ಮಹಿಳಾ ಅಂಗಳ / “ಏನಾಗಲಿ ಮುಂದೆ ಸಾಗು ನೀ…”- ನೂತನ ದೋಶೆಟ್ಟಿ
ಬಹುತೇಕ ಪಾಲಕರು ತಾವು ಅನುಭವಿಸಿದ್ದ ನೋವನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂತಲೂ, ತಮಗೆ ಸಿಗದ ಎಲ್ಲ ಬಗೆಯ ಐಭೋಗಗಳನ್ನು ತಮ್ಮ ಮಕ್ಕಳಿಗೆ ನೀಡಬೇಕು ಎಂತಲೂ ಸದಾ ಪ್ರಯತ್ನಿಸುತ್ತಿರುತ್ತಾರೆ. ಇದು ಎಲ್ಲ ತಲೆಮಾರುಗಳಲ್ಲೂ ಮುಂದುವರೆದುಕೊಂಡೇ ಬಂದಿದೆ. ಹೀಗೆ ಮಕ್ಕಳಿಗೆ ನೀಡುತ್ತ, ನೀಡುತ್ತ ಮತ್ತು ನೀಡುತ್ತಲೇ ಹೋಗುವ ಹಂತದಲ್ಲಿ ಅನೇಕ ಬಾರಿ ತಮಗೆ ಬೇಕಾದ್ದನ್ನು ಗೊತ್ತಿಲ್ಲದೆಯೇ ಕಡೆಗಣಿಸುವ ಹಾಗೂ ತಮ್ಮ ಮಕ್ಕಳಿಂದ ತಾವು ನಿರೀಕ್ಷಿಸುವುದನ್ನು ಅವರಿಗೆ ಸೂಕ್ಷ್ಮವಾಗಿ ತಿಳಿಸಿಕೊಡುವುದನ್ನೂ ಮರೆಯುವ ತಪ್ಪು ಮಾಡಿಬಿಡುತ್ತಾರೆ. ಇಲ್ಲಿ ಕೊಡುವುದು ಕೇವಲ ವಸ್ತುಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಕೊಡಬಹುದಾದ ಗೌರವ, ನಂಬಿಕೆ, ಪ್ರೀತಿ, ಸಮಯ, ಹೊಂದಾಣಿಕೆ ಮೊದಲಾಗಿ ಸಂಬಂಧಗಳನ್ನು ಉಳಿಸಿಕೊಳ್ಳಲು ಬೇಕಾಗುವ ಅನೇಕ ತಂತುಗಳಿಗೆ ಸಂಬಂಧಿಸಿದ್ದಾಗಿದೆ.
“ಏನಾಗಲಿ ಮುಂದೆ ಸಾಗು ನೀ…” ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ದನಿಯಲ್ಲಿದ್ದ ಈ ಗೀತೆಯನ್ನು ಪೂರ್ತಿ ಕೇಳಿಸಿ ಆಮೇಲೆ ನಗುತ್ತ ನಿನಗೆ ಬೇಸರವಾದಾಗಲೆಲ್ಲ ಈ ಹಾಡನ್ನು ಕೇಳು ಎಂದು ಹೇಳಿದಾಗ ಅವನ ವಯಸ್ಸು 11 ವರ್ಷ! ಆ ಕ್ಷಣ ನಾನು ಅನುಭವಿಸಿದ ಭಾವನೆಗಳನ್ನು ಶಬ್ದಗಳಲ್ಲಿ ಹಿಡಿದಿಡುವುದು ಬಲು ಕಷ್ಟ. ಆ ಮಗು ಮೊದಲು ನಾನು ಹಂಚಿಕೊಳ್ಳಲಾರದ ಆದರೆ ನನ್ನೊಳಗೆ ಮನೆ ಮಾಡಿದೆ ಎಂದು ತಾನು ಭಾವಿಸಿದ ನನ್ನ ಯಾವುದೋ ನೋವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅದನ್ನು ಗ್ರಹಿಸಿ, ಅದಕ್ಕೆ ಪರಿಹಾರವನ್ನು ಹುಡುಕಲು ಪ್ರಯತ್ನಿಸಿದ್ದು ನನ್ನನ್ನು ತಟ್ಟಿದ ಮೊದಲ ಭಾವ. ಶಾಲೆಗೆ ಹೋಗುವ ಆಟೋದಲ್ಲೋ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೋ ಕಿವಿಯ ಮೇಲೆ ಬಿದ್ದ ಆ ಹಾಡಿನ ಅರ್ಥವನ್ನು ಗ್ರಹಿಸಿ ಅದನ್ನು ನನ್ನ ನೋವು, ಸಂಕಟವನ್ನು ಮರೆಸಲು ಬಳಸಬಹುದು ಎಂದ ಅನ್ನಿಸಿದ್ದು ನನ್ನನ್ನು ತಟ್ಟಿದ ಎರಡನೇ ಭಾವ. ಆನಂತರ ಅಂರ್ತಜಾಲದಲ್ಲಿ ಹುಡುಕಿ ಅದನ್ನು ಡೌನ್‍ಲೋಡ್ ಮಾಡಿ ನನ್ನ ಲ್ಯಾಪ್‍ಟಾಪ್‍ಗೆ ಹಾಕಿ ನನಗೆ ಕೇಳಿಸುವ ಹಂತದವರೆಗಿನ ಎಲ್ಲ ಸೂಕ್ಷ್ಮಗಳೂ ನನ್ನನ್ನು ತಟ್ಟಿದ್ದು ಮಾತ್ರವಲ್ಲ ನನ್ನನ್ನು ಅವನೆದುರು ಚಿಕ್ಕವಳಾಗಿಸಿಬಿಟ್ಟವು.
ಈ ಎಲ್ಲ ಕ್ರಿಯೆಗಳು ನಡೆಯಲು ಕೆಲವಾರು ದಿನಗಳಂತೂ ಹಿಡಿದಿವೆ. ಆ ದಿನಗಳಲ್ಲಿ ಈ ಪುಟ್ಟ ಮಗು ಏಕಾಂಗಿಯಾಗಿ ಅನುಭವಿಸಿದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತ ಹೋದಂತೆ ನನ್ನೊಳಗಿನ ತಾಯಿ ಸಂತಸದಿಂದ ಉಬ್ಬುತ್ತ ಹೋದಳು. ಹೆಮ್ಮೆಯಿಂದ ಬೀಗಿದಳು. ಬಹುತೇಕ ಪಾಲಕರು ತಾವು ಅನುಭವಿಸಿದ್ದ ನೋವನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂತಲೂ, ತಮಗೆ ಸಿಗದ ಎಲ್ಲ ಬಗೆಯ ಐಭೋಗಗಳನ್ನು ತಮ್ಮ ಮಕ್ಕಳಿಗೆ ನೀಡಬೇಕು ಎಂತಲೂ ಸದಾ ಪ್ರಯತ್ನಿಸುತ್ತಿರುತ್ತಾರೆ. ಇದು ಎಲ್ಲ ತಲೆಮಾರುಗಳಲ್ಲೂ ಮುಂದುವರೆದುಕೊಂಡೇ ಬಂದಿದೆ. ಹೀಗೆ ಮಕ್ಕಳಿಗೆ ನೀಡುತ್ತ, ನೀಡುತ್ತ ಮತ್ತು ನೀಡುತ್ತಲೇ ಹೋಗುವ ಹಂತದಲ್ಲಿ ಅನೇಕ ಬಾರಿ ತಮಗೆ ಬೇಕಾದ್ದನ್ನು ಗೊತ್ತಿಲ್ಲದೆಯೇ ಕಡೆಗಣಿಸುವ ಹಾಗೂ ತಮ್ಮ ಮಕ್ಕಳಿಂದ ತಾವು ನಿರೀಕ್ಷಿಸುವುದನ್ನು ಅವರಿಗೆ ಸೂಕ್ಷ್ಮವಾಗಿ ತಿಳಿಸಿಕೊಡುವುದನ್ನೂ ಮರೆಯುವ ತಪ್ಪು ಮಾಡಿಬಿಡುತ್ತಾರೆ. ಸದಾ ಕಾಲ ಕೇವಲ ಪಡೆದುಕೊಂಡ ಹಾಗೂ ಪಡೆದುಕೊಳ್ಳಲು ಬೇಕಾಗುವ ಎಲ್ಲ ಅಸ್ತ್ರಗಳನ್ನೂ ಹೊಂಚಿಯೇ ಬೆಳೆದ ಮಗು ಕೊಡುವುದನ್ನು ಕಲಿಯುವುದೇ ಇಲ್ಲ. ಅಥವಾ ಅದಕ್ಕೆ ಕೊಡುವ ಪಾಠವನ್ನು ಅದರ ಪಾಲಕರು ಕಲಿಸಿಯೇ ಇರುವುದಿಲ್ಲವೇನೋ. ಇಲ್ಲಿ ಕೊಡುವುದು ಕೇವಲ ವಸ್ತುಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಕೊಡಬಹುದಾದ ಗೌರವ, ನಂಬಿಕೆ, ಪ್ರೀತಿ, ಸಮಯ, ಹೊಂದಾಣಿಕೆ ಮೊದಲಾಗಿ ಸಂಬಂಧಗಳನ್ನು ಉಳಿಸಿಕೊಳ್ಳಲು ಬೇಕಾಗುವ ಅನೇಕ ತಂತುಗಳಿಗೆ ಸಂಬಂಧಿಸಿದ್ದಾಗಿದೆ.
ಅಂತಹ ಮಗು ತನ್ನ ಏಕಾಂಗಿ ದಾರಿಯನ್ನು ತಾನೇ ರೂಪಿಸಿಕೊಂಡು ಬಿಡುತ್ತದೆ. ಅದು ಬೆಳೆದಂತೆಲ್ಲ ಹಿರಿಯರಿಗೆ ತಮ್ಮ ಮಗು ತಮ್ಮಿಂದ ಬಹುದೂರವಾದಂತೆ, ತಮಗಿಂತ ಬಹಳ ಭಿನ್ನವಾಗಿ ಯೋಚಿಸುತ್ತಿರುವಂತೆ, ತಮ್ಮ ಮಾತನ್ನು ಪಾಲಿಸದೇ ಭಂಡತೆಯನ್ನು ಬೆಳೆಸಿಕೊಳ್ಳುತ್ತಿರುವಂತೆ ಅನ್ನಿಸಿ ಭಯ, ಗಾಬರಿ, ಆತಂಕ, ದುಃಖ, ಸಂಕಟ ಕಾಲಕಾಲಕ್ಕೆ ಆಗುತ್ತದೆ. ಪರಸ್ಪರ ಅನ್ಯೋನ್ಯತೆಯಿರದ, ಕೊಡುಕೊಳ್ಳುವಿಕೆ ಇರದ ವಾತಾವರಣದಲ್ಲಿ ನಮ್ಮ ಮಕ್ಕಳನ್ನು ನಾವೇ ಬೆಳೆಸಿ ಈಗ ಕಾಲ ಬದಲಾಗಿದೆ, ಇದು ಜನರೇಷನ್ ಗ್ಯಾಪ್ , ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ, ಇವರೊಂದಿಗೆ ಹೇಗೆ ಇರಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಒಂದು ಪೀಳಿಗೆ ತನ್ನ ಹಿಂದಿನ ಅಥವಾ ತನ್ನ ಮುಂದಿನ ಪೀಳಿಗೆಯನ್ನು ಸರ್ವೇಸಾಮಾನ್ಯವಾಗಿ ದೂರಿಕೊಂಡೇ ಬರುತ್ತಿದೆ. ಹೀಗೆಂದರೆ ಪೀಳಿಗೆಯಿಂದ ಪೀಳಿಗೆಗೆ ಸಮಸ್ಯೆಗಳಿಲ್ಲ ಎಂದು ಖಂಡಿತಾ ಅಲ್ಲ.
ದೃಷ್ಟಿಕೋನ ಬಹಳ ಮುಖ್ಯ : ಸೀರೆ ಸೆರಗು ಹೊದ್ದು ಆಫೀಸಿಗೆ ಹೋಗುತ್ತಿದ್ದ ಅಲ್ಲೋ ಇಲ್ಲೋ ಎಂಬಂತೆ ಇದ್ದ ಅಮ್ಮ ಇಂದು ಚೂಡಿದಾರ್ ಎಂಬ ಆಧುನಿಕ ಪ್ರಜ್ಞೆಯನ್ನು ಉಟ್ಟುಕೊಂಡು ಸ್ವಂತ ವಾಹನ ಚಲಾಯಿಸಿಕೊಂಡು ಆಫೀಸಿಗೆ ಹೋಗುತ್ತಾಳೆ. ಸ್ವಂತ ಉದ್ಯೋಗ ಮಾಡುತ್ತಾಳೆ. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಾಳೆ. ಅಪ್ಪನಿಂದ ಮಾತ್ರ ಹಣ ಪಡೆಯುತ್ತಿದ್ದ ಮಕ್ಕಳ ಅಮ್ಮನೂ ಆರ್ಥಿಕವಾಗಿ ಸಬಲಳಾಗಿದ್ದಾಳೆ. ದೇಶ ವಿದೇಶ ಸುತ್ತುತ್ತಾಳೆ. ಮಕ್ಕಳ ಹೆಮ್ಮೆಯಾಗಿದ್ದಾಳೆ. ಗೆಳತಿಯಾಗಿದ್ದಾಳೆ. ಮಾತ್ರವಲ್ಲ ಪೈಪೋಟಿಯೂ ಆಗಿದ್ದಾಳೆ. ಈ ಮಾತುಗಳು ಅಪ್ಪನಿಗೂ ಅನ್ವಯಿಸುತ್ತವೆ. ಇಂತಹ ಅಪ್ಪ ಅಮ್ಮಂದಿರನ್ನು ನೋಡಿ ಬೆಳೆದ ಮಕ್ಕಳು ಅವರಿಗಿಂತ ಒಂದು ಹೆಜ್ಜೆ ಮುಂದೆಯಿರುವುದು ಸಾಮಾನ್ಯ. ಆ ಮುಂದಡಿಯನ್ನು ಅರ್ಥ ಮಾಡಿಕೊಳ್ಳುವ, ಅದನ್ನು ಸ್ವೀಕರಿಸುವ ಸ್ವಭಾವವನ್ನು ಹಿರಿಯರೂ ಬೆಳೆಸಿಕೊಳ್ಳದಿದ್ದರೆ ಎಲ್ಲ ಗೋಜಲಾಗಿ, ಶೂನ್ಯವಾಗಿ, ಅಂತರವಾಗಿ ಕಾಣುತ್ತದೆ. ದೃಷ್ಟಿಕೋನ ಇಲ್ಲಿ ಬಹಳ ಮುಖ್ಯ. ಬದಲಾವಣೆಯನ್ನು ಅದರ ಹಿನ್ನೆಲೆಯಲ್ಲೇ ನೋಡಿಬಿಡುವ ದೊಡ್ಡತನವನ್ನು ಬೆಳೆಸಿಕೊಂಡರೆ ಸಮಸ್ಯೆಯನ್ನು ಬಿಡಿಸಿಕೊಳ್ಳಲು ಸುಲಭವಾದೀತು.
ಆರಂಭದಲ್ಲಿ ಹೇಳಿದ ಪ್ರಸಂಗದಂತಹ ಘಟನೆಗಳು ಎಲ್ಲ ಪಾಲಕರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಅನುಭವಕ್ಕೆ ಬಂದಿರುತ್ತವೆ. ಹಿಂದೆ ವಠಾರದಂತೆ ಇದ್ದ ಮನೆಗಳು ಇಂದು ದ್ವೀಪಗಳಾಗಿವೆ. ಹಿರಿಯರಂತೆ ಮಕ್ಕಳ ಮೇಲೂ ಅನೇಕ ಒತ್ತಡಗಳಿವೆ. ಹಿರಿಯರಾದ ನಮಗೆ ನಮ್ಮ ನೋವುಗಳು, ಒತ್ತಡಗಳು ಅರ್ಥ ಆಗುತ್ತವೆ ಹಾಗೂ ಮುಖ್ಯ ಆಗುತ್ತವೆ. ಆದರೆ ನಮ್ಮ ಕಿರಿಯರ ನೋವುಗಳು, ಒತ್ತಡಗಳು ಅರ್ಥ ಆದರೂ ಅವಕ್ಕೆ ನಾವು ಕೊಡುವುದು ನಮ್ಮ ನಂತರದ ಅಂದರೆ ಎರಡನೇ ಪ್ರಾಮುಖ್ಯತೆ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬ ಗಾದೆಯ ಹಾಗೆ ಹಿರಿಯರ ಮತ್ತು ಕಿರಿಯರ ನಡುವಿನ ಹಗ್ಗಜಗ್ಗಾಟ ಕಾಲಾಂತರದಿಂದ ನಡೆಯುತ್ತಲೇ ಇದೆ. ಅದಕ್ಕೆ ಕಾಲವೇ ಪರಿಹಾರವನ್ನು ಕಾಲಕಾಲಕ್ಕೆ ತೋರಿಸುತ್ತ ಬಂದಿದೆ.
ಅಂದು ವರ್ಲ್ಡ್ ಕಪ್ ಕ್ರಿಕೆಟ್ಟಿನ ಫೈನಲ್ ಪಂದ್ಯ ಭಾರತ ಹಾಗೂ ಆಸ್ಟ್ರೇಲಿಯಾದ ನಡುವೆ ಆರಂಭವಾಗಿತ್ತು. ಮಗ ಜ್ವರದ ಬಾಧೆಯಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ. ಸ್ವತಃ ಕ್ರಿಕೆಟ್ ಆಟಗಾರರಾದ ಪತಿದೇವರು ಅದನ್ನು ನೋಡಲಾಗದೇ ಚಡಪಡಿಸುತ್ತಿದ್ದರು. ಆಗ ಮಗ ಜ್ವರದ ತಾಪದಲ್ಲೂ `ನೀವು ಹೋಗುವುದಿದ್ದರೆ ಹೋಗಿ. ಆದರೆ ಇಟ್ ಈಸ್ ಅ ಕ್ವೆಶ್ಚನ್ ಆಫ್ ರೆಸ್ಪಾನ್ಸಿಬಿಲಿಟಿ ಆಂಡ್ ಕಮಿಟ್‍ಮೆಂಟ್’ ಎಂಬ ಬಾಂಬ್ ಸಿಡಿಸಿದ್ದೇ ಅವರ ನೆತ್ತಿಗೇರಿದ್ದ ಕ್ರಿಕಿಟ್ ಹುಚ್ಚು ಇಳಿದು ಹೋಯಿತು ಎಂದು ಬೇರೆ ಹೇಳಬೇಕಿಲ್ಲ. ಒತ್ತಡಗಳನ್ನು ಹಗುರವಾಗಿಸುವ ಇಂತಹ ದೂರದೃಷ್ಟಿ ಹಾಗೂ ಕಾಣ್ಕೆಗಳು ನಾವು ಬೆಳೆಸಿದ ಮಕ್ಕಳಿಂದಲೇ ನಮಗೆ ಆಗಾಗ ದೊರೆಯುತ್ತಿರುತ್ತವೆ. ಆಗ ನಾವು ಕಿವುಡಾಗದೇ, ಕುರುಡಾಗದೇ ಸರಳವಾಗಿದ್ದಂತೆ ಕಾಣುವ ಅವುಗಳ ಗಹನತೆಯನ್ನು ಒಪ್ಪಿಕೊಳ್ಳುವ ಹಿರಿತನವನ್ನು ಬೆಳೆಸಿಕೊಳ್ಳಬೇಕಷ್ಟೆ.
ನೂತನ ದೋಶೆಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.