ಮಹಿಳಾ ಅಂಗಳ / ಆರೋಗ್ಯವೇ ಆದ್ಯತೆಯಾಗಲಿ – ನೂತನ ದೋಶೆಟ್ಟಿ
ಆರೋಗ್ಯ ಭಾರತೀಯರಿಗೆ ಯಾವಾಗಲೂ ಕೊನೆಯ ಸ್ಥಾನದಲ್ಲಿರುವ ಅವಶ್ಯಕತೆ. ಆಹಾರ, ಆದಾಯ, ನಿದ್ರೆ, ನೀರಡಿಕೆಗಳಂತೆ ಆರೋಗ್ಯಕ್ಕೆ ಈ ನೆಲದಲ್ಲಿ ಯಾವತ್ತೂ ತಹತಹ ಇಲ್ಲವೇ ಇಲ್ಲ ಎನ್ನುವುದು ಸೋಜಿಗದ ಸತ್ಯ. ಮಹಿಳೆಯರ ಪಾಲಿಗಂತೂ ಇಲ್ಲವೇ ಇಲ್ಲ. ಆಪತ್ತಿನ ಕಾಲದಲ್ಲಿ ಆರೋಗ್ಯವನ್ನು ತಡಕಾಡುವ ಬದಲು ಅದನ್ನು ಜೀವನ ಶೈಲಿಯಾಗಿ ಮಾಡಿಕೊಳ್ಳುವುದು ನಿಜವಾದ ಆರೋಗ್ಯದ ಗುಟ್ಟು.
ಆರೋಗ್ಯ ಎಂಬುದು ಜೀವನ ಪದ್ಧತಿ ಎನ್ನುವುದನ್ನು ಅರಿತು, ಪಾಲಿಸುವ ಕಾಲ ಈಗ ಬಂದಿದೆ. ವಂದನೆಗಳು ಕೊರೋನಾ!
ಆರೋಗ್ಯ ಎಂದರೆ, ಬಹುತೇಕವಾಗಿ ಇಡಿಯಾ ಮನುಕುಲಕ್ಕೆ, ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ಹುಷಾರು ತಪ್ಪಿದಾಗ ಆಸ್ಪತ್ರೆಗೆ ಓಡುವುದು. ನೆಗಡಿ, ಕೆಮ್ಮು ಮೊದಲಾದ ಸಣ್ಣ ಪುಟ್ಟ ಕಿರಿಕಿರಿಗಳಿಂದ ಹಿಡಿದು ಡಯಾಬಿಟಿಸ್, ಥೈರಾಯ್ಡ್ ಸಮಸ್ಯೆ, ವೈರಲ್ ಜ್ವರ, ಮಾನಸಿಕ ಕಾಯಿಲೆಯವರೆಗಿನ ಎಲ್ಲ ಬಗೆಯ ಆರೋಗ್ಯ ತೊಂದರೆಗಳಿಗೂ ಅವು ಉಲ್ಭಣವಾದಾಗ ಮಾತ್ರ ಡಾಕ್ಟರ್ ಬಳಿ ಓಡುವ ಅಭ್ಯಾಸ. ಆರಂಭಿಕ ಹಂತದಲ್ಲಿ ಮೆಡಿಕಲ್ ಸ್ಟೋರಿನಲ್ಲಿ ಕೇಳಿ ಪಡೆದುಕೊಳ್ಳುವ ಮಾತ್ರೆ, ಸಿರಪ್ ಗಳೇ ಆರೊಗ್ಯ ರಕ್ಷಕಗಳು. ಇದೇ ನಮ್ಮಲ್ಲಿ ಬಹುತೇಕರ ಆರೋಗ್ಯದ ಕಾಳಜಿ ಹಾಗೂ ಆರೋಗ್ಯದ ಅರಿವು ಕೂಡ. ಆರೋಗ್ಯ ಭಾರತೀಯರಿಗೆ ಯಾವಾಗಲೂ ಕೊನೆಯ ಸ್ಥಾನದಲ್ಲಿರುವ ಅವಶ್ಯಕತೆ. ಆಹಾರ, ಆದಾಯ, ನಿದ್ರೆ, ನೀರಡಿಕೆಗಳಂತೆ ಆರೋಗ್ಯಕ್ಕೆ ಈ ನೆಲದಲ್ಲಿ ಯಾವತ್ತೂ ತಹತಹ ಇಲ್ಲವೇ ಇಲ್ಲ ಎನ್ನುವುದು ಸೋಜಿಗದ ಸತ್ಯ. ಮಹಿಳೆಯರ ಪಾಲಿಗಂತೂ ಇಲ್ಲವೇ ಇಲ್ಲ.
ಅನಿವಾರ್ಯವಾಗಿ ವಸಾಹತುಶಾಹಿ, ಬಂಡವಾಳಶಾಹಿ ಪದಗಳನ್ನು ನಾವು ಅನೇಕ ಸಂದರ್ಭಗಳಲ್ಲಿ ಬಳಸಬೇಕಾಗುತ್ತದೆ. ಇದಕ್ಕೆ ಆರೋಗ್ಯವೂ ಹೊರತಲ್ಲ. ಈ ಕ್ಷೇತ್ರ ದೊಡ್ಡ ಉದ್ಯಮವಾಗಿ ಬೆಳೆದ ಮೇಲೆ ತಾಲೂಕು, ಜಿಲ್ಲೆಗಳ ಕೇಂದ್ರದಲ್ಲಿ ಸಾಲು ಸಾಲು ಆಸ್ಪತ್ರೆಗಳು, ಡಯಾಗ್ನಾಸ್ಟಿಕ್ ಸೆಂಟರುಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮೈದಳೆದವು. ಇದರಿಂದ ಆರೋಗ್ಯದ ವ್ಯಾಪಾರ ಹಾಗೂ ಮಾರುಕಟ್ಟೆ ಎರಡೂ ಸಿದ್ಧವಾದವು. ಅಲ್ಲಿಗೆ ಆರೋಗ್ಯಕ್ಕೆ ತಿಲಾಂಜಲಿ ಇತ್ತಂತೆ ಆಯಿತು. ಇಂಥ ಆರೋಗ್ಯ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಅದು ನಾವು ಕೈ ತೊಳೆಯಲು ಬಳಸುವ, ನೆಲೆ ಒರೆಸಲು ಬಳಸುವ, ಪಾತ್ರೆ ತಿಕ್ಕಲು ಬಳಸುವ ಅನೇಕಾನೇಕ ಬ್ರ್ಯಾಂಡ್ ಗಳ ಎಲ್ಲ ರಾಸಾಯನಿಕಗಳಿಗೂ ವಿಸ್ತರಿಸಿತು. ಈ ಹೊತ್ತಿಗಾಗಲೇ ನಮ್ಮ ಮನೆಗಳ ಅಂಗಳ, ಹಿತ್ತಲುಗಳು ಕಾಂಕ್ರೀಟ್ ಮಯವಾಗಿದ್ದವು. ಕೊಟ್ಪಿಗೆಗಳು ಕಾಣೆಯಾಗಿ ಪ್ಯಾಕೆಟ್ ಹಾಲುಗಳು ಕಣ್ಬೆಳಕಿನಲ್ಲೇ ಮನೆಯ ಮುಂದೆ ಸಿಕ್ಕಿಸಿದ್ದ ಪ್ಲ್ಯಾಸ್ಟಿಕ್ ಕವರಿನಲ್ಲಿ ಬಂದು ಬೀಳುತ್ತಿದ್ದವು. ಅಭಿವೃದ್ಧಿಯ ಹೆಸರಿನಲ್ಲಿ ಅತ್ಯಂತ ವೇಗದಲ್ಲಿ ನಡೆದ ಈ ಬೆಳವಣಿಗೆಗಳಿಂದ ಆರೋಗ್ಯ ಗುಡಚಾಪೆ ಕಿತ್ತದ್ದು ಗಮನಕ್ಕೆ ಬಾರದೇ ಹೋಯಿತು.
ಈ ಬೆಳವಣಿಗೆಗಳ ಮೊದಲು ಮನೆಗಳ ಅಡುಗೆ ಮನೆಗಳಲ್ಲಿ, ಹಿತ್ತಲುಗಳಲ್ಲಿ, ಮನೆಯ ಹಿರಿಯರಾದ ಅಜ್ಜ- ಅಜ್ದಿಯರ ಅನುಭವಗಳಲ್ಲಿ ಆರೊಗ್ಯ ಇತ್ತು. ಕೆಮ್ಮು, ನೆಗಡಿಗೆ ಆಸ್ಪತ್ರೆಗಳಿಗೆ ಯಾರೂ ಹೋಗುತ್ತಿರಲಿಲ್ಲ. ಮನೆ ಮದ್ದುಗಳಾದ ಕಷಾಯ, ಲೇಪನಗಳು ಆ ಕೆಲಸ ಮಾಡುತ್ತಿದ್ದವು. ಬಣ್ಣ ಬಣ್ಣದ ಗುಳಿಗೆಗಳು, ಸಿರಪ್ ಗಳು ಅವನ್ನು ನುಂಗಿ ಹಾಕಿದವು. ಆಕಳ ತುಪ್ಪ ಮನೆಗಳಲ್ಲಿ ಇದ್ದೇ ಇರುತ್ತಿತ್ತು. ಅದು ತಲೆಶೂಲೆಯ ಲೇಪನಕ್ಕೂ ಸೈ. ಊಟಕ್ಕೂ ಸೈ. ಆರೋಗ್ಯ ಆಗ ಒಂದು ಜೀವನ ಪದ್ಧತಿಯಾಗಿತ್ತು. ಸುತ್ತ ಮುತ್ತ ಬೆಳೆಯುತ್ತಿದ್ದ ಗಿಡ- ಮರಗಳಲ್ಲಿ, ಆಹಾರದಲ್ಲಿ, ಒಡನಾಟದಲ್ಲಿ, ಬಾಂಧವ್ಯದಲ್ಲಿ ಆರೋಗ್ಯ ಸೂರೆಗೊಂಡಿತ್ತು. ಇಂಥ ಜೀವನದಲ್ಲಿ ಅನಾರೋಗ್ಯ ಸುಳಿಯುವುದಾದರೂ ಹೇಗೆ? ಇವೆಲ್ಲವುಗಳಿಂದ ವಿಮುಖವಾದ ಬದುಕಿನತ್ತ ಮುಖ ಮಾಡಿದ್ದರಿಂದ ದೇಹದ ಆರೋಗ್ಯ, ರೋಗನಿರೋಧಕ ಶಕ್ತಿ, ಮಾನಸಿಕ ಆರೋಗ್ಯ ಕುಸಿದು ವೈರಾಣುಗಳು ತಮಗಿಷ್ಟ ಬಂದಾಗಲೆಲ್ಲ ಆಕ್ರಮಣ ಮಾಡುವಂತೆ ಆಯಿತು.
ಈಗಿನ ಈ ಕೊರೋನಾದ ಪ್ರಭಾವವೂ ಅಷ್ಟೇ. ಔಷಧಿ ಅಂಗಡಿಗಳಲ್ಲಿ ಸ್ಯಾನಿಟೈಸರ್ ಗಳು ಖಾಲಿಯಾಗಿವೆ. ತರಹೆವಾರಿ ಮಾಸ್ಕ್ ಗಳು ಮಾರಾಟವಾಗುತ್ತಿವೆ. ಜನ ಭೀತಿಯಿಂದಲೇ ಸಾಯುವಂತಾಗಿದೆ. ವಿದ್ಯಾವಂತ ವರ್ಗದ ಮಾತು ಇದಾದರೆ ದಿನಗೂಲಿ ಮಾಡುವವರು, ಪೌರ ಕಾರ್ಮಿಕರು, ಯಾವ ರಕ್ಷಣೆಯೂ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಉಳ್ಳವರಿಗೆ ಇರುವ ಹಾಗೂ ಸಿಗುವ ಆರೋಗ್ಯ ಪರಿಕರಗಳಿಂದ ಇವರು ಸದಾ ವಂಚಿತರೇ.
ಹೀಗೆ ಆಪತ್ತಿನ ಕಾಲದಲ್ಲಿ ಆರೋಗ್ಯವನ್ನು ತಡಕಾಡುವ ಬದಲು ಅದನ್ನು ಜೀವನ ಶೈಲಿಯಾಗಿ ಮಾಡಿಕೊಳ್ಳುವುದು ನಿಜವಾದ ಆರೋಗ್ಯದ ಗುಟ್ಟು. ಯೋಗ, ಪ್ರಾಣಾಯಾಮಗಳು ಶ್ವಾಸಕೋಶದ ಆರೋಗ್ಯ ಕಾಪಾಡುತ್ತವೆ. ಇದು ಬಹುತೇಕ ಸಾಮಾನ್ಯ ಸೋಂಕುಗಳನ್ನು ದೂರ ಇರಿಸುತ್ತದೆ. ಆದ್ದರಿಂದ ಕೊರೋನಾದಂಥ ಸೋಂಕುಗಳಿಂದ ಭಯಭೀತರಾಗದೇ ಅವುಗಳನ್ನು ಎದುರಿಸುವ ಆರೋಗ್ಯ ರಕ್ಷಾ ಕವಚವನ್ನು ಧರಿಸಿ ಇಂಥ ಸೋಂಕುಗಳಿಂದ ದೂರ ಇರೋಣ. ವಿಶ್ವಕ್ಕೆ ಸ್ದಾಸ್ಥ್ಯದ, ಆರೋಗ್ಯಯುತ ಜೀವನ ಪದ್ಧತಿಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ಭಾರತ ಹೀಗೆ ನರಳಬೇಕಿಲ್ಲ. ಅದನ್ನು ಪಾಲಿಸಿದರೆ ಸಾಕು. ಇದಕ್ಕೆ ಈಗ ಸಕಾಲ.
ಆಪತ್ತು ಬಂದೆರಗಿದಾಗ ಇದ್ದ ಭಯ ಕ್ರಮೇಣ ಕಡಿಮೆಯಾಗಿ ನಂತರ ಇಲ್ಲವಾಗುವುದು ಇಂದಿನ ವೇಗದ ಯುಗದಲ್ಲಿ ಸಹಜವಾಗಿ ಹೋಗಿದೆ. ಬೇರೆ ಬಂದು ರೈತರ ಸರಣಿ ಆತ್ಮಹತ್ಯೆಗಳಾದಾಗ, ನೆರೆ- ಪ್ರವಾಹ ಬಂದು ಬದುಕೇ ಕೊಚ್ಚಿ ಹೋದಾಗ , ಅಸಂಘಟಿತ ವಲಯದ ಮಹಿಳೆಯರು ಬೀದಿಗಿಳಿದು ಆಡಳಿತವನ್ನು ಕಂಗೆಡಿಸಿದಾಗ ಮುಂದೇನು ಎಂದು ಕಂಗಾಲಾದ ಜನ, ಸರ್ಕಾರಗಳು ಇಂಥದ್ದು ನಡೆದಿತ್ತು ಎಂಬುದನ್ನು ಕೆಲವೇ ದಿನಗಳಲ್ಲಿ ಮರೆತು ಎಂದಿನ ರಾಜಕೀಯ ದೊಂಬರಾಟಗಳಲ್ಲಿ ಮುಳುಗಿ ಹೋಯಿತು. ಛಿದ್ರವಾಗಿ ಹೋಗುತ್ತಿದ್ದ ಜನ-ಮನಗಳನ್ನು ನಿಯಂತ್ರಿಸಲು ಈ ಕೊರೋನಾ ರಾಷ್ಟ್ರಗಳ ಗಡಿಗಳನ್ನು ಹಾರಿ ಬರಬೇಕಾಯಿತು.ಈಗ ಸಧ್ಯ ನಮ್ಮ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬಡವ- ಬಲ್ಲಿದ ಬೇಧವಿಲ್ಲದ ಸಮಾನ ಸಾಮಾಜಿಕತೆ ಕಂಡು ಬರುತ್ತಿದೆ. ಹೆಚ್ಚು ಗಳಿಸಿ ಕೂಡಿಟ್ಟುಕೊಂಡಿರುವವರಿಗೂ ದಿನದ ಅನ್ನ ಸಂಪಾದಿಸಲು ಹೆಣಗುವವರಿಗೂ ಮಾರ್ಚ 15 ರ ಮೊದಲು ಇದ್ದ ಅಂತರ ಈಗ ಇಲ್ಲ. ಹಾಗೆಂದು ಇದು ಕೆಲ ತಿಂಗಳುಗಳ ನಂತರ ಖಂಡಿತ ಮುಂದುವರೆಯುವುದಿಲ್ಲ. ಅದನ್ನು ಮುಂದುವರೆಯಲು ಸಾಮಾಜಿಕ, ರಾಜಕೀಯ, ಧಾರ್ಮಿಕ ಶಕ್ತಿಗಳು ಬಿಡುವುದಿಲ್ಲ ಎಂಬುದೂ ಸತ್ಯ.
ಇಂಥ ಸಂದರ್ಭಗಳಲ್ಲಿ ನನಗೆ ಗಾಂಧೀಜಿಯವರ ಪ್ರಸ್ತುತತೆ ಕಣ್ಣು ಕಟ್ಟುತ್ತದೆ. ಅವರು ಸದಾ ಆಶ್ರಮದ ಜೀವನವನ್ನು ಬದುಕಿದ್ದರು. ಸಮುದಾಯದ ನಡುವಿನ ಬದುಕು ಅವರ ಶಕ್ತಿ ಹಾಗೂ ದೌರ್ಬಲ್ಯ ಎರಡೂ ಆಗಿತ್ತು. ಅವರು ಗುಡಿ ಕೈಗಾರಿಕೆಗಳಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎನ್ನುತ್ತಿದ್ದರು. ಅಹಿಂಸೆಯಿಂದ ಜಗತ್ತನ್ನೇ ಗೆದ್ದರೂ ಸ್ವಂತ ನೆಲದಲ್ಲಿ ಅವರು ಪರಕೀಯರಾಗಿಬಿಟ್ಟರು. ಅಂದಿಗೂ ಇಂದಿಗೂ ಈ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಅಂದಿನ ಕೊರತೆಗಳು ಇಂದು ಹೆಚ್ಚಾಗಿವೆ. ಮುಂದೆಯೂ ಹೀಗೇ ಇರುತ್ತವೆ. ಕೊರೋನಾ ನಂತರದ ಜಗತ್ತು ಸಂತನಂತಾಗುವುದು ಎಂಬುದು ಭ್ರಮೆ . ಇದು ಮಾರ್ಚ್ 15ರ ಮೊದಲ ಭಾರತವಾಗಿ ಮತ್ತೆ ಕೆಲವೇ ತಿಂಗಳಲ್ಲಿ ಬದಲಾಗಿ ಬಿಡುತ್ತದೆ. ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಆದರೆ ಈಗ ಹಾಗಾಗದೆ ಸಾಮಾಜಿಕ ಸಮಾನತೆಯ, ಹಪಾಹಪಿ ಮುಕ್ತ ಭಾರತವಾಗಲಿ ಎಂದು ಆಶಿಸೋಣ.
ನೂತನ ದೋಶೆಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.