FEATUREDಅಂಕಣ

ಮಹಿಳಾ ಅಂಗಳ/ ವೃದ್ಧೆಯರ ಆಶಾಕಿರಣ : ವಸುಂಧರಾ ದೇವಿ – ನೂತನ ದೋಶೆಟ್ಟಿ

ಮೂಢನಂಬಿಕೆಗಳನ್ನು ಇನ್ನೂ ಪೋಷಿಸಿಕೊಂಡು ಬಂದಿರುವ ನಮ್ಮ ಸಮಾಜದಲ್ಲಿ ಸ್ಮಶಾನವೆಂದರೆ, ಹೆಣವೆಂದರೆ ಹೇಳಲಾರದ ಅಂಜಿಕೆ, ಭಯ, ಮೈಲಿಗೆ ಇತ್ಯಾದಿ. ಇನ್ನು ಪುರುಷರೇ ಮುಖಾಗ್ನಿ ಕೊಡಬೇಕು ಎಂಬ ಕಾಲಾಂತರದ ಸಂಪ್ರದಾಯ ಹಾಗೂ ನಂಬಿಕೆಗಳ ಹಿನ್ನೆಲೆಯಲ್ಲಿ ಮಹಿಳೆ ಆ ಕೆಲಸವನ್ನು ಮಾಡುವುದು ಬಹುತೇಕ ನಿಷಿದ್ಧ. ಇಂಥ ಸಮಾಜದಲ್ಲೇ ವಸುಂಧರಾ ದೇವಿಯಂಥವರೂ ಇದ್ದಾರೆ. ತಮ್ಮ ಕೆಲಸಕ್ಕೆ ಯಾವುದೇ ಪ್ರಚಾರ, ಪ್ರತಿಫಲಾಪೇಕ್ಷೆ ಇಲ್ಲದೇ ಅದನ್ನು ಮಾಡುತ್ತಿದ್ದಾರೆ.


ಭೂಮಿಗೆ ಇನ್ನೊಂದು ಹೆಸರು ವಸುಂಧರಾ. ಜೀವ ಸಂಕುಲವನ್ನು ಸಹನೆಯಿಂದ ಸಲಹುವವಳು ಆಕೆ. ಹೀಗೆ ಭೂಮಿಯನ್ನು ಕೊಂಡಾಡುತ್ತ ಆಕೆಯನ್ನು ಸತತವಾಗಿ ಶೋಷಿಸುತ್ತಲೇ ಬಂದಿರುವ ಬುದ್ಧಿವಂತ ಪ್ರಾಣಿ ಎಂದು ಕರೆಯಿಸಿಕೊಳ್ಳುವ ಮನಜ ವಿಪರ್ಯಾಸಕ್ಕೆ ಇನ್ನೊಂದು ಹೆಸರು. ಶೋಷಣೆ ತನ್ನ ಜೀವ ಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಿರುವ ಮನುಷ್ಯ ಹೆತ್ತೊಡಲನ್ನೂ ಬಿಡದಷ್ಟು ಕ್ರೂರಿ ಹಾಗೂ ಅನಾಗರಿಕನಾಗಿದ್ದಾನೆ.
ಈ ಪೀಠಿಕೆ, ಚನ್ನರಾಯಪಟ್ಟಣದ ಗಾಂಧಿ ವೃದ್ಧಾಶ್ರಮದಲ್ಲಿ ಸಮಾಜ ಸೇವಕರಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ವಸುಂಧರಾ ದೇವಿಯವರನ್ನು ಇಲ್ಲಿ ಪರಿಚಯಿಸುವಾಗ ತೀರ ಅಗತ್ಯ ಹಾಗೂ ಉಚಿತ ಎನ್ನಿಸಿತು.
ಹಾಸನದ ಮಂಜೇಗೌಡ ಹಾಗೂ ಇಂದ್ರಮ್ಮ ದಂಪತಿಗಳ ಮಗಳು ವಸುಂಧರಾ ದೇವಿ. ಪಿ.ಯೂ.ಸಿ. ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಚನ್ನರಾಯಪಟ್ಟಣದ ಪಡುವನಹಳ್ಳಿಯಲ್ಲಿ ವಾಟರ್‍ಮನ್ ಆಗಿರುವ ಸೋಮಶೇಖರ ಅವರನ್ನು ವಿವಾಹವಾಗಿ ಅಲ್ಲಿಗೆ ಬಂದರು. ಪ್ರೀತಂ ಹಾಗೂ ಗೌತಂ ಇಬ್ಬರು ಗಂಡು ಮಕ್ಕಳ ತಾಯಿ ವಸುಂಧರಾದೇವಿಯು ಆರ್ಥಿಕ ನಿರ್ವಹಣೆಯ ಅಗತ್ಯದಂತೆ ಇಲ್ಲಿಗೆ ಸಮೀಪದ ಶೆಟ್ಟಿಹಳ್ಳಿಯ ಡೈರಿಯಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದರು. ಈಗ ಹಿರಿಯ ಮಗ ಪ್ರೀತಂ ನರ್ಸಿಂಗ್ ಓದುತ್ತಿದ್ದರೆ ಗೌತಂ 9ನೇ ತರಗತಿಯಲ್ಲಿದ್ದಾನೆ. ಕಷ್ಟ ಕೋಟಲೆಗಳ ನಡುವೆಯೂ ಪ್ರೀತಿಸುವ ಪತಿ, ಬೆನ್ನಿಗೆ ನಿಂತಿರುವ ತಂದೆ-ತಾಯಿ, ಇತರ ಬಾಂಧವರೇ ಇವರ ಬದುಕಿನ ಯಶಸ್ಸಿಗೆ ಕಾರಣಕರ್ತರು. ಇಷ್ಟು ಹೇಳಿದರೆ ಇವರ ಬದುಕಿನಲ್ಲಿ ಏನು ವಿಶೇಷತೆ ಇರಲು ಸಾಧ್ಯ ? ಅಲ್ಲವೇ?
ಮೂರು ವರ್ಷಗಳ ಹಿಂದೆ ವಸುಂಧರಾ ದೇವಿ ಗಾಂಧಿ ವೃದ್ಧಾಶ್ರಮದಲ್ಲಿ ಸಮಾಜ ಸೇವಿಕೆಯಾಗಿ ಕೆಲಸಕ್ಕೆ ಸೇರಿಕೊಂಡರು. ಆಗ ಆ ಕೆಲಸ ಅವರ ಅನಿವಾರ್ಯತೆಯಾಗಿತ್ತು ಅಷ್ಟೇ. ಆದರೆ ಬರುಬರುತ್ತ ಅವರೇ ಆ ವೃದ್ಧಾಶ್ರಮದ ಎಲ್ಲ ಹಿರಿಯರಿಗೆ ಅನಿವಾರ್ಯವಾದದ್ದೇ ಅವರ ಬದುಕಿನ ಮುಖ್ಯ ತಿರುವು. ಈಗ ವೃದ್ಧಾಶ್ರಮದಲ್ಲಿ 25 ವೃದ್ಧೆಯರಿದ್ದಾರೆ. ಇವರಲ್ಲಿ ಬಹುತೇಕರು 80 ವರ್ಷಕ್ಕೆ ಮೇಲ್ಪಟ್ಟವರು. ಎಲ್ಲರೂ ಮನೆಯಿಂದ ಇಲ್ಲಿಗೆ ಕಳಿಸಲ್ಪಟ್ಟವರೇ. ಇವರೆಲ್ಲರಿಗೂ ಸ್ವಂತ ಮಕ್ಕಳು ಇದ್ದರೂ, ಯಾರಿಗೂ ಇವರನ್ನು ನೋಡಿಕೊಳ್ಳುವುದಕ್ಕಾಗಲೀ , ಇವರ ದೇಖರೇಕೆ ಮಾಡಲು ಸಮಯವಾಗಲೀ, ಮನಸ್ಸಾಗಲೀ ಇಲ್ಲ.

  ವಸುಂಧರಾ ದೇವಿಯವರ ಮುಖ್ಯ ಕೆಲಸವೆಂದರೆ ಇವರನ್ನೆಲ್ಲ ನೋಡಿಕೊಳ್ಳುವುದು, ಇವರ ಊಟ-ಉಪಚಾರಗಳ ನಿಗಾ ಇಡುವುದು, ಇವರ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಅಗತ್ಯ ಚಿಕಿತ್ಸೆ ಕೊಡಿಸುವುದು. ಇಲ್ಲಿ ಸಂಬಳಕ್ಕೆ ಇರುವ ಯಾರಾದಾರೂ ತಮ್ಮ ಕೆಲಸವನ್ನು ಮುಗಿಸಿ ಕೈ ತೊಳೆದುಕೊಳ್ಳಬಹುದಿತ್ತು. ಆದರೆ ವಸುಂಧರಾ ದೇವಿ ಅಲ್ಲಿನ ವಯೋವೃದ್ಧರಿಗೆ ತಾಯಾದರು. ಮಕ್ಕಳನ್ನು ನೋಡಿಕೊಳ್ಳುವಂತೇ ಅವರನ್ನು ಸಾಕಿ ಸಲಹಿದರು. ಅಲ್ಲಿಯ ವೃದ್ಧರ ಅನಾರೋಗ್ಯ ತೀರ ಹದಗೆಟ್ಟಾಗ ಅವರ ಮಕ್ಕಳ ಮನೆಯ ಬಾಗಿಲಿಗೆ ಹೋಗಿ ಅಲವತ್ತುಕೊಂಡರು. ಆದರೂ ಕಲ್ಲು ಹೃದಯದ ಮಕ್ಕಳು ಬರದಾದಾಗ ಅವರ ಎಲ್ಲ ಜವಾಬ್ದಾರಿಯನ್ನೂ ತಾವೇ ಹೊತ್ತು ಆಸ್ಪತ್ರೆಗೆ ಅಲೆದರು. ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಒಬ್ಬರು ನಿರಂತರ ಚಿಕಿತ್ಸೆಯ ನಂತರವೂ ಫಲಕಾರಿಯಾಗದೇ ಅಲ್ಲಿಯೇ ತೀರಿಕೊಂಡರು. ಆಗ ಮತ್ತೆ ಅವರ ಬಂಧುಗಳು, ಮಕ್ಕಳಿಗೆ ತಿಳಿಸಲು ಓಡಿದ ವಸುಂಧರಾ ದೇವಿ ನಕಾರಾತ್ಮಕ ಉತ್ತರ ಪಡೆದು ದಿಙ್ಮೂಢರಾಗಿ ಹಿಂದಿರುಗಿದರು. ಏನು ಮಾಡುವುದು ಎಂದು ಆಶ್ರಮದ ರೂವಾರಿ ಬೆಂಗಳೂರಿನÀ ಶೇಖರ್ ಅವರನ್ನು ಕೇಳಿದಾಗ ‘ ಅಂತ್ಯಸಂಸ್ಕಾರವನ್ನು ನೀವೇ ಮಾಡಿಬಿಡಿ ’ ಎಂದು ಉತ್ತರಿಸಿದರು. ಇದು ಮೊದಲ ಅನುಭವವಾದ್ದರಿಂದ ಕೊಂಚ ಭಯವಾದರೂ ಇದೊಂದು ಮಹತ್ಕಾರ್ಯ ಎಂದು ತಮ್ಮನ್ನ ತಾವೇ ಸಿದ್ಧ ಪಡಿಸಿಕೊಂಡರು. ಅಂದಿನಿಂದ ಇದುವರೆಗೆ ನಾಲ್ಕು ವೃದ್ಧೆಯರು ಇಲ್ಲಿ ಪ್ರಾಣ ಬಿಟ್ಟಿದ್ದಾರೆ. ಅವರೆಲ್ಲರ ಅಂತ್ಯಸಂಸ್ಕಾರವನ್ನು ವಸುಂಧರಾ ದೇವಿ ತಾವೇ ಮಾಡಿದ್ದಾರೆ. ಅವರಲ್ಲಿ ಒಬ್ಬಳು ಮುಸ್ಲಿಂ ಮಹಿಳೆ. ಆಕೆ ಯಾರೂ ದಿಕ್ಕಿಲ್ಲದ ಅನಾಥೆಯಾಗಿದ್ದಳು. ಅವಳ ಸಂಸ್ಕಾರವನ್ನೂ ಸಹಾ ವಸುಂಧರಾ ಮಾಡಿದ್ದಾರೆ.

 
  ಸಾವು ಮನುಷ್ಯನನ್ನು ಕಾಡುವಷ್ಟು, ವಿಚಲಿತಗೊಳಿಸುವಷ್ಟು ಬೇರಾವುದೂ ಕಾಡಲಾರದು. ಅಂಥ ಸಾವನ್ನು ಹೊಣೆಯಾಗಿ ಸ್ವೀಕರಿಸಿದ ವಸುಂಧರಾ ದೇವಿಯದೇನು ಎಂಟೆದೆಯ ಧೈರ್ಯವಲ್ಲ ! ತೀರ ಸಾಮಾನ್ಯ ಕುಟುಂಬದಿಂದ ಬಂದ ಕೋಮಲ ಮನದ, ಮಿತ-ಮೃದು ಮಾತಿನ ಸಾಮಾನ್ಯ ಹೆಣ್ಣು ಮಗಳು ಆಕೆ. ಆಂಬುಲೆನ್ಸಿನಲ್ಲಿ ತೀರಿಕೊಂಡ ವೃದ್ಧರ ದೇಹಗಳನ್ನು ಸ್ಮಶಾನಕ್ಕೆ ಸಾಗಿಸಿ, ಅಲ್ಲಿ ಅವರ ದೇಹದ ಮೇಲೆ ಕಟ್ಟಿಗೆ ಇಟ್ಟು, ಬೆಂಕಿ ಹಚ್ಚಿ ಅವರ ಸುಡುವ ದೇಹವನ್ನು ನೋಡಿ ಹಿಂತಿರುಗುವ ಅವರನ್ನು ಹೀಗೆ ಗಟ್ಟಿಗೊಳಿಸಿದ್ದು ಇಲ್ಲಿಯ ವೃದ್ಧರ ದಾರುಣ ಬದುಕು. ಎಲ್ಲರೂ ಇದ್ದೂ ಯಾರೂ ಇಲ್ಲದಂತೆ ಬದುಕಬೇಕಾಗಿರುವ ಈ ವೃದ್ಧರ ಬದುಕಿನ ಅನಿವಾರ್ಯತೆ ಹಾಗೂ ತನ್ನ ಪಾಲಿಗೆ ಅಕಸ್ಮಾತಾಗೆ ಒದಗಿ ಬಂದ ಇಂಥ ಕಠಿಣ ಕೆಲಸವನ್ನು ಪ್ರೀತಿಯಿಂದ ನಿರ್ವಹಿಸಿಸುವ ಅವರ ಸಂಕಲ್ಪ. 

   ಮೂಢನಂಬಿಕೆಗಳನ್ನು ಇನ್ನೂ ಪೋಷಿಸಿಕೊಂಡು ಬಂದಿರುವ ನಮ್ಮ ಸಮಾಜದಲ್ಲಿ ಸ್ಮಶಾನವೆಂದರೆ, ಹೆಣವೆಂದರೆ ಹೇಳಲಾರದ ಅಂಜಿಕೆ, ಭಯ, ಮೈಲಿಗೆ ಇತ್ಯಾದಿ. ಇನ್ನು ಪುರುಷರೇ ಮುಖಾಗ್ನಿ ಕೊಡಬೇಕು ಎಂಬ ಕಾಲಾಂತರದ ಸಂಪ್ರದಾಯ ಹಾಗೂ ನಂಬಿಕೆಗಳ ಹಿನ್ನೆಲೆಯಲ್ಲಿ ಮಹಿಳೆ ಆ ಕೆಲಸವನ್ನು ಮಾಡುವುದು ಬಹುತೇಕ ನಿಷಿದ್ಧ. ಇಂಥ ಸಮಾಜದಲ್ಲೇ ವಸುಂಧರಾ ದೇವಿಯಂಥವರೂ ಇದ್ದಾರೆ. ತಮ್ಮ ಕೆಲಸಕ್ಕೆ ಯಾವುದೇ ಪ್ರಚಾರ, ಪ್ರತಿಫಲಾಪೇಕ್ಷೆ ಇಲ್ಲದೇ ಅದನ್ನು ಮಾಡುತ್ತಿದ್ದಾರೆ. ಹೆಚ್ಚೇನು ವಿದ್ಯಾವಂತರಲ್ಲದಿದ್ದರೂ ಉನ್ನತ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡಿದ್ದಾರೆ. ನಾನು ಮೊದಲೇ ಹೇಳಿದಂತೆ ತಮ್ಮ ಹೆಸರಿಗೆ ಅನುರೂಪವಾಗಿದ್ದಾರೆ. ತೀರಿ ಹೋದ ಇಲ್ಲಿನ ವೃದ್ಧರನ್ನು ನೆನೆಸಿಕೊಂಡು ಈಗಲೂ ದುಃಖಿಸುತ್ತಾರೆ. ಜಾತಿ, ಮತ-ಪಂಥ ಎಂದು ಬಡಿದಾಡುವ ಜನ ಇಂಥ ಯಾವ ಕೆಲಸದ ಸಮೀಪವೂ ಸುಳಿಯುವುದಿಲ್ಲ. ಬದುಕು ವೇದಿಕೆಯ ಭಾಷಣವಲ್ಲ; ಹೊತ್ತು ಹೊತ್ತಿನ ಅಗತ್ಯಗಳ, ಅನಿವಾರ್ಯಗಳ ಪಯಣ ಎಂಬ ಸರಳ ಸಿದ್ಧಾಂತವನ್ನು ನಂಬಿಕೊಂಡು ಅದನ್ನು ಪೂರ್ಣತಃ ಕಾರ್ಯರೂಪಕೆÀ್ಕ ತಂದಿರುವ ವಸುಂಧರಾ ದೇವಿಯಂಥವರು ಹೆಚ್ಚಿದರೆ ಬದುಕು ಇನ್ನಷ್ಟು ಸಹ್ಯವಾದೀತು. 

             

ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *