ಮಹಿಳಾ ಅಂಗಳ / ಕೊರೊನಾ ಅದು ಹೇಗೆ ಸ್ತ್ರೀಲಿಂಗ ಪಡೆಯಿತು? – ನೂತನ ದೋಶೆಟ್ಟಿ

ಕೊರೊನಾವನ್ನು ‘ಮಹಾಮಾರಿ’, ‘ಹೆಮ್ಮಾರಿ’ ಮೊದಲಾದ ಉಪಮೆಗಳಿಲ್ಲದೇ ಒಂದು ಬಾರಿಯೂ ಹೇಳಿಲ್ಲ. ಅದು ಹೇಗೆ ಮತ್ತು ಏಕೆ ಈ ರೋಗಗಳು ಸ್ತ್ರೀರೂಪಿಗಳೂ, ಸ್ತ್ರೀಲಿಂಗಿಗಳೂ ಆದವು ಎಂಬುದನ್ನು ಸುದ್ದಿ ವಾಹಿನಿಗಳೇ ಹೇಳಬೇಕು. ದಿನವಿಡೀ ಈ ಶಬ್ದಗಳು ಕಿವಿಯ ಮೇಲೆ ಅಪ್ಪಳಿಸುವಾಗ ಮೊದಮೊದಲು ಭಯಭೀತರಾದ ನೋಡುಗರು ಈಗ ರೋಸಿ ಹೋಗಿದ್ದಾರೆ. ಮುಂದೆ ಇಂಥ ಶಬ್ದಗಳನ್ನು ಅನವಶ್ಯಕವಾಗಿ ಬಳಸಿ ಸ್ತ್ರೀಯರ ಬಗ್ಗೆ ಕೀಳು ಮನೋಭಾವವನ್ನು ಬಿತ್ತುವ ಕೆಲಸ ಮಾಡಬಾರದು ಎಂದು ಈ ಮೂಲಕ ಖಂಡಿಸೋಣ.

ನಮ್ಮ ಪುರಾಣ, ಐತಿಹ್ಯಗಳು ಕೆಲವು ಕುತೂಹಲಕಾರಿಯಾದ, ರೋಚಕವಾದ ಸ್ರೀ ಪಾತ್ರಗಳನ್ನು ಸೃಷ್ಟಿಸಿವೆ. ಅವುಗಳಲ್ಲಿ ಮುಖ್ಯವಾಗಿ ದುರ್ಗಾ, ಮಾರಿ ಮೊದಲಾದವರನ್ನು ಹೆಸರಿಸಬಹುದು. ಈ ಹೆಸರುಗಳೊಂದಿಗೆ ಬೀಭತ್ಸತೆ, ಭಯ, ಕ್ರೌರ್ಯ ಮೊದಲಾದ ಸ್ತ್ರೀಗೆ ಅಸಹಜ ಎನ್ನಬಹುದಾದಂಥ ಗುಣಗಳು ತಳುಕು ಹಾಕಿಕೊಂಡಿವೆ. ದುರ್ಗೆಯು ರಾಕ್ಷಸರ ಸಂಹಾರವನ್ನು ಮಾಡಲೆಂದೇ ಹುಟ್ಟಿದವಳು. ಅದರಲ್ಲೂ ಅತಿ ಶಕ್ತಿಶಾಲಿಗಳಾದ ತ್ರಿಮೂರ್ತಿಗಳಿಂದ ಅಸಾಧ್ಯವಾದ ಕೆಲಸವನ್ನು ಪೂರ್ಣ ಮಾಡಲೆಂದೇ ಬಂದವಳು.

ಇನ್ನು ಮಾರಿ, ಮಾರಮ್ಮ ಎಂದು ಕರೆಯಲ್ಪಡುವ ದೇವತೆ ಬಹುತೇಕವಾಗಿ ಊರದೇವತೆ, ಗ್ರಾಮದೇವತೆ. ಊರನ್ನು ರಕ್ಷಿಸುವ ಹೊಣೆ ಅವಳದ್ದು ಎಂಬುದು ಒಂದು ಸಾಮಾನ್ಯ ನಂಬಿಕೆ. ಇವಳ ಹೆಸರಲ್ಲಿ ಊರ ಜಾತ್ರೆ, ರಥೋತ್ಸವ, ಉತ್ಸವಗಳು ಇಂದಿಗೂ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಅಸಂಖ್ಯ ಗ್ರಾಮಗಳು ನಮ್ಮ ನಾಡಿನಾದ್ಯಂತ ಇವೆ. ಸಹ್ಯಾದ್ರಿ ಬೆಟ್ಟದ ಪ್ರದೇಶ, ಕಾಡು, ಕಣಿವೆಗಳು, ನದಿ, ಪರ್ವತ ಶ್ರೇಣಿಗಳಲ್ಲಿ ಈ ದೇವತೆಗಳ ಅಸ್ತಿತ್ವ ಬಹುತೇಕವಾಗಿ ಹೆಚ್ಚಿದೆ. ಒಂದು ಊರಿನ ಸರಹದ್ದು ಮುಗಿಯುವ ಮೊದಲು ಇಂಥ ದೇವತೆಗಳ ಮೂರ್ತಿಗಳು ಕಾಣುತ್ತವೆ. ಇವಕ್ಕೆ ಗುಡಿಗಳು ಇರಬಹುದು. ಇಲ್ಲವೇ ಮರದ ಕೆಳಗೆ ಮೂರು ಅಡಿಗಿಂತ ಎತ್ತರದ ಮೂರ್ತಿಗಳು ದಾರಿಯ ಪಕ್ಕದಲ್ಲೇ ಕಾಣಸಿಗುತ್ತವೆ. ಇವಕ್ಕೆ ಢಾಳಾದ ಗಾಢ ಬಣ್ಣಗಳನ್ನು ಹಚ್ಚಲಾಗಿರುತ್ತದೆ. ಇದರಿಂದ  ದೇವತೆಗೆ ಉಗ್ರರೂಪ ಬಂದಿರುತ್ತದೆ. ಕೆಲವೊಮ್ಮೆ ಕೋರೆ ಹಲ್ಲುಗಳನ್ನು ಮಾಡಿ ಉಗ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಈ ದೇವತೆಗಳು ಭಯ- ಅಭಯ, ರಕ್ಷೆ- ಶಿಕ್ಷೆಗಳನ್ನು ಒಟ್ಟೊಟ್ಟಿಗೇ ನಿರ್ವಹಿಸಬಲ್ಲ ಅಪರೂಪದ ದೇವತೆಗಳು. ಇವರ ಮುಖ್ಯ ಲಕ್ಷಣವೆಂದರೆ ಇವರು ಶಿಷ್ಟ ದೇವತೆಗಳಲ್ಲ. ನಿಯಮಿತವಾಗಿ ಇವರಿಗೆ ಪೂಜೆ-ಪುನಸ್ಕಾರಗಳು ನಡೆಯುವುದಿಲ್ಲ. ವರ್ಷಕ್ಕೊಮ್ಮೆ ಜಾತ್ರೆ- ಉತ್ಸವ ಮಾಡಿ ಊರು ನಿರಾಳವಾಗಿ ಬಿಡುತ್ತದೆ. ಆದರೆ ಇವರ ಬಗ್ಗೆ ಇರುವಷ್ಟು ಭಯ- ಭಕ್ತಿ ಊರ ಮಧ್ಯದಲ್ಲಿ ವಿರಾಜಿಸುವ ಶಿಷ್ಟ ದೇವತೆಗಳ ಬಗ್ಗೆ ಕಡಿಮೆಯೇ ಎನ್ನಬಹುದು. 

ನಮ್ಮ ದೇಶದಲ್ಲಿ ಆಗಾಗ ಕಂಡುಬರುವ ಸಿಡುಬು, ದಢಾರ ಮೊದಲಾದ ಸೋಂಕು ರೋಗಗಳು, ಸುಮಾರು 5-6 ದಶಕಗಳ ಹಿಂದೆ ಊರಿನ ಜೀವಗಳನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತಿದ್ದ ಪ್ಲೇಗ್ ಮೊದಲಾದ ಸೋಂಕು ರೋಗಗಳು ಈ ದೇವತೆಗಳ ಕೋಪದಿಂದಲೇ ಬರುತ್ತವೆ ಎಂದು ಜನ ನಂಬಿದ್ದರು. ಈಗಲೂ ಸಿಡುಬನ್ನು ‘ಅಮ್ಮ’ ಬಂದಿದೆ ಎಂದೇ ಸಂಬೋಧಿಸಲಾಗುವುದು. ಮಾರಿಯಮ್ಮಳನ್ನು ಹೆಮ್ಮಾರಿ ಎಂದೂ ಕರೆಯುವುದುಂಟು. ಆಕೆ ಬಲು ಕೋಪಿಷ್ಟೆ ಎಂಬುದು ಆಕೆಯ ಬಗೆಗೆ‌ ಒಂದು ಸಾಮಾನ್ಯ ನಂಬಿಕೆ. ಈ ದೇವತೆಗಳಿಗೆ ಸ್ತ್ರೀಯರಲ್ಲಿ ಇರುವ ಮೃದುತ್ವವಿರದೇ ಕಠೋರತೆ, ದುಷ್ಟತೆ, ಭಯಾನಕತೆ, ಬೀಭತ್ಸತೆ ಮೊದಲಾದ ಋಣಾತ್ಮಕತೆಯನ್ನು ಆರೋಪಿಸಲಾಗಿದೆ. 

ಇವೆಲ್ಲ ಜನಮಾನಸದಲ್ಲಿರುವ ನಂಬಿಕೆಯ ವಿಚಾರಗಳು: ಇಷ್ಟು ಪೀಠಿಕೆಯ ನಂತರ  ಮುಖ್ಯ ವಿಷಯಕ್ಕೆ ಬರೋಣ. ಈಗ ವಿಶ್ವವನ್ನೆ ಹಿಂಡಿ ನೊಣೆಯುತ್ತಿರುವ ಕೊರೊನಾ – ಕೋವಿಡ್ 19 ಎಂಬ ವೈರಾಣುವಿನಿಂದ ಹರಡುತ್ತಿರುವ  ಸೋಂಕುರೋಗವನ್ನು ನಮ್ಮ ರಾಜ್ಯದ ಖಾಸಗಿ ದೃಶ್ಯ ಮಾಧ್ಯಮಗಳು ಕಳೆದ ಮಾರ್ಚ್ ಮೊದಲ ವಾರದಿಂದ ಬಿತ್ತರಿಸುತ್ತಿರುವ ರೀತಿಗೆ ಸ್ವತಃ ಈ ಮೇಲೆ ಹೇಳಿದ ದೇವತೆಗಳೂ ರೋಸಿ ಹೋಗಿರಬೇಕು. ಕೊರೊನಾವನ್ನು  ‘ಮಹಾಮಾರಿ’ , ‘ಹೆಮ್ಮಾರಿ’, ‘ರಾಕ್ಷಸಿ’ ಮೊದಲಾದ ಉಪಮೆಗಳಿಲ್ಲದೇ ಒಂದು ಬಾರಿಯೂ ಹೇಳಿಲ್ಲ. ಅದು ಹೇಗೆ ಮತ್ತು ಏಕೆ ಈ ರೋಗಗಳು ಸ್ತ್ರೀರೂಪಿಗಳೂ, ಸ್ತ್ರೀಲಿಂಗಿಗಳೂ ಆದವು ಎಂಬುದನ್ನು ಈ ವಾಹಿನಿಗಳೇ ಹೇಳಬೇಕು. ದಿನವಿಡೀ ಸುದ್ದಿವಾಹಿನಿಗಳಲ್ಲಿ ಈ ಶಬ್ದಗಳು ಕಿವಿಯ ಮೇಲೆ ಅಪ್ಪಳಿಸುವಾಗ ಮೊದಮೊದಲು ಭಯಭೀತರಾದ ನೋಡುಗರು ಈಗ ರೋಸಿ ಹೋಗಿದ್ದಾರೆ.

ಇನ್ನು ಮುಂದೆ ಇಂಥ ಶಬ್ದಗಳನ್ನು  ಅನವಶ್ಯಕವಾಗಿ ಬಳಸಿ ಸ್ತ್ರೀಯರ ಬಗ್ಗೆ ಕೀಳು ಮನೋಭಾವವನ್ನು ಬಿತ್ತುವ ಕೆಲಸ ಮಾಡಬಾರದು ಎಂದು ಈ ಮೂಲಕ ಖಂಡಿಸೋಣ. ಜೊತೆಗೆ ಈ ದೇವತೆಗಳಿಗೆ ನಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಸ್ಥಾನಮಾನಗಳಿವೆ. ಇವು ಯಾವುದರ ಪರಿವೆಯೂ ಇಲ್ಲದ ಕೇವಲ ನಗರ ಕೇಂದ್ರಿತ ಆಟಾಟೋಪವನ್ನು ಮೈಗೂಡಿಸಿಕೊಂಡ ಈ ವಾಹಿನಿಗಳನ್ನು ತಾತ್ವಿಕವಾಗಿ ಈ ಮೂಲಕ ವಿರೋಧಿಸೋಣ.                           

ನೂತನ ದೋಶೆಟ್ಟಿ

ReplyForward

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *