ಮರಳಮಡಕೆ- ತೆಲುಗು ಮೂಲ : ಓಲ್ಗಾ

ವಸಂತಕಾಲದ ಅರಣ್ಯ. ಎಷ್ಟೊಂದು  ಬಣ್ಣ ! ಎಷ್ಟೊಂದು ಪರಿಮಳ ! ಅಲ್ಲೊಂದು ಇಲ್ಲೊಂದರಂತಿದ್ದ ಮಾವಿನ ಮರಗಳೊಳಗಿಂದ  ತೇಲಿಬರುತ್ತಿದ್ದ ನಿಶೆಗೊಳಿಸುವ ಸುವಾಸನೆ !ಕೋಗಿಲೆಗಳ ಸುಸ್ವರಗಾನ !
 ಸೀತೆ ಮೊದಲ ಸಲ ವಸಂತಕಾಲದ ಮಹಿಮೆಯನ್ನು ಕಣ್ಣಾರೆ ಕಾಣುತ್ತಿದ್ದಾಳೆ. ಮನಸಾರೆ ಅನುಭವಿಸುತ್ತಿದ್ದಾಳೆ. ಅಂತಹ ದಿನಚರಿಯ ಒಂದು ಸುಪ್ರಭಾತದ ಸಮಯದಲಿ ಹತ್ತಿರದ ಆಶ್ರಮದಲ್ಲಿದ್ದ ಹೆಂಗಸರೆಲ್ಲಾ ಗುಂಪುಗೂಡಿ ಎಲ್ಲಿಗೋ ಹೋಗುತ್ತಿರುವುದನ್ನು ನೋಡಿದಳು ಸೀತೆ. ಅವರೆಲ್ಲಾ ಹೀಗೆ ಒಂದೇಸಮನೆ ಎಲ್ಲಿಗೆ ಹೋಗುತ್ತಿದ್ದಾರೆಂಬ ಕುತೂಹಲ ಮೂಡಿ ಆ ಹೆಂಗಳೆಯರನ್ನು ಕರೆದು ಕೇಳಬೇಕೆನ್ನುವಷ್ಟರಲ್ಲಿ ಕೂಗಳೆತೆಗೆ ಸಿಗದಂತೆ  ದಾಟಿಬಿಟ್ಟರು ಅವರು. ಲಕ್ಷ್ಮಣನಿಗೆ ಕೇಳಿದರೆ ತನಗೂ ಗೊತ್ತಿಲ್ಲವೆಂದು, ಸಂಜೆಗೆ ಅವರು ಮತ್ತೆ ಮರಳುವ ವೇಳೆಗೆ ಕೇಳಿ ತಿಳಿಯಬಹುದೆಂದೂ ಹೇಳಿದ. ಆದರೆ  ಸಂಜೆ ಅವರು ಯಾವಾಗ ಮರಳಿದಿರೋ ಏನೋ ಗೊತ್ತಾಗಲೇಯಿಲ್ಲ. ಗುಂಪುಗೂಡಿ ಹೋದವರು ಒಬ್ಬೊಬ್ವರಾಗಿಯೇ ಹಿಂದಿರುಗಿರಬೇಕು. ಮರುದಿನದ ಬೆಳಗು  ಕೆಲಸಗಳೆಲ್ಲ ಮುಗಿದ ಮೇಲೆ, ರಾಮ-ಲಕ್ಷ್ಮಣರಿಬ್ಬರೂ ಅಡವಿಯೊಳಗೆ ಹೋದ ಬಳಿಕ, ಸೀತೆ ಹತ್ತಿರದಲ್ಲಿದ್ದ ಶಾಂತೆಯ ಆಶ್ರಮಕ್ಕೆ ಹೊರಟಳು.
ಆಶ್ರಮ ತಲುಪಿದ್ದೇ ತಡ, ಆಚ್ಚರಿಗೊಂಡಳು ಸೀತೆ. ಈ ಹಿಂದೆ ಶಾಂತೆಯ ಕುಟೀರದಲ್ಲಿರದ ಎರಡು ಅಂದವಾದ ಶಿಲ್ಪಗಳು, ಬಣ್ಣದ  ಚಿತ್ರ ಬರೆದಿದ್ದ ಆಕರ್ಷಣೀಯವಾದ ಐದಾರು ಮಡಕೆಗಳು, ಈ ಎಲ್ಲವನ್ನೂ ಸುಂದರವಾಗಿ ಪೇರಿಸಿಡಲಾಡಲಾಗಿತ್ತು. ಸೀತೆ ಅವುಗಳನ್ನು ನೋಡಿ ಆನಂದಿಸುತ್ತಾ “ಇವು ಎಲ್ಲಿಯವು ಶಾಂತಾ ? ಮೊನ್ನೆ ನಾನು ಬಂದಾಗ ಇರಲಿಲ್ಲವಲ್ಲ !” ಎಂದು ಕೇಳಿದಳು .   “ನಿನ್ನೆ ನಾವು ಗೆಳತಿಯರೆಲ್ಲಾ ಸೇರಿ ರೇಣುಕಾದೇವಿಯ ಶಿಲ್ಪಾಲಯಕ್ಕೆ ಹೋಗಿದ್ದೆವಲ್ಲಾ, ನನಗೆ ಇಷ್ಟವಾದವುಗಳನ್ನೆಲ್ಲಾ ಅಲ್ಲಿಂದ ತಗೆದುಕೊಂಡು ಬಂದೆ.”   “ರೇಣುಕಾದೇವಿಯಾ ?” ಎಂದಳು ಸೀತೆ, ಆಕೆ ಯಾರೆಂದು ತನಗೆ ಗೊತ್ತಿರದ ದನಿಯಲ್ಲಿ.   “ನಿನಗೆ ಗೊತ್ತಿಲ್ಲ ಸೀತಾ. ನೀವಿಲ್ಲಿಗೆ ಬಂದು ತುಂಬಾ ದಿನಗಳೇನೂ  ಆಗಲಿಲ್ಲವಲ್ಲ. ಇಲ್ಲಿಂದ ಅರ್ಧತಾಸಿನ ಹಾದಿ. ಅಲ್ಲಿ ರೇಣುಕಾದೇವಿಯ ಶಿಲ್ಪಾಲಯವಿದೆ. ಪ್ರತಿ ವರ್ಷ ನಾವೆಲ್ಲಾ ಹೋಗಿ ನಮಗೆ ಬೇಕಾದ ಮಡಕೆ, ಕಲ್ಲುಪಾತ್ರೆ, ಶಿಲ್ಪಗಳನ್ನೆಲ್ಲಾ ಅಲ್ಲಿಂದ  ತಂದುಕೊಳ್ಳುತ್ತೇವೆ. ನಿನ್ನೆ ಹೋಗಿದ್ದೆವು. ನಿನ್ನನ್ನೂ ಕರೆಯಬೇಕಿತ್ತು.” ಎಂದಳು ಶಾಂತೆ.
“ರೇಣುಕಾದೇವಿ ಎಂಬಾಕೆಯ ಹತ್ತಿರ ಇಂತಹ ವಿದ್ಯೆ ಇದೆಯಾ ?” ಅಚ್ಚರಿಯಿಂದ ಕೇಳಿದಳು ಸೀತೆ. “ಹೌದು. ಇವೇನು ಮಹಾ ! ಇದಕ್ಕೂ ಮಿಗಿಲಾದ ಇನ್ನೂ ಅದೆಷ್ಟೋ ಶಿಲ್ಪಗಳಿವೆ. ಶಿಲ್ಪಕಲೆಯ ರಹಸ್ಯಗಳೆಲ್ಲವೂ ಆಕೆಗೆ ಪರಿಚಿತ. ಒಮ್ಮೆ ಕೆಲಸ ಆರಂಭಿಸಿದರೆ ಸಾಕು ಇನ್ನು ತಪಸ್ಸಿನಲ್ಲಿ ಮುಳುಗಿದಂತೆಯೇ. ತಪಸ್ಸಿನಲ್ಲಿ ಸಹ ಈ ರೀತಿ ಲೀನವಾಗುವ ಋಷಿಗಳು ವಿರಳವೆಂದೇ ಹೇಳಬೇಕು. ನೀನು ನೋಡುತ್ತಾ ಇರು ಸೀತಾ, ನಾನೆರಡು ಕೊಡ ನೀರು ತುಂಬಿಕೊಂಡು ಬೇಗನೇ ಬರುತ್ತೇನೆ” ಎನ್ನುತ್ತಾ ಶಾಂತೆ ಹೊರಗೆ ಹೋದಳು.  ‘ರೇಣುಕಾದೇವಿ ‘- ಆ ಹೆಸರು ಸೀತೆಯ ಮನದೊಳಗೆ  ಯಾವುದೋ ಹಳೆಯ ನೆನಪನ್ನು ಕೆದಕಿತು.
ಈ ಹೆಸರು ತನಗೆ ಈ ಮೊದಲು ಪರಿಚಿತವೇ. ಆದರೆ ಎಂದು ? ಎಲ್ಲಿ ? ಸೀತೆಗೆ ತನ್ನ ಸ್ವಯಂವರದ ಸಂದರ್ಭ ನೆನಪಾಯಿತು.  ಸ್ವಯಂವರದಲ್ಲಿ ರಾಮನು ಶಿವಧನುಸ್ಸನ್ನು ಮುರಿದ ಬಳಿಕ ತಾನು ಆತನ ಕೊರಳಿಗೆ ಹೂಮಾಲೆಯನ್ನು ಹಾಕಿದಳು. ಆನಂತರ ಮರಳಿ ಅಂತಃಪುರದೊಳಗೆ ಹೋಗುತ್ತಿರುವಾಗ ಉಂಟಾದ ಕಲ್ಲೋಲವು ನೆನಪಾಯಿತು ಸೀತೆಗೆ.
 ಯಾರಾತ, ಕೋಪದಿಂದ ಸಿಡಿ ಮಿಡಿಗೊಳ್ಳುತ್ತಾ ಅಗ್ನಿಪರ್ವತದಂತೆ ನುಗ್ಗಿ ಬಂದವನು ? ರಾಮನ ಮೇಲೆ ಪ್ರಳಯ ಕಾಲದ ಮೇಘದಂತೆ ಮುರಿದು ಬಿದ್ದವನು ?
 ಅಂತಃಪುರದ ಹೆಂಗಸರು ಸೀತೆಯನ್ನು ಒಳಗೆ ಕರೆದೋಯ್ದರು.  ಅಲ್ಲಿ ಅವರಾಡಿದ ಮಾತುಗಳನ್ನು ನೆನಪಿಸಿಕೊಳ್ಳಲಿಕ್ಕೆ ಈಗ ಪ್ರಯತ್ನಿಸಿದಳು ಸೀತೆ.
 ‘ಆತ ಮಹಾವೀರನಾದ ಪರಶುರಾಮ. ಈ ಭೂಮಂಡಲದ ಮೇಲಿನ  ಕ್ಷತ್ರಿಯರನ್ನೆಲ್ಲಾ ಕೊಂದುಬಿಡುತ್ತೇನೆಂದಿದ್ದ ಪರಶುರಾಮನು ಈತನೇ-ಈಗೇನು ನಡೆಯುವುದೋ ? ಶ್ರೀರಾಮಚಂದ್ರನನ್ನು ಏನು ಮಾಡುತ್ತಾನೋ ಈ ಬ್ರಾಹ್ಮಣನು ?’ ಸಖಿಯ ಮಾತುಗಳಿಗೆ ತನ್ನ ಮನಸ್ಸು ಆಗ ಅದೆಷ್ಟು ಕಂಪಿಸಿತ್ತು !
 ‘ಮಹಾವೀರನಷ್ಟೇಯಲ್ಲ. ಕಟುಕನೂ ಕೂಡ. ತನ್ನ ತಾಯಿ ರೇಣುಕಾದೇವಿಯ ಶಿರಸನ್ನು ಕಡಿದುಹಾಕಲೂ ಹಿಂದೆಜ್ಜೆ ಹಾಕದ ಪರಮ ಕ್ರೂರನಾತ.’ ಮುತ್ತೈದೆಯೊಬ್ಬಳು ಆಕ್ರೋಶಗೊಳ್ಳುತ್ತಾ ಅಂದ ಆ ಮಾತಿಗೆ ತಾನು ಮತ್ತಷ್ಟು ಕಂಪಿಸಿದ್ದಳು. ಹೌದು, ತನ್ನ ಮುಖಭಾವವನ್ನು ಗಮನಿಸಿ ಅಲ್ಲಿದ್ದವರು ಸುಮ್ಮನಾದರು. ತನ್ನನ್ನು ರಮಿಸಲು ಶುರುಮಾಡಿದರು. ರಾಮನನ್ನು ನೆನೆದು ದುಃಖದಲ್ಲಿ ತಾನು ಕಣ್ಣೀರು ಸುರಿಸತೊಡಗಿದಳು. ಆತನನ್ನು ನೋಡಿದ್ದ ಕೂಡಲೇ ತನ್ನಲ್ಲಿ ಮೂಡಿದ್ದ ಪರವಶ ಭಾವ, ಆತನ ಪ್ರತಾಪವನ್ನು ಕಂಡು ತನಗಾದ ಗರ್ವಾನುಭೂತಿ, ಕೆಲ ಕ್ಷಣಗಳಲ್ಲಿಯೇ, ಇನ್ನು ಮೇಲೆ ಆತನೇ ಸರ್ವಸ್ವವೆಂದು ತನ್ನೊಳಗೆ ಕಲುಗಿದ ಭಾವನೆ-ಇವುಗಳಿಗೆಲ್ಲಾ ಅದೆಲ್ಲಿ ತಡೆಯುಂಟಾಗಬಹುದೆಂಬ ಭಯ. ರಾಮನ ಪ್ರತಾಪದ ಬಗ್ಗೆ ನಂಬಿಕೆಯಿಲ್ಲವೆಂದಲ್ಲ. ಇವರೆಲ್ಲಾ ಹೇಳುತ್ತಿದ್ದ ಪರಶುರಾಮನ ಪೌರುಷವು ತನಗೆ ಕಣ್ಣೀರು ತರಿಸುತ್ತಿತ್ತು. ಹೆತ್ತತಾಯಿಯನ್ನೇ ಕೊಲ್ಲಲು ಮುಂದಾದನಂತೆ. ಸೀತೆಗೆ ತಲೆ ತಿರುಗಿತ್ತು.
ಇಷ್ಟರೊಳಗೆ  ಮತ್ತೊಂದಿಬ್ಬರು ಸಖಿಯರು ಓಡುತ್ತಾ ಬಂದರು.   ‘ಪರಶುರಾಮನು ಶಾಂತಗೊಂಡಿದ್ದಾನೆ. ರಾಮನ ಪ್ರತಾಪವನ್ನು ಒಪ್ಪಿಕೊಂಡಿದ್ದಾನೆ. ಇಬ್ಬರಿಗೂ ಸ್ನೇಹವಾಗಿದೆ. ಏನೇನೋ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.’ ಆ ಸುದ್ದಿಯಿಂದಾಗಿ ತನಗೆ ಹೋದ ಪ್ರಾಣ ಮರಳಿ ಬಂದಂತಾಯಿತು. ಆನಂತರ  ತಂದೆಯು ಬಂದು ತನ್ನೊಡನೆ ಪರಾಮರ್ಶಿಸಿ, ನಡೆದದ್ದೆಲ್ಲವೂ ಒಳ್ಳೆಯದಕ್ಕೆಂದು, ರಾಮನ ಪ್ರತಾಪವು ಸರಿಸಾಟಿಯಿಲ್ಲದೆ ನಿರೂಪಿಸಲ್ಪಟ್ಟಿದೆಯೆಂದು, ಅಂತಹ ವೀರನನ್ನು ಗಂಡನಾಗಿ ಪಡೆದ ತನ್ನ ಮಗಳೇ ಅದೃಷ್ಟವಂತೆಯೆಂದು ಆಶೀರ್ವಾದಿಸಿ ಹೋಗಿದ್ದ.  ಮದುವೆಯ ಸಂಭ್ರಮವು ಕಡಿಮೆಯಾದ ಕೆಲವು ತಿಂಗಳುಗಳ ಬಳಿಕ ವಿವಾಹ ವಿಶೇಷತೆಗಳನ್ನು ನೆನಪಿಸಿಕೊಳ್ಳುತ್ತಿರುವಾಗ ಪರಶುರಾಮನ ಬಗ್ಗೆ  ತಾನು ರಾಮನ ಬಳಿ ಕೇಳಿದ್ದಳು. ರಾಮನು ಪರಶುರಾಮನನ್ನು ಹೊಗಳುವುದರಲ್ಲೇ ಮುಳುಗಿಹೋಗಿದ್ದನು.
‘ಕ್ಷತ್ರಿಯರನ್ನೇ ಸಂಹರಿಸಿದವನನ್ನು ಈ ರೀತಿ ಹೊಗಳುತ್ತಿದ್ದೀರಲ್ಲಾ!’ ಎಂದಿದ್ದಳಾಕೆ ಆ ದಿನ.   ‘ಆತ ಸಂಹರಿಸಿದ ಕ್ಷತ್ರಿಯರು ಆರ್ಯ ಧರ್ಮಗಳನ್ನು ಪಾಲಿಸದವರು. ಈ ಉತ್ತರಪಥದಲ್ಲೆಲ್ಲಾ ಆತ ಆರ್ಯ ಧರ್ಮವನ್ನು ಯಾರೂ ಸರಿಸಾಟಿಯಿಲ್ಲದಂತೆ ಸ್ಥಾಪಿಸಿದ್ದಾನೆ. ನನ್ನ ನಿಲುವೇನೆಂದು  ತಿಳಿದುಕೊಳ್ಳಲು ಬಂದಿದ್ದಾನೆ. ಶಿವಧನುರ್ಭಂಗವಗೈದ ನಾನು ಆರ್ಯ ಧರ್ಮಗಳನ್ನು ಬೆಳೆಸಿದರೆ ಚೆನ್ನಾಗಿರುತ್ತದೆ ಎನ್ನುವುದು ಆತನ ಯೋಚನೆ. ನಾನು ಅರ್ಯಧರ್ಮಗಳನ್ನು ಶಿರಸಾವಹಿಸಿ ಪಾಲಿಸುವುದನ್ನು ತಿಳಿದು ಸಂತೋಷಗೊಂಡಿದ್ದಾನೆ. ನನ್ನನ್ನು ತನ್ನ ವಾರಸುದಾರನನ್ನಾಗಿ  ಸ್ವೀಕರಿಸಿ ದಕ್ಷಿಣ ಪಥಕ್ಕೆಲ್ಲಾ ಆ ಧರ್ಮಗಳನ್ನು ಪಾಲಿಸುವಂತೆ ಮಾಡುವ ಜವಾಬ್ದಾರಿಯನ್ನು ನನಗೆ ಒಪ್ಪಿಸಿ ಹೋಗಿದ್ದಾನೆ.’ ‘ನೀವು ದಕ್ಷಿಣ ದೇಶದಲ್ಲಿ ಹೇಗೆ…..’ ತನ್ನ ಮಾತು ಮುಗಿಯುವ ಮುನ್ನವೇ, ‘ನಡೆಯಬೇಕಾದದ್ದು ನಡೆಯುತ್ತದೆ, ಪ್ರಶ್ನೆಗಳೇಕೆ’ ಎಂದಿದ್ದನು ರಾಮ.  ‘ಆದರೆ, ಆತ ತಾಯಿಯನ್ನೇ ಸಂಹರಿಸಲು ಮುಂದಾಗಿದ್ದನಂತಲ್ಲ !’ ‘ಅದು ತಂದೆಯ ಆಜ್ಞೆ‌. ತಾನಾದರೂ ಏನು ಮಾಡುತ್ತಾನೆ ? ಪಿತೃವಾಕ್ಯ ಪರಿಪಾಲನೆಗಿಂತ ಪರಮಧರ್ಮ ಇದೆಯಾ ?’
ತಮ್ಮ ಮಾತುಗಳು ಮುಗಿಯುವ ಮೊದಲೆ ಆ ದಿನ ದಶರಥನಿಂದ ರಾಮನಿಗೆ ಕರೆ ಬಂದಿತ್ತು. ಹೋದವನು ಮರಳಿ  ಬಂದು ಪಟ್ಟಾಭಿಷೇಕದ ಶುಭವಾರ್ತೆ ತಿಳಿಸಿದ್ದ.ಮಂದಿರದ ತುಂಬೆಲ್ಲಾ ಆನಂದದ ಕೋಲಾಹಲ. ಆದರೆ ಮಾರನೆಯ ದಿನ ಎಲ್ಲವೂ ಬುಡಮೇಲಾಯಿತು. ತಾವು ವನವಾಸಕ್ಕೆ ಬರಲು ಅಂಕುರಾರ್ಪಣವಾಗಿ ಪಟ್ಟಾಭಿಷೇಕವು ಕನಸಾಗಿಯೆ ಉಳಿಯಿತು‌.   ಮತ್ತೆ ಇಷ್ಟು ವರ್ಷಗಳ ಬಳಿಕ ಈ ಅರಣ್ಯಸೀಮೆಯಲ್ಲಿ ರೇಣುಕಾದೇವಿಯ ಹೆಸರಿನಿಂದಾಗಿ ಪರಶುರಾಮನ ನೆನಪಾಯಿತು ಸೀತೆಗೆ.  ಪರಶುರಾಮನು ಸಂಹರಿಸಲು ಹೋದ ರೇಣುಕಾದೇವಿಯೇ ಈಕೆ ?
                                                      * **
 ಈ ಪ್ರಶ್ನೆಗೆ ಉತ್ತರ ಸೀತೆಗೆ ಬಹು ಬೇಗನೆ ಸಿಕ್ಕಿತು. ಆಕಸ್ಮಿಕವಾಗಿ ರೇಣುಕಾದೇವಿಯನ್ನು ಭೇಟಿಯಾದಳು ಸೀತೆ. ನದಿ ಸ್ನಾನಕ್ಕೆ ಹೋದ ಸೀತೆಗೆ ಅಲ್ಲಿ ಮರಳನ್ನು, ಮಣ್ಣನ್ನು ಮಡಕೆಗಳೊಳಗೆ ತುಂಬುತ್ತಿದ್ದ ಕೆಲ ಹೆಂಗಸರು ಕಂಡರು. ಆ ಹೆಂಗಸರಲ್ಲಿ ಉಕ್ಕಿಬರೋ ತೇಜಸ್ಸಿನಿಂದ ಕಾಣುವ ಓರ್ವ ಹೆಂಗಸನ್ನು ನೋಡಿ ಹರ್ಷಗೊಂಡಳು ಸೀತೆ.  ವಯಸ್ಸಾಗಿದರೂ, ದೃಢವಾಗಿದ್ದ ಶರೀರ. ಬಿಳಿಯ ಕೇಶರಾಶಿ. ವಿಶಾಲವಾದ ಕಣ್ಣುಗಳಲ್ಲಿ  ಪುಟಿದೇಳುವ ಛಲ. ಪ್ರಸನ್ನವಾದ ಮುಖ. ತುಟಿಗಳ ಮೇಲೆ ಸಂತೃಪ್ತಿಯನ್ನು ಸೂಚಿಸುವ ಕಿರುನಗೆ.  ಸೀತೆ ಒಂದು ನಿಮಿಷದ ಹೊತ್ತು  ಎವೆಯಿಕ್ಕದಂತೆ ಆಕೆಯನ್ನೇ ನೋಡಿದಳು. ಆಕೆ ಸೀತೆಯೊಡನೆ ನದಿಗಿಳಿದು ಸ್ನಾನ ಮಾಡುತ್ತಾ- “ನಿನ್ನನ್ನು ಈ ಮೊದಲು ಎಂದೂ ನೋಡಿಲ್ಲವಲ್ಲ ? ಯಾರು ನೀನು- ಈ ಪ್ರಾಂತಕ್ಕೆ ಹೊಸದಾಗಿ ಬಂದೆಯಾ ?”  ಎಂದು ಕೇಳಿದಳು.
ಸೀತೆ ತನ್ನ ವಿವರಗಳನ್ನೆಲ್ಲಾ ಹೇಳಿದಳು.  “ಓ ! ಆರ್ಯಧರ್ಮಗಳನ್ನು ಈ ಕಾಡಿನಲ್ಲೂ ವಿಸ್ತರಿಸಲು ಬಂದ ರಾಮನ ಹೆಂಡತಿಯಾ ನೀನು ?” ಎಂದಳು ರೇಣುಕೆ ತುಸು ತಿರಸ್ಕಾರದ ದನಿಯಲ್ಲಿ.   “ಪಿತೃವಾಕ್ಯಾ ಪರಿಪಾಲನೆಗಾಗಿ ಅವರು ಈ ಅರಣ್ಯಕ್ಕೆ ಬಂದಿದ್ದಾರೆ.” ಆ ತಿರಸ್ಕಾರವನ್ನು ಲೆಕ್ಕಿಸದೆ ದೃಢವಾಗಿ ಅಂದಳು ಸೀತೆ.
 “ಅದು ಸಹ ಆರ್ಯ ಸಂಸ್ಕೃತಿಯ ಭಾಗವೇ ಬಿಡು. ತಂದೆ ಹೇಳಿದ್ದು ನ್ಯಾಯವೋ ಅನ್ಯಾಯವೋ ಎಂದು ಯೋಚಿಸದೆ ಕುರುಡಾಗಿ ಪಾಲಿಸುವುದೇ ಆರ್ಯಧರ್ಮ. ನನ್ನ ಮಗನೂ ಸಹ ಅದನ್ನೇ ಮಾಡಿದನು. ಅದೇ ಕೆಲಸವನ್ನೇ ತಾನೂ ಮಾಡುತ್ತೇನೆಂದು, ದೇಶದಲ್ಲಿ ಇತರ ಜಾತಿಗಳಲ್ಲಿಯೂ ಅದೇ ಆರ್ಯಧರ್ಮಗಳನ್ನು ಸ್ಥಾಪಿಸುವೆನೆಂದು ನಿನ್ನ ಗಂಡ ನನ್ನ ಮಗನಿಗೆ ವಾಗ್ದಾನ ಮಾಡಿದ್ದಾನೆ.” ಆಕೆಯ ಮಾತುಗಳಲ್ಲಿ ಇನ್ನಲ್ಲಿದ ಠೀವಿ ಮತ್ತು ಗಾಂಭೀರ್ಯ.
“ನೀವು ರೇಣುಕಾದೇವಿಯಾ ?” ಸೀತೆಗೆ ಸಂದೇಹವಿಲ್ಲದಿದ್ದರೂ ಕೇಳಿದಳು. “ಹೌದು, ನೀನು ನನ್ನ ಬಗ್ಗೆ ಕೇಳಿರಬಹುದು. ನನ್ನ ಆಶ್ರಮಕ್ಕೆ ಹೋಗೋಣವಂತೆ  ಬಾ.” ಆಜ್ಞಾಪಿಸಿದವಳಂತೆಯೇ ಕರೆದಳು ರೇಣುಕೆ.  “ಕ್ಷಮಿಸಿ ನಾನು ಬರಲಾರೆನು.” ಸೀತೆ ವಿನಯದಿಂದಲೇ ಹೇಳಿದಳು. ರೇಣುಕೆ ಗಳಗಳನೆ ನಕ್ಕಳು. ನದಿಯೇ ನಕ್ಕಂತೆನಿಸಿತು ಸೀತೆಗೆ.  “ಏಕೆ, ನಿನ್ನ ಗಂಡ ಬೇಡವೆನ್ನುತ್ತಾನಾ ?”  “ಇಲ್ಲ ಇಲ್ಲ. ಅವರೊಡನೆ ನಾನು ನಿಮ್ಮ ಕುರಿತು ಮಾತನಾಡಲೇ ಇಲ್ಲ.”  “ಮತ್ತೆ  ಸಂದೇಹವೇಕೆ ನಿನಗೆ‌ ? ಬಾ ಹೋಗೋಣ.” ಸೀತೆಗೆ ರೇಣುಕೆ ತಾಯಿಯಂತೆ ಸಲುಗೆ ತೋರುತ್ತಿರುವುದು ತೀರಾ ವಿಚಿತ್ರವೆನಿಸಿತು.  ಉತ್ತರಿಸದೆ ಹಾಗೇ ನಿಂತಳು. “ನನ್ನೊಡನೆ ಆಶ್ರಮಕ್ಕೆ ಬಾ. ಅಲ್ಲಿ ಅನೇಕ ಶಿಲ್ಪಗಳು, ಚಿತ್ರಗಳು ನಿನಗೆ ಇಷ್ಟವಾಗುತ್ತವೆ. ನೀನು ಆನಂದಿಸುವೆ.”  “ಇನ್ನೊಮ್ಮೆ ಎಂದಾದರೂ ಬರುವೆ. ಶ್ರೀರಾಮನ ಅನುಮತಿ ಪಡೆದು.”  “ನಿನ್ನ ಗಂಡ ಅನುಮತಿಸುವುದಿಲ್ಲ.” ಮತ್ತೊಮ್ಮೆ ನಕ್ಕಳು ರೇಣುಕೆ.
“ನಿಮಗೆ ಹೇಗೆ ಗೊತ್ತು ?” ಚುರುಕಾಗಿ ಕೇಳಿದಳು ಸೀತೆ. “ಗಂಡಂದಿರ ಕುರಿತು, ಮಕ್ಕಳ ಕುರಿತು ನನಗೆ ಗೊತ್ತಿದ್ದಷ್ಟು ಮತ್ತಾರಿಗೂ ಗೊತ್ತಿಲ್ಲ.” ರೇಣುಕೆಯ ನಗು ನೊರೆನೊರೆಯಾಗಿ ತೇಲುತ್ತಿದೆ.  “ನಿಮ್ಮ ಗಂಡನಿಂದಾಗಿ, ಮಗನಿಂದಾಗಿ ನಿಮಗೆ ಅನ್ಯಾಯವಾಗಿರಬಹುದು, ಒಪ್ಪುತ್ತೇನೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಹೀಗಿಯೇ ಇರುತ್ತಾರೆ ಎಂದುಕೊಳ್ಳುವುದು ನ್ಯಾಯವಲ್ಲ. ನಾನು ಮತ್ತೆ ಎಂದಾದರೊಮ್ಮೆ ನಿಮ್ಮ ಆಶ್ರಮಕ್ಕೆ ಬರುವೆ.”  ಸೀತೆ ರೇಣುಕೆಗೆ ನಮಸ್ಕರಿಸಿ, ಮರುಮಾತಿಗೆ ಅವಕಾಶವಿಲ್ಲವೆಂಬಂತೆ ಅಲ್ಲಿಂದ ಹೊರಟುಹೋದಳು.
                                           * **
 ಸೀತೆಯ ಮನದಲ್ಲಿ ರೇಣುಕೆಯ ರೂಪವು ಪ್ರತಿಷ್ಠಾಪನೆಯಾಗಿಬಿಟ್ಟಿದೆ. ಆಕೆಯ ಮಾತುಗಳಲ್ಲಿಯ ಸಲುಗೆ, ನಗೆಯಲ್ಲಿನ ಅಧಿಕಾರ ಮತ್ತೆ ಮತ್ತೆ ನೆನಪಾಗುತ್ತಿವೆ. ತಾಯಿಯಂತೆ ಕರೆದಳು.ಒಂದು ಸಲ ಹೋಗಿಬಂದರೇನಂತೆ ?  ರಾಮಲಕ್ಷ್ಮಣರಿಬ್ಬರೂ ಅರಣ್ಯದೊಳಗೆ ಹೋದ ಬಳಿಕ ತಾನೊಂದು ಸಲ ರೇಣುಕಾದೇವಿಯ ಆಶ್ರಮಕ್ಕೆ ಹೋಗಿಬರಬಹುದೆನಿಸಿತು.   ಸೀತೆಗೆ ರೇಣುಕಾದೇವಿಯ ಶಿಲ್ಪಾಲಯವನ್ನು ನೋಡಬೇಕೆಂಬ, ಆಕೆಯೊಡೆನೆ ಮಾತನಾಡಬೇಕೆಂಬ ಆಸೆ ಹೆಚ್ಚುತ್ತಲೇ ಇತ್ತು.  ರಾಮನಿಗೆ ಹೇಳಿದಳು.  “ಇಲ್ಲೇ ಹತ್ತಿರದಲ್ಲಿ ಒಂದು ಶಿಲ್ಪಾಲಯವಿದೆಯಂತೆ. ಕೆಲ ದಿನಗಳ ಹಿಂದೆ ಮುನಿಪತ್ನಿಯರೆಲ್ಲಾ ಹೋಗಿ ಶಿಲ್ಪಗಳನ್ನು, ಮಡಿಕೆಗಳನ್ನು ತಂದುಕೊಂಡಿದ್ದಾರೆ. ತುಂಬಾ ಸೊಗಸಾಗಿವೆ. ನಾನೂ ಹೋಗಿ ತಂದುಕೊಳ್ಳುತ್ತೇನೆ.”   “ಹೌದು. ಶಿಲ್ಪಾಲಯದ ಸಂಗತಿಯನ್ನು ನಾನೂ ಕೇಳಿರುವೆ. ಆದರೆ ನೀನೇತಕೆ ? ಲಕ್ಷ್ಮಣನಿಗೆ ತರಲು ಹೇಳೋಣ. ಅವೆಲ್ಲವನ್ನು ನೀನು ಹೊತ್ತು ತರಬಲ್ಲೆಯಾ ?”  “ಎಲ್ಲವನ್ನೂ ನೋಡಿ ಇಷ್ಟವಾದವುಗಳನ್ನು ಆರಿಸಿಕೊಳ್ಳುತ್ತೇನೆ. ಅವನ್ನು ಇಲ್ಲಿಗೆ ಸೇರಿಸುವ ಸಂಗತಿ ಆಮೇಲೆ ನೋಡೋಣವಂತೆ.” ಎಂದಳು ಸೀತೆ‌.
 “ಆಗಲಿ-ಹೋಗಿ ನಿನಗಿಷ್ಟವಾದವುಗಳನ್ನೆಲ್ಲಾ ಆಯ್ದುಕೋ” ಎಂದನು ರಾಮ. ರೇಣುಕಾದೇವಿಯ ವಿಷಯ ರಾಮನಿಗೆ ಗೊತ್ತೋ ಇಲ್ಲವೋ-ಶಿಲ್ಪಾಲಯದ ಬಗ್ಗೆ ತಿಳಿದುಕೊಂಡಿದ್ದಾನಲ್ಲ ಹಾಗಾಗಿ ಗೊತ್ತಿರಬಹುದು. ಪರಶುರಾಮನ ತಾಯಿಯ ಬಗ್ಗೆ ರಾಮನಿಗೆ ಪೂಜ್ಯಭಾವನೆ ಇದ್ದಿರಬಹುದು. ಆದರೆ ಆಕೆ ಪರಶುರಾಮನ ಧರ್ಮಗಳನ್ನು,ರಾಮನ ಧರ್ಮಗಳನ್ನು ತೆಗಳುತ್ತಾಳೆಂಬ ಸಂಗತಿ ಆತ ನಿನಗೆ ಗೊತ್ತಿಲ್ಲವೆನಿಸುತ್ತದೆ. ತನಗೆ ಗೊತ್ತಿರುವುದಾದರೂ ಎಷ್ಟು ?  ರೇಣುಕಾದೇವಿಯನ್ನು ಭೇಟಿಯಾಗದ ಹೊರತು ಆಕೆಯ ಅಭಿಪ್ರಾಯ ಪೂರ್ಣವಾಗಿ ಗೊತ್ತಾಗುವುದೇ ಇಲ್ಲ.
ಸೀತೆ ಶಿಲ್ಪಾಲಯಕ್ಕೆ ಹೋಗಲೆಂದು ಬೇಗ ಕೆಲಸಗಳನ್ನು ಮುಗಿಸತೊಡಗಿದಳು. ಶಾಂತೆ ಹೇಳಿದ ಜಾಡು ಹಿಡಿದು ಸುಲಭವಾಗಿ ರೇಣುಕಾದೇವಿಯ ಆಶ್ರಮವನ್ನು ತಲುಪಿದಳು ಸೀತೆ. ರೇಣುಕೆ ಕೆಲಸದಲ್ಲಿ ಮಗ್ನಳಾಗಿದ್ದಳು. ಆಕೆಯ ಜೊತೆ ಇನ್ನೂ ಕೆಲ ಹೆಂಗಸರು ಮಣ್ಣಿನಿಂದ, ಮರಳಿನಿಂದ ಕಲಾಕೃತಿಗಳನ್ನು ಮಾಡುತ್ತಿದ್ದರು.  ಸೀತೆಯನ್ನು ನೋಡಿದವಳೆ ಕೈಯಲ್ಲಿಯ ಕೆಲಸ ಬಿಟ್ಟು ಎದ್ದು ಬಂದಳು ರೇಣುಕೆ.  “ನಿನ್ನ ಗಂಡನ ಅನುಮತಿ ಪಡೆದೇ ಬಂದಿರುವೆಯಾ ಸೀತಾ ?” ಎನ್ನುತ್ತಾ ನಕ್ಕಳು.  “ಹೌದು. ಅವರ ಅನುಮತಿಯಿಂದಲೇ ಬಂದಿದ್ದೇನೆ. ಅದರಲ್ಲೇನು ವಿಚಿತ್ರ ? ತಪ್ಪೇನಿದೆ ? ನೀವು ತೋರಿಸುತ್ತೇನೆಂದಿದ್ದ  ಶಿಲ್ಪಗಳನ್ನು ತೋರಿಸುವಿರಾ ?” ಎಂದಳು ಸೀತೆ.
ರೇಣುಕೆ ಆಪ್ಯಾಯಮಾನವಾಗಿ ನಗುತ್ತಾ ಸೀತೆಯನ್ನು ಶಿಲ್ಪಾಲಯಕ್ಕೆ ಕರೆದೋಯ್ದಳು. ಅಲ್ಲಿಯ ಶಿಲ್ಪ ಸಂಪದವನ್ನು ಕಂಡು ಸೀತೆ ಮೂಕವಿಸ್ಮಿತಳಾದಳು. ಮಿಥಿಲೆ, ಅಯೋಧ್ಯೆಯ ಅರಮನೆಗಳಲ್ಲಿ ಬೆಳೆದ ಸೀತೆಗೆ ಈ ಶಿಲ್ಪಗಳು ಮತ್ತವುಗಳ ಸೌಂದರ್ಯ ಹೊಸತೇನಲ್ಲ. ಆದರೂ ಈ ಶಿಲ್ಪಗಳು ಅವುಗಳ ರೀತಿ ಭಿನ್ನ‌. ಇಂತಹ ಶಿಲ್ಪಶೈಲಿಯನ್ನು ತಾನು ಎಂದೂ ನೋಡಿರಲಿಲ್ಲ. ತುಂಬಾ ವಿಭಿನ್ನವಾಗಿದೆ. ಈ ಮಾತನ್ನೇ ಹೇಳಿದಳು ಆಕೆ ರೇಣುಕೆಗೆ.
“ಇವು ಹೆಂಗಸರು ಕೆತ್ತಿದ ಶಿಲ್ಪಗಳು. ನಾನೂ ಮತ್ತು ನನ್ನ ಶಿಷ್ಯೆಯರು ಕೆತ್ತಿದವು. ಭಿನ್ನವಾಗಿಯೇ ಇರುತ್ತವೆ. ಅಮೂರ್ತವಾಗಿಯೇ ಇರುತ್ತವೆ. ಸೀತೆಯನ್ನು ಮತ್ತೊಂದೆಡೆಗೆ ಕರೆದೋಯ್ದಳು ರೇಣುಕೆ.”  “ಇಗೋ ನೋಡಿಲ್ಲಿ, ಇವು ನೀನು ಸದಾ ನೋಡುವ ಮಾಮೂಲಿ ಶಿಲ್ಪಗಳು.”  ಅವು ಸಹ ಸೌಂದರ್ಯದಿಂದ ಶೋಭಿಸುತ್ತಿವೆ. ಆ ಸೌಂದರ್ಯದಲ್ಲಿಯೂ ಸಹ  ಮೈಮಾಟಕ್ಕಿಂತ ಬಲ, ನಿಗ್ರಹಗಳು ತುಂಬಾ ಎದ್ದು ಕಾಣುತ್ತಿವೆ.  ಸೀತೆ ತನಗೆ ಬೇಕಾದ ಕೆಲವು ಶಿಲ್ಪಗಳನ್ನು ಆಯ್ದುಕೊಂಡಳು.  “ಸಾಮಾನ್ಯವಾಗಿ ಹೆಂಗಸರು ಶಿಲ್ಪವಿದ್ಯೆಗೆ ಪ್ರವೇಶಿಸುವುದಿಲ್ಲವಲ್ಲ-ಈ ವಿದ್ಯೆ ನಿಮಗೆ ಅದು ಹೇಗೆ ಒಲಿಯಿತು ? ಯಾರ ಬಳಿ ಕಲಿತಿದ್ದೀರಿ ?”     “ಬಾಲ್ಯದಿಂದಲೂ ಆಸಕ್ತಿ. ಗುರುಗಳಾರೂ ಇಲ್ಲ. ನನಗೆ ನಾನೇ ಗುರು.” ಎಂದು ನಗುತ್ತಾ ರೇಣುಕೆ ಸೀತೆಗೆ ಫಲಾಹಾರವನ್ನು ತಂದು ಕೊಟ್ಟಳು.   “ಇಗೋ ಇದನ್ನು ನಿನಗೆ ಪ್ರತ್ಯೇಕವಾಗಿ ಕೊಡುತ್ತಿದ್ದೇನೆ. ಇದು ಮರಳಿನಿಂದ ಮಾಡಿದ ಮಡಕೆ. ಮರಳಮಡಕೆ.” ಒಂದು ಸುಂದರವಾದ ಮಡಕೆಯನ್ನು ಸೀತೆಯ ಕೈಗಿತ್ತಳು ರೇಣುಕೆ.
 “ಮರಳಿನಿಂದ ಮಡಕೆಯಾ !”  “ಹೌದು. ಈ ವಿದ್ಯೆ ನನಗೆ ಮಾತ್ರ ಗೊತ್ತು.”  “ಅದ್ಭುತವಾಗಿದೆ.”  “ಹೌದು ಅದ್ಭುತವೇ. ಪ್ರತಿ ಹೆಂಗಸಿನ ಹತ್ತಿರವೂ ಇದು ಇರಬೇಕು.” ನಕ್ಕಳು ರೇಣುಕೆ.  “ಏಕೆ ?”  “ತಮ್ಮ ಪಾತಿವ್ರತ್ಯವೂ ಈ ಮರಳಮಡಕೆಯಂತೆಯೇ ಎಂದು ಅರಿತುಕೊಂಡರೆ ಅವರು ನಿಶ್ಚಿಂತೆಯಿಂದ ಬದುಕಬಲ್ಲರು.”  ಸೀತೆಗೆ ಅರ್ಥವಾಗಲಿಲ್ಲ‌. ಆಕೆಯನ್ನು  ಅಯೋಮಯವಾಗಿ ನೋಡಿದಳು. “ಈ ಮಡಕೆಯನ್ನು ಮಾಡಲು ತುಂಬಾ ಏಕಾಗ್ರತೆಬೇಕು. ನನ್ನ ಏಕಾಗ್ರತೆಯ ಬಗ್ಗೆ ಗೊತ್ತಿರದವರೆಲ್ಲಾ ನನ್ನ ಪಾತಿವ್ರತ್ಯದಿಂದಲೇ ಮರಳಮಡಕೆ ತಯಾರಿಸಿದ್ದೇನೆ ಎಂದುಕೊಳ್ಳುತ್ತಿದ್ದಾರೆ.
ನನ್ನ ಪಾತಿವ್ರತ್ಯಕ್ಕೆ ಅದರಿಂದಾಗಿ ಯಾವ ನಷ್ಟವೂ ಆಗುವುದಿಲ್ಲ. ಆಗಾಗಿ ಅವರು ಏನು ಅಂದುಕೊಂಡರೂ ನಾನು ಸುಮ್ಮನಿದ್ದೆ. ಆದರೆ ಏಕಾಗ್ರತೆ ಎಂದಾದರೂ ಭಗ್ನವಾಗಬಹುದು. ಅದಕ್ಕೆ ಕಾರಣ ಏನಾದರೂ ಇರಬಹುದು. ನನ್ನ ವಿಷಯದಲ್ಲಿ ಒಬ್ಬ ಗಂಡಸು ಕಾರಣವಾದನು. ಆ ಗಂಡಸನ್ನು ನೋಡಿದ ಮಾತ್ರಕ್ಕೆ ನನ್ನ ಪಾತಿವ್ರತ್ಯ ಭಗ್ನವಾಗಿದೆ ಎಂದು ನನ್ನ ಗಂಡ ಕೆಂಡಾಮಂಡಲವಾದನು. ಒಂದು ಮಡಕೆಯನ್ನು ಸುಂದರವಾಗಿ ರೂಪಿಸಲು ಸಾಧನೆ, ಏಕಾಗ್ರತೆ, ಮರಳು, ಅದರಲ್ಲಿ ಬೆರೆತ ನೀರಿನ ಅಂಶ ಇನ್ನೂ ಏನೇನೋ ಕಾರಣಗಳಿರುತ್ತವೆ. ಅದೆಲ್ಲವನ್ನು ಗ್ರಹಿಸಲಾಗದ ಮಹಾಜ್ಞಾನಿ ಜಮದಗ್ನಿ ಮಹರ್ಷಿ, ತಪಸ್ಸಿನಿಂದ ಅದೆಷ್ಟು ಜ್ಞಾನ ಸಂಪಾದಿಸಿದರೂ ಹೆಂಡತಿಯ ಪಾತಿವ್ರತ್ಯದ ಮೇಲೆ ಹಠ ಬಿಡದ ಮುಮುಕ್ಷನು.”
 ರೇಣುಕೆಯ ಮಾತಿನಲ್ಲಿ ಕಟುವಾದ ವ್ಯಂಗ್ಯ. “ಆಗೇನಾಯಿತು ?” ಸೀತೆ ಆತುರದಿಂದ ಕೇಳಿದಳು. “ನನ್ನನ್ನು ಕೊಲ್ಲಲೆಂದು ಮಗನಿಗೆ ಆಜ್ಞಾಪಿಸಿದ.  ಪರಶುರಾಮನು ಅದಕ್ಕೆ ಸಿದ್ದನಾದ. ನನ್ನ ಶಿರವನ್ನು ಕಡಿದ. ತಲೆಯನ್ನು ಅರ್ಧಕ್ಕೆ ಕಡಿದ ಮೇಲೆ ನನ್ನ ಗಂಡನ ಕ್ರೋಧವು ತಗ್ಗಿತು. ಪರಶುರಾಮನಿಗೆ ನಿಲ್ಲಿಸಲು ಹೇಳಿದ. ಆಶ್ರಮದ ಹೆಂಗೆಳೆಯರು ಹಾಗು ಅರಣ್ಯದಲ್ಲಿ ವಾಸಿಸುವ ಕೆಲ ಆದಿವಾಸಿ ಹೆಂಗಸರು ನನಗೆ ವೈದ್ಯ ಮಾಡಿ ನನ್ನ ತಲೆಯನ್ನು ಕುತ್ತಿಗೆಯ ಮೇಲೆ ಪುನಃ ನಿಲ್ಲುವಂತೆ ಮಾಡಿದರು. ತಿಂಗಳ ಪರ್ಯಂತ ನಾನು ಸಾವು-ಬದುಕುಗಳ ಮಧ್ಯೆ ಒದ್ದಾಡಿದ್ದೆ. ಸಾವಿನ ಅಂಚಿನವರೆಗೂ ಹೋದ ನನ್ನ ಮುಂದೆ ಮೂರು ಪ್ರತಿಮೆಗಳು-ಮನಸಾ, ವಾಚಾ, ಕರ್ಮಣಾ ಸೇವಿಸಿದ ನನ್ನ ಗಂಡ‌- ಅವರಿಗಾಗಿ ನನ್ನ ಪಾತಿವ್ರತ್ಯ. ಹತ್ತು ತಿಂಗಳು ಹೊತ್ತು ಹೆತ್ತು ಬೆಳೆಸಿದ ಮಗ-ನನ್ನ ಮಾತೃತ್ವ. ನನ್ನ ಏಕಾಗ್ರತೆಯ ಫಲವೇ ನನ್ನ ವಿದ್ಯೆ-ಈ ಮರಳಮಡಕೆ. ಈ ಮೂರೂ ಒಂದೇ. ಅಲ್ಪಕಾರಣದಿಂದ ಭಿನ್ನವಾಗುತ್ತವೆ. ಬದುಕು ಕತ್ತಿಯ ಅಂಚಿಗೆ ತೂಗಾಡುತ್ತದೆ.
ಸೀತೆಯ ಕಣ್ಣಲ್ಲಿ ನೀರು. ರೇಣುಕೆ ಮಾತ್ರ ಗಂಭೀರವಾಗಿದ್ದಾಳೆ.  “ಆ ಸಾವು ಬದುಕುಗಳ ಹೋರಾಟದಲ್ಲಿ ಅನೇಕ ಪ್ರಶ್ನೆಗಳು. ಗಂಡ, ಮಕ್ಕಳೆಂಬ ಈ ಬಂಧಗಳು ಹೆಂಗಸರಿಗೆ ಅಗತ್ಯವಾ ಅನ್ನಿಸಿತು. ಅಗತ್ಯವಲ್ಲವೆಂದುಕೊಂಡು ನಾನು ಅವರಿಂದ ದೂರ ಬಂದೆ. ಈಗ ಕೇವಲ ನನ್ನ ವಿದ್ಯೆಯಿಂದ ಬದುಕುತ್ತಿದ್ದೇನೆ. ನನ್ನ ಶಿಷ್ಯೆಯರಿಗೂ ಇದೇ ಉಪದೇಶವನ್ನು ನೀಡುತ್ತೇನೆ. ಎಂದಾದರೊಮ್ಮೆ ಬಿಟ್ಟು ಮರಳಿನಿಂದ ಮಡಿಕೆ ಹೆಚ್ಚಾಗಿ ಮಾಡುವುದಿಲ್ಲ. ಪಾತಿವ್ರತ್ಯವು  ಎಂತಹುದೋ ಮರೆಯಬಾರದೆಂದು ಆಗಾಗ ಮಾಡುತ್ತಿರುತ್ತೇನೆ, ಅಷ್ಟೇ.”
“ಗಂಡನ ಹೊರತು ಹೆಂಗಸಿಗೆ ಬೇರೆ ಲೋಕವಿದೆಯಾ ? ಮಾತೃತ್ವಕ್ಕಿಂತಲೂ ಬೇರೆ ಪರಮಾರ್ಥವೇನಿದೆ ಆಕೆಗೆ ? ನಿಮ್ಮ ಅನುಭವದಿಂದ ಹೀಗೆ ಎಲ್ಲರನ್ನು ಉಪದೇಶಿಸುವುದು…”  “ಗಂಡನ ಹೊರತು ಬೇರೆ ಲೋಕವೇ ಇಲ್ಲವೆಂದುಕೊಳ್ಳುತ್ತಾರೆ ಹೆಂಗಸರು. ನಿಜ. ಆದರೆ ಒಂದಲ್ಲ ಒಂದು ದಿನ ಗಂಡ ತನ್ನ ಲೋಕದಲ್ಲಿ ನಮಗೆ ಸ್ಥಾನವಿಲ್ಲವೆನ್ನುತ್ತಾನೆ. ಆಗ ನಮಗೆ ಏನು ಗತಿ ? ನಾವು ಮಕ್ಕಳನ್ನು ಹಡೆಯುವುದೇ
ಜೀವನಧರ್ಮ ಎಂದುಕೊಳ್ಳುತ್ತೇವೆ. ಆದರೆ ಮಕ್ಕಳು ಗಂಡಸರ ವಂಶಾಂಕುರರಾಗಿ ನಾವು ಗ್ರಹಿಸುವ ಮುನ್ನವೇ ನಮ್ಮ ಕೈ ಬಿಟ್ಟು ತಂದೆಯ ಅಧೀನತೆಗೆ ಹೋಗಿಬಿಡುತ್ತಾರೆ. ತಂದೆಯ ಆಜ್ಞೆಗೆ ಬದ್ಧರಾಗುತ್ತಾರೆ. ಇಲ್ಲವೆ, ನಮ್ಮ ಬದುಕಿಗೆ ಅವರೇ ಶಾಸನಕರ್ತರಾಗುತ್ತಾರೆ. ಮತ್ತೇಕೆ ಇಂತಹ ಮಕ್ಕಳನ್ನು ಹೆರಬೇಕು ? ಇದು ನನಗೆ ಅನುಭವವಾದಷ್ಟು ಕಠೋರವಾಗಿ ಮತ್ತಾರಿಗೂ ಆಗದು. ಆ ಕಠೋರ ಸತ್ಯವು ತಿಳಿದ ಮೇಲೆ ಹೇಳುವುದು ನನ್ನ ವಿಧಿಯಲ್ಲವೆ. ಆದರೆ ಈ ಬ್ರಾಹ್ಮಣರಾರೂ ನನ್ನ ಮಾತುಗಳಿಗೆ ಬೆಲೆಯೇ ಕೊಡುವುದಿಲ್ಲ. ಈ ಅರಣ್ಯದೊಳಗಿನ ಅನೇಕ ಜಾತಿಯ ಜನಗಳಿಗೆ ನನ್ನ ವಿದ್ಯೆಯನ್ನು ಕಲಿಸುತ್ತಾ, ನನ್ನ ಅನುಭವದ ಸಾರವನ್ನು ಹೇಳುತ್ತಿರುತ್ತೇನೆ.”
 “ಆದರೆ ಈ ವಿವಾಹ ಬಂಧವಿಲ್ಲದಿದ್ದರೆ ಸೃಷ್ಟಿಯೇ ನಿಂತುಬಿಡುತ್ತದಲ್ಲ ?”  “ಏಕೆ ನಿಲ್ಲುತ್ತದೆ ಸೀತಾ-ಈ ಅರಣ್ಯದೊಳಗೆ ಅದೆಷ್ಟೋ ಪ್ರಾಣಿಗಳು ಹುಟ್ಟಿ ಬೆಳೆಯುತ್ತಿವೆ. ಅವುಗಳಿಗೆ ವಿವಾಹ ಬಂಧವೇ ಇಲ್ಲವಲ್ಲ-ಅನೇಕ ಬುಡಕಟ್ಟು ಸಮುದಾಯಗಳಿವೆ. ಅವರ ಆಚಾರಗಳು ನಿಮ್ಮ ಆಚಾರಗಳಿಗಿಂತಲೂ ಭಿನ್ನವಾಗಿರುತ್ತವೆ.”  “ಅಂದರೆ ಮನುಷ್ಯರು ಪಶುಗಳ ಹಾಗೆ ಅನಾಗರಿಕವಾಗಿ ಬದುಕಬೇಕಾ ?”
“ಪಶುಗಳ ಬಗ್ಗೆ ಅಂತಹ ಕೀಳಿರಿಮೆ ಏಕೆ ಸೀತಾ ? ಪಶುಗಳನ್ನು, ಪ್ರಕೃತಿಯನ್ನು ನಾವು ಪ್ರೀತಿಸಬೇಕು, ಪೂಜಿಸಬೇಕು, ಸಹವಾಸ ಮಾಡಬೇಕು. ಅದೇ ಮಾನವ ಕರ್ತವ್ಯ. ಆ ಕರ್ತವ್ಯವನ್ನು ಬಿಟ್ಟು ಯಾರೋ  ಬರೆದ ವಾಕ್ಯಗಳನ್ನು ನಾಗರಿಕತೆ ಎಂದುಕೊಳ್ಳುವೆಯಾ ? ನಗರವನ್ನು ಬಿಟ್ಟು ಅರಣ್ಯಕ್ಕೆ ಬಂದಿರುವೆ ನೀನು. ನಗರಗಳು ಬೆಳೆಸುತ್ತಿರುವ ನಾಗರಿಕತೆಯ ಬಗ್ಗೆ ಈ ಬಗೆಯ ಸೆಳೆತವೇಕೆ ? ಪ್ರಕೃತಿ ಮನುಷ್ಯರ ಗುರುವಲ್ಲವೇ”   “ನಿಮ್ಮ ಮಾತುಗಳು ನನಗೆ ಅರ್ಥವಾಗುತ್ತಿಲ್ಲ. ಅವು ಹೆಂಗಸರಿಗೆ ಹಾನಿಮಾಡುತ್ತವೇನೋ ಎಂದನಿಸುತ್ತಿದೆ.”
 “ಹಾನಿ ಖಂಡಿತಾ ಮಾಡಲಾರವು ಸೀತಾ- ಮಕ್ಕಳು ತಾಯಿಗೆ ಸೇರುವಲ್ಲಿ ಅವರಿಗೆ ಯಾವ ಹಾನಿಯಿದೆ ಹೇಳು. ಆದರೆ, ಮಕ್ಕಳು ತಮ್ಮ ತಂದೆ ಯಾರೆಂದು ಕೇಳುವ ಸಂದರ್ಭ, ಗಂಡ ನಿನ್ನ ಮಕ್ಕಳಿಗೆ ತಂದೆ ಯಾರೆಂದು ಕೇಳುವ ಸಂದರ್ಭ ಕೆಲ ಹೆಂಗಸರ ಬಾಳಿನಲ್ಲಿ ಬಂದೇ ಬರುತ್ತದೆ ಸೀತಾ-ಆಗಿನ ಅವರ ಸ್ಥಿತಿಯನ್ನು ಊಹಿಸಿಕೋ-ನನ್ನ ಮಾತುಗಳು ನಿನಗರ್ಥವಾಗುತ್ತವೆ.”   “ಯಾರಿಗೋ, ಎಂದೋ ಏನೋ ಗತಿಸುತ್ತದೆಯೆಂದು ವಿವಾಹವಿಲ್ಲದೆ ಇರುವುದು, ವಿವಾದವಿಲ್ಲದೆ ಮಕ್ಕಳನ್ನು ಹಡೆಯುವುದು ಎಲ್ಲಾದರೂ ಇದೆಯಾ ? ಅದು ಸದಾಚಾರವಾ ?” ಕೋಪದಿಂದ ಕೇಳಿದಳು ಸೀತೆ.
“ಸದಾಚಾರವೋ ಅಲ್ಲವೋ-ನನಗೆ ತೋಚಿದ್ದು ನಾನು ಹೇಳುತ್ತಿದ್ದೇನೆ. ಯಾರಿಗಾದರೂ ಅನುಭವದಿಂದಲೇ ಸತ್ಯವು ಅರಿವಾಗುತ್ತದೆ. ಅವರಿಗೆ ಅರಿವಾದ ಸತ್ಯವನ್ನು ಅವರು ಹೇಳುತ್ತಾರೆ.”  “ಆದರೆ ನಿಮ್ಮ ಸತ್ಯ, ನನ್ನ ಸತ್ಯ ಒಂದೇ ಅಲ್ಲ.”   “ಹೌದು, ಇರಬಹುದು. ಆದರೆ ಲೋಕವನ್ನು ಅಬುಭವಿಸುತ್ತಾ ಹೋದಂತೆ  ಬರುಬರುತ್ತಾ ನನ್ನ ಮಾತುಗಳಲ್ಲಿಯ ಸತ್ಯವು ನಿನಗೆ ಅರಿವಾಗವುದು.”
ಸೀತೆಗೆ ಆ ಚರ್ಚೆಯು ಶುಷ್ಕವಾದದಂತೆ ತೋರಿತು. ಆಕೆ ಸಯ್ಯನೆ ಎದ್ದುನಿಂತಾಗ ಕಾಲ ಬದಿಗಿದ್ದ ಮರಳಮಡಿಕೆಗೆ ಬಲಪಾದ ತಾಗಿ ಅದು ಉರುಳಿತು. ಒಡೆದುಹೋಯಿತು.  ಆ ಘಟನೆಯಿಂದ ಸೀತೆ ಭಯಗೊಂಡಳು. ರೇಣುಕೆಯ ಮುಖದಲ್ಲಿಯೂ ಏನೋ ದಿಗಿಲು. ಆಕೆ ಸೀತೆಯನ್ನು ಹತ್ತಿರಕ್ಕೆ ಕರೆದುಕೊಂಡು ಎದೆಗಪ್ಪಿಕೊಂಡಳು. ನಿನಗದೆಷ್ಟೋ ಬಲವಿದೆ ಸೀತಾ-ನನ್ನ ಮಾತುಗಳನ್ನು ಮರೆಯದಿರು. ನಿನ್ನ ಬಲವೇ ನಿನಗೆ ರಕ್ಷೆ. ಹಾಗೆಂದು ನಾನು ಆಶಿರ್ವದಿಸುತ್ತಿದ್ದೇನೆ.”
 ಆ ಮಾತಿನಿಂದ ಸೀತೆಯು ತನಗರಿವಿಲ್ಲದಂತೆಯೇ ರೇಣುಕೆಯ ಪಾದಗಳಿಗೆ ನಮಸ್ಕರಿಸಿ ಅಲ್ಲಿಂದ ಹೊರಟುಹೋದಳು. ಸೀತೆಯ ಬಗೆಗೆ ಯಾವುದೋ ದಿಗಿಲಿನಿಂದ ತನ್ನ ಮನವು ಕಳವಳಗೊಳ್ಳುತ್ತಿರಲು ರೇಣುಕೆ ಅಲ್ಲೇ ಕುಸಿದು ಬಿದ್ದಳು.
                                        * * *
 ಸೀತೆಗೆ ಇಬ್ಬರು ಕುವರರನ್ನು ಬೆಳೆಸುವುದರಲ್ಲೇ ಕ್ಷಣ ಬಿಡುವಿಲ್ಲದಂತಾಯಿತು. ವಾಲ್ಮೀಕಿಯ ಆಶ್ರಮದಲ್ಲಿ ಎಂಟು ವರ್ಷಗಳು ಅದೇಗೆ ಕಳೆದುವೋದವೋ ಆಕೆಗೆ ನೆನಪೇಯಿಲ್ಲ.  ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ವಾಲ್ಮೀಕಿ ಬಳಿ ವಿದ್ಯಾಭ್ಯಾಸಕ್ಕೆ  ಕಳುಹಿಸಿದ ಬಳಿಕ ಸ್ವಲ್ಪ ಸಮಯ ದೊರೆಯಿತು. ಆ ಸಮಯದಲ್ಲಿಯೂ ಆಕೆಗೆ ಬರೀ ಅವರಿಬ್ಬರ ಮೇಲೆಯೇ ಧ್ಯಾನ.  ಅವರು ಮರಳಿ ಮನೆಗೆ ಬರುವವರೆಗೂ ತಾನು ಯಾವ ಕೆಲಸ ಮಾಡುತ್ತಿದ್ದರೂ ಕಣ್ಣು ಮಾತ್ರ ಬಾಗಿಲಿಗೇ ಅಂಟಿಕೊಂಡಿರುತ್ತಿದ್ದವು. ಅವರ ಮುದ್ದಾದ ಮಾತುಗಳು, ರಾಮಕಥೆಯನ್ನು ಹಾಡುವ ಅವರ ಸಿಹಿಯಾದ ಕಂಠಸ್ವರಗಳು, ತುಂಟ ಚೇಷ್ಟೆಗಳು, ಇವುಗಳಿಂದ ಸೀತೆಯ ಜೀವನ ಹಾಯಾಗಿಯೇ ಸಾಗುತ್ತಿತ್ತು.
ಒಂದು ದಿನ ಲವಕುಶರಿಬ್ಬರು ಸದ್ದಿಲ್ಲದೆ ಬಂದು, ಅಂಗಳದಲ್ಲಿ ನಿಂತಿದ್ದ ತಾಯಿಯತ್ತ ನೋಡದೆ ಹಾಗೆಯೇ ಒಳಗೆ ಹೋದರು. ಇಬ್ಬರೂ ತಲಾ ಒಂದು ಮೂಲೆಗೆ ಮುಖ ಮುರಿದುಕೊಂಡು ಕುಳಿತಿದ್ದರು. ಸೀತೆ ಆಶ್ಚರ್ಯದಿಂದ ಒಳಗೆ ಬಂದು ಮುದುಡಿಕೊಂಡ ಅವರ ಮುಖಗಳನ್ನು  ಪ್ರಸನ್ನಳಾಗಿ ನೋಡುತ್ತಾ-  “ಏನಾಗಿದೆ ಮಕ್ಕಳೇ, ಏಕೆ ಹೀಗಿದ್ದೀರಿ ?” ಎಂದು ಕೇಳಿದಳು.  “ಅಮ್ಮಾ, ನಮ್ಮ ತಂದೆ ಯಾರು ?” “ಅಮ್ಮಾ, ನಾವು ಕ್ಷತ್ರಿಯರಾ ?”  ಸೀತೆಯ ಮುಖ ಕ್ಷಣದಲ್ಲೇ ವಿವರ್ಣಗೊಂಡಿತು. ಅವರು ಶ್ರೀರಾಮನ ಮಕ್ಕಳೆಂದು ಅವರಿಗೆ ಹೇಳುವ ಉದ್ದೇಶ ಆಕೆಗಿಲ್ಲ. ಈ ದಿನ ಮಕ್ಕಳು ಹೀಗೆ ಪ್ರಶ್ನಿಸುತ್ತಿದ್ದರೆ ಸೀತೆಯ ಹೃದಯ ಹೆಪ್ಪುಗಟ್ಟಿದಂತಾಯಿತು. ಮನ ವಿಲವಿಲನೆ ಒದ್ದಾಡಿತು.
 ‘ಮಕ್ಕಳು ತಮ್ಮ ತಂದೆ ಯಾರೆಂದು ಕೇಳುವ ಸಂದರ್ಭ, ಗಂಡ ನಿನ್ನ ಮಕ್ಕಳಿಗೆ ತಂದೆ ಯಾರೆಂದು ಕೇಳುವ ಸಂದರ್ಭ ಕೆಲ ಹೆಂಗಸರ ಬಾಳಿನಲ್ಲಿ ಬಂದೇ ಬರುತ್ತದೆ ಸೀತಾ-ಆಗಿನ ಅವರ ಸ್ಥಿತಿಯನ್ನು ಊಹಿಸಿಕೋ-ನನ್ನ ಮಾತುಗಳು ನಿನಗರ್ಥವಾಗುತ್ತವೆ.’ ರೇಣುಕೆಯ ಮಾತುಗಳು ಈಗ ಮತ್ತೆ ಕಿವಿಯಲ್ಲಿ ಗುನುಗುನಿಸುತ್ತಿರಲು ರಕ್ತವೆಲ್ಲಾ ಮುಖಕ್ಕೆ, ಅಲ್ಲಿಂದ ತಲೆಗೆ ನೆಗೆದಂತಾಯಿತು ಸೀತೆಗೆ. ಆ ಉದ್ವೇಗದಿಂದ ಹೊರಬಂದು ನೆಮ್ಮದಿ ತಂದುಕೊಳ್ಳಲು ಆಕೆಗೆ ಸ್ವಲ್ಪ ಸಮಯ ಬೇಕಾಯಿತು. ಮೆಲ್ಲನೆ ತನ್ನಷ್ಟಕ್ಕೆ ತಾನು ಹಿಡಿತ ಸಾಧಿಸುಕೊಂಡಳು. ಈ ಪ್ರಶ್ನೆಗಳು ಇಂದಲ್ಲದೆ ನಾಳೆ ಬರುತ್ತವೆ. ಉತ್ತರಕೊಡದೆ ಇರಲಾಗದು.  ಆಶ್ರಮದಲ್ಲಿ ಯಾರೋ ಗೊತ್ತೂ ಗೊತ್ತಿರದ ವಯಸ್ಸಿನ ಮಕ್ಕಳು ಲವಕುಶರಿಗೆ ಈ ಮಾತುಗಳನ್ನು ಆಡಿರಬಹುದು. ಇವರು ಅಯೋಮಯಗೊಂಡು, ತಿಳಿಯದ ನೋವಿನಿಂದ ಬಂದಿದ್ದಾರೆ.  ಅವರಿಗೆ ಉತ್ತರಕೊಡುವಷ್ಟು ಶಕ್ತಿಯನ್ನು ತನ್ನ ಮಕ್ಕಳಲ್ಲಿ ಬೆಳೆಸಬೇಕು. ಸೀತೆ ಮಕ್ಕಳಿಬ್ಬರನ್ನು ಹತ್ತಿರಕ್ಕೆ ಕರೆದುಕೊಂಡಳು.
 “ನೀವು ಕ್ಷತ್ರಿಯಪುತ್ರರೇ ಕಂದಗಳಿರಾ.” ಎನ್ನುತ್ತಾ ಇಬ್ಬರನ್ನೂ ಮುದ್ದಾಡಿದಳು. “ಮತ್ತೆ ನಮ್ಮ ತಂದೆ ?” ಇಬ್ಬರೂ ಒಕ್ಕೊರಳಿನಲ್ಲಿ ಕೇಳಿದರು.  “ನಿಮ್ಮ ತಂದೆ ಸಾಕೇತನೆಂಬ ಮಹಾವೀರ. ಪ್ರಜೆಗಳಿಗೆ ಹಿತವನ್ನು ಮಾಡುವ ಒಂದು ಮಹಾಕಾರ್ಯದಲ್ಲಿ ನಿಮಗ್ನನಾಗಿದ್ದಾರೆ. ಅದೆಂಥಾ ದೊಡ್ಡ ಕೆಲಸವೆಂದರೆ  ಆ ಕೆಲಸದೊಳಗೆ ಅವರಿಗೆ ಒಂದು ಕ್ಷಣ ಬಿಡುವಾದರೂ ಸಿಗುವುದಿಲ್ಲ. ಕೆಲವು ವರ್ಷಗಳಿಂದ ಆ ಮಹಾಕಾರ್ಯದ ಹೊರತು ಬೇರೆ ಯಾವ ವಿಷಯದಲ್ಲೂ ತಲೆಹಾಕುವ ಸಮಯವೇಯಿಲ್ಲ. ಆದ್ದರಿಂದ ನಮ್ಮನ್ನು ವಾಲ್ಮೀಕಿ ಅಜ್ಜನ ಬಳಿ ಬಿಟ್ಟಿದ್ದಾರೆ‌.”
 “ಅದಾವ ಕೆಲಸವಮ್ಮಾ ?” ಅಮಾಯಕತೆಯಿಂದ ಕೂಡಿದ್ದ ಕುಶನ ಮುಖದೊಳಗೆ ಆ ಕೆಲಸದ ಕುರಿತು ಗೌರವ ತೇಲಾಡುತ್ತಿತ್ತು.     “ಈ ಲೋಕದೊಳಗಿನ ಪ್ರಜೆಗಳೆಲ್ಲರೂ ಯಾವುದೇ ನೋವು, ಯಾತನೆಗಳಿಲ್ಲದೆ ಬದುಕಬೇಕೆಂಬ ಮಹಾಪ್ರಯತ್ನವದು ಕಂದಾ. ಅಷ್ಟು ಬಿಟ್ಟರೆ ನನಗೂ ಹೆಚ್ಚಿಗೆ ಗೊತ್ತಿಲ್ಲ.”   “ಆ ಕೆಲಸ ಮುಗಿದ ಮೇಲೆ ತಂದೆ ಬರುತ್ತಾರಾ ಅಮ್ಮಾ ?”  “ತಪ್ಪದೇ ಬರುತ್ತಾರೆ. ಬಂದು ನಿಮ್ಮಿಬ್ಬರನ್ನು ಎತ್ತಿಕೊಂಡು ಮುದ್ದಾಡಿ ತಮ್ಮೊಡನೆ ಕರೆದೊಯ್ಯುತ್ತಾರೆ.”     ಮಕ್ಕಳಿಬ್ಬರ ಮುಖದಲ್ಲಿ ಸಂತೋಷವರಳಿ ತಡೆಯಲಾಗದೆ ಅವರು ಕಿಲಕಿಲನೆ ನಕ್ಕರು.  “ಆಯ್ತು, ಇನ್ನು ಹೋಗಿ ನನಗೆ  ಪೂಜೆಗಾಗಿ ಹೂಗಳನ್ನು ತನ್ನಿ” ಎಂದಳು ಸೀತೆ.
ಲೇಖಕಿ ಓಲ್ಗಾ
ಅವರಿಬ್ಬರಿಗೆ ಅಲ್ಲಿಂದ ಕದಲಬೇಕೆನಿಸಲಿಲ್ಲ. ತಮ್ಮ ತಂದೆಯ ಬಗ್ಗೆ ಮೊದಲು ಸಲ ತಿಳಿದುಕೊಂಡಿದ್ದಾರೆ. ಆತ ಕ್ಷತ್ರಿಯನು. ಪ್ರಜೆಗಳಿಗಾಗಿ ದೊಡ್ಡ ಕೆಲಸವೊಂದನ್ನು ತಲೆಮೇಲೆ ಹೊತ್ತ ಮಹಾನುಭಾವನು. ಲವನಿಗೆ ಒಂದು ಸಂದೇಹ ಬಂತು. “ಅಮ್ಮಾ, ನಮ್ಮ ತಂದೆಯೂ ವೀರನಾ ? ಕ್ಷತ್ರಿಯರಿಗೆ ಬಿಲ್ವಿದ್ಯೆ, ಯುದ್ಧ ವಿದ್ಯೆಗಳು ಗೊತ್ತಿರಬೇಕಲ್ಲ-ನಮ್ಮ ತಂದೆಗೆ ಆ ವಿದ್ಯೆಗಳು ಗೊತ್ತಾ ?” ಸೀತೆ ಹೆಮ್ಮೆಯಿಂದ ನಕ್ಕಳು. “ಆ ವಿದ್ಯೆಗಳಲ್ಲಿ ನಿಮ್ಮ ತಂದೆಗೆ ಸರಿಸಾಟಿಯಾದವರು ಈ ಭೂಮಿಯ ಮೇಲೆ ಯಾರೂ ಇಲ್ಲ.”  ಮಕ್ಕಳಿಬ್ಬರು ತಾಯಿಯನ್ನು ಅಪ್ಪಿಕೊಂಡರು.  “ಅಮ್ಮಾ ನಮ್ಮ ತಂದೆ ತಮ್ಮ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಎಂದಿಗೆ ಬರುವರೋ ? ನಮಗೆ ಈ ಕ್ಷತ್ರಿಯ ವಿದ್ಯೆಗಳು ಹೇಗೆ ಒಲಿಯುತ್ತವೆ ? ಈ ಆಶ್ರಮದೊಳಗೆ ನಮಗಾರು ಕಲಿಸುತ್ತಾರೆ ? ಹೇಗಮ್ಮಾ ?” ಸೀತೆಗೆ ಅವರ ಕುತೂಹಲವನ್ನು ನೋಡಿದರೆ ಕಿರುನಗು ನಿಲ್ಲುತ್ತಿಲ್ಲ.
 “ನಿಮಗೆ ಕ್ಷತ್ರಿಯ ವಿದ್ಯೆಗಳನ್ನು ಕಲಿಯಬೇಕೆನಿಸುತ್ತಿದೆ, ಹೌದು ತಾನೆ ? ನಾನೇ ಕಲಿಸುತ್ತೇನೆ.”  “ನೀನಾ !”  “ಏಕೆ ? ನಾನು ಸಹ ಕ್ಷತ್ರಿಯ ಹೆಂಗಸಲ್ಲವೇ.”     “ಆದರೆ ಹೆಂಗಸರು ಯುದ್ಧವನ್ನು ಮಾಡುವುದಿಲ್ಲವಲ್ಲ.”  “ಅಗತ್ಯವಿದ್ದರೆ ಹೆಂಗಸರು ಏನನ್ನಾದರೂ ಮಾಡಬಲ್ಲರು. ನನಗೆ ಎಲ್ಲಾ ವಿದ್ಯೆಗಳೂ ಗೊತ್ತು.ನಾಳೆಯಿಂದ ನಾನು ನಿಮಗೆ ಅಮ್ಮನಂತೆ ಗುರುವೂ ಹೌದು. ಸರಿಯೇ ? ” ಮಕ್ಕಳು ಸಂತಸದಿಂದ ಕುಣಿದಾಡಿದರು.  ವಾಲ್ಮೀಕಿಗೆ ಹೇಳಿ ಸೀತೆ ಲವಕುಶರಿಗೆ ಬಿಲ್ವಿದ್ಯೆಯನ್ನು ಕಲಿಸಲು ಶುರುಮಾಡಿದಳು. ತಾಯಿಯ ವಿದ್ಯಾಕೌಶಲವನ್ನು ಕಂಡು ಮಕ್ಕಳು ಬೆರಗಾಗಿ ಹೋದರು.  ಅಮ್ಮನ ಮೇಲೆ ಅವರಿಗಿದ್ದ ಪ್ರೀತಿಗೆ ಈಗ ಅಮ್ಮನನ್ನು ಈ ರೀತಿ ನೋಡಿದಾಗ ಉಂಟಾಗುವ ಹೆಮ್ಮೆಯು ಜೊತೆಯಾಯಿತು.
ತಮ್ಮ ತಂದೆ ಬರುವ ವೇಳಗೆ ತಾವು ಮಹಾವೀರರಾಗಬೇಕೆಂಬ ಯೋಚನೆ ಹೊರತು ಅವರಿಬ್ಬರೂ ಬೇರೆ ಧ್ಯಾನವಿಲ್ಲದೆ ತಾಯಿಯಿಂದ ವಿದ್ಯೆಗಳನ್ನು ಕಲಿಯುತ್ತಿದ್ದಾರೆ. ರಾಮಾಯಣವನ್ನು ಗಾನ ಮಾಡುತ್ತಾ ವಾಲ್ಮೀಕಿಯ ಬಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳೆಯುತ್ತಿರುವ ಮಕ್ಕಳನ್ನು ನೋಡುತ್ತಿದ್ದರೆ ಸೀತೆಯ ಮನದೊಳಗೆ ಭಯವೂ ಬೆಳೆಯುತ್ತಿದೆ. ಮಕ್ಕಳು ಪ್ರತಿದಿನ ಯಾವುದೋ ನೆಪದಲ್ಲಿ ತಂದೆಯ ಪ್ರಸ್ತಾಪವನ್ನು ಮಾಡುತ್ತಲೇ ಇದ್ದಾರೆ. ತಂದೆಯನ್ನು ಕಾಣಬೇಕೆಂಬ ಅವರ ತವಕವನ್ನು ನೋಡುತ್ತಿದ್ದರೆ ಸೀತೆಗೆ ಎದೆ ಭಾರವೆನಿಸುತ್ತಿದೆ.
“ಅಮ್ಮಾ ತಂದೆ ನಮಗೆಂದು ಕಾಣಸಿಗುತ್ತಾರೆ ?” ಒಂದು ದಿನ ಲವನು ದೀನವಾಗಿ ಕೇಳಿದನು.  ಸೀತೆ ಮಕ್ಕಳಿಬ್ಬರನ್ನು ತಬ್ಬಿಕೊಂಡಳು.  “ಇನ್ನೂ ಕೆಲಕಾಲ ಸಹಿಸಿಕೊಳ್ಳಬೇಕು ಕಂದಾ. ಹೇಳಿದ್ದೆನಲ್ಲ, ಕೆಲವು ಕಾರಣಗಳಿಂದ ಅವರು ಅಜ್ಞಾತವಾಗಿ ಬದುಕುತ್ತಿದ್ದಾರೆ. ಸದ್ಯ ಅವರು ಯಾರೆಂದು ಯಾರಿಗೂ ಗೊತ್ತಾಗಬಾರದು. ಕಾಲ ಕೂಡಿ ಬಂದಾಗ ನಿಮಗೆ ಎಲ್ಲವೂ ಗೊತ್ತಾಗುತ್ತದೆ.”  ಆ ಮಾತುಗಳಿಂದಲೇ ಮಕ್ಕಳಿಬ್ಬರ ಮುಖಗಳು ಆನಂದದಿಂದ ಅರಳಿದವು.     “ಆ ಕಾಲ ಬೇಗ ಬಂದರೆ ಚೆನ್ನಾಗಿರುತ್ತದೆ ಅಲ್ಲವಮ್ಮಾ” ಕುಶನ ಮುಖದಲ್ಲಿ ಏನೋ ಗೊತ್ತಿರದ ಆಸೆ.
 “ಈಗ ನಿಮಗೇನು ಕಡಿಮೆಯಾಗಿದೆ ಹೇಳು ? ಅಜ್ಜ ವಿದ್ಯೆಯನ್ನು ಕಲಿಸುತ್ತಿದ್ದಾರೆ. ನಾನು ಬಿಲ್ವಿದ್ಯೆ ಕಲಿಸುತ್ತಿದ್ದೇನೆ. ನಾನು ಕಲಿಸಬೇಕಾದದ್ದು ಇನ್ನೂ ಬಹಳಷ್ಟಿದೆ.”    “ನೀನು ಕಲಿಸಬೇಕಾದದ್ದು ಮುಗಿದ ಮೇಲೆ ನಮ್ಮ ತಂದೆಯವರು ಬಂದು ಉಳಿದದ್ದನ್ನು ಕಲಿಸುವರಾ ಅಮ್ಮಾ ?”  ಸೀತೆ ನಕ್ಕಳು‌. “ನಾನು ಕಲಿಸಬೇಕಾದದ್ದನ್ನೆಲ್ಲಾ ಕಲಿಸಿದರೆ ನಿಮ್ಮ ತಂದೆಗೆ ಕಲಿಸಲು ಏನೂ ಉಳಿಯುವುದಿಲ್ಲ.”  “ಅಂದರೆ ತಂದೆಗಿಂತ ನಿನಗೇ ಹೆಚ್ಚು ಗೊತ್ತಾ ?”  “ಹೆಚ್ಚು ಕಡಿಮೆ ಎಂದಲ್ಲ ಕಂದಾ. ಅಂದೊಮ್ಮೆ ಒಂದು ದೊಡ್ಡ ಧನಸ್ಸಿತ್ತು. ಅದನ್ನು ಎತ್ತಿ ಬಾಣ ಬಿಡಬಲ್ಲವರು ಅತಿ ಕಡಿಮೆ ಜನ. ಆ ವಿದ್ಯೆ ನನಗೂ ನಿಮ್ಮ ತಂದೆಯವರಿಗೂ ಸಮನಾಗಿಯೇ ಗೊತ್ತು.”  “ನಮಗೂ ಆ ವಿದ್ಯೆ ಕಲಿಸಮ್ಮಾ. ತಂದೆ ಬರುವುದರೊಳಗೆ ಅದನ್ನು ಕಲಿತು ಪ್ರದರ್ಶಿಸಿದರೆ ಅವರು ಆಶ್ಚರ್ಯಗೊಳ್ಳುತ್ತಾರಲ್ಲವಾ ?”
“ನನೆಗೆ ತುಂಬಾ ಕೆಲಸವಿದೆ. ನಿಮ್ಮ ಜೊತೆ ಹೀಗೆ ಮಾತನಾಡುತ್ತಾ ಕೂಡಲಾರೆ.” ಸೀತೆ ಅಲ್ಲಿಂದ ಎದ್ದು ಆಶ್ರಮದ ಹಿತ್ತಲಿಗೆ ಹೋದಳು. ಆಕೆಗೆ ಯಾವ ಕೆಲಸವೂ ಇಲ್ಲ, ಕಲ್ಪಿಸಿಕೊಂಡು ಮಾಡಬೇಕೆಂಬ ಕೋರಿಕೆಯೂ ಇಲ್ಲ.  ತಂದೆಗಾಗಿ ಮಕ್ಕಳು ಆಸೆ ಪಡುತ್ತಿದ್ದಾರೆ. ಕನಸು ಕಾಣುತ್ತಿದ್ದಾರೆ. ತಾನು ಪ್ರಾಣಕ್ಕೆ ಪ್ರಾಣವಾಗಿ ಬೆಳೆಸಿದರೂ, ತಂದೆಯ ಕುರಿತು ಏನೂ ಗೊತ್ತಿಲ್ಲದಿದ್ದರೂ, ದೂರದಲ್ಲಿದ ಆ ತಂದೆಗೆ ಇವರಿಬ್ಬರೂ ಇಲ್ಲಿ ಹುಟ್ಟಿ ಬೆಳೆಯುತ್ತಿದ್ದಾರೆಂದು ತಿಳಿಯದಿದ್ದರೂ, ಇವರಿಗೆ ತಂದೆ ಬೇಕು. ತಂದೆಯ ಹೆಸರಿನಿಂದಲೇ ಮಕ್ಕಳು ಬೆಳೆಯಬೇಕು.  ತಾನು ಜಾನಕಿ-ಭೂಪುತ್ರಿಯಾದರೂ ಜನಕನ ಪೋಷನೆಯಲ್ಲಿ ಬೆಳೆದು ಜಾನಕಿಯಾದಳು. ಇವರಿಬ್ಬರೂ ರಾಮನ ಪುತ್ರರಾಗಿ ಗುರುತಿಸಲ್ಪಟ್ಟರೇನೆ ಗೌರವ. ರಾಮನು ದಾಶರಥಿ. ಆ ಹೆಸರೆಂದರೆ ಆತನಿಗೆ ತುಂಬಾ ಇಷ್ಟ, ಗೌರವ, ಹೆಮ್ಮೆ. ಈ ಮಕ್ಕಳಿಗೂ ಅಂತಹ ಗುರುತು ಬೇಕು. ಇದೆಲ್ಲಾ ಲೋಕಧರ್ಮ.
 ಆದರೆ ಅದೆಲ್ಲಾ ನಡೆಯುವುದಾ ? ರಾಮನು ಈ ಮಕ್ಕಳನ್ನು ತನ್ನ ಬಳಿಗೆ ಕರೆದುಕೊಳ್ಳುವನಾ ? ತನ್ನ ಹೆಸರನ್ನು ಕೊಡುವನಾ ? ತನ್ನ ವಂಶಾಂಕುರರನ್ನಾಗಿ ಗುರುತಿಸುವನಾ ? ಹಾಗೆ ನಡೆಯದಿದ್ದರೆ ಈ ಹಸುಳೆಗಳ ಹೃದಯಗಳು ಅದೆಷ್ಟು ನೊಂದುಕೊಳ್ಳುತ್ತವೆ.  ರಾಮನು ಇವರನ್ನು ಪುತ್ರರೆಂದು ಸ್ವೀಕರಿಸಿ ಅಯೋಧ್ಯೆಗೆ ಕರೆದೋಯ್ದರೆ ತಾನೇನಾಗುವಳು? ಪ್ರಾಣದಂತೆ ಬೆಳೆಸಿದ ತಂದೆಯಿಂದ ದೂರವಾಗಿ ರಾಮನ ಕೈ ಹಿಡಿದಿದ್ದಾಳೆ‌. ಪ್ರಾಣದಂತೆ ಪ್ರೀತಿಸಿದರೂ ರಾಮನು ತನ್ನ ಕೈಬಿಟ್ಟಿದ್ದಾನೆ. ಪ್ರಾಣದಂತೆ ಹೆತ್ತು ಬೆಳಿಸಿದ ಮಕ್ಕಳನ್ನು ತಾನು-ತನ್ನ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳಬಲ್ಲಳಾ ? ಹಿಡಿದುಕೊಳ್ಳಬೇಕಾ ? ಹಿಡಿದುಕೊಂಡರೆ ಇರುವರಾ ? ತಂದೆ ಕರೆದರೆ ಓಡಿಹೋಗಲಾರರಾ ?  ತನ್ನ ಬಳಿಯಾದರೂ ಏನಿದೆ ? ರಾಮನು ಲೋಕಕ್ಕೆ ತಲೆಬಾಗಿ ಹೇರಿದ ನಿಂದೆಯ ಹೊರತು.
 ರಾಮನ ಬಳಿ ರಾಜ್ಯವಿದೆ. ತನಗಾಗಿಯೂ ಬಿಟ್ಟುಕೊಡದ ಮೋಹ ಆ ರಾಜ್ಯದ ಮೇಲೆ. ಈ ಮಕ್ಕಳಾದರೂ ತನಗಾಗಿ ಆ ರಾಜ್ಯವನ್ನು ತೊರೆದು ಬರುವರಾ ? ಅವರ ಕ್ಷಾತ್ರ ರಕ್ತವು ತೊರೆಯಲು ಬಿಡುವುದಾ ? ಸೀತೆ ತನ್ನ ಆಲೋಚನೆಗಳಿಂದ ಅಲ್ಲೋಲ ಕಲ್ಲೋಲವಾದಳು. ತಾಯಿಯಾಗಿ ತನಗೆ ಇವರ ಮೇಲೆ ಯಾವ ಅಧಿಕಾರವೂ ಇಲ್ಲ. ಅಷ್ಟಕ್ಕೂ ತನಗೆ ಅಧಿಕಾರದ ಮೇಲೆ ಯಾವ ಮೋಜೂ ಇಲ್ಲ. ಪ್ರೀತಿ ? ತಂದೆಯನ್ನು ಪ್ರೀತಿಸಿದಳು, ರಾಮನನ್ನು ಪ್ರೀತಿಸಿದಳು, ಮಕ್ಕಳನ್ನು ಪ್ರೀತಿಸಿದಳು. ಯಾವ ಪ್ರೀತಿಯಲ್ಲೂ ಅಧಿಕಾರವಿಲ್ಲ. ಬೇಡ.  ಪ್ರಕೃತಿ ತನಗೆ ಕರುಣಿಸಿದ ಮಕ್ಕಳು ಇವರು. ಚಿಗರೆ ಮರಿಗಳಂತೆ ಬೆಳೆಸಿದ್ದಾಳೆ. ಬೆಳೆದು ದೊಡ್ಡವಾದ ಮರಿಚಿಗರೆಗಳು ಕೆಲವು ದಿನಕ್ಕೆ ಕಾಡೊಳಗೆ ಹೋಗಿ ಮರಳಿ ಬರವುದಿಲ್ಲ. ಈ ಮಕ್ಕಳೂ ಅಷ್ಟೇ- ಸೀತೆ ತನ್ನ ಹೃದಯವನ್ನು ಸ್ವಾಧೀನಕ್ಕೆ ತಂದುಕೊಳ್ಳಲು ಹೆಣಗಾಡುತ್ತಿದ್ದಳು.
                                            * **
 ಲವಕುಶರಿಬ್ಬರೂ ವಾಲ್ಮೀಕಿಯೊಡನೆ ಅಯೋಧ್ಯೆಗೆ ಹೋಗಿ ಹತ್ತು ದಿನಗಳಾದವು. ಹತ್ತು ದಿನಗಳಿಂದ ಸೀತೆಯ ಮನಕೆ ನೆಮ್ಮದಿಯೇ ಇಲ್ಲ. ಅಯೋಧ್ಯೆಯಲ್ಲಿ ಈ ಮಕ್ಕಳಿಗೆ ಶ್ರೀರಾಮಚಂದ್ರನ ದರ್ಶನವಾಗುವುದೇ ? ಆತ ಇವರನ್ನು ಗುರುತಿಸುವನೇ ? ವಾಲ್ಮೀಕಿಯನ್ನು ಪ್ರಶ್ನಿಸುವನೇ ? ವಾಲ್ಮೀಕಿಯು ಹೇಳಿದರೆ ರಾಮನು ಅದೇಗೆ ಸ್ಪಂದಿಸುತ್ತಾನೆ ? ರಾಮನೇ ತಮ್ಮ ತಂದೆಯೆಂದು ತಿಳಿದು ಮಕ್ಕಳೇಗೆ ಸ್ಪಂದಿಸುತ್ತಾರೆ ? ತಮ್ಮ ತಾಯಿ ಸೀತೆ ಎಂದು ಗೊತ್ತಾದರೆ ಆ ಮಕ್ಕಳ ಆನಂದವು ಮುಗಿಲುಮುಟ್ಟುತ್ತದೆ. ಆದರೆ ಆ ಬಳಿಕ ? ಅಲ್ಲಿಗೆ ಎಲ್ಲವೂ ತಿಳಿಗೊಂಡು-ರಾಮನು ಮಕ್ಕಳಿಗಾಗಿ ಬಂದರೆ ? ಮಕ್ಕಳು ತನ್ನನ್ನು ಬಿಟ್ಟು ಹೋಗುವರಾ? ರಾಮನು ತನ್ನನ್ನು ಕರೆಯುವನಾ ?
ಕರೆದರೆ ಮಾತ್ರ ತಾನು ಹೋಗುವಳಾ ? ಮಕ್ಕಳು ತನ್ನನ್ನು ಬಿಟ್ಟು ಹೋಗಲ್ಲವೆಂದರೆ- ಅನ್ನುವುದಿಲ್ಲ. ತಂದೆಯೆಂದರೆ ಅವರಿಗೆ ಪ್ರೀತಿ, ಹೆಮ್ಮೆ.  ತಾನು ಹೇಳಿದ ಮಾತುಗಳಿಂದ ತಂದೆಯನ್ನು ದೇವರಂತೆ ಭಾವಿಸುತ್ತಿದ್ದಾರೆ.  ಹೆತ್ತು, ಬೆಳೆಸಿ ತಂದೆಯನ್ನು ಮೀರಿದ ವೀರರನ್ನಾಗಿಸಿದ ಆ ಮಕ್ಕಳನ್ನು ಬಿಟ್ಟುಕೊಡಲೇಬೇಕು. ತಂದೆ ಬಂದು ಕೇಳಿದರೆ ನನ್ನ ಮಕ್ಕಳೆನ್ನುವ ಅವಕಾಶವಿಲ್ಲ. ಅವರು ರಘುವಂಶಕ್ಕೆ ಸೇರುತ್ತಾರೆ. ಆ ವಂಶವನ್ನು ಮುಂದುವರಿಸಬೇಕು.
 ಸೀತೆಗೆ ಮತ್ತೆ ರೇಣುಕೆ ನೆನಪಾದಳು. ರೇಣುಕೆಯ ಮಾತುಗಳಿಂದ ಆ ದಿನ ತನಗೆ ಹೇಸಿಗೆಯೆನಿಸಿತು. ಈಗ ರೇಣುಕೆಯ ನೋವು ಅರ್ಥವಾಗುತ್ತಿದೆ. ರಾಮನು ಅಗ್ನಿ ಪರೀಕ್ಷೆ ಕೋರಿದ ದಿನ, ಕಾಡಿಗೆ ಕಳಿಸಿದ ದಿನ, ಸೀತೆಗೆ ರೇಣುಕೆ ಮಾಡಿದ್ದ ಮರಳಮಡಿಕೆಯೇ ನೆನಪಾಯಿತು. ಅಹಲ್ಯೆ, ರೇಣುಕೆ,
ತಾನು ಎಲ್ಲರೂ ಅನುಮಾನಿತರೇ, ಅವಮಾನಿತರೇ. ರಾಮನು ಪರಿತ್ಯಜಿಸಿದ್ದರಿಂದ  ಹತಾಶಳಾದ ತನ್ನನ್ನು ಅಹಲ್ಯೆ ಮತ್ತೆ ಮನುಷ್ಯಳನ್ನಾಗಿ ಮಾಡಿದಳು.      ಆ ದಿನ ಅಹಲ್ಯೆ ಮುಂದಾಲೋಚನೆಯಿಂದಲೇ ಹಾಗೆ ಹೇಳಿರಬೇಕು.
 ಯಾವ ಆಸೆಗಳನ್ನೂ ಇಟ್ಟುಕೊಳ್ಳದೆ ನಿನ್ನ ಮಕ್ಕಳನ್ನು ಚಿಗರೆ ಮರಿಗಳಂತೆ ಬೆಳೆಸೆಂದು. ತನಗೆ ಯಾವುದೇ ಹಿರಿದಾಸೆಗಳಿಲ್ಲ.  ಆದರೆ ಮಕ್ಕಳು ದೂರವಾಗುತ್ತಾರೆಂದರೆ ಎಲ್ಲೋ ಆ ಕರುಳಬಂಧವು ನರಳುತ್ತಿದೆ. ಒಮೊಮ್ಮೆ ಆ ನರಳುವಿಕೆಯ ಭೀಕರತೆಗೆ ತನ್ನ ಶರೀರವೆಲ್ಲಾ ಮಾರ್ದನಿಸುತ್ತಿದೆ. ಒಂದು ಮಹಾ ಶೂನ್ಯವು  ಮನದ ತುಂಬೆಲ್ಲಾ ಆವರಿಸಿಕೊಳ್ಳುತ್ತಿದೆ. ಕಣ್ಣ ಮುಂದೆ ಹೊಳೆಯುತ್ತಿರುವ ಚಂದಮಾಮಗಳು ಒಂದೇ ಸಮನೆ ಮಾಯವಾದರೆ ಎಲ್ಲ ಕಗ್ಗತ್ತಲೆ ತಾನೇ-  ಆ ಕತ್ತಲೆಯಲ್ಲಿ ತನ್ನ ಕೈಹಿಡಿದು ನಡೆಸುವವರು ಯಾರು ?
“ನಾನಿಲ್ಲವೇ ತಾಯಿ !” ಭೂದೇವಿ ಆತ್ಮೀಯವಾಗಿ ಅಂದ ಆ ಮಾತಿಗೆ ಮತ್ತೆ ಸಾವಿರಾನೆಗಳ ಬಲ.  ತನ್ನ ತಾಯಿ ಸ್ವತಂತ್ರಳು. ತಾನು ಆ ತಾಯಿಯ ಬಳಿ ಹೋಗಬಹುದು. ತನ್ನ ತಾಯಿ ಸರ್ವಶಕ್ತಳು. ಆದ್ದರಿಂದ ತನ್ನನ್ನು ಆದರಿಸಿ ಅಪ್ಪಿಕೊಳ್ಳುವ ಅವಕಾಶವಿದೆ. ಪುತ್ರರು, ಪಿತೃಗಳು, ಪಿತೃವಾಕ್ಯಾ-ಪರಿಪಾಲನೆ, ಪಾತಿವ್ರತ್ಯ, ಮಾತೃತ್ವ ಎಲ್ಲವನ್ನೂ ತಾನು ಕಂಡಿದ್ದಾಳೆ. ತಾನು ಅರಿಯದ-ಅಹಲ್ಯೆ, ಶೂರ್ಪನಖಿ, ಊರ್ಮಿಳೆ ಯಾರೂ ಅರಿಯದ ಅನುಭವ ರೇಣುಕೆಯದು. ಹೆತ್ತ ಮಗನ ಕ್ರೌರ್ಯವನ್ನು ಕಂಡಿದ್ದಾಳೆ‌‌ ರೇಣುಕೆ. ತಂದೆ ಹೇಳಿದ ಮಾತು ವೇದವಾಕ್ಯವೆಂದು ಭಾವಿಸಿ ತಾಯಿಯ ತಲೆಯನ್ನೇ ಕಡಿದುಹಾಕಲು ಸಿದ್ಧನಾದ ಮಗನ ಧರ್ಮಬದ್ಧ ಕ್ರೌರ್ಯವನ್ನು ಕಂಡಿದ್ದಾಳೆ‌. ಆ ಕ್ರೌರ್ಯಕ್ಕೆ ಬುನಾದಿ ಏನೆಂದು ಗ್ರಹಿಸಿದ್ದಾಳೆ. ಆಗ ಆಕೆಯಲ್ಲಿ ಎಷ್ಟೊಂದು ಸುಳಿ ಸುತ್ತಿದ್ದೆವೋ ? ಅವುಗಳ ಆಳವೆಷ್ಟೋ ? ಎಷ್ಟೆಂದರೆ-ಆರ್ಯ ಧರ್ಮಗಳನ್ನೇ ಸವಾಲು ಮಾಡುವಷ್ಟು.
 ಆದರೆ ತನಗೆ ಅಷ್ಟೊಂದು ಶಕ್ತಿ ಇದೆಯಾ ? ವಂಶಕ್ಕೆ ವಂಶಾಂಕುರರನ್ನು ಕೊಟ್ಟು ನಿರ್ಮಮಕಾರದಿಂದ ತನ್ನ ತಾಯಿಯ ಮಡಿಲು ಸೇರಬೇಕು, ಅಷ್ಟೇ. ಆದರೆ ಆ ಕಾರ್ಯವು ಆರ್ಯ ಧರ್ಮಗಳನ್ನು ಧಿಕ್ಕರಿಸುವುದೇ ಆಗುತ್ತದಲ್ಲ. ಶೂರ್ಪನಖಿ, ಅಹಲ್ಯೆ, ರೇಣುಕೆ, ಊರ್ಮಿಳೆ ಒಬ್ಬೊಬ್ಬರದೂ ಒಂದೊಂದು ಕಥೆ. ಒಬ್ಬೊಬ್ಬರದೂ ಒಂದೊಂದು ಹಾದಿ. ಆದರೆ ತನ್ನ ಹಾದಿ, ತನ್ನ ನಿಲುವು ತನ್ನದು.  ಅವರೆಲ್ಲರ ಅನುಭವಗಳಿಂದ ತಾನು ಕಲಿಯಬೇಕಾದದ್ದನ್ನು ಕಲಿತಿದ್ದಾಳೆ. ಮೊದಲು ಎಲ್ಲರ ಬಗ್ಗೆಯೂ ತನಗೆ ಅಸಡ್ಡೆ, ಕೋಪ. ಆಮೇಲೆ ಎಲ್ಲರ ಜೀವನದೊಳಗಿನ ಕಥೆಗಳು ಒಂದೇ ಎಂದು ಅರಿತಾಗ ಸಾಮರಸ್ಯ, ಸ್ನೇಹ. ತನ್ನಂತವರ ಗೋಳನ್ನು ಕೇಳಿದ ಮೇಲೆ ತಾನು ಏಕಾಂಗಿ ಅಲ್ಲವೆಂದು ಒಂದು ಬಗೆಯ ಬಲ. ಹೆಂಗಸರ ಸಮೂಹದಲ್ಲಿ ತಾನೂ ಒಬ್ಬಳೆಂಬ ಪ್ರಜ್ಞೆ. ಅದು ಕೊಟ್ಟ ಧೈರ್ಯದಿಂದಲೇ ಅಂತಹ ನಿಂದೆಯಿಂದಲೂ ಅವಳಿ ಪುತ್ರರ ಗರ್ಭವನ್ನು ಹೊರುವಂತಾದಳು. ಅವರನ್ನು ಆನಂದದಿಂದ ಬೆಳೆಸುವಂತಾದಳು. ಎಲ್ಲಾ ವಿದ್ಯೆಗಳನ್ನೂ ಕಲಿಸುವಂತಾದಳು.
ಸೀತೆಯ ಈ ಯೋಚನೆಗಳನ್ನೆಲ್ಲಾ ಭಗ್ನಗೊಳಿಸುತ್ತಾ ವಾಲ್ಮೀಕಿಯು ಬಂದನು. ಆತನಿಗೆ ಆಸನವನ್ನು ಹಾಸಿ ಮರ್ಯಾದೆಗಳನ್ನು ತೀರಿಸಿದಳು. “ಅಮ್ಮಾ ರಾಮನು ಎಲ್ಲವನ್ನೂ ಗ್ರಹಿಸಿದ್ದಾನೆ. ಲವಕುಶರನ್ನು ತನ್ನ ಕುವರರನ್ನಾಗಿ ಗುರುತಿಸಿದ್ದಾನೆ. ಅವರನ್ನು ಸಗೌರವದಿಂದ ಸ್ವೀಕರಿಸಲು ಸಿದ್ಧನಾಗಿದ್ದಾನೆ.”     ವಾಲ್ಮೀಕಿಯ ಕಂಠದ ತುಂಬಾ ಆನಂದ. ಆತನ ಕರ್ತವ್ಯವನ್ನು ಆತ ನೆರವೇರಿಸಿದ್ದಾನೆ. ಶ್ರೀರಾಮನ ಮಕ್ಕಳು, ತನ್ನ ಕಥಾನಾಯಕನ ತನಯರು ತನ್ನ ಆಶ್ರಮದಲ್ಲಿ ಸುರಿಕ್ಷಿತಾರಿದ್ದು ತಂದೆಯನ್ನು ಸೇರುತ್ತಿದ್ದಾರೆ‌. ತನ್ನ ಮಹಾಕಾವ್ಯವು ತಂದೆ-ತನಯರ ಕೂಡುವಿಕೆಯಿಂದ ಸುಖಾಂತ್ಯವಾಗುತ್ತದೆಂಬ ಉದ್ವೇಗದಲ್ಲಿ,  ಉತ್ಸಾಹದಲ್ಲಿ ಆತನಿದ್ದಾನೆ.
ಸೀತೆ ತೊಣಕಾಡದೆ “ಒಳ್ಳೆಯದೆ ತಾನೆ ಮುನೇಶ್ವರಾ !” ಎಂದು ಸುಮ್ಮನಾದಳು. ಆಗ ಆತನ ಆನಂದಕ್ಕೆ ತಡೆಯಾಯಿತು. ಸೀತೆಯ ಸಂಗತಿ ಬಗೆಹರೆಯಬೇಕಲ್ಲ-ಆತ ಯೋಚನೆಗೆ ಜಾರಿದನು.  “ಅಮ್ಮಾ-ರಾಮನು ನಿನ್ನನ್ನು ಸಭೆಗೆ ಬಂದು ಸಭಿಕರೆಲ್ಲರ ಮುಂದೆ ಸತ್ಯವನ್ನು ಹೇಳಲು ತಿಳಿಸಿದ್ದಾನೆ. ಆಮೇಲೆ ನೀನಿನ್ನು ಪಟ್ಟಮಹಿಷಿ‌. ತದನಂತರ ವೀರಮಾತೆ, ರಾಜಮಾತೆ.”   ಸೀತೆಗೆ ಗಹಗಹಿಸಿ ನಗಬೇಕೆನಿಸಿತು. ವಾಲ್ಮೀಕಿಯ ಮೇಲಿನ ಗೌರವದಿಂದ ನಿಗ್ರಹಿಸಿಕೊಂಡು, ಕಿರುನಗುತ್ತಲೇ ಕೇಳಿದಳು-   “ನನಗೆ ಅಷ್ಟೊಂದು ಅಗತ್ಯವಿದೆಯಾ ? ಈ ಪ್ರಯಾಸಕ್ಕೆ ನಿಮಗೆ ಅರ್ಥವಿದೆ ಅನ್ನಿಸುತ್ತಿದೆಯಾ ?”
 ವಾಲ್ಮೀಕಿ ಬಾಯಿಂದ ಮಾತು ಹೊರಡಲೇಯಿಲ್ಲ. ಆದರೆ ಸೀತೆಯ ಸ್ಥಿರ, ಸ್ಥಿತ ಅಂತರಂಗವು ಆತನಿಗೆ ಮನಗತವಾಯಿತು.  “ನಿನಗೆ ಹೇಳುವಷ್ಟು ಶಕ್ತಿ,ಸಾಹಸ ನನಗಿಲ್ಲ ತಾಯಿ.” ಎನ್ನುತ್ತಾ ಸೀತೆಯ ತಲೆ ಮೇಲೆ ಕೈ ಹಾಕಿ ಮನದಲ್ಲಿಯೇ ಆಶೀರ್ವದಿಸಿ ಹೋದನು. ಸೀತೆ ಲವಕುಶರು ಬರುವ ಮುನ್ನವೇ ತನ್ನ ಪ್ರಯಾಣದ ಸನ್ನಾಹಗಳು ಮುಗಿಯಬೇಕೆಂದು ಆ ಕೆಲಸದಲ್ಲಿ ಲೀನವಾದಳು. ‌ ವಿದಾಯ ಹೇಳಬೇಕಾದವರು ಬಹಳ ಜನ ಇದ್ದಾರೆ.
                                          * * *
ಲವಕುಶರಿಬ್ಬರೂ ಬಂದು ತಾಯಿಯಿಲ್ಲದ ತಮ್ಮ ಆಶ್ರಮ-ಕುಟೀರವನ್ನು ಕಂಡು ಖಿನ್ನರಾದರು. ಅವರಿಗೀಗ ಎಲ್ಲವೂ ಗೊತ್ತು.  ತಾಯಿಯ ಬಗ್ಗೆ ಕೇಳಲೆಂದು ಆವೇಶದಿಂದ ವಾಲ್ಮೀಕಿ ಬಳಿಗೆ ಬಂದರು. ವಾಲ್ಮೀಕಿ ಮಹರ್ಷಿ ಸೀತೆಯಾಡಿದ್ದ ಮಾತುಗಳನ್ನೇ ಅವರಿಗೆ ಹೇಳಿದರು.  ಅವರಿಗೆ ಮೊದಲ ಸಲ ತಾಯಿಯ ಮೇಲೆ ಕೋಪ ಬಂತು.  ತಂದೆ ಹೇಳಿದಂತೆ ಒಂದು ಸಲ ತುಂಬಿದ ಸಭೆಯೊಳಗೆ ಮಾತನಾಡಿ ತನ್ನ ನಿರಪರಾಧಿತನವನ್ನು ನಿರೂಪಿಸಿಕೊಂಡರೆ ಎಷ್ಟು ಚೆನ್ನಾಗಿರುತ್ತಿತ್ತು. ತಮಗೆಷ್ಟು ಖುಷಿಯಾಗುತ್ತಿತ್ತು. ಆ ಪುಟಾಣಿಗಳ ಎದೆಯಲ್ಲಿ ಸಣ್ಣನೆಯ ಉರಿ. ಅವರೀಗ ಋಷಿಯಾಶ್ರಮದಲ್ಲಿ ವಾಸಿಸುವ ಹಸುಗೂಸುಗಳಲ್ಲ. ಆರ್ಯಪುತ್ರರು. ರಾಜಕುಮಾರರು. ಭಾವಿ ಭೂಪಾಲಕರು. ಆದರೆ ಭೂಪುತ್ರಿ ಸೀತೆ ಅವರಿಗೆ ಎಂದಾದರೂ ಅರ್ಥವಾಗುವಳೋ ಇಲ್ಲವೋ.

ಕನ್ನಡಕ್ಕೆ : ಅಜಯ್ ವರ್ಮಾ ಅಲ್ಲೂರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *