ಮಹಿಳಾ ಚಿಂತನೆಯ ಕಲ್ಪನಾ ಲಾಜ್ಮಿ
ಭಾನುವಾರ ಮೃತರಾದ ಚಿತ್ರ ನಿರ್ದೇಶಕಿ ಕಲ್ಪನಾ ಲಾಜ್ಮಿ ಹಿಂದಿ ಚಿತ್ರರಂಗದಲ್ಲಿ ಹೊಸ ಅಲೆಯ ಸಿನಿಮಾ, ಮಹಿಳಾಪರ ದೃಷ್ಟಿಕೋನಗಳಿಂದ ಹೆಸರಾದವರು.
50ರ ದಶಕದ ಖ್ಯಾತ ಚಿತ್ರ ನಿರ್ದೇಶಕ ಗುರುದತ್ ಅವರ ಸಹೋದರಿ ಲಲಿತಾ ಲಾಜ್ಮಿ ಮಗಳಾದ ಕಲ್ಪನಾ ಲಾಜ್ಮಿ ಕಮರ್ಷಿಯ್ ಸಿನಿಮಾದ ರಂಗು,ರಂಗಿನ ಜಗತ್ತಿನಲ್ಲಿ ಸುಲಭವಾಗಿ ಹೆಸರು ಗಳಿಸಬಹುದಿತ್ತು. ಆದರೆ, ಅವರಿಗೆ ತಮ್ಮ ಹಾದಿ ಸ್ಪಷ್ಟವಿತ್ತು. ಹೊಸ ಅಲೆಯ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಗೆ ಸಹಾಯಕಿಯಾಗಿ 70ರ ದಶಕದಲ್ಲಿ ವೃತ್ತಿಜೀವನ ಆರಂಭಿಸಿದರು.
1986ರಲ್ಲಿ ತೆರೆಕಂಡ ‘ಏಕ್ ಪಲ್’ ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರ. ಶಬನಾ ಆಜ್ಮಿ, ನಸಿರುದ್ದೀನ್ ಷಾ, ಫಾರೂಕ್ ಶೇಖ್ ಅಭಿನಯದ ಈ ಚಿತ್ರ ಆ ಕಾಲದಲ್ಲಿ ಹೊಸದು ಎನ್ನುಬಹುದಾಗಿದ್ದ ವಿವಾಹಬಾಹಿರ ಸಬಂಧದ ಕಥೆಯನ್ನು ಒಳಗೊಂಡಿತ್ತು. ಬಣ್ಣ, ಬಣ್ಣದ ಡ್ರೆಸ್‍ಗಳನ್ನು ತೊಟ್ಟುಕೊಂಡು ನಾಯಕನ ಜೊತೆ ಮರ ಸುತ್ತುವ ಪಾತ್ರ ಮಾಡುತ್ತಿದ್ದ ನಾಯಕಿಯರನ್ನೇ ಬಿಂಬಿಸುತ್ತಿದ್ದ ಕಮರ್ಷಿಯಲ್ ಚಿತ್ರಗಳ ನಡುವೆ ‘ಏಕ್ ಪಲ್’ನಲ್ಲಿ ನಾಯಕಿಯನ್ನು ದಿಟ್ಟವಾಗಿ ಚಿತ್ರಿಸಲಾಗಿತ್ತು.
1993ರಲ್ಲಿ ಮಹಾಶ್ವೇತಾ ದೇವಿ ಅವರ ಕಥೆ ಆಧರಿಸಿ ತೆಗೆದ ‘ರುಡಾಲಿ’ಯಲ್ಲಿ ನಾಯಕಿಯ ಪಾತ್ರ ವಹಿಸಿದ್ದ ಡಿಂಪಲ್ ಕಪಾಡಿಯಾ ಅವರಿಗೆ ರಾಷ್ಟ್ರಪ್ರಶಸ್ತಿ ಅರಸಿಕೊಂಡು ಬಂತು. ಹೊಟ್ಟೆಪಾಡಿಗಾಗಿ ಸಾವಿನ ಮನೆಯಲ್ಲಿ ಅಳುವ, ಗೋಳಾಡುವ ರುಡಾಲಿಯರ ಕಥೆಯನ್ನು ಈ ಚಿತ್ರ ಹೊಂದಿತ್ತು. ಪ್ರಸಿದ್ಧ ಸಂಗೀತಗಾರ, ಸಂಗೀತ ನಿರ್ದೇಶಕ ಭೂಪೇನ್ ಹಜಾರಿಕಾ ಚಿತ್ರಕ್ಕೆ ಸಂಗೀತ ನೀಡಿದ್ದರು. ಈ ಚಿತ್ರದ ‘ದಿಲ್ ಹೂಂ ಹೂಂ ಕರೆ…’ ಗೀತೆ ಸಂಗೀತಪ್ರಿಯರ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿದೆ.
1997ರಲ್ಲಿ ಕಲ್ಪನಾ ನಿರ್ದೇಶಿಸಿದ್ದ ‘ಧರ್ಮಿಯಾನ್’ನಲ್ಲಿ ತೃತೀಯಲಿಂಗಿಯೊಬ್ಬರ ಕಥೆಯನ್ನು ಹೇಳಲಾಗಿತ್ತು. 2001ರಲ್ಲಿ ಬಿಡುಗಡೆಯಾದ ‘ದಮನ್’ನಲ್ಲಿ ಕೌಟುಂಬಿಕ ಕ್ರೌರ್ಯದ ಕಥೆಯನ್ನು ಎಳೆಎಳೆಯಾಗಿ ಚಿತ್ರಿಸಲಾಗಿತ್ತು. ಈ ಸಿನಿಮಾದ ನಾಯಕಿ ರವೀನಾ ಟಂಡನ್‍ಗೆ ಆ ವರ್ಷ ರಾಷ್ಟ್ರ ಪ್ರಶಸ್ತಿ ದೊರಕಿತ್ತು.
ಸದಾ ತಾವಿರುವ ಕಾಲಘಟ್ಟಕ್ಕಿಂತ ಮುಂದೆ ಯೋಚಿಸುತ್ತಿದ್ದ ಕಲ್ಪನಾ ಲಾಜ್ಮಿ ತಮ್ಮ ಮಹಿಳಾಪರ, ಮಾನವೀಯ ದೃಷ್ಟಿಕೋನಕ್ಕೆ ಹೆಸರಾದವರು. ಭೂಪೇನ್ ಹಜಾರಿಕಾ ಅವರ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅವರು ಹಜಾರಿಕಾ ಅವರ ಸಂಗಾತಿಯೂ ಆಗಿದ್ದರು.
ನಾಲ್ಕೈದು ವರ್ಷಗಳಿಂದ ಮೂತ್ರಪಿಂಡದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು ಭಾನುವಾರ ನಸುಕಿನಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 64 ವರ್ಷಗಳಾಗಿದ್ದವು.
ಗಟ್ಟಿಕಥೆಯ, ವಿಭಿನ್ನ ಚಿಂತನೆಯ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿರುವ ಈ ಕಾಲದಲ್ಲಿ ಕಲ್ಪನಾ ಲಾಜ್ಮಿ ಅವರ ಚಿಂತನೆಗಳಿಗೆ ಮರುಹುಟ್ಟು ನೀಡುವ ಅಗತ್ಯವಿದೆ.
ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.