ಮದ್ಯ ನಿಷೇಧಕ್ಕೆ ಆಗ್ರಹ: ಮಹಿಳೆಯರ ಗಟ್ಟಿನಡೆ

ಈಗ ಕರ್ನಾಟಕದ ದೃಢ ಮನಸ್ಸಿನ ಮಹಿಳೆಯರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ, ಬೃಹತ್ ಆಂದೋಲನವನ್ನು ಕಟ್ಟುತ್ತಿದ್ದಾರೆ. ಅದನ್ನು ಎಲ್ಲ ಜನಪರ ಮನಸ್ಸುಗಳು ತ್ರಿಕರಣ ಪೂರ್ವಕ ಬೆಂಬಲಿಸಬೇಕಿದೆ.

ಮದ್ಯ ಕುರಿತ ಎರಡು ಪ್ರಸಂಗಗಳು ಈ ಹೊತ್ತಿನಲ್ಲಿ ನಮ್ಮ ಗಮನ ಸೆಳೆಯುತ್ತಿವೆ. ಆದರೆ ಒಂದಕ್ಕೆ ಭಾರಿ ಪ್ರಚಾರ ಸಿಕ್ಕಿದರೆ, ಇನ್ನೊಂದಕ್ಕೆ ಇಲ್ಲವೇ ಇಲ್ಲ. ಚುನಾವಣೆಯಲ್ಲಿ ಗೆದ್ದ ಶಾಸಕರು ಮಾಡಬೇಕಾದ ಕೆಲಸ ಬಿಟ್ಟು, ಪ್ರಜಾತಂತ್ರವನ್ನು ಅಣಕಿಸುವಂತೆ ರೆಸಾರ್ಟ್‍ಗಳಲ್ಲಿ ದರಿದ್ರ ರಾಜಕಾರಣ ಮಾಡುತ್ತಿದ್ದರು. ಅದೊಂದು ದಿನ ಮೂಗಿನವರೆಗೆ ಕುಡಿದ ಇಬ್ಬರು ಶಾಸಕರು ಗೂಂಡಾಗಳಂತೆ ಬಡಿದಾಡಿಕೊಂಡು ಕಣ್ಣುಗಡ್ಡೆ ಊದಿಸಿಕೊಂಡ ಅಪರಾಧವಂತೂ ದೃಶ್ಯ ಮಾಧ್ಯಮದಲ್ಲಿ ಕೆಟ್ಟದಾಗಿ ಕಣ್ಣುಕುಕ್ಕಿತು. ಇನ್ನೊಂದು, ತಮ್ಮ ಬದುಕನ್ನು ಚಿಂದಿಚೂರು ಮಾಡುವ, ತಮ್ಮ ಎಲ್ಲ ಕಷ್ಟಗಳಿಗೂ ಮೂಲವಾದ ಮದ್ಯಪಾನವನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿರುವ ಸಾವಿರಾರು ಮಹಿಳೆಯರ ಪಾದಯಾತ್ರೆ. ಪ್ರಜಾತಂತ್ರದಲ್ಲಿ ನಂಬಿಕೆ ಉಳಿಸುವ ಈ ಮದ್ಯಪಾನ ವಿರೋಧಿ ಆಂದೋಲನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ.

ರಾಜ್ಯದ ಹಲವು ಜಿಲ್ಲೆಗಳ ಮಹಿಳೆಯರು ಚಿತ್ರದುರ್ಗದಲ್ಲಿ ಒಟ್ಟಿಗೆ ಸೇರಿ ಮದ್ಯಪಾನ ನಿóಷೇಧಕ್ಕೆ ಆಗ್ರಹಿಸಿ ಪಾದಯಾತ್ರೆ ಆರಂಭಿಸಿದ್ದಾರೆ. ಮಾರ್ಗದುದ್ದಕ್ಕೂ ಇನ್ನಷ್ಟು ಮಹಿಳೆಯರು ಜಾಥಾ ಜೊತೆಗೆ ಸೇರುತ್ತಿದ್ದಾರೆ. ದುರಂತದ ಸಂಗತಿಯೆಂದರೆ ರಾಯಚೂರಿನ ಒಂದು ಹಳ್ಳಿಯಿಂದ ಬಂದಿದ್ದ ರೇಣುಕಮ್ಮ ಎಂಬ ಮಹಿಳೆ, ರಾತ್ರಿ ಹೆದ್ದಾರಿಯಲ್ಲಿ ಯುವಕನೊಬ್ಬ ಬೈಕ್ ಗುದ್ದಿಸಿ ಮಾಡಿದ ಅಪಘಾತಕ್ಕೆ ಬಲಿಯಾಗಿದ್ದಾರೆ.

ಮದ್ಯ ಮತ್ತು ಮಾನಿನಿ ಎರಡನ್ನೂ ಸಮೀಕರಿಸುವ ಪ್ರವಚನಗಳನ್ನು ಕೇಳಿ ಕೇಳಿ ನಮ್ಮ ಕಿವಿಗಳೆಲ್ಲ ತೂತು ಬಿದ್ದಿವೆ. ಈಗ ಮದ್ಯದ ವಿರುದ್ಧ ಬಡ ಮಾನಿನಿಯರೇ ಸಮರ ಸಾರಿದ್ದಾರೆ. ಈ ಆಂದೋಲನಕ್ಕೆ ಅವರ ಹೊಟ್ಟೆಯ ಸಂಕಟವೇ ಉಸಿರು ಕೊಟ್ಟಿದೆ. ಬಹುಪಾಲು ಕುಟುಂಬಗಳಲ್ಲಿ ಗಂಡಸರು ಹಗಲಿರುಳೆನ್ನದೆ ಕುಡಿದು ಚಿತ್ತಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಯಾವ ಕೆಲಸವನ್ನೂ ಮಾಡಲಾರದೆ ಕೊನೆಗೊಂದು ದಿನ ಸಾಯುತ್ತಾರೆ. ಮದ್ಯವ್ಯಸನಿಗಳಾದ ಅವರು ಬದುಕಿದ್ದರೂ ಸಂಸಾರವನ್ನು ತೂಗಿಸಿಕೊಂಡು ಹೋಗುವ, ಮಕ್ಕಳ ಓದುಬರಹ ನೋಡುವ ಜವಾಬ್ದಾರಿ ಮನೆಯ ಹೆಂಗಸರ ಮೇಲೇ ಇರುತ್ತದೆ. ಇಷ್ಟು ಸಾಲದೆಂಬಂತೆ, ಮನೆಯಲ್ಲಿ ತಾಯಿ, ಹೆಂಡತಿ, ಅಕ್ಕತಂಗಿ ಕಷ್ಟಪಟ್ಟು ದುಡಿದು ತರುವ ದುಡ್ಡನ್ನೂ ಮನೆಯಲ್ಲಿ ಪುಕ್ಕಟೆ ಯಜಮಾನಿಕೆ ಮಾಡುವ ತಂದೆ, ಗಂಡ, ಅಣ್ಣತಮ್ಮಂದಿರು ಹೊಡೆದುಬಡಿದು ಕುಡಿತಕ್ಕೆ ಕಿತ್ತುಕೊಳ್ಳುತ್ತಾರೆ. ಮನೆಯಲ್ಲಿನ ಹೆಂಗಸರ ವಸ್ತುಗಳನ್ನು ಕದ್ದೊಯ್ಯುತ್ತಾರೆ. ಇನ್ನು ಗಂಡಸರು ಕುಡಿದು ಸತ್ತ ನಂತರ ಎಲ್ಲವನ್ನೂ ಮನೆಯ ಹೆಂಗಸರೇ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ಮದ್ಯಪಾನ ಎನ್ನುವುದು ಮಹಿಳೆಯರ ಪಾಲಿಗೆ ನಿತ್ಯ ಗೋಳಾಡಿಸಿ ಕಾಡುವ ಕೆಟ್ಟ ಕನಸು. ಮನೋವಿಜ್ಞಾನಿಗಳು ಹೇಳುವಂತೆ, ಮದ್ಯಪಾನಕ್ಕೂ ಕೌಟುಂಬಿಕ ಹಿಂಸೆಗೂ ಅತ್ಯಾಚಾರಕ್ಕೂ ನಿಕಟವಾದ ನಂಟು. ಆದ್ದರಿಂದ ಮದ್ಯಪಾನ ನಿಷೇಧಿಸಿದರೆ ಕೌಟುಂಬಿಕ ಹಿಂಸೆ ಸ್ವಲ್ಪವಾದರೂ ಕಡಿಮೆಯಾಗಬಹುದು, ಅದರಿಂದ ಮಹಿಳೆಯರ ಬದುಕಿಗೆ ಕೊಂಚವಾದರೂ ನೆಮ್ಮದಿ ಬರುತ್ತದೆ. ಮದ್ಯಪಾನ ನಿಷೇಧ ಇರುವ ರಾಜ್ಯಗಳಲ್ಲಿ ಗಂಡಸರ ಮದ್ಯ ವ್ಯಸನ ಕಡಿಮೆ ಇರುವುದು ಮತ್ತು ಹೆಂಗಸರ ಮೇಲಿನ ದೌರ್ಜನ್ಯದ ಪ್ರಮಾಣ ಕಡಿಮೆ ಇರುವುದು ಕಾಣುತ್ತದೆ.

ಮದ್ಯದ ಹಾವಳಿಯಿಂದ ರೊಚ್ಚಿಗೆದ್ದ ಮಹಿಳೆಯರು ಈಗ ಬರಿಗಾಲಿನಲ್ಲಿ ನಡೆದುಬರುತ್ತ, ಸರ್ಕಾರಗಳು ಮುಂದಿಡುವ ಎಲ್ಲ ವಿಪರ್ಯಾಸ, ವಿರೋಧಾಭಾಸಗಳನ್ನು ಒದೆಯುತ್ತಿದ್ದಾರೆ. ಮದ್ಯ ಮಾರಾಟ ಇಲ್ಲದಿದ್ದರೆ ಸರ್ಕಾರ ನಡೆಸುವುದೇ ಕಷ್ಟ ಎಂಬ ಅಪ್ಪಟ ಸುಳ್ಳನ್ನು ಎಲ್ಲ ರಾಜಕೀಯ ಪಕ್ಷಗಳೂ ಹೇಳುತ್ತವೆ. ಆದ್ದರಿಂದಲೇ ಹಳ್ಳಿಹಳ್ಳಿಗಳಲ್ಲೂ ಕುಡಿಯುವ ನೀರು ಇಲ್ಲದಿದ್ದರೂ ಮದ್ಯ ಮಾತ್ರ ಧಾರಾಳವಾಗಿ ಸಿಗುತ್ತದೆ. ಮಕ್ಕಳಿಗೆ ಒಂದು ಶಾಲೆ ಇಲ್ಲದಿದ್ದರೂ ಮದ್ಯದಂಗಡಿಗಳು ದಂಡಿಯಾಗಿರುತ್ತವೆ. ಹೆಚ್ಚು ಅಂಗಡಿಗಳನ್ನು ತೆರೆದು ಹೆಚ್ಚು ಮದ್ಯ ಮಾರಾಟ ಆಗುವಂತೆ ಮಾಡುವುದೇ ಎಲ್ಲ ಸರ್ಕಾರಗಳ ಗುರಿಯಾಗಿರುತ್ತದೆ. ಜನರ ಉದ್ಧಾರದ ಬಗ್ಗೆ ಮಾತನಾಡುವ, ಗಾಂಧೀವಾದವನ್ನು ಕೊರೆಯುವ ಸರ್ಕಾರಗಳು ಮದ್ಯ ಮಾರಾಟ ನಿಷೇಧ ಕುರಿತು ಸೊಲ್ಲೆತ್ತುವುದಿಲ್ಲ. ಮದ್ಯ ಮಾರಾಟ ವಿಲ್ಲದೆ ತಮಗೆ ಜೀವವಿಲ್ಲ ಎನ್ನುವ ಸರ್ಕಾರಗಳು ತಮ್ಮ ಆದಾಯ ಮೂಲ ಅದೇ ಎಂದು ಪಟ್ಟು ಹಿಡಿಯುತ್ತವೆ. ಆಡಳಿತ ನಡೆಸಲು ಅವರಿಗೆ ಮದ್ಯ ಬೇಕೇಬೇಕು.

ಹಾಗಿದ್ದ ಮೇಲೆ ಸರ್ಕಾರಗಳು ತಮಟೆ ಬಾರಿಸಿಕೊಳ್ಳುವ ಜನಕಲ್ಯಾಣ ಯೋಜನೆಗಳೆಲ್ಲವೂ ನಿಷ್ಪ್ರಯೋಜಕ ಎನ್ನುವುದರಲ್ಲಿ ಸಂಶಯವಿಲ್ಲ. ತಾಳಿ ಭಾಗ್ಯ, ಅನ್ಯ ಭಾಗ್ಯ ಸೇರಿ ಹಲವಾರು ಭಾಗ್ಯಗಳನ್ನು ಬಹುತೇಕ ಸರ್ಕಾರಗಳು ಜನರಿಗೆ ಕೊಡುವುದಲ್ಲದೆ, ಅದೇ ತಮ್ಮ ದೊಡ್ಡ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳುತ್ತವೆ. ಆದರೆ ಆ ಭಾಗ್ಯಗಳಿಂದ ಆಗುವ ಅಲ್ಪಸ್ವಲ್ಪ ಸಹಾಯವನ್ನು ಈ `ಮದ್ಯ ಭಾಗ್ಯ’ ನುಂಗಿಹಾಕುತ್ತದೆ. ಇದೊಂದು ರೀತಿಯಲ್ಲಿ ಬಲಗೈಲಿ ಕೊಟ್ಟು ಎಡಗೈಲಿ ಕಸಿದುಕೊಳ್ಳುವ ವಂಚನೆ. ಒಂದು ಸಾಮಾನ್ಯ ಬಡಕುಟುಂಬದ ತಿಂಗಳ ಆದಾಯದ ಮುಕ್ಕಾಲು ಭಾಗವನ್ನು ಗಂಡಸರು ಮದ್ಯಪಾನಕ್ಕೆ ಸುರಿಯುತ್ತಾರೆ ಎಂಬುದೊಂದು ಅಂದಾಜಿದೆ. ಪ್ರೌಢಶಾಲೆ ಓದುವ ಹಳ್ಳಿಯ ಹೆಣ್ಣುಮಕ್ಕಳಿಗೆ ಕೊಟ್ಟ ಸೈಕಲ್, ಅದನ್ನು ಕಿತ್ತುಕೊಳ್ಳುವ ಕುಡುಕ ಅಪ್ಪ ತಾತಂದಿರ ನಾಲ್ಕು ದಿನಗಳ ಕುಡಿತಕ್ಕೆ ದುಡ್ಡು ಒದಗಿಸುತ್ತದೆ. ಮನೆಗೆ ಬರುವ ಉಚಿತ ಅಕ್ಕಿಯನ್ನು ಅದೇ ರೇಷನ್ ಅಂಗಡಿಗೆ ಅಥವಾ ಹೋಟೆಲ್‍ಗೆ ಮಾರಿ, ಬರುವ ದುಡ್ಡಿನಲ್ಲಿ ಕುಡಿದು ರಸ್ತೆಯಲ್ಲಿ ಬಿದ್ದು ಹೊರಳಾಡುವ ಗಂಡಸರು ಯಾವ ಊರಿನಲ್ಲಿ ಇರುವುದಿಲ್ಲ? ಕುಡಿಯಲು ಹಣ ಕೊಡಲಿಲ್ಲ ಎಂದು ಹೆಂಡತಿಯನ್ನಿರಲಿ, ಅಪ್ಪ ಅಮ್ಮಂದಿರನ್ನೂ ಕೊಲ್ಲುವ ಹುಡುಗರ ಸುದ್ದಿ ಎಲ್ಲಿ ಕೇಳಿಬರುವುದಿಲ್ಲ? ಈ `ಮದ್ಯ’ಮ ಮಾರ್ಗ ಇಲ್ಲದ ಊರೇ ಇಲ್ಲ; ಇಂಥ `ಮದ್ಯಾಧಮ’ ಮಾರ್ಗ ಹಿಡಿಯದ ಸರ್ಕಾರವೂ ಇಲ್ಲ. ಆದರೆ ಅಭಿವೃದ್ಧಿಯ ರಥ ಇಂಥ ಮಾರ್ಗದಲ್ಲಿ ಸಾಗಲು ಸಾಧ್ಯವಿಲ್ಲ.

ಸುರೆಯ ಇತಿಹಾಸ ಮನುಷ್ಯನಷ್ಟೇ ಹಳೆಯದು. ಜಗತ್ತಿನ ಯಾವ ದೇಶಪ್ರದೇಶದ ಇತಿಹಾಸ ಓದಿದರೂ ಸುರೆಯ ವಾಸನೆ ಹೊಡೆಯದೇ ಇರುವುದಿಲ್ಲ. ನಮ್ಮ ಪೂರ್ವಜರು, ಪುರಾಣಕರ್ತರು ದೇವಾನುದೇವತೆಗಳಿಗೂ ಮದ್ಯ ಕುಡಿಸದೇ ಬಿಟ್ಟಿಲ್ಲ. ಸ್ವರ್ಗದಲ್ಲಿ ಸಿಗುವ ಸಂತೋಷಗಳಲ್ಲಿ ಅಪ್ಸರೆಯರ ಜೊತೆಗೆ ಸುರೆಯೂ ಸೇರಿದೆ. ಅತ್ಯಾಧುನಿಕ ಸಂಸ್ಕøತಿಯಿಂದ ಹಿಡಿದು ನೆಲಮೂಲ ಸಂಸ್ಕøತಿಯವರೆಗೂ ಲಿಕರ್, ಹೆಂಡ, ಮದ್ಯ, ಕಳ್ಳು, ಸೇಂದಿ, ಎಣ್ಣೆ ಇತ್ಯಾದಿ ಹಲವು ಹಳೆಯ-ಹೊಸ ಹೆಸರಿನಲ್ಲಿ ಸುರೆ ಹೊಳೆಯಂತೆ ನಿರಂತರವಾಗಿ ಹರಿಯುತ್ತದೆ. ಗಂಡಸರು ಹೆಂಡದಂಗಡಿಗೆ ಪದೇಪದೇ ಹುಡುಕಿ ಬರುವ ಕಷ್ಟ ತಪ್ಪಿಸಲು ಸರ್ಕಾರವೇ ಪ್ಯಾಕೆಟ್‍ಗಳಲ್ಲಿ, ಸ್ಯಾಷೆಗಳಲ್ಲಿ ಅದನ್ನು ತುಂಬಿ ಮಾರುತ್ತದೆ. ಸರ್ಕಾರ ಅದಕ್ಕೆ ಹೆಚ್ಚು ತೆರಿಗೆ ಹಾಕುತ್ತದೆ, ಹೆಚ್ಚು ಕುಡಿಯಿರಿ ಎಂದು ಮಾರುಮಾರಿಗೆ ಮಾರುವ ಅಂಗಡಿ ತೆರೆಯಲು ಪರವಾನಗಿ ಕೊಡುತ್ತದೆ, ಕುಡಿದಷ್ಟೂ ತೆರಿಗೆ ಮೂಲಕ ಹೆಚ್ಚು ಆದಾಯ ಬರುತ್ತದೆ. ಕೆಲವು ಸರ್ಕಾರಗಳನ್ನು ತಟ್ಟಾಡದಂತೆ ಪ್ರಬಲ `ಲಿಕರ್ ಲಾಬಿ’ ಯೇ ಮುನ್ನಡೆಸುತ್ತದೆ. ಆದ್ದರಿಂದ ನಮ್ಮ ದೇಶದಲ್ಲಿ `ಮದ್ಯಪಾನ ನಿಷೇಧ’ ಎನ್ನುವುದೂ ಸ್ಥಿರವಾಗಿಲ್ಲದೆ ತಟ್ಟಾಡಿಕೊಂಡೇ ಇದೆ.

ಈಗ ನಮ್ಮ ದೇಶದಲ್ಲಿ ಗಾಂಧೀಜಿ ಹುಟ್ಟಿದ ನಾಡು ಗುಜರಾತ್, ಬಿಹಾರ ಮತ್ತು ನಾಗಾಲ್ಯಾಂಡ್, ಲಕ್ಷದ್ವೀಪದಲ್ಲಿ ಮದ್ಯಪಾನ ನಿಷೇಧ ಇದೆ. ಸಂವಿಧಾನದಲ್ಲೂ ಔಷಧಕ್ಕೆ ಬಿಟ್ಟು ಬಳಸದಂತೆ ಕ್ರಮ ಕೈಗೊಳ್ಳಬೇಕು ಎಂದಿದೆ. ಆದರೆ ಮದ್ಯದ ಮೇಲಿನ ತೆರಿಗೆ ಮೂಲಕ ಹೆಚ್ಚಿನ ಆದಾಯ ಬರುವುದರಿಂದ ಯಾವ ಸರ್ಕಾರವೂ ಅದನ್ನು ಬಿಡುವುದಿಲ್ಲ. ಮದ್ಯನಿಷೇಧ ಇರುವ ರಾಜ್ಯಗಳಲ್ಲೂ ಮದ್ಯ ಸಲೀಸಾಗಿ ಸಿಗುವ ವ್ಯವಸ್ಥೆ ಇರುತ್ತದೆ. ಹಾಗೆ ನೋಡಿದರೆ, ಬಡವರಿಗೆ ಒಂದು ಕಿಲೋ ಅಕ್ಕಿ ಕೊಡಲು ಸರ್ಕಾರ ಖರ್ಚು ಮಾಡುವ ಹಣದ ಎರಡರಷ್ಟು ಒಂದು ಲೀಟರ್ ಮದ್ಯದ ಮೇಲಿನ ತೆರಿಗೆಯಿಂದ ಬರುತ್ತದೆ. ಜನರ ಮದ್ಯ ದೌರ್ಬಲ್ಯವೇ ಸರ್ಕಾರಗಳ ಆದಾಯ ಶಕ್ತಿ ಆಗಿರುವಾಗ ಅದನ್ನು ಯಾವ ಸರ್ಕಾರ ಬಿಡಲು ಬಯಸುತ್ತದೆ?

ಬದುಕನ್ನು ಹಾಳು ಮಾಡುವ ಮದ್ಯವನ್ನು ವಿರೋಧಿಸಿ ನಡೆಯುವ ಚಳವಳಿಗಳನ್ನು ಮಹಿಳೆಯರೇ ಕಟ್ಟಿ ಬೆಳೆಸಿದ್ದಾರೆ. ಇದರಲ್ಲಿ ಅವಿಭಜಿತ ಆಂಧ್ರ ಪ್ರದೇಶದ ಮಹಿಳೆಯರ ಮದ್ಯವಿರೋಧಿ ಚಳವಳಿ ಬಹಳ ಗಮನಾರ್ಹವಾಗಿದೆ. ತೊಂಬತ್ತರ ದಶಕದಲ್ಲಿ ವಿಶಾಲ ಮಹಿಳಾ ಸಂಘಟನೆಯಾಗಿ ಬೆಳೆದ ಇದು ಸರ್ಕಾರ, ಪೊಲೀಸರು, ಮದ್ಯ ಉದ್ಯಮಿಗಳು, ಸ್ಥಳೀಯ ರೌಡಿಗಳು ಎಲ್ಲರನ್ನೂ ಧೈರ್ಯದಿಂದ ಎದುರಿಸಿತ್ತು. ಊರಿಗೆ ಮದ್ಯದಂಗಡಿ ಇರುವ ಹಾಗೆ, ರಸ್ತೆ, ಶಾಲೆ, ಆಸ್ಪತ್ರೆ ಏಕಿಲ್ಲ ಎಂದು ಗಟ್ಟಿಯಾಗಿ ಪ್ರಶ್ನಿಸಿತ್ತು. ತಮಿಳುನಾಡು ಕೂಡ ಮಹಿಳೆಯರ ಮದ್ಯ ವಿರೋಧಿ ಆಂದೋಲನವನ್ನು ಕಂಡಿವೆ. ಒದಿಶಾ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಮದ್ಯಪಾನ ವಿರೋಧಿ ಚಳವಳಿ ಕಟ್ಟುತ್ತಿದ್ದಾರೆ.

ಕರ್ನಾಟಕದಲ್ಲೂ ತೊಂಬತ್ತರ ದಶಕದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಮದ್ಯವಿರೋಧಿ ಆಂದೋಲನ ಪ್ರಬಲವಾಗಿ ಬೆಳೆದಿತ್ತು. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಪ್ರೇರಣೆಯಿಂದ ಬೆಳ್ತಂಗಡಿ ತಾಲ್ಲೂಕನ್ನು “ಮದ್ಯಮುಕ್ತ ತಾಲ್ಲೂಕು” ಎಂದು ಘೋಷಿಸಲಾಗಿತ್ತು. ಆದರೆ ಆಂದೋಲನ ಕ್ರಮೇಣ ಕರಗಿಹೋಯಿತು. ಈಗ ಕರ್ನಾಟಕದ ದೃಢ ಮನಸ್ಸಿನ ಮಹಿಳೆಯರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ, ಬೃಹತ್ ಆಂದೋಲನವನ್ನು ಕಟ್ಟುತ್ತಿದ್ದಾರೆ. ಅದನ್ನು ಎಲ್ಲ ಜನಪರ ಮನಸ್ಸುಗಳು ತ್ರಿಕರಣ ಪೂರ್ವಕ ಬೆಂಬಲಿಸಬೇಕಿದೆ.

-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *