FEATUREDLatestಚಾವಡಿಚಿಂತನೆ

ಭರವಸೆಯ ಬೆಳಕಾದ ನ್ಯಾಯಮೂರ್ತಿ ವರ್ಮಾ ವರದಿ / ಡಾ. ಸುಧಾ ಸೀತಾರಾಮನ್

 ನಿರ್ಭಯಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಇಂದಿಗೆ ೬ ವರ್ಷ. ಈ ಸಂದರ್ಭದಲ್ಲಿ ಮೂಡಿಬಂದ ಮಹತ್ವದ ಘಟನೆ ಜಸ್ಟಿಸ್ ವರ್ಮಾ ಸಮಿತಿಯ ವರದಿ.  ಭಾರತೀಯ ರಾಜಕೀಯ ಇತಿಹಾಸದಲ್ಲಿಯೇ  ನ್ಯಾಯಮೂರ್ತಿ ವರ್ಮ ಸಮಿತಿಯು  ಒಂದು ಹೊಸ ಹಾದಿಯನ್ನು ಸೃಷ್ಟಿಸಿದೆ. 

2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ನಿರ್ಭಯಳ ಮೇಲಿನ ಅತ್ಯಾಚಾರ ಪ್ರಕರಣದ ನಂತರದ ಪ್ರಭಾವ ಮತ್ತು ಪರಿಣಾಮ ಅಗಾಧವಾದದ್ದು. ಇದರಿಂದ ಸಾಕಷ್ಟು ಕಾನೂನಾತ್ಮಕ ಬದಲಾವಣೆಗಳನ್ನು ತರುವುದರ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಲೈಂಗಿಕ ಹಿಂಸೆಯನ್ನು ಕುರಿತಂತೆ ಸಮಾಜದ ಗ್ರಹಿಕೆಯ ದಿಕ್ಕನ್ನು ಬದಲಾಯಿಸಿತು. ಮೊದಲ ಬಾರಿಗೆ ಇಂತಹ ಪ್ರಕರಣವನ್ನು ಇಡೀ ರಾಷ್ಟ್ರ ಒಟ್ಟಿಗೆ ಎದ್ದು ನಿಂತು ಪ್ರತಿಭಟಿಸಿತು. ಲೈಂಗಿಕ ಹಿಂಸೆಯನ್ನು ಕುರಿತಂತೆ ಕಾನೂನು ಮತ್ತು ಪೊಲೀಸ್ ಸುಧಾರಣೆ ಬೇಕೆಂದು ಕೇಳಿದವರು ಕೇವಲ ಸ್ತ್ರೀವಾದಿಗಳು ಮಾತ್ರವಾಗದೆ, ಎಲ್ಲಾ ಪ್ರಜ್ಞಾವಂತರ ಕೋರಿಕೆಯೂ ಆಗಿತ್ತು. ಕಾಮುಕರ ಕ್ರೌರ್ಯಕ್ಕೆ ಬಲಿಯಾದ ಹೆಣ್ಣಿನ ಮೇಲೆ ನಡೆದ ಪಶುತ್ವದ ರೌದ್ರ ನರ್ತನ ದೇಶದ ಉದ್ದಗಲಕ್ಕೂ ಜನಸಾಮಾನ್ಯರು ಮಿಡಿಯುವಂತೆ ಮಾಡಿತು. ನಾಗರಿಕ ಸಮಾಜದ ಜನಸಾಮಾನ್ಯರು ಈ ಸಾಮೂಹಿಕ ಅತ್ಯಾಚಾರವನ್ನು ಪ್ರತಿಭಟಿಸಲು ಬೀದಿಗಿಳಿದರು.

ಡಿಸೆಂಬರ್ 21ರಂದು ದೆಹಲಿಯ ರೈಸಿನಾ ಹಾಲ್ ಮತ್ತು ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪೆÇಲೀಸರೊಂದಿಗೆ ಹೊಡೆದಾಟಕ್ಕೆ ಇಳಿದರು. ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈ ಘಟನೆಗೆ ತೋರಿದ ನಿರಾಸಕ್ತಿ ಮತ್ತು ಬೇಜವಾಬ್ದಾರಿತನಕ್ಕಾಗಿ ಟೀಕೆಗೆ ಗುರಿಯಾದರು. ದೆಹಲಿಯಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ವಿಶೇಷವಾಗಿ ಕೋಲ್ಕತ್ತಾ, ಮುಂಬೈ ಮತ್ತು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗಳು ನಡೆದವು. ಈ ಘಟನೆಯನ್ನು ಪ್ರತಿಭಟಿಸಿ ಸಾವಿರಾರು ಮಂದಿ ಆನ್ ಲೈನ್‍ನಲ್ಲಿ ಸಹಿ ಮಾಡುವುದರ ಮೂಲಕ ಪ್ರತಿಭಟಿಸಿದರು. ಅತ್ಯಾಚಾರಕ್ಕೊಳಗಾದ ನಿರ್ಭಯಾಳ ಸಾವಿನ ನಂತರ ಹಿಂದೆಂದೂ ನಡೆದಿರದಂತಹ ಸಾರ್ವಜನಿಕ ಪ್ರತಿಭಟನೆ ಮೂಡಿ ಬಂತು. ಹೊಸ ವರ್ಷದ ಆಚರಣೆ ಸ್ವಲ್ಪ ತಣ್ಣಗಾಯಿತು. ಸಾರ್ವಜನಿಕರ ಒತ್ತಡ ಮತ್ತು ಉಕ್ಕಿದ ರೋಷದ ಪರಿಣಾಮವಾಗಿ ಈ ಘಟನೆಯ ನಂತರ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಮಾಧ್ಯಮದಲ್ಲಿ ಹೆಚ್ಚು, ಹೆಚ್ಚಾಗಿ ಬಿಂಬಿತವಾದವು ಮತ್ತು ಪೊಲೀಸರು ಇವುಗಳಿಗೆ ಪ್ರತಿಸ್ಪಂದಿಸಲಾರಂಭಿಸಿದರು. ಕೆಲವು ರಾಜ್ಯ ಸರ್ಕಾರಗಳು ಇಂತಹ ಹಿಂಸೆಯನ್ನು ಅಡಗಿಸಲು ಮತ್ತು ಕಾನೂನಿನಲ್ಲಿ ಬದಲಾವಣೆ ತರಲು ಕ್ರಿಯಾ ಯೋಜನೆಗಳನ್ನು ರೂಪಿಸಲು ಉದ್ಯುಕ್ತರಾದರು. ಆದರೆ ಈ ಸಂದರ್ಭದಲ್ಲಿ ಮೂಡಿಬಂದ ಮಹತ್ವದ ಘಟನೆ ಜಸ್ಟಿಸ್ ವರ್ಮಾ ಸಮಿತಿಯ ವರದಿ.

ಭಾರತ ಸರ್ಕಾರ 2012ರ ಡಿಸೆಂಬರ್ 22ರಂದು ಜಸ್ಟಿಸ್ ವರ್ಮ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯ ನೇತೃತ್ವವನ್ನು ಭಾರತದ ಮಾಜಿ ಉಚ್ಚ ನ್ಯಾಯಾಧೀಶರಾದ ಜಸ್ಟಿಸ್ ಜೆ.ಎಸ್.ವರ್ಮ ವಹಿಸಿದ್ದರು. ಆಸ್ಟಿಸ್ ಲೈಲ ಸೇಟ್ ಮತ್ತು ಗೋಪಾಲ ಸುಬ್ರಮಣಿಯಂ ಈ ಸಮಿತಿಯ ಸದಸ್ಯರಾಗಿದ್ದರು. ಲೈಂಗಿಕ ಹಿಂಸೆಯನ್ನು ಕುರಿತಂತೆ ಚಾಲ್ತಿಯಲ್ಲಿರುವ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿಯನ್ನು ಸೂಚಿಸುವ ವರದಿಯನ್ನು 30 ದಿನಗಳೊಳಗೆ ಸಲ್ಲಿಸಲು ಕೋರಲಾಯಿತು. ಈ ಮುಂಚೆಯೂ ಲೈಂಗಿಕ ದೌರ್ಜನ್ಯವನ್ನು ಕುರಿತಂತೆ ಕಾನೂನು ರೂಪಿಸಲು ಹಲವಾರು ಸಮಿತಿಗಳು ನೇಮಕವಾಗಿದ್ದರೂ ಈ ಸಮಿತಿ ಅವೆಲ್ಲಕ್ಕಿಂತ ಭಿನ್ನವೂ, ವಿಶಿಷ್ಟವೂ ಆಗಿತ್ತು. ಮೊದಲ ಬಾರಿಗೆ ಇದೊಂದು ಎಲ್ಲರಿಗೂ ತೆರೆದುಕೊಂಡ ಸಮಿತಿಯಾಗಿತ್ತು. ಅದು ಆರಂಭವಾದ ದಿನದಿಂದ ನಾಗರಿಕ ಸಮಾಜದ ಮನ್ನಣೆಯನ್ನು ಪಡೆಯಿತು. ಖ್ಯಾತ ವಕೀಲರು, ಕಾನೂನು ವೃತ್ತಿಪರರು, ಸರ್ಕಾರೇತರ ಸಂಘಟನೆಗಳು ಮತ್ತು ಮಹಿಳಾ ಗುಂಪುಗಳನ್ನು “ಅವರ ಅಭಿಪ್ರಾಯ, ಜ್ಞಾನ, ತಿಳುವಳಿಕೆ, ಅನುಭವಗಳನ್ನು ಹಂಚಿಕೊಂಡು ಕ್ರಿಮಿನಲ್ ಕಾನೂನಿಗೆ ಅಳವಡಿಸಬಹುದಾದ ತಿದ್ದುಪಡಿಗಳನ್ನು ಸೂಚಿಸಲು ಕೋರಲಾಯಿತು. ಶೀಘ್ರ ತನಿಖೆ, ವಿಚಾರಣೆ ಮತ್ತು ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆ- ಮುಂತಾದ ವಿಷಯಗಳ ಬಗ್ಗೆ ಸಲಹೆಗಳನ್ನು ಸ್ವೀಕರಿಸಲಾಯಿತು. ಇದರ ಪರಿಣಾಮವಾಗಿ ಜನಸಾಮಾನ್ಯರಿಂದ ಮಹಿಳಾ ಸಂಘಟನೆಗಳಿಂದ 6000ಕ್ಕೂ ಹೆಚ್ಚು ಇ-ಮೇಲ್ ಗಳ ಮೂಲಕ ಸಲಹೆಗಳು ಹರಿದುಬಂದವು.

ನ್ಯಾಯಮೂರ್ತಿ ವರ್ಮ ಸಮಿತಿಯು ಭಾರತೀಯ ರಾಜಕೀಯ ಇತಿಹಾಸದಲ್ಲಿಯೇ ಒಂದು ಹೊಸ ಹಾದಿಯನ್ನು ಸೃಷ್ಟಿಸಿದೆ. ಇಲ್ಲಿಯವರೆಗೂ ಸಾಮಾನ್ಯವಾಗಿ ಇಂತಹ ವರದಿಗಳು ಸುಮ್ಮನೆ ಕಣ್ಣೊರೆಸುವ ತಂತ್ರವಾಗಿತ್ತು. “ದೀರ್ಘ ಪರಂಪರೆಯಿರುವ ನ್ಯಾಯಾಂಗ ವ್ಯವಸ್ಥೆಯಾಗಲೀ ಹಾಗೂ ನಮ್ಮ ಸಮಾಜವಾಗಲೀ ಹೆಣ್ಣನ್ನು ‘ಅಪಮಾನ’ ಮತ್ತು ‘ಗೌರವ’ದ ಚೌಕಟ್ಟಿನಲ್ಲಿಟ್ಟು ನೋಡಿದೆ. ಅತ್ಯಾಚಾರಕ್ಕೆ ಬಲಿಪಶುವಾದವರಿಗೆ ಸಂಬಂಧಪಟ್ಟಂತೆ ‘ಅಪಮಾನ’ ಮತ್ತು ‘ಗೌರವ’ದ ಪದಸಂಪತ್ತನ್ನು ಪುನರ್ರಚಿಸುವ ಕಾರ್ಯವನ್ನು ಮಾಡಬೇಕಾದ್ದು ಸರ್ಕಾರ ಮತ್ತು ಸಮಾಜದ ಮುಖ್ಯ ಕರ್ತವ್ಯವಾಗಿದೆ. ಇಂಡಿಯನ್ ಪೀನಲ್ ಕೋಡ್‍ನಡಿ ಅತ್ಯಾಚಾರವೆನ್ನುವುದು ಇತರ ಯಾವುದೇ ಅಪರಾಧದಂತೆ. ಅದೊಂದು ಮನುಷ್ಯ ದೇಹದ ಮೇಲೆ ನಡೆಸುವ ಹಲ್ಲೆ. (ವರ್ಮಾ 83).” ಒಟ್ಟಾರೆಯಾಗಿ, ಲೈಂಗಿಕ ಹಲ್ಲೆಗಳ ಕಡಿಮೆ ವರದಿ ಮತ್ತು ಅದನ್ನು ಸುತ್ತುವರಿದಿರುವ ಸಾಮಾಜಿಕ ಕಳಂಕ – ಇವೆರಡೂ ‘ಲಜ್ಜೆ-ಮರ್ಯಾದೆ’ಯೆಂಬ ವಿಷವೃತ್ತದಿಂದ ಹುಟ್ಟುವವು ಎಂಬ ತೀರ್ಮಾನಕ್ಕೆ ಬರಬಹುದಾಗಿದೆ. ‘ಲಜ್ಜೆ-ಮರ್ಯಾದೆ’ಯೆಂಬ ಸೂತ್ರಕ್ಕೆ ಕಟ್ಟು ಬೀಳದೆ, ಹೆಣ್ಣಿನ ಲೈಂಗಿಕ ಸ್ವಾಯತ್ತತೆಯನ್ನು ಕೇಂದ್ರೀಕರಿಸಿರುವ ಸಂಕಥನವಾಗಿರುವುದು ಈ ವರದಿಯ ದಿಟ್ಟ ನಿಲುವಾಗಿದೆ.

ಗಂಡು ಮಕ್ಕಳಿಗಾಗಿ ಆಶಿಸುತ್ತಾ ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗುವ ಕೌಟುಂಬಿಕ ಹಿಂಸೆಯ ವಿಸ್ತರಣೆಯೇ ದೊಡ್ಡ ಪ್ರಮಾಣದಲ್ಲಿ ಲೈಂಗಿಕ ಹಿಂಸೆಯಾಗಿ ನಡೆದಾಗ ‘ಅತ್ಯಾಚಾರ’ವಾಗಿಬಿಡುತ್ತದೆನ್ನುವ ಒಳನೋಟಗಳು ಈ ವರದಿಯಲ್ಲಿವೆ. ಗುಪ್ತವಾಗಿ ಕಾಡುವುದು, ಕಿರುಕುಳ, ದೈಹಿಕ ಆಕ್ರಮಣ- ಎಲ್ಲವೂ ಮಹಿಳೆಯ ವಿರುದ್ಧ ನಡೆಸುವ ಘೋರ ಅಪರಾಧಗಳಾಗಿವೆ. ‘ಅತ್ಯಾಚಾರ’ದ ವ್ಯಾಖ್ಯಾನದೊಳಗೆ ವಿವಾಹದೊಳಗಿನ ಅತ್ಯಾಚಾರವನ್ನು ತರುವ ಮೂಲಕ ಪಿತೃಪ್ರಾಧಾನ್ಯತೆಯ ಮೂಲಸತ್ವಕ್ಕೆ ಪೆಟ್ಟುಕೊಟ್ಟಿದೆ.
ಇದರ ಜೊತೆಗೆ, ಮಹಿಳೆಯ ಮೇಲಿನ ದೌರ್ಜನ್ಯದ ಸಮಗ್ರ ವಿಶ್ಲೇಷಣೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಬವಣೆಯನ್ನು ಕುರಿತ ಚರ್ಚೆಯನ್ನು ನ್ಯಾಯಮೂರ್ತಿ ವರ್ಮಾ ಸಮಿತಿ ಪ್ರಸ್ತಾಪಿಸುತ್ತದೆ. ಸ್ವಲಿಂಗಿಗಳು, ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ, ಮನೆಗೆಲಸದ ಮಹಿಳೆಯರ, ಯುದ್ಧದ ಸನ್ನಿವೇಶದಲ್ಲಿನ ಮಹಿಳೆಯರಮತ್ತು ಹಿಂಸಾತ್ಮಕವಾದ ವಿವಾಹ ಸಂಬಂಧದಲ್ಲಿ ಸಿಲುಕಿರುವ ಮಹಿಳೆಯರ ಪರಿಸ್ಥಿತಿಯನ್ನು ಈ ಸಮಿತಿ ಪರಿಗಣಿಸುತ್ತದೆ. ಸರ್ಕಾರ ಮತ್ತು ಕಾನೂನಿನ ಹೊರ ಅಂಚಿನಲ್ಲಿ ಶಸ್ತ್ರಸಜ್ಜಿತ ಸೈನಿಕರು ಲೈಂಗಿಕ ಹಿಂಸೆಯಲ್ಲಿ ತೊಡಗದಿರುವಂತೆ ಅವರನ್ನು ನಿಯಂತ್ರಿಸುವುದು ಸರ್ಕಾರಿ ನೌಕರರಾಗಿರುವ ಸೈನ್ಯದ ಮೇಲಧಿಕಾರಿಯ ಜವಾಬ್ದಾರಿಯಾಗಿರುತ್ತದೆ, ಎಂಬ ಅಂಶವನ್ನು ಈ ವರದಿಯು ತಿಳಿಸುವುದು ಅತ್ಯಂತ ಪ್ರಮುಖ ವಿಷಯವಾಗಿದೆ.

ನ್ಯಾಯಮೂರ್ತಿ ವರ್ಮಾ ಸಮಿತಿಯ ವರದಿಯು ಅಚ್ಚುಕಟ್ಟಾಗಿ ದಾಖಲಾದ ಮತ್ತು ಸಮಗ್ರ ಮಾಹಿತಿಯುಳ್ಳ ದಾಖಲೆಯಾಗಿದೆ. ಏಕೆಂದರೆ, ಸಮಾಜದ ವಿಭಿನ್ನ ಜನ ವರ್ಗಗಳ ಅಭಿಪ್ರಾಯ ಮತ್ತು ಅನುಭವಗಳನ್ನು ಸಂಗ್ರಹಿಸಿ ಅದನ್ನು ಸಂಕಥನದ ಭಾಗವಾಗಿಸಿದೆ. ಮಹಿಳಾ ಸಂಘ, ಸಂಸ್ಥೆಗಳು, ಕಾನೂನು ವೃತ್ತಿಪರರು ಮತ್ತು ನ್ಯಾಯ ಮೂರ್ತಿಗಳ ಅಭಿಪ್ರಾಯಕ್ಕೆ ಇಲ್ಲಿ ಪ್ರಾಶಸ್ತ್ಯ ಕೊಟ್ಟಿರುವುದರಿಂದಾಗಿ ಇದೊಂದು ಸಮಗ್ರ ದಾಖಲೆಯಾಗಿದೆ. “ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರ ಮತ್ತು ಪುರುಷರ, ಸಂಘರ್ಷದ ವಲಯಗಳಲ್ಲಿರುವ ಮಹಿಳೆಯರ, ಮಹಿಳಾ ಖೈದಿಗಳ, ಮಹಿಳೆ ಮತ್ತು ಮಕ್ಕಳ ಸಾಗಾಣಿಕೆಗೆ ತುತ್ತಾದವರ, ವೈಯಕ್ತಿಕ ದೂರುದಾರರ, ಶೈಕ್ಷಣಿಕ ತಜ್ಞರ ಮತ್ತು ಸಾಮಾಜಿಕ ಕಾರ್ಯಕರ್ತರ ಮಾತುಗಳನ್ನು ಆಲಿಸಿದ ಘನತೆ ಈ ವರದಿಯ ಹಿಂದಿದೆ.” (ಕಾಪುರ್2013).

ಪತ್ರಿಕೆಯ ಮೂರನೆಯ ಪುಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಲೈಂಗಿಕ ಹಿಂಸೆಯ ವರದಿಗಳು ನಾಟಕೀಯವಾಗಿ ಮೊದಲನೆಯ ಪುಟದ ಸುದ್ದಿಗಳಾದವು. ದಿಡೀರನೆ ಲೈಂಗಿಕ ಹಲ್ಲೆಗಳ ಸಂಖ್ಯೆ ಹೆಚ್ಚಿತೇನೋ ಎಂಬ ಭ್ರಮೆ ಹುಟ್ಟಿಸಿದವು. ಕೆಲವು ಮಹಿಳಾ ಗುಂಪುಗಳು ದಲಿತರ, ಅಲ್ಪ ಸಂಖ್ಯಾತರ ಮತ್ತು ಬಡ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವರದಿಗಳನ್ನು ಹೇಗೆ ಪಕ್ಕಕ್ಕೆ ಸರಿಸಿ ಹಾಕಲಾಗಿದೆಯೆಂದು ವಾದಿಸಿದರು. ಈ ಸಂದರ್ಭದಲ್ಲಿ ಮರೆತು ಹೋದ ಮತ್ತು ಮೌನದ ಆಳದಲ್ಲಿ ಹೂತುಹೋದ ಅತ್ಯಾಚಾರ ಪ್ರಕರಣಗಳನ್ನು ಹೊರತೆಗೆಯಲಾಯಿತು. ನಾಗರಿಕ ಸಮಾಜದ ಮಾನವ ಸ್ವಭಾವಕ್ಕೆ ಹೊರತಾದ ಪಥಭ್ರಷ್ಟ ನಡವಳಿಕೆಯಾಗಿ  ಇದನ್ನು  ನೋಡಲಿಲ್ಲ. ಬದಲಿಗೆ, ಸಮಾಜದಲ್ಲಿ ವ್ಯಾಪಕವಾಗಿ ನೆಲೆಸಿರುವ ಮಹಿಳಾ ವಿರೋಧಿ ಮನಃಸ್ಥಿತಿ ಮತ್ತು ಆಚರಣೆಗಳ ಒಟ್ಟು ಸ್ವರೂಪವಾಗಿ ನೋಡಲಾಯಿತು. ಊರ್ಮಿಳಾ ಭೂಟಾಲಿಯಾ ಹೇಳುವಂತೆ, “ಅತ್ಯಾಚಾರವೆನ್ನುವುದು ನಿರ್ವಾತದಲ್ಲಿ ಸಂಭವಿಸುವಂತಹುದಲ್ಲ. ಅದು ಸಮಾಜದಲ್ಲಿ ಹಾಸುಹೊಕ್ಕಾಗಿರುವ , ಪ್ರತಿ ದಿನವೂ ಬಲಿಪಶುಗಳಾಗುತ್ತಿರುವ ಹೆಣ್ಣುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಕ್ರೌರ್ಯವೇ ಆಗಿದೆ”(ಹಿಂದೂ 2013).

ಹಿಂಸೆಯ ಮೂಲಕವೇ ಪುರುಷತ್ವದ ಅಭಿವ್ಯಕ್ತಿಯೆಂದುಕೊಂಡ ಮೌಲ್ಯವ್ಯವಸ್ಥೆಗೆ ಅಂತ್ಯ ಹಾಡಲು ಶಿಕ್ಷಣದ ಪಾತ್ರಕ್ಕೂ ಮತ್ತು ಸಮಗ್ರ ಸಾಮಾಜಿಕ ಮೌಲ್ಯವ್ಯವಸ್ಥೆಗೂ ಸಂಬಂಧವಿದೆಯೆಂಬ ಅಂಶವನ್ನು ಮಹಿಳಾ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರು ಒಟ್ಟಾರೆಯಾಗಿ ನಂಬುತ್ತಾರೆ. ಹಾಗೆಯೇ ರತ್ನಕಪೂರ್ ಗುರುತಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ, ರಾಜಕಾರಣಿಗಳು ಮತ್ತು ಕೆಲವೊಮ್ಮೆ ನ್ಯಾಯಮೂರ್ತಿಗಳೂ ಕೂಡ ಕ್ರೌರ್ಯದ ವಿರುದ್ಧ ದನಿಯೆತ್ತುವಾಗ ಭದ್ರತೆಯ ಶಬ್ದಗಳಲ್ಲಿ ಮಾತನಾಡುತ್ತಾರೆ. ರಕ್ಷಣೆ ಮತ್ತು ಭದ್ರತೆಗಳು ಕ್ರೌರ್ಯಕ್ಕೆ ಪರಿಹಾರವಲ್ಲವೆಂಬುದನ್ನು ಸ್ತ್ರೀವಾದಿಗಳು ಮನಗಂಡಿದ್ದಾರೆ. ಈ ತಿಳುವಳಿಕೆಯು ವರ್ಮಾ ಸಮಿತಿಯಲ್ಲಿ ಕೂಡ ಪ್ರತಿಬಿಂಬಿತವಾಗಿದೆ.

ಮಾಧ್ಯಮದವರು ಮತ್ತು ಸ್ತ್ರೀವಾದಿಗಳಲ್ಲಿ ಕೆಲವರು ದೆಹಲಿಯ ಪ್ರಕರಣದ ಸಂಬಂಧವಾಗಿ ಕೆಲವು ಅಹಿತಕರ ಪ್ರಶ್ನೆಗಳನ್ನು ಎತ್ತಿದ್ದುಂಟು. ದೆಹಲಿಯಲ್ಲಿ ಅತ್ಯಾಚಾರಕ್ಕೆ ಗುರಿಯಾದ ಹುಡುಗಿ ದಲಿತಳಾಗಿದ್ದರೆ, ಮುಸ್ಲಿಂಳಾಗಿದ್ದರೆ ಅಥವಾ ಕಾಶ್ಮೀರಿ ಮಹಿಳೆಯಾಗಿದ್ದರೆ, ಇನ್ನೂ ಹೆಚ್ಚೆಂದರೆ ಲೈಂಗಿಕ ಕಾರ್ಯಕರ್ತೆಯಾಗಿದ್ದರೆ, ಆಗ ಈ ಸಾರ್ವತ್ರಿಕ ಪ್ರತಿಭಟನೆಯ ಆವೇಶ ಇಷ್ಟು ಹೆಚ್ಚಿನ ಮಟ್ಟದಲ್ಲಿರುತ್ತಿತ್ತೇ? ಎಂಬ ಪ್ರಶ್ನೆಗಳನ್ನು ಎತ್ತಿದ್ದುಂಟು. ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣು ಮಗಳು ಮಧ್ಯಮವರ್ಗಕ್ಕೆ ಸೇರಿದ ವಿದ್ಯಾವಂತ ಹಿಂದೂ ಮಹಿಳೆಯಾದ್ದರಿಂದ ಜನಸಾಮಾನ್ಯರಿಗೆ ಅವಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು ಸಾಧ್ಯವಾಯಿತು. ‘ಅವಳು ತಮ್ಮಂತೆ ಒಬ್ಬಳು; ಅವಳಿಗಾದದ್ದು ತಮಗಾಗಬಾರದೆಂದೇನಿಲ್ಲ’ ಎಂದು ಸಮಸ್ಯೆಯೊಂದಿಗೆ ತಮ್ಮನ್ನು ಗುರುತಿಸಿಕೊಂಡರು. ಆಗ ನಡೆದ ಪ್ರತಿಭಟನೆಗಳು ಸಮಾಜದ ಅಂತಃಸಾಕ್ಷಿಯನ್ನು ಬಡಿದೆಬ್ಬಿಸಿದ್ದು, ನಿಜ. ಆದ್ದರಿಂದ ಈ ಪ್ರತಿಭಟನೆ ಆಯ್ಕೆಮಾಡಿಕೊಂಡು ನಡೆದದ್ದು ಎಂದು ಹೇಳಬರುವುದಿಲ್ಲ. ಸಾರ್ವಜನಿಕರು ಎಲ್ಲ ಮಹಿಳೆಯರಿಗಾಗಿ ಧ್ವನಿಯೆತ್ತುವಂತಾಗಬೇಕು. ವರ್ಗ, ಜಾತಿ, ಪ್ರದೇಶ ಮತ್ತು ಧರ್ಮವನ್ನು ಪರಿಗಣಿಸದೆ ಎಲ್ಲ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧವೂ ಸಾರ್ವಜನಿಕರು ತಮ್ಮ ಪ್ರತಿಭಟನೆಯ ಸೊಲ್ಲೆತ್ತಬೇಕು. ದೆಹಲಿ ಅತ್ಯಾಚಾರ ಪ್ರಕರಣದ ನಂತರದ ಸಂದರ್ಭದಲ್ಲಿ ಲೈಂಗಿಕ ಹಿಂಸೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಸಾಕಷ್ಟು ಪ್ರಚಾರವನ್ನು ಕೊಡುತ್ತಿದೆಯಾದರೂ ಅದು ಕೂಡ ಆಯ್ದ ಘಟನೆಗಳಿಗೆ ಅನ್ವಯಿಸುತ್ತದೆ. ಅತ್ಯಂತ ಘೋರ ಸ್ವರೂಪದ, ರಂಜಕವಾದ ಮತ್ತು ಮುಖ್ಯವಾಗಿ ಅಪರಿಚಿತರು ನಡೆಸಿದ ಅತ್ಯಾಚಾರಗಳತ್ತಲೇ ಕೇಂದ್ರೀಕರಿಸಿದಂತಿದೆ.

ನ್ಯಾಯಮೂರ್ತಿ ವರ್ಮಾ ಸಮಿತಿಯ ವರದಿಯನ್ನು ಸಾರ್ವಜನಿಕರು ಮತ್ತು ಮಹಿಳಾ ಸಂಘಗಳು ಮೆಚ್ಚಿಕೊಂಡವಾದರೂ ಅದು ಪಾರ್ಲಿಮೆಂಟಿನಲ್ಲಿ ಚರ್ಚೆಗೆ ಮಂಡಿತವಾದಾಗ, ಸರ್ಕಾರವೇ ಅದರ ಕೆಲವು ಶಿಫಾರಸ್ಸುಗಳನ್ನು ತೆಗೆದು ಹಾಕಿತು. “ಲೈಂಗಿಕ ಅಪರಾಧಗಳನ್ನು ಎಸಗಿದವರು ಚುನಾವಣೆಗೆ ಸ್ಪರ್ಧಿಸಬಾರದೆಂಬುದನ್ನು ಚುನಾವಣಾ ನೀತಿಯನ್ನಾಗಿ ಮಾಡಲು ಹಿಂದೆಗೆಯಲಾಯಿತು. ಪೊಲೀಸರ ಸುಧಾರಣೆ ಮತ್ತು ಅವರನ್ನು ಬಾಧ್ಯಸ್ಥರನ್ನಾಗಿಸುವುದು, ಲೈಂಗಿಕ ಶಿಕ್ಷಣ ಮತ್ತು ಶಸ್ತ್ರಾಸ್ತ್ರ ಸೇನಾಪಡೆಗಳಲ್ಲಿ ಕೆಳಗಿನ ಹಂತದ ಸೈನಿಕರು ನಡೆಸುವ ಲೈಂಗಿಕ ಹಿಂಸೆಗೆ ಅವರ ಅಧಿಕಾರಿಯನ್ನು ಹೊಣೆಯಾಗಿಸುವುದು, ಮುನ್ನೆಚ್ಚರಿಕಾ ಕ್ರಮಗಳು ಮತ್ತು ಬಹುಮುಖ್ಯವಾಗಿ ‘ಮಹಿಳಾ ಹಕ್ಕುಗಳ ಮಸೂದೆ’- ಇವುಗಳನ್ನು ಒಪ್ಪಿಕೊಳ್ಳಲು ಸರ್ಕಾರ ಹಿಂದೇಟು ಹಾಕಿತು. (ಕಪೂರ್2013) ಅದೇನೇ ಇರಲಿ, ಸರ್ಕಾರ ನೇಮಿಸಿದ ಅಧಿಕೃತ ಸಮಿತಿಯೊಂದು ಪಿತೃಪ್ರಧಾನ ಸಮಾಜದ ಬೇರುಗಳನ್ನು ಅಲ್ಲಾಡಿಸುವಂತಹ ಸ್ತ್ರೀಪರವಾದ ವರದಿಯೊಂದನ್ನು ದೇಶಕ್ಕೆ ಕೊಡುವಲ್ಲಿ ಶಕ್ತವಾಯಿತೆಂಬ ಅಂಶವೇ ಬದುಕಿನ ಆಶಾಕಿರಣವಾಗಿದೆ.

ಡಾ. ಸುಧಾ ಸೀತಾರಾಮನ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *