ಮಗುವಾದವರು – ಸವಿತಾ ಶ್ರೀನಿವಾಸ

ಅಂದು ಫಾಲ್ಗುಣ ಹೊಸ ಗೆಳೆಯರೊಂದಿಗೆ ಮಿನಿ ಗ್ರಂಥಾಲಯದಲ್ಲಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿ ತನ್ನ ಕಾಟೇಜ್ ಕಡೆ ಹೆಜ್ಜೆ ಹಾಕುತ್ತಾ ಮರಗಳ ಎಲೆಗಳ ನಡುವಿನಿಂದ ಹಾದು ಬಂದ ಸೂರ್ಯನ ಹೊನ್ನ ರಶ್ಮಿಯನ್ನು ಮುಷ್ಠಿಯಲ್ಲಿ ಹಿಡಿದವರಂತೆ ಕೆಲ ಹೊತ್ತು ಕೈ ಮುಂದೆ ಚಾಚಿ ನಂತರ ತಮ್ಮ ಜೇಬಿಗೆ ಹಾಕಿಕೊಂಡಂತೆ ನಟಿಸುತ್ತಾ ಗೆಳೆಯರಿಗೂ ಒಂದಷ್ಟು ಮನರಂಜನೆ ನೀಡಿದ್ದರು.

ಅವರ ಅತ್ತಿತ್ತ ಹೆಜ್ಜೆ ಹಾಕುತ್ತಾ ನಡೆದ ಗೆಳೆಯರ ಬಳಗ ಸುಮಾರು ಅವರ ವಯೋಮಾನದವರೇ ಆಗಿದ್ದು ತಮ್ಮ ಬೆಳಗಿನ ಟ್ರ್ಯಾಕ್ ಸೂಟ್‍ನಲ್ಲಿ ಮುಂಜಾವಿನ ಸವಿಯನ್ನು ಉಣ್ಣುತ್ತಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಾಗಿದ್ದರು. ಕೆಲ ದೂರದಲ್ಲಿ ಅವರ ಗುಂಪಿಗೆ ಎದುರಾಗಿ ಕೆಲ ಹಿರಿಯ ಮಹಿಳೆಯರ ಗುಂಪು ಬಂದಿತ್ತು. ಈರ್ವರ ಗುಂಪುಗಳು ಅತ್ತಿತ್ತ ಹಾದು ಹೋಗುವಾಗ ಅವರೀರ್ವರ ಗುಂಪಿನಲ್ಲಿನ ಪರಿಚಿತ ಮುಖಗಳಲ್ಲಿ ಮುಗುಳ್ನಗೆ ಮೂಡಿತ್ತು. ಫಾಲ್ಗುಣ ತನ್ನ ಕಾಟೇಜ್‍ಗೆ ಹೋದ ಸ್ವಲ್ಪ ಹೊತ್ತಿಗೇ ಅವರ ಬೆಳಗಿನ ತಿಂಡಿಯನ್ನು ಟೇಬಲ್ಲಿನ ಮೇಲೆ ಇಟ್ಟ ಹುಡುಗನೋರ್ವ “ಉಪಹಾರ ರೆಡಿ ಇದೆ ಸರ್,” ಎಂದು ನೆನಪಿಸಿ ಹೊರಟ.

ಫಾಲ್ಗುಣ ಟೇಬಲ್ಲಿನ ಮೇಲಿಟ್ಟಿದ್ದ ಬ್ರೆಡ್ ಟೋಸ್ಟ್‌ನ್ನು ಬಾಯಿಗಿಡುತ್ತಾ ಆ ದಿನ ‘ಟೀ ಹೌಸ್’ನಲ್ಲಿ ಭೇಟಿಯಾದ ಓರ್ವ ಮಹಿಳೆಯನ್ನು ನೆನಪಿಸಿಕೊಂಡರು. ‘ಶುಭೋದಯ’ದೊಂದಿಗೆ ಪರಿಚಯವಾಗಿ ಮಾತು ಬೆಳೆದಿತ್ತು. ಅವಳು ಬೆಂಗಳೂರಿನ ಹೆಸರಾಂತ ಕಾಲೇಜೊಂದರ ಪ್ರಾಂಶುಪಾಲಕಿಯಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಜೀವನ ನಡೆಸಲಿಕ್ಕಾಗಿಯೇ ‘ರಿಟೈರ್‍ಮೆಂಟ್ ಹೋಮ್‍ನಲ್ಲಿ ವಿಲ್ಲಾವೊಂದನ್ನು ಬುಕ್ ಮಾಡಿದ ಕೆಲದಿನಗಳಲ್ಲೇ ತನ್ನ ಎಲ್ಲಾ ಸಾಮಾನು ಸರಂಜಾಮಿನೊಂದಿಗೆ ಶಿಫ್ಟ್ ಆಗಿದ್ದಳು. ತಲೆಯ ಮೇಲಿನ ಕೆಲವು ಬಿಳಿಯ ಕೂದಲುಗಳನ್ನು ಹೊರತುಪಡಿಸಿದರೆ ನೋಡಲು ಕಳೆಕಳೆಯಾಗಿ ಲವಲವಿಕೆಯಿಂದ ಓಡಾಡುತ್ತಾ ತನ್ನ ಗಮನವನ್ನು ಸೆಳೆದಾಕೆ. ಅವಳೊಂದಿಗೆ ‘ಟೀ ಹೌಸ್’ನಲ್ಲಿ ಚಹಾ ಕುಡಿಯುತ್ತಾ ತಮ್ಮ ಪರಿಚಯ ಮಾಡಿಕೊಂಡಿದ್ದರು.

“ಕಾರ್ಖಾನೆಯ ಗುಮಾಸ್ತನಲ್ಲಾ. ಆದರೆ ಸಾರ್ವಜನಿಕರ ಸೇವಕ. ಬದುಕಿನ ಕಡೆಯ ದಿನಗಳಲ್ಲಿ ಇತರರಿಗೆ ಹೊರೆಯಾಗುವುದು ನನ್ನ ಜಾಯಮಾನವಲ್ಲ. ಕೆಲಸದಲ್ಲಿರುವಾಗ ಅನೇಕ ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಾನು ಕಳೆದ ವರ್ಷವಷ್ಟೇ ಹೆಂಡತಿಯನ್ನು ಕಳೆದುಕೊಂಡೆ. ನನ್ನ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ನ್ಯೂಯಾರ್ಕ್‍ನಲ್ಲಿನ ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಕ್ಕಿದ್ದರೆ ಮತ್ತೋರ್ವ ಬೆಂಗಳೂರಿನಲ್ಲೇ ಮನೆ ಮಾಡಿಕೊಂಡು ಸುಖವಾಗಿದ್ದಾನೆ. ಇಬ್ಬರೂ ತಮ್ಮ ಹೆಂಡತಿಯರೊಂದಿಗೆ ಜೀವನದಲ್ಲಿ ಸೆಟ್ಲ್ ಆಗಿರುವಾಗ ನಾನೊಬ್ಬ ಬಡಪಾಯಿ ಅವರ ಮಧ್ಯೆ ಏಕೆಂದು ಇಲ್ಲಿ ಸೇರಿಕೊಂಡೆ.”

“ಬದುಕಿನ ಕೊನೆಯ ವರ್ಷಗಳಲ್ಲಿ ಇತರರಿಗೆ ಹೊರೆಯಾಗಲಿಚ್ಛಿಸದೆ ಸ್ವಲ್ಪ ದುಡ್ಡು ಖರ್ಚಾದರೂ ಸರಿಯೇ… ಸ್ವಂತ ಮನೆಯೆಂದು ಹೇಳಿಕೊಳ್ಳಲಾಗದಿದ್ದರೂ ಬದುಕಿರುವಷ್ಟು ದಿನ ಸಮವಯಸ್ಕರೊಂದಿಗೆ ಕಾಲ ಕಳೆಯುತ್ತಾ ಈ ಬದುಕನ್ನು ಸವೆಸಬೇಕೆಂಬ ಇಚ್ಛೆ. ಅಂದ್ಹಾಗೆ ನೀವು ಬೆಂಗಳೂರಿನವರಾ?” “ಇಲ್ಲಾ ಮೈಸೂರಿನವಳು. ವಂಡರ್‌ಫುಲ್ ಪ್ಲೇಸ್. ನನಗಿಲ್ಲಿ ಅಚ್ಚುಮೆಚ್ಚಿನ ಸ್ನೇಹಿತೆಯರಿದ್ದಾರೆ. ನಾವೆಲ್ಲಾ ಒಬ್ಬೊಬ್ಬರೇ ನಮ್ಮ ಕುಟುಂಬಗಳನ್ನು ತೊರೆದು ಬರಲು ಮೊದಲು ಹಿಂಜರಿತವಿತ್ತು. ಆದರೆ ಜೊತೆಯಲ್ಲಿ ಕೂತು ಚರ್ಚೆ ಮಾಡಿ ನಂತರ ಹೊರಟರೆ ಒಟ್ಟಿಗೆ ಹೋಗೋಣವೆಂದು ನಿರ್ಧರಿಸಿ ಇಲ್ಲಿಗೆ ಜಂಟಿ ವಿಲ್ಲಾವೊಂದನ್ನು ಬುಕ್ ಮಾಡಿ ಬಂದಿದ್ದೇವೆ.”

“ನಿಮ್ಮದೇನು ಶುಗರ್‌ಲೆಸ್‌ ಟೀನಾ?” “ನೋ ನೋ. ಆದರೆ ಸಕ್ಕರೆ ಕೊಂಚ ಕಡಿಮೆ ಹಾಕಿಕೊಳ್ಳುತ್ತೇನೆ. ಓ… ಆಗಲೇ ನನ್ನ ಸ್ನೇಹಿತೆಯರು ಬಂದಿದ್ದಾರೆ ನೋಡಿ,” ಎನ್ನುತ್ತಾ ಅವಳು ಪರಿಚಿತರೆಡೆ ಕೈ ಬೀಸಿದಾಗ ಫಾಲ್ಗುಣರ ದೃಷ್ಟಿಯೂ ಅತ್ತ ತಿರುಗಿತ್ತು. ಲವಲವಿಕೆಯ ಮೂವರು ಸಹಚರರನ್ನು ಈಗಾಗಲೇ ನೋಡಿದ್ದಿತ್ತು. ಆದರೆ ಅವರ ಪಯಣ ಮೈಸೂರಿನಿಂದಲೇ ಒಟ್ಟಿಗೆ ಶುರುವಾಯಿತೆನ್ನುವುದು ಹೊಸ ವಿಚಾರವಾಗಿತ್ತು. ತುಸು ಕೀಟಲೆ ಸ್ವಭಾವದವರೇ ಆದ್ದರಿಂದ ಮೋಜಿನ ವಿಷಯವೆಂಬಂತೆ “ನಾಲ್ವರೂ ಒಟ್ಟಿಗೆ ಸಂಸಾರ ತೊರೆದು ಓಡಿ ಬಂದಿದ್ದೀರಾ?!” ಎಂದು ಕೀಟಲೆ ಮಾಡಿದ್ದರು.
ಅದಕ್ಕೆ ಅವಳ ಕನ್ನಡಕಕ್ಕೆ ಆತುಕೊಂಡಿದ್ದ ಹುಬ್ಬು ಮೇಲೇರಿತ್ತು. “ಛೆ. ಹಾಗೇನೂ ಇಲ್ಲ. ನಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿ ಅವರನ್ನು ಒಪ್ಪಿಸಿಯೇ ನಾವಿಲ್ಲಿಗೆ ಬಂದಿದ್ದೇವೆ.”
“ನಿಮ್ಮ ಕುಟುಂಬದ ಸದಸ್ಯರು ಇದಕ್ಕೆ ಒಪ್ಪಿದರೇ? ನೀವು ನಿಮ್ಮ ಗಂಡಂದಿರನ್ನು ತೊರೆದು ಬರಲು ಅವರು ಅನುಮತಿ ನೀಡಿದ್ದಾದರೂ ಹೇಗೆ?” “ನನ್ನ ಮೂವರು ಸ್ನೇಹಿತೆಯರದು ಒಂದೊಂದು ಕತೆ ಬಿಡಿ. ಒಬ್ಬರಿಗೆ ಗಂಡ ತೀರಿಕೊಂಡಿದ್ದು ಮಕ್ಕಳು ಫಾರಿನ್‍ನಲ್ಲಿ ನೆಲೆಸಿದ್ದಾರೆ. ಮತ್ತೊಬ್ಬರು ಮದುವೇನೇ ಆಗಿಲ್ಲವಾದ್ದರಿಂದ ತಮ್ಮ ಅಣ್ಣ ತಂಗಿಯಿಂದ ಅನುಮತಿ ಪಡೆಯುವುದಷ್ಟು ಕಷ್ಟವೇನು ಆಗಿಲ್ಲ…”
“ಮತ್ತೆ ನೀವು…”ತಾನು ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆಂದು ಅರಿವಾಯ್ತೇನೋ. “ಓ… ನೀವು ಬಹಳ ಕುತೂಹಲಿಗಳಪ್ಪ. ಚಹಾ ಕುಡಿದಿದ್ದಾಯ್ತು. ಹೊರಡಲೇ?” ಎಂದು ಎದ್ದಾಗ ಅವಳನ್ನು ಅವಳ ಹಿನ್ನೆಲೆ ಕುರಿತಾಗಿ ಮತ್ತಷ್ಟು ಕೇಳುವ ಬಯಕೆ. ಆದರೂ ಅದನ್ನು ತೋರಿಸಿಕೊಳ್ಳದೆ “ಓ…ಎಸ್. ಮತ್ತೆಂದಾದರೂ ಸಿಗೋಣ. ನೀವಿಲ್ಲಿ ದಿನಾ ಬರ್ತೀರಲ್ವೇ?”
“ಯಾವಾಗಲಾದರೊಮ್ಮೆ,” ಎಂದಾಗ ತುಂಟ ಮಗುವಿನ ಕೆನ್ನೆ ಚಿವುಟಿದಂತೆ ಸಪ್ಪಗಾಗಿದ್ದರು.

ಟೀ ಕುಡಿದಿದ್ದು ಯಾವಾಗಲೋ. ಹಾಲ್‍ನಲ್ಲಿದ್ದ ಟೀಪಾಯಿಯ ಮೇಲಿನ ದಿನಪತ್ರಿಕೆಯ ಮೇಲೆ ಕಣ್ಣೋಡಿಸುತ್ತಿದ್ದಾಗಲೇ ಮೊಬೈಲ್ ರಿಂಗಾಗಿತ್ತು. ಅತ್ತ ಕಡೆಯಿಂದ ಸಂಪರ್ಕಾಧಿಕಾರಿ ಅವರ ವೈದ್ಯರ ಚೆಕ್‍ಅಪ್ ಸಮಯ ನಿಗದಿಪಡಿಸಿ ತಿಳಿಸಿದ್ದ. ಸ್ವಲ್ಪ ಗಟ್ಟಿಮುಟ್ಟಾಗಿರುವವರು ಈ ಸೀನಿಯರ್ ಹೋಮ್‍ನ ಚೆಕ್‍ಅಪ್ ರೂಮ್‍ಗೇ ಹೋಗಿ ಆರೋಗ್ಯ ತಪಾಸಣೆಯನ್ನು ಆಗಿಂದಾಗ್ಗೆ ಮಾಡಬಹುದಾಗಿದ್ದರೆ ತೀರಾ ವಯಸ್ಸಾದವರಿಗೆ ಅವರಿದ್ದಲ್ಲಿಗೇ ವೈದ್ಯರು ಬಂದು ತಪಾಸಣೆ ಮಾಡುತ್ತಿದ್ದರು. ಫಾಲ್ಗುಣ ಖಡಕ್ ಸಸ್ಯಾಹಾರಿ. ಈ ಇಳಿವಯಸ್ಸಿನಲ್ಲಿ ಬಿಪಿ, ಶುಗರ್ ಬರದಿರುವ ಹಾಗೆ ಕೊಂಚ ನಿಯಮಿತ ಆಹಾರವನ್ನು ಸೇವಿಸುತ್ತಾ ಆದಷ್ಟು ವ್ಯಾಯಾಮವನ್ನೂ ಮಾಡಿಕೊಂಡು ಗಟ್ಟಿಮುಟ್ಟಾಗಿದ್ದರು. ಇದರಿಂದಾಗಿಯೇನೋ ಕೆಲಸದಲ್ಲಿದ್ದಾಗಲೂ ಒತ್ತಡದ ಕಾರ್ಯಗಳನ್ನು ಸಮಾಧಾನ ಚಿತ್ತದಿಂದ ನಿರ್ವಹಿಸುವಂತಾಗಿದ್ದು. ಅಧಿಕಾರ ಗದ್ದುಗೆ ಏರಿದಾಗ ಹಲವಾರು ಉನ್ನತಾಧಿಕಾರಿಗಳ ಸಮಿತಿಗಳಲ್ಲಿ ಪಾಲ್ಗೊಳ್ಳುತ್ತಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಾಗಿನ ಒತ್ತಡ, ವಿಧಾನಸಭೆಯಲ್ಲಿ ಜನರಿಂದ ಆರಿಸಿ ಬಂದ ಜನ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರವನ್ನು ತಯಾರಿಸುವಾಗಿನ ಜಂಜಾಟ, ಒಟ್ಟಾರೆ ವಿಭಾಗದ ಸರ್ವತೋಮುಖ ಅಭಿವೃದ್ಧಿಯತ್ತ ಕಿರುಕಾಣಿಕೆ ನೀಡುತ್ತಾ ಇದ್ದಷ್ಟು ಕಾಲ ತನ್ನಿಂದ ಒಳಿತಾಗಲಿ ಎಂದು ಆಶಿಸಿದ್ದರು.

ಈಗಷ್ಟೇ ಈ ಹೊಸ ವಾತಾವರಣಕ್ಕೆ ತೆರೆದುಕೊಂಡಾಗ ಹೊರಗೆ ಬೇರೊಂದು ಪ್ರಪಂಚವಿದೆ ಎಂಬ ಪುಳಕಕ್ಕೆ ಭಾವನೆಗಳು ಸಹಜ ಗುಣವೆಂಬಂತೆ ಹೊರಹೊಮ್ಮಿದ್ದವು. ಬೌದ್ಧಿಕ ದಣಿವನ್ನು ತಣಿಸಲು ಬುದ್ಧಿಜೀವಿಗಳ ಒಡನಾಟವಿದೆ. ತಾನು ಹಿಂದೆ ಚರ್ಚಿಸದ ವೈಚಾರಿಕ ವಿಚಾರಗಳನ್ನು ಈಗ ಚರ್ಚಿಸುವಂತಾಗಿತ್ತು. ಆವತ್ತು ವೈದ್ಯರು ತನ್ನ ಬಿಪಿ, ಶುಗರ್ ಇತ್ಯಾದಿ ಮಾಮೂಲಿ ತಪಾಸಣೆ ಮಾಡಿದ ಬಳಿಕ ತನ್ನ ಹಿಂದೆ ವೇಯಿಟಿಂಗ್ ರೂಮ್‍ನಲ್ಲಿ ತಮ್ಮ ಸರದಿಗಾಗಿ ಕಾಯುತ್ತಾ ಕುಳಿತ್ತಿದ್ದ ವೃದ್ಧರ ಕಡೆ ಕಣ್ಣೋಡಿಸಿದ್ದರು. ಅವಳೇನಾದರೂ ಆ ಸಾಲಿನಲ್ಲಿ ಕುಳಿತಿರುವಳೇನೋ ಎಂದು ತಡೆದುಕೊಳ್ಳಲಾಗದೆ ಹುಡುಕಿದ್ದರು. ನಿರಾಸೆ ಕಾದಿಟ್ಟ ಬುತ್ತಿಯಾಗಿತ್ತು. ಆ ಕಟ್ಟಡದ ಹೊರಗಿನ ಉದ್ಯಾನವನದಲ್ಲಿ ಸುಂದರ ಹೂದೋಟದ ಮಧ್ಯೆ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾ ಕೊಂಚ ಕಾಲ ಕಳೆಯಬೇಕೆನಿಸಿತ್ತು. ಹಾಗೆಯೇ ಬಗಲಲ್ಲಿದ್ದ ‘ಟೀ ಹೌಸ್’ಗೆ ಹೋಗಿ ಅವಳು ಬಂದಿರುವಳೆಂದು ನೋಡಲೇ ಅನಿಸಿತ್ತವರಿಗೆ. ಅವಳು ಹೊರಟಾಗ ಅವಳ ಮೊಬೈಲ್ ನಂಬರ್ ಏನೆಂದು ಕೇಳಬೇಕಿತ್ತೆನಿಸಿತು. ಅವಳು ತನ್ನ ಹೆಸರೇನೆಂದು ಹೇಳಿದಳು? ಮೀನಾ… ಮೀನಿನ ಕಣ್ಣವಳಂತೂ ಅಲ್ಲ. ತಿದ್ದಿ ತೀಡಿದಂಥಹ ಹುಬ್ಬಿನ ಕೆಳಗಿನ ಕಣ್ಣುಗಳಲ್ಲಿ ಪ್ರಬುದ್ಧತೆ ಅಡಗಿತ್ತು. ಅವಳು ತನ್ನ ವಿಚಾರಕ್ಕೆ ಬಂದಾಗ ಏಕೆ ಸುಮ್ಮನಾದಳೋ… ಈ ಪುಟ್ಟ ಸಮುದಾಯದಲ್ಲಿ ಅವಳನ್ನು ಹುಡುಕಲೇನೂ ಕಷ್ಟವಾಗಲಾರದು. ಆದರೆ ಅವಳನ್ನು ಹುಡುಕಿಕೊಂಡು ಹೋಗುವುದೆಷ್ಟು ಸಮಂಜಸವೆಂಬ ಹಿಂಜರಿಕೆಯಿಂದ ಇತರ ಕೆಲಸಗಳೆಡೆ ಗಮನ ಹರಿಸಿದ್ದರು. ತನ್ನ ನಿವೃತ್ತಿ ಬಳಿಕ ಸಮಯ ಕಳೆಯಲೆಂದು ಒಂದು ಆನ್‍ಲೈನ್ ಕನ್ಸಲ್ಟೆನ್ಸಿ ನಡೆಸುತ್ತಿದ್ದರು. ಗಿರಾಕಿಗಳು ತನಗೆ ಆನ್‍ಲೈನ್‍ನಲ್ಲಿ ಲಿಂಕ್ ಆದ ಕೂಡಲೇ ವೀಡಿಯೋ ಕಾನ್ಫೆರೆನ್ಸ್ ವ್ಯವಸ್ಥೆಯ ಮೂಲಕ ಅವರ ಯೋಚನೆಗಳ ಬಗ್ಗೆ ಚರ್ಚಿಸಿ ಸಲಹೆಗಳನ್ನು ನೀಡುತ್ತಿದ್ದರು. ಅದಕ್ಕೆ ಹಣವನ್ನು ಆನ್‍ಲೈನ್‍ನಲ್ಲಿ ಜಮಾ ಆಗಿ ಅವರ ಖಾತೆಗೆ ಬರುತ್ತಿತ್ತು. ದೈನಂದಿನ ಖರ್ಚುಗಳನ್ನು ಸೀನಿಯರ್ ಹೋಮ್ ಮ್ಯಾನೇಜ್‍ಮೆಂಟ್ ನೋಡಿಕೊಳ್ಳುತ್ತಿದ್ದರೂ ನಿವೃತ್ತಿ ವೇತನದ ಜೊತೆಗೆ ಇದೊಂದು ಕಮಾಯಿ ಅವರಿಗೆ ಖುಷಿ ನೀಡುತ್ತಿತ್ತು. ಅವರ ವೃತ್ತಿ ಅನುಭವ ವ್ಯರ್ಥವಾಗದೆ ಈ ರೀತಿಯಲ್ಲಾದರೂ ಇತರರಿಗೆ ಪ್ರಯೋಜನವಾಗುತ್ತಿರುವುದು ಅವರಿಗೆ ಸಾರ್ಥಕವೆನಿಸಿತ್ತು.
** ** ** ** **
ಅವರು ಅಂದುಕೊಂಡಂತೆ ವಾರ ಕಳೆದ ಬಳಿಕ ಮೀನಾಳನ್ನು ಅದೇ ‘ಟೀ ಹೌಸ್’ನಲ್ಲಿ ನೋಡಿದರು. ಪರಿಚಿತರೆಂಬಂತೆ ಕೈಬೀಸಿ ಹತ್ತಿರ ಹೋದರು. “ಫಾಲ್ಗುಣ ಅವರೇ, ಹೇಗಿದ್ದೀರಿ?” ಎಂದು ಮೊದಲು ಅವಳೇ ಮಾತನ್ನು ಆರಂಭಿಸಿದಾಗ, “ಅಬ್ಸಲ್ಯೂಟ್ಲಿ ಫೈನ್. ನೀವು?” ಎಂದು ಪ್ರತಿಯಾಗಿ ಕೇಳಿದ್ದರು. “ಐ ಆಮ್ ಫೈನ್. ಈ ಚಳಿಗೆ ಏನಾದರೊಂದು ಬೆಚ್ಚಗೆ ಗಂಟಲಲ್ಲಿ ಇಳಿದರೆ ಹಾಯೆನಿಸುತ್ತೆ ಎಂದು ಬಂದೆ. ನನ್ನೊಂದಿಗೆ ಹರ್ಬಲ್ ಟೀ ನೀವೂ ಸೇವಿಸ ಬನ್ನಿ.” “ಆಯ್ತು. ಈ ಸಲ ಚಳಿ ಜಾಸ್ತಿಯಾಗಿದೆ ಎಂದು ನಿಮಗೆ ಅನಿಸೋಲ್ವಾ?” “ಹೌದು. ಆದರೆ ನನಗೆ ಆಶ್ಚರ್ಯವಾಗ್ತಿದೆ. ಈ ಚಳಿಯಲ್ಲೂ ನೀವು ಹೀಗೆ ಟೀ ಶರ್ಟ್‍ನಲ್ಲಿ ಜಾಗಿಂಗ್ ಹೋಗ್ತಿದ್ದೀರಿ ಎಂಬುದು. ನಿಮಗೆ ಇದು ರೂಢಿಯಿಲ್ಲದಿದ್ದರೆ ಕಷ್ಟ ಸಾಧ್ಯವಾಗಿರೋದು.” “ಖಂಡಿತ. ಥ್ಯಾಂಕ್ಸ್ ಸರ್ ಮೈ ಫಿಟ್‍ನೆಸ್. ನನ್ನ ಕೆಲವು ಫಿóಟ್‍ನೆಸ್ ಸೂಚನೆಗಳನ್ನು ನಿನ್ನೆಯೇ ಫೇಸ್‌ಬುಕ್‍ಗೆ ಅಪ್‍ಲೋಡ್ ಮಾಡಿದೆ. ಅಂದ್ಹಾಗೆ. . . ಆರ್ ಯೂ ಆನ್ ಫೇಸ್‍ಬುಕ್?” “ಬಹಳ ಹಿಂದೆ ಅದರಲ್ಲಿ ನನ್ನ ಖಾತೆ ತೆರೆದಿದ್ದೆ. ಯಾವಾಗಲಾದರೊಮ್ಮೆ ವಿಸಿಟ್ ಕೊಡ್ತೀನಿ.” ಫಾಲ್ಗುಣ ಅವರಿಗೆ ಒಮ್ಮೆಲೇ ಅದಕ್ಕೆ ಭೇಟಿ ನೀಡಿ ವೀಕ್ಷಿಸಬೇಕೆನಿಸಿತು. ಅದರಲ್ಲಿನ ಅವಳ ಗೆಳೆಯರ ಬಳಗ ಯಾವುದೆಂದೂ ತಿಳಿಯುತ್ತದೆ. ಅವಳ ಅಭಿರುಚಿಗಳ ಬಗ್ಗೆನೂ ಇಣುಕು ನೋಟ ಸಿಕ್ಕಂತಾಗುತ್ತದೆ. ಹಿಂದಿಂದೆಯೇ ತನ್ನ ಆಲೋಚನೆಗೆ ನಗು ಬಂದಿತು. ಇದೇನು. . . ಯುವಕರ ಕುತೂಹಲ ತನಗುಂಟಾಗುತ್ತಿದೆ ಎಂದು. ನೇರವಾಗಿ ಮಾತುಕತೆಗೆ ಸಿಕ್ಕಿರುವುದಕ್ಕಿಂತ ಸಾಮಾಜಿಕ ಜಾಲತಾಣದಲ್ಲಿ ಅವಳ ಕುರಿತು ತಿಳಿದುಕೊಳ್ಳಬೇಕೆಂದು ಅನಿಸಿದ್ದು ಸೋಜಿಗವೆನಿಸಿತು. ಅವಳಿಂದ ನೋಟ ಕಿತ್ತು ತನ್ನ ಮೊಬೈಲ್ ಸೆಟ್‍ನೆಡೆ ನೆಟ್ಟು “ನಿಮ್ಮ ಮೊಬೈಲ್ ನಂಬರ್ ಏನೆಂದು ತಿಳಿದುಕೊಳ್ಳಬಹುದೇ?” ಎಂದು ಕೇಳಿದರು. ಸಹಜವೆಂಬಂತೆ ಅವಳ ಬಾಯಿಂದ ಉದುರಿದ ಸಂಖ್ಯೆಗಳನ್ನು ಅವರ ಮೊಬೈಲ್‍ನ ಸಂಪರ್ಕ ಸಂಖ್ಯೆಗಳಿಗೆ ಅಳವಡಿಸಿಕೊಂಡರು. “ಈ ದಿನ ನನ್ನ ಸ್ನೇಹಿತ ಸದಾಶಿವ ಒಂದು ಪಿಕ್‍ನಿಕ್ ಏರ್ಪಡಿಸಿದ್ದಾರೆ. ಹಾಗೆಯೇ ಈ ಔಟಿಂಗ್‍ನಲ್ಲಿ ಭರ್ಜರಿ ಕಾರ್ಯಕ್ರಮಗಳಿವೆ. ಅದರಲ್ಲಿ ನೀವೂ ಪಾಲ್ಗೊಂಡರೆ ತುಂಬಾ ಚೆನ್ನಾಗಿರುತ್ತೆ.” “ಫಾಲ್ಗುಣ ಅವರೇ. ನಾನು ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಗಳಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದುದುಂಟು. ಶೈಕ್ಷಣಿಕ, ಸಾಂಸ್ಕೃತಿಕ, ಮನರಂಜನಾತ್ಮಕ. . . ಇಂಥಹದ್ದೇ ಎಂದು ಹೇಳುವಂಗಿಲ್ಲ. ಆದರೆ ಕೇವಲ ಆಯೋಜಕಳಾಗಿದ್ದೆನೇ ವಿನಃ ಪಾಲ್ಗೊಳ್ಳುವ ಇರಾದೆ ಇರಲಿಲ್ಲ.” “ವಿದ್ಯಾರ್ಥಿಗಳೊಂದಿಗೆ ಇರುವಾಗ ಗೌರವಯುತ ಸ್ಥಾನದಲ್ಲಿದ್ದ ನೀವು ಹಾಗೆಯೇ ನಡೆದುಕೊಳ್ಳಬೇಕಾಗಿತ್ತು. ಆದರೆ ನಾವೆಲ್ಲಾ ಒಂದೇ ವಯೋಮಾನದವರಲ್ಲವೇ. ಯಾರು ಏನು ತಿಳಿದುಕೊಳ್ಳುವರೆಂಬ ಭಯವೇ?” “ಹಾಗೇನೂ ಇಲ್ಲಾ ಫಾಲ್ಗುಣ ಅವರೇ,” ಮೀನಾ ತಲೆ ಕೊಡವಿಕೊಂಡು ಸಮ್ಮತಿಸಿದಳು.
** ** ** ** **
ಫಾಲ್ಗುಣ ತನ್ನ ಸಹಚರ ಸದಾಶಿವನಿಗೆ ಸಹಾಯ ಹಸ್ತ ನೀಡುತ್ತಾ ಅವರ ವಿಹಾರ ತಾಣದಲ್ಲಿ ಹುಲ್ಲಿನ ಹಾಸಿನ ಮೇಲೆ ಎಲ್ಲರೂ ಆಸೀನರಾಗಲು ಮಡಚಬಹುದಾದ ಚಾಪೆ ಎಳೆದು ತಮ್ಮೊಂದಿಗೆ ಸಹಾಯಕ್ಕೆಂದು ಬಂದ ಆಳುಗಳಿಬ್ಬರಿಗೆ ಆಜ್ಞೆಗಳನ್ನು ನೀಡುತ್ತಿದ್ದರೆ ಪಿಕ್‍ನಿಕ್‍ಗೆ ಬಂದಿದ್ದ ‘ಸೀನಿಯರ್ ಹೋಮ್ಸ್’ ಸಮುದಾಯದ ಕೆಲವು ಮಂದಿ ಸುತ್ತಲೂ ವಿಹಂಗಮ ನೋಟ ಬೀರುತ್ತಾ ಕೊಂಚ ದೂರದಲ್ಲಿ ಹಾಲಿನ ನೊರೆಯಂತೆ ಬೆಟ್ಟದ ಮೇಲಿಂದ ಕೆಳಧುಮುಕುತ್ತಿದ್ದ ನದಿಯ ಸೌಂದರ್ಯವನ್ನು ಸವಿಯತೊಡಗಿದ್ದರು. ಗುಂಪಿನಲ್ಲಿದ್ದ ಒಬ್ಬಾಕೆ ‘ಅಂತ್ಯಾಕ್ಷರಿ’ಯನ್ನು ಶುರು ಮಾಡುವ ಬಿನ್ನಹವನ್ನಿಟ್ಟಿದ್ದಳು. ಎಲ್ಲರ ಇಚ್ಛೆಗಳು ಒಂದೊಂದಾಗಿ ಈಡೇರುವಾಗಲೇ ತಂಡದಲ್ಲಿದ್ದ ಎಪ್ಪತ್ತರ ಆಸುಪಾಸಿನ ವೃದ್ಧರೋರ್ವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಯಾವಾಗಲೂ ತಮ್ಮೊಂದಿಗೆ ಒಬ್ಬ ವೈದ್ಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದವರಿಗೆ ಅಂದೇಕೋ ಕೇವಲ ಅರ್ಧ ದಿನದ ಮಟ್ಟಿಗೆ ವಿಹಾರಕ್ಕೆ ಹೋಗಿ ಬರುವುದರಿಂದ ಅವಶ್ಯಕವಿಲ್ಲವೆನಿಸಿ ವೈದ್ಯರನ್ನು ಕರೆಯಲು ನಿರ್ಲಕ್ಷಿಸಿದ್ದುದು ಮಹಾ ಎಡವಟ್ಟಿಗೆ ಕಾರಣವಾಗಿತ್ತು.

ಫಾಲ್ಗುಣ ತನ್ನ ಮೊಬೈಲ್‍ನಿಂದ ವೈದ್ಯರಿಗೆ ಕರೆ ಮಾಡಿದಾಗ ಕೇವಲ ‘ನಾಟ್ ರೀಚಬಲ್’ ಎಂಬ ಧ್ವನಿ ಕೇಳಿಬರುತ್ತಿತ್ತೇ ಹೊರತು ತುರ್ತು ಸ್ಪಂದನೆಗೆ ಅವರು ದಕ್ಕದಾಗಿದ್ದರು. ಪ್ರವಾಸಿ ತಾಣವಾದ್ದರಿಂದ ಸಮೀಪದಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಅಧಿಕಾರಿಗೆ ವಿಷಯ ಮುಟ್ಟಿಸಿ ತುರ್ತು ಚಿಕಿತ್ಸೆಗೆಂದು ಸಜ್ಜಾಗಿದ್ದ ಆಂಬ್ಯುಲೆನ್ಸ್‍ನಲ್ಲಿ ಕುಸಿದು ಬಿದ್ದ ಸಹಚರನನ್ನು ಎತ್ತಿ ಹಾಕಿಕೊಂಡು ಆರೋಗ್ಯದಿಂದಿದ್ದ ಸಮುದಾಯದ ಇಬ್ಬರನ್ನು ಜೊತೆಯಲ್ಲಿ ಕೂರಿಸಿಕೊಂಡು ಸಮೀಪದ ಆಸ್ಪತ್ರೆಗೆ ಹೊರಟೇ ಬಿಟ್ಟಿದ್ದರು.
ಅಲ್ಲಿ ಉಳಿದಿದ್ದ ಸಮುದಾಯದವರಿಗೆ ದಿಢೀರೆಂದು ಪಾತಾಳಕ್ಕಿಳಿದಂತಾಗಿ ಅಲ್ಲಿ ಹೆಚ್ಚು ಹೊತ್ತು ಇರಲು ಮನಸ್ಸಾಗದೆ ತಮ್ಮ ಗೂಡುಗಳಿಗೆ ಹಿಂದಿರುಗಲು ಹಾತೊರೆದಿದ್ದರು. ಹೋಗುವಾಗ ಇದ್ದ ಉತ್ಸಾಹ ಹರಿಯುವ ನದಿಯ ಮಧ್ಯದ ಸುಳಿಯೊಳಗೆ ಸಿಕ್ಕಂತಾಗಿ ಹಿಂಗತೊಡಗಿತ್ತು.

ಮಿನಿ ಬಸ್ಸಿನೊಳಗೆ ಕುಳಿತು ಹಿಂದಕ್ಕೋಡುತ್ತಿದ್ದ ಕಿಟಕಿಯಾಚೆಯ ಮರಗಿಡಗಳ ಕಡೆ ನೋಟ ನೆಟ್ಟರೂ ಮೀನಾಳಿಗೆ ಕೆಟ್ಟ ಆಲೋಚನೆಗಳೇ ತಲೆ ತುಂಬಿತ್ತು. ಅಂದ್ಯಾಕೋ ತನ್ನ ತಂದೆ ತಾಯಿಯನ್ನು ಬಹಳವಾಗಿ ನೆನೆಸಿಕೊಂಡಿದ್ದಳು. ವಯಸ್ಸಿಗೆ ಬಂದ ಮಗಳಿಗೆ ವಿವಾಹ ಮಾಡಿ ಕಳುಹಿಸುವ ತವಕದಲ್ಲಿ ನೌಕರಿಯಲ್ಲಿದ್ದ ವಿದ್ಯಾವಂತ ಯುವಕರ ಹುಡಕಾಟದಲ್ಲಿ ತೊಡಗಿದ್ದ ಅವರಿಗೆ ಅವಳು ಬಹಳ ನಿರಾಶೆಗೊಳಿಸಿದ್ದಳೇನೋ. ತಂದೆ ತಾಯಿಗೆ ಒಬ್ಬಳೇ ಮಗಳಾಗಿದ್ದರೂ ಅವರ ವಂಶವನ್ನು ಬೆಳೆಸುವ ಮನಸ್ಸೇ ಮೂಡದಾಗಿತ್ತೋ ಅಥವಾ ತನ್ನನ್ನು ವರಿಸಲು ಬಂದ ಯುವಕರಾರೂ ಅವಳ ಮನಸ್ಸಿಗೊಪ್ಪಿಗೆಯಾಗಲಿಲ್ಲವೋ. ಅವಳ ವಾರಿಗೆಯವರೆಲ್ಲರೂ ಸಂಸಾರ ನೌಕೆಯಲ್ಲಿ ತೇಲಿ ಮುಳುಗುತ್ತಿದ್ದರೆ ಇವಳು ಮಾತ್ರ ‘ಒಂಟಿ ಹೆಣ್ಣು” ಪಟ್ಟವನ್ನು ಬಿಟ್ಟುಕೊಡದಾಗಿದ್ದಳು. ತಂದೆ ವೆಂಕಟೇಶಪ್ಪ ಅನಾರೋಗ್ಯ ಪೀಡಿತರಾಗಿ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಅವಳನ್ನು ತಮ್ಮ ಹಾಸಿಗೆಯ ಬದಿಯಲ್ಲಿ ಕೂರಿಸಿಕೊಂಡು ನಿಧಾನವಾಗಿ ಉಸುರಿದ್ದರು.

“ಮಗಳೇ, ನಿನ್ನನ್ನು ಗಂಡುಮಗುವಂತೆಯೇ ಬೆಳೆಸಿದೆ. ಯಾವುದಕ್ಕೂ ಕಮ್ಮಿ ಮಾಡಲಿಲ್ಲ. ಮೂವತ್ತೈದು ವರ್ಷ ಮದುವೆಯಾಗುವ ವಯಸ್ಸಲ್ಲವೆಂದುಕೊಳ್ಳಬೇಡ ಮಗಳೇ. ಈಗಲೂ ಕಾಲ ಮಿಂಚಿಲ್ಲ. ನಿನಗೆ ಸರಿಹೊಂದುವಾತನನ್ನು ನೀನೇ ಹುಡುಕಿಕೋ. ನೀನು ಖುಷಿಯಾಗಿರಬೇಕು ಮಗಳೇ. ನಿನ್ನ ತಾಯಿಯನ್ನು ಚೆನ್ನಾಗಿ ನೋಡಿಕೋ,” ಎಂದು ಕಡೆಯದಾಗಿ ತಿಳಿಸಿದರೂ ಮೀನಾ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲವೇನೋ.

ತಾಯಿ ವಿಶಾಲಾಕ್ಷಿಗೂ ಮಗಳಿಗೆ ಉಪದೇಶ ಮಾಡಿ ಸಾಕಾಯ್ತೇನೋ ಎಂಬಂತೆ ಪತಿಯ ಹಾದಿಯಲ್ಲೇ ಇಹಲೋಕ ತ್ಯಜಿಸಿದ್ದರು. ಮೀನಾಳಿಗೆ ಕೆಲದಿನ ಒಂಟಿತನ ಕಾಡತೊಡಗಿತ್ತಾದರೂ ತಡರಾತ್ರಿಯವರೆಗೆ ಕಾಲೇಜಿನಲ್ಲೇ ಸಮಯ ಕಳೆಯುವುದು ಇಲ್ಲವೇ ತನ್ನ ಸ್ನೇಹಿತೆಯರೊಂದಿಗೆ ‘ಲೇಡೀಸ್ ಕ್ಲಬ್’ನಲ್ಲಿ ಕಾಲ ಕಳೆಯತೊಡಗಿದ್ದಳು. ಈ ‘ರಿಟೈರ್‍ಮೆಂಟ್ ಹೋಂ’ಗೆ ಬರಲು ತನಗೆ ಆಲೋಚನೆ ಹೊಳೆಯುವುದಕ್ಕೂ ತನ್ನ ಗೆಳತಿಯರಿಗೆ ಕಾಲ ಕೂಡಿ ಬಂದಿರುವುದಕ್ಕೂ ಸರಿಹೋಗಿತ್ತು. ಹಳೆಯ ದಿನಗಳ ಗುಂಗಿನಲ್ಲಿರುವಾಗಲೇ ತನ್ನ ವಿಲ್ಲಾಗೆ ಸಂಜೆ ತಲುಪಿದಾಗ ಮೀನಾಳಿಗೆ ಎಲ್ಲೂ ಹೊರಗೆ ಹೋಗುವ ಮನಸ್ಸಾಗದೆ ತನ್ನ ನೆನಪುಗಳ ಬುತ್ತಿಯನ್ನು ರಗ್ಗಿನೊಳಗೆ ಮುಚ್ಚಿಟ್ಟಂತೆ ಚಳಿಗೆ ಬೆಚ್ಚಗೆ ಹೊದ್ದುಕೊಂಡು ನಿದ್ರೆಗೆ ಜಾರಿದ್ದಳು.
* * *
ಮರುದಿನ ಫಾಲ್ಗುಣ ಅವರನ್ನು ಕೇಳಲು ಪ್ರಶ್ನೆಗಳ ಮೂಟೆ ಹೊತ್ತುಕೊಂಡೇ ತಮ್ಮ ಭೇಟಿಯ ಸ್ಥಳವಾದ ‘ಟೀ ಹೌಸ್’ನಲ್ಲಿ ಸಂಧಿಸಿದ್ದಳು. “ನೆನ್ನೆ ಅವರಿಗೆ ಸ್ಟ್ರೋಕ್ ಆಗಿತ್ತು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಕ್ಕೆ ಬಚಾವಾದರು. ‘ಕೊರೊನರಿ ಆಂಜಿಯೋಗ್ರಾಮ್’ ಮಾಡಬೇಕೆಂದು ಡಾಕ್ಟರ್ ತಿಳಿಸಿದ್ದರು. ರಾತ್ರಿಯೆಲ್ಲಾ ಅಲ್ಲೇ ತಂಗಿದ್ದು ಬೆಳಗ್ಗೆ ಮ್ಯಾನೇಜ್‍ಮೆಂಟ್‍ನವರು ಅಲ್ಲಿಗೆ ಬಂದಾಗ ಅವರಿಗೆ ಒಪ್ಪಿಸಿ ನಾನಿಲ್ಲಿಗೆ ಬಂದೆ. ಅವರ ಕುಟುಂಬದವರಿಗೂ ವಿಷಯ ಮುಟ್ಟಿರಬೇಕು.”

“ಫಾಲ್ಗುಣ. ಈ ಆರೋಗ್ಯ ತಪಾಸಣೆ ಆಗಾಗ ಮಾಡಿಕೊಳ್ಳುತ್ತಿದ್ದರೆ ಇಂಥಹ ಅವಘಡಗಳು ತಪ್ಪುತ್ತಲ್ವೇ?” “ಖಂಡಿತ. ನಾನಂತೂ ಫಿಟ್‍ನೆಸ್ ಫ್ರೀಕ್. ಆದರೆ ನೆನ್ನೆ ಕೊಂಚ ಅವರಿಗೆ ‘ಎಕ್ಸೈಟ್‍ಮೆಂಟ್’ ಜಾಸ್ತಿಯಾಯ್ತೋ ಅಥವಾ ಆ ವಯಸ್ಸಿನಲ್ಲಿ ಬಸ್‍ನಲ್ಲಿ ದೂರ ಪ್ರಯಾಣ ಮಾಡಿದ ಆಯಾಸಕ್ಕೋ ಏನೋ ಅವರಿಗೆ ಈ ಹಿಂದೆ ಎಲೆಮರೆಯ ಕಾಯಿಯಂತ್ತಿದ್ದ ಕಾಯಿಲೆ ಹೊರಗೆ ಕಾಣಿಸಿಕೊಂಡಿತ್ತು ಅಷ್ಟೇ.”

“ನಮ್ಮ ಮಹಿಳೆಯರ ಪೈಕಿ ಒಬ್ಬಾಕೆ ಯಾವಾಗಲೂ ತಮ್ಮ ಮೊಮ್ಮಗನನ್ನು ನೆನೆಸಿಕೊಳ್ತಾನೇ ಇರ್ತಾಳೆ. ಅವರ ಮಗ ವಿದೇಶದಲ್ಲಿದ್ದಾನೆ. ಇವಳಿಗೆ ಮಗುವನ್ನು ನೋಡುವ ತವಕ. ಒಂದೆರಡು ತಿಂಗಳು ವಿದೇಶಕ್ಕೆ ಹೋಗಿ ಬರ್ತೀನಿ ಅಂತಿರ್ತಾಳೆ. ಮತ್ತೆ ಕೆಲವೊಮ್ಮೆ ತನ್ನೊಳಗೇ ಮುಲುಗುಡುತ್ತಾಳೆ. ಅವಳನ್ನು ‘ಎಮ್ಟಿನೆಸ್ಟ್ ಸಿಂಡ್ರೋಮ್’ ಕಾಡ್ತಿದೆಯೇನೋ.”

“ನನಗೂ ನನ್ನ ಮೊಮ್ಮಗನ ನೆನಪು ಬರುತ್ತೆ. ಏನು ಮಾಡುವುದಕ್ಕಾಗುತ್ತೆ,” ಎಂದವರೇ ತಮ್ಮ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋಗಳತ್ತ ಒಮ್ಮೆ ಕಣ್ಣುಹಾಯಿಸಿ ಒಂದು ಫೋಟೋವನ್ನು ಬೆರಳ ಸ್ಪರ್ಶದಿಂದ ಹಿರಿದಾಗಿಸಿ ಅವಳ ಮುಂದೆ ಹಿಡಿದಿದ್ದರು. “ನನ್ನ ಮೊಮ್ಮಗ ಅವಿ. ಭಾರೀ ಚೂಟಿ ಹುಡುಗ,” ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿದಾಗ ಮೀನಾ ಅವರು ತೋರಿಸಿದ ಚಿತ್ರವನ್ನು ತದೇಕಚಿತ್ತದಿಂದ ನೋಡಿ “ನಿಮ್ಮಂಗೇ ಇದ್ದಾನೆ ನಿಮ್ಮ ಮೊಮ್ಮಗ,” ಎಂದು ಅವರ ಖುಷಿಯಲ್ಲಿ ಭಾಗಿಯಾಗುತ್ತಾ ನೆನ್ನೆಯ ಅವಾಂತರವನ್ನು ಕೊಂಚ ಮಟ್ಟಿಗೆ ಮರೆತಳು. ಮಾತುಕತೆ ಕೆಲಕಾಲ ಅವರ ಮೊಮ್ಮಗನ ಆಟಪಾಠಗಳ ಸುತ್ತಲೇ ಗಿರಿಕಿ ಹೊಡೆದು ಕಡೆಗೆ ತಾವು ಏನೋ ಕಳೆದುಕೊಂಡೆವೆಂಬ ಭಾವದಲ್ಲೂ ಮುಳುಗಿದಾಗ ಈ ವ್ಯವಸ್ಥೆಯಲ್ಲಿ ಓರ್ವ ಮನಶ್ಶಾಸ್ತ್ರಜ್ಞರ ಅವಶ್ಯಕತೆಯನ್ನೂ ಮನಗಂಡರು.

‘ಟೀ ಹೌಸ್’ನಲ್ಲಿ ಕೂತು ಮಾತುಕತೆಯಾಡುವುದಕ್ಕಿಂತ ವಿಸ್ತೃತವಾಗಿ ಹರಡಿಕೊಂಡಿದ್ದ ಹುಲ್ಲುಹಾಸಿನ ಮೇಲೆ ನಡೆದುಕೊಂಡೇ ನೆನಪುಗಳನ್ನು ಮೆಲುಕು ಹಾಕುವುದು ಹಿತಕರವೆನಿಸಿತ್ತು. ಫಾಲ್ಗುಣರವರಿಗೆ ಬೆಂಗಳೂರಿನಲ್ಲಿದ್ದ ಮಗನ ಮಾತು ಇದ್ದಕ್ಕಿದ್ದಂತೆ ಧುತ್ತೆಂದು ನೆನಪಾದಾಗಲೆಲ್ಲಾ ಎದೆ ಹಿಂಡಿದಂತಾಗಿ ಮುಖ ಮ್ಲಾನವದನಗೊಳ್ಳುತ್ತಿತ್ತು.

“ಪಪ್ಪಾ, ನೀವು ಯಾಕೋ ಮಮ್ಮೀನ ತುಂಬಾ ಹಚ್ಚಿಕೊಂಡಿದ್ದೀರಾ. ಅವರು ಹೊರಟು ಹೋದಾಗಿನಿಂದ ನೀವು ಯಾವಾಗ ಊಟ ಮಾಡಿದಿರಿ, ಯಾವಾಗ ನಿದ್ದೆ ಮಾಡಬೇಕೆಂಬುದನ್ನೇ ಮರೆತುಹೋಗಿದ್ದೀರಾ. ನಿಮಗೆ ಕೆಲಕಾಲ ಮಮ್ಮೀನಾ ಮರೆಯೋದಿಕ್ಕೆ ಔಟಿಂಗ್ ಅವಶ್ಯಕತೆ ಇದೆ. ‘ರಿಟೈರ್‍ಮೆಂಟ್ ಹೋಮ್’ಗೆ ಬುಕ್ ಮಾಡಲಾ,” ಎಂದು ತಾನೇ ಮುಂದೆ ಬಂದಾಗ ಎರಡು ವರ್ಷದ ಮೊಮ್ಮಗನ ಚಿತ್ರ ಕಣ್ಮುಂದೆ ಸುಳಿದಂತಾದರೂ ಮಗನಿಗೆ ಇಲ್ಲವೆನ್ನಲಾಗಿರಲಿಲ್ಲ. ತಾನು ಕೆಲ ರಾತ್ರಿ ಬೇರೆ ದೇಶದ ಕ್ಲೈಯಂಟ್‍ಗಳೊಂದಿಗೆ ಸಂವಾದ ಮಾಡಲು ಅವರ ಸಮಯಕ್ಕೆ ಎಚ್ಚೆತ್ತಿದ್ದುದುಂಟು. ಅದನ್ನೇ ಅಪಾರ್ಥ ಕಲ್ಪಿಸಿಕೊಂಡು ಹೆಂಡತಿಯ ಮಾತು ಕೇಳಿ ತನ್ನನ್ನು ಹೊರಗಟ್ಟಲು ಪ್ರಯತ್ನಿಸಿದ ಪರಿ ಹಿತವೆನಿಸಿರಲಿಲ್ಲ.

ಫಾಲ್ಗುಣರವರಿಗೆ ಅವರ ಮನೆಯ ವಿಷಯ ಕೆದಕಿದರೆ ಇಷ್ಟವಾಗುವುದಿಲ್ಲವೆಂದು ಅರ್ಥವಾಗಲು ಮೀನಾಳಿಗೆ ಬಹಳ ಸಮಯ ಹಿಡಿದಿರಲಿಲ್ಲ. ಆದರೆ ಮೊಮ್ಮಗನ ಬಗ್ಗೆ ಮಾತು ಬಂದಾಗ ಮುಖವರಳುತ್ತಿದ್ದುದು ನೋಡಿ ಅವರ ಆ ನೆನಪುಗಳ ಗಂಟನ್ನು ಆಗೊಮ್ಮೆ ಈಗೊಮ್ಮೆ ಬಿಚ್ಚಲು ಅನುವಾಗುತ್ತಿದ್ದಳು.

ತನಗೂ ಮದುವೆಯಾಗಿ ಮಕ್ಕಳಾಗಿದ್ದರೆ ಅವರಿಗೂ ಇದೇ ರೀತಿ ಮೊಮ್ಮಕ್ಕಳು ಹುಟ್ಟಿ ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತಿದ್ದರೇನೋ ಎಂದು ತನ್ನ ವಯಸ್ಸನ್ನು ಲೆಕ್ಕ ಹಾಕಿಕೊಳ್ಳುತ್ತಾ ಈ ವಯಸ್ಸಿಗೆ ಮೊಮ್ಮಕ್ಕಳಾಗಿದ್ದರೆ ಅವರಿಗೆ ವಯಸ್ಸೆಷ್ಟಾಗಿರಬಹುದೆಂದು ಮನದಲ್ಲೇ ಲೆಕ್ಕ ಹಾಕಿದಳು.

ಈ ಮಧ್ಯೆ ವಿದೇಶದಲ್ಲಿದ್ದ ಫಾಲ್ಗುಣರ ಎರಡನೆಯ ಮಗನಿಗೂ ಒಂದು ಹೆಣ್ಣು ಮಗುವಾಗಿರುವ ಸುದ್ದಿ ಕೇಳಿ ಅವರಿಗೆ ಖುಷಿಯ ಜೊತೆಗೆ ಕೂಡಲೇ ರೆಕ್ಕೆ ಕಟ್ಟಿಕೊಂಡು ವಿದೇಶಕ್ಕೆ ಹಾರಿ ಹೋಗಲೇ ಎಂಬ ಆಸೆ ಹುಟ್ಟಿತ್ತು. ‘ಸ್ಕೈಪ್’ನಲ್ಲಿ ತನ್ನ ಮಗನೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಾಗ ಫಾಲ್ಗುಣ ತಮ್ಮೊಂದಿಗಿದ್ದ ಮೀನಾಳನ್ನು ಪರಿಚಯಿಸಿದ್ದರು. ಮೊಮ್ಮಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಿ ಸಂಭ್ರಮಿಸುವಾಗಲೇ ಮೀನಾಳಿಗೂ ಆ ಖುಷಿಯಲ್ಲಿ ಭಾಗಿಯಾದಂತಾಗಿ ಪರದೆಯ ಮೇಲೆ ಕೈಯಾಡಿಸಿದ್ದಳು.

“ಡ್ಯಾಡಿ. ನಿಮಗೆ ಅಲ್ಲಿ ಒಬ್ಬರೇ ಇದ್ದು ಬೇಜಾರಾದಾಗ ಯಾವಾಗಲಾದರೊಮ್ಮೆ ಇಲ್ಲಿ ಬನ್ನಿ. ಇಲ್ಲಿ ನನ್ನಾಕೆಗೆ ಒಬ್ಬಳೇ ಪಾಪುವನ್ನು ನೋಡಿಕೊಳ್ಳುವುದು ಕಷ್ಟವಾಗಿದೆ. ಬೇಕಿದ್ದರೆ ನಿಮ್ಮೊಂದಿಗೆ ನಿಮ್ಮ ಹೊಸ ಗೆಳತಿಯನ್ನೂ ಕರೆದುಕೊಂಡು ಬನ್ನಿ,” ಎಂದು ಆಹ್ವಾನವನ್ನಿತ್ತಾಗ ನೆಂಟರಿಲ್ಲದ ಊರಿನಲ್ಲಿದ್ದ ಮಗನ ಪಾಡು ಅರ್ಥವಾಗಿತ್ತಾದರೂ ಮೊಮ್ಮಗ ಬೆಳೆದ ಮೇಲೆ ತನ್ನನ್ನು ಮತ್ತೆ ಇದೇ ತಾಣಕ್ಕೆ ಅಟ್ಟುವುದಿಲ್ಲವೆಂದು ಏನು ಗ್ಯಾರಂಟಿ ಎಂಬ ಅನುಮಾನವೂ ಕಾಡದಿರಲಿಲ್ಲ. ಆದರೆ ಕೂಸಾಗಿರುವಾಗಲೇ ತಮ್ಮ ಅಗತ್ಯ ಅವರಿಗೆ ಹೆಚ್ಚಿದೆ ಎನಿಸಿ ಕೆಲಕಾಲ ವಿದೇಶಕ್ಕೆ ಹೋಗಿ ಬರುವ ವಿಚಾರದ ಬಗ್ಗೆ ಚರ್ಚಿಸತೊಡಗಿದ್ದರು.

ಈ ಮಧ್ಯೆ ಅವರಿಬ್ಬರಿಗೂ ತಾವುಗಳು ಬಹಳ ಕಾಲದಿಂದ ಬಲ್ಲವರಾಗಿದ್ದು ಎರಡನೆಯ ಜೀವನಕ್ಕೆ ಕಾಲಿಟ್ಟಂತೆ ಪುಳಕಿತಗೊಂಡಿದ್ದರು. ಮಗುವಿನ ನೆನಪು ಹಂಚಿಕೊಳ್ಳುತ್ತಾ ತಾವೂ ಮಗುವಾಗಿದ್ದರು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *