ಮಮತಾಮಯಿ ಬುಳ್ಳವ್ವ – ಆರ್.ಬಿ. ಗುರುಬಸವರಾಜ ಹೊಳಗುಂದಿ

ಟಣ್ ಟಣ್ ಠಣಾ, ಜೇಬು ತುಂಬಾ ಹಣ, ಮೇಲಕ್ಕೆತ್ತಿ ಬಿಡಲು ಸದ್ದು, ಟಣ್, ಟಣಾ, ಠಣ್. ಒಂದನೇ ತರಗತಿಯ ಪಠ್ಯದಲ್ಲಿನ ಈ ಪದ್ಯ ಎಲ್ಲರಿಗೂ ಮನೆಮಾತು. ಇದು ಪಠ್ಯದಲ್ಲಿ ಬರುವುದಕ್ಕೂ ಮುಂಚೆ ಈ ಪದ್ಯದ ಕಲ್ಪನೆ ಬಹುತೇಕರಿಗೆ ಇರಲಿಕ್ಕಿಲ್ಲ. ಆದರೆ ಈ ಪದ್ಯದ ಮೊದಲ ಪದವನ್ನೇ ತನ್ನ ಹೆಸರಿನ ಪೂವಾರ್ಧಕ್ಕೆ ಸೇರಿಸಿಕೊಂಡವಳ ಕತೆ ಬಲು ರೋಚಕವಾದುದು.

ಆಕೆಯ ಹೆಸರು ಬುಳ್ಳವ್ವ. ಯಾರಾದ್ರೂ ‘ನಿನ್ನ ಹೆಸರೇನಬೇ?’ ಎಂದು ಕೇಳಿದರೆ ನಾಚುತ್ತಾ “ಟಣ್ ಟಣ್ ಬುಳ್ಳವ್ವ” ಎನ್ನುತ್ತಿದ್ದಳು. ‘ಟಣ್ ಟಣ್ ಅಂದ್ರೆ ಏನು?’ ಅಂತಾ ಕೇಳಿದ್ರೆ, “ಲಕ್ಷ್ಮಿ ,,, ಲಕ್ಷ್ಮಿ ಅಂತ, ಆಕಿ ಟಣ್ ಟಣ್ ಕುಣಕೋತ ತಿರುಗುತಾಳ” ಅಂತಿದ್ಲು. ‘ಈ ಲಕ್ಷ್ಮಿ ಯಾರಬೇ?’ ಎಂದರೆ “ಆಕಿ ಎಲ್ಲಾರ ಹತ್ರಾನೂ ಓಡಾಡುತಾಳ. ಆದ್ರೆ ಬಡವರ ಹತ್ರ ಮಾತ್ರ ನಿಲ್ಲೋದಿಲ್ಲ. ಆಕಿ ಇಲ್ಲದ ಏನೂ ನಡೆಯೋದು ಇಲ್ಲ” ಅಂತಿದ್ಲು. ಅಂದ್ರ ಹಣದ ಮಹತ್ವ ಆಕಿಗೆ ತಿಳಿದಿತ್ತು ಅನ್ನೋದು ಗೊತ್ತಾಗುತ್ತಿತ್ತು.

ಈಕೆ ಕೆಳಗಿನ ಕೇರಿಯವಳು. ಈಕೆಯ ತಂದೆ ತಾಯಿ ಯಾರೆಂದು ಬಹುತೇಕರಿಗೆ ತಿಳಿದಿಲ್ಲ. ಊರಿನ ಆಯ್ದ ಮನೆಗಳಲ್ಲಿ ಭಿಕ್ಷೆ ಬೇಡುವಳು. ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ಜೋಳಿಗೆ. ‘ಯವ್ವಾ ಉಣ್ಣಾಕ ಏನಾದ್ರೂ ಇದ್ರ ಕೊಡ್ರಿ’ ಎಂಬುದು ಆಕೆಯ ಘೋಷವಾಕ್ಯ. ಮನೆ ಮುಂದೆ ಕುಂತು ಅವರು ನೀಡಿದ ಊಟ ಪಡೆದು ‘ಯವ್ವಾ ನಾ ಬರುತೇನ’ ಎನ್ನುತ್ತಾ ಮೆಲ್ಲಗೆ ಹೊರಡುವಳು. ಕಾಲು ಸೋತಾಗ ಅಲ್ಲೇ ಕಟ್ಟೆ ಮ್ಯಾಲ ಒಂದಿಷ್ಟು ಹೊತ್ತು ಕುಂತು ದಣಿವಾರಿಸಿಕೊಂಡು ಮುಂದಿನ ಮನೆಗೆ ಹೆಜ್ಜೆ ಹಾಕುವಳು. ಸಣ್ಣ ಹುಡುಗರು ‘ಬುಳ್ಳವ್ವ ಬುಳ್ಳವ್ವ ಒಂದು ಹಾಡು ಹೇಳಬೇ’ ಅಂದ್ರ ಸಾಕು ನಾಚುತ್ತಾ “ನಂಗೆ ಬರೋದಿಲ್ಲ, ನಂಗೆ ಬರೋದಿಲ್ಲ” ಎಂದು ರಾಗವಾಗಿ ಹಾಡುವಳು. ಹಾಡುವಾಗ ಅವಳ ಒನಪು ವೈಯಾರವನ್ನು ನೋಡುವುದೇ ಖುಷಿ. ನಿನ್ನ ಗಂಡನ ಹೆಸರೇನಬೇ ಬುಳ್ಳವ್ವ ಎಂದರೆ ಸಾಕು “ನನಗಿನ್ನೂ ಮದುವೆ ಆಗಿಲ್ಲ” ಎನ್ನುವಳು. ‘ಯಾಕೆ ಇನ್ನೂ ಮದುವೆ ಆಗಿಲ್ಲ’ ಎಂದರೆ “ನನಗೆ ಯಾವ ಗಂಡೂ ಇಷ್ಟವಾಗಿಲ್ಲ” ಎನ್ನುವಳು. ಇದು ಗಂಡಿನ ಮೇಲಿನ ದ್ವೇಷವೋ, ನಿರಾಕರಣೆಯೋ ತಿಳಿಯುತ್ತಿಲ್ಲ.

ಕೆಲವು ಮನೆಗಳಲ್ಲಿ ಹೆಣ್ಣುಮಕ್ಕಳು ಆತ್ಮೀಯವಾಗಿ ಮಾತನಾಡಿಸಿದರೆ, ‘ಯವ್ವಾ ಒಂದು ಹಳೆ ಸೀರೆ ಇದ್ರೆ ಕೊಡ್ರಿ, ಪುಣ್ಯ ಬರುತೈತಿ’ ಎನ್ನುವಳು. ಕೊಟ್ಟಷ್ಟು ಬಟ್ಟೆ, ನೀಡಿದಷ್ಟು ಊಟ ಪಡೆದು ಮುಂದೆ ಹೋಗುವಳು. ಈಕೆ ಮನೆ ಮನೆಗೂ ಹೋಗಿ ಸಂಗ್ರಹಿಸಿದ ಆಹಾರ ಮತ್ತು ಬಟ್ಟೆಗಳನ್ನು ಏನು ಮಾಡುವಳು ಎಂಬುದೇ ಬಹುತೇಕರಿಗೆ ಯಕ್ಷಪ್ರಶ್ನೆ. ಬಹುತೇಕರಿಗೆ ಇದರ ಹಿಂದಿನ ಸತ್ಯ ತಿಳಿದಿಲ್ಲ.

ಸಂದಿಗೊಂದಿಗಳಲ್ಲಿ ಸುತ್ತಾಡುತ್ತಾ ಒಂದು ಹಾಳು ಮನೆಯೊಳಕ್ಕೆ ಹೋಗುವಳು. ಅಲ್ಲಿ ನಾಲ್ಕಾರು ನಾಯಿಗಳು ಇವಳ ಬರುವನ್ನೇ ಕಾಯುತ್ತಿರುತ್ತವೆ. ಜೊತೆಗೆ ಎಂಟ್ಹತ್ತು ಹುಡುಗರು. ಅವರಲ್ಲಿ ಕೆಲವರಿಗೆ ಮೇಲಿನ ಬಟ್ಟೆ ಇಲ್ಲ, ಕೆಲವರಿಗೆ ಕೆಳಗಿನ ಬಟ್ಟೆ ಇಲ್ಲ. ಅವು ಹೊಲಿದ ಬಟ್ಟೆಗಳಲ್ಲ, ತುಂಡು ಬಟ್ಟೆಗಳು. ಕರಿಶಿಲೆಯಂತಿರುವ ಕೃಷ್ಣರೂಪಿಗಳು. ಇವಳು ಬಂದೊಡನೆ ನಾಯಿಗಳು ಕುಯ್,,,, ಕುಯ್,,,, ರಾಗ ಹಾಡುತ್ತಾ ಬಾಲ ಅಲ್ಲಾಡಿಸುತ್ತಿದ್ದರೆ, ಹುಡುಗರು ಏನೇನು ತಂದಿದ್ದಾಳೆ ಎಂದು ಭಿಕ್ಷಾ ಚೀಲ ಹುಡುಕುವರು.

ಬುಳ್ಳವ್ವ ತಾನು ತಂದ ಆಹಾರದಲ್ಲಿ ಅರ್ಧ ಆಹಾರವನ್ನು ಹುಡುಗರಿಗೆ ನೀಡುವಳು. ಒಂದಿಷ್ಟು ತಾನು ತಿನ್ನುವಳು. ಉಳಿದ ಅರ್ಧ ಭಾಗವನ್ನು ನಾಯಿಗಳಿಗೆ ಹಂಚುವಳು. ಈ ಮಕ್ಕಳು ಯಾರು? ಬುಳ್ಳವ್ವ ತನಗೆ ಮದುವೆ ಆಗಿಲ್ಲ ಎಂದು ಹೇಳುತ್ತಾಳೆ. ಆದರೆ ಇಲ್ಲಿರುವ ಮಕ್ಕಳು ಯಾರು? ಅವರೇಕೆ ಇವಳ ಬರುವನ್ನೇ ಕಾಯುತ್ತಿದ್ದರು? ಇತ್ಯಾದಿ ಪ್ರಶ್ನೆಗಳು ಕಾಡುವುದು ಸಹಜ. ಈ ಮಕ್ಕಳು ಕೇರಿಯ ಬಡಮಕ್ಕಳು. ಮನೆಯಲ್ಲಿ ಸರಿಯಾಗಿ ಆಹಾರ ದೊರೆಯದೇ ಕೃಶದೇಹ ಹೊಂದಿದ್ದಾರೆ. ಬುಳ್ಳವ್ವ ತಂದ ಆಹಾರವೇ ಅವರ ಪಾಲಿನ ಜೀವಾಮೃತ. ಅವಳು ತಂದ ಹಳೆ ಸೀರೆಗಳೇ ಅವರ ಉಡುಪುಗಳು. ಹೀಗೆ ತನ್ನ ಇಡೀ ಜೀವನವನ್ನು ಇತರರಿಗೆ ಮೀಸಲಿರಿಸಿದ ಬುಳ್ಳವ್ವ ಒಂದು ರೀತಿಯ ಸಮಾಜ ಸೇವಕಳಲ್ಲವೇ? ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಬದುಕಿದರೂ ಪುರಾತನ ಕಾಲದವಳಂತೆ ಬದುಕಿದ್ದು ಮಾದರಿಯಲ್ಲವೇ? ಸದಾಕಾಲವೂ ಸಕಲರಿಗೆ ಲೇಸನ್ನೇ ಬಯಸುವ ಬುಳ್ಳವ್ವ ಬುದ್ದ, ಬಸವ, ಅಂಬೇಡ್ಕರರಂತೆ ಮಹಾನ್ ಮಾನವತಾ ವಾದಿಯಲ್ಲವೇ?

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *