FEATUREDಕಾನೂನು

ಭಾರತ ಸಂವಿಧಾನದ ಸ್ತ್ರೀ ಪರ ನಿಲುವು: ಪ್ರಸ್ತುತ ವಿದ್ಯಮಾನಗಳು- ಡಾ. ಶಶಿಕಲಾ ಗುರುಪುರ

ಭಾರತ ಸಂವಿಧಾನದ ಸ್ತ್ರೀ ಪರ ನಿಲುವು ನ್ಯಾಯಾಧೀಶರ ಎಚ್ಚರ ಮತ್ತು ಸ್ಫೂರ್ತಿ ಹಾಗೂ ಸಮಾಜವು ನ್ಯಾಯಾಂಗವನ್ನು ಧನಾತ್ಮಕ ಪರಿವರ್ತನೆಗೆ ಹಚ್ಚುವುದು ಇವೆರಡೂ ಏಕಕಾಲಕ್ಕೆ ನಡೆದಲ್ಲಿ ಮಾತ್ರ ಮಹಿಳಾ ಪ್ರಶ್ನೆಗಳು ನಿಜವಾದ ಸ್ತ್ರೀ ಪರ ನ್ಯಾಯವನ್ನು ಪಡೆಯಬಲ್ಲವು. ಸಂವಿಧಾನದ ೧೫ನೆಯ ವಿಧಿಯು ತಾರತಮ್ಯಗಳನ್ನು ನಿಷೇಧಿಸುತ್ತಾ ಲಿಂಗಾಧಾರಿತ ತಾರತಮ್ಯವನ್ನು ವಿರೋಧಿಸಿದೆ. ಅದೇ ವಿಧಿಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ಒದಗಿಸುವಂಥ ಕರ್ತವ್ಯ ಸರಕಾರದ ಮೇಲಿದೆ.

ಅಮೃತ ಮಹೋತ್ಸವದ ಆಚರಣೆಯಲ್ಲಿರುವ ಭಾರತದ ಪ್ರಜಾಪ್ರಭುತ್ವದ ಭದ್ರ ತಳಹದಿಯೇ ನಮ್ಮ ಸಂವಿಧಾನ. ಕಾಲಾತೀತವಾಗಿ ಈ ದೇಶದ ಆಶೋತ್ತರಗಳನ್ನು ಪ್ರತಿಬಿಂಬಿಸುವ ಈ ಸಾಮಾಜಿಕ ದಾಖಲೆಯಲ್ಲಿ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತೆಗಳು ಮೂಲಭೂತ ಮೌಲ್ಯಗಳು.
ಸಂವಿಧಾನದ ಆತ್ಮವೆಂಬುದಾಗಿ ಹೇಳಲಾದ ಮೂರನೆಯ ಪರಿಚ್ಛೇದದ ೧೨ ರಿಂದ ೩೨ ರ ವರೆಗಿನ ವಿಧಿಗಳು ಮೂಲಭೂತ ಹಕ್ಕುಗಳನ್ನು ವಿವರಿಸುತ್ತವೆ.

ಇವುಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಜೀವಿಸುವ ಹಕ್ಕು ಧಾರ್ಮಿಕ ಸ್ವಾತಂತ್ರ್ಯ ಹಾಗೂ ನ್ಯಾಯಾಂಗ ನೆರವಿನ ಹಕ್ಕು ಒಳಗೊಂಡಿವೆ. ೧೫ನೆಯ ವಿಧಿಯು ತಾರತಮ್ಯಗಳನ್ನು ನಿಷೇಧಿಸುತ್ತಾ ಲಿಂಗಾಧಾರಿತ ತಾರತಮ್ಯವನ್ನು ವಿರೋಧಿಸಿದೆ. ಅದೇ ವಿಧಿಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ಒದಗಿಸುವಂಥ ಕರ್ತವ್ಯ ಸರಕಾರದ ಮೇಲಿದೆ.

ಸಂವಿಧಾನದ ಒಳ ಸ್ತ್ರೋತವಾದ ನ್ಯಾಯವನ್ನು ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ಸ್ತರಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ಕಾಯಿದೆ ಹಾಗೂ ಅಡಳಿತ ನೀತಿಗಳಿಗಿಂತಲೂ ತೀವ್ರವಾಗಿ ಭಾರತೀಯ ನ್ಯಾಯಾಂಗದ ಕೊಡುಗೆ ಕಂಡು ಬರುತ್ತದೆ. ಇದರಲ್ಲಿ ಮಹಿಳಾಪರವಾದ ನ್ಯಾಯದ ನಿಲುವುಗಳು ಗಮನಾರ್ಹ. ಆದರೂ ಮಹಿಳಾ ನಿರ್ಲಿಪ್ತ, ಮಹಿಳಾ ವಿರೋಧಿ, ಪೂರ್ವಾಗ್ರಹ ಪೀಡಿತ ನಿಲುವುಗಳು ಕಂಡು ಬರುತ್ತವೆ. ೧೯೭೦ ರ ದಶಕದ ಮಥುರಾ ಮೊಕದ್ದಮೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಶೀಲದ ಸುತ್ತಲಿನ ಸಂಶಯವು ಆರೋಪಿಯ ಶಿಕ್ಷೆಯನ್ನು ಕಡಿತಗೊಳಿಸಿರುವುದು ಒಂದು. ಗಂಡನು ಸಹಜೀವನಕ್ಕಾಗಿ ಆದೇಶಿಸಿದಾಗ ವೃತ್ತಿಯ ಕಾರಣಕ್ಕೆ ನಿರಾಕರಿಸಿದ ಮಡದಿ ಸಿನೆಮಾ ನಟಿ ಸರಿತಾ ಅವರ ಸಾಂವಿಧಾನಿಕ ಘನತೆಯನ್ನು ಮದುವೆಯೆಂಬ ಪವಿತ್ರ ಬಂಧನದ ಪ್ರತಿಸ್ಪರ್ಧಿಯಾಗಿ ನೋಡಿರುವುದೂ ವಿಪರ್ಯಾಸ!

ಕಳೆದ ಐದು ವರುಷಗಳಲ್ಲಿ ಕಾನೂನಿನ ತಕ್ಕಡಿಯನ್ನು ಹಿಡಿದಿರುವ ನ್ಯಾಯ ದೇವತೆ ತನ್ನ ಕಣ್ಣ ಪಟ್ಟಿಯನ್ನು ಸರಿಸಿ ಮಹಿಳೆಯ ನೋವನ್ನು ಗ್ರಹಿಸಿರುವ ವಿದ್ಯಮಾನಗಳು ಅನೇಕ. ಇಲ್ಲಿ, ಹಾಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಡಾ. ಧನಂಜಯ ಚಂದ್ರಚೂಡ್ ಒಬ್ಬ ದ್ರಷ್ಟಾರರಾಗಿ ಅಪರೂಪದ ಮಹಿಳಾ ಒಳ ದನಿಯಾಗಿ ಕಾಣುತ್ತಾರೆ. ಮಹಿಳೆಯರನ್ನು ವೃತ್ತಿಯ ಹುದ್ದೆಯ ತಾರತಮ್ಯದಿಂದ ಸಕ್ರಿಯವಾಗಿ ಸೈನ್ಯದಲ್ಲಿ ಇರಿಸಿದ ತೀರ್ಪು ಮಾತ್ರವಲ್ಲ, ಮದುವೆಯೊಳಗೆ ಮಹಿಳೆಯ ಶರೀರದ ಒಡೆತನ ಪುರುಷನದ್ದಲ್ಲ ಎಂದು ವ್ಯಭಿಚಾರದ ಅಪರಾಧ ಕಾನೂನನ್ನು ಒರೆಗೆ ಹಚ್ಚಿದವರು.

ಮಾನ್ಯ ನ್ಯಾಯ ಮೂರ್ತಿಗಳು ಶಬರಿಮಲೆಯ ತೀರ್ಪಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯನ್ನು ಸಾರ್ವಜನಿಕ ಧರ್ಮಾನುಭವಕ್ಕೆ ಶರೀರದ ಆಧಾರದಲ್ಲಿ ಅತೀತವಾಗಿಸುವುದು ʼಅಸ್ಪೃಶ್ಯತೆʼ ಎಂದು ಸಾರಿದ್ದಾರೆ. ಇದು ಮಹಿಳಾ ಹಕ್ಕುಗಳಿಗೆ ನಾಗರಿಕ ಹಕ್ಕಿನ ನಿರ್ದಿಷ್ಟ ಹೋರಾಟಕ್ಕೆ ಮುನ್ನುಡಿ ಬರೆದಂತಿದೆ. ಖಾಸಗಿ ತನದ ವ್ಯಾಖ್ಯಾನವನ್ನು ʼಆಧಾರ್ʼ ಕೇಸಲ್ಲಿ ನೀಡುತ್ತಾ, ಗರ್ಭಪಾತದ ಕಾನೂನುಗಳ, ಖಾಸಗಿ ಕೌಟುಂಬಿಕ ಕಾನೂನುಗಳ ಮಹಿಳಾ ವಿರೋಧಿ ಅಂಶಗಳನ್ನು ಪರಿಶೋಧಿಸಿದ್ದೂ ಇದೆ.

ಇದರಂತೆಯೇ ಮುನ್ನುಗ್ಗಿದ ಪುರೋಗಾಮಿ ಛಲವು ಮಾಜಿ ನ್ಯಾಯಮೂರ್ತಿ ಸುಜಾತಾ ಮನೋಹರ್ ಅವರಲ್ಲಿ, ಹಾಲಿ ಮುಂಬೈ ಹೈಕೋರ್ಟಿನ ನಮ್ಮ ಹಳೆ ವಿದ್ಯಾರ್ಥಿನಿ ನ್ಯಾಯಮೂರ್ತಿ ರೇವತಿ ಡೇರೆಯವರಲ್ಲಿ, ನ್ಯಾಯಮೂರ್ತಿ ರವೀಂದ್ರ ಭಟ್ ರವರ ಸ್ತ್ರೀ ಪರ ತೀರ್ಪುಗಳಲ್ಲಿ ಕಾಣುತ್ತವೆ.

ಇವೆಲ್ಲ ವಿದ್ಯಮಾನಗಳು ಸಂವಿಧಾನದ ರಕ್ಷಕರಾಗಿ ನ್ಯಾಯಾಂಗದ ಪರಿಣತರ ಎಚ್ಚರ ಹಾಗೂ ದಕ್ಷತೆಗಳಿಗೆ ಕುರುಹಾಗಿವೆ. ಅಪವಾದವೆಂಬಂತೆ ʼಚರ್ಮ ಸ್ಪರ್ಶವಿಲ್ಲದ ಶೋಷಣೆ ಮಗುವಿನ ಮೇಲಾಗಿದ್ದರೆ ಅದನ್ನು ಹಾಗೆ ಹೇಳಲಾಗದುʼ ಎಂಬ ಮಹಿಳಾ ನ್ಯಾಯಾಧೀಶೆಯ ಅಪ್ರಬುದ್ಧ ವ್ಯಾಖ್ಯಾನಗಳೂ ಕಾಣಿಸುತ್ತವೆ.
ಒಟ್ಟಿನಲ್ಲಿ ನ್ಯಾಯಾಧೀಶರ ಎಚ್ಚರ ಮತ್ತು ಸ್ಫೂರ್ತಿ ಹಾಗೂ ಸಮಾಜವು ನ್ಯಾಯಾಂಗವನ್ನು ಧನಾತ್ಮಕ ಪರಿವರ್ತನೆಗೆ ಹಚ್ಚುವುದು ಇವೆರಡೂ ಏಕಕಾಲಕ್ಕೆ ನಡೆದಲ್ಲಿ ಮಾತ್ರ ಮಹಿಳಾ ಪ್ರಶ್ನೆಗಳು ನಿಜವಾದ ಸ್ತ್ರೀ ಪರ ನ್ಯಾಯವನ್ನು ಪಡೆದು ಐತಿಹಾಸಿಕ ತಾರತಮ್ಯಕ್ಕೆ ಹಾಗೂ ಪರಿಹಾರ ಸಿಗದ ಅನ್ಯಾಯದ ಮೂಕ ರೋನಕ್ಕೆ ಕಿವಿಯಾಗಬಲ್ಲುದು.

ಡಾ. ಶಶಿಕಲಾ ಗುರುಪುರ


(ಪ್ರಸ್ತುತ ಪುಣೆಯ ಸಿಂಬಯಾಸಿಸ್ ಲಾ ಸ್ಕೂಲ್ ನಿರ್ದೇಶಕರು, ಸಿಂಬಯಾಸಿಸ್ ಅಂತಾರಾಷ್ಟ್ರೀಯ ಯೂನಿವರ್ಸಿಟಿಯ ಡೀನ್ ಆಗಿರುವ ಇವರು ಖ್ಯಾತ ಕಾನೂನು ತಜ್ಞರು.)

(ಈ ಬರಹವನ್ನು ಪೀಪಲ್ ಮೀಡಿಯ ಜಾಲತಾಣ ಪತ್ರಿಕೆಯ ಅನುಮತಿಯೊಂದಿಗೆ ಮತ್ತೆ ಇಲ್ಲಿ ಪ್ರಕಟಿಸಲಾಗಿದೆ. peepalmedia.com)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *