FEATUREDಚಾವಡಿಭಾವಯಾನ

ಭಾವಯಾನ/ ಜಾಣೆ ಅಮ್ಮನ ಜೀರಿಗೆ ಡಬ್ಬಿ – ಆಶಾ ನಾಗರಾಜ್

ಅಮ್ಮ ತನ್ನ ಅಡುಗೆ ಮನೆಯ ಕೆಲಸವನ್ನು ಮಾತ್ರ ನೋಡಿಕೊಳ್ಳುತ್ತಿದ್ದಳೇ? ತನ್ನದೇ ಆದ ರೀತಿಯಲ್ಲಿ ಉಳಿತಾಯ ಮಾಡಿ ಮನೆಯ ಆರ್ಥಿಕ ನಿರ್ವಹಣೆಗೂ ನೆರವಾಗುತ್ತಿರಲಿಲ್ಲವೇ? ಅವರ ಜಾಗರೂಕತೆಗೆ ಜೀರಿಗೆ ಡಬ್ಬಿಯೇ ಒಂದು ಸಂಕೇತವಲ್ಲವೇ? ಅಂಥ ಕೋಟ್ಯಂತರ ಜಾಣೆಯರಿಗೆ ಅಭಿನಂದನೆ ಹೇಳೋಣ.

ಅಮ್ಮನ ಅಡುಗೆ ಮನೆಯಲ್ಲಿ ಒಂದೆಡೆ ಬಹಳ ಅಚ್ಚುಕಟ್ಟಾಗಿ ಜೋಡಿಸಿಟ್ಟ ಪಾತ್ರೆಪಗಡಗಳು. ಮತ್ತೊಂದೆಡೆ ಒಂದೇ ಸರಳ ರೇಖೆಯಲ್ಲಿ ಜೋಡಿಸಿದ್ದರೂ ತಮ್ಮ ತಮ್ಮ ಆಕಾರ ಮತ್ತು ಗಾತ್ರದ ವ್ಯತ್ಯಾಸದಿಂದಾಗಿ ಕೊಂಚ ಅಡ್ಡಾದಿಡ್ಡಿಯಾಗಿ ಕಾಣುವ ದವಸಧಾನ್ಯಗಳ ಶೇಖರಣೆ ಡಬ್ಬಿಗಳ ಸಾಲು. ಅದೇ ಸಾಲಿನಲ್ಲಿ ಸ್ವಲ್ಪ ಹಿಂದಕ್ಕೆ, ಮತ್ತು ದೊಡ್ಡ ಡಬ್ಬಿಯ ಪಕ್ಕ ಅವಿತು ಕುಳಿತಂತೆ ಎರಡು ಪುಟಾಣಿ ಡಬ್ಬಿಗಳು!! ಅವೇ ನಮ್ಮ ಮನೆಯ ‘ತುರ್ತುನಿಧಿ’ಗಳು, ಅಮ್ಮನ ‘ಜೀರಿಗೆ’ ಮತ್ತು ‘ಮೆಂತ್ಯ’ದ ಡಬ್ಬಿಗಳು.

      ಯಾವುದೊ ಹಳೆಯದೊಂದು ತಗಡಿನ ಡಬ್ಬಿಯನ್ನು ತನ್ನ ತವರೂರ  ನೆನಪಿನೊಂದಿಗೆ  ಬೇಳೆಗೆ ಮೀಸಲಿಟ್ಟಿದ್ದಳು. ತನ್ನ  ತಮ್ಮನ  ಮದುವೆಗೆಂದು ಹೋದ  ನನ್ನಮ್ಮ,  ಮದುವೆ ಮನೆಯಿಂದ ಖಾಲಿಯಾದ ಎಣ್ಣೆಯ  ಡಬ್ಬಿಗಳನ್ನು  ಹೊತ್ತು  ತಂದು, ಪಡಿತರ  ಕೋಟದಡಿ  ಸಿಗುತ್ತಿದ್ದ  ಅಕ್ಕಿಯನ್ನು ಶುಚಿಗೊಳಿಸಿ  ಎರಡು  ವಿಧಗಳಲ್ಲಿ  ‘ದಪ್ಪಕ್ಕಿ’,‘ನುಚ್ಚಕ್ಕಿ’ಎಂದು ಬೇರ್ಪಡಿಸಿ ಶೇಖರಿಸುತ್ತಿದ್ದಳು.

  ತನ್ನ  ಮೂರು ಬಾಣಂತನದಲ್ಲಿ ನಾಲ್ಕು  ಸಂತಾನ ಪಡೆದು ಎರಡನೇ ಹೆರಿಗೆಯಲ್ಲಿ ಅವಳಿಗಳನ್ನು  ಹಡೆದು,  ಎರಡೂ  ಹಸುಳೆಗಳಿಗೆ  ಒಮ್ಮೆಲೇ  ಉಣಿಸಲು ಎದೆಹಾಲು  ಸಾಕಾಗುತ್ತಿರಲಿಲ್ಲಾ  ಎಂದು  ಮಾರುಕಟ್ಟೆಯಿಂದ  ಖರೀದಿಸಿ ತಂದ ನಾಲ್ಕು ಹಾಲಿನ ಪುಡಿಯ  ಡಬ್ಬಗಳು ಆ ಸಾಲುಗಳಲ್ಲಿ  ರಾರಾಜಿಸುತ್ತಿದ್ದವು. ಕಷ್ಟಪಟ್ಟು ಅಪ್ಪ ಖರೀದಿಸಿದ ನಿವೇಶನದಲ್ಲಿ  ಪುಟ್ಟ  ಗೂಡೊಂದರ ನಿರ್ಮಾಣದ  ಕೊನೆಯಲ್ಲಿ  ಉಳಿದಿರುವ  ಬಣ್ಣದ  ಮತ್ತು   ಫೆವಿಕಾಲ್‌, ಪ್ಲಾಸ್ಟಿಕ್ಕಿನ  ಡಬ್ಬಿಗಳು, ಉಪ್ಪು, ಹುಣಸೇ ಹಣ್ಣು ಇಡಲು ಅಮ್ಮನ  ಅಜ್ಜ  ಕೊಟ್ಟ  ಎರಡು  ಗಾಜಿನ  ಜಾಡಿಗಳು, ಮದುವೆಯ  ಹೊಸತರಲ್ಲಿ  ಪ್ರವಾಸಕ್ಕೆ   ಹೋದಾಗ   ನೆನಪಿಗೆ  ಕೊಂಡು  ತಂದ ಪಿಂಗಾಣಿಯ  ಅಗಲವಾದ  ಬಾಯಿ ಉಳ್ಳ ದಬರಿಗೆಗಳು…. ಹೀಗೆ ಅಮ್ಮನ ಅಡುಗೆ ಕೋಣೆಯ ಕಪಾಟು ಇರುತ್ತಿತ್ತು. ಈ ದೊಡ್ಡ ದೊಡ್ಡ ಡಬ್ಬಿಗಳ ನಡುವೆ ರಿಯಾಯತಿ  ದರದಲ್ಲಿ  ಸಿಕ್ಕ  ಸಣ್ಣ  ಗಾತ್ರದ  ಆರು ಡಬ್ಬಿಗಳ  ಗುಚ್ಚವೂ  ಇತ್ತು. ಯಾವುದೊ  ಒಂದು ವಸ್ತು  ಖರೀದಿಸಿ  ಕೊಸರಿಗೆಂದು ಅಂಗಡಿಯವನಲ್ಲಿ  ಗೋಗರೆದು ತಂದ ಎರಡು ಡಬ್ಬಿಗಳು ‘ಜೀರಿಗೆ’ ಮತ್ತು ‘ಮೆಂತ್ಯ’ ದ ಡಬ್ಬಿಗಳಾದವು. ನಮ್ಮ ಆಪತ್ಕಾಲದ ನಿಧಿಗಳೂ ಆದವು.

ಅಪ್ಪನ ಪಗಾರವನ್ನು, ಕೊಂಚ ಹಗುರ ಮಾಡುತ್ತಾ ಉಳಿತಾಯದ ಖಾತೆಯೊಂದನ್ನು ಡಬ್ಬದಲ್ಲಿ ತೆರೆದಿದ್ದಳು ಅಮ್ಮ. ತಿಂಗಳ ಕೊನೆಯಲ್ಲಿ ಆ ಉಳಿತಾಯವು ಹೆಚ್ಚು-ಕಡಿಮೆ ಚಮತ್ಕಾರವನ್ನೆ ಮಾಡುತ್ತಿತ್ತು. ಹೆಚ್ಚು ಕಲಿತವಳಲ್ಲ, ನಗರ ಜೀವನಕ್ಕೆ ಹೊಸಬಳು, ತುಂಬು ಕುಟುಂಬದ ಮುದ್ದಿನ ಮಗಳಾಗಿದ್ದು, ಹಳ್ಳಿಯ ಸೊಗಡಲ್ಲಿ ಬೆಳೆದವಳು, ಅತ್ತೆ-ಮಾವ, ನಾದಿನಿ, ಭಾವ, ಮೈದುನರಾರು ಇಲ್ಲದ ಮನೆಯಲ್ಲಿ ಕೇವಲ ಅಪ್ಪನ ಮಡದಿಯಾದವಳು ಅಮ್ಮ.

ಪ್ರತಿ ತಿಂಗಳು ವಿದ್ಯುತ್‌ ಬಿಲ್ಲು, ಹಾಲಿನ ಬಾಬ್ತು, ದಿನಸಿ ರಾಮಣ್ಣನ ಅಂಗಡಿಯ ಲೆಕ್ಕ, ಹೊವಿನ ಲೆಕ್ಕ… ಇತ್ಯಾದಿಗಳನ್ನೆಲ್ಲಾ ದಾಟಿಸುವ ಹೊತ್ತಿಗೆ ಅಪ್ಪನ ಪಗಾರ ಬಟವಾಡೆ ತಳಸೇರಿರುತ್ತಿತ್ತು . ಆಗ ಅಮ್ಮನ ಹಿಂದಿನ ತಿಂಗಳ ಉಳಿತಾಯ ಉಪಯೋಗಕ್ಕೆ ಬರುತ್ತಿತ್ತು. ಅಪ್ಪನ ಸಂಬಳದ ಒಂದೊಂದು ಪೈಸೆಗೂ ಲೆಕ್ಕ ಇಡುತ್ತಿದ್ದಳು. ಆದಾಗ್ಯು ತನ್ನ ಉಳಿತಾಯದ ಖಾತೆಗೂ ಸ್ವಲ್ಪ ಜಮೆಯಾಗುವಂತೆ ನೋಡಿಕೊಳ್ಳುತ್ತಿದ್ದಳು.

ಮೊದಲೆರಡು ದಿನ ಸೆರಗಿನ ಒಂದು ಮೂಲೆಯ ಗಂಟಿನಲ್ಲಿ ಆಶ್ರಯ ಪಡೆಯುತ್ತಿದ್ದ ಆ ನೋಟು ಅಥವ ನಾಣ್ಯ ಎರಡು ದಿನದ ಬಳಿಕ ಸೆರಗಿನ ಗಂಟಲ್ಲೇ ಉಳಿದಿದ್ದೆ ಆದರೆ… ಅದು ಜೀರಿಗೆ ಡಬ್ಬ ಸೇರುತ್ತಿತ್ತು. ದೂರದೃಷ್ಟಿಯ ಆ ಅರಿವು ಹಾಗು ಮುಂಜಾಗರೂಕತೆಗೆ ಒಂದು ಸಲಾಮು. ಈ ವಿಧವಾದ ಉಳಿತಾಯದ ಖಾತೆಗಳು ಹಲವು ಮನೆಗಳಲ್ಲಿ ಈಗಲು ಚಾಲ್ತಿಯಲ್ಲಿವೆ.

ಆರ್ಥಿಕ ವಲಯದಲ್ಲಿ ಹೆಣ್ಣುಮಕ್ಕಳ ಕಡೆಗಣನೆಯೇ ಅವರ ಈ ಉಳಿತಾಯಕ್ಕೆ ಪ್ರೇರಣೆಯೇ? ಅಥವ ನಿಭಾಯಿಸ ಬಲ್ಲ ಪಕ್ವತೆಯೇ? ಯಾವುದೇ ಆದರೂ… ಇಡೀ ಮನೆಯ ನಿಭಾಯಿಸುವ ಹೆಣ್ಣು ಜೀರಿಗೆ, ಮೆಂತ್ಯ ಡಬ್ಬಗಳ ನಿರ್ವಹಣೆಯನ್ನು ಮಾತ್ರವಲ್ಲದೆ, ಈ ಕಾಲಘಟ್ಟದಲ್ಲಿ ಅನೇಕ ವಲಯದಲ್ಲಿ ಪ್ರಾವೀಣ್ಯ ಪಡೆದಿರುವುದು ಮತ್ತು ಸಮರ್ಪಕವಾಗಿ ನಿಭಾಯಿಸುತ್ತಿರುವುದು ಪ್ರಶಂಸೆಗೆ ಅರ್ಹ. ಇಂತಹ ಅನೇಕ ಹೆಣ್ಣು ಮಕ್ಕಳಿಗೆ ನಮ್ಮ ಅಭಿನಂದನೆಯನ್ನು ಸಲ್ಲಿಸೋಣ. ಅವರ ಉಳಿತಾಯ ಖಾತೆಗಳು ಪ್ರಬಲವಾಗಿ ಬೆಳೆಯಲಿ ಎಂದು ಆಶಿಸೋಣ…

ಹಾ! ಈಗಲೂ ಜೀರಿಗೆ ಡಬ್ಬಿಗೆ ಕೈ ಹಾಕಿದರೆ ಅಮ್ಮನ ನೆನಪಾಗುತ್ತದೆ…

ಆಶಾ ನಾಗರಾಜ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

4 thoughts on “ಭಾವಯಾನ/ ಜಾಣೆ ಅಮ್ಮನ ಜೀರಿಗೆ ಡಬ್ಬಿ – ಆಶಾ ನಾಗರಾಜ್

  • Lakshmi Sridhar

    ಅತ್ಯುತ್ತಮ ಕಥೆ. ಇದನ್ನು ಓದಿದ ಬಳಿಕ ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು. ಅಂದಿನ ದಿನಗಳಲ್ಲಿ ತಾಯಿ , ಚಿಕ್ಕಮ್ಮ ಹಾಗು ದೊಡ್ಡಮ್ಮನವರಿಗೆ ಸಾಸಿವೆ,ಜೀರಿಗೆ ಡಬ್ಬಿಗಳೇ ಉಳಿತಾಯ ಖಾತೆಗಳು.

    Reply
    • Lakshmi Sridhar

      Good thank you

      Reply
  • Lakshmi Subramani

    Its just amazing story.. Made me cry becoz my mom used to do that… Few things are very memorable which can’t be changed…

    Reply

Leave a Reply

Your email address will not be published. Required fields are marked *