ಮಗಳೆಂಬ ಮಲ್ಲಿಗೆ ಬಳ್ಳಿ…. ಆಶಾ ಜಗದೀಶ್
ಚಿನ್ನಾರಿ ಮಗಳೇ….
ಮಗಳು ಎನ್ನುವ ಶಬ್ದವೇ ತತ್ತಕ್ಷಣಕ್ಕೆ ಹೃದಯ ಮೀಟಿಬಿಡಬಲ್ಲ ಪದ. ಸ್ವತಃ ಮಗಳಾಗಿದ್ದರೂ ನನಗೆಂದೂ ಇದರ ಅನುಭವವಾಗಿರಲಿಲ್ಲ ನೀ ಹುಟ್ಟುವವರೆಗೂ. ಮಗಳು ಎಂದಾಕ್ಷಣ ಅದೆಷ್ಟೋ ದಿನಗಳಿಂದ ಉಸಿರಾಡದೆ ಪ್ರಜ್ಞೆ ಕಳೆದುಕೊಂಡಿದ್ದ ವಸ್ತ್ರ ಒಡವೆಗಳಿಗೆ ಜೀವ ಬಂದುಬಿಟ್ಟಿತು. ಮನೆಮುಂದಿನ ಮಲ್ಲಿಗೆಬಳ್ಳಿ ಹೂ ಹಿಡಿದು ನಿಂತಿತು.
ಮಗಳೇ ನಿನಗೆ ಅಂತ ಕೂಡಿಟ್ಟುಕೊಂಡ ನನ್ನ ಅವೆಷ್ಟೋ ಖಾಸಾ ಮಾತುಗಳು ಒಂದೊಂದಾಗಿ ಪದಗಳಾಗಿ ಹೊರ ಬರುತ್ತಿವೆ. ಎಲ್ಲ ಹೇಳಿ ಬರಿದಾಗುತ್ತೇನೆ ಎಂದಲ್ಲ. ಇಷ್ಟಿಷ್ಟೆ ಹೇಳತೊಡಗುತ್ತೇನೆ. ಮಗಳೆಂಬ ಪುಟ್ಟ ಗೆಳತಿಗೆ. ಗಂಡು ಮಗು ಹುಟ್ಟಿದಾಕ್ಷಣ ಎಂತದೋ ನಿರಾಳತೆ ಎಂತದೋ ಹೆಮ್ಮೆ ಧರಿಸಿ ತಾಯ್ತನವನ್ನು ಅನುಭವಿಸುವ ಮನಸ್ಥಿತಿಯನ್ನೇ ಕಳೆದುಕೊಂಡುಬಿಡುತ್ತೇವೆ ಏಕೋ. ಗಂಡು ಮಗುವನ್ನು ಹೆರಬೇಕೆಂಬ ಕುಟುಂಬದ ಒತ್ತಾಸೆಯೋ, ಸಮಾಜದ ಕುಟುಕೋ ಇದಕ್ಕೆ ಕಾರಣವಿರಬಹುದು. ಗಂಡು ಹೆತ್ತರೆ ಮಾತ್ರ ಸ್ವರ್ಗ ಪ್ರಾಪ್ತಿ ಎನ್ನುವ ಮನಸ್ಥಿತಿ ಯಾವುದೇ ಹೆಣ್ಣಿಗೆ ಅದೂ ಒಬ್ಬ ತಾಯಿಗೆ ಬರುತ್ತದೆಂದರೆ ನಂಬಲಸಾಧ್ಯವೇ. ಆದರೆ ನೀ ನನ್ನ ಮಡಿಲ ತುಂಬಿದಾಗ ನಿನ್ನ ಮೇಲೆ ಇವೆಂತದ್ದರ ಸೋಂಕು ತಗುಲದ ಮಮಕಾರ ಉಂಟಾಗಿ ನಿನ್ನನ್ನು ಮತ್ತಷ್ಟು ಮತ್ತಷ್ಟು ಪ್ರೀತಿಸುತ್ತಾ ಹೋದದ್ದು ನನಗೂ ಅಚ್ಚರಿ. ಎಂಥಾ ಮುದ್ದಾದ ಮಗು ನೀನು. ಯಾರಾದರೂ ಹೇಗೆ ಹೆಣ್ಣು ಮಗುವೆಂದು ಹೀಗಳೆಯುತ್ತಾರೆ….. ಭ್ರೂಣಾವಸ್ಥೆಯಲ್ಲೆ ಹೊಸಕಿ ಹಾಕುತ್ತಾರೆ. ನಿರ್ದಯಿಗಳು… ನಿಜಕ್ಕೂ ನಾನಿನ್ನ ಹರಕೆ ಹೊತ್ತು ಪಡೆದಿದ್ದೆ ಮಗಳೇ.
ನಿನ್ನ ಅಳು, ನಗು, ಕೇಕೆ ನನ್ನೊಳಗೆ ನಗಾರಿಯೇಳಿಸುತ್ತವೆ. ನಿನ್ನ ಬೊಚ್ಚು ಬಾಯಲ್ಲಿ ಅಮ್ಮ ಎಂದು ಕರೆಸಿಕೊಳ್ಳಲಿಕ್ಕೆ ಕಾತರಿಸುತ್ತೇನೆ. ಮುಂದೊಂದು ದಿನ ನೀ ಬೆಳೆದು ಈ ಅಮ್ಮನ ಅರೆಬೆಂದ ಕನಸುಗಳ ಸಾಕಾರವಾಗುತ್ತೀ ಎನ್ನುವ ಭರಸೆಯೊಳಗೆ ಆಸೆಗಳ ತಿದಿ ಒತ್ತುತ್ತಾ ಮೈಮರೆಯುತ್ತೇನೆ. ಆದರೆ ನನ್ನ ಆಶಯಗಳು ನಿನಗೆ ಭಾರವಾಗಬಾರದಲ್ಲ. ನೀನು ನಿನ್ನ ಬದುಕನ್ನು ಬದುಕಬೇಕೆ ಹೊರತು ಇನ್ನಾರದೋ ಆಶಯಗಳನ್ನಲ್ಲ.
ನಿನ್ನ ಮೃದು ಮೈ, ಹವಳದ ತುಟಿಗಳನ್ನು ಎಷ್ಟು ಮುದ್ದಿಸಿದರೂ ತೃಪ್ತಿಯಿಲ್ಲ ಈ ಅಮ್ಮನಿಗೆ. ನಿನ್ನ ಮುಗ್ಧ ಮನಸ್ಸು ಬಲಿಯಲು ಪ್ರಾರಂಭಿಸಿದೆ. ನಿನ್ನತನವೂ ಮೊಳೆಯುತ್ತಿದೆ. ಈಗೀಗ ನಾನು ಹಾಲು ಕುಡಿಸಲು ಬಲವಂತಪಡಿಸಿದರೆ ನೀ ರಚ್ಚೆ ಹಿಡಿಯುತ್ತಿ. ಅದು ಬೇಡ ಎನ್ನುವ ನಿನ್ನ ಭಾಷೆ. ಆದರೂ ನಾ ಉಣಿಸಲು ತೊಡಗುತ್ತೇನೆ. ಕೆಲವೊಮ್ಮೆ ನೀ ಮೈಮರೆಯುತ್ತೀ. ಕೆಲವೊಮ್ಮೆ ನನ್ನನ್ನು ನಿರಾಸೆಗೊಳಿಸುತ್ತಿ. ನಾನಾದರೂ ಏಕೆ ನಿರಾಶಳಾಗಬೇಕು. ಹೆತ್ತ ಮಾತ್ರಕ್ಕೆ ನಿನ್ನೊಳಗೊಂದು ಪುಟ್ಟ ಮನಸ್ಸಿರುವುದನ್ನು ನಾನಾದರೂ ಏಕೆ ಮರೆಯಬೇಕು.
ನೀನು ಬೆಳೆದು ಹೆಣ್ಣಾಗುತ್ತೀ. ಆಕರ್ಷಕಳಾಗುತ್ತಿ. ಗಂಡು ಸಮೂಹವೇ ನಿನ್ನೆಡೆಗೆ ಆಕರ್ಷಿತರಾಗುವಷ್ಟು. ಹೂವಿರುವೆಡೆ ದುಂಬಿಗಳು ಬರುವುದು ಸಹಜವೇ. ಆದರೆ ಕ್ರಿಮಿ ಜಂತುಗಳಲ್ಲಿರುವಷ್ಟು ಸುಲಭವಲ್ಲ ಮನುಷ್ಯರ ನಡುವಣ ಸಂಬಂಧ. ಅದು ಬಹು ಸಂಕೀರ್ಣ. ಮನುಷ್ಯ ಬರಿದೆ ದೇಹದ ಲಾಲಸೆಗಾಗಿ ಏನನ್ನಾದರೂ ಮಾಡಬಲ್ಲ. ನೀನೀಗ ಹುಷಾರಾಗಬೇಕು. ಗಂಡನ್ನು ಅರ್ಥ ಮಾಡಿಕೊಳ್ಳಬೇಕು. ನಿನ್ನನ್ನು ನೀನು ಕಾಪಾಡಿಕೊಳ್ಳುವಷ್ಟು ಚತುರಳಾಗಬೇಕು. ನಿನ್ನ ದೇಹ ಮದುವೆಗೆ ಸಿದ್ಧವಾಗುವವರೆಗೂ.
ಒಮ್ಮೊಮ್ಮೆ ಭಯವಾಗುತ್ತದೆ ಮಗಳೇ. ಇಲ್ಲಿ ಕ್ಷಣಕ್ಕೊಂದು ಹೆಣ್ಣು ಮಗುವನ್ನು ಹುರಿದುಮುಕ್ಕುತ್ತಿದ್ದಾರೆ. ಹೇಗೆ ನಿನ್ನನ್ನು ರಕ್ಷಿಸುವುದೆಂದು ಕಂಗಾಲಾಗುತ್ತೇನೆ. ಆದರೆ ಕೈಚೆಲ್ಲಿ ಕೂರುವುದಿಲ್ಲ. ಈ ಜಗತ್ತಿನ್ನು ಪೂರಾ ಕೆಟ್ಟು ಹೋಗಿಲ್ಲ. ಇಲ್ಲಿ ಎದೆಯೊಳಗೆ ಬಚ್ಚಿಟ್ಟುಕೊಂಡು ಪೊರೆಯುವ ಅಪ್ಪಂದಿರಿನ್ನೂ ಉಳಿದಿದ್ದಾರೆ. ಅಪ್ಪನಂತಹ ಅಣ್ಣ ತಮ್ಮ ಗಂಡ ಮಗ ಗೆಳೆಯ ಪರಿಚಿತ ಅಪರಿಚಿತ….. ಎಲ್ಲರೂ ಇದ್ದಾರೆ. ನಾ ಹೆದರಲಾರೆ ಮಗಳೇ. ನೀ ನಿನ್ನನ್ನು ನೀನು ಕಂಡುಕೊಂಡು ದೃಢವಾಗಿ ನಿಲ್ಲುವವರೆಗೂ ಈ ಅಮ್ಮ ನಿನ್ನೊಂದಿಗೆ ಇರುತ್ತಾಳೆ. ಉಸಿರಿರುವವರೆಗೂ ನಿನ್ನ ಪ್ರತಿ ಹೆಜ್ಜೆಯಲ್ಲೂ ನನ್ನವೆರೆಡು ಹೆಜ್ಜೆಗಳು ಜೊತೆಯಾಗುತ್ತವೆ.
ಹೆಣ್ಣು ದೈಹಿಕವಾಗಿ ಕೌಟುಂಬಿಕವಾಗಿ ಸಾಮಾಜಿಕವಾಗಿ ಏನೆಲ್ಲಾ ಅನುಭವಿಸಬೇಕು ಎಂಬುದನ್ನು ಪ್ರಲಾಪಿಸುತ್ತಾ ಹೇಳಿಕೊಟ್ಟು ನಿನ್ನ ಧೈರ್ಯವನ್ನು ನಾನೇಕೆ ಹಾಳುಗೆಡುವಲಿ. ಅದು ಅಷ್ಟಕ್ಕೂ ಅರ್ಧ ಸತ್ಯ ಮಾತ್ರ. ಸತ್ಯವೆಂದರೆ ಎಲ್ಲರೂ ಶೋಷಿಸುವ ಮನಸ್ಥಿತಿಯವರಾಗಿರುವುದಿಲ್ಲ ಮತ್ತು ಶೋಷಣೆಯ ಹೆಸರಲ್ಲಿ ಯಾರು ಏನೇ ಮಾಡಲು ಬಂದಷ್ಟೂ ಹೆಣ್ಣು ಒಳಗೊಳಗೇ ಗಟ್ಟಿಯಾಗುತ್ತಾ ಹೋಗುತ್ತಾಳೆ. ಅದು ಅವಳೊಳಗಿನ ಅಂತಃಶಕ್ತಿ. ಸ್ನಾಯು ಬಲ ಮಾತ್ರವೇ ಶಕ್ತಿ ಎನ್ನುವುದಾಗಿದ್ದರೆ ಈ ಜಗತ್ತಿನಲ್ಲಿ ಶಕ್ತಿ ಎನ್ನುವ ಪದ ಅರ್ಥ ಕಳೆದುಕೊಂಡಿರುತಿತ್ತು.
ಹೆಣ್ಣು ದೈಹಿಕವಾಗಿ ಬದಲಾವಣೆಗೆ ತೆರೆದುಕೊಳ್ಳುವ ಅತಿ ಮುಖ್ಯ ಘಟ್ಟವೆ ಅವಳಲ್ಲಿ ಋತುಸ್ರಾವ ಆರಂಭವಾಗುವುದು. ಈ ಹಂತದಲ್ಲಿ ಅವಳ ದೇಹ ಸಾದ್ಯಂತವಾಗಿ ಬದಲಾಗುತ್ತಾ ಹೋಗುತ್ತದೆ. ಸಪಾಟು ಎದೆಯ ಮೇಲೆ ಮೊಲೆಗಳು ಚಿಗುರುತ್ತವೆ. ನಿನ್ನ ದೇಹ ಹಿಂದೆಂದೊಗಿಂತಲೂ ಅಪ್ಪಟ ಹೆಣ್ಣಾಗತೊಡಗುತ್ತದೆ. ಮಗಳೇ ನಿನ್ನೊಳಗೆ ಯೋನಿಯೆನ್ನುವ ಪುಟ್ಟ ಅಂಗವಿದೆ. ಅದು ಗರ್ಭವನ್ನು ತಲುಪುವ ದಾರಿ. ಮಗುವಿನ ಗುಲಾಬಿ ಬಣ್ಣದ್ದು ಧ್ಯಾನಿಸುವ ತ್ರಿಕೋನ ಗೂಡಿನಂತಿರುತ್ತದೆ ಗರ್ಭ. ಅದು ಪ್ರತಿ ತಿಂಗಳು ತನ್ನ ಕೋಣೆಯನ್ನು ತಾನು ಗುಡಿಸಿ ಶುಚಿಮಾಡಿಕೊಳ್ಳುತ್ತದೆ. ನೆತ್ತರ ರೂಪದಲ್ಲಿ ಸ್ರವಿಸುತ್ತದೆ. ಅದನ್ನೇ ಋತುಸ್ರಾವ ಎನ್ನುತ್ತೇವೆ. ಆ ದಿನಗಳು ನಿಜಕ್ಕೂ ಯಾತನಾಮಯವೇ. ಅಲ್ಲಿಂದಲೇ ನೀನು ನೋವನುಂಡು ಗಟ್ಟಿಯಾಗುವುದ ಕಲಿಯಲು ತೊಡಗುತ್ತಿ.
ಋತುವಿನ ಮುಖ್ಯ ಕೆಲಸವೆಂದರೆ ಜಗದ ಜೀವ ಸರಪಳಿ ತುಂಡಾಗದಂತೆ ಕಾಪಿಡಲು ಮುದ್ದಾದ ಮಕ್ಕಳನ್ನು ಹೆರುವುದು. ಇದೊಂದು ಶಕ್ತಿ ಹೆಣ್ಣಿಗೆ ಮಾತ್ರವಿರುವುದು ನಮ್ಮ ಸುಕೃತವೇ.
ಸಂಭೋಗ, ಬಸುರಿ, ಬಾಣಂತನ, ಲಾಲನೆ ಪಾಲನೆ ಎನ್ನುವ ಈ ಹಂತಗಳು ಎಷ್ಟೆಲ್ಲಾ ಆಗುವ ಆಗಿಸುವ ಅನುಭವಕ್ಕೆ ತೆರೆಸುತ್ತಾ ನಿನ್ನನ್ನು ಇನ್ನಷ್ಟು ಮನುಷ್ಯಳನ್ನಾಗಿಸುತ್ತಾ ಹೋಗುತ್ತವೆ. ಇನ್ನು ನೀನು ಯಾರನ್ನೇ ಆಗಲಿ ದ್ವೇಷಿಸುವುದು ಹೇಗೆ ಸಾಧ್ಯವಿರುತ್ತದೆ. ನನ್ನಿಂದ ಇನ್ನುವರೆಗೂ ಸಾಧ್ಯವಾಗಿಲ್ಲ.
ಗರ್ಭದಲ್ಲಿ ಪುಟ್ಟ ಮಗುವನ್ನು ಹೊರುವುದು ಹೆರುವುದೆಂದರೇನು ಗೊತ್ತ…. ಬಸುರಿಯಾಗುವುದೆಂದರೆ ಪುಟ್ಟ ಜೀವವೊಂದು ಅಣು ಮಾತ್ರವಾಗಿ ಗರ್ಭದೊಳಗೆ ಜೀವ ತಳೆದು ಮಗುವಾಗಿ ಬೆಳೆಯುತ್ತದೆ. ನವಮಾಸ ನಾವದನ್ನು ಗರ್ಭದಲ್ಲಿ ಹೊತ್ತು ಪೋಷಿಸಿ ಹೆರಬೇಕು. ಅಸಾಧ್ಯ ನೋವಿನೊಟ್ಟಿಗೆ ಏಳುವ ತರಂಗಗಳ ಮೇಲೆ ಆ ಶಿಶು ತೇಲುತ್ತಾ ಹೊರಬರುತ್ತದೆ. ನಿನಗೊಂದು ಆಶ್ಚರ್ಯದ ವಿಷಯ ಹೇಳುವೆ ಮಗು ಹೊರಬರುವವರೆಗೂ ಅಸಾಧ್ಯ ಕಾಡಿದ ನೋವು ಮಗು ಹೊರ ಬಂದ ತಕ್ಷಣವೇ ಥಟ್ಟನೆ ಮಾಯವಾಗಿಬಿಟ್ಟಿರುತ್ತದೆ! ಜೊತೆಗೆ ಬಸುರಿಯಲ್ಲಿ ಕಾಡುವ ವಾಂತಿ, ಅರುಚಿಯಂತವುಗಳೂ ಸಹ. ಆದರೆ ಹೆರಿಗೆಯಾದ ಮರುಕ್ಷಣ ನವಜಾತ ಶಿಶುವಿನ ಮುಖ ನೋಡುವುದು, ಮೊದಲ ಬಾರಿಗೆ ಸ್ಪರ್ಷಿಸುವುದಿದೆಯಲ್ಲ ಅದು ಅನಿರ್ವಚನೀಯ ಮಗಳೇ…. ಅದು ಹೆಣ್ಣಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತೆನಿಸುವ ಅಪೂರ್ವ ಕ್ಷಣಗಳು. ಮತ್ತೊಂದು ಜನ್ಮವಂತಿದ್ದರೆ ಹೆಣ್ಣಾಗೆ ಹುಟ್ಟಬೇಕೆನಿಸುವ ಕ್ಷಣಗಳವು. ಅದಕ್ಕೆ ನಾವೀ ಜಗತ್ತಿಗೆ ಕೃತಜ್ಞತೆ ಹೇಳಲೇಬೇಕು.
ನೀನೂ ಸಹ ಮುದ್ದು ಮಕ್ಕಳ ತಾಯಾಗುತ್ತೀ. ತಾಯ್ತನ ಹೆಣ್ಣನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅವಳು ಎಷ್ಟೊ ಬಾರಿ ತನ್ನತನವನ್ನು ಕಳೆದುಕೊಂಡು ಕುಟುಂಬಕ್ಕಾಗಿ ಬದುಕತೊಡಗುತ್ತಾಳೆ. ಕುಟುಂಬ ಅವಳ ಸರ್ವಸ್ವ. ಗಂಡನನ್ನು ಮಗುವಿನಂತೆ ಲಾಲಿಸಿತ್ತಾಳೆ. ಅತ್ತೆ ಮಾವ ಮೈದುನ ನಾದಿನಿ ಅಂತ ತನ್ನ ಸುತ್ತಮುತ್ತಲಿನ ಎಲ್ಲ ಸಂಬಂಧಿಗಳನ್ನು ಅದೆಷ್ಟು ಚೆಂದವಾಗಿ ಆದರಿಸಿ ನಿಭಾಯಿಸತೊಡಗಿತ್ತಾಳೆ. ತಾನು ಹಸಿದಿದ್ದೂ ಮಾಡಿ ಬಡಿಸುತ್ತಾಳೆ. ಮಕ್ಕಳು ಉಣ್ಣದಿದ್ದರೆ ಅವಳೂ ಉಪವಾಸ. ನೀನೂ ಸಹ ಈ ಎಲ್ಲ ಸ್ಥಿತ್ಯಂತರಗಳಿಗೂ ಯಾವೊಂದು ಪೂರ್ವತಯಾರಿ ಇಲ್ಲದೇ ಯಾರ ಸಹಾಯವೂ ಇಲ್ಲದೇ ಪಕ್ಕಾಗುತ್ತಾ ಹೋಗುತ್ತೀ. ಇದನ್ನೆಲ್ಲಾ ಬೆರಗಿನಿಂದ ನೋಡುತ್ತಾ ಹೋಗುವುದೀಗ ನನ್ನ ಸರದಿ.
ಇಲ್ಲಿ ಹೆಣ್ಣಾದ ಕಾರಣಕ್ಕೆ ಸಹಾಯಕತೆಯಿಂದ ಸೋಲಬೇಕಾದ ಕೆಲವು ಕ್ಷಣಗಳು ಬರುತ್ತವೆ ಮಗಳೇ… ಮಾನಸಿಕವಾಗಿ ದೈಹಿಕವಾಗಿ ಜರ್ಝರಿತಳಾಗಬೇಕಾದ ಪ್ರಸಂಗಗಳು ಬರುತ್ತವೆ. ನೀನವುಗಳನ್ನು ಮೆಟ್ಟಿ ನಿಲ್ಲವುದನ್ನು ಕಲಿಯಬೇಕು. ಜಗತ್ತು ಸೋತು ಕಲಿತು ಮುನ್ನಡೆಯುತ್ತಿರುವುದರಿಂದಲೇ ಚಲಿಸುತ್ತಿದೆ. ಸೋಲು ಅಪಮಾನವಲ್ಲ ಮತ್ತು ಸಾವು ನೈಸರ್ಗಿಕವಾಗಿರಬೇಕು. ನಿನ್ನನ್ನು ನೀನು ಎಂದಿಗೂ ಸಾವಿಗೆ ಈಡಾಗಿಸಿಕೊಳ್ಳಬೇಡ. ಅದು ನಿನ್ನ ಕೆಲಸವಲ್ಲ. ಪ್ರತಿಯೊಂದು ಜೀವಿಯು ಬದುಕುವುದಕ್ಕಾಗಿ ಮತ್ತೆ ಮತ್ತೆ ಪ್ರಯತ್ನಿಸುತ್ತಿರುತ್ತದೆ. ನೀನಾದರೂ ಒಂದು ಅತ್ಯದ್ಭುತ ಹೆಣ್ಣು. ನಿನ್ನ ಪ್ರಯತ್ನಗಳೇಕೆ ಮಣಿಯಬೇಕು.
ನಿನ್ನ ಕೋಮಲತೆ ಜಗತ್ತನ್ನು ಸಂತೈಸಲಿ. ನಿನ್ನ ಆತ್ಮವಿಶ್ವಾಸ ಅನುಕರಣೀಯವಾಗಲಿ. ಮನೆಬಳಕೆಗಷ್ಟೇ ಸೀಮಿತವಾಗದೆ ಹೊರಜಗತ್ತಿಗೆ ಕಾಲಿಡು. ಮನೆಯಿಂದಾಚೆಗೂ ನಿನಗೊಂದು ಅಸ್ತಿತ್ವವಿದೆ. ಗಂಡ ಮನೆ ಮಕ್ಕಳ ಬೇಕು ಬೇಡಗಳು ನಿನ್ನ ಜೀವನದ ಅವಿಭಾಜ್ಯ ಅಂಗ ನಿಜ… ಆದರೆ ಅದೇ ಜೀವನವಲ್ಲ . ನಿನ್ನವಿನ್ನೊಂದು ಅಸ್ತಿತ್ವವನ್ನು ನೀನು ಕಂಡುಕೊಳ್ಳಬೇಕು. ಅದನ್ನು ದೃಢಗೊಳಿಸಿಕೊಳ್ಳಲು ಏನು ಮಾಡಬೇಕಿದೆಯೆಂದು ನೀನು ನಿರ್ಧರಿಸು. ನಿನ್ನ ನಿರ್ಧಾರ ನಿನ್ನದು ಮಾತ್ರ. ಗಟ್ಟಿಯಾಗು ಆದರೆ ಬಾಗುವಷ್ಟು. ಎಂದಿಗೂ ಮುರಿದು ತುಂಡಾಗಬೇಡ. ಯಾರು ಯಾರನ್ನೂ ಶೋಷಿಸಬಾರದು, ತುಳಿಯಬಾರದು. ಯಾರು ಯಾರಿಗಿಂತಲೂ ಮೇಲೂ ಅಲ್ಲ ಕೀಳೂ ಅಲ್ಲ. ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಒಳಗಿನ ಹಣ್ಣು ಮೃದುವಾಗಿರುತ್ತದೆ ಮತ್ತು ಸವಿಯಾಗಿರುತ್ತದೆ ನಿಜ ಆದರೆ ಹೊರಗಿನ ಬಲಿಷ್ಟ ಸಿಪ್ಪೆ ಇಲ್ಲದೆ ಅದು ಉಳಿಯುವುದು ಹೇಗೆ ಯೋಚಿಸು. ಅದನ್ನು ಅರಿತು ಬಾಳಬೇಕು ನೀನು.
ಮಗಳೇ. ನಿನ್ನೆಲ್ಲ ಕಷ್ಟ ಸುಖದಲ್ಲಿ ಉಸಿರಿರುವವರೆಗೂ ನಿನ್ನೊಂದಿಗಿರುವ ಶಪಥ ಮಾಡುವೆ. ಉಸಿರು ನಿಂತ ಮೇಲೂ ನಿನ್ನೊಂದಿಗೆ ನೆರಳಾಗಿ ಬರುವೆ. ನೀನು ಹೆಣ್ಣಾಗಿದ್ದೀ ಎಂದು ಹೆಮ್ಮೆ ಪಡು. ಆದರೆ ಹುಸಿ ಗರ್ವ ಬೇಡ. ಕಷ್ಟಗಳೊಂದಿಗೆ ಆಟವಾಡು. ಜನರನ್ನು ಪ್ರೀತಿಸು. ಮತ್ತದೇ ಪ್ರೀತಿ ನಿನ್ನೆಡೆಗೆ ಸಾವಿರಪಟ್ಟಾಗಿ ಮರಳಿ ಬರುತ್ತದೆ. ಆ ದಿನಗಳು ದೂರವಿಲ್ಲ.
ಮಾತುಗಳಿನ್ನೂ ಉಳಿದಿವೆ ಇನ್ನೊಮ್ಮೆ ಆಡಲಿಕ್ಕಾಗಿ…
ಇಂತಿ
ನಿನ್ನ ಅಮ್ಮ

ಆಶಾ ಜಗದೀಶ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.