ಪುಸ್ತಕ ಸಮಯ / ಮರ್ಯಾದಾ ಹತ್ಯೆ ಎಂಬ ಕೊರಳ ಕುಣಿಕೆ – ಭಾರತಿ ಹೆಗಡೆ
ಇಂಥ ಒಬ್ಬ ತಂದೆ, ಕೊಲೆಯಾಗಿ ಹೋಗುವ ಕಟ್ಟಕಡೆಯ ಘಳಿಗೆಯಲ್ಲಿರುವ ಪ್ರತಿ ಹೆಣ್ಣುಮಗಳಿಗೆ ಸಿಗಬಾರದೆ…? ಎಂಬೊಂದು ಪ್ರಶ್ನೆ ಹಾದು ಹೋಗುವುದು ತಮಿಳು ಲೇಖಕ ಇಮೈಯಮ್ ಅವರ ‘ಭಾಗ್ಯಳ ತಂದೆ’ ಎಂಬ ನೀಳ್ಗತೆಯನ್ನು (ಕನ್ನಡಕ್ಕೆ ಕನಕರಾಜ್ ಆರನಕಟ್ಟೆ) ಓದಿದಾಗ. ಅದೇ ಹೊತ್ತಲ್ಲಿ ಈ ಜಾತಿ ಎಂಬ ಅನಿಷ್ಟದಲ್ಲಿ ಸಿಕ್ಕು ನಲುಗಿದ ಜೀವಗಳು ಎದುರಿಸುವ ಅವಮಾನಗಳು, ಹಿಂಸೆಗಳು… ಕಡೆಗೆ ಒಂದಾದರೂ ಜೀವ ಹೋಗಲೇ ಬೇಕೆಂಬ ಅಲಿಖಿತ ನಿಯಮವಿದೆಯಾ ಎಂಬ ಪ್ರಶ್ನೆ ಕಾಡುವುದು ಸ್ವತಃ ಭಾಗ್ಯಳ ತಂದೆ ಜೀವ ಕಳೆದುಕೊಂಡಾಗ. ಪಳನಿಯಂತಹ ಅಪ್ಪ, ಭಾಗ್ಯಳಂತಹ ಮಗಳು ಈ ನೆಲದಲ್ಲಿ ಉರಿಯುತ್ತಲೇ ಇರುತ್ತಾರೆ… !
‘ಭಾಗ್ಯಳ ತಂದೆ’ ಎಂಬ ನೀಳ್ಗತೆ ಓದಿ ಮುಗಿಸಿದಾಗ, ತಂದೆಯೊಬ್ಬ ಮಗಳನ್ನು ಹೇಗ್ಹೇಗೆ ಸಾಯಿಸಬಹುದು, ಹೇಗೆ ರೇಪ್ ಮಾಡಬಹುದು ಎಂಬೆಲ್ಲ ಸಲಹೆಗಳನ್ನು ಕೇಳು ತ್ತಾನೆ, ಅವಳನ್ನು ಸಾಯಿಸಿಯೇ ಬಿಡುತ್ತೇನೆಂಬ ತೀರ್ಮಾನಕ್ಕೆ ಬರುವ ತಂದೆ ಮನೆಗೆ ಬಂದು ಮಗಳನ್ನು ಓಡಿಹೋಗಲು ಅವಕಾಶ ಮಾಡಿಕೊಟ್ಟು ಮಾರನೆ ದಿನ ಅಪ್ಪನೇ ಹೆಣವಾಗಿ ಬೀಳುವಾಗ ಒಂದು ವಿಷಾದ ಪ್ರಜ್ಞಾವಂತರೆಲ್ಲರನ್ನು ಕಾಡದೆ ಇರದು.
ಮಗಳು ಮಾಡಿದ ತಪ್ಪೇನು…? ಅಪ್ಪನ ಅಸಹಾಯಕತೆಗಳೇನು…? ಒಂದೇ ಊರಿನಲ್ಲಿರುವ ಮೇಲ್ಜಾತಿಗೆ ಸೇರಿದ ಹೆಣ್ಣುಮಗಳು ಭಾಗ್ಯ ಆ ಊರಿನ ಕೇರಿಯೊಂದರ ಕೆಳ ಜಾತಿಯವನನ್ನು ಪ್ರೀತಿಸಿದ್ದು. ಇದಕ್ಕಾಗಿ ಇಡೀ ಊರು ಧಗಧಗನೆ ಉರಿಯುತ್ತಿದೆ. ಕಡೆಗೆ ಊರಿನ ಜನ ಪಂಚಾಯ್ತಿ ಸೇರಿ ಹೆಣ್ಣುಮಗಳೊಬ್ಬಳ ಹೆತ್ತ ತಂದೆಯ ಎದುರಿಗೇ ಅವಳನ್ನು ಹೇಗ್ಹೇಗೆ ಕೊಲ್ಲಲು ಸಾಧ್ಯ ಎಂಬ ಸಲಹೆಗಳನ್ನು ಕೊಡುತ್ತಾ ಹೋಗುತ್ತಾರೆ. ಒಬ್ಬ ಹೇಳುತ್ತಾನೆ, ‘ಪಾಲಿಡಾಲ್ ಕೊಟ್ಟು, ಒಳಗೆ ಕೂಡಿಹಾಕಿ ಬೀಗ ಜಡಿದು ಬಿಡು. ಅವಳು ಎಷ್ಟು ಕೂಗಿದರೂ ಬಾಗಿಲು ತೆರೆಯಬೇಡ,’ ಮತ್ತೊಬ್ಬ ಹೇಳುತ್ತಾನೆ ‘ನೇಣು ಹಾಕಿ ಸಾಯಿಸು,’ ಮಗದೊಬ್ಬ ‘ಸುಟ್ಟು ಹಾಕಿಬಿಡು ಅವಳನ್ನು…’ ಹೀಗೆ ಒಬ್ಬೊಬ್ಬರು ಒಂದೊಂದು ಸಲಹೆ ಕೊಡ್ತಾ ಹೋಗುತ್ತಾರೆ. ಇನ್ನೂ ಕೆಲವರು ಇವಳಿಗೆ ಆ ಕೆಳಜಾತಿಯವನೇ ಬೇಕಾ? ಅಷ್ಟು ಚೂಲಾ ಇವಳಿಗೆ…ಎಂದು ಕೆಟ್ಟದಾಗಿ ಮಾತನಾಡುತ್ತಾರೆ.
ಇಷ್ಟೇ ಅಲ್ಲ, ಯಾವ್ಯಾವುದೋ ಊರಿನ ಕತೆಯನ್ನು ಅವನ ಮುಂದೆ ಹೇಳ್ತಾರೆ. ಅಲ್ಲಿ ಪ್ರಿಯಕರನನ್ನು ಕಂಬಕ್ಕೆ ಕಟ್ಟಿ, ಅವನ ಮುಂದೆ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ನಂತರ ಅವಳನ್ನು ಕ್ರೂರವಾಗಿ ಸಾಯಿಸಿದ ಕತೆಗಳನ್ನೆಲ್ಲ ಒಬ್ಬೊಬ್ಬರಾಗಿ ಹೇಳುತ್ತಾರೆ.
ಇದೆಲ್ಲವೂ ಅಪ್ಪ ಪಳನಿಯ ಮುಂದೆ ನಡೆದು, ಪಂಚೆ ಹಾಸಿ, ನಾಳೆ ಇಷ್ಟೊತ್ತಿಗೆ ಅವಳ ಹೆಣ ಸ್ಮಶಾನದಲ್ಲಿ ಬೆಂದಿರುತ್ತದೆ ಎಂದು ಪ್ರಮಾಣ ಮಾಡಿ ಪಂಚಾಯ್ತಿಯವರಿಗೆ ಮಾತು ಕೊಟ್ಟು ಪಂಚೆ ದಾಟಿ ಮನೆಗೆ ಬರುತ್ತಾನೆ. ಮನೆಗೆ ಬಂದವನೇ ಮಗಳು ಭಾಗ್ಯಳನ್ನು ಕರೆದು ಉಣ್ಣು ಎಂದು ತಟ್ಟೆಯನ್ನು ಮುಂದಿಡುತ್ತಾನೆ. ಮಗಳಿಗೆ ಭಯ, ಊಟದಲ್ಲಿ ವಿಷ ಹಾಕಿರಬಹುದಾ ಎಂದು. ಅವಳೂ ಮತ್ತವಳ ಮನೆಯವರೆಲ್ಲ ಪಂಚಾಯ್ತಿಯಲ್ಲಿ ನಡೆದ ಪ್ರತಿ ಮಾತುಗಳನ್ನೂ ಕೇಳಿಸಿಕೊಂಡಿದ್ದಾರೆ. ಇದು ಅವಳ ಕಡೆಯ ಊಟವಾಗಿರಬಹುದು ಎಂಬ ಭಯ ಭಾಗ್ಯಳಿಗೆ.
ಪೆರಿಯಸಾಮಿ ಮತ್ತು ಭಾಗ್ಯ ಇಬ್ಬರೂ ಓಡಾಡುವುದನ್ನು ನೋಡಿದ ಜನ ಅವನ ಮನೆಯನ್ನು ಉರಿಸಿದರು. ಇವಳಿಗೆ ಹೊಡೆದರು. ಶೆಗಣಿ ನೀರು ಕುಡಿಸಿ ಕೂದಲು ಕತ್ತರಿಸಿ ಕಳುಹಿಸಿದರು. ಸ್ವತಃ ಭಾಗ್ಯಳ ತಾಯಿ ಅವಳಿಗೆ ಚಪ್ಪಲಿ, ಪೊರಕೆಗಳಿಂದ ಸಾಯುವ ಹಾಗೆ ಹೊಡೆದಿದ್ದಳು. ಇಷ್ಟಾದರೂ ಭಾಗ್ಯ ಕದಲಲಿಲ್ಲ. ಮತ್ತೆಲ್ಲೋ ಅವರಿಬ್ಬರು ಸಿನಿಮಾಕ್ಕೆ ಹೋದದ್ದು, ಅವನ ಬೈಕಲ್ಲಿ ಇವಳು ಹೋಗಿದ್ದನ್ನು ನೋಡಿದ ಜನ ಇನ್ನು ತಡೆಯಲು ಸಾಧ್ಯವೇ ಇಲ್ಲ, ಇಂಥ ಒಬ್ಬ ಹೆಣ್ಣುಮಗಳು ಕೀಳು ಜಾತಿಯವನನ್ನು ಪ್ರೀತಿಸಿ ಮದುವೆಯಾದರೆ ನಾಳೆ ನಮ್ಮ ಜಾತಿಗೆ ಸೇರಿದ ಎಲ್ಲ ಹಣ್ಣುಮಕ್ಕಳು ಕೆಟ್ಟು ಹೋಗುತ್ತಾರೆ, ಅದಕ್ಕಾಗಿ ಅವಳನ್ನು ಸಾಯಿಸುವುದೇ ಶಿಕ್ಷೆ ಎಂದು ಹೆಂಗಸರು, ಗಂಡಸರೆನ್ನದೆ ಎಲ್ಲರೂ ಒಕ್ಕೊರಲಿನ ಅಭಿಪ್ರಾಯವನ್ನು ತಳೆದು ಅಪ್ಪ ಪಳನಿಗೆ ಒತ್ತಾಯಿಸುತ್ತಾರೆ. ಅವರ ಮುಂದೆ ಪ್ರಮಾಣ ಮಾಡಿ ಬಂದ ಅಪ್ಪ ಮಗಳಿಗೆ ಊಟ ನೀಡುತ್ತಾನೆ.
ಈ ಮೂರು ವರ್ಷ ಪಳನಿ ಮಗಳನ್ನು ನೋಡದೇ ಬೇರೆಬೇರೆ ರೀತಿಯಲ್ಲಿ ಅವಳಾಗೇ ಸತ್ತು ಹೋಗಲಿ ಎಂದು ಅನೇಕ ಮಾರ್ಗಗಳನ್ನು ಅವಳ ಮುಂದಿಟ್ಟು ಹೋಗಿರುತ್ತಾನೆ. ಹುರಿಹಗ್ಗವನ್ನು ಮತ್ತಷ್ಟು ಹುರಿಗೊಳಿಸಿ ಮನೆಯಲ್ಲಿಟ್ಟು ಕೆಲಸಕ್ಕೆ ಹೋಗಿರುತ್ತಾನೆ. ಆದರೆ ಅವಳು ಸಾಯುವುದಿಲ್ಲ. ಇಲಿ ಪಾಷಾಣ ತಂದುಕೊಟ್ಟಿದ್ದ, ಪಾಲಿಡಾಲ್ ತಂದುಕೊಟ್ಟಿದ್ದ. ಯಾವಾಗ ಅವಳು ಪೆರಿಯಸಾಮಿಯನ್ನು ಪ್ರೀತಿಸುತ್ತಾಳೆಂದು ತಿಳಿಯಿತೋ ಅಲ್ಲಿಂದ ಅವಳನ್ನು ಮಾತನಾಡಿಸುವುದೇ ಬಿಟ್ಟಿದ್ದ. ಆದರೆ ಅವಳಲ್ಲಿ ಬದುಕುವ ಆಸೆ ಬತ್ತುವುದಿಲ್ಲ. ಅವತ್ತು ಪಳನಿ ಸ್ವತಃ ತಾನೇ ಊಟವನ್ನು ಅವಳಿಗೆ ಕೊಟ್ಟಾಗ ಅವಳಲ್ಲಿ ಕಣ್ಣೀರು ಹರಿಯುತ್ತದೆ. ಇದು ತಾನು ತಿನ್ನುವ ಕಡೆಯ ಊಟ ಎಂದು ಅವಳಿಗೂ, ಅವಳ ಅಮ್ಮ, ಅಜ್ಜಿ, ತಂಗಿಗೂ ಅನಿಸಿ, ತಂಗಿ ಬಂದು ಊಟ ತಿನ್ನಬೇಡವೆಂದು ಹೇಳುತ್ತಾಳೆ. ಆದರೆ ಪಳನಿ ನಿಧಾನಕ್ಕೆ ಅವಳ ಬಳಿ ಬಂದು ಅವಳಿಗೆಂದು ಮಾಡಿಟ್ಟಿದ್ದ ಚಿನ್ನದ ಸರ, ಬಳೆಗಳನ್ನು ಕೊಟ್ಟದ್ದಲ್ಲದೆ, ಹೆಂಡತಿ, ಮತ್ತೊಬ್ಬ ಮಗಳ ಬಳಿ ಇರುವ ಒಡವೆಗಳನ್ನೂ ಸೇರಿಸಿ ಒಂದು ಬಟ್ಟೆಗಂಟು ಕಟ್ಟಿ ಅವಳಿಗೆ ಕೊಟ್ಟು, ‘ಈ ರಾತ್ರಿಯೇ ಎಲ್ಲಿಯಾದರೂ ಹೋಗಿಬಿಡು ಮಗಳೇ, ಅವನೊಡನೆ ಮಾತನಾಡು, ಎಲ್ಲಿರುತ್ತಾನೆಂದು ಕೇಳು, ಅಲ್ಲಿವರೆಗೆ ಬಿಟ್ಟುಬರುತ್ತೇನೆ. ಎಲ್ಲಿಯಾದರೂ ಚೆಂದವಾಗಿ ಬದುಕು. ಮುಂದೆ ನಾ ಸತ್ತರೆ ನೀ ಬರಬೇಡ, ನೀ ಸತ್ತರೆ ನಾ ಬರುವುದಿಲ್ಲ’ ಎಂದು ಹೇಳುವ ಮೂಲಕ ಅವನಲ್ಲಿನ ಒಬ್ಬ ತಂದೆ ಜಾಗೃತನಾಗುತ್ತಾನೆ.
ಆ ಮಾತು ಕೇಳಿದ ಭಾಗ್ಯ ಅದುವರೆಗೆ ಒಂದು ತೊಟ್ಟು ಕಣ್ಣೀರೂ ಹಾಕದವಳು, ಅಮ್ಮ ಚಪ್ಪಲಿ, ಪೊರಕೆ ತಗಂಡು ಹೊಡೆದಾಗ, ಊರವರು ಶೆಗಣಿ ನೀರು ಕುಡಿಸಿ, ಅವಳ ಕೂದಲನ್ನು ಕತ್ತರಿಸಿದಾಗ, ಅಷ್ಟೇ ಏಕೆ, ನೀ ಇದಕ್ಕಾಗಿ ತಾನೆ ಅವನ ಬಳಿ ಹೋಗುತ್ತಿರುವುದು, ನಾವೂ ಕೊಡ್ತೇವೆ ಬಾ ಎಂದು ಪಂಚೆ ಬಿಚ್ಚಿ ಅವಳ ಮುಂದೆ ಒಂದಷ್ಟು ಹುಡುಗರು ಬಂದು ನಿಂತಾಗಲೂ ಕಣ್ಣೀರು ಬತ್ತಿದಂತಿದ್ದ ಭಾಗ್ಯ, ಅಪ್ಪನ ಈ ನಡೆ ನೋಡಿ ಕಣ್ಣೀರು ಧಾರಾಕಾರವಾಗಿ ಸುರಿಸಿ ತಲೆತಲೆ ಚಚ್ಚಿಕೊಂಡು ರೋದಿಸುತ್ತಾಳೆ. ‘ಇಲ್ಲಪ್ಪ, ನಾನು ಓಡಿ ಹೋಗುವುದಿಲ್ಲ. ಈ ಜನ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಾನೇ ಸಾಯುತ್ತೇನೆ, ಅವರೆಂದ ಹಾಗೆ ನನಗೆ ವಿಷ ಕೊಟ್ಟುಬಿಡು’ ಎಂದು ಅಪ್ಪನ ಕಾಲು ಹಿಡಿದು ಬೇಡಿಕೊಳ್ಳುತ್ತಾಳೆ. ಆ ಹೊತ್ತು ಅವಳ ಪ್ರೇಮವೇ ಸತ್ತು ಮಗಳತನ ಅವಳನ್ನು ಜಾಗೃತವಾಗಿಸುತ್ತದೆ.
‘ಇದನ್ನೆಲ್ಲ ಅವನನ್ನು ಪ್ರೀತಿಸುವಾಗ ಯೋಚಿಸಬೇಕಾಗಿತ್ತು, ಇದೆಲ್ಲ ನೀನೇ ತಂದುಕೊಂಡದ್ದು, ಇದರಲ್ಲಿ ನನ್ನದೇನೂ ತಪ್ಪಿಲ್ಲ. ಮೊದಲು ನೀ ಹೊರಡು’ ಎನ್ನುವಾಗ ಕರೆಂಟೂ ಹೋಗುತ್ತದೆ. ‘ಒಳ್ಳೆದೇ ಆಯ್ತು, ಈ ಕತ್ತಲಲ್ಲಿ ಹೊರಡು, ಕಾಲ್ಗೆಜ್ಜೆಯನ್ನು ತೆಗೆದಿಡು. ಪಂಚೆಯನ್ನು ಮೈ ತುಂಬ ಸುತ್ತಿಕೋ. ಯಾರೊಬ್ಬರು ಎದುರಿಗೆ ಸಿಕ್ಕು ನಿನ್ನ ಮಾತನಾಡಿಸಿದರೂ ಧ್ವನಿ ಹೊರಡಿಸಬೇಡ’ ಎಂದು ಅವಳಿಗೆ ಹೇಳಿ ಅಲ್ಲಿಂದ ಹೊರಡಿಸುತ್ತಾನೆ. ಊರ ಹೊರಗಿನ ರಸ್ತೆಯಂಚಿನಲ್ಲಿ ಅವಳ ಪ್ರಿಯಕರನ ಸಂಬಂಧಿಯೊಬ್ಬ ಬೈಕ್ ನಿಲ್ಲಿಸಿಕೊಂಡಿರುತ್ತಾನೆ. ಮಗಳನ್ನು ಅದರಲ್ಲಿ ಕೂರಿಸಿ, ಅವನು ಮದ್ರಾಸ್ಗೆ ಹೋಗುವ ಬಸ್ಸನ್ನು ಹತ್ತಿಸುತ್ತಾನೆ. ಅಲ್ಲಿ ಅವಳು ಪೆರಿಯಸಾಮಿಯನ್ನು ಸೇರುವಷ್ಟರಲ್ಲಿ ಬೆಳಿಗ್ಗೆ ಎಂಟು ಗಂಟೆಯಾಗುತ್ತದೆಂದು ಖಾತ್ರಿಮಾಡಿಕೊಂಡು ಪಳನಿ ವಾಪಸು ಬರುತ್ತಾನೆ. ಬೆಳಿಗ್ಗೆ ಅವಳು ಅಲ್ಲಿ ತಲುಪಿರುತ್ತಾಳೆ. ಇಲ್ಲಿ ಪಳನಿ ಪಾಲಿಡಾಲ್ ಕುಡಿದು ಹೆಣವಾಗಿ ಗದ್ದೆಯಲ್ಲಿ ಬಿದ್ದಿರುತ್ತಾನೆ.
ಇದು ಕತೆಯ ಕೊನೆ!
ಕತೆ ಓದಿ ಮುಗಿಸುತ್ತಿದ್ದಂತೆ ನಮಗೇ ಉಸಿರುಕಟ್ಟಿದಂತೆ ಅನಿಸುತ್ತದೆ. ಅಥವಾ ಉಸಿರುಕಟ್ಟಿಕೊಂಡೇ ಓದಿ ಮುಗಿಸುತ್ತೇವೆ. ಪೂರ್ತಿ ಕತೆ ಸಂಭಾಷಣೆಯ ರೂಪದಲ್ಲೇ ಇದ್ದರೂ ಪ್ರತಿ ಘಟನೆಗಳೂ, ಸನ್ನಿವೇಶಗಳೂ ನಮ್ಮ ಮುಂದೆಯೇ ನಡೆಯುತ್ತಿದೆಯೇನೋ ಎಂದೆನಿಸುವಷ್ಟು ಸಹಜವಾಗಿದೆ. ಇದೊಂದು ಕತೆಯಾಗಿ ನಮಗೆ ಅನಿಸುವುದೇ ಇಲ್ಲ. ಬದಲಾಗಿ ನಮ್ಮ ಎದುರೇ ಇಂಥದ್ದೊಂದು ಘಟನೆ ನಡೆಯುತ್ತಿದೆ ಎನಿಸುವಷ್ಟು ನಾವು ಅದರಲ್ಲಿ ಒಳಹೊಕ್ಕಿಬಿಡುತ್ತೇವೆ. ಘಟನೆಗಳನ್ನು ಎಲ್ಲಿಯೂ ನವಿರಾಗಿ ಹೇಳದೆ, ಕಲಾತ್ಮಕವಾಗಿ ಚಿತ್ರಿಸದೆ ಹಸಿಹಸಿ ಕ್ರೌರ್ಯವನ್ನು ಅಷ್ಟೇ ಹಸಿಯಾಗೇ ಇಟ್ಟಿದ್ದಾರೆ ಲೇಖಕರು.
ಇದು ಖ್ಯಾತ ತಮಿಳು ಲೇಖಕ ಇಮೈಯಮ್ ಅವರ ಪೆತ್ತವನ್ ಎಂಬ ನೀಳ್ಗತೆಯನ್ನು ‘ಭಾಗ್ಯಳ ತಂದೆ’ ಎಂದು ಕನಕರಾಜ್ ಆರನಕಟ್ಟೆಯವರು ಕನ್ನಡಕ್ಕೆ ತಂದಿದ್ದು, ಇದನ್ನು ಅಹರ್ನಿಶಿ ಪ್ರಕಾಶನ ಹೊರತಂದಿದೆ. ಕತೆಯಲ್ಲಿ ಭಾಗ್ಯ, ಅವಳ ತಂದೆ ಪಳನಿ, ಅವಳ ಅಮ್ಮ, ಅಜ್ಜಿ ಮತ್ತು ತಂಗಿ ಇವು ಪ್ರಧಾನ ಪಾತ್ರಗಳು. ಈ ಬಾರಿಯ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ಇಮೈಯಮ್ ನೀಡಲಾಗಿದ್ದು, ಅವರಿಗೆ ಪ್ರಶಸ್ತಿ ಪ್ರದಾನ ಸಂದರ್ಭದಲ್ಲೇ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಗಿತ್ತು.
ಕರ್ನಾಟಕ ಲೇಖಕಿಯರ ಸಂಘ ಮತ್ತು ರಾಷ್ಟ್ರ ಕವಿ ಕುವೆಂಪು ಟ್ರಸ್ಟ್ ಸಹಯೋಗದಲ್ಲಿ ಕುಪ್ಪಳಿಯಲ್ಲಿ ‘ಹೆಣ್ಣಕಣ್ಣೋಟದಲ್ಲಿ ಕುವೆಂಪು ಸಾಹಿತ್ಯ’ ದ ಕುರಿತು ಮೂರುದಿನದ ಕಮ್ಮಟ ಏರ್ಪಡಿಸಲಾಗಿದ್ದ ಸಂದರ್ಭದಲ್ಲಿ ಇಮೈಯಮ್ ಮತ್ತು ಲೇಖಕಿಯರೊಂದಿಗೆ ಒಂದು ಸಂವಾದ ಕಾರ್ಯಕ್ರಮವೂ ಇತ್ತು. ಆಗ ‘ಭಾಗ್ಯಳ ತಂದೆ’ ಕತೆ ಒಂದು ಮರ್ಯಾದಾ ಹತ್ಯೆಯ ಕುರಿತಾಗಿ ಇರುವಂಥದ್ದು. ನಿಜವಾಗಿ ತಮಿಳಿನಲ್ಲಿ ಇದನ್ನು ಅಹಂಕಾರದ ಹತ್ಯೆ ಎನ್ನಲಾಗುತ್ತದೆ. ಇದು ಸ್ವತಃ ನನ್ನ ಹೆಂಡತಿಯ ಊರಿನಲ್ಲಿ ನಡೆದ ಘಟನೆ. ಅಲ್ಲಿ ಜಾತಿಯ ಕಾರಣಕ್ಕಾಗಿ ಇಬ್ಬರನ್ನೂ ಬೇರೆ ಮಾಡಲು ಸಾಕಷ್ಟು ಹೊಡೆದಾಟ ಬಡಿದಾಟಗಳು ನಡೆದಿದ್ದವು. ನಂತರ ಅವರ ಕಿವಿಯಲ್ಲಿ ಆಸಿಡ್ ಹಾಕಿ ಸುಟ್ಟು ಕೊಂದಿದ್ದರು. ಅದು ನನ್ನನ್ನು ತುಂಬ ಕಾಡಿದ ಘಟನೆ. ಆದರೆ ನನ್ನ ಕತೆಯಲ್ಲಿ ಹಾಗೆ ಕೊಲ್ಲಿಸಲಿಲ್ಲ. ಯಾಕೆಂದರೆ ಕತೆಯೊಂದು ಜನರ ಮೇಲೆ ಪ್ರಭಾವ ಬೀರುವ ಕಾರಣಕ್ಕೆ, ಕೊಲ್ಲಿಸುವುದಕ್ಕಿಂತ ಒಬ್ಬ ಲೇಖಕನಾಗಿ ಅವರಿಬ್ಬರನ್ನೂ ಬದುಕಲು ಅವಕಾಶ ಮಾಡಿಕೊಟ್ಟೆ’ ಎನ್ನುವ ಮೂಲಕ ಲೇಖಕರ ಜವಾಬ್ದಾರಿ ಏನು ಎಂಬುದನ್ನೂ ಇಮೈಯಮ್ ಸೂಚ್ಯವಾಗಿ ತಿಳಿಸಿಕೊಟ್ಟಿದ್ದರು.
ಅವರು ಕಿವಿಯಲ್ಲಿ ಆಸಿಡ್ ಸುರವಿ ಸುಟ್ಟು ಹಾಕಿದ್ದರು ಎನ್ನುವುದನ್ನು ಕೇಳುವ ನಮ್ಮ ಕಿವಿ ಉರಿಯುತ್ತದೆ. ಅಲ್ಲಿ ಒಂದಿಡೀ ಕುಟುಂಬ ಎದುರಿಸಿದ ಅವಮಾನಗಳು ಇಲ್ಲಿ ನಮ್ಮ ಹೊಟ್ಟೆ ಉರಿಸುತ್ತದೆ.
ನಿಜ, ಈ ನೆಲದಲ್ಲಿ ಜಾತಿ ಎಂಬ ಅನಿಷ್ಟ ಪದ್ಧತಿಯಲ್ಲಿ ನಲುಗಿ, ಕಳೆದುಕೊಂಡ ಜೀವಗಳಿಗೆ ಲೆಕ್ಕವಿಲ್ಲ. ಮರ್ಯಾದೆಯ ಮುಸುಕಿನಲ್ಲಿ ಸ್ವತಃ ತಂದೆತಾಯಿಗಳೇ ಹೆತ್ತ ಮಕ್ಕಳನ್ನು ಸಾಯಿಸುವುದೂ ಹೊಸತಲ್ಲ. ಮೊನ್ನೆಮೊನ್ನೆ ಮಹಾರಾಷ್ಟ್ರದಲ್ಲಿ ಹೆತ್ತ ಮಗಳನ್ನೇ ಅಪ್ಪ, ಚಿಕ್ಕಪ್ಪ, ಸಹೋದರರು ಮಗಳು ಬೇರೆ ಜಾತಿಯವನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಅವಳನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಸುಟ್ಟು ಹಾಕಿದ ಘಟನೆ ಇನ್ನೂ ಹಸಿಯಾಗಿದೆ. ಮಂಡ್ಯದಲ್ಲಿ ಪ್ರೀತಿಸಿದ್ದಾರೆ ಎಂಬ ಕಾರಣಕ್ಕೆ ಹುಡುಗನ ಕಣ್ಣುಗಳನ್ನೇ ಕಿತ್ತ ಘಟನೆ ವರದಿಯಾಗಿದೆ. ದೆಹಲಿಯ ಅರುಷಿ ಪ್ರಕರಣ ಇನ್ನೂ ಹಸಿಯಾಗೇ ಇದೆ. ಜಾತಿಯ ಕಾರಣಕ್ಕಾಗಿ ಇಂಥ ಮರ್ಯಾದಾಗೇಡು ಹತ್ಯೆಗಳು ನಡೆಯುತ್ತಲೇ ಇವೆ. ಪ್ರತಿ ಘಟನೆ ನಡೆದಾಗಲೂ ಛೇ…ಹೀಗಾಗಬಾರದಿತ್ತು ಎಂಬ ಸಣ್ಣದೊಂದು ನಿಟ್ಟುಸಿರು ನಮ್ಮಿಂದ ಹೊರ ಬರುತ್ತದೆ. ಜೊತೆಗೆ ಅವರಿಗೆ ಶಿಕ್ಷೆಯಾದಾಗ ಸರಿಯಾಯಿತು ಎಂದೂ ಹೇಳುತ್ತೇವೆ. ಹೀಗೆ ಪ್ರತಿ ಪ್ರಕರಣದ ನಂತರವೂ ಒಂದಷ್ಟು ಶಿಕ್ಷೆಯಾಗುತ್ತದೆ, ಒಂದಷ್ಟು ಪರಿತಾಪವಿರುತ್ತದೆ. ಆದರೆ ಈ ಮರ್ಯಾದಾಗೇಡು ಹತ್ಯೆಗಳು ಕೊನೆಗೊಳ್ಳುವುದಿಲ್ಲ. ಪಳನಿಯಂತಹ ಅಪ್ಪ, ಭಾಗ್ಯಳಂತಹ ಮಗಳು ಈ ನೆಲದಲ್ಲಿ ಉರಿಯುತ್ತಲೇ ಇರುತ್ತಾರೆ…!
- ಭಾರತಿ ಹೆಗಡೆ

(ಭಾಗ್ಯಳ ತಂದೆ – ತಮಿಳು ಮೂಲ – ಇಮೈಯಮ್, ಕನ್ನಡಕ್ಕೆ – ಕನಕರಾಜ್ ಆರನಕಟ್ಟೆ, ಪ್ರ: ಅಹರ್ನಿಶಿ ಪ್ರಕಾಶನ ಶಿವಮೊಗ್ಗ, ಪುಟಗಳು – 52, ಬೆಲೆ – 65 ರೂ.,
ಪ್ರತಿಗಳಿಗೆ ಸಂಪರ್ಕಿಸಿ – 9449174662/ 9448628511)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Hrudaya vidravaka kathe. Dhanyavadagalu.