ಮಹಿಳೆಯರ ಮೇಲಿನ ದೌರ್ಜನ್ಯ ವೈಭವೀಕರಿಸಬೇಡಿ- ನೂತನ ದೋಶೆಟ್ಟಿ

70, 80ರ ದಶಕದಲ್ಲಿ ಸ್ತ್ರೀವಾದಿ ಹೋರಾಟ, ಹಲವು ಆಂದೋಲನಗಳಿಗೆ ಅವಕಾಶ ಕಲ್ಪಿಸಿ ತನ್ಮೂಲಕ ಮಹಿಳಾ ಜಾಗೃತಿಗೆ ಕಾರಣವಾಗಿದ್ದ ಸಮೂಹ ಮಾಧ್ಯಮಗಳು ಈಗ ಮಾರುಕಟ್ಟೆ ಆರ್ಥಿಕತೆಗೆ ತಕ್ಕಂತೆ ಹೆಣ್ಣನ್ನು ಭೋಗದ ವಸ್ತುವಾಗಿ ತೋರಿಸುವ, ಇಲ್ಲವೇ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳನ್ನು ವೈಭವೀಕರಿಸುವ ಕೆಲಸ ಮಾಡುತ್ತಿವೆ. ಸಮಾಜದ ಮೇಲೆ ಇವು ಬೀರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ

ಸಮೂಹ ಮಾಧ್ಯಮಗಳಲ್ಲಿ ಮಹಿಳೆಯರನ್ನು ನಕಾರಾತ್ಮಕವಾಗಿ ಬಿಂಬಿಸುವುದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಅಂತಹ ಸುದ್ದಿ-ಬರಹಗಳ ಮೇಲೆ ನಿರ್ಬಂಧ ಹೇರಬೇಕು ಎಂಬ ಜಿಜ್ಞಾಸೆ ಇಂದು ಮಹಿಳಾಪರ ಹೋರಾಟಗಳಲ್ಲಿ ವ್ಯಕ್ತವಾಗುತ್ತಿದೆ. ವಿಚಿತ್ರವೆಂದರೆ ಮಹಿಳೆಯರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಕಾನೂನು ಅರಿವು ಮೂಡಿಸುವಲ್ಲಿ, ಶೋಷಣೆಯ ವಿರುದ್ಧ ಮಹಿಳೆಯರು ಪ್ರತಿಕ್ರಿಯಿಸಲು ಸಹ ಇದೇ ಮಾಧ್ಯಮ ಅರಿವಿನ ದೀಪ ಹಚ್ಚಿದೆ.

ಇದಕ್ಕೆ ಅತ್ಯುತ್ತಮ ಉದಾಹರಣೆ 2013ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆ. ಇದಕ್ಕೆ ಮುಖ್ಯ ಕಾರಣ ಸಾಮಾಜಿಕ ಮಾಧ್ಯಮಗಳು, ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳು. ಆನಂತರದಲ್ಲಿ ದೇಶದಾದ್ಯಂತ ನಡೆದ ಅನೇಕಾನೇಕ ಮಹಿಳಾ ವಿರೋಧಿ ಕೃತ್ಯಗಳಿಗೆ ಸಾಮಾಜಿಕ ಮಾಧ್ಯಮ ತೀವ್ರವಾಗಿ ಪ್ರತಿಕ್ರಿಯಿಸಿದೆ. ಕ್ಷಣಾರ್ಧದಲ್ಲಿ ಭೂಮಿಯನ್ನು ಸುತ್ತುವರಿಯುವ ಸಾಮರ್ಥ್ಯವುಳ್ಳ ಸಾಮಾಜಿಕ ಮಾಧ್ಯಮ ಇಂದು ಬಹುಮುಖ್ಯ ಹಾಗೂ ಶಕ್ತಿಶಾಲಿ ಮಾಧ್ಯಮವಾಗಿ ಹೊರಹೊಮ್ಮಿದೆ.

ಹಿಂದೊಮ್ಮೆ ಮಾಹಿತಿ, ಶಿಕ್ಷಣ ಮತ್ತು ಸದಭಿರುಚಿಯ ಮನರಂಜನೆಯ ಆಗರವಾಗಿದ್ದ ಮಾಧ್ಯಮಗಳು ಅಪರಾಧಗಳನ್ನು ವೈಭವೀಕರಿಸುವ, ಮಹಿಳೆಯರ ದೇಹವನ್ನು ಸರಕಾಗಿ ಬಳಸುವ ವಾಹಿನಿಗಳಾಗಿ ಬದಲಾಗಿದ್ದು ಹೇಗೆ… ?

ಭಾರತದಲ್ಲಿ ಪತ್ರಿಕೆಗಳು 70ರ ದಶಕದಿಂದಲೇ ಉದ್ಯಮಗಳಾಗಿದ್ದವು. ಈ ಲಾಭದಾಯಕ ಉದ್ಯಮದಲ್ಲಿ ಇರುವ ಸ್ಪರ್ಧೆಯ ಕಾರಣ ಪತ್ರಿಕೆಗಳಿಗೆ ತಮ್ಮ ಓದುಗರನ್ನು ಹಿಡಿದಿಟ್ಟುಕೊಳ್ಳಲು ಹೊಸ ಹೊಸ ಪ್ರಯೋಗ ಮಾಡುವುದು ಅನಿವಾರ್ಯವಾಗಿತ್ತು. ಜೊತೆಗೆ 80-90 ರ ದಶಕದಲ್ಲಿ ಟಿವಿ ವಾಹಿನಿಗಳಿಂದ ಅವು ಪೈಪೋಟಿಯನ್ನು ಎದುರಿಸಬೇಕಾಗಿ ಬಂತು. ಟಿವಿ ವಾಹಿನಿಗಳು ಮನರಂಜನೆಯ ಭಾಷ್ಯವನ್ನೇ ಬದಲಿಸಿ ಸಿನಿಮಾ, ಸೆಲೆಬ್ರಟಿ, ಫ್ಯಾಷನ್ ಹಾಗೂ ಮಹಿಳೆಯರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡಲು ಆರಂಭಿಸಿದವು. ಮೊದಮೊದಲು ಮುಜುಗರವನ್ನು ಅನುಭವಿಸಿದ ನೋಡುಗರು ಬರುಬರುತ್ತ ಅದಕ್ಕೆ ಹೊಂದಿಕೊಂಡಿದ್ದು ಮಾತ್ರವಲ್ಲ ಅದನ್ನೇ ಬಯಸಿದರೂ ಕೂಡ. ನೋಡುಗರ ಈ ಪ್ರತಿಕ್ರಿಯೆ ಟಿವಿ ವಾಹಿನಿಗಳು ಹೆಚ್ಚಲು ಕಾರಣವಾಯಿತು.

ಈ ಮಾದರಿಯಿಂದ ತಲ್ಲಣಗೊಂಡ ಪತ್ರಿಕೆಗಳು ಬೇರೆ ಬೇರೆ ಪುರವಣಿಗಳನ್ನು ಆರಂಭಿಸಿ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾದವು. ಒಂದೆಡೆ ಹಣ ಗಳಿಕೆಯ ಒತ್ತಡ, ಇನ್ನೊಂದೆಡೆ ಪೈಪೋಟಿಯ ಕಾರಣದಿಂದ ಪತ್ರಿಕೆಗಳಲ್ಲಿ ಸಾಮಾಜಿಕ ಕಳಕಳಿ ಕಾಣೆಯಾಗದಿದ್ದರೂ ಕಡಿಮೆಯಾಗಹತ್ತಿತು. ದಿನಬೆಳಗಾದರೆ ನಡೆಯುವ ಮಹಿಳಾ ದೌರ್ಜನ್ಯಗಳು ಮೊದಲು ದೊಡ್ಡ ಸುದ್ದಿಯಾಗಿ, ಬರುಬರುತ್ತ ಗಾತ್ರದಲ್ಲಿ ಸಣ್ಣದಾಗುತ್ತ ಬಂದವು. ಅತ್ಯಾಚಾರಗಳಿಗೆ ಸಿಕ್ಕ ಕವರೇಜ್ ಆ ಅಪರಾಧದ ಶಿಕ್ಷೆಗೆ ಸಿಗುತ್ತಿಲ್ಲ ಎಂಬ ಆರೋಪ ಈಗಲೂ ಪತ್ರಿಕೆಗಳ ಮೇಲೆ ಇದೆ. ಆದರೂ ಇಂದಿಗೂ ಪತ್ರಿಕೆಗಳು ‘ಫೋರ್ತ್ ಎಸ್ಟೇಟ್’ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿರುವುದು ಮಾತ್ರವಲ್ಲ, ಇತರ ಮಾಧ್ಯಮಗಳಿಗೆ ಹೋಲಿಸಿದರೆ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಆದ್ದರಿಂದ ಉಳಿದ ಮಾಧ್ಯಮಗಳಿಗೆ ಹೋಲಿಸಿದರೆ ಪತ್ರಿಕೆಗಳ ಮೇಲೆ ಮಹಿಳೆಯರನ್ನು ವ್ಯತಿರಿಕ್ತವಾಗಿ ಬಿಂಬಿಸುವ ಅಥವಾ ನಕಾರಾತ್ಮಕವಾಗಿ ಚಿತ್ರಿಸುವ ಕಳಂಕವನ್ನು ಪೂರ್ಣವಾಗಿ ಹೊರಿಸಲು ಸಾಧ್ಯವಿಲ್ಲ.

ಟಿವಿ ವಾಹಿನಿ 80 ರ ದಶಕದಲ್ಲಿ ಸಮಾಜಮುಖಿಯಾಗಿ ಇದ್ದ ಮಾಧ್ಯಮ. ಅನೇಕ ಸಾಮಾಜಿಕ ಸಮಸ್ಯೆಗಳಿಗೆ, ಮಹಿಳಾ ಸಮಸ್ಯೆಗಳಿಗೆ, ಸವಾಲುಗಳಿಗೆ ಕಾಲಕಾಲಕ್ಕೆ ಸ್ಪಂದಿಸುತ್ತ ಜನರ ಆಶೋತ್ತರಗಳಿಗೆ ಮುಖವಾಣಿಯಾಗಿ ಇದ್ದ ವಾಹಿನಿಯಲ್ಲಿ 90 ರ ದಶಕದ ಅಂತ್ಯದಲ್ಲಿ ಬಲುಬೇಗ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಇದಕ್ಕೆ ಮುಖ್ಯ ಕಾರಣ ಹೆಚ್ಚಿದ ವಾಹಿನಿಗಳು ಹಾಗೂ ಅವುಗಳ ಪೈಪೋಟಿ. ದಿನವಿಡೀ ಕಾರ್ಯನಿರ್ವಹಿಸುವ ವಾಹಿನಿಗಳು ಆರಂಭವಾದ ಮೇಲೆ ಕಾರ್ಯಕ್ರಮಗಳನ್ನು ತುಂಬಲು ಗುಣಮಟ್ಟವನ್ನು ಗಾಳಿಗೆ ತೂರಲಾಯಿತು. ಜನಪರ ಕಾಳಜಿ ಕಡಿಮೆಯಾಯಿತು.

ಈಗಂತೂ ವಾಹಿನಿಗಳಲ್ಲಿ ಪ್ರಸಾರವಾಗುವ ಬಹುತೇಕ ಕಾರ್ಯಕ್ರಮಗಳು ಮಹಿಳಾ ಕೇಂದ್ರಿತವಾಗಿವೆ. ಮಹಿಳೆಯರನ್ನು ಗಮನದಲ್ಲಿರಿಸಿಕೊಂಡೇ ಪ್ರಸಾರವಾಗುವ ಧಾರಾವಾಹಿಗಳು ಟಿವಿಯ ಬಂಡವಾಳ. ಇಲ್ಲಿನ ಹೆಣ್ಣುಗಳು ಭರ್ಜರಿ ಸೀರೆ ಉಟ್ಟು , ಮೈತುಂಬ ಆಭರಣ ಹೇರಿಕೊಂಡಿರುವವರು, ಗೈಯ್ಯಾಳಿಗಳು, ಮನೆಮುರುಕರು, ಲೇಡಿ ವಿಲನ್‍ಗಳು ಇಲ್ಲವೇ ಅಳುಮುಂಜಿಗಳು. ಇವರಿಂದ ರೋಚಕ ಕೆಲಸ ಮಾಡಿಸುತ್ತ, ಸಂಸಾರಗಳನ್ನು ಒಡೆಯುತ್ತ, ಹಣದ ಅಟ್ಟಹಾಸವನ್ನು ಮೆರೆಸುತ್ತ ಟಿಆರ್‌ಪಿ ಹೆಚ್ಚಿಸಿಕೊಳ್ಳುವುದೇ ಈ ಕಾರ್ಯಕ್ರಮಗಳ ಉದ್ದೇಶ. ಕಳೆದ ಮೂರು ದಶಕಗಳಲ್ಲಿ ಇಂತಹ ಮಹಿಳಾ ಪಾತ್ರಗಳು ಸಿದ್ಧ ಮಾದರಿಗಳಾಗಿ ಹೋಗಿವೆ. ಇಂತಹ ಹೆಣ್ಣುಗಳ ಪಾತ್ರ ಸೃಷ್ಟಿಯಾದದ್ದಾದರೂ ಹೇಗೆ ಎಂಬುದೇ ಆಶ್ಚರ್ಯ.

ಇನ್ನು ಮೌಢ್ಯವನ್ನು ಬಿತ್ತುವುದರಲ್ಲಿ ಈ ವಾಹಿನಿಗಳು ಹಿಂದೆ ಬಿದ್ದಿಲ್ಲ. ಒಂದು ವಾಹಿನಿಯಲ್ಲಿ ಸ್ತ್ರೀಯೊಬ್ಬಳು ನಾಗಿಣಿಯಾಗಿ ರೂಪ ತಾಳುವ ಧಾರಾವಾಹಿ ಯಶಸ್ವಿಯಾದರೆ ಉಳಿದ ವಾಹಿನಿಗಳೂ ಅಂತಹ ಧಾರಾವಾಹಿಯನ್ನು ಆರಂಭಿಸಿ ಬಿಡುತ್ತವೆ. ಮೌಢ್ಯಾಚರಣೆಯನ್ನು ವಸ್ತುವಾಗುಳ್ಳ ಧಾರಾವಾಹಿಗಳಂತೂ ವಾಹಿನಿಗಳ ‘ಹಾಟ್ ಫೇವರಿಟ್’. ಏಕೆಂದರೆ ಅವುಗಳನ್ನು ನೋಡುವ ಮಹಿಳೆಯರು ಅವರಿಗೆ ಟಿಆರ್‌ಪಿ ತಂದುಕೊಡುತ್ತಾರೆ. ಈ ಹಿನ್ನೆಲೆಯಲ್ಲಿಯೇ ಎಲ್ಲ ವಾಹಿನಿಗಳೂ ದಿನಭವಿಷ್ಯ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವುದು. ಈ ಕಾರ್ಯಕ್ರಮಗಳ ಪ್ರಧಾನ ವೀಕ್ಷಕರು ಮಹಿಳೆಯರೇ ಎಂಬ ಸತ್ಯ ಅರಿವಿದ್ದೇ ವಾಹಿನಿಗಳು ಈ ಕಾರ್ಯಕ್ರಮವನ್ನು ಮಾಡುತ್ತಿವೆ. ಅತ್ತೆ-ಸೊಸೆ ಸಂಬಂಧದ ಧಾರಾವಾಹಿಗಳಿಗೂ ಹೆಚ್ಚಿನ ಟಿಆರ್‌ಪಿ ಇರುವುದರಿಂದ ಅಂತಹ ವಸ್ತುಗಳು ಈಗಲೂ ಎಲ್ಲ ವಾಹಿನಿಗಳಲ್ಲಿ ರಾರಾಜಿಸುತ್ತಿವೆ. ಈ ಎಲ್ಲ ಧಾರಾವಾಹಿಗಳಲ್ಲಿ ಹೆಣ್ಣನ್ನು ‘ಜಾಗೃತ ಮಹಿಳೆ’ಯಾಗಿ ಬಿಂಬಿಸದೇ ಇರುವುದನ್ನು ನಾವು ವಿಶೇಷವಾಗಿ ಗಮನಿಸಬಹುದು.

ಅನೇಕ ವಾರ್ತಾವಾಹಿನಿಗಳು ಈಗ ದಿನವಿಡೀ ಕಾರ್ಯನಿರ್ವಹಿಸುತ್ತವೆ. ಅಲ್ಲಿ ಸುದ್ದಿಗಿಂತ ‘ಗಾಸಿಪ್’ ಗೆ ಹೆಚ್ಚು ಒತ್ತು ಕೊಡುತ್ತಿರುವಂತಿದೆ. ಮನೆಯ ಒಳಗಡೆ ನಡೆಯುವ ಜಗಳಗಳು ವಾಹಿನಿಯ ಅಂಗಳಕ್ಕೆ ಬಂದು ತೆರೆಯ ಮೇಲೆ ದಿನವಿಡೀ ಪ್ರಸಾರವಾಗುತ್ತವೆ. ಖಾಸಗಿ ಬದುಕಿನ ನೋವನ್ನು ತೆರೆಯ ಮೇಲೆ ವಿಜೃಂಭಿಸಿ ತೋರಿಸುವ ಅಮಾನವೀಯ ಮನಸ್ಥಿತಿಗೂ ಟಿಆರ್‌ಪಿಯೇ ಕಾರಣ ಎಂದು ಬೇರೆ ಹೇಳಬೇಕಿಲ್ಲ. ಇಂತಹ ಕಾರ್ಯಕ್ರಮಗಳ, ದೃಶ್ಯಾವಳಿಗಳ ಪ್ರಸಾರದಲ್ಲಿ ಮಹಿಳೆಯೇ ಮೂಲವಸ್ತು ಹಾಗೂ ಆಕೆಯ ದುಃಖವೇ ಕಾರ್ಯಕ್ರಮದ ಮೂಲಧಾತು.

ಮತ್ತೊಂದು ಟ್ರೆಂಡ್ ಎಂದರೆ ಮಹಿಳೆಯ ಖಾಸಗಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪುರುಷ ಅಧಿಕಾರಿಗಳನ್ನು, ರಾಜಕೀಯ ವ್ಯಕ್ತಿಗಳನ್ನು, ಧಾರ್ಮಿಕ ಗುರುಗಳನ್ನೂ ಬಯಲು ಮಾಡುವುದು. ಇಲ್ಲಿ ಸುಳ್ಳು-ಸತ್ಯದ ಪ್ರಶ್ನೆಗಿಂತ ಹೆಣ್ಣು ತನ್ನ ದೈಹಿಕ ಸಂಪತ್ತಿನ ಮೂಲಕ ಏನನ್ನಾದರೂ ಸೂರೆ ಮಾಡಬಲ್ಲಳು ಎಂಬುದನ್ನು ಮುಖ್ಯ ಭೂಮಿಕೆಯಲ್ಲಿ ಪ್ರದರ್ಶಿಸಲಾಗುತ್ತದೆ. ವಿಧಾನಸೌಧದ ಒಳಗಡೆ ನೋಡುತ್ತಾರೆ ಎನ್ನಲಾಗುವ ನೀಲಿ ಚಿತ್ರಗಳ ಪ್ರಸಾರವಿರಬಹುದು, ಗಣ್ಯವ್ಯಕ್ತಿಗಳೊಂದಿಗೆ ಏಕಾಂತದಲ್ಲಿದ್ದಳು ಎಂಬ ಆರೋಪದ ದೃಶ್ಯಗಳಾಗಬಹುದು. ಎಲ್ಲದರಲ್ಲೂ ಮಹಿಳೆಯ ಗೌರವಕ್ಕೆ ಧಕ್ಕೆ ಆಗುವಂತೆ ಈ ವಾಹಿನಿಗಳು ನಡೆದುಕೊಳ್ಳುವುದಂತೂ ನಿಜ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕಾದರೆ ಬೇರೆಯ ವಾಹಿನಿಯಲ್ಲಿ ಟಿಆರ್‌ಪಿ ಹೆಚ್ಚು ಬರಲು ಕಾರಣ ಅಲ್ಲಿ ಪ್ರಸಾರವಾದ ಅತ್ಯಾಚಾರ ಪ್ರಕರಣ ಎಂದು ಕಂಡು ಬಂದರೆ ತಮ್ಮ ವಾಹಿನಿಯಲ್ಲೂ ಅತ್ಯಾಚಾರ ಪ್ರಸಾರ ಮಾಡಿ ಎಂದು ವಾಹಿನಿಯ ಸಂಪಾದಕೀಯ ಸಭೆಯಲ್ಲಿ ಫರ್ಮಾನು ಹೊರಡಿಸುವ ವಾಹಿನಿ ಮುಖ್ಯಸ್ಥರೂ ಇದ್ದಾರೆ ! ಸರ್ವಂ ಟಿಆರ್‌ಪಿ ಮಯಂ !

ಸಿನಿಮಾ ಅತ್ಯದ್ಭುತ ಹಾಗೂ ಅತೀ ಪ್ರಭಾವಶಾಲಿ ಸಮೂಹ ಮಾಧ್ಯಮ. ಭಾರತದಲ್ಲಿ 70ರ ದಶಕದಲ್ಲಿ ಕೌಟುಂಬಿಕ ಹಾಗೂ ಸಾಮಾಜಿಕ ಕಳಕಳಿಯ, ಮಹಿಳಾಪರ ಕಾಳಜಿಯ ಸಿನಿಮಾಗಳೇ ತೆರೆಗೆ ಬರುತ್ತಿದ್ದವು. ನಟ ನಟಿಯರಂತೆ ಸಿನಿಮಾ ವಸ್ತುಗಳೂ ಮನೆಮಾತಾಗಿದ್ದವು. ತಾಯಿ ಪ್ರಧಾನ ಸಿನಿಮಾಗಳು ಎಲ್ಲ ಭಾಷೆಗಳಲ್ಲೂ ಬರುತ್ತಿದ್ದ ಕಾಲವದು. ಆನಂತರ ಅಂಗಾಂಗ ಪ್ರದರ್ಶನಕ್ಕೆ ಮಹಿಳೆಯರನ್ನು ಒಡ್ಡುವ ಸಿನಿಮಾಗಳು ಎಲ್ಲ ಭಾಷೆಗಳಲ್ಲೂ ನಿರ್ಮಾಣವಾಗ ಹತ್ತಿದವು. ಅಲ್ಲಿಂದ ಮುಂದೆ ಸಿನಿಮಾಕ್ಕೆ ದೇಹ ಪ್ರದರ್ಶನವೇ ಬಂಡವಾಳವಾಯಿತು. ಹೆಣ್ಣು, ಆಕೆಯ ದೇಹ, ಕಾಮ, ಕ್ರೌರ್ಯ, ಕಣ್ಣೀರು ಹಾಗೂ ದೌರ್ಜನ್ಯವನ್ನು ಪ್ರದರ್ಶಿಸುವ ಮೂಲಕ ಗಲ್ಲಾಪೆಟ್ಟಿಗೆಯ ಯಶಸ್ಸಿನ ಸೂತ್ರವನ್ನು ಸಿನಿಮಾ ಕ್ಷೇತ್ರ ಸುಲಭವಾಗಿ ಅಳವಡಿಸಿಕೊಂಡಿತು. 90ರ ದಶಕದ ನಂತರ ಭಾರತದಲ್ಲಿ ಯುವಜನಸಂಖ್ಯೆ ಹೆಚ್ಚಳವಾದದ್ದು ಈ ಮಾಧ್ಯಮಕ್ಕೆ ವರದಾನವಾಯಿತು. ಯುವಜನರೇ ಮುಖ್ಯವಾಗಿ ಸಿನಿಮಾ ವೀಕ್ಷಕರೂ ಆದದ್ದರಿಂದ ಅವರನ್ನು ಸೆಳೆಯುವಲ್ಲಿ ಮತ್ತೆ ಹೆಣ್ಣನ್ನು ಉಪಯೋಗಿಸಿಕೊಳ್ಳಲಾಯಿತು. ಸೆನ್ಸಾರ್ ಮಂಡಳಿ ಯಾವ ಒತ್ತಡಕ್ಕೂ ಒಳಗಾಗದೇ ಮೊದಲೇ ಅಂಕುಶವನ್ನು ಪ್ರಯೋಗಿಸಿದ್ದರೆ ಇಂದು ಸಿನಿಮಾ ಎಂಬ ಪ್ರಭಾವಶಾಲಿ ಮಾಧ್ಯಮ ಹೆಣ್ಣನ್ನು ಕೀಳಾಗಿ ಕಾಣುವ, ಪ್ರದರ್ಶಿಸುವ ಧಾಷ್ಟ್ರ್ಯ ತೋರಿಸುತ್ತಿರಲಿಲ್ಲ.

21ನೇ ಶತಮಾನ ಆಧುನಿಕ ಮಾಧ್ಯಮಗಳ ಯುಗ. ಅಂರ್ತಜಾಲದ ಮೂಲಕ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿರುವ ಕಾಲವಿದು. ಒಳ್ಳೆಯದು-ಕೆಟ್ಟದ್ದು ಎಂಬ ವಿಂಗಡಣೆಗಾಗಲೀ, ವ್ಯವಧಾನವಾಗಲೀ ಇರದ ಈ ಕಾಲ ಮಾಹಿತಿಯ ಹಪಾಹಪಿಯ ಕಾಲವೂ ಹೌದು. ಕಂಡದ್ದನ್ನು ಚಪ್ಪರಿಸುವ, ಕಾಣದ್ದಕ್ಕೆ ಸದಾ ತಡಕಾಡುವ ಈ ಕಾಲದಲ್ಲಿ ಮಾನವನ ಹಸಿ ಹಸಿ ವಾಂಛೆಗಳಿಗೆ ಅಂರ್ತಜಾಲ ಲಗ್ಗೆ ಹಾಕಿತು. ಮಾಹಿತಿಯೊಂದರ ಪ್ರಕಾರ ಲೈಂಗಿಕತೆಗೆ ಸಂಬಂಧಪಟ್ಟ ಮಾಹಿತಿಗೆ ಎಡತಾಕುವುದರಲ್ಲಿ ಭಾರತ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ! ಇದಕ್ಕೆ ಯಾವ ನಿಯಂತ್ರಣವೂ ಇಲ್ಲ. ಈ ಶತಮಾನದಲ್ಲಿ ಬಂದ ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್‍ಬುಕ್ ಬೆಳೆದ ಪರಿ ಅಚ್ಚರಿ ಹುಟ್ಟಿಸುವಂಥದು. ಇಂಥ ಮಾಧ್ಯಮದಲ್ಲಿ ಮಹಿಳೆಯ ಶೋಷಣೆ ನಿರಂತರವಾಗಿ ನಡೆದಿದೆ. ಸೈಬರ್‌ ಕ್ರೈಮ್‌ ಹೆಚ್ಚಳಕ್ಕೆ ಆಧುನಿಕ ಮಾಧ್ಯಮಗಳ ಕೊಡುಗೆ ಅಪಾರ.

ಈ ಮೇಲಿನ ಎಲ್ಲ ಮಾಧ್ಯಮಗಳೂ ಆಧುನಿಕ ಮಹಿಳೆಯ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣವಾದಂತೆ ಅವಳ ಶೋಷಣೆಗೂ ಕಾರಣವಾಗಿವೆ. ಇಂದು ಮಹಿಳೆಯನ್ನು ನಕಾರಾತ್ಮಕವಾಗಿ ಚಿತ್ರಿಸಬೇಡಿ ; ಇದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂದು ಯಾರಿಗೆ ಹೇಳುವುದು? ಎಲ್ಲಿಂದ ಪ್ರಾರಂಭಿಸುವುದು? ಮಹಿಳೆಯನ್ನು ನಕಾರಾತ್ಮಕವಾಗಿ ಚಿತ್ರಿಸುವುದು ಆರ್ಥಿಕತೆಯ ಭಾಗವಾಗಿ ಹೋಗಿದೆ. ಹಣ ಮಾಡುವ ಉದ್ಯಮಗಳದ್ದೇ ಇದರಲ್ಲಿ ಸಿಂಹಪಾಲು ಇರುವುದುರಿಂದ ಅವು ಇದರಿಂದ ಹಿಂದೆ ಬರುವುದು ಅನುಮಾನ. ಆದ್ದರಿಂದ ಪರಿಹಾರ ಬೃಹತ್ ಪ್ರಶ್ನೆಯಾಗಿ ನಿಲ್ಲುತ್ತದೆ.

ಜಾತಿ, ಮತ-ಪಂಥಗಳ ಹೆಸರಿನಲ್ಲಿ ಒಂದಾಗುವ ಜನ, ಭಾಷೆ, ಕೋಮು, ಧರ್ಮಕ್ಕೆ ಅಪಚಾರ ಮಾಡುವ ಚಿತ್ರಗಳು, ಲೇಖನಗಳು, ಪುಸ್ತಕಗಳು, ಸಿನಿಮಾಗಳ ವಿರುದ್ಧ ನಿಲ್ಲುವ ಇದೇ ಜನ ಮಹಿಳೆಯ ಪರವಾಗಿ, ಸ್ತ್ರೀತ್ವದ ಪರವಾಗಿ ನಿಲ್ಲುವುದಿಲ್ಲ ಎಂಬುದು ಸಂಕಟ ತರುವ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯ ಮಾದರಿಗಳನ್ನು ನಿರ್ಮಿಸಿ, ಬೆಳೆಸಿ, ಸ್ಥಾಪಿಸುವುದು ಪಿರಾಮಿಡ್ಡಿನ ತುದಿಯಲ್ಲಿ ನಿಂತು ತಳವನ್ನು ಸರಿ ಮಾಡಲು ಹೊರಡುವ ಕೆಲಸದಂತೆ ಕ್ಲಿಷ್ಟವಾಗಿ ಕಾಣುತ್ತಿದೆ. ಪಿರಾಮಿಡ್ಡಿನ ತಲೆಕೆಳಗು ಮಾದರಿಯಲ್ಲಿ ಮನೆ ಮನೆಯಿಂದಲೇ ಈ ಕಾರ್ಯ ಆರಂಭವಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮೆದುರಿಗೆ ಇದೆ.

ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಮಹಿಳೆಯರ ಮೇಲಿನ ದೌರ್ಜನ್ಯ ವೈಭವೀಕರಿಸಬೇಡಿ- ನೂತನ ದೋಶೆಟ್ಟಿ

  • August 23, 2018 at 3:57 pm
    Permalink

    ನೂತನ ಮೇಡಂ, ಲೇಖನ ಚನ್ನಾಗಿ ಮೂಡಿ ಬಂದಿದೆ.ಮಹಿಳೆಯರ ಬಗ್ಗೆ ಮಾಧ್ಯಮಗಳ ಕಾರ್ಯವೈಖರಿಗಳನ್ನ ಎಳೆ ಎಳೆಯಾಗಿ ಬಿಡಿಸಿದ್ದೀರಿ.ಅಂತ್ಯದಲ್ಲಿ ತಮ್ಮ ಮನದಾಳದ ನೋವನ್ನ ತೋಡಿಕೊಂಡಿದ್ದೀರಾ.ಮಹಿಳೆಯರನ್ನ ನಕಾರಾತ್ಮಕವಾಗಿ ಚಿತ್ರಿಸುವುದರಿಂದ ಸಮಾಜದ ಮೇಲಿನ ವ್ಯತಿರಿಕ್ತ ಪರಿಣಾಮ ಅಕ್ಷರಶಃ ಸತ್ಯ.ಅದರೆ ಇದನ್ನ ಯಾರಿಂದ, ಹೇಗೆ ತಡೆಗಟ್ಟಬೇಕೆಂಬುದು ಯಕ್ಷ ಪ್ರಶ್ನೆ ಎಂಬುದು ಸತ್ಯವಾದರೂ ಅಂತಹ ಪಾತ್ರಗಳಲ್ಲಿ ಭಾಗವಹಿಸುವ ಕಲಾವಿದರಿಗೆ,ಜಾಹೀರಾತುಗಳಲ್ಲಿ ಮಾಡೆಲ್ ಆಗುವ ಮಹಿಳೆಯರಿಗೆ ಇದರಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಅರಿವು ಮೂಡಿಸಿ,ತಿಳಿ ಹೇಳಿ ಭಾಗವಹಿಸದಿರುವಂತೆ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು.ಎಲ್ಲಿಯವರೆಗೆ ಅವರ ಮನಸ್ಥಿತಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಅಂತಹವರನ್ನ ಬಳಸಿಕೊಳ್ಳುವವರು ಮಾಧ್ಯಮಗಳಲ್ಲಿ ಇದ್ದೇ ಇರುತ್ತಾರೆ.ಹಿಂದಿಗಿಂತ ಇಂದು ಮಾಧ್ಯಮಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಅಪಾರವಾಗಿದೆ ಆದರೂ ಮಹಿಳೆಯರನ್ನ ನಕಾರಾತ್ಮಕವಾಗಿ ಬಿಂಬಿಸುವುದು ಹೆಚ್ಚುತ್ತಿದೆ.ಇದಕ್ಕೆ ಯಾರನ್ನ ಹೊಣೆಗಾರರನ್ನಾಗಿ ಮಾಡಬೇಕು ಎಂಬುದೆ ಸಮಾಜದ ಮುಂದಿರುವ ಪ್ರಶ್ನೆ. ಆದರೂ ಇದರ ವಿರುದ್ದ ಎಲ್ಲರೂ ಕೈ ಜೋಡಿಸೋಣ.
    ಡಾ.ಕೆ.ಜಿ.ಹಾಲಸ್ವಾಮಿ

    Reply

Leave a Reply

Your email address will not be published. Required fields are marked *