸುರಿಸಿದ್ದೇವೆ ಅಂದರೆ ಮಹಿಳೆಯರಿಗಾಗಿ ಸಮಾಜ ವಿಧಿಸಿರುವ ಕಟ್ಟುಪಾಡುಗಳು ನಮ್ಮನ್ನು ಕಾಡುತ್ತಿದೆ ಎಂದೇ ಅರ್ಥ.

ಸ್ವಲ್ಪ ಮಾಡರ್ನ್ ಆಗಿದ್ದರೆ ಆಕೆ ನಮ್ಮ ಬಲೆಗೆ ಬೀಳುತ್ತಾಳೆ ಎಂದು ಮಾತಾಡಿಕೊಳ್ಳುವ ವಿಕೃತ ಮನಸ್ಸುಗಳು ಇನ್ನೂ ಇರುವಾಗ, ತಮ್ಮ ಸ್ಥಾನಮಾನ ಮತ್ತು ಕೆಲಸ ಮಾಡಬೇಕಾದ ಅನಿವಾರ್ಯತೆ ಹಣ್ಣುಮಕ್ಕಳಿಗಿರುವಾಗ,ಒಂದು ಕಡೆ ಏನು ಮಾಡಬಹುದು ಅನ್ನುವವರು, ಇನ್ನೊಂದೆಡೆ ಅಸಹಾಯಕರಾಗಿ ಬದುಕುವವರು, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವವರು ,ನಮಗ್ಯಾಕೆ ಎನ್ನುವವರು, ಮತ್ತೊಂದೆಡೆ ಹೆಣ್ಣೆಂಬ ಕಾರಣಕ್ಕೆ ಅರ್ಹತೆಯಿಲ್ಲದಿದ್ದರೂ ಸಮಯಸಾಧಕತನದಿಂದ ಅವಕಾಶ ಬಳಸಿಕೊಳ್ಳುವವರು ಈ ಎಲ್ಲಾ ವಾಸ್ತವ ಸಂಗತಿಗಳ ಮಧ್ಯೆ ಮೀ ಟೂ ಅಭಿಯಾನವನ್ನು ನೋಡಬೇಕಾಗಿದೆ.

ಮತ್ತೆ ಆರೋಪದತ್ತ ಗಮನ ಹರಿಸೋದಾದ್ರೆ ಕೇಂದ್ರ ಸಚಿವ  ಪತ್ರಕರ್ತ ಎಂ. ಜೆ. ಅಕ್ಬರ್, ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ, ವಿಕಾಸ್ ಬೆಹಲ್, ಕಾದಂಬರಿಕಾರರಾದ ಚೇತನ್ ಭಗತ್, ನಟರಾದ ಅಲೋಕ್ ನಾಥ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತಿದೆ.

ಈಗಾಗಲೆ ಹೇಳಿದಂತೆ ಪತ್ರಿಕೋದ್ಯಮದಲ್ಲೂ ಕೆಲವರ ಹೆಸರುಗಳು ಬಹಿರಂಗವಾಗಿದೆ. ಒಬ್ಬರು ಧೈರ್ಯದಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪ ಮಾಡುತ್ತಿದ್ದಂತೆ ಇನ್ನಷ್ಟು ಮಂದಿ ತಮಗೆ ಆಗಿರುವ ಅನುಭವ ಹಂಚಿಕೊಂಡಿದ್ದಾರೆ. ಇದೆಲ್ಲವು ಆಗಬೇಕಿದೆ. ಆದರೆ ದುರುದ್ದೇಶ ಪೂರ್ವಕವಾಗಿ ಆರೋಪ ಮಾಡಿದ್ದಾರೆಯೇ ಎನ್ನುವ  ಅಂಶದ ಬಗ್ಗೆ ಗಮನವನ್ನು ಹರಿಸುವ ಅಗತ್ಯವಿದೆ. ಆದರೆ ಒಬ್ಬ ವ್ಯಕ್ತಿಯ ವಿರುದ್ಧ ಇಂತಹ ಆರೋಪ ಮಾಡಿದಾಗ ಇನ್ನಷ್ಟು ಮಂದಿ ಇದಕ್ಕೆ ಧ್ವನಿ ಸೇರಿಸಿದಾಗ, ಆ ವ್ಯಕ್ತಿಯ ವರ್ತನೆ ಹೆಣ್ಣುಮಕ್ಕಳೆಡೆ ಅಸಹಜವಾಗಿದೆ ಎನ್ನುವುದು ಸಾಬೀತಾಗುತ್ತದೆ.  ಹಾಗಾಗಿ ಮಿ ಟೂ ಅಭಿಯಾನದ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ. ಎಲ್ಲಾ ಕ್ಷೇತ್ರಗಳಲ್ಲಿ ಇಂತಹ ಸಂಚಲನವೊಂದು ಬದಲಾವಣೆಯ ಗಾಳಿ ಬೀಸುವಂತೆ ಖಂಡಿತ ಮಾಡುತ್ತದೆ. ಅದು ಕೆಟ್ಟದನ್ನು ಎಚ್ಚರಿಸುವ, ಸ್ವಚ್ಚಗೊಳಿಸುವ ಮತ್ತು ತಪ್ಪನ್ನು ಒಪ್ಪಿಕೊಳ್ಳುವ ಹಾಗೆಯೇ ಆ ರೀತಿಯ ವರ್ತನೆ ಮರುಕಳಿಸದಂತೆ ಎಚ್ಚರಿಕೆ ಗಂಟೆಯಾಗುತ್ತದೆ.

ಜ್ಯೋತಿ ಇರ್ವತ್ತೂರು

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *