ಭವತಾರಿಣಿ – ಡಾ ಆನಂದ್ ಋಗ್ವೇದಿ
ಹೂ ಬಳ್ಳಿಯಲಿ ಮೊದಲಬಾರಿಗೆ ಕಂಡದ್ದು
ಈ ಮುಗುಳು ; ಮತ್ತೆ ಮೊನ್ನೆ ಮೊನ್ನೆ. . .
ಸಾಣೆ ಹಿಡಿದ ಮನದ ಮೊನಚಿನಂಚಲಿ ಮಿಂಚಿ
ವೇದಿಕೆಯೇರಿದ ಕಾವ್ಯದುಲಿಗೆ – ತೆರೆದೆ ಕಿವಿ.
ಆ ಅದೇ ಭಾವ, ಪ್ರಸನ್ನತೆಯಲಿ ಗಂಭೀರ
ವದನ ವಿಂಧ್ಯಾಚಲದಂತೆ ಅಚಲ –
ಕೂತ ಭಂಗಿ, ಮುಖ – ಮುದ್ರೆ
ಚಂಚಲ ರೆಪ್ಪೆಯಾಟದ ನೋಟ
ನೂರು ಕಣ್ಣಿಗೆ ಸಿಕ್ಕ ಬೇಟ !
ಅರೆ ! ಇದು ಅದೇ ಅರೆ ಬಿರಿದ ಅರಳು
ಜನ ಜಾತ್ರೆಗೆ ಹಿಡಿದ ಮರುಳು
ಇವಳಾವ ಜನಕರಾಯನ ಮಗಳು!?
‘ಯಾ ದೇವಿ ಸರ್ವ ಭೂತೇಷು. .’
ಯಾವ ದೇವಿಯ ಹೆಸರು?
ನವಿರಾಗಿ ಏರಿಳಿವೆದೆ
ಶತಮಾನಗಳ ಮೆಲ್ಲುಸಿರು
ಕವಿತೆಯೊರೆದದ್ದು ಯಾರ ದನಿ?;
ಸೀತೆ
ಕುಂತಿ
ದ್ರೌಪದಿ
ಗಾಂಧಾರಿ
ಮಾಂಡೋವಿ
ಕನ್ನಗಿ
ಮಾಧವಿ. . . . .
ಮಾನಿನಿಯರೆಲ್ಲಾ ಒಟ್ಟಾಗಿ
ಮಾತಾಗಿ
ಪರಿ ಪರಿಯಾಗಿ ಬನಿಯಾಗಿ ಸುಧೆಯಾಗಿ
ಸುಯ್ದ ನಿನಾದ
-ನೆಲದಡಿಯೆ ನಿಧಾನ!
ಪದರು ಪದರುಗಳೆಲ್ಲಾ ತೆರೆದು
ಹೊದರು ಪೊರೆದ ಬಂಗಾರದ ಘಟ್ಟಿಯ ಒರೆಸಿ-
ಎದುರಿಗಿಟ್ಟು – ವರ್ತಮಾನದ ನಿಟ್ಟುಸಿರು
‘ಹೊತ್ತು’ ತಂದದ್ದು ಎಷ್ಟು ಸಹಸ್ರಮಾನಗಳಿಂದ ಈ ಬಯಕೆ
ಗರ್ಭವ ಹೊತ್ತು ನಡೆತಂದು ನಿಂತಂತೆ ಈ ಹೊತ್ತು
ವೇದಿಕೆಯ ಮೇಲೆ ಹತ್ತಿ
ಪದದುಲಿಯ ಲಾಲಿತ್ಯದಲಿ ಪದ್ಯ!

ಡಾ. ಆನಂದ್ ಋಗ್ವೇದಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.