ಮಹಿಳಾ ಅಂಗಳ / ಮಹಿಳೆಯರ ಆತ್ಮಕತೆ ಎಂಬ ಕುತೂಹಲ – ನೂತನ ದೋಶೆಟ್ಟಿ
ಆತ್ಮಕತೆ ಅಂದರೆ ಬರೀ ದುಃಖವೇ ಗೋಳಾಟವೇ ಸಂಘರ್ಷವೇ? ಮಹಿಳೆಯರಿಗೆ ತಮ್ಮ ಬದುಕಿನ ನೋವಿನ ಪಾಲಿಗೇ ಹೆಚ್ಚು ಮಹತ್ವವೇ? ಹಾಗಾಗಿಯೇ ಮಹಿಳೆಯರು ಬರೆವ ಆತ್ಮಕತೆಗಳು ಹೆಚ್ಚು ಜನಪ್ರಿಯವಾಗುತ್ತವೆಯೆ? ಮಹಿಳಾ ಆತ್ಮಕತೆಗಳು ಗೆಲ್ಲುವುದು, ಸಂಘರ್ಷದ ಹಾದಿಯನ್ನು ಮೀರಿ ಅವರು ಇಂದು ನಿಂತಿರುವ ಯಶಸ್ಸಿನ ಉತ್ತುಂಗದ ಕಾರಣದಿಂದ ಎಂದು ಮಾತ್ರ ಖಂಡಿತವಾಗಿ ಹೇಳಬಹುದು.
ಇತ್ತೀಚೆಗೆ ಒಂದು ಸಾಹಿತ್ಯ ವೇದಿಕೆಯವರು ರಾಜ್ಯ ಮಟ್ಟದ ತಮ್ಮ ಕಾರ್ಯಕ್ರಮದಲ್ಲಿ “ಆತ್ಮಕತೆ ಹಾಗೂ ಮಹಿಳೆ” ಎಂಬ ವಿಷಯವಾಗಿ ಮಾತನಾಡಲು ಹೇಳಿದರು. ಆ ವಿಷಯವನ್ನು ಕೇಳಿ ಮಹಿಳೆಯ ಆತ್ಮಚರಿತ್ರೆ ಎಂಬ ವರ್ಗೀಕರಣವೇಕೆ ಎಂದು ಅವರನ್ನು ಕೇಳಿದೆ. ಅದಕ್ಕೆ ಅವರು ಒಂದು ಸಮಜಾಯಿಷಿ ಹೇಳಿದರು. ಅದು ಇಲ್ಲಿ ಮುಖ್ಯವಲ್ಲ.
ಮಹಿಳಾ ಸಾಹಿತ್ಯ ಅನ್ನುವ ವರ್ಗೀಕರಣ ಬೇಡ ಎನ್ನುವ ಚರ್ಚೆ ಬಹಳ ವರ್ಷಗಳಿಂದ ನಡೆಯುತ್ತಲೇ ಇದೆ. ಇಂದಿಗೂ ಆ ಪ್ರಶ್ನೆಯನ್ನು ಹಾಕಿಕೊಳ್ಳುತ್ತ ಅದರ ಪ್ರತಿಪಾದನೆಯೂ ನಡೆಯುತ್ತಿದೆ. ಜೊತೆಗೆ ಮಹಿಳಾ ಸಾಹಿತ್ಯ ಎಂದು ಮೂಗು ಮುರಿಯುವುದು, ಅದರ ಬಗ್ಗೆ ಸರಿಯಾದ ವಿಮರ್ಶೆ ಬರದಿದ್ದುದು, ಅದನ್ನು ಪುರುಷರು ಬರೆದ ಸಾಹಿತ್ಯದಂತೆ ಗಂಭೀರವಾಗಿ ತೆಗೆದುಕೊಳ್ಳದಿದ್ದುದು ಎಲ್ಲವೂ ಬಹಳಷ್ಟೇನು ಬದಲಾಗಿಲ್ಲ. ಆದರೆ ಅದನ್ನು ಅಷ್ಟಾಗಿ ಪರಿಗಣಿಸದೆ ಬರೆಯುವ ಮಹಿಳೆಯರು ಹೆಚ್ಚಾಗಿದ್ದಾರೆ. ಹೀಗಿರುವಾಗ ಆತ್ಮಚರಿತ್ರೆಯನ್ನು ಮಹಿಳಾ ನೆಲೆಯಲ್ಲಿ ಹಾಗೂ ಮಹಿಳೆಯರು ಬರೆದ ಕೃತಿಗಳನ್ನು ವಿಶೇಷವಾಗಿ ಚರ್ಚಿಸುವುದರ ಉದ್ದೇಶ ನನ್ನ ಮಟ್ಟಿಗೆ ಪ್ರಶ್ನೆಯಾಗಿತ್ತು. ಹಾಗೆ ನೋಡಿದರೆ ಮಹಿಳೆಯರು ಬರೆದ ಆತ್ಮಕತೆಗಳು ಬಂದಿದ್ದು ವಿರಳ. ಕನ್ನಡದಲ್ಲಿ ತೀರ ಇತ್ತೀಚೆಗೆ ಆತ್ಮಕತೆಗಳನ್ನು ಮಹಿಳೆಯರು ಬರೆದಿದ್ದಾರೆ.
ಮಹಿಳೆಯರು ಬರೆದಿರುವ ಆತ್ಮಕತೆಗಳ ಒಂದು ಸಣ್ಣ ಇಣುಕು ನೋಟವನ್ನು ನೋಡೋಣ. ಭಾರತದಲ್ಲಿ ದಾಖಲಾಗಿರುವ ಮೊದಲ ಮಹಿಳಾ ಆತ್ಮಕತೆಯನ್ನು ಬಂಗಾಳದ ರಾಸುಂದರಿ ದೇವಿಯವರು ಬರೆದದ್ದು. 1865 ರಲ್ಲಿ ಅವರು ಬರೆದ ಆತ್ಮಕತೆಯ ಹೆಸರು ‘ಅಮಾರ್ ಜೀಬನ್’ – ನನ್ನ ಜೀವನ. 1876 ರಲ್ಲಿ ಅದು ಪ್ರಕಟವಾಗಿದೆ. ಒಂದೂ ಕಾಲು ಶತಮಾನದ ಮೋದಲೇ ಒಬ್ಬ ಮಹಿಳೆ ತನ್ನ ಜೀವನದ ಕುರಿತು ಆತ್ಮಕತೆಯನ್ನು ಬರೆದಿದ್ದಳೆಂದರೆ ನಾವೀಗ ಬಹಳ ತಡವಾಗಿ ಅದರ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದೇ ಅಥ, ಭಾರತದ ಮೊದಲ ಬ್ಯಾರಿಸ್ಟರ್ ಕಾರ್ನೇಲಿಯಾ ಸೊರಾಬ್ಜಿ ಅವರು ‘ಇಂಡಿಯಾ ಕಾಲಿಂಗ್ ‘ ಹೆಸರಿನ ತಮ್ಮ ಆತ್ಮಕತೆಯನ್ನು ಬರೆದರು. ವಕೀಲರಾಗಿದ್ದ ಫ್ಲೇವಿಯಾ ಆಗ್ನೆಸ್ ಅವರು ‘ಮೈ ಸ್ಟೋರಿ, ಅವರ್ ಸ್ಟೋರಿ ಆಫ್ ರಿಬಿಲ್ಟಿಂಗ್ ಬ್ರೋಕನ್ ಲೈನ್ಸ್ ‘ ಎಂಬ ಶೀರ್ಷಿಕೆಯ ಆತ್ಮಕತೆ ಬರೆದರು. ಮಹಾರಾಷ್ಟ್ರದ ಊರ್ಮಿಳಾ ಪವಾರ್ ಅವರು ಮರಾಠಿಯಲ್ಲಿ ಆತ್ಮಕತೆಯನ್ನು ಬರೆದರು. ಇವರ ಆತ್ಮಕತೆಗಳ ಶೀರ್ಷಿಕೆಗಳನ್ನು ನಾವು ಗಮನಿಸಿದಾಗ ಅಲ್ಲಿರುವ ಎಚ್ಚರ, ಬದಲಾವಣೆಯ ಗಾಳಿ, ಅದರ ತುಡಿತ, ಅವರ ಒಳಗನ್ನು ತೆರೆಯುವ ಹಂಬಲ ನಿಚ್ಚಳವಾಗುತ್ತದೆ. ಇದು ಆ ಕಾಲದ ಸಾಮಾಜಿಕ ಚಿತ್ರಣವನ್ನೂ ಒದಗಿಸುತ್ತದೆ.
ಆತ್ಮಕತೆಗಳಲ್ಲಿ ಗಾಂಧೀಜಿಯವರ ‘ಮೈ ಎಕ್ಸ್‍ಪೆರಿಮೆಂಟ್ ವಿತ್ ಟ್ರುತ್’ ಬಹಳ ಪ್ರಸಿದ್ಧವಾದದ್ದು. ಅವರು ಸತ್ಯದ ತಮ್ಮ ಅನ್ವೇಷಣೆಯನ್ನು ಎಳೆಎಳೆಯಾಗಿ ಬಿಚ್ಚುತ್ತಾರೆ. ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ‘ಭಿತ್ತಿ’, ರಾಷ್ಟ್ರಪತಿಗಳಾಗಿದ್ದ ಎ.ಪಿ. ಜಿ. ಅಬ್ದುಲ್ ಕಲಾಂ ಅವರ ‘ ವಿಂಗ್ಸ್ ಆಫ್ ಫೈರ್ ‘ ಗಮನ ಸೆಳೆದಿವೆ. ಇದುವರೆಗೆ ರಾಜಕೀಯ ಮುಂದಾಳುಗಳು, ಸಾಮಾಜಿಕವಾಗಿ ಹೆಸರಾದವರು ಆತ್ಮಕತೆಗಳನ್ನು ಬರೆದರು. ತೀರ ಇತ್ತೀಚೆಗೆ ಕ್ರೀಡಾ ಕ್ಷೇತ್ರದ ಅಭಿನವ್ ಬಿಂದ್ರಾ ಅವರು ‘ಅ ಶಾಟ್ ಆಟ್ ಹಿಸ್ಟರಿ ‘ ಹಾಗೂ ಸಾನಿಯಾ ಮಿರ್ಜಾ ಅವರು ‘ಏಸ್ ಅಗೇನಸ್ಟ್ ಆಡ್ಸ್’ ಎಂಬ ಆತ್ಮಕತೆಗಳನ್ನು ಬರೆದು ಗಮನ ಸೆಳೆದರು. ಹೀಗೆ ಆತ್ಮಕತೆಗಳು ಮತ್ತು ವ್ಯಕ್ತಿಗಳು ವೈವಿಧ್ಯತೆಯ ಹಿನ್ನೆಲೆಯಲ್ಲಿ ಬಂದದ್ದನ್ನು ನಾವು ಕಾಣಬಹುದು.
ಆನ್ ಫ್ರಾಂಕ್ ಎಂಬ ಪುಟ್ಟ ಬಾಲಕಿ ಬರೆದ ‘ದ ಡೈರಿ ಆಫ್ ಅ ಯಂಗ್ ಗರ್ಲ್’ ನಾಝಿಗಳ ಆಡಳಿತದಲ್ಲಿ ಮಹಿಳೆಯರು ಹಾಗೂ ಮಕ್ಕಳು ಅನುಭವಿಸಿದ ಸಂಕಟ-ವೇದನೆಯನ್ನು ಕಟ್ಟಿಕೊಟ್ಟಿದ್ದು ಅವಳ ಆತ್ಮಕತೆ ಇಂದಿಗೂ ಮಹತ್ವ ಪಡೆದಿದೆ. ಮಲಯಾಳಂ ಭಾಷೆಯಲ್ಲಿ ಕಮಲಾ ಸುರೈಯಾ ಬರೆದ ‘ಎಂಡೆ ಕಥಾ’, ಅಮೃತಾ ಪ್ರೀತಂ ಅವರ ‘ರಸೀದಿ ಟಿಕೆಟ್’ ಅವರ ಬದುಕನ್ನು ತೆರೆದಿಟ್ಟಂತೆ ಅವರ ಕಾಲದ ಸಾಮಾಜಿಕ ಚಿತ್ರಣವೂ ಆಗಿದೆ. ಅಮೃತಾ ಪ್ರೀತಂ ಅವರು ತಾನೂ ಆತ್ಮಕತೆಯನ್ನು ಬರೆಯುತ್ತೇನೆ ಎಂದು ಹೇಳಿದಾಗ ಖುಷವಂತ್ ಸಿಂಗ್ ಅವರು ಅದನ್ನೇನು ಒಂದು ಬಸ್ ಟಿಕೀಟಿನ ಹಿಂದೆ ಬರೆಯಬಹುದು ಎಂಬ ಲೇವಡಿಯ ಮಾತು ಆ ಕಾದಲ್ಲಿ ಮಹಿಳಾ ಸಾಹಿತ್ಯ ಹಾಗೂ ಅವರ ಜೀವನದ ಬಗೆಗೆ ಇದ್ದ ಮನಸ್ಥಿತಿಯನ್ನು ತೋರಿಸುತ್ತದೆ. ಆದರೆ ಅದನ್ನೇ ತಮ್ಮ ಕೃತಿಯ ಶೀರ್ಷಿಕೆಯಾಗಿ ಇಟ್ಟು ಅದನ್ನು ಬರೆದದ್ದು ಮಹಿಳೆಯೊಬ್ಬಳ ಛಲ ಹಾಗೂ ಫ್ಯೂಡಲಿಸಂ ವಿರುದ್ಧದ ಬಂಡೇಳುವಿಕೆಯ ದ್ಯೋತಕವಾಗಿದೆ. ಈ ಕಾಲದಲ್ಲಿ ಬಹುತೇಕ ಸಾಹಿತ್ಯ, ಸಂಸ್ಕೃತಿ ಕ್ಷೇೀತ್ರಗಳಿಗೆ ಸಂಬಂಧಿಸಿದವರ ಆತ್ಮಕತೆಗಳು ಬಂದುದನ್ನು ನಾವು ಕಾಣಬಹುದು.
ಕನ್ನಡದ ಮಟ್ಟಿಗೆ ಹೇಳುವುದಾದರೆ ಪ್ರತಿಭಾ ನಂದಕುಮಾರ್ ಅವರ ಅನುದಿನದ ಅಂತರಗಂಗೆ', ಭಾರ್ಗವಿ ನಾರಾಯಣ ಅವರ
ನಾನು ಭಾರ್ಗವಿ’, ವಿಜಯಾ ಅವರ ಕುದಿ ನೆಸರು', ಉಷಾ ಪಿ. ರೈ ಅವರ
ಯಾವ ನಾಳೆಯೂ ನಮ್ಮದಲ್ಲ’, ಕುಲಶೇಖರಿ ಎಂಬ ಕಾವ್ಯನಾಮದಿಂದ ಬರೆಯುವ ಉಷಾದೇವಿ ಅವರ ಆತ್ಮಕತೆ, ಇಂದಿರಾ ಲಂಕೇಶ್ ಅವರ ಆತ್ಮಕತೆ, ಬಿ. ಜಯಶ್ರೀ ಅವರು ಲೇಖಕಿ ಪ್ರೀತಿ ನಾಗರಾಜ ಅವರಿಗೆ ಹೇಳಿ ಬರೆಸಿದ ಅವರ ಆತ್ಮಕತೆ `ಕಣ್ಣಾ ಮುಚ್ಚೆ ಕಾಡೇ ಗೂಡೆ’, ಪ್ರೇಮಾ ಕಾರಂತ, ಉಮಾಶ್ರೀ ಅವರ ಆತ್ಮಕತೆಗಳು ಹೀಗೆ ಅನೇಕಾನೇಕ ಕೃತಿಗಳು ನೆನಪಿಗೆ ಬರುತ್ತವೆ. ಒಂದರ ಮೇಲೆ ಒಂದರಂತೆ ಬಂದ ಸೊಗಸಾದ ಕಾಲ ಅದಾಗಿದೆ.
ಒಬ್ಬ ವ್ಯಕ್ತಿಯ ಬದುಕು ಬಾಲ್ಯದಿಂದ ಅವರು ಬರೆಯುತ್ತಿರುವವರೆಗಿನ ಕಾಲದ ಘಟನಾವಳಿಗಳನ್ನು ಚಿತ್ರಿಸುವುದು ಆತ್ಮಕತೆ ಅಲ್ಲವೆ? ಅದನ್ನು ಬರೆಯುವುದು ಏಕೆ ಹಾಗೂ ಅದನ್ನ ಓದುಬೇಕಾದದ್ದು ಏಕೆ? ಒಬ್ಬರ ಬದುಕು ಅವರಿಗೆ ತೀರ ವೈಯುಕ್ತಿಕವಾದದ್ದು. ಅದನ್ನು ಸಾರ್ವತ್ರಿಕಗೊಳಿಸುವುದು ಅಂದರೆ! ಆ ಜೀವನದ ಸತ್ವ ಅಷ್ಟಿರುತ್ತದೆ ಎಂದಲ್ಲವೆ? ಅವರ ಅನುಭವ ಅವರೊಬ್ಬರದೇ ಅಗಿರದೆ ಪ್ರತಿಯೊಬ್ಬರ ಬದುಕಿನಲ್ಲೂ ಹಾದು ಹೋಗಬಹುದಾದ ಅಥವಾ ಹಾಸು ಹೊಕ್ಕಾಗಬಹುದಾದದ್ದು ಇರಬಹುದಲ್ಲವೆ? ಈ ಕಾರಣದಿಂದಲೇ ಆತ್ಮಕತೆ ಮಹತ್ವ ಪಡೆಯುವುದು. ಅಪರೂಪದ ಸಾಹಿತ್ಯ ಪ್ರಕಾರವಾಗಿ ಬೆಳೆದಿರುವುದು. ಅದು ಎಲ್ಲರಿಗೂ ಸ್ವಂತವಾಗುವುದು. ಇದು ಆತ್ಮಕತೆಗಳ ವಿಶೇಷ.
ಈ ಮೇಲೆ ಕೊಟ್ಟಿರುವ ಕೆಲವು ಆತ್ಮಕತೆಗಳ ಉದಾಹರಣೆಗಳನ್ನು ಗಮನಿಸಿದಾಗ ಅವುಗಳನ್ನು ಬರೆದವರು ಈಗಾಗಲೇ ಸಾಹಿತ್ಯ, ಪತ್ರಿಕೋದ್ಯಮ, ನಾಟಕ ಮೊದಲಾದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು, ಸೆಲೆಬ್ರಿಟಿಗಳು. ಅವರ ವೈಯಕ್ತಿಕ ಬದುಕಿನ ಬಗ್ಗೆ ಉಳಿದವರಿಗೆ ಕುತೂಹಲ ಇರುತ್ತದೆ. ಅನುಮಾನಗಳಿರುತ್ತವೆ. ಅವರ ರಚನೆಯ ಸಾಹಿತ್ಯ ಓದಿಕೊಂಡು ಅವರ ಬಗ್ಗೆ ಕೆಲವು ನಿಲುವುಗಳನ್ನು ಈಗಾಗಲೇ ತಳೆದು ಬಿಟ್ಟಿರುತ್ತಾರೆ. ಹಾಗಾಗಿ ಅವರ ಬಗ್ಗೆ ಹೆಚ್ಚು ತಿಳಿಯುವ ಆಸಕ್ತಿ ಇರುತ್ತದೆ. ಮಹಿಳಾ ಆತ್ಮಕತೆಗಳು ಇಲ್ಲಿಯೇ ವಿಶೇಷವಾಗುವುದು. ಅನೇಕ ಆತ್ಮಕತೆಗಳಲ್ಲಿ ಬಾಲ್ಯದಿಂದ ಅವರು ಕಂಡುಂಡ ನೋವು ಮಡುಗಟ್ಟಿದ್ದು ಅವರ ಕೃತಿಗಳಲ್ಲಿ ಅದು ಕರಗುತ್ತದೆ. ಅವರ ಬದುಕನ್ನು ರೂಪಿಸಿದ ಅಥವಾ ವಿರೂಪಿಸಿದ ಅನೇಕರ ಪ್ರಸ್ತಾಪ ಇಲ್ಲಿ ಬರುತ್ತದೆ. ಅವರೆಲ್ಲರೂ ಸಾರ್ವಜನಿಕ ಜೀವನದಲ್ಲಿ ಬಹುತೇಕ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡಿರುವುದರಿಂದ ಅನೇಕ ವ್ಯಕ್ತಿಗಳು ಅಲ್ಲಿ ಬಂದು ಹೋಗುತ್ತಾರೆ. ಅಲ್ಲಿ ಉದ್ದಕ್ಕೂ ಸಂಬಂಧಗಳ ಜಗ್ಗಾಟ, ಕಾಪಾಡುವಿಕೆ, ಮೈಮನಗಳ ತುಮುಲ, ಮೋಸ, ವಂಚನೆ, ಧಗಾ, ಬಡತನ, ಬೇಗೆ, ಶೋಷಣೆ, ಹಸಿವು ಇವೇ ಮೊದಲಾದ ಅವರನ್ನು ಸಾಕಷ್ಟು ಹಣ್ಣು ಮಾಡಿರುವ ಕಥನಗಳು ಬರುತ್ತವೆ. ಇವು ಯಾವತ್ತೂ ಮನಸ್ಸಿಗೆ ತಟ್ಟುವ ವಿಷಯಗಳು. ಓದುಗನಿಗೆ ವೇದನೆ ತರುತ್ತವೆ. ಕಣ್ಣೀರು ಬರಿಸುತ್ತವೆ. ಇದುವರೆಗೂ ಮನಸ್ಸಿನ ಒಂದು ಮೂಲೆಯಲ್ಲಿ ಸುಪ್ತವಾಗಿ ಕುಳಿತಿದ್ದ ಗತಕಾಲ, ಆ ಭಾವನೆಗಳು ಹೊರಹೊಮ್ಮಿ ಸಾಗರದಂತೆ ನುಗ್ಗುವ ಅನುಭವ ಓದುಗನಿಗೆ ಆಗುತ್ತದೆ. ಮಹಿಳೆಯರ ಜೀವನ ಇಂತಹದ್ದನ್ನೆಲ್ಲ ಧಾರಾಳವಾಗಿ ತುಂಬಿಕೊಂಡಿರುವುದರಿಂದ ಅಂತಹ ಕೃತಿಗಳು ಬಹು ಜನಮೆಚ್ಚುಗೆಯನ್ನು, ಮನ್ನಣೆಯನ್ನು ಗಳಿಸುತ್ತವೆ.
ಕರ್ನಾಟಕ ಲೇಖಕಿಯರ ಸಂಘ ರಾಜ್ಯ ಮಟ್ಟದಲ್ಲಿ “ಲೇಖ-ಲೋಕ” ಎನ್ನುವ ಕಾರ್ಯಕ್ರಮವನ್ನು ಏರ್ಪಡಿಸಿ ಲೇಖಕಿಯರಿಂದ ಅವರ ಬದುಕಿನ ಬಗ್ಗೆ ಮಾತಾಡಿಸಿ ಅದನ್ನು ದಾಖಲಾಗಿಸಿದೆ. ಪುಸ್ತಕ ರೂಪದಲ್ಲಿ ಸುಮಾರು 7-8 ಸಂಪುಟಗಳು ಲಭ್ಯ ಇವೆ. ಬಹುತೇಕ ಎಲ್ಲ ಲೇಖನಗಳೂ ಕಣ್ಣಿರು ತರಿಸುತ್ತವೆ.
ಹಾಗಿದ್ದರೆ, ಆತ್ಮಕತೆ ಅಂದರೆ ಬರೀ ದುಃಖವೇ ಗೋಳಾಟವೇ ಸಂಘರ್ಷವೇ? ಅಥವಾ ತೀರ ವೈಯಕ್ತಿಕ ಪ್ರೀತಿ, ಪ್ರೇಮದ ನೆಲೆಯೆ? ಇವೆಲ್ಲವೂ ಒಂದು ಬದುಕಿನ ಭಾಗವೇ. ಆ ಬದುಕಿನಲ್ಲಿ ಅಲ್ಲಲ್ಲಿ ಸಂತಸದ ಅನುಭವಗಳೂ ಇರುತ್ತವಲ್ಲ. ಅವುಗಳು ಯಾಕೆ ಕಡಿಮೆ ದಾಖಲಾಗುತ್ತವೆ? ಮಹಿಳೆಯರಿಗೆ ತಮ್ಮ ಬದುಕಿನಲ್ಲಿ ನೋವಿನ ಪಾಲಿಗೇ ಹೆಚ್ಚು ಮಹತ್ವವೇ? ಹಾಗಾಗಿಯೇ ಮಹಿಳೆಯರು ಬರೆವ ಆತ್ಮಕತೆಗಳು ಹೆಚ್ಚು ಜನಪ್ರಿಯವಾಗುತ್ತವೆಯೆ?
ಪ್ರತಿಭಾ ನಂದಕುಮಾರ್ ಅವರು ‘ನನ್ನ ಕವಿತೆಗಳೇ ನನ್ನ ಆತ್ಮಕತೆ’ ಎಂದು ಹೇಳುತ್ತಾರೆ. ಅದರಂತೆ ಕತೆ, ಕಾದಂಬರಿಗಳೂ ಆತ್ಮ ಕಥನಗಳೇ ಅಲ್ಲವೇ? ತ್ರಿವೇಣಿ, ಎಂ. ಕೆ. ಇಂದಿರಾ, ಕೊಡಗಿನ ಗೌರಮ್ಮ ಇವರ ಕಾದಂಬರಿಗಳು ಆ ಕಾಲದ ಸಾಮಾಜಿಕ ಜೀವನದಲ್ಲಿ ಅವರು ಕಂಡ, ಅವರಿಗೆ ದಕ್ಕಿದ ಬದುಕಿನ ಭಾಗವೇ ಕಥನ ರೂಪದಲ್ಲಿ ಬಂದಿರಬಹುದು ಎಂದು ಅನ್ನಿಸುತ್ತದೆ.
ಹಾಗೆ ನೋಡಿದರೆ ಈಗ ಹೇಳಿರುವ ಕೆಲವು ಆತ್ಮಕತೆಗಳಿಗಿಂತ ಹೇಳದೇ ಇರುವ ನೂರಾರು ಆತ್ಮಕತೆಗಳು ಇವೆ. ಎಲ್ಲರ ಬದುಕೂ ಅತ್ಮಕಥನದ ಸಾಮರ್ಥ್ಯವನ್ನು ಹೊಂದಿದೆ ಅಲ್ಲವೇ? ಕೆಲವರಿಗೆ ಬರೆಯುವ ಸಾಮರ್ಥ್ಯ ಇರುತ್ತದೆ. ಅವು ಒಳ್ಳೆಯ ಕಥನಗಳಾಗುತ್ತವೆ. ಅವುಗಳನ್ನು ಜನ ಒಪ್ಪಿಕೊಳ್ಳುತ್ತಾರೆ. ಕೆಲವರಿಗೆ ಆ ಸಾಮರ್ಥ್ಯ ಇರುವುದಿಲ್ಲ. ಅವು ಯಾವತ್ತೂ ಹೊರಗೆ ಬರುವುದೇ ಇಲ್ಲ. ಮಹಿಳಾ ಆತ್ಮಕತೆಗಳು ಗೆಲ್ಲುವುದು, ಸಂಘರ್ಷದ ಹಾದಿಯನ್ನು ಮೀರಿ ಅವರು ಇಂದು ನಿಂತಿರುವ ಯಶಸ್ಸಿನ ಉತ್ತುಂಗದ ಕಾರಣದಿಂದ ಎಂದು ಮಾತ್ರ ನಾವು ಖಂಡಿತವಾಗಿ ಹೇಳಬಹುದು.
ನೂತನ ದೋಶೆಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.