ಮಾನಭಂಗ ಮತ್ತು ರಾಖಿ- ಡಾ. ಗೀತಾ ಕೃಷ್ಣಮೂರ್ತಿ
ತನ್ನ ಮಾನಭಂಗ ಮಾಡಲು ಬಂದವನನ್ನು ಸೋದರ ಎಂದು ಮಹಿಳೆ ಪರಿಭಾವಿಸಲು ಸಾಧ್ಯವೇ? ಅವನಿಗೆ ರಾಖಿ ಕಟ್ಟಿ ಅವನಿಂದ ಸಿಹಿ ತಿಂಡಿ ಮತ್ತು ಉಡುಗೊರೆ ಪಡೆಯಲು ಸಂತ್ರಸ್ತೆಗೆ, ಅವಳ ಮಗನಿಗೆ ಸಾಧ್ಯವಾಗುತ್ತದೆಯೇ? ನ್ಯಾಯಾಲಯ ಜಾಮೀನು ನೀಡುವ ಸಂದರ್ಭದಲ್ಲಿ ಆರೋಪಿಗೆ ವಿಧಿಸಿದ ಷರತ್ತುಗಳು ಮತ್ತು ಅವುಗಳ ಪಾಲನೆಯ ಫೋಟೋಗಳನ್ನು ಕಳಿಸಿ ಎಂದಿರುವುದು ನಿಜಕ್ಕೂ ಆಘಾತ ನೀಡಿವೆ.
ಮಧ್ಯ ಪ್ರದೇಶದ ಇಂದೋರ್ ಪೀಠದ ನ್ಯಾಯಮೂರ್ತಿಗಳಾದ ರೋಹಿತ್ ಆರ್ಯ ಮಹಿಳೆಯ ಮಾನಭಂಗದ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿದ ಷರತ್ತುಗಳು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಕ್ರಂ ಬಾಗ್ರಿ ಉಜ್ಜೈನಿಯ ನಿವಾಸಿ. ಏಪ್ರಿಲ್ 20ರಂದು ಆತ 30 ವರ್ಷದ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮಾನಭಂಗ ಮಾಡಲು ಪ್ರಯತ್ನಿಸಿದ್ದ. ಈ ಆರೋಪದ ಮೇಲೆ ಅವನನ್ನು ಬಂಧಿಸಲಾಗಿತ್ತು. ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಆಪರಾಧಿಕ ಹಲ್ಲೆ ಮಾಡಿದ ಆರೋಪಕ್ಕಾಗಿ ಭಾರತ ದಂಡ ಸಂಹಿತೆಯ 354 ನೇ ಕಲಮಿನ ಅಡಿಯಲ್ಲಿ ಅವನ ವಿರುದ್ಧ ಮೊಕದ್ದಮೆಯನ್ನು ದಾಖಲು ಮಾಡಲಾಗಿತ್ತು. ಮಹಿಳೆಯ ಮಾನಭಂಗದ ಆರೋಪದ ಮೇಲೆ ಎರಡು ತಿಂಗಳ ಕಾಲ ಜೈಲು ವಾಸ ಅನುಭವಿಸಿದ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಕೋರುವ ಅರ್ಜಿ ನ್ಯಾಯಾಲಯದ ಮುಂದೆ ಇತ್ತು.
ಜಾಮೀನು ನೀಡಿಕೆಗೆ ಪೂರ್ವಭಾವಿಯಾಗಿ, 50,000 ರೂ. ಗಳಿಗೆ ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಆರೋಪಿಗೆ ಆದೇಶಿಸಲಾಯಿತು. ಜಾಮೀನು ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯ ಯಾವುದೇ ಷರತ್ತುಗಳನ್ನು ವಿಧಿಸಿದರೂ ಅದನ್ನು ಪಾಲಿಸಲು ಆರೋಪಿ ಬದ್ಧನಾಗಿರುತ್ತಾನೆ ಮತ್ತು ಆ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನನ್ನು ರದ್ದುಗೊಳಿಸಬಹುದಾಗಿರುತ್ತದೆ. ಈ ಪ್ರಕ್ರಿಯೆ ನ್ಯಾಯಾಲಯದ ಸಾಮಾನ್ಯ ಪ್ರಕ್ರಿಯೆಗಳಲ್ಲಿ ಒಂದು. ಆದರೆ ಈ ಮೊಕದ್ದಮೆಯಲ್ಲಿ, ಆರೋಪಿ ಬಾಗ್ರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಹಾಕಿದ ಷರತ್ತುಗಳು ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
“ಜಾಮೀನು ಅರ್ಜಿ ಸಲ್ಲಿಸಿರುವ ಆರೋಪಿ ಆಗಸ್ಟ್ 3ರಂದು 11 ಗಂಟೆಗೆ ತನ್ನ ಹೆಂಡತಿಯೊಡನೆ ಸಂತ್ರಸ್ತೆಯ ಮನೆಗೆ ರಾಖಿ ಮತ್ತು ಸಿಹಿ ಡಬ್ಬಿಯೊಂದಿಗೆ ತೆರಳಬೇಕು ಮತ್ತು ತನಗೆ ರಾಖಿ ಕಟ್ಟುವಂತೆ ಆಕೆಯನ್ನು ಕೋರಬೇಕು ಮತ್ತು ಮುಂದಿನ ಎಲ್ಲ ದಿನಗಳಲ್ಲಿ ತಾನು ಅವಳನ್ನು ರಕ್ಷಿಸುತ್ತೇನೆಂದು ವಚನ ನೀಡಬೇಕು” ಅಲ್ಲದೆ ರಾಖಿ ಕಟ್ಟಿದುದಕ್ಕಾಗಿ ಸಂತ್ರಸ್ತೆಗೆ 11,000 ರೂಗಳನ್ನು ಮತ್ತು ಆಕೆಯ ಮಗನಿಗೆ ಹೊಸ ಬಟ್ಟೆ ಮತ್ತು ಸಿಹಿ ಕೊಳ್ಳುವುದಕ್ಕಾಗಿ 5,000 ರೂಗಳನ್ನು ನೀಡಬೇಕೆಂದು ಸಹ ಆದೇಶದಲ್ಲಿ ತಿಳಿಸಲಾಗಿದೆ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ, ರಾಖಿ ಕಟ್ಟುತ್ತಿರುವ ಫೋಟೋ ಮತ್ತು ಹಣ ನೀಡಿದುದಕ್ಕೆ ರಸೀತಿಯನ್ನು ಆದೇಶ ಪಾಲನೆಯ ಪುರಾವೆಯಾಗಿ ಹಾಜರುಪಡಿಸುವಂತೆಯೂ ತಿಳಿಸಿದೆ.
ಸಂತ್ರಸ್ತೆ ಅನುಭವಿಸಿರಬಹುದಾದ ಮಾನಸಿಕ ಹಿಂಸೆ ಮತ್ತು ಸಂತ್ರಸ್ತೆಗೆ ಆರೋಪಿಯ ಬಗ್ಗೆ ಇರಬಹುದಾದ ಆಕ್ರೋಶ ಇದೆಲ್ಲವನ್ನೂ ಕಡೆಗಣಿಸಿ ನೀಡಿರುವ ಈ ಅದೇಶ, ‘ಪುರುಷ ಮಹಿಳೆಯ ರಕ್ಷಕ ಮತ್ತು ಮಹಿಳೆ ಪುರುಷನ ರಕ್ಷಣೆಗೆ ಒಳಪಡಬೇಕಾದವಳು’ ಎಂಬ ಪುರುಷ ಪ್ರಧಾನ ಮನೋಭಾವವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಆರೋಪಿಯನ್ನು ಸಂತ್ರಸ್ತೆಯ ಮನೆಗೆ ಕಳುಹಿಸುವಂಥ ಈ ಸಂವೇದನಾರಹಿತ, ಅಮಾನವೀಯ ಆದೇಶದ ಬಗ್ಗೆ ವ್ಯಾಪಕ ಟೀಕೆಗಳು ಮತ್ತು ಆಕ್ರೋಶ ವ್ಯಕ್ತವಾಗಿದೆ.
ರಕ್ಷಾ ಬಂಧನವನ್ನು ಭಾರತದಾದ್ಯಂತ ಸೋದರ ಸೋದರಿಯರ ಪ್ರೀತಿಯ ಬಾಂಧವ್ಯದ ಕುರುಹಾಗಿ ಆಚರಿಸಲಾಗುತ್ತದೆ. ತನ್ನ ಮಾನಭಂಗ ಮಾಡಲು ಬಂದ ವ್ಯಕ್ತಿಗೆ ಸೋದರನ ಸ್ಥಾನ ನೀಡಿ ಅವನಿಂದ ರಾಖಿ ಕಟ್ಟಿಸಿಕೊಳ್ಳುವುದಕ್ಕೆ ಸಂತ್ರಸ್ತೆಯ ಮನಸ್ಸು ಸಿದ್ಧವಾಗಲು ಸಾಧ್ಯವೇ. ಅಂಥ ಕಲ್ಪನೆಯನ್ನಾದರೂ ಮಾಡಲು ಸಾಧ್ಯವೇ? ಸಂತ್ರಸ್ತೆಯ ಭಾವನೆಗಳಿಗೆ ಕಿಂಚಿತ್ತೂ ಬೆಲೆಯಿಲ್ಲದ ಅದೇಶ ಪಾಲನೆಗೆ ಅವಳು ಒಪ್ಪಬೇಕಾದರೂ ಯಾಕೆ? ಅಷ್ಟಕ್ಕೂ ಅದು ಅವಳಿಗೆ ನೀಡಿದ ಆದೇಶವಲ್ಲವಲ್ಲ!
ಹಾಗಾದರೆ ಈ ಅತಾರ್ಕಿಕ ಆದೇಶ ಪಾಲನೆಯಾಗುವುದೆಂತು?
ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.