ಮಹಿಳಾ ಅಂಗಳ/ ಮನೆಕೆಲಸ ಗೌರವಾನ್ವಿತವಾಗಲಿ – ನೂತನ ದೋಶೆಟ್ಟಿ
ಸಮಾಜದ ಅತ್ಯಂತ ಚಿಕ್ಕ ಘಟಕ ಒಂದು ಮನೆ. ಈ ಚಿಕ್ಕ ಘಟಕದ ಕೊಟ್ಟ ಕೊನೆಯ ಭಾಗವಾಗಿರುವವಳು ಮನೆಕೆಲಸದವಳು. ಅವಳನ್ನು ಹೀನಾಯವಾಗಿ ನಡೆಸಿಕೊಳ್ಳುವುದೆಂದರೆ ಅನಾಗರಿಕ ವರ್ತನೆಯೇ ಸರಿ. ಈ ವ್ಯವಸ್ಥೆಯ ಬಹುದೊಡ್ಡ ಭಾಗವಾಗಿರುವ ‘ಮನೆಕೆಲಸದ’ ಮಹಿಳೆಯರು ಕಿಂಚಿತ್ತು ಗೌರವವನ್ನು ಕಾಣುವಂತಾದರೆ, ಆತ್ಮಗೌರವದಿಂದ ಬದುಕಲು ಸಾಧ್ಯವಾದರೆ ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ, ಆಧುನಿಕ ಮಹಿಳೆ ಮೊದಲಾದ ಪದಗಳಿಗೂ ಅರ್ಥಬಂದೀತು.
ನನ್ನ ಬಂಗಾರದ ಬಳೆ ಕಳೆದು ಹೋಗಿದ್ದು ನನಗೆ ತಿಳಿದದ್ದೇ 5 – 6 ದಿನಗಳ ನಂತರ. ಅದೊಂದು ಶನಿವಾರ ಅದನ್ನು ತೆಗೆದು ಬಚ್ಚಲಕಟ್ಟೆಯ ಮೇಲೆ ಇಟ್ಟ ನೆನಪು. ಆ ಮೇಲೆ ಅದರ ನೆನಪಾದದ್ದೇ ಮುಂದಿನ ಗುರುವಾರ ಬೆಳಿಗ್ಗೆ. ಬಳೆ ಹಾಕಿಕೊಳ್ಳಲು ಕರಡಿಗೆ ತೆಗೆದಾಗ ಅದರಲ್ಲಿ ಇರದದ್ದನ್ನು ಕಂಡು ಗಾಬರಿಯಾಯಿತು. ಹಾಗೆಂದು ಅಧೀರಳಾಗದೆ ನಿಧಾನವಾಗಿ ಕಳೆದ ವಾರದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದೆ. ಆ ನೆನಪು ಕಳೆದ ಶನಿವಾರಕ್ಕೆ ಬಂದು ನಿಂತಿತು.ಆದರೂ ಮನೆಯ ಇಂಚಿಂಚನ್ನೂ ಬಿಡದಂತೆ ಹುಡುಕಿದೆ. ಇನ್ನು ಅದು ಇರಬಹುದಾದ ಯಾವ ಜಾಗವೂ ಉಳಿದಿರಲಿಲ್ಲ ಹಾಗೂ ಅದನ್ನು ತೆಗೆದುಕೊಂಡವಳು ನಮ್ಮ ಮನೆಯ ಕೆಲಸದವಳೇ ಎಂಬುದೂ ಖಾತ್ರಿಯಾಯಿತು. ಅವಳನ್ನು ಕೇಳುವುದು ಹೇಗೆ? ಅನೇಕ ವರ್ಷಗಳಿಂದ ನಿಯತ್ತಾಗಿ ಕೆಲಸ ಮಾಡುತ್ತಿರುವ ಅವಳನ್ನು ತಪ್ಪಿತಸ್ಥಳನ್ನಾಗಿ ನೋಡುವುದು ನನ್ನಿಂದ ಆಗಲಿಲ್ಲ. ಈಗ ನಾನು ಸಂದಿಗ್ಧದಲ್ಲಿದ್ದೆ. ಕೇಳದೇ ಇದ್ದರೆ ಬೆಲೆಬಾಳುವ ವಸ್ತುವನ್ನು ಕಳೆದುಕೊಳ್ಳುತ್ತಿದ್ದೆ ಹಾಗೂ ಮುಂದಿನ ಅಪರಾಧಗಳಿಗೆ ಎಡೆ ಮಾಡಿಕೊಡುತ್ತಿದ್ದೆ. ಕೇಳಿದರೆ ಅವಳು ಕೋಪ ಮಾಡಿಕೊಳ್ಳಬಹುದು, ರಂಪ ಮಾಡಬಹುದು , ಇಬ್ಬರ ನಡುವೆ ಇದ್ದ ಇಷ್ಟು ವರ್ಷಗಳ ವಿಶ್ವಾಸ ಅರೆ ಕ್ಷಣದಲ್ಲಿ ಇಲ್ಲವಾಗಿಬಿಡಬಹುದು. ನನ್ನೆದುರು ಇದ್ದ ಈ ಎರಡು ಆಯ್ಕೆಗಳು ಸುಲಭದವಾಗಿರಲಿಲ್ಲ. ಆದ್ದರಿಂದ ಗೊಂದಲದಲ್ಲಿ ಒಂದಿಡೀ ಮಧ್ಯಾನ್ಹ ಕಳೆದೆ.
ಸಂಜೆ ಅವಳು ಬರುವ ಮುನ್ನ ಮನೆಯವರೊಂದಿಗೆ ಒಂದು ಸುತ್ತಿನ ರಿಹರ್ಸಲ್ ಕೂಡ ಮಾಡಿಕೊಂಡೆ. ಅವಳು ಎಂದಿನಂತೆ ನಗುತ್ತ ಬಂದಳು. ಎಲ್ಲ ಕೆಲಸಗಳನ್ನೂ ಮಾಡಿ ಹೊರಟು ನಿಂತಾಗ ಅವಳನ್ನು ಮಾತಿಗೆ ಎಳೆದೆ. ಮೊದಲು ಅವಳ ಮೊಮ್ಮಗುವಿಗೆ ನಾನು ತಂದಿದ್ದ ಬೆಳ್ಳಿಯ ಕಾಲ್ಬಳೆಯನ್ನು ತೋರಿಸಿದೆ. ಅವಳು ಬಹಳ ಖುಷಿಪಟ್ಟಳು. ಮಗಳನ್ನು ಮೊಮ್ಮಗುವಿನೊಂದಿಗೆ ಕರೆದುಕೊಂಡು ಬರುತ್ತೇನೆ ಆಗ ಕೊಡು ಎಂದು ಹೇಳಿ ಸಂಭ್ರಮಿಸಿದಳು.
ಮರುಕ್ಷಣ ನನ್ನ ಕಳೆದ ಬಳೆಯ ವಿಚಾರ ಪ್ರಸ್ತಾಪಿಸಿದೆ. ಮೊದಲು ಅದರ ಬಗ್ಗೆ ತನಗೇನೂ ಗೊತ್ತಿಲ್ಲ; ಎಲ್ಲಿ ಇಟ್ಟಿದ್ದಿ? ಎಂದು ಮುಗ್ಧಳಾಗಿ ಕೇಳಿದಳು.‘ನನ್ನ ಮನೆಯಲ್ಲಿ ಅದು ಇಲ್ಲ ಎಂದರೆ ನಿನ್ನ ಮನೆಯಲ್ಲಿ ಇರಬೇಕು. ಇದರ ಬೆಲೆ ಹೆಚ್ಚಾದ್ದರಿಂದ ನಾನು ಕೇಳುತ್ತಿದ್ದೇನೆ. ನಿನ್ನನ್ನು ಪೋಲೀಸರ ಬಳಿ ಕರೆದುಕೊಂಡು ಹೋಗುವುದು ನನಗೆ ಇಷ್ಟವಿಲ್ಲ. ನಾನೀಗ ನಿನ್ನ ಜೊತೆ ನಿಮ್ಮ ಮನೆಗೆ ಬರುತ್ತೇನೆ. ಅದನ್ನುಕೊಡು’ ಎಂದು ಒಂದೊಂದೇ ಶಬ್ದಗಳನ್ನು ತೂಗಿ ಹೇಳಿ ಮುಗಿಸಿದೆ. ಅವಳು ಮಾತೇ ಇಲ್ಲದವಳಾದಳು. ಮುಂದಿನ ಹತ್ತು ನಿಮಿಷಗಳಲ್ಲಿ ವಾರದ ಹಿಂದೆ ಕಳೆದ ಬಳೆ ನನ್ನ ಕೈಯಲ್ಲಿತ್ತು. ಅವಳಿಂದ ಅದನ್ನು ತೆಗೆದುಕೊಳ್ಳುವಾಗ ನಾಳೆ ಕೆಲಸಕ್ಕೆ ಬಾ ಎಂದು ಮರೆಯದೇ ಹೇಳಿ ಬಂದೆ. ಇದೆಲ್ಲ ನಡೆದು ಈಗ ವರ್ಷಗಳೇ ಕಳೆದಿವೆ. ಆಕೆ ಮೊದಲಿನಂತೆ ಕೆಲಸಕ್ಕೆ ಬರುತ್ತಿದ್ದಾಳೆ.
ಈ ಘಟನೆಯನ್ನು ನನ್ನ ಸ್ನೇಹಿತರ ಬಳಿ ಹಂಚಿಕೊಂಡಾಗ ಕೆಲವರು ಅವಳನ್ನೇ ಮತ್ತೆ ಕೆಲಸಕ್ಕೆ ಇಟ್ಟುಕೊಂಡಿದ್ದೀಯಾ ಹುಷಾರು ಎಂದು ಎಚ್ಚರಿಸಿದರು. ಆದರೆ ಎಲ್ಲರೂ ಆ ಬಳೆ ಮನೆಗೆ ವಾಪಸ್ ಹೇಗೆ ಬಂತು ಎಂದು ಸೋಜಿಗಪಟ್ಟವರೆ.ಈ ಘಟನೆ ನನ್ನನ್ನು ಬಹುವಾಗಿ ಕಾಡಿದೆ ಹಾಗೂ ಸಂದಿಗ್ಧದಲ್ಲಿ ಸಿಲುಕಿಸಿದೆ.
ಬಹುತೇಕವಾಗಿ ಮನೆಯಲ್ಲಿ ಏನೇ ಕಳೆದರೂ ಮೊದಲ ಆರೋಪಿ ಮನೆಯ ಕೆಲಸದವರೇ. ಬಡತನ ಅವರಿಂದ ಕಳ್ಳತನ ಮಾಡಿಸಿಬಿಡುತ್ತದೆ ಎಂಬುದು ಸಹಜವಾದ ಒಂದು ನಂಬಿಕೆ. ಇದು ಕೆಲವರ ಮಟ್ಟಿಗೆ ನಿಜವೂ ಇರಬಹುದು. ಕೆಲಸದ ಮನೆಗಳ ಮೂಲೆ ಮೂಲೆಯನ್ನು ಹೊಕ್ಕು ಬಲ್ಲ ಅವರು ಅಕಸ್ಮಾತ್ತಾಗಿ ಕಣ್ಣಿಗೆ ಬೀಳುವ ತಮಗೆ ಬೇಕಾದ, ಲಾಭದಾಯಕವಾದ, ತಮ್ಮ ಮಕ್ಕಳಿಗೆ ಬೇಕಾಗುವ ವಸ್ತುಗಳನ್ನೋ, ಚಿಲ್ಲರೆ ಹಣವನ್ನೋ, ಜೇಬಿನಿಂದ ನೋಟನ್ನೋ ತೆಗೆಯುವುದು ತೀರ ಅಪರೂಪವೇನಲ್ಲ. ಸಣ್ಣ ಪುಟ್ಟ ವಸ್ತುಗಳು, ಚಿಲ್ಲರೆ ಹಣ ಕಳೆದರೆ ಗಮನಕ್ಕೆ ಬರದೆಯೂ ಹೋಗಬಹುದು. ಒಂದೊಮ್ಮೆ ಗಮನಕ್ಕೆ ಬಂದರೂ ಮನೆಕೆಲಸದ ಹೊರೆ ಎಲ್ಲಿ ತಮ್ಮ ಮೈಮೇಲೆ ಬೀಳುತ್ತದೋ; ಹೇಗೋ ಮಾಡಿಕೊಂಡು ಹೋಗಲಿ. ಇನ್ನು ಮೇಲೆ ಹುಷಾರಾಗಿರಬೇಕು ಎಂಬ ವ್ಯಾವಹಾರಿಕತೆ ಅದನ್ನು ಕಡೆಗಣಿಸುವಂತೆ ಮಾಡಬಹುದು. ಆದರೆ ಬೆಲೆಬಾಳುವ ವಸ್ತುಗಳು, ಹಣ ಕಣ್ಮರೆಯಾದರೆ ಮಾತ್ರ ಮನೆಕೆಲಸದವರೇ ‘ಟಾರ್ಗೆಟ್’.
ಇತ್ತೀಚೆಗೆ ಅಂಗನವಾಡಿ ನೌಕರರು ಸತ್ಯಾಗ್ರಹ ಮಾಡಿ ಸಧ್ಯದ ಯಶಸ್ಸನ್ನು ಕಂಡಿದ್ದಾರೆ. ಇವರಂತೆ ಮನೆಗಲಸದವರೂ ಅಸಂಘಟಿತ ಕಾರ್ಮಿಕರೇ. ಬಹುಶಃ ಈ ದೇಶದಲ್ಲಿಅತಿ ಹೆಚ್ಚುಕೆಲಸ ಮಾಡುವ, ತಾವು ಮಾಡುವ ಕೆಲಸಕ್ಕೆ ಸರಿಯಾದ ಸಂಬಳ ಪಡೆಯದ, ಬೇರೆಯವರಿಗೆ ನೆರವಾಗುವ ಕೆಲಸಗಳನ್ನು ಮಾಡಿಯೂ ಕಿಂಚಿತ್ತು ಗೌರವಕ್ಕೂ ಪಾತ್ರರಾಗದ, ಆದರೂ ತಮ್ಮತಮ್ಮ ಮನೆಗಳನ್ನು ಪೋಷಿಸುವ, ಮಕ್ಕಳನ್ನು ಪಾಲಿಸುವ ಅತಿ ದೊಡ್ಡ ಕಾರ್ಮಿಕ ವರ್ಗ ಈ ಮನೆಕೆಲಸದವರು. ಇವರೆಲ್ಲ ಮಹಿಳೆಯರು ಎಂಬುದನ್ನುವಿಶೇಷವಾಗಿ ಗಮನಿಸಬೇಕು. ಇಂದು ಹಳ್ಳಿ, ಪಟ್ಟಣಗಳೆನ್ನದೇ ಅವರು ವ್ಯಾಪಿಸಿದ್ದಾರೆ. ಶಹರಗಳಲ್ಲಂತೂ ಅವರಿಲ್ಲದ ಜೀವನ ಸ್ತಬ್ದವಾಗಿ ಬಿಡುತ್ತದೆ. ಹಾಗಿದ್ದೂ ಅವರ ಬಗ್ಗೆ ತಿರಸ್ಕಾರ ಮಾತ್ರ ಎಲ್ಲಕಡೆ ಸಾಮಾನ್ಯ.
ಈ ಮನೆಗೆಲಸದವರು ಬೇಕಾಗುವುದೇ ಬಹುತೇಕವಾಗಿ ಶಿಕ್ಷಿತ ಮಧ್ಯಮ ಹಾಗೂ ಮೇಲ್ಪಟ್ಟದ ವರ್ಗಕ್ಕೆ. ಇವರ ಅಗತ್ಯಕ್ಕೆ, ಗೌರವಕ್ಕೆ ಮನೆಕೆಲಸದ ಹೆಂಗಸರು ಬೇಕೇ ಬೇಕು. ತಾವು ಐದಂಕಿಯ ಸಂಬಳವನ್ನು ತೆಗೆದುಕೊಂಡರೂ ಮನೆಕೆಲಸದವರಿಗೆ ಕೊಡುವುದು ಮಾತ್ರ 500 ರೂಪಾಯಿ! ಇಂದಿಗೂ ಅನೇಕ ಮಹಿಳೆಯರು ತಿಂಗಳು ಪೂರ್ತಿ ಮಾಡುವ ಕೆಲಸಕ್ಕೆ ಪಡೆಯುವ ಸಂಬಳ ಕೇವಲ 500 ಎಂದರೆ ಸಂಕಟವಾಗುತ್ತದೆ. ತಮ್ಮ ಮನೆಯ ಕಸ ಮುಸುರೆಯನ್ನು ಮಾಡಲು ತಮ್ಮ ಮೈ ಬಗ್ಗದಿದ್ದರೂ ಕೆಲಸದವರೊಂದಿಗೆ ಚೌಕಾಷಿಯನ್ನು ಮಾತ್ರ ಬಿಡುವುದಿಲ್ಲ. ಇದರರ್ಥ ಕೆಲಸದವರು ಕೇಳಿದಷ್ಟನ್ನು ಕೊಡಬೇಕೆಂದಲ್ಲ. ಆದರೆ ಅವರಿಗೆ ಗೌರವಯುತವಾಗಿ ಅವರ ಕೆಲಸಕ್ಕೆ ಸಲ್ಲಬೇಕಾದಷ್ಟಾದರೂ ಕೊಡುವ ಮನಸ್ಸು ಬೇಡವೇ?
ಮನೆಯ ಎಲ್ಲ ಕೆಲಸಗಳನ್ನು ಮಾಡಿಯೂ ಆ ಮನೆಯ ಕೆಲಸದಾಕೆ ಅವರ ಮನೆಯಲ್ಲಿ ತಿಂಡಿಯನ್ನು ನಿಂತೇ ತಿನ್ನಬೇಕು. ಇಲ್ಲವೇ ಮನೆಯ ಗಂಡಸರು ಹೆಚ್ಚು ಓಡಾಡದ ಮೂಲೆಯಲ್ಲಿ ಮುದುಡಿ ಕುಳಿತು ತಿನ್ನಬೇಕು. ಮನೆಯ ಎಲ್ಲ ಪಾತ್ರೆ ಪಗಡಗಳನ್ನು ತೊಳೆದರೂ ಆಕೆಗೆ ಕುಡಿಯಲು ಕೊಡುವ ಲೋಟ, ಆಕೆಯ ತಟ್ಟೆ ಬೇರೆಯೇ ಆಗಿ ಮನೆಯ ಮೂಲೆಯಲ್ಲಿ ಕುಳಿತುಕೊಳ್ಳುತ್ತದೆ. ಇನ್ನು ಆಕೆಗೆ ಕೊಡುವಾಗಲೂ ಕೈತುಂಬಿ, ಮನ ತುಂಬಿ ಕೊಡುವವರು ತೀರ ವಿರಳ. ಅವರನ್ನು ಮುಟ್ಟಿಸಿಕೊಂಡರೆ ಮೈಲಿಗೆಯಾಗುತ್ತದೆ ಎಂಬಂಥ ವರ್ತನೆ ಇನ್ನೂ ಅನೇಕ ಮನೆಗಳಲ್ಲಿದೆ. ಮನೆಯ ಎಲ್ಲ ಜಾಗಗಳನ್ನು ಅವರು ಗುಡಿಸಿದರೂ ದೇವರ ಕೋಣೆಯ ಎದುರು ಅವರು ಹಾಯಬಾರದು ಎಂಬ ಕಟ್ಟಪ್ಪಣೆ ತೀರ ಸಾಮಾನ್ಯ. ತಿಂಗಳ ಮೂರು ದಿನಗಳ ನೋವಿನಲ್ಲೂಅವರು ಕೆಲಸ ತಪ್ಪಿಸುವಂತಿಲ್ಲ. ಸ್ವಚ್ಛವಾಗಿಯೇ ಬರಬೇಕು ಎಂಬ ಆಗ್ರಹ. ಆದರೆ ಅವರು ಎಲ್ಲಿ, ಹೇಗೆ ವಾಸಿಸುತ್ತಿದ್ದಾರೆ? ನೀರಿನ ಸೌಕರ್ಯವಿದೆಯೇ ಎಂಬ ಸಾಮಾನ್ಯ ಕಾಳಜಿಯೂ ಮಾಲಿಕರಾದ ಹೆಂಗಸರಿಗೆ ಇರುವುದಿಲ್ಲ. ಹಾಗೆಂದು ಅವರು ತಮ್ಮ ಮನೆಯ ಬಾತ್‍ರೂಂ, ಟಾಯ್ಲೆಟ್‍ಗಳನ್ನು ಬಳಸಲು ಅನುಮತಿಯನ್ನು ನೀಡುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ ಮನೆಕೆಲಸದ ಈ ಮಹಿಳೆಯರು ತಮ್ಮ ಬಡತನ, ತಮ್ಮಜಾತಿ ಇತ್ಯಾದಿಗಳ ಬಗ್ಗೆ ಬಹಳ ನೊಂದುಕೊಳ್ಳುತ್ತಾರೆ. ಆದರೆ ಈ ಸೂಕ್ಷ್ಮ ವಿಷಯಗಳ ಕಡೆ ಮಾಲಿಕ ಹೆಂಗಸರ ದಿವ್ಯ ನಿರ್ಲಕ್ಷ.
ಇಂದು ನಾವು ಸಾಂಘಿಕ ಹೋರಾಟಗಳ ಬಗ್ಗೆ ಸಾಕಷ್ಟು ಮಾತಾಡುತ್ತೇವೆ. ಅದರಲ್ಲೂ ಮಹಿಳೆಯರೇ ಕೆಲಸ ಮಾಡುವ ಕಾರ್ಮಿಕ ವಲಯಗಳು ಇಂದು ಸಾಕಷ್ಟಿವೆ. ಅಲ್ಲೆಲ್ಲ ಮಹಿಳೆ ಎದುರಿಸಬೇಕಾದ ಇಂತಹ ಸಂದಿಗ್ಧಗಳು ನೂರಾರು. ಈ ವಲಯಗಳಲ್ಲಿ ‘ಮನೆಕೆಲಸ’ ಬಹುದೊಡ್ಡ ಪಾಲು ಹೊಂದಿದೆ.ಇಲ್ಲಿನಕಾರ್ಮಿಕರಿಗೆ ಕನಿಷ್ಟ ಸಂಬಳ ನಿಗದಿಯಾಗಿದ್ದರೂ ವಾಸ್ತವದಲ್ಲಿ ಅದರ ಲಭ್ಯತೆ ಇಲ್ಲ ಒಂದೊಮ್ಮೆ ಅವರು ತಮ್ಮ ಹಕ್ಕುಗಳ, ಸೌಲಭ್ಯಗಳ ಬಗ್ಗೆ ಮಾತಾಡಿದರೆ ಅವರ ಕೆಲಸಕ್ಕೆ, ಸಂಬಳಕ್ಕೇ ಸಂಚಕಾರ. ಅದರಿಂದಲೇ ತಮ್ಮ ಮನೆಯ ಎಲ್ಲ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಈ ಮನೆಕೆಲಸದ ಮಹಿಳೆಯರು ಮೌನವಾಗಿಯೇ ಎಲ್ಲ ಶೋಷಣೆಯನ್ನು ಸಹಿಸಿಕೊಂಡು ಹೋಗುತ್ತಿದ್ದಾರೆ.
ತನ್ನ ಪುಟ್ಟ ಪುಟ್ಟಎರಡು ಮಕ್ಕಳು ನಸುಕಿನಲ್ಲಿ ನಿದ್ದೆಯಿಂದ ಕಣ್ಣು ಬಿಡುವ ಮೊದಲೇ ಒಂದೆರಡು ಮನೆಯ ಕೆಲಸಗಳನ್ನು ಪೂರೈಸಿ ಆ ಮನೆಗಳಲ್ಲಿ ಕೊಡುವ ತಿಂಡಿಯಿಂದಲೇ ತಮ್ಮ ಮಕ್ಕಳ ಹೊಟ್ಟೆ ಹೊರೆದು ತಾನು ಹಸಿವೆಯಿಂದ ಬಳಲುವ ಗಂಗಮ್ಮ, ಕುಡುಕ ಗಂಡನ ಉಪಟಳವನ್ನು ಸಹಿಸಿಕೊಂಡು ತನ್ನ ದುಡಿಮೆಯನ್ನೇ ಆತ ತಿಂದು, ಗಡಂಗಿಗಿ ಹಾಕುತ್ತಿದ್ದರೂ ತನ್ನ ಗಂಡ ಕೆಲಸಕ್ಕೆ ಹೋಗುತ್ತಾನೆ ಎಂದು ಹೇಳಿ ಕೆಲಸದ ಮನೆಗಳಲ್ಲಿ ತನ್ನ ಮಾನ ಕಾಪಾಡಿಕೊಳ್ಳುವ ಕಾವೇರಮ್ಮ. ಲಕ್ಷ್ಮಿ, ಗಂಡ ಇನ್ನೊಬ್ಬಳೊಂದಿಗೆ ಓಡಿ ಹೋದರೂ ಅವನ ಮಕ್ಕಳನ್ನು, ಅವನ ತಂದೆ ತಾಯಿಯರನ್ನು ಪೊರೆಯುವ ಕೆಂಚಮ್ಮ .. ಇವರಂತಹ ಸಹಸ್ರಾರು ಮನೆಕೆಲಸದ ಹೆಂಗಳೆಯರ ಬದುಕ ಬವಣೆ ಯಾವತರ್ಕಕ್ಕೂ ನಿಲುಕದ್ದು.ಎಲ್ಲ ಸಾಂತ್ವನಕ್ಕೂ ಮೀರಿದ್ದು.
ಈ ಹಿನ್ನೆಲೆಯಲ್ಲಿ ಕಳೆದು ಹೋಗಿದ್ದನನ್ನ ಬಂಗಾರದ ಬಳೆ ಮತ್ತೆ ಮಹತ್ವವನ್ನು ಪಡೆಯುತ್ತದೆ. ಮನೆ ಕೆಲಸದ ಲಕ್ಷ್ಮಿ ಅದನ್ನು ಕದ್ದಿರಲಿಲ್ಲ. ಅದನ್ನು ಮಾರಿ ತನ್ನ ಮುದ್ದಿನ ಮಗಳಿಗೆ, ಮೊಮ್ಮಗುವಿಗೆ ಏನನ್ನಾದರೂ ತೆಗೆದುಕೊಡುವ ಹಂಬಲವೂ ಇದ್ದಿರಲಾರದು. ಆಕೆಯ ಮೊಮ್ಮಗ ಸೀಳುತುಟಿಯವನಾಗಿ ಹುಟ್ಟಿದ್ದು ಅವನಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಬಹುಶಃ ಅದಕ್ಕಾಗಿಯೇ ಅವಳು ಇಂತಹ ಅನರ್ಥಕ್ಕೆ ಮುಂದಾಗಿದ್ದಳು ಎಂದೇ ನನಗೆ ಅನ್ನಿಸಿತು. ಅವಳಿಗೊಂದು ಅವಕಾಶವನ್ನು ಅದಕ್ಕಾಗಿಯಾದರೂ ನೀಡಬೇಕು ಎಂಬ ನನ್ನ ನಿರ್ಧಾರ ಅದನ್ನು ನಾನು ಕಾರ್ಯಗತಗೊಳಿಸಿದ ರೀತಿ ನನ್ನನ್ನು ಹಗುರಾಗಿಸಿದ್ದಷ್ಟೇ ಅಲ್ಲ. ವ್ಯಕ್ತಿ ಗೌರವದ ಬಗೆಗೆ ನನ್ನ ನಿಲುವನ್ನು ನನಗೆ ಸ್ಪಷ್ಟ ಪಡಿಸಿತು. ನನ್ನ ಮನೆಯ, ಸ್ನೇಹಿತರ ಕಣ್ಣಲ್ಲಿ ನನ್ನಗೌರವ ಹೆಚ್ಚಿತು. ಅದು ನನಗೆ ಸಾಂಘಿಕ ಹೋರಾಟದ ಮೂಲ ಇರುವುದು ಹಾಗೂ ಫಲ ಕಾಣುವುದು ವೈಯುಕ್ತಿಕ ನೆಲೆಯಲ್ಲಿ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿತು.
ಮನೆಕೆಲಸದವರ ಗೌರವದ ಮಾತನ್ನು ಒಮ್ಮೆ ಪರಿಶೀಲಿಸೋಣ. ಒಂದು ಮನೆಯ 3-4 ಮಹಿಳೆಯರು ಅಂದರೆ ತಾಯಿ, ಆಕೆಯ ಹೆಣ್ಣು ಮಕ್ಕಳು ಸೇರಿ ಶಹರಗಳಲ್ಲಿ ಒಂದು ತಿಂಗಳಿಗೆ ಕನಿಷ್ಟ 20 ರಿಂದ 25 ಸಾವಿರದಷ್ಟು. ಕೆಲವೊಮ್ಮೆ ಇನ್ನೂ ಹೆಚ್ಚು ಗಳಿಸುತ್ತಾರೆ.ಈ ಮೊತ್ತ ಯಾವುದೇ ಸಣ್ಣ ಅಥವಾ ಮಧ್ಯಮ ಗಾತ್ರದ ಕಂಪನಿಯ ನೌಕರಳಿಗೆ ಸಿಗಬಹುದಾದ ತಿಂಗಳ ಸಂಬಳದಷ್ಟೇ ಆಗಿರುತ್ತದೆ. ಇಷ್ಟು ಸಂಬಳ ಪಡೆಯುವ ಮನೆಗೆಲಸದ ಒಂದು ಕುಟುಂಬ ಬೆಂಗಳೂರು ಶಹರದಲ್ಲಿ ಸಿಂಗಲ್ ಬೆಡ್‍ರೂಂ ಮನೆಯಲ್ಲಿ 4 – 5 ಸಾವಿರ ಬಾಡಿಗೆ ಕೊಟ್ಟು, ನೀರು, ಕರೆಂಟ್ ಬಿಲ್ಲುಗಳನ್ನು ಹೆಚ್ಚುವರಿಯಾಗಿ ನೀಡಿ ಚೆನ್ನಾಗಿ ಸಂಸಾರ ನಡೆಸುತ್ತದೆ. ಮಾತ್ರವಲ್ಲದೆ ಆ ಕುಟುಂಬದ ಹಿರಿಯ ಹೆಂಗಸು ತನ್ನ ಹೆಣ್ಣು ಮಕ್ಕಳಿಗೆ ಒಡವೆ, ವಸ್ತು ನೀಡಿ ತಕ್ಕ ಮಟ್ಟಿಗೆ ಚೆನ್ನಾಗಿಯೇ ಮದುವೆ ಮಾಡಿ ಕೊಡುತ್ತಾಳೆ. ಅವಳ ಖರ್ಚು ವೆಚ್ಚಗಳು, ಆದಾಯ, ಊಟ ಆಹಾರಗಳೆಲ್ಲ ಅವಳಷ್ಟೇ ಗಳಿಸುವ ಇತರ ನೌಕರಸ್ಥರಂತೇ ಇದ್ದರೂ ಅವಳಿಗಾಗಲೀ, ಅವಳ ಕುಟುಂಬಕ್ಕಾಗಲೀ ಅವಳ ಸುತ್ತಮುತ್ತಲ ಜನರಿಂದ ಸಿಗುವ ಗೌರವ ಮಾತ್ರ ಶೂನ್ಯ. ಕಛೇರಿಗಳಲ್ಲಿ ಮಾಡುವ ಕೆಲಸ ಮಾತ್ರ ‘ದುಡಿಮೆ’ ಎಂದು ಕರೆಸಿಕೊಳ್ಳುತ್ತದೆ. ಈ ವರ್ಗಕ್ಕೆ ‘ಮನೆಕೆಲಸ’ ಬಹುಶಃ ಎಂದೂ ಸೇರಲಾರದು.
ಈ ಬವಣೆ ಇಲ್ಲಿಗೇ ನಿಲ್ಲುವುದಿಲ್ಲ. ಕೆಲ ಮನೆಕೆಲಸದ ಹೆಂಗಸರು ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಕೈಯಲ್ಲಿ ಒಂದು ವ್ಯಾನಿಟಿ ಪರ್ಸ್ ಹಿಡಿದು ಬರುತ್ತಾರೆ.ಅವರು ಹಾಗೆ ಬಂದರೆ ಮನೆಯೊಡತಿಗೇ ಇರುಸು ಮುರುಸಾಗುತ್ತದೆ. ಆ ಮನೆಕೆಲಸದವಳು ‘ಧಿಮಾಕಿನವಳಾಗಿ’ ಅವಳಿಗೆ ಕಾಣುತ್ತಾಳೆ. ಅವಳಿಗೆ ‘ನೀನು ಕೆಲಸದವಳು’ ಎಂಬುದನ್ನು ಬಾರಿ ಬಾರಿಯಾಗಿ ಸಾಬೀತು ಪಡಿಸಲು ಅವಳು ಹರಸಾಹಸ ಪಡುತ್ತಾಳೆ. ಮನೆಯೊಡತಿಯನ್ನು ಅಪ್ಪಿ ತಪ್ಪಿಯೂ ಆಂಟಿ ಎಂದು ಕರೆಯುವಂತಿಲ್ಲ. ಇಂತಹ ನೂರಾರು ಕಿರಿಕಿರಿಗಳ ನಡುವೆಯೂ ಆಕೆ ಆ ಮನೆಯ ಮುಸುರೆ ತೊಳೆಯುತ್ತಾಳೆ.ಎಂಜಲು ಎತ್ತುತ್ತಾಳೆ. ದಿನ ನಿತ್ಯದ ಆಗತ್ಯಗಳಿಗೆ ತನ್ನ ಆತ್ಮಗೌರವವನ್ನು ಪಣಕ್ಕಿಡುತ್ತಾಳೆ.
ನಾವೀಗ ಡಿಜಿಟಲ್‍ಯುಗದಲ್ಲಿದ್ದೇವೆ. ಕ್ಯಾಷ್‍ಲೆಸ್ ವ್ಯವಸ್ಥೆಯ ಭಾಗವಾಗಿದ್ದೇವೆ. ನಾಗರಿಕತೆಯ ಎಲ್ಲ ಔನ್ನತ್ಯಗಳನ್ನೂ ಮೈಗೂಡಿಸಿಕೊಂಡು ಅನಾಗರಿಕರಂತೆ ವರ್ತಿಸುತ್ತಿದ್ದೇವೆ.
*************
ನೂತನದೋಶೆಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.