Uncategorizedಅಂಕಣ

ಮಹಿಳಾ ಅಂಗಳ/ ಜೊತೆಯಾಗಿ ಹೋರಾಡೋಣ – ನೂತನ ದೋಶೆಟ್ಟಿ

ಗಾಂಧೀಜಿ ಹೇಳಿದ್ದರು, ಮಧ್ಯರಾತ್ರಿ ಒಂಟಿ ಹೆಣ್ಣು ಧೈರ್ಯವಾಗಿ ಓಡಾಡುವಂತಾದರೆ ಆಗ ನಮಗೆ ಸ್ವಾತಂತ್ರ್ಯ ಬಂದಂತೆ ಎಂದು. ಇದು ಗಾಂಧೀಜಿಯವರ ದೂರದರ್ಶಿತ್ವ. ಅವರಿಗೆ ಈ ದೇಶ ಮುನ್ನಡೆಯುವ ದಾರಿಯ ಸ್ವರೂಪದ ಸೂಚನೆ ಇತ್ತೇ ಹಾಗಾದರೆ? ಹೌದು ಎಂದು ಅನ್ನಿಸುತ್ತಿದೆ, ಇತ್ತೀಚಿನ ವಿದ್ಯಮಾನಗಳನ್ನು ಕಂಡ ಮೇಲೆ. ಉತ್ತರ ಪ್ರದೇಶದ ಆ ಒಂಟಿ ಹೆಣ್ಣಿನ ಮೇಲೆ ನಡೆದ ಪೈಶಾಚಿಕ ಕೃತ್ಯ ಮಹಿಳೆಯರಿನ್ನೂ ಸ್ವತಂತ್ರರಲ್ಲ , ಆಗಬೇಕಾದರೆ, ಆ ಹಾದಿ ಬಹಳ ದೂರವಿದೆ ಮತ್ತು ಕಠಿಣವಿದೆ ಎಂದು ಸಿದ್ಧ ಮಾಡಿದೆ.

ಬದುಕುವ ಹಕ್ಕನ್ನೇ ನೀಡದ ಈ ನಾಡು ನಮ್ಮದು ಎಂದು ಹೇಳಿಕೊಳ್ಳಲು ನಾಲಿಗೆ ತೊದಲುತ್ತಿದೆ.
ಕಳೆದ ಮಂಗಳವಾರ ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್ ಎಂಬ ಸಂಸ್ಥೆ ವಿಶ್ವದ ಸುಮಾರು 548 ಮಹಿಳಾ ಅದ್ಯಯನಗಳಲ್ಲಿ ನುರಿತ  ಮಳೆಯರನ್ನು, ಅವರಲ್ಲಿ 49 ಮಹಿಳೆಯರು ಭಾರತದವರು ಎಂಬುದು ಮುಖ್ಯ, ಸಂದರ್ಶಿಸಿ ವರದಿಯೊಂದನ್ನು ಪ್ರಕಟಿಸಿದೆ. ಅದರ ಪ್ರಕಾರ ಮಹಿಳೆಯರಿಗೆ ಬದುಕಲು ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ!!! ನಂತರದ ಸ್ಥಾನದಲ್ಲಿ ಯುದ್ಧಗಳಿಂದ ಜರ್ಝರಿತವಾಗಿರುವ  ಅಫ್ಘಾನಿಸ್ತಾನ ಹಾಗೂ  ಸಿರಿಯಾಗಳಿವೆ !! ಅದರ ನಂತರದ ಸ್ಥಾನ ಕಡುಬಡತನದಿಂದ ಬೇಯುತ್ತಿರುವ ಸದಾ ಬರದ ಉರುಳಲ್ಲೇ ಇರುವ ಸೊಮಾಲಿಯಾಕ್ಕೆ. ಈ  ಸಮೀಕ್ಷೆಗೆ ಒಳಪಟ್ಟ ಮಹಿಳೆಯರಿಗೆ ಆರೋಗ್ಯ, ಆರ್ಥಿಕ ಸಂಪನ್ಮೂಲ ಲಭ್ಯತೆಯಲ್ಲಿ ತಾರತಮ್ಯತೆ  ಲೈಂಗಿಕ ಶೋಷಣೆ, ಲೈಂಗಿಕವಲ್ಲದ  ಶೋಷಣೆ, ಅಕ್ರಮ ಮಾನವ ಸಾಗಾಟ ಇವುಗಳ ಕುರಿತಂತೆ ಪ್ರಶ್ನೆ ಕೇಳಲಾಗಿತ್ತು. ಭಾರತ ಒಟ್ಟಾರೆ ಪ್ರಥಮ ಸ್ಥಾನ ಪಡೆದದ್ದಲ್ಲದೆ  ಮಾನವ ಸಾಗಾಣಿಕೆ, ಲೈಂಗಿಕ ಶೋಷಣೆ ಹಾಗೂ ಸಂಪ್ರದಾಯಗಳ ಆಚರಣೆಯ ವಿಷಯಗಳಲ್ಲಿ ಹೀನಾಯವಾಗಿ ಗುರುತಿಸಲ್ಪಟ್ಟಿದೆ. ಇದೇ ಸಂಸ್ಥೆ 2011ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.


 ಇದು ಒಂದು ಸಣ್ಣ ಸುದ್ದಿಯಾಗಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದರಿಂದ ಯಾರ ಗಮನಕ್ಕೂ ಬಾರದಿರಬಹುದು. ಅಥವಾ ಮಹಿಳೆಯ ಬಗೆಗಿನ ಸುದ್ದಿಯಾದ್ದರಿಂದ ಅದಕ್ಕೆ ಮಹತ್ವವೇ ಸಿಗದಿರಬಹುದು. ಹಾಗೆ ನೋಡಿದರೆ ಇಂಥ ವರದಿಗಳ ಸತ್ಯಾಸತ್ಯತೆಯೂ ಸಂಶಯಾಸ್ಪದವೇ. ಇವು ಕಡಿಮೆ ಜನರ ಅಭಿಪ್ರಾಯಗಳನ್ನು ಇಡಿಯಾ ಉಪಖಂಡಕ್ಕೆ ಹಿಗ್ಗಿಸಿರುವುದು ಹಾಗೂ ಆ ರೀತಿ ಹಿಗ್ಗಿಸುವ ಹಿಂದಿನ ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ಇವೆರಡನ್ನೂ ಅಲ್ಲಗಳೆಯುವಂತಿಲ್ಲ. ಆದರೂ ಕಳೆದ ಒಂದು ದಶಕದಿಂದ ಇಂಥ ಮಾತು ಭಾರತದ ಬಗ್ಗೆ ಕೇಳಿ ಬರುತ್ತಿದೆ. 2012ರ ದೆಹಲಿಯ ನಿರ್ಭಯಾ ಪ್ರಕರಣದಿಂದ ಹಿಡಿದು ಈಗ  ಉತ್ತರ ಖಂಡದಲ್ಲಿ ನಡೆದಿರುವ ಮನೀಷಾ ವಾಲ್ಮೀಕಿಯ ಮೇಲಿನ ಅತ್ಯಂತ ಹೀನಾಯ, ಅಮಾನುಷ ಅತ್ಯಾಚಾರ, ಕೊಲೆ, ಪ್ರಕರಣವನ್ನು ಮುಚ್ಚಿ ಹಾಕುವವರೆಗಿನ  ಒಂದು ದಶಕದ ಇತಿಹಾಸ ಭಾರತದಲ್ಲಿ ಬಲವಾಗಿ ನೆಲೆಯೂರಲು ಸಿದ್ಧವಾಗುತ್ತಿರುವ ಮಹಿಳಾ ವಿರೋಧಿ ನಿಲುವನ್ನು ದಾಖಲಿಸಿದೆ.

ಈ ದಶಕದಲ್ಲಿ ಮಹಿಳೆಯರ ರಕ್ಷಣೆಗೆ ವಿಶೇಷ ಕಾನೂನುಗಳನ್ನು ರಚಿಸಲಾಗಿದೆ. ತ್ವರಿತ ಗತಿಯ ನ್ಯಾಯ ತೀರ್ಪಿನ ಬಗ್ಗೆ ಒತ್ತು ಕೊಡಲಾಗಿದೆ. ಆದರೂ ಪ್ರಕರಣಗಳು ಹೆಚ್ಚುತ್ತಿವೆ. ಜೊತೆಗೆ ತೀರಾ ಅಮಾನವೀಯವಾಗಿ ನಡೆಯುತ್ತಿವೆ. ಇದಕ್ಕೆ ಮಹಿಳೆಯ ಮೇಲಿನ ಅಸಹನೆಯೇ ಮೂಲ ಕಾರಣವೇನೋ. ಆಕೆ ಎಲ್ಲ ರಂಗಗಳಲ್ಲೂ ಬಲಾಢ್ಯಳಾಗಿ ಹೊರಹೊಮ್ಮುತ್ತಿರುವುದನ್ನು ಸಹಿಸಲಾರದ ಪುರುಷ ಅಹಂಕಾರ ಹೀಗೆ ಮಾಡುತ್ತಿದೆಯೇ?
80ರ ದಶಕದಿಂದ ಕೇವಲ 3-4 ದಶಕಗಳ ಈ ಕಾಲದವರೆಗೆ ಮಹಿಳೆಯ ಪ್ರಗತಿ ಅಸಾಮಾನ್ಯ ಎತ್ತರ ಕಂಡಿದೆ. ಗ್ರಾಮೀಣ ಮಹಿಳೆಯರ ಉದ್ಯಮಶೀಲತೆ, ಚಿಕ್ಕ ವ್ಯಾಪಾರ-ಉದ್ದಿಮೆಗಳು, ಸ್ವಸಹಾಯ ಸಂಘಗಳ ಮೂಲಕ ರಾಷ್ಟ್ರೀಯ ಆದಾಯವನ್ನು ಏರಿಸುವಷ್ಟರ ಮಟ್ಟಿಗೆ ಬೆಳೆಯಿತು. ಪಟ್ಟಣ, ನಗರಗಳಲ್ಲಿ ಮಹಿಳೆಯರೂ ಉದ್ಯಮಗಳಲ್ಲಿ ಹೆಚ್ಚು ತೊಡಗಿಕೊಂಡರು. ಕಛೇರಿ ಉದ್ಯೋಗಗಳನ್ನು ನೆಚ್ಚಿಕೊಳ್ಳದೆ ಸ್ವತಂತ್ರ ಚಿಕ್ಕ, ದೊಡ್ಡ ಉದ್ದಿಮೆಗಳಲ್ಲಿ ತೊಡಗಿಕೊಂಡು ಸಫಲರಾದರು. ಸರ್ಕಾರಗಳು ಮಹಿಳಾ ಸಬಲೀಕರಣದ ಹೆಸರಿನಲ್ಲಿ ಅನೇಕಾನೇಕ ಯೋಜನೆಗಳನ್ನು ಮಾಡಿದವು. ಲಕ್ಷಾಂತರ ಮಹಿಳೆಯರು ಅವುಗಳ ಫಲಾನುಭವಿಗಳಾದರು. 20 ನೇ ಶತಮಾನದ ಕೊನೆಯ ಎರಡು ದಶಕಗಳ ಈ ಏರು ಗತಿಯ ಮಹಿಳಾ ಪ್ರಗತಿ 21ನೇ ಶತಮಾನದ ಆರಂಭದ ದಶಕದಲ್ಲೂ ಮುಂದುವರೆಯಿತು. 2012ರ ದೆಹಲಿ ಘಟನೆಯ ನಂತರ ಇದು ಹಿಮ್ಮುಖವಾಗುತ್ತಿದೆ. ಮನೀಷಾಳ ಸಾವು ಇದನ್ನು ಪುಷ್ಟೀಕರಿಸಿದೆ.


ಗಾಂಧಿ ಜಯಂತಿಯಂದು ಅವರು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಆಡಿದ್ದ ಇತಿಹಾಸ ಪ್ರಸಿದ್ಧ ಮಾತುಗಳನ್ನು ನೆನಪಿಸಿಕೊಂಡು ಮತ್ತೊಮ್ಮೆ ಬದಲಾವಣೆಯ ಕ್ರಾಂತಿ ಕಹಳೆ ದೇಶದಲ್ಲಿ ಮೊಳಗಬೇಕಿದೆ. 
ನಾನು ಮಹಿಳೆಯ ಅಸ್ಮಿತೆಯ ಪರ. ಒಳಿತಿನ ಪರ. ಮಾನವೀಯತೆಯ ಪರ.  ಇವನ್ನು ಕಡೆಗಣಿಸುವವರನ್ನು ನಾನು ಗಾಂಧೀಜಿಯವರ ಹೆಸರಿನಲ್ಲಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಹೆಸರಿನಲ್ಲಿ  ಇಂದು ಧಿಕ್ಕರಿಸುತ್ತೇನೆ. ನೀವೂ ಜೊತೆಗೂಡಿ. ನಮ್ಮ ಧ್ವನಿ ದೇಶದಾದ್ಯಂತ ಮೊಳಗಲಿ. 

ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *