Uncategorizedಅಂಕಣ

ಮಹಿಳಾ ಅಂಗಳ / ಕೊರೊನಾ ಕಲಿಸಲಿ ಸೂಕ್ಷ್ಮತೆಯ ಪಾಠ – ನೂತನ ದೋಶೆಟ್ಟಿ

ಕೊರೊನಾ ಸೃಷ್ಟಿಸಿರುವ ಆಪತ್ತಿನ ಈ ದಿನಗಳಲ್ಲಿ ಮಹಿಳೆಯರು ಮನೆಯ ಗಂಡಸರು, ಮಕ್ಕಳು ಮನೆಯಲ್ಲಿರುವುದರಿಂದ ಅವರಿಗೆ ಏನನ್ನು ಕಲಿಸಬೇಕು, ಕಲಿಸಬಹುದು ಎಂಬುದರಿಂದ ಹಿಡಿದು ಅವರಿಗೆ ಅಡುಗೆಯನ್ನು ಕಲಿಸಿ ತಮ್ಮ ನಾಳೆಗಳನ್ನು ಸುರಳೀತಗೊಳಿಸಿಕೊಳ್ಳುತ್ತಿದ್ದಾರೆ. ಮನೆಮಂದಿಗೆ ಏನೇನನ್ನೋ ಕಲಿಸಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ಮಹಿಳೆಯರು ಸಂವೇದನಾಶೀಲತೆಯನ್ನೂ, ಸೂಕ್ಷ್ಮತೆಯನ್ನೂ ಮಾನವೀಯ ನೆಲೆಯ ಚಿಂತನೆಯನ್ನೂ ತಮ್ಮ ತಮ್ಮ ಮನೆಗಳಲ್ಲಿ ಕಲಿಸಬಹುದಲ್ಲವೇ?

      ಈಗ ವಿಶ್ವವೇ ಉಸಿರಾಡುತ್ತಿರುವ ಗಾಳಿಯೆಂದರೆ ಕೊರೊನಾ ವೈರಾಣು ಸೃಷ್ಟಿಸಿರುವ ಆಪತ್ತಿನ ಹವೆ !ಇದು ಅಂತಿಂಥ ಆಪತ್ತಲ್ಲ. ಮಹಾಯುದ್ಧಗಳ ಭೀಭತ್ಸತೆಯಿಲ್ಲದೇ ಅದಕ್ಕಿಂತ ನೂರಾರು ಪಟ್ಟು ಹೆಚ್ಚು ಭಯವನ್ನು, ಅತಂತ್ರತೆಯನ್ನು, ಅಸಹಾಯಕತೆಯನ್ನು ಬಡವ-ಬಲ್ಲಿದರೆನ್ನದೇ ಎಲ್ಲರೆದೆಯಲ್ಲಿ ಬಿತ್ತಿ ಬಲಿಷ್ಟ ರಾಷ್ಟ್ರಗಳಾದಿಯಾಗಿ ಸರ್ಕಾರಗಳು ಇನ್ನಿಲ್ಲದಂತೆ ಸೊರಗಿ , ಆರ್ಥಿಕತೆ ನೆಲಕಚ್ಚಿ ದಿಙ್ಮೂಢರಾಗಿ ಕೈಚೆಲ್ಲಿ ನಿಂತಿರುವ ಈ ವ್ಯವಸ್ಥೆ ಆಧುನಿಕವೆ ಎಂಬ ಸಂಶಯದ ಸುಳಿಯಲ್ಲಿ ಗಿರಕಿ ಹೊಡೆಯುತ್ತಿದೆ. ದಿನ ರಾತ್ರಿಗಳ ಪರಿವೆಯಿಲ್ಲದ, ವಾರ ತಿಥಿಗಳ ಗೊಡವೆಯಿಲ್ಲದ ಸಮಾಜವೊಂದನ್ನು ಊಹೆ ಮಾಡಿಕೊಳ್ಳಲೂ ಸಾಧ್ಯವಾಗದ ಈ ಜಗತ್ತು ಸೂರ್ಯನ ನಡೆಯನ್ನಲ್ಲದೆ ಬೇರೇನನ್ನೂ ಅನುಸರಿಸಲು ಆಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೆ.

      ಸ್ಪೇನ್‍ನಲ್ಲಿ ವೆಂಟಿಲೇಟರುಗಳ ಕೊರತೆಯಿಂದಾಗಿ ಕೊರೊನಾ ಪೀಡಿತರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಯಾರು ಬದುಕುವ ಸಂಭವನೀಯತೆ ಹೆಚ್ಚಿದೆಯೋ ಅವರಿಗೆ ವೆಂಟಿಲೇಟರುಗಳನ್ನು ಕೊಟ್ಟು ಉಳಿದವರನ್ನು ಸಾವಿಗೆ ಶರಣಾಗುವಂತೆ ಮಾಡುತ್ತಿರುವುದು ಅಲ್ಲಿ ಅನಿವಾರ್ಯವಾಗಿದೆ.ಅಲ್ಲೊಬ ್ಬ60 ವರ್ಷ ಮೇಲ್ಪಟ್ಟ ಮಹಿಳೆ ತನ್ನ ವೆಂಟಿಲೇಟರನ್ನು ತನಗಿಂತ ಚಿಕ್ಕ ವಯಸ್ಸಿನವರಿಗೆ ಬಿಟ್ಟುಕೊಟ್ಟು ಸಾವಿನಲ್ಲೂ ಘನತೆಯನ್ನು ಮೆರೆದಿದ್ದಾಳೆ.ಇದು ಹೆಣ್ಣುಜೀವಕ್ಕೆ ಮಾತ್ರ ಸಾಧ್ಯ.

ಇದರ ಇನ್ನೊಂದು ಮುಖ ನಮ್ಮ ನೆರೆಹೊರೆಗಳಲ್ಲಿ ಕೊರೊನಾ ನಂತರದ ದಿನಗಳಲ್ಲಿ ಕಾಣಬರುತ್ತಿದೆ. ಇಲ್ಲಿ ಈಗ ಮನೆಯೊಡತಿಯರ ಕಾಲ !! ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಮನೆಯೊಳಗೆ ಬಂಧಿಯಾಗಿರುವ ಮಹಿಳೆಯರು ಏನು ಮಾಡುತ್ತಿದ್ದಾರೋ? ಆದರೆ ನಮ್ಮ ನೆರೆ ಹೊರೆಗಳಲ್ಲಿ ಮಾತ್ರ ಕೊರೊನಾ ವೈರಾಣುವನ್ನು ಹೊರಗೆ ತಿರುಗಾಡಲು ಬಿಟ್ಟು ತಾವು ಮನೆಯೊಳಗೆ ಇದುವರೆಗೆ ಸಾಧ್ಯವಾಗದಂಥ ಲೋಕವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಮನೆಯ ಗಂಡಸರು, ಮಕ್ಕಳು ಮನೆಯಲ್ಲಿರುವುದರಿಂದ ಅವರಿಗೆ ಏನನ್ನು ಕಲಿಸಬೇಕು, ಕಲಿಸಬಹುದು ಎಂಬುದರಿಂದ ಹಿಡಿದು ಅವರಿಗೆ ಅಡುಗೆಯನ್ನು ಕಲಿಸಿ ತಮ್ಮ ನಾಳೆಗಳನ್ನು ಸುರಳೀತಗೊಳಿಸಿಕೊಳ್ಳುತ್ತಿದ್ದಾರೆ. ನನ್ನಗೆಳತಿಯೊಬ್ಬಳು ಕರೆ ಮಾಡಿ ಹೇಳುತ್ತಾಳೆ. ಅವಳಿಗೆ ಅಡುಗೆ ಮನೆ ಮೊದಲಿಗಿಂತ ಹೆಚ್ಚು ಅಂಟಿಕೊಂಡಿದೆಯಂತೆ. ಮನೆಯಲ್ಲಿ ಇರುವವರೆಲ್ಲ ಮೂರು ಹೊತ್ತೂ ಬೇರೆ ಬೇರೆ ಅಡುಗೆ, ತಿಂಡಿ-ತೀರ್ಥಗಳನ್ನು ಅವಳಿಂದ ಮಾಡಿಸಿಕೊಂಡು ತಿನ್ನುವ ಉಮೇದಿಯಲ್ಲಿದ್ದಾರಂತೆ.ಅವಳಿಗೂ ಹೇಳಲು ಬೇರೆ ಸಬೂಬು ಕಾಣದೆ, ಮಾಡಲು ಬೇರೆ ಕೆಲಸವೂ ಇರದೆ ಎಲ್ಲವನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾಳಂತೆ. ಇದು ಒಂದು ಉದಾಹರಣೆ ಅಷ್ಟೆ.


ಇದು ಮನೆಗಷ್ಟೇ ಸೀಮಿತವಾಗಿಲ್ಲ. ಫೇಸ್‍ಬುಕ್‍ವಾಲ್ಗಳಲ್ಲಿ ತರಹೆವಾರು ಅಡುಗೆಗಳನ್ನು ಮಾಡಿ ಅನೇಕ ಮಹಿಳೆಯರು ಪೋಸ್ಟ್ ಮಾಡುತ್ತಿದ್ದಾರೆ. ಅವರನ್ನು ಫಾಲೋ ಮಾಡುವವರು ತಾವೂ ಅದನ್ನು ಮರುಸೃಷ್ಟಿಸಿಯೋ ಅಥವಾ ಇನ್ನೊಂದು ಪದಾರ್ಥವನ್ನು ಹಾಕಿಯೋ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ. ಕೆಲ ಮನೆಗಳಲ್ಲಿ ಮಕ್ಕಳು ಅಡುಗೆ ಕಲಿತು ಮಾಡುವ ಪೋಸ್ಟುಗಳು ಧಾರಾಳವಾಗಿವೆ. ಮನೆಮಂದಿಯೊಂದಿಗೆ ಹೀಗೆ ಸಂತಸದ ಕ್ಷಣಗಳನ್ನು ಕಳೆಯುವುದು ಅಪರೂಪವಾದ್ದರಿಂz ಇದನ್ನು ಆಸ್ವಾದಿಸುವುದು ಎಲ್ಲರ ಹಕ್ಕೂ ಹೌದು. ಆದರೆ ಹೀಗೆ ದಿನವೂ ಮಾಡಿ ಮಾಡಿ ಮನೆಯ ಡಬ್ಬಿಗಳು ವೇಗವಾಗಿ ಖಾಲಿಯಾಗಿ ಅವುಗಳನ್ನು ತುಂಬಿಸಲು ಮತ್ತೆ ಅಂಗಡಿಗಳ ಮುಂದೆಕ್ಯೂ ನಿಲ್ಲಬೇಕಲ್ಲ!! ನಮ್ಮ ಪ್ರಧಾನಿಗಳು ಆದಷ್ಟು ಮನೆಯಿಂದ ಆಚೆ ಬರಬೇಡಿ ಎಂದಲ್ಲವೇ ಹೇಳಿರುವುದು? ನಮ್ಮಂತೆ ಇರುವ ಸಹಸ್ರಾರ ುಜನರಿಗೆ ಕೂಳಿಗೆ ತತ್ವಾರವಾಗಿರುವ ಇಂಥ ಕಷ್ಟ ಕಾಲದಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವ ಮನಸ್ಸಾದರೂ ಹೇಗೆ ಬಂದೀತು ?ಅವರಂತೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕು ಎಂದಲ್ಲ ನಾನು ಹೇಳುತ್ತಿರುವುದು. ಇತರರ ಕಷ್ಟಗಳಿಗೆ ಸಂವೇದನಾಶೀಲತೆಯನ್ನೇ ಕಳೆದುಕೊಂಡು ತಿಂದು ತೇಗುವ ಕಾಲವಂತೂ ಇದಲ್ಲ.

ಈ ಕೊರೋನಾ ವೈರಸ್‍ಮೋಡಿ ಇಲ್ಲಿಗೇ ನಿಲ್ಲುವುದಿಲ್ಲ. ಯೋಗದ ಕುರಿತ ಯೂಟ್ಯೂಬ್ ವಿಡಿಯೋಗಳು ಹಿಂದೆಂದಿಗಿಂತ ಹೆಚ್ಚು ಬೇಗ ಬಿಡುಗಡೆಯಾಗುತ್ತಿವೆ. ಅನೇಕ ಮಹಿಳೆಯರು ತಮ್ಮ ಯೋಗ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದು ಈ ಕಷ್ಟ ಕಾಲದ ಒಳ್ಳೆಯ ಕಾಲಹರಣವೂ ಹಾಗೂ ರೋಗ ನಿಯಂತ್ರಕ ಶಕ್ತಿಯನ್ನು ಹೆಚ್ಚಿಸುವ ಎರಡೂ ಕೆಲಸಗಳನ್ನು ಏಕಕಾಲಕ್ಕೆ ಮಾಡುತ್ತಿದೆ. ಆದರೆ ಅದೇ ಸಮಯದಲ್ಲಿ ಇಂಥ ಚಟುವಟಿಕೆಗಳು ಹೊಟ್ಟೆ ತುಂಬಿದವರ ವರಾತಗಳಂತೆ ಆಗಿಬಿಡುವ ಸಾಧ್ಯತೆಯೂ ಇದೆ. ಕವನಗಳನ್ನು ಸೃಷ್ಟಿಸುವುದರಲ್ಲೂ ಈ ಕೊರೊನಾ ವೈರಸ್‍ಹಿಂದೆ ಬಿದ್ದಿಲ್ಲ. ಹಾಗೆ ನೋಡಿದರೆ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರೂ ಕವಿತೆಯನ್ನು ಬರೆಯುವವರೆ. ಬಹುತೇಕ ಲೇಖಕರು ಕವಿತೆಯ ಮೂಲಕವೇ ಸಾಹಿತ್ಯ ಲೋಕವನ್ನು ಬಹಳ ಮುಜುಗರದಿಂದ ಪ್ರವೇಶಿಸುತ್ತಾರೆ. ಆದರೆ ಫೇಸ್ಬುಕ್ ಎಂಬ ಮಹಾಮಾಂತ್ರಿಕ ಆ ಮುಜುಗರಗಳನ್ನೆಲ್ಲ ಮೂಟೆಕಟ್ಟಿ ಅನೇಕ ಮಹಿಳೆಯರು ಇಲ್ಲಿ ತಮ್ಮ ಕವಿತೆಗಳಿಂದ ಮೀಯಲು ಅನುವು ಮಾಡಿಕೊಟ್ಟಿದೆ. ಕೆಲವರು ನಿಯಮಿತವಾಗಿ ಕವಿತೆಗಳನ್ನು ಹಾಕುತ್ತಿದ್ದರೆ ಕೆಲವರು ವಿಶೇಷ ಸಂದರ್ಭಗಳಲ್ಲಿ ತಮ್ಮ ಕವಿತೆಗಳನ್ನು ಹಾಕುತ್ತಾರೆ. ಸಧ್ಯದಲ್ಲಿ ಸಾವಿತ್ರಿ ಬಾ ಫುಲೆಯ ಜನ್ಮ ದಿನಾಚರಣೆ ಅಂಥ ಒಂದು ವಿಶೇಷ ದಿನವಾಗಿ ಒದಗಿತ್ತು. ಆದರೆ ಕೊರೊನಾದ ಪ್ರಭಾವದಿಂದ ಕವಿತೆಗಳು ಬಂದಷ್ಟು ವೇಗ ಹಾಗೂ ಸಂಖ್ಯೆಯಲ್ಲಿ ಬೇರೆಯಾವ ಸಂದರ್ಭಗಳಲ್ಲೂ ಕವಿತೆಗಳು ಬಂದಿರಲಾರವು. ಒಂದು ಹಂತದಲ್ಲಿ ಈ ಕೊರೊನಾವನ್ನು ಮೋಹಿಸಿದಂತೆ ಇರುವ ಕವಿತೆಗಳು, ಅದರ ಬಗ್ಗೆ ವಿರಾಗಿಯಂತೆ ಹಾಡಿದ ಕವಿತೆಗಳೂ ಬಂದಿವೆ. ಏನೇ ಇರಲಿ ನಮ್ಮ ಅನೇಕ ಗೆಳತಿಯರು ಕೊರೊನಾ ಕವಿತೆಗಳನ್ನು ಈ ಸಂದರ್ಭದಲ್ಲಿ ಸೃಷ್ಟಿಸಿ ಇತಿಹಾಸ ನಿರ್ಮಿಸಿದ್ದಾರೆ. ಕೆಲವರು ತಾವೇ ಬಟ್ಟೆಗಳ ಮಾಸ್ಕ್ ತಯಾರಿಸಿ ಕೊಂಡಿದ್ದಾರೆ. ಅವುಗಳ ಫೋಟೋ, ವೀಡಿಯೋಗಳನ್ನು ಹಾಕಿ ಇತರರಿಗೆ ಪ್ರೇರೇಪಣೆಯಾಗಿದ್ದಾರೆ.

ನಾಲ್ಕು ಗೋಡೆಗಳ ಮಧ್ಯದಲ್ಲಿ ನಮ್ಮ ನಮ್ಮ ಮನೆಗಳ ಒಳಗೆ ನಡೆಯುತ್ತಿರುವ ಈ ಎಲ್ಲ ಚಟುವಟಿಕೆಗಳು ಏಕತಾನತೆಯನ್ನು ನೀಗಿಸಿಕೊಳ್ಳಲು ನಾವು ಕಂಡುಕೊಂಡ ಮಾರ್ಗಗಳಿರಬಹುದು. ಮನೆಮಂದಿಗೆ ಏನೇನನ್ನೋ ಕಲಿಸಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ಮಹಿಳೆಯರು ಸಂವೇದನಾಶೀಲತೆಯನ್ನೂ, ಸೂಕ್ಷ್ಮತೆಯನ್ನೂ ಮಾನವೀಯ ನೆಲೆಯ ಚಿಂತನೆಯನ್ನೂ ತಮ್ಮ ತಮ್ಮ ಮನೆಗಳಲ್ಲಿ ಕಲಿಸಬಹುದಲ್ಲವೇ?

ನೂತನದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *