ಮಹಿಳಾ ಆರ್ಥಿಕ ಚಟುವಟಿಕೆಯ ಕುಸಿತ – ನೂತನ ದೋಶೆಟ್ಟಿ

ಭಾರತದ ಜನಸಂಖ್ಯೆಯಲ್ಲಿಅರ್ಧದಷ್ಟು ಭಾಗ ಮಹಿಳೆಯರು; ಭಾರತದಲ್ಲಿ ಮಹಿಳಾ ಶಿಕ್ಷಣ ಹೆಚ್ಚಾಗುತ್ತಿದೆ ಎಂಬ ಆಶಾದಾಯಕ ಅಂಶಗಳನ್ನು ಬದಿಗೆ ಸರಿಸಿ, ವಿಶ್ವಬ್ಯಾಂಕ್ ವರದಿ ಭಾರತದ ಆರ್ಥಿಕ ಚಟುವಟಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ ಎಂಬ ಕಳವಳಕಾರಿ ಮಾಹಿತಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ‘ಭಾರತದ ಅಭಿವೃದ್ಧಿ ವರದಿ’ಯಲ್ಲಿ ಬಹಿರಂಗಪಡಿಸಿದೆ. 2004-05 ನೇ ಸಾಲಿಗೆ ಹೋಲಿಸಿದರೆ 2011-12ರಲ್ಲಿಆರ್ಥಿಕ ಚಟುವಟಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ

ಶಿಕ್ಷಿತ ಮಹಿಳೆಯರ ಸಂಖ್ಯೆ ಹೆಚ್ಚಿದರೆ ಅದಕ್ಕೆಅನುಗುಣವಾಗಿ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆಯೂ ಹೆಚ್ಚಬೇಕಾಗಿತ್ತು. ಇಲ್ಲಿಆರ್ಥಿಕ ಚಟುವಟಿಕೆ ಎಂದರೆ ಕೇವಲ ಕಛೇರಿಗಳಲ್ಲಿ, ಕಂಪನಿಗಳಲ್ಲಿ ದುಡಿದು ತಿಂಗಳ ಸಂಬಳ ಎಣಿಸುವ ಕೆಲಸವಲ್ಲ. ಲಭ್ಯವಿರುವ ಅನೇಕಾನೇಕ ಆರ್ಥಿಕ ಅವಕಾಶಗಳನ್ನು ಪಡೆದುಕೊಂಡು ಆರ್ಥಿಕ ಸ್ವಾವಲಂಬಿಯಾಗುವುದೂ ಇದರಲ್ಲಿ ಸೇರಿದೆ. ಇಸವಿ 2000ದಿಂದ ಈಚೆಗೆ ಕಛೇರಿ ಕೆಲಸಗಳ ಜೊತೆಗೆ ಆರ್ಥಿಕ ಸ್ವಾವಲಂಬಿತನಕ್ಕೆ ನೆರವಾಗುವ ಚಿಕ್ಕ, ದೊಡ್ಡ ಉದ್ದಿಮೆಗಳನ್ನು, ಕೈಗಾರಿಕೆಗಳನ್ನು, ಗುಡಿಕೈಗಾರಿಕೆಗಳನ್ನು ವಾಣಿಜ್ಯೋದ್ಯಮಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಏರಿತು. ಹಳ್ಳಿ-ಪಟ್ಟಣಗಳೆನ್ನದೇ ಸ್ತ್ರೀಸಶಕ್ತಿ ಗುಂಪುಗಳು ಆರಂಭವಾದವು. ತಮ್ಮ ಸೀಮಿತ ಕ್ಷೇತ್ರದಲ್ಲಿ ಕಾರ್ಯ ಮಾಡಿದರೂ ಈ ಸಂಘಗಳ ಆರ್ಥಿಕ ಚಟುವಟಿಕೆ ದೇಶದ ಆರ್ಥಿಕತೆಗೆ ಹೊಸ ಸಂಚಲನವನ್ನು ತಂದಿತು ಎಂಬ ಮಾತು ಸುಳ್ಳಲ್ಲ. ಈ ಮೊದಲು ಸಂಘಟಿತ ಕ್ಷೇತ್ರಗಳಲ್ಲಿ ಮಾತ್ರ ಬಹುತೇಕವಾಗಿ ಕಾಣಬರುತ್ತಿದ್ದ ಮಹಿಳೆ ಎಲ್ಲಅಸಂಘಟಿತ ಕ್ಷೇತ್ರಗಳಲ್ಲೂ ಕಾಣಿಸಿಕೊಂಡಳು. ಉದ್ಯೋಗಸ್ಥ ಮಹಿಳೆ ಎಂಬ ಜಂಬದ ಹಣೆಪಟ್ಟಿ ದೂರಾಗಿ ಮನೆವಾರ್ತೆ ಕೆಲಸಗಳೂ ಕೂಡ ಆರ್ಥಿಕ ಚಟುವಟಿಕೆಯಲ್ಲಿ ಬರಬೇಕು ಎಂಬ ಮಟ್ಟಿಗೆ ಮಹಿಳಾಪರ ಹೋರಾಟ ಬಹಳ ಉತ್ಸಾಹದಿಂದ ನಡೆದು ಯಶಸ್ವಿಯಾಯಿತು. ‘ನಾನು ಕೇವಲ ಗೃಹಿಣಿ’ ಎಂಬ ಸಂಕುಚಿತತೆಯಿಂದ ಆಕೆ ಮುಕ್ತವಾದದ್ದು ಈ ಹೋರಾಟದ ಬಹುದೊಡ್ಡ ಸಾಧನೆ.

ಇದರ ಬೆನ್ನಲ್ಲೇ ಆರಂಭವಾದದ್ದು ಎಲ್ಲೆ ಮೀರಿದ ಮಹಿಳಾ ಅತ್ಯಾಚಾರ, ಅನಾದರ, ದೌರ್ಜನ್ಯಗಳು. ಇಸವಿ 2010ರ ನಂತರ ಈ ದೇಶ ಇದುವರೆಗೂ ಕಂಡು ಕೇಳರಿಯದ ಮಹಿಳಾ ದೌರ್ಜನ್ಯಕ್ಕೆ ಸಾಕ್ಷಿಯಾಯಿತು. ಹಾಗೆ ನೋಡಿದರೆ ಮಹಿಳಾ ಆರ್ಥಿಕ ಚಟುವಟಿಕೆಗೂ ಹಾಗೂ ಈ ದೌರ್ಜನ್ಯಗಳಿಗೂ ಯಾವುದೇ ನೇರ ಸಂಪರ್ಕವಿಲ್ಲ. ಆದರೂ ಈ ಅವಧಿಯಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಾದದ್ದಂತೂ ನಿಜ. ಆದರೆ ಇದರಿಂದ ಆರ್ಥಿಕ ಚಟುವಟಿಕೆ ಕುಂಠಿತವಾಯಿತು ಎಂಬುದು ಗಮನಕ್ಕೆ ಬರಲಿಲ್ಲ. ಆದರೆ ವಿಶ್ವಬ್ಯಾಂಕಿನ ಈ ವರದಿ ಬಹುಶಃ ಅದನ್ನು ಈಗ ಬಿಚ್ಚಿಡುತ್ತಿದೆ. 2011ರ ನಂತರ ಮಹಿಳೆಯರ ಆರ್ಥಿಕ ಚಟುವಟಿಕೆ ಕುಂಠಿತವಾಗಿದೆ ಎಂದು ವರದಿ ಹೇಳುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕಬಹುದಾದರೆ ಬಹುತೇಕವಾಗಿ ಕಂಡು ಬರುವ ಕಾರಣ ಈ ಅವಧಿಯಿಂದ ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ. ಅದು ಸಾರ್ವಜನಿಕವಾಗಿರಬಹುದು ಅಥವಾ ಕೌಟುಂಬಿಕ ದೌರ್ಜನ್ಯವಾಗಿರಬಹುದು. ಈ ದೌರ್ಜನ್ಯ ಮಕ್ಕಳ ಮೇಲೂ ಹೆಚ್ಚಾದದ್ದುಇದೇ ಅವಧಿಯಲ್ಲಿಎಂಬುದನ್ನು ನಾವು ವಿಶೇಷವಾಗಿ ಗಮನಿಸಬೇಕು. ಮಕ್ಕಳನ್ನು ಮನೆಗಳಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ ಲಕ್ಷೋಪಲಕ್ಷ ಮಹಿಳೆಯರು ತಮ್ಮ ಮಕ್ಕಳ ಸುರಕ್ಷತೆಗಾಗಿ ಕೆಲಸವನ್ನು ಬಿಟ್ಟಿರಬಹುದು. ತಮ್ಮ ಕಾರ್ಯಕ್ಷೇತ್ರಗಳಲ್ಲೂ ಹೆಚ್ಚಿದ ಮಹಿಳಾ ದೌರ್ಜನ್ಯದಿಂದ ಅನೇಕ ಮಹಿಳೆಯರು ಕೆಲಸಗಳನ್ನು ಬಿಟ್ಟಿರಬಹುದು. ಅವೇಳೆಯಲ್ಲಿ ಕೆಲಸ ಮಾಡಬೇಕಾದ ಸಂದರ್ಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದಲೂ ಕೆಲಸ ಬಿಟ್ಟಿರಬಹುದು. 2004-05 ಹೊತ್ತಿಗೆ ನಮ್ಮ ದೇಶದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿ ಇತ್ತು. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯದ ಹಾಗೂ ತುರ್ತಿನ ಕಾರಣಕ್ಕಾಗಿ ಶಾಲೆ ಬಿಡುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆಯೂ ಹೆಚ್ಚಾಗಿತ್ತು ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ. ಆದರೆ ಆ ನಂತರ ಎಲ್ಲೆಡೆ ಆವರಿಸಿದ ಬರದ ಛಾಯೆ ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆಯನ್ನುಗಣನೀಯವಾಗಿ ಕುಗ್ಗಿಸಿತು. ನೀರಿನ ಕೊರತೆಯಿಂದಾಗಿ ಕೃಷಿ ಭೂಮಿ ಕಡಿಮೆಯಾಗಹತ್ತಿತು. ಇದರೊಂದಿಗೆ ಕೃಷಿ ಚಟುವಟಿಕೆಗಳೂ ಕಡಿಮೆಯಾಗಿ ಅದರಲ್ಲಿ ತೊಡಗುತ್ತಿದ್ದ ಮಹಿಳೆಯರ ಕೆಲಸವನ್ನು ಅದು ಕಸಿದುಕೊಂಡಿತು. ಈ ಸಕಾರಣ ಅಂಶಗಳನ್ನು ವರದಿಯ ಹಿನ್ನೆಲೆಯಲ್ಲಿ ಕೂಲಂಕುಷವಾಗಿ ನಾವು ಪರಿಶೀಲಿಸಬಹುದಾಗಿದೆ. ಈ ಎಲ್ಲ ಚಟುವಟಿಕೆಗಳಿಗೆ ನೇರಾನೇರ ಸಂಪರ್ಕ ಏರ್ಪಡಿಸುವುದು ಕಷ್ಟವಾದರೂ ಇಂತಹ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

“ಭಾರತದ ಕಾರ್ಮಿಕ ಕಾನೂನಿನಲ್ಲಿರುವ ನ್ಯೂನ್ಯತೆಗಳೇ ಉದ್ಯೋಗದ ಸ್ಥಳದಲ್ಲಿ ಮಹಿಳಾ ಸ್ನೇಹಿ ವಾತಾವರಣ ಇಲ್ಲದಿರಲು ಪ್ರಮುಖ ಕಾರಣ. ಕಾರ್ಮಿಕ ಕಾನೂನಿನಲ್ಲಿ ಲಿಂಗಾಧಾರಿತ ಆದ್ಯತೆಗಳಿಗೆ ಅವಕಾಶ ನೀಡಿದರೆ, ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ” ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವದ ಮುಂದುವರೆದ ದೇಶಗಳಲ್ಲಿರುವಂತಹ ಹೆರಿಗೆ ಸೌಲಭ್ಯಗಳು ಭಾರತದಲ್ಲಿಇಲ್ಲ. ಹಲವು ಕ್ಷೇತ್ರಗಳಲ್ಲಿ ಭಾರತದ ಮಹಿಳೆಯರ ದುಡಿಮೆಗೆ ಅವಕಾಶವಿಲ್ಲ. ಮಹಿಳೆಯರಿಗೆ ಹಲವು ಕ್ಷೇತ್ರಗಳಲ್ಲಿ ಸಮಾನ ವೇತನ ಕೂಡದೊರೆಯುತ್ತಿಲ್ಲ ಎಂದು ವರದಿ ಹೇಳುತ್ತದೆ. ಈ ವರದಿಯನ್ನು ಮಧ್ಯಪ್ರದೇಶದ ಸಂಘಟಿತ ಹಾಗೂ ಅಸಂಘಟಿತ ವಲಯದ 618 ವಿವಿಧ ಸ್ವರೂಪದ ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಾತಿನಿಧಿಕವಾಗಿ ಸಮೀಕ್ಷೆ ನಡೆಸಿ ಸಿದ್ಧಪಡಿಸಲಾಗಿದ್ದರೂ ಈ ಸಮೀಕ್ಷೆಯಿಂದ ಹೊರಹೊಮ್ಮಿದ ಮಾಹಿತಿ ಕಳವಳಕಾರಿಯಾಗಿದೆ. ಈ ಪರಿಸ್ಥಿತಿ ಭಾರತದ ಇತರ ಹಿಂದುಳಿದ ರಾಜ್ಯಗಳಲ್ಲಿ ಇನ್ನೂ ಕಳವಳಕಾರಿಯಾಗಿರಬಹುದು. ಮಹಿಳಾ ಸಾಕ್ಷರತೆ ಬಹಳ ಕಡಿಮೆ ಇರುವ ರಾಜಸ್ಥಾನ, ಬಿಹಾರ ರಾಜ್ಯಗಳಲ್ಲಿ ಅಥವಾ ಗಲಭೆ ಪೀಡಿತ ಜಮ್ಮು-ಕಾಶ್ಮೀರ, ಛತ್ತೀಸಗಢ ಮೊದಲಾದೆಡೆಗಳಲ್ಲಿ ಮಹಿಳಾ ಆರ್ಥಿಕ ಚಟುವಟಿಕೆಗಳು ಹೇಗಿರಬಹುದು?

ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಮಹಿಳಾ ಆರ್ಥಿಕ ಸ್ವಾವಲಂಬನ ಮೊದಲಾದ ಮಹತ್ವಾಕಾಂಕ್ಷಿ ಗುರಿಗಳಿಂದ ಆರಂಭಗೊಂಡ ಈ ಇಪ್ಪತ್ತೊಂದನೇ ಶತಮಾನ ಎರಡು ದಶಕಗಳಲ್ಲೇ ಈ ಹಂತಕ್ಕೆ ತಲುಪಿರುವುದು ನಿಜಕ್ಕೂ ಆಘಾತಕಾರಿ. ನಮ್ಮ ಕರ್ನಾಟಕದ ಮಟ್ಟಿಗೂ ಹೇಳುವುದಾದರೆ ಸ್ತ್ರೀಶಕ್ತಿ ಗುಂಪುಗಳು ಆರಂಭದ ಉತ್ಸಾಹವನ್ನು ಕಳೆದುಕೊಂಡಂತಿವೆ. ದೇಶದಾದ್ಯಂತ ಈ ಚಟುವಟಿಕೆಗಳು ಕುಂದಲು ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯಆಗಬೇಕಾಗಿದೆ.

‘ಮಹಿಳಾ ಉದ್ಯೋಗ’ ಎಂದರೆ ಈಗಲೂ ಮೂಗು ಮುರಿಯುವ ಜನಕ್ಕೆ ನಮ್ಮಲ್ಲೇನೂ ಕೊರತೆಯಿಲ್ಲ.ಇದಕ್ಕೆ ವಿದ್ಯಾವಂತ ಮಹಿಳೆಯರೂ ಹೊರತಾಗಿಲ್ಲ. ಅನೇಕ ವಿದ್ಯಾವಂತ ಮಹಿಳೆಯರು ‘ನಮ್ಮ ಗಂಡಂದಿರು ಚೆನ್ನಾಗಿ ದುಡಿಯುತ್ತಿರುವುದರಿಂದ ನಮಗೇನೂ ದುಡಿಯುವ ಅಗತ್ಯಲಿಲ್ಲ.’ ಎಂಬ ಮಾತನ್ನುಆಡುವುದನ್ನು ನಾವು ಕೇಳಿದ್ದೇವೆ. ಮಹಿಳೆ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದೆಂದರೆ ಹಣ ಗಳಿಕೆಗೆ ಮಾತ್ರ ಅಲ್ಲ. ಅವಳ ಆ ಚಟುವಟಿಕೆ ದೇಶದ ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂಬುದನ್ನುಇಂತಹವರು ಅರಿಯಬೇಕಾದ ಅಗತ್ಯವಿದೆ.

ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *