ಮಹಿಳಾ ಅಂಗಳ / ಮೂಢ ನಂಬಿಕೆಯ ಸುಳಿಯಲ್ಲಿ ಮಹಿಳೆ – ನೂತನ ದೋಶೆಟ್ಟಿ
ಇಬ್ಬರು ಸಹೋದರಿಯರನ್ನು ಅವರ ತಾಯಿಯೇ ತ್ರಿಶೂಲದಿಂದ ಇರಿದು ಕೊಂದಿದ್ದಾರೆ…… ಇಂಥ ಅತಿರೇಕಗಳು, ಅಮಾನವೀಯ ಘಟನೆಗಳು ಎಲ್ಲ ಕಾಲಘಟ್ಟದಲ್ಲೂ ನಡೆದಿವೆ. ಬಾಲ್ಯ ವಿವಾಹ, ವಿಧವೆಯರ ಕೇಶ ಮುಂಡನ, ಪರದಾ ಪದ್ಧತಿ, ಸತಿ ಪದ್ಧತಿ, ದೇವದಾಸಿ ಪದ್ಧತಿ, ಹೆಣ್ಣು ಭ್ರೂಣಹತ್ಯೆ ಮೊದಲಾದ ಕ್ರೂರ ಸಾಮಾಜಿಕ ಅನಿಷ್ಟಗಳನ್ನು ಕಾಲಕಾಲಕ್ಕೆ ಎದುರಿಸುತ್ತ ಅಂತೆಯೇ ಪರಿಹಾರವನ್ನು ಸಾಮಾಜಿಕವಾಗಿ, ಕಾನೂನಾತ್ಮಕವಾಗಿ, ಧಾರ್ಮಿಕವಾಗಿ ಕಂಡುಕೊಳ್ಳಲಾಗಿದೆ.
ಈ ಎಲ್ಲ ಸಮಸ್ಯೆಗಳಿಗೆ ಹಾಗೂ ಪರಿಹಾರಗಳಿಗೆ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಯಾ ಕಾಲದಲ್ಲಿ ಇದ್ದ ಮಾಧ್ಯಮಗಳೂ ಪರಿಣಾಮಕಾರಿಯಾಗಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿವೆ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇದ್ದ ಏಕೈಕ ಮಾಧ್ಯಮವೆಂದರೆ ಮುದ್ರಣ ಮಾಧ್ಯಮ. ಇದರ ಮೂಲಕ ಅನೇಕ ಸಮಾಜ ಸುಧಾರಕರು ತಮ್ಮ ಅಭಿಪ್ರಾಯಗಳನ್ನು ಜನತೆಗೆ ತಲುಪಿಸುತ್ತಿದ್ದರು. ಇಂಥ ಸಾಮಾಜಿಕ ಪಿಡುಗುಗಳ ವಿರುದ್ಧ ದನಿ ಎತ್ತಿದವರಲ್ಲಿ ರಾಜಾ ರಾಂ ಮೋಹನ್ ರಾಯ್ ಅವರದು ಪ್ರಮುಖ ಹೆಸರು. 1828ರ ಹೊತ್ತಿಗೆ ಅವರು ಸ್ಥಾಪಿಸಿದ ಬ್ರಹ್ಮೋ ಸಮಾಜದ ಮೂಲಕ ಅವರು ಸತಿ, ಪರದಾ, ಬಾಲ್ಯ ವಿವಾಹ ಮೊದಲಾದವುಗಳ ವಿರುದ್ಧ ದನಿ ಎತ್ತಿದರು. ತಮ್ಮ ಬರವಣೆಗೆಗಳ ಮೂಲಕವೂ ಅವರು ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದರು.
ಬ್ರಿಟಿಷ್ ಗವರ್ನರ್ ಜನರಲ್ ಗಳಾಗಿದ್ದ ವಿಲಿಯಂ ಬೆಂಟಿಂಕ್ ಸತಿ ಪದ್ಧತಿ ನಿಷೇಧ ಕಾನೂನನ್ನು 1829ರಲ್ಲಿ ಜಾರಿಗೆ ತಂದರೆ ಡಾಲ್ ಹೌಸಿ 1856ರಲ್ಲಿ ವಿಧವಾ ವಿವಾಹ ಕಾನೂನನ್ನು ಜಾರಿಗೊಳಿಸಿದ. ಇವುಗಳು ಜನರನ್ನು ತಲುಪಿದ್ದು ಪತ್ರಿಕೆಗಳು ಮೂಲಕವೇ. 1848ರ ಹೊತ್ತಿಗೆ ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ ಅವರು ಮಹಿಳಾ ಶಿಕ್ಷಣವನ್ನು ಪ್ರತಿಪಾದಿಸಿ ಮಹಿಳಾ ಶಾಲೆಗಳನ್ನು ತೆರೆದರು. ಸಾಮಾಜಿಕ ವಿರೋಧದ ನಡುವೆಯೂ ಅವರು ಅಕ್ಷರಗಳ ಕೈ ಹಿಡಿದರು ಹಾಗೂ ಅಕ್ಷರಗಳೂ ಅವರ ಕೈ ಬಿಡಲಿಲ್ಲ. ಸಾವಿತ್ರಿ ಬಾಯಿ ಅವರು ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ಇತಿಹಾಸದಲ್ಲಿ ದಾಖಲಾದರು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಡತನ, ಅನಕ್ಷರತೆ, ಜನಸಂಖ್ಯಾ ಸ್ಫೋಟ ಮೊದಲಾದ ಹತ್ತು ಹಲವು ಸಮಸ್ಯೆಗಳನ್ನು ನಿರ್ವಹಿಸುವ ಹಾಗೂ ತಡೆಗಟ್ಟುವ ಗುರುತರ ಜವಾಬ್ದಾರಿಯನ್ನು ಪತ್ರಿಕೆಗಳು ಹೊತ್ತವು.. ಈ ಹೊತ್ತಿಗೆ ಭಾರತದಲ್ಲಿ. ಜನಸಾಮಾನ್ಯರನ್ನು ತಲುಪಲು ಹಾಗೂ ಪತ್ರಿಕೆ ತಲುಪಲಾಗದ ಸ್ಥಳಗಳಿಗೂ ತಲುಪಿದ್ದು ಶ್ರವಣ ಮಾಧ್ಯಮವಾಗಿದ್ದ ಆಕಾಶವಾಣಿ. ಈ ಎರಡು ಮಾಧ್ಯಮಗಳ ಸುದ್ದಿ, ಅವುಗಳ ಪ್ರಸಾರದಲ್ಲಿದ್ದ ದಕ್ಷತೆ ಇತರ ಮಾಧ್ಯಮಗಳಿಗೆ ಮಾದರಿಯಂತಿತ್ತು. ಇದರೊಂದಿಗೆ ಸಿನಿಮಾ ಮಾಧ್ಯಮವೂ ಬಡತನ, ಅನಕ್ಷರತೆ, ದೇಶಭಕ್ತಿಯಂತಹ ವಸ್ತುಗಳನ್ನು ಇಟ್ಟುಕೊಂಡು ಜನಜಾಗೃತಿಯನ್ನು ಉಂಟು ಮಾಡಿತು. ಈ ಎಲ್ಲ ಮಾಧ್ಯಮಗಳು ( ಆಕಾಶವಾಣಿಯನ್ನು ಹೊರತುಪಡಿಸಿ) ಉದ್ದಿಮೆಗಳಾಗಿ ಬೆಳೆದು ಮೇಲೆ ಸಾಮಾಜಿಕ ಪ್ರಜ್ಞೆಯನ್ನು , ಅಂತಃಕರಣವನ್ನು ಹಾಗೂ ಮಹಿಳಾಪರ ಸೂಕ್ಷ್ಮತೆಯನ್ನೇ ಕಳೆದುಕೊಂಡಿವೆ ಎಂಬುದಕ್ಕೆ ಆರಂಭದಲ್ಲಿ ಹೇಳಿದ ಸುದ್ದಿ ಒಂದು ಉದಾಹರಣೆ.
ಟಿವಿ ಮಾಧ್ಯಮಗಳು ಟಿ ಆರ್ ಪಿ ಗಾಗಿ ಖಾಸಗಿ ಬದುಕಿನ ನೋವು, ದುಃಖ ಗೋಳನ್ನು ತೆರೆಯ ಮೇಲೆ ರಂಜನೀಯವೆನ್ನುವಂತೆ ತೋರಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡರೂ ಲಜ್ಜೆಗೇಡಿಗಳಾಗಿ ಟಿ ಆರ್ ಪಿಯೇ ದೈವವೆಂದು ಆರಾಧಿಸುತ್ತಿದ್ದಾರೆ. ಈಗ ಪತ್ರಿಕೆಗಳೂ ಅದೇ ಹಾದಿ ಹಿಡಿದಿರುವುದು ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಅಭದ್ರತೆ ಹೆಚ್ಚಾಗುತ್ತಿದೆ ಎಂಬುದನ್ನು ಬಿಂಬಿಸುತ್ತಿವೆ.
ನೂತನ ದೋಶೆಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.