ಅಂಕಣ

ಕಾನೂನು ಕನ್ನಡಿ / ಮಹಿಳಾ ಸಬಲೀಕರಣದಲ್ಲಿ ಮಹತ್ವದ ಹೆಜ್ಜೆ – ಡಾ.ಗೀತಾ ಕೃಷ್ಣಮೂರ್ತಿ

ಕಾಲಕಾಲಕ್ಕೆ ಕಾನೂನು ನವೀಕೃತಗೊಳ್ಳುವುದು ಅನಿವಾರ್ಯ. ಆದರೆ ಇದು ಯಶಸ್ವಿಯಾಗುವುದು ಪರಿಣಾಮಕಾರಿ ಜಾರಿಯಿಂದ ಮಾತ್ರ. ಅದರಲ್ಲಿ ಕಾನೂನಿನ ಸರಿಯಾದ ನಿರ್ವಚನ ಮಹತ್ವದ ಪಾತ್ರ ವಹಿಸುತ್ತದೆ. ವರದಕ್ಷಿಣೆ ಪ್ರಕರಣದ ವಿಚಾರಣೆ ಎಲ್ಲಿ ನಡೆಯಬೇಕು ಅನ್ನುವ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಸ್ಪಷ್ಟ ಮಾತುಗಳನ್ನು ಹೇಳಿದೆ.

ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ವರದಕ್ಷಿಣೆ ಹಿಂಸೆಯ ಪ್ರಕರಣದಲ್ಲಿ ಮಹತ್ವದ ತೀರ್ಪನ್ನು ನೀಡಿದೆ. ಈ ತೀರ್ಪು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಇಟ್ಟ ಮತ್ತೊಂದು ಮಹತ್ವದ ಹೆಜ್ಜೆ. ಗಂಡನ ಮನೆಯಲ್ಲಿ, ವರದಕ್ಷಿಣೆ ಕಿರುಕುಳ ಮತ್ತು ಹಿಂಸೆಗೆ ಒಳಗಾಗಿ, ಗಂಡನ ಮನೆಯನ್ನು ತೊರೆದು, ತವರು ಮನೆಯಲ್ಲಿ ಆಶ್ರಯ ಪಡೆದಿರುವ ಮಹಿಳೆ, ತಾನಿರುವ ಸ್ಥಳದಲ್ಲಿಯೇ ನ್ಯಾಯ ಪಡೆಯಬಹುದೇ ಎಂಬುದಕ್ಕೆ ಈ ತೀರ್ಪು ಸಂಬಂಧಪಟ್ಟಿದೆ.
ಯಾವುದೇ ಸಮಾಜ ಸುಧಾರಣಾ ಕಾನೂನು ರಚನೆಯಾಗುವುದು, ಸಾಮಾಜಿಕ ಒತ್ತಡದಿಂದ. ಅಪರಾಧಗಳ ಸಂಖ್ಯೆ ಹೆಚ್ಚಿದಾಗ ಮತ್ತು ಅಪರಾಧಗಳು ಹೊಸ ಹೊಸ ಸ್ವರೂಪಗಳನ್ನು ಪಡೆದಾಗ, ಅವುಗಳನ್ನು ನಿಯಂತ್ರಿಸಲು ಹಾಗೂ ಅಪರಾಧಿಗಳನ್ನು ಶಿಕ್ಷಿಸಲು ಕಾನೂನು ಸಹ ಸಜ್ಜುಗೊಳ್ಳಬೇಕಾಗುತ್ತದೆ. ಹಾಗೆ ಅನೇಕ ಕಾನೂನುಗಳು ಜಾರಿಗೊಂಡವು. ಅವುಗಳಲ್ಲಿ, ಮಹಿಳಾ ದೌರ್ಜನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾರಿಗೊಂಡ ಕಾನೂನುಗಳಲ್ಲಿ ಪ್ರಮುಖವಾದವು, ಭಾರತ ದಂಡ ಸಂಹಿತೆಗೆ ತಿದ್ದುಪಡಿ ಮಾಡಿ ಸೇರಿಸಿದ 498ಎ ಪ್ರಕರಣ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಗೆ ರಕ್ಷಣೆ ನೀಡುವ ಅಧಿನಿಯಮ, ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ನಿಷೇಧ ಅಧಿನಿಯಮ, ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಪಾಲು ನೀಡುವ ಬಗ್ಗೆ ಉತ್ತರಾಧಿಕಾರ ಅಧಿನಿಯಮಕ್ಕೆ ಮಾಡಿದ ತಿದ್ದುಪಡಿ ಮೊದಲಾದುವುಗಳು.

ಆದರೆ ಅವು ಯಶಸ್ವಿಯಾಗುವುದು ಅವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಾಗ ಮಾತ್ರ. ಆದರೆ ಹೀಗೆ ಜಾರಿಗೊಳಿಸುವಾಗ, ಅಪರಾಧವನ್ನು ದಾಖಲು ಮಾಡುವುದರಿಂದ ಹಿಡಿದು ಅಂತಿಮವಾಗಿ ನ್ಯಾಯ ಪ್ರದಾನ ಮಾಡುವವರೆಗಿನ ವಿವಿಧ ಹಂತಗಳಲ್ಲಿ ಅನೇಕ ತೊಡರುಗಳು ಎದುರಾಗುವುದುಂಟು. ಅವುಗಳಲ್ಲಿ, ನಿರ್ವಚನೆಯಿಂದಾಗಿ ಎದುರಾಗುವ ತೊಡಕೂ ಸಹ ಒಂದು.

ಎಪ್ಪತ್ತರ ದಶಕದಲ್ಲಿ, ಏರುತ್ತಿದ್ದ ವರದಕ್ಷಿಣೆ ಕಿರುಕುಳ ಮತ್ತು ವಧೂ ದಹನ ಪ್ರಕರಣಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ದೃಷ್ಟಿಯಿಂದ, ಭಾರತ ದಂಡ ಸಂಹಿತೆಗೆ ತಿದ್ದುಪಡಿ ಮಾಡಿ, 498ಎ ಪ್ರಕರಣವನ್ನು ಸೇರ್ಪಡೆ ಮಾಡಲಾಯ್ತು. ಈ ಮೂಲಕ ಮಹಿಳೆಗೆ ನೀಡುವ ಹಿಂಸೆಯನ್ನು ಒಂದು ಶಿಕ್ಷಾರ್ಹ ಅಪರಾಧವನ್ನಾಗಿಸಲಾಯ್ತು.

ಈ ಪ್ರಕರಣದ ಅಡಿಯಲ್ಲಿ ನ್ಯಾಯ ಬಯಸಿ, ನ್ಯಾಯಾಲಯದ ಮೆಟ್ಟಿಲು ಹತ್ತಿದ ಮಹಿಳೆಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಆಪರಾಧಿಕ ಪ್ರಕ್ರಿಯಾ ಕಾನೂನಿನಿಂದಾಗಿ ತೊಡಕುಂಟಾಯಿತು. ಹಾಗೆ ಉಂಟಾದ ತೊಡಕನ್ನು, ಕಾನೂನು ರಚನೆಯ ಉದ್ದೇಶ ಈಡೇರುವ ರೀತಿಯಲ್ಲಿ ನಿವಾರಿಸಿ, ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ದೂರಗಾಮೀ ಪರಿಣಾಮವುಳ್ಳಂತಹದು.

ಮೊದಲು ಈ ಮಹತ್ವದ ತೀರ್ಪು ನೀಡಿಕೆಗೆ ಕಾರಣವಾದ ಮೊಕದ್ದಮೆಯ ವಿವರಗಳನ್ನು ತಿಳಿದುಕೊಳ್ಳುವುದು ಅವಶ್ಯ.
ಉತ್ತರ ಪ್ರದೇಶದ ಒಂದು ಸ್ಥಳವಾದ ದೇವರಿಯಾದ ರೂಪಾಲಿ ದೇವಿ ಮದುವೆಯಾದ ನಂತರ ಸೇರಿದ್ದು ಮೊವ್‍ನಲ್ಲಿದ್ದ ಗಂಡನ ಮನೆಯನ್ನು. ವರದಕ್ಷಿಣೆ ಕಿರುಕುಳದಿಂದ ನೊಂದು ಬೆಂದು ಹೋಗಿದ್ದ ರೂಪಾಲಿ ದೇವಿ ತನ್ನ ನಾಲ್ಕು ವರ್ಷದ ಹಸುಗೂಸನ್ನು ಎತ್ತಿಕೊಂಡು ಗಂಡನ ಮನೆಯನ್ನು ತೊರೆದು, ದೇವರಿಯಾದಲ್ಲಿನ ತನ್ನ ತವರು ಮನೆಯಲ್ಲಿ ಆಶ್ರಯ ಪಡೆದಳು. ತವರು ಮನೆಗೆ ಬಂದ ನಂತರ ಗಂಡನ ಮತ್ತು ಗಂಡನ ಬಂಧುಗಳ ವಿರುದ್ಧ ಅಲ್ಲಿನ ಪೆÇಲೀಸು ಠಾಣೆಯಲ್ಲಿ ದೂರು ದಾಖಲಿಸಿದಳು. ವರದಕ್ಷಿಣೆ ಹಿಂಸೆ (ಭಾ.ದಂ.ಸಂ. 498ಎ ಪ್ರಕರಣ), ಜೀವ ಬೆದರಿಕೆ (506 ನೇ ಪ್ರಕರಣ), ತನ್ನ ಒಪ್ಪಿಗೆ ಇಲ್ಲದಿದ್ದರೂ ಬಲವಂತವಾಗಿ ಗರ್ಭಪಾತ ಮಾಡಿಸಿದುದು (313 ನೇ ಪ್ರಕರಣ), ತಾನಿದ್ದಾಗಲೇ ಮತ್ತೊಬ್ಬಳನ್ನು ಮದುವೆಯಾದುದು (494 ನೇ ಪ್ರಕರಣ), ವರದಕ್ಷಿಣೆಗಾಗಿ ಹಿಂಸೆ (ವರದಕ್ಷಿಣೆ ನಿಷೇಧ ಅಧಿನಿಯಮ)- ಈ ಅಪರಾಧಗಳಿಗಾಗಿ ದೂರನ್ನು ಪಡೆದ ಪೆÇಲೀಸರು, ಪ್ರಥಮ ಮಾಹಿತಿ ವರದಿಯನ್ನು (ಎಫ್‍ಐಆರ್) ದಾಖಲಿಸಿಕೊಂಡು, ಆರೋಪ ಪಟ್ಟಿಯನ್ನು ದೇವರಿಯಾದ ಮುಖ್ಯ ನ್ಯಾಯಿಕ ಮ್ಯಾಜಿಸ್ಡ್ರೇಟರ ನ್ಯಾಯಾಲಯದಲ್ಲಿ ಸಲ್ಲಿಸಿದರು. ಆದರೆ, ರೂಪಾಲಿ ಗಂಡ ಮತ್ತು ಗಂಡನ ಬಂಧುಗಳು, ಮೊವ್‍ನಲ್ಲಿ ನಡೆದ ಅಪರಾಧಗಳ ವಿಚಾರಣೆಯನ್ನು ನಡೆಸಲು ದೇವರಿಯಾದ ಈ ನ್ಯಾಯಾಲಯ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ ಎಂಬ ಆಕ್ಷೇಪಣೆಯನ್ನು ತೆಗೆದರು. ಇದಕ್ಕೆ ಕಾರಣ,-

ಪ್ರಸ್ತುತ ಜಾರಿಯಲ್ಲಿರುವ ಆಪರಾಧಿಕ ನ್ಯಾಯ ಪ್ರದಾನ ವ್ಯವಸ್ಥೆಯಲ್ಲಿ, ಯಾವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಅಪರಾಧ ಸಂಭವಿಸಿದೆಯೋ ಆ ನ್ಯಾಯಾಲಯವೇ ಆ ಅಪರಾಧದ ವಿಚಾರಣೆ ನಡೆಸಬೇಕು ಎಂಬುದು ಆಪರಾಧಿಕ ಪ್ರಕ್ರಿಯಾ ಸಂಹಿತೆಯ(ಸಿಆರ್‍ಪಿಸಿ) ನಿಯಮ. ಒಂದು ವೇಳೆ ಎರಡು ಪ್ರದೇಶಗಳಲ್ಲಿ ಅಪರಾಧ ನಡೆದಿದ್ದರೆ, ಆಗ, ಆಯಾ ಪ್ರದೇಶದ ಅಧಿಕಾರ ವ್ಯಾಪ್ತಿ ಹೊಂದಿರುವ ನ್ಯಾಯಾಲಯಗಳ ಪೈಕಿ ಯಾವುದೇ ನ್ಯಾಯಾಲಯ ಆ ಅಪರಾಧದ ವಿಚಾರಣೆಯನ್ನು ನಡೆಸಬಹುದು. ಒಂದು ವೇಳೆ, ಒಂದು ಸ್ಥಳದಲ್ಲಿ ನಡೆದ ಅಪರಾಧ ಇನ್ನೊಂದು ಸ್ಥಳದಲ್ಲಿ ಅಪರಾಧ ಮುಂದುವರೆದಿದ್ದರೆ, ಅಪರಾಧ ಮುಂದುವರಿದ ಸ್ಥಳದ ನ್ಯಾಯಾಲಯ ಸಹ ಆ ಅಪರಾಧದ ವಿಚಾರಣೆ ನಡೆಸಲು ಸಕ್ಷಮವಾಗಿರುತ್ತದೆ.

ರೂಪಾಲಿಯ ಗಂಡ ಮತ್ತು ಗಂಡನ ಬಂಧುಗಳು ದೇವರಿಯಾದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟರಿಗೆ ರೂಪಾಲಿಯ ದೂರಿನ ವಿಚಾರಣೆ ನಡೆಸಲು ಅಧಿಕಾರವಿಲ್ಲ ಎಂದು ಆಕ್ಷೇಪಣೆ ಎತ್ತಿದುದು ಇದೇ ಕಾರಣಕ್ಕೆ. ರೂಪಾಲಿ ಆರೋಪಿಸಿದ ಎಲ್ಲ ಅಪರಾಧಗಳೂ ನಡೆದಿರುವುದು ಮೊವ್‍ನಲ್ಲಿ ಮಾತ್ರ. ದೇವರಿಯಾದಲ್ಲಿ ಯಾವುದೇ ಅಪರಾಧ ನಡೆದಿಲ್ಲ ಮತ್ತು ಅಲ್ಲಿಯ ಯಾವುದೇ ಅಪರಾಧ ಇಲ್ಲಿ ಮುಂದುವರೆದೂ ಇಲ್ಲ ಎಂಬುದು ಅವರ ವಾದವಾಗಿತ್ತು.

ಆದರೆ ಈ ಆಕ್ಷೇಪಣೆಯನ್ನು ಈ ನ್ಯಾಯಾಲಯ ತಳ್ಳಿ ಹಾಕಿತು. ಭಾರತ ದಂಡ ಸಂಹಿತೆ 498ಎ ಪ್ರಕರಣದ ಅಡಿಯಲ್ಲಿ ಆರೋಪಿಸಲಾಗಿರುವ ಹಿಂಸೆ ಒಂದು ಮುಂದುವರೆದ ಅಪರಾಧವಾಗಿದೆ. ಹಿಂಸೆಗೆ ಒಳಗಾದ ವ್ಯಕ್ತಿ ದೇವರಿಯಾದಲ್ಲಿ ಆಶ್ರಯ ಪಡೆದಿರುವುದರಿಂದ, ಅಪರಾಧ ಮೊವ್‍ನಲ್ಲಿ ನಡೆದಿದ್ದರೂ, ದೇವರಿಯಾದ ನ್ಯಾಯಾಲಯ ಅಪರಾಧದ ವಿಚಾರಣೆ ನಡೆಸಲು ಸಕ್ಷಮವಾಗಿದೆ ಎಂಬುದಾಗಿ ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಆದರೆ ಈ ತೀರ್ಪಿನ ವಿರುದ್ಧ, ಪ್ರತಿವಾದಿಗಳು ಸತ್ರ ನ್ಯಾಯಾಲಯದಲ್ಲಿ ಪುನರವಲೋಕನ ಅರ್ಜಿಯನ್ನು ಹಾಕಿದರು. ಈ ನ್ಯಾಯಾಲಯ, ಹಿಂಸೆಯ ಅಪರಾಧ ‘ಒಂದು ಮುಂದುವರಿಯುವ ಅಪರಾಧವಾಗಿಲ್ಲದ ಕಾರಣ’ ಮತ್ತು ಆ ಅಪರಾಧ ಮೊವ್ ನಲ್ಲಿ ನಡೆದ ಕಾರಣ, ಮೊವ್‍ನಲ್ಲಿರುವ ನ್ಯಾಯಾಲಯಕ್ಕೆ ಮಾತ್ರವೇ ಆ ಅಪರಾಧದ ವಿಚಾರಣೆ ನಡೆಸಲು ಅಧಿಕಾರವಿರುವುದು, ದೇವರಿಯಾದಲ್ಲಿರುವ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟು ಅವರ ಆಕ್ಷೇಪಣೆಯನ್ನು ಎತ್ತಿ ಹಿಡಿಯಿತು. ಈ ತೀರ್ಪನ್ನು ಪ್ರಶ್ನಿಸಿ ರೂಪಾಲಿ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಿದಳು. ಆದರೆ, ಉಚ್ಚ ನ್ಯಾಯಾಲಯವೂ ಸತ್ರ ನ್ಯಾಯಾಲಯದ ತೀರ್ಮಾನವನ್ನೇ ಎತ್ತಿ ಹಿಡಿದು, ಸತ್ರ ನ್ಯಾಯಾಲಯದ ಅಭಿಪ್ರಾಯವನ್ನೇ ದೃಢೀಕರಿಸಿ, ದೇವರಿಯಾದ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯಿಲ್ಲ ಎಂಬ ತೀರ್ಪನ್ನು ನೀಡಿತು. ಈ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಯಿತು.

ಹೀಗೆ ಹಿಂಸೆಗೆ ಒಳಗಾಗಿ ನ್ಯಾಯಾಲಯದ ಮೆಟ್ಟಿಲು ತುಳಿದಿದ್ದ ನೊಂದ ಹೆಣ್ಣು ಮಕ್ಕಳ ಇನ್ನೂ ಕೆಲವು ಅರ್ಜಿಗಳು, ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆಯೇ, ಸರ್ವೋಚ್ಚ ನ್ಯಾಯಾಲಯದ ಮುಂದೆ ಇದ್ದವು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಕಾನೂನಿನ ಸ್ಪಷ್ಟ ನಿರ್ವಚನೆ ಅಗತ್ಯವಿತ್ತು.

ಈ ಅಪೀಲನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗಾಗಿ ಕೈಗೆತ್ತಿಕೊಂಡಿತು ಈ ಸಂದರ್ಭದಲ್ಲಿ, ಕಾನೂನು ರಚನೆಯ ಉದ್ದೇಶ, ತದನಂತರದ ಸಾಮಾಜಿಕ ಪಲ್ಲಟಗಳು, ಕಾನೂನು ಉಪಬಂಧವನ್ನು ನಿರ್ವಚಿಸುವಾಗ ಕಾನೂನಿನ ಉದ್ದೇಶದ ಈಡೇರಿಕೆಗೆ ಗಮನ ಕೊಡಬೇಕಾದ ಆದ್ಯತೆ ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಳ್ಳಲಾಯಿತು.

ನಮ್ಮ ಹೆಣ್ಣು ಮಕ್ಕಳು ತೀರ ಸಾಮಾನ್ಯವಾಗಿ ಎದುರಿಸುವ ಸಂಕಷ್ಟ ವರದಕ್ಷಿಣೆ ಕಿರುಕುಳ- ವರದಕ್ಷಿಣೆಗಾಗಿ ಗಂಡನ ಮನೆಯಲ್ಲಿ ಗಂಡನಿಂದ ಮತ್ತು ಗಂಡನ ಬಂಧುಗಳಿಂದ ಎದುರಿಸುವ ಹಿಂಸೆ. ಈ ಹಿಂಸೆಯಿಂದ ಮಹಿಳೆಗೆ ರಕ್ಷಣೆ ನೀಡುವ ಉದ್ದೇಶದಿಂದ ಭಾರತ ದಂಡ ಸಂಹಿತೆಗೆ ತಿದ್ದುಪಡಿ ಮಾಡಿ ಸೇರಿಸಿದ 498ಎ ಪ್ರಕರಣವನ್ನು ಸೇರಿಸಲಾಯ್ತು. ಆದ್ದರಿಂದ ಅದನ್ನು ನಿರ್ವಚಿಸುವಾಗ, ಅಂಥ ಸಾಮಾಜಿಕ ಪಿಡುಗನ್ನು ನಿರ್ಮೂಲನ ಮಾಡುವ ರೀತಿಯಲ್ಲಿ ನಿರ್ವಚಿಸಬೇಕು. ರೂಪಾಲಿಯ ಪ್ರಕರಣದಲ್ಲಿ ಅವಳು ಗಂಡನ ಮನೆಯನ್ನು ಬಿಟ್ಟು ಬರುವುದು ಅನಿವಾರ್ಯವೆನಿಸುವಂಥ ಪರಿಸ್ಥಿತಿಯನ್ನು ಸೃಷ್ಟಿಸಲಾಗಿತ್ತು. ಹಾಗಾಗಿ ಅವಳು ಗಂಡನ ಮನೆಯನ್ನು ತೊರೆದು, ಗಂಡ ಮತ್ತು ಅವನ ಬಂಧುಗಳು ವಾಸಿಸುವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಬಿಟ್ಟು ಹೊರ ಬಂದರೂ, ಅವರು ಕೊಟ್ಟ ಹಿಂಸೆ ಮತ್ತು ಕಿರುಕುಳ ಮುಂದುವರಿಯುತ್ತಿದೆ ಎಂದೇ ಭಾವಿಸಬೇಕಾಗುತ್ತದೆ.

ಗಂಡನ ಮನೆಯಲ್ಲಿ ತೊಂದರೆಯಾದಾಗ ಮತ್ತು ಗಂಡ ಹಿಂಸಿಸಿ ಜೀವನವೇ ಬೇಡವೆನ್ನಿಸಿದಾಗ ಹೆಣ್ಣು ಮಕ್ಕಳು ಆಶ್ರಯಿಸುವುದು ತವರು ಮನೆಯನ್ನೇ. ತವರು ಮನೆಯವರೂ ಸಹ ಸಾಧ್ಯವಾದಷ್ಟು ಮಟ್ಟಿಗೆ ಹೆಣ್ಣು ಮಕ್ಕಳ ಬೆಂಬಲಕ್ಕೆ ನಿಲ್ಲುತ್ತಾರೆ.

ವರದಕ್ಷಿಣೆ ಸಂಬಂಧಿ ಹಿಂಸೆಯನ್ನು ಮತ್ತು ಇತರ ಯಾವುದೇ ರೀತಿಯ ಹಿಂಸೆಯನ್ನು ಒಂದು ಅಪರಾಧವನ್ನಾಗಿ ಪರಿಗಣಿಸಿ ಅದನ್ನು ಶಿಕ್ಷಾರ್ಹವನ್ನಾಗಿಸಿರುವುದರ ಉದ್ದೇಶವೇ ಹಿಂಸೆಯಿಂದ ಮಹಿಳೆಯರಿಗೆ ರಕ್ಷಣೆ ನೀಡುವುದಾಗಿದೆ. ಅಂತಹುದರಲ್ಲಿ, ಹಿಂಸೆಯಿಂದ ಪಾರಾಗಲು, ಗಂಡನ ಮನೆಯನ್ನು ಮತ್ತು ಗಂಡನ ಊರನ್ನು ತೊರೆದು, ತವರು ಮನೆಯ ಆಶ್ರಯ ಪಡೆದ ಮಹಿಳೆ, ಗಂಡನ ಮತ್ತು ಗಂಡನ ಬಂಧುಗಳ ವಿರುದ್ಧ ದೂರು ನೀಡಿ ಅವರ ವಿರುದ್ಧ ಹೋರಾಡಬೇಕಾದರೆ, ಗಂಡನ ಊರಿಗೇ ಹೋಗಿ, ಅಪರಾಧ ನಡೆದ ಪ್ರದೇಶದ ಅಧಿಕಾರ ವ್ಯಾಪ್ತಿಯುಳ್ಳ ನ್ಯಾಯಾಲಯದಲ್ಲಿಯೇ ಹೋರಾಡಬೇಕು ಎಂದಾದರೆ ಅವಳಿಗೆ ನ್ಯಾಯ ದೊರೆಯುವುದೇ ದುಸ್ತರವಾಗುತ್ತದೆ. ಕಾನೂನಿಗೆ ಮಾಡಿದ ತಿದ್ದುಪಡಿಯ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ, ಮಹಿಳೆಯ ವಿರುದ್ಧ ನಡೆಯುವಂಥ ಹಿಂಸೆಯನ್ನು ಅಪರಾಧವನ್ನಾಗಿ ಮಾಡುವ ಈ ತಿದ್ದುಪಡಿಯ ಉದ್ದೇಶ ಈಡೇರುವ ರೀತಿಯಲ್ಲಿ ಮತ್ತು ಹೆಚ್ಚು ಪರಿಣಾಮಕಾರಿಯನ್ನಾಗಿಸುವ ರೀತಿಯಲ್ಲಿ ತೀರ್ಪು ನೀಡುವಾಗ ನ್ಯಾಯಾಂಗ ನಿರ್ವಚಿಸಬೇಕಾಗುತ್ತದೆ. ಹಿಂಸೆ ದೈಹಿಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು. ಗಂಡನ ಮನೆಯಲ್ಲಿ ನೀಡಿದ್ದ ಹಿಂಸೆ ದೈಹಿಕ ಹಿಂಸೆ ಆಗಿದ್ದಲ್ಲಿ, ಆ ಹಿಂಸೆ, ಅವಳು ಗಂಡನ ಮನೆಯನ್ನು ಬಿಟ್ಟ ಕೂಡಲೇ ನಿಂತು ಹೋಗುತ್ತದೆ. ಆದರೆ ಅವಳು ಅಲ್ಲಿ ಅನುಭವಿಸಿದ ಮಾನಸಿಕ ಹಿಂಸೆ, ತವರು ಮನಗೆ ಹಿಂತಿರುಗಿ ಹೋಗಬೇಕಾದ ಅನಿವಾರ್ಯತೆ, ಅದರಿಂದಾಗಿ ಅವಳ ಮನಸ್ಸಿಗೆ ಉಂಟಾಗುವ ಆಘಾತ ಮತ್ತು ಅದರ ಪರಿಣಾಮ ಅವಳು ತವರು ಮನೆಗೆ ಬಂದ ಮೇಲೆಯೂ ಮುಂದುವರೆಯುವಂಥದ್ದು. ಆದ್ದರಿಂದ, ಗಂಡ ಮತ್ತು ಗಂಡನ ಬಂಧುಗಳಿಂದ ಹಿಂಸೆಗೆ ಒಳಗಾಗಿ, ಗಂಡನ ಮನೆಯನ್ನು ತೊರೆದು, ಮಹಿಳೆ ಯಾವ ಸ್ಥಳದಲ್ಲಿ ಆಶ್ರಯ ಪಡೆಯುತ್ತಾಳೋ ಆ ಸ್ಥಳದ ನ್ಯಾಯಾಲಯ, ಅವಳು ಭಾರತ ದಂಡ ಸಂಹಿತೆಯ 498 ಎ ಪ್ರಕರಣದ ಅಡಿಯಲ್ಲಿ ನೀಡುವ ದೂರಿನ ವಿಚಾರಣೆಯನ್ನು ನಡೆಸುವ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂಬುದಾಗಿ ಸ್ಪಷ್ಟ ಪಡಿಸುತ್ತೇವೆ ಎಂದು ಸಂದೇಹಕ್ಕೆ ಆಸ್ಪದವಿಲ್ಲದಂತೆ ಸ್ಪಷ್ಟವಾಗಿ ಹೇಳಿದ್ದಾರೆ.

ಒಬ್ಬ ಮಹಿಳೆ, ತನ್ನ ಗಂಡ, ಅತ್ತೆ, ಮಾವ ಹಾಗೂ ಗಂಡನ ಬಂಧುಗಳಿಂದ ಹಿಂಸೆಗೆ ಮತ್ತು ಕಿರುಕುಳಕ್ಕೆ ಒಳಗಾಗಿ, ಅದನ್ನು ತಾಳಲಾರದೆ ಗಂಡನ ಮನೆಯನ್ನು ತೊರೆದು ತವರು ಮನೆಗೆ ಬಂದಿರಬಹುದು ಅಥವಾ ಆಶ್ರಯ ಪಡೆದು ಬೇರೊಂದು ಸ್ಥಳಕ್ಕೆ ಬಂದಿರಬಹುದು ಅಥವಾ ಗಂಡನ ಮನೆಯವರೇ ಅವಳನ್ನು ಹೊರ ಹಾಕಿರಬಹುದು. ಹಾಗೆ ಆಶ್ರಯಕ್ಕಾಗಿ ಅವಳು ತವರು ಮನೆಗೋ ಅಥವಾ ಆಶ್ರಯ ಪಡೆಯಲು ಬೇರೊಂದು ಊರಿಗೋ ಬರಬೇಕಾಗಿ ಬಂದಿದ್ದರೆ, ಅವಳು ಹಾಗೆ ತಾನು ಆಶ್ರಯ ಪಡೆದ ಸ್ಥಳದಲ್ಲಿ ಪೆÇಲೀಸರಿಗೆ ದೂರು ನೀಡಬಹುದು ಮತ್ತು ಆ ಸ್ಥಳದ ನ್ಯಾಯಾಲಯಕ್ಕೆ ಆ ಅಪರಾಧದ ವಿಚಾರಣೆ ನಡೆಸುವ ಅಧಿಕಾರವಿರುತ್ತದೆ ಎಂಬುದು ಆ ತೀರ್ಪಿನ ಸಾರಾಂಶ.
ಈ ತೀರ್ಪಿನ ಮೂಲಕ, ಈ ಬಗ್ಗೆ ಇದ್ದ ಎಲ್ಲ ಅನುಮಾನಗಳಿಗೆ, ಸಂದಿಗ್ಧಗಳಿಗೆ ಮತ್ತು ತದ್ವಿರುದ್ಧವಾದ ತೀರ್ಪುಗಳಿಂದ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.

-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *